ಸಾಕುನಾಯಿಯ ನಿಯತ್ತು

 ಕೆ.ವಿ.ಶಶಿದರ.

shutterstock_136164980-1

ಆತ ಆಗರ‍್ಬ ಶ್ರೀಮಂತ. ಊರಿನ ಮೂಲೆ ಮೂಲೆಯಲ್ಲೂ ಸೈಟುಗಳು. ಜೊತೆಗೆ ಒಂದೆರಡು ಶಾಪಿಂಗ್ ಕಾಂಪ್ಲೆಕ್ಸ್ ನ ಮಾಲೀಕ. ಹತ್ತಾರು ಮನೆಗಳ ಒಡೆಯ. ತಿಂಗಳಿಗೆ ಲಕ್ಶಾಂತರ ರೂಪಾಯಿ ವರಮಾನವಿತ್ತು ಬಾಡಿಗೆಯೊಂದರಿಂದಲೇ. ತಲೆಮಾರುಗಳ ಕಾಲ ಕೂತು ತಿಂದರೂ ಸವೆಯದಶ್ಟು ಆಸ್ತಿವಂತ. ದಾನ ದರ‍್ಮದಲ್ಲೂ ಎತ್ತಿದ ಕೈ.

ವಿಪರ‍್ಯಾಸವೆಂದರೆ ತಾನು ಮಾಡಿದ ಆಸ್ತಿಯನ್ನು ಅನುಬವಿಸಲು ತನ್ನವರು ಎನಿಸಿಕೊಂಡವರು ಯಾರೂ ಇರಲಿಲ್ಲ. ನಾಲ್ಕಾರು ವರ‍್ಶಗಳ ಹಿಂದೆ ಆದ ಅಪಗಾತದಲ್ಲಿ ತನ್ನವರೆಲ್ಲರನ್ನೂ ಕಳೆದುಕೊಂಡಿದ್ದ. ಅವನದೆಂದು ಉಳಿದಿದ್ದು ಟಾಮಿ ಮಾತ್ರ. ನಿಯತ್ತಿನ ನಾಯಿ.

ಕಾಲ ಯಾರನ್ನೂ ಬಿಡುವುದಿಲ್ಲ. ಒಂದು ದಿನ ರಾತ್ರಿ ಮಲಗಿದವ ಮೇಲೇಳಲೇ ಇಲ್ಲ. ಶವವಾಗಿದ್ದ. ಹತ್ತಿರದ ಸಂಬಂದಿಗಳು ಅನ್ನಿಸಿಕೊಂಡವರು ಬಂದು ಎಲ್ಲಾ ಕಾರ‍್ಯವನ್ನೂ ಮುಗಿಸಿದ್ದರು. ಅವರ ಮನದಲ್ಲಿ ಆಸ್ತಿಯ ಬಗ್ಗೆ ಗೊಂದಲವಿತ್ತು. ಆತ ಉಯಿಲನ್ನೇನಾದರೂ ಬರೆದಿದ್ದಾನೆಯೋ ಏನೋ ಎಂಬ ಶಂಕೆ.

ಅಂದು ಅವರ ಮೊದಲ ಪುಣ್ಯತಿತಿ. ಪುಣ್ಯತಿತಿಯಂದು ಗೋರಿಯ ಬಳಿ ಹೋಗಿ ಸತ್ತವರಿಗೆ ನಮನ ಸಲ್ಲಿಸಿ, ಹಾಲೆರೆಯುವುದು ತೀರ ಹತ್ತಿರದವರ ಕರ‍್ತವ್ಯ. ಆ ಆಸ್ತಿವಂತ ಕಾಲವಾದಾಗ ಹತ್ತಿರದ ಸಂಬಂದಿಯೊಬ್ಬ ಕಾರ‍್ಯವನ್ನು ನೆರವೇರಿಸಿದ್ದರಿಂದ ಅಂದು ಗೋರಿಯ ಬಳಿ ಹೋಗುವುದು ಅನಿವಾರ‍್ಯವಾಗಿತ್ತು. ಒಲ್ಲದ ಮನಸ್ಸಿನಿಂದ ಗೋರಿಯ ಬಳಿ ಹೋದ. ಅವರು ಸಾಕಿದ್ದ ನಾಯಿ ಟಾಮಿ ಸಹ ಎಂದಿನಂತೆ ಗೋರಿಯ ಬಳಿಯಾಗಲೇ ಬಂದಿತ್ತು.

ನಾಯಿಯನ್ನು ಕಂಡ ಇವನಿಗೆ ಮೈಯುರಿ. ‘ಸತ್ತವ ಸತ್ತ, ಇದ್ದಬದ್ದ ಆಸ್ತಿಯೆಲ್ಲವನ್ನು ಈ ಮೂಕ ಪ್ರಾಣಿಯ ಹೆಸರಿಗೆ ಬರೆದು ಸತ್ತ. ಯಾರಿಗೂ ಉಪಯೋಗ ಇಲ್ಲದಂತೆ – ನಾಯಿ ಮೊಲೆ ಹಾಲಿನಂತೆ’ ಮನಸ್ಸಿನಲ್ಲೇ ಗೊಣಗಿಕೊಂಡ. ಬಾಗಿ ಪುಶ್ಪಗುಚ್ಚ ಅರ‍್ಪಿಸಿ ಮೊಣಕಾಲೂರಿ ಕೈಮುಗಿದು ಗೋರಿಗೆ ನಮಸ್ಕರಿಸಿದ. ಮನಪೂರ‍್ವಕವಾಗಿ ಅಲ್ಲದಿದ್ದರೂ ನೋಡುವವರಿಗಾಗಿ.

ಎಲ್ಲಿತ್ತೋ ಮಳೆ ಸುರಿಯಲು ಮೊದಲಿಟ್ಟಿತು. ಅಕಾಲಿಕ ಮಳೆ. ದಾರಾಕಾರವಾಗಿ ಸುರಿಯುತ್ತಿರುವ ಮಳೆಯ ನೀರಿನಿಂದ ನೆನೆಯುವುದನ್ನು ತಪ್ಪಿಸಿಕೊಳ್ಳಲು ಆತ ಸೂರಿನತ್ತ ಓಡಿದ. ಮುರುಕಲು ಶೆಡ್ನಲ್ಲಿ ರಕ್ಶಣೆ ಪಡೆದ. ಕರ‍್ಚಿಪಿನಿಂದ ತಲೆ ಮೈ ಕೈ ಒರೆಸಿಕೊಂಡ. ಮಳೆಯ ಆರ‍್ಬಟ ಇನ್ನೂ ಹೆಚ್ಚಾಗಿತ್ತು. ತಾನು ಬೇಗ ಬಂದು ಸೂರಿನಡಿ ಆಶ್ರಯ ಪಡೆದಿದ್ದು ಸರಿ ಎನಿಸಿತು ಅವನಿಗೆ.

ಟಾಮಿಯ ಬಗ್ಗೆ ಕನಿಕರ ಮೂಡಿತೊ? ಅತವಾ ತಾನು ಇಟ್ಟ ಹೂವು ಏನಾಯಿತೆಂದು ಗಮನಿಸಲೋ ಆತ ಗೋರಿಯತ್ತ ಕಣ್ಣು ಹಾಯಿಸಿದ.

ದಾರಾಕಾರ ಮಳೆಯನ್ನೂ ಲೆಕ್ಕಿಸದೆ, ನಿಯತ್ತಿಗೆ ಮತ್ತೊಂದು ಹೆಸರಾದ ಟಾಮಿ, ತನ್ನ ಒಡೆಯನ ಗೋರಿಯ ಮೇಲೆ ತಲೆಯಿಟ್ಟು ಎಂದಿನಂತೆ ಅಶ್ರು ತರ‍್ಪಣ ಸಲ್ಲಿಸುತ್ತಿತ್ತು.

(ಚಿತ್ರಸೆಲೆ: salon.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: