ಅಮ್ಮನ ಮಮತೆಯ ಪಯಣ
ಅಮ್ಮ ಎಶ್ಟೊಂದು ದಯಾಮಯಿ! ತನ್ನ ಮಕ್ಕಳಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ದವಾಗುವ ಅಮ್ಮಂದಿರು ಎಶ್ಟೊಂದು ನೋವನ್ನು ಸಹಿಸುತ್ತಾರೆ. ಮಕ್ಕಳಿಗಾಗಿ ಜೀವ ಸವೆಸುವ ಅವಳ ಜೀವನ ಎಶ್ಟೊಂದು ಬದಲಾಗುತ್ತಾ ಸಾಗುತ್ತದೆ. ಮಾನಸಿಕ ಬದಲಾವಣೆ ಮಾತ್ರವಲ್ಲದೆ ದೈಹಿಕ ಬದಲಾವಣೆ ಕೂಡ ಅವಳ ಜೀವನದಲ್ಲಿ ಕಾಣಸಿಗುತ್ತೆ.
ಎಶ್ಟೇ ದುಕ್ಕವಾದರೂ ಯಾವುದನ್ನೂ ತೋರ‍್ಪಡಿಸದೆ ಮಕ್ಕಳಿಗಾಗಿ ಎಲ್ಲವನ್ನೂ ಸಹಿಸುತ್ತಾಳೆ ಅಮ್ಮ. ಗಂಡ ಮಕ್ಕಳನ್ನು ಕಾಯದೆ ಊಟ ಮುಗಿಸಿ ಮೇಲೆದ್ದರೂ, ಹೆತ್ತವಳು ಮಕ್ಕಳಿಗೆ ಮೊದಲು ಬಡಿಸಿ ಆಮೇಲೆ ತಾನು ಊಟ ಮಾಡುತ್ತಾಳೆ. ಊರು ಯಾವುದಾದರೇನು, ದೇಶ ಯಾವದಾದರೇನು ಹೆತ್ತ ಕರುಳಿನ ಮಮತೆಯಲ್ಲಿ ವ್ಯತ್ಯಾಸ ಇರುವುದಿಲ್ಲ. ಮರಿಯಾ ಪಾಜ್, ಜಮೈಕಾ ಮೇ ಗೆ ಜನ್ಮ ನೀಡಿದಾಗ, ಆಕೆಯ ಸಂತೋಶಕ್ಕೆ ಪಾರವೇ ಇರಲಿಲ್ಲ. ತನ್ನದೇ ಪ್ರತಿಬಿಂಬ, ಮೂರನೇ ಮಗುವಿನ ರೂಪದಲ್ಲಿ ತನ್ನ ಮನೆ ಬೆಳಗಲು ಬಂದಾಗ ಆ ತಾಯಿ ಯೋಚನೆ ಕೂಡ ಮಾಡಿರಲಿಲ್ಲ, ಇನ್ನು ಕೆಲವೇ ದಿನಗಳಲ್ಲಿ ತನ್ನ ಸಂತೋಶ ನಾಶವಾಗಲಿದೆ ಎಂದು. ಯಾಕೋ ಆ ಪುಟ್ಟ ಕಂದಮ್ಮ ಇತರ ಮಕ್ಕಳಂತೆ ಇರಲಿಲ್ಲ. ಕೂಲಂಕುಶವಾಗಿ ಪರಿಶೀಲಿಸಿದಾಗ ಆ ಮಗುವಿಗೆ ಹುಟ್ಟಿನೊಂದಿಗೆ ದೋಶಗಳು ಇರುವುದು ಪತ್ತೆಯಾಯಿತು. ಆ ಪುಟ್ಟ ಕಂದಮ್ಮ ಬದುಕ ಬೇಕಾದರೆ ಅನೇಕ ವರ‍್ಶಗಳ ಶಸ್ತ್ರಚಿಕಿತ್ಸೆಗಳು ಮತ್ತು ವೈದ್ಯಕೀಯ ಆರೈಕೆಯ ಅಗತ್ಯವಿತ್ತು.
ಬಡ ಕುಟುಂಬದಲ್ಲಿ ಜನಿಸಿದ ಮರಿಯಾ ಪಾಜ್‌ಗೆ ಕಶ್ಟ ಅನ್ನೋದು ಹೊಸದೇನಲ್ಲ. ಪಿಲಿಪೈನ್ಸ್ ದೇಶದ ಒಬ್ಬ ಬಡ ರೈತನ ಮನೆಯಲ್ಲಿ 12 ಮಂದಿ ಒಡ ಹುಟ್ಟಿದವರೊಂದಿಗೆ ಬೆಳೆದ ಮರಿಯಾ ಪಾಜ್, ಬದುಕುಳಿಯಲು ಕಟಿಣ ಪರಿಶ್ರಮ ಮತ್ತು ತ್ಯಾಗದ ಅಗತ್ಯವಿದೆ ಎಂದು ಬಾಲ್ಯದಲ್ಲೇ ಕಲಿತುಕೊಂಡವಳು. ಆದರೆ ಅದ್ಯಾವತ್ತೂ ಅವಳಿಗೆ ಕಶ್ಟ ಅಂತ ಅನಿಸಿರಲಿಲ್ಲ. ಆದರೆ ಅವಳ ಬದುಕಿನ ಅತೀ ಕಟಿಣ ಪ್ರಯಾಣವು ನಿಜವಾಗಿಯೂ ಜಮೈಕಾ ಮೇ ಎಂಬ ಮಗಳಿಗೆ ತಾಯಿಯಾದಾಗ ಪ್ರಾರಂಬವಾಯಿತು. ಹಲವು ಅಂಗವೈಕಲ್ಯದಿಂದ ಜನಿಸಿದ ಜಮೈಕಾ ಅನೇಕ ವೈದ್ಯಕೀಯ ಸವಾಲುಗಳನ್ನು ಎದುರಿಸಬೇಕಾಗಿತ್ತು ಹಾಗೂ ಇದಕ್ಕಾಗಿ ತುಂಬಾ ಹಣದ ಅವಶ್ಯಕತೆಯಿತ್ತು. ಮರಿಯಾ ಪಾಜ್ ಹ್ರುದಯ ವಿದ್ರಾವಕ ಪರಿಸ್ತಿತಿಯಲ್ಲಿ ಸಿಲುಕಿಕೊಂಡಳು. ಅಪ್ಪ, ಮಕ್ಕಳ ಜವಾಬ್ದಾರಿಯಿಂದ ನುಣುಚಿಕೊಂಡು ದೂರ ಸರಿದ. ಅವಳು ನಡೆಸುತ್ತಿದ್ದ ಸಣ್ಣ ಬೇಕರಿಯ ದುಡಿತ ಮಗಳ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ಸಾಕಾಗುತ್ತಿರಲಿಲ್ಲ.
ಐದನೇ ವಯಸ್ಸಿನಲ್ಲಿ, ಜಮೈಕಾ ಮೇ ತನ್ನ ಬಾಯಿಯ ಅಂಗುಳನ್ನು ಸರಿಪಡಿಸಲು ಮೊದಲ ಶಸ್ತ್ರಚಿಕಿತ್ಸೆಗೆ ಒಳಗಾದಳು. 12 ನೇ ವಯಸ್ಸಿನಲ್ಲಿ, ಅವಳು ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು ಮತ್ತು ನಂತರ, ಅವಳ ಹ್ರುದಯದಲ್ಲಿನ ರಂದ್ರವನ್ನು ಸರಿಪಡಿಸಲು ಅವಳಿಗೆ ಹ್ರುದಯ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ಆದರೆ ಹ್ರುದಯ ಚಿಕಿತ್ಸೆಗೆ ಬೇಕಾದ ಹಣ ಅವಳ ಹತ್ತಿರ ಇರಲಿಲ್ಲ, ಹಾಗಾಗಿ ಅವಳು ತನ್ನ ಜೀವನದ ಅತೀ ದೊಡ್ಡ ಕಟಿಣ ನಿರ‍್ದಾರವನ್ನು ತೆಗೆದುಕೊಳ್ಳುತ್ತಾಳೆ. ತನ್ನ ಮೂರೂ ಜನ ಮಕ್ಕಳನ್ನು ಮನೆಯ ಹಿರಿಯರ ಬಳಿ ಬಿಟ್ಟು , ವಿದೇಶಕ್ಕೆ ಮನೆಕೆಲಸದವಳಾಗಿ ಹೋಗುವ ನಿರ‍್ದಾರ ಮಾಡುತ್ತಾಳೆ. 2005 ರಲ್ಲಿ ಅವಳು ಬಾರವಾದ ಹ್ರುದಯದಿಂದ ಸೌದಿ ಅರೇಬಿಯಾಕ್ಕೆ ಮನೆಗೆಲಸದವಳಾಗಿ ಕೆಲಸಕ್ಕೆ ಹೋಗಿ, ಎರಡು ವರ‍್ಶ ಅಲ್ಲಿ ದುಡಿಯುತ್ತಾಳೆ. ಅಲ್ಲಿ ಅವಳಿಗೆ ಪ್ರತಿದಿನವೂ ಮಕ್ಕಳ ಚಿಂತೆ. ಹೇಗಿದ್ದಾರೋ, ಏನು ಮಾಡುತ್ತಿದ್ದಾರೋ ಅನ್ನುವ ಕಳವಳ. ಆದರೆ ಮಗಳ ಚಿಕಿತ್ಸೆಗೆ ಹಣ ಬೇಕು. ದುಡಿಯದೆ ವಿದಿ ಇಲ್ಲ. ಎರಡು ವರ‍್ಶ ಅಲ್ಲಿ ಕೆಲಸ ಮಾಡಿ ಮತ್ತೆ ಊರಿಗೆ ಮರಳುತ್ತಾಳೆ ಮರಿಯಾ. ಆದರೆ ಮಗಳ ಚಿಕಿತ್ಸೆಗೆ ಅವಳು ಎರಡು ವರ‍್ಶದಲ್ಲಿ ದುಡಿದ ಹಣ ಏನೇನು ಸಾಕಾಗುವುದಿಲ್ಲ.
2008 ರಲ್ಲಿ ದುಬೈ ಗೆ ಹೋಗಿ ಅಲ್ಲಿ ಪ್ರೆಂಚ್ ದಂಪತಿಗಳ ಮನೆಯಲ್ಲಿ ಸುದೀರ‍್ಗ 13 ವರ‍್ಶಗಳ ಕಾಲ ದುಡಿಯುತ್ತಾಳೆ. ಅತ್ತ ಊರಿನಲ್ಲಿ ಮಗಳ ಚಿಕಿತ್ಸೆ ನಡೆಯುತ್ತಾ ಇರುತ್ತೆ. ತನ್ನ ಹಿರಿಯ ಮಗಳನ್ನು ದುಬೈಗೆ ಕರೆದು ತರುತ್ತಾಳೆ. ಮಗಳು ತನ್ನ ತಾಯಿಯ ಬೆಂಬಲದಿಂದ 7 ವರ‍್ಶಗಳ ಕಾಲ ದುಬೈನಲ್ಲಿ ದುಡಿದು ನೆದರ‍್ಲ್ಯಾಂಡ್ಸ್ ದೇಶಕ್ಕೆ ತೆರಳುತ್ತಾಳೆ. ಮಗ ದೂರದ ಮನಿಲಾದಲ್ಲಿ ವಾಸ್ತುಶಿಲ್ಪವನ್ನು ಕಲಿಯತೊಡಗುತ್ತಾನೆ. ಅಮ್ಮನ ಶ್ರಮ ಮಕ್ಕಳ ಬವಿಶ್ಯವನ್ನು ರೂಪಿಸಿತು. ಆದರೆ ಕತೆ ಇಶ್ಟಕ್ಕೆ ಮುಗಿಯಲಿಲ್ಲ. ಮೂರನೇ ಮಗಳ ಚಿಕಿತ್ಸೆ ಇನ್ನೂ ಮುಗಿದಿರಲಿಲ್ಲ. ಆದರೆ ಮರಿಯಾಳ ಮಾಲೀಕರಾದ ಪ್ರೆಂಚ್ ದಂಪತಿಗಳು ದುಬೈ ಬಿಟ್ಟು ತಮ್ಮ ದೇಶಕ್ಕೆ ತೆರಳುತ್ತಾರೆ. ಮುಂದೇನು ಅನ್ನುವ ಆಲೋಚನೆ ಮರಿಯಾಳ ಮನದೊಳಗೆ ಸುಳಿಯುತ್ತದೆ. ಒಂದಂತೂ ಸತ್ಯ, ತಾನು ಬೇರೆಯವರ ಮನೆಯಲ್ಲಿ ಮುಸುರೆ ತಿಕ್ಕುವ ಕೆಲಸವನ್ನು ಇನ್ನು ಹತ್ತು ವರ‍್ಶ ಮಾಡಿದರೂ ನನ್ನ ಮಗಳ ಹ್ರುದಯ ಚಿಕಿತ್ಸೆಯ ವೆಚ್ಚವನ್ನು ತನ್ನಿಂದ ಬರಿಸಲು ಸಾದ್ಯವಾಗುವುದಿಲ್ಲ. ಹಾಗಾದರೆ ತಾನೇನು ಮಾಡಲಿ ಅಂತ ಯೋಚಿಸುತ್ತಲೇ, ಮಗಳ ಬವಿಶ್ಯದ ಚಿಂತೆ ಮತ್ತೊಂದು ದಿಟ್ಟ ನಿರ‍್ದಾರ ಕೈಗೊಳ್ಳಲು ಅವಳನ್ನು ಪ್ರೇರೇಪಿಸುತ್ತದೆ.
ಬೇಕರಿಯ ಸಿಹಿ ತಿಂಡಿ ತಯಾರಿಸುವುದೆಂದರೆ ಅವಳಿಗೆ ಪಂಚಪ್ರಾಣ. ವಿದೇಶಕ್ಕೆ ತೆರಳುವ ಮೊದಲು, ಅವಳು ಮಾಡುತ್ತಿದ್ದದ್ದು ಅದೇ ಕೆಲಸ. ಗೆಳೆಯರ ಮತ್ತು ಕುಟುಂಬದವರ ಸಹಾಯ ಪಡೆದು 2021 ರಲ್ಲಿ ದುಬೈಯಲ್ಲಿ ಒಂದು ಚಿಕ್ಕ ಬೇಕರಿ ಅಂಗಡಿ ತೆರೆಯುತ್ತಾಳೆ. ಅವಳಲ್ಲಿ ಉದ್ಯಮ ನಡೆಸುವ ಯಾವುದೇ ಅನುಬವ ಇರುವುದಿಲ್ಲ. ಇತ್ತ ಬಂಡವಾಳ ಕೂಡ ಇಲ್ಲ. ಇದ್ದದ್ದು ಅವಳಲ್ಲಿ ಬೇಕರಿಯ ತಿನಿಸುಗಳನ್ನು ತಯಾರಿಸುವ ಕೌಶಲ್ಯ ಮಾತ್ರ. ಕೆಲಸದ ಮೇಲಿನ ಅವಳ ಪ್ರೀತಿ ಮತ್ತು ಕಟಿಣ ಶ್ರಮ ಅವಳಿಗೆ ನಿರಾಶೆಯನ್ನುಂಟು ಮಾಡಲಿಲ್ಲ. ಕೇವಲ ಜನರ ಬಾಯಿ ಮಾತಿನಿಂದಲೇ ಅವಳ ಬೇಕರಿಯ ತಿನಿಸುಗಳು ಜನಪ್ರಿಯವಾಗಿ ಬಿಟ್ಟವು. ಕೇವಲ ನಾಲ್ಕು ವರ‍್ಶಗಳಲ್ಲಿ ಅವಳು 7 ಬೇಕರಿಗಳ ಮಾಲೀಕಳಾದಳು. ಇಂದು “ಮರಿಯಾ ಪಾಜ್” ಬೇಕರಿಯಲ್ಲಿ 70 ಜನ ಕೆಲಸ ಮಾಡುತ್ತಾರೆ. 58 ವರ‍್ಶ ಪ್ರಾಯದ ಮರಿಯಾಳ ಮುಕದಲ್ಲಿ ನೆಮ್ಮದಿ ಮತ್ತು ಸಂತ್ರುಪ್ತಿಯ ನಗು ಕಾಣಸಿಗುತ್ತೆ.
ಅವಳ ಬೇಕರಿಯ ಸಿಹಿ ಯಶಸ್ಸು ಸುಲಬವಾಗಿ ಬರಲಿಲ್ಲ. ಅದು ವರ‍್ಶಗಳ ಕಟಿಣ ಪರಿಶ್ರಮ, ತ್ಯಾಗ ಮತ್ತು ತನ್ನ ಮಕ್ಕಳಿಗೆ ಉತ್ತಮ ಬವಿಶ್ಯವನ್ನು ಒದಗಿಸುವ ಉತ್ಕಟ ಬಯಕೆಯಿಂದ ಸಿಕ್ಕಿತು. “ನಾನು ಇದನ್ನು ಒಬ್ಬಂಟಿಯಾಗಿ ಮಾಡಲಿಲ್ಲ” ಎಂದು ಮರಿಯಾ ಪಾಜ್ ನಗುತ್ತಾ ಹೇಳುತ್ತಾಳೆ. ನನಗೆ ನನ್ನ ಸಂಬಂದಿಕರ ಬೆಂಬಲವಿತ್ತು ಮತ್ತು ನನ್ನ ಮಕ್ಕಳು ಯಾವಾಗಲೂ ನನ್ನ ಪ್ರೇರಣೆಯಾಗಿದ್ದರು ಎನ್ನುವ ವಿನಮ್ರಬಾವ ಅವಳಲ್ಲಿದೆ. ತನ್ನ ಮಗಳನ್ನು ಸಂಪೂರ‍್ಣ ಗುಣಪಡಿಸುವುದು ಆಕೆಯ ಬದುಕಿನಲ್ಲಿದ್ದ ಒಂದೇ ಒಂದು ದೊಡ್ಡ ಕನಸಾಗಿತ್ತು . ಆ ಕನಸನ್ನು ನನಸು ಮಾಡಿದ್ದೇ ತನ್ನ ಜೀವನದ ಅತೀ ದೊಡ್ಡ ಸಾದನೆ ಎಂದು ಕಣ್ಣಲ್ಲಿ ನೀರನ್ನು ತುಂಬಿಕೊಂಡು ಮರಿಯಾ ಹೇಳಿಕೊಳ್ಳುತ್ತಾಳೆ. 23 ವರ‍್ಶಗಳ ನಂತರ, ನಾನು ಅಂತಿಮವಾಗಿ ನನ್ನ ಮಗಳ ಸ್ತಿತಿಯನ್ನು ಸರಿಪಡಿಸಲು ಸಾದ್ಯವಾಯಿತು” ಎಂದು ಮರಿಯಾ ಪಾಜ್ ಹೇಳುತ್ತಾಳೆ. “ಇದು ನನ್ನ ಜೀವನದ ದೊಡ್ಡ ವಿಜಯವಾಗಿತ್ತು. ಪ್ರತಿಯೊಂದು ತ್ಯಾಗ, ಪ್ರತಿಯೊಂದು ಸವಾಲು, ಈ ಕ್ಶಣಕ್ಕೆ ಕಾರಣವಾಯಿತು” ಎನ್ನುತ್ತಾ, ಬಾವನೆಗಳಿಂದ ಉಸಿರುಗಟ್ಟಿಸುತ್ತಾಳೆ ಮರಿಯಾ.
ಮಗಳ ಶಸ್ತ್ರಚಿಕಿತ್ಸೆಗಳಿಗಾಗಿ ಮರಿಯಾ ಪಾಜ್ ಸುಮಾರು ಎರಡೂವರೆ ಕೋಟಿ ವ್ಯಯಿಸುತ್ತಾಳೆ. ನನ್ನ ಬೇಕರಿಯಿಂದ ಈ ಹಣವನ್ನು ದುಡಿದೆ. ನನ್ನ ಬೇಕರಿ ಇಲ್ಲದಿದ್ದರೆ, ಇದ್ಯಾವುದೂ ಸಾದ್ಯವಾಗುತ್ತಿರಲಿಲ್ಲ” ಎಂದು ಅವಳು ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ. ಇಂದು, ಮರಿಯಾ ಪಾಜ್ ಕೇವಲ ಯಶಸ್ವಿ ಉದ್ಯಮಿ ಮಾತ್ತ್ರವಲ್ಲ, ಆಕೆ ಕಶ್ಟಗಳನ್ನು ಎದುರಿಸುವ ಪ್ರತಿಯೊಬ್ಬರಿಗೂ ಬರವಸೆಯ ದಾರಿ ದೀಪವಾಗಿದ್ದಾಳೆ. ನೀವು ಎಲ್ಲಿಂದ ಪ್ರಾರಂಬಿಸಿದರೂ, ಯಾವ ವಯಸ್ಸಿನಲ್ಲಿ ಆರಂಬಿಸಿದರೂ ದ್ರುಡ ನಿಶ್ಚಯ, ಪ್ರೀತಿ ಮತ್ತುಎಲ್ಲವನ್ನು ಎದುರಿಸಿ ನಿಲ್ಲುವ ಎದೆಗಾರಿಕೆ ಇದ್ದರೆ ಏನು ಬೇಕಾದರೂ ಜೀವನದಲ್ಲಿ ಸಾದಿಸಲು ಸಾದ್ಯ ಎಂದು ಅವಳ ಕತೆ ಸಾಬೀತುಪಡಿಸುತ್ತದೆ. ಮನೆಕೆಲಸದಾಕೆಯಿಂದ ಸಿಇಒ ಹುದ್ದೆಗೆ ಅವಳ ಪ್ರಯಾಣವು ಕೇವಲ ವ್ಯವಹಾರದ ಯಶಸ್ಸಿನ ಬಗ್ಗೆ ಅಲ್ಲ. ಬದಲಿಗೆ ಅದು ಪ್ರೀತಿ, ಕುಟುಂಬ ಮತ್ತು ಮಕ್ಕಳಿಗೆ ಉತ್ತಮ ಜೀವನ ಕೊಡಲು ನಿರಂತರವಾದ ಪ್ರಯತ್ನದ ಬಗ್ಗೆ ನಮಗೆ ಬಹಳಶ್ಟನ್ನು ಕಲಿಸಿಕೊಡುತ್ತೆ. ಇದು ಪ್ರತಿಕೂಲ ಪರಿಸ್ತಿತಿಯ ಮೇಲೆ ಮೇಲೆ ವಿಜಯ ಸಾದಿಸುವ ಕತೆಯಾಗಿದೆ ಮತ್ತು ತನ್ನ ಬಗ್ಗೆ ತನಗೆ ನಂಬಿಕೆಯಿದ್ದರೆ ಜೀವನದಲ್ಲಿ ಏನನ್ನು ಬೇಕಿದ್ದರೂ ಸಾದಿಸಬಹುದು ಎನ್ನುವುದಕ್ಕೆ ಮರಿಯಾಳ ಜೀವನವೇ ಸಾಕ್ಶಿ.
(ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು