ಆದ್ಯಾತ್ಮವೆಂಬುದು ಬದುಕಿಗೆ ಎಶ್ಟು ಮುಕ್ಯ
ಒಂದೆರಡು ದಶಕಗಳ ಹಿಂದಿನ ಬದುಕಿಗೂ ಪ್ರಸ್ತುತ ದಿನಗಳ ಬದುಕಿಗೂ ಬಹಳ ಅಂತರವೇರ‍್ಪಟ್ಟಿದೆ. ಅಂದು ಜೀವನದಲ್ಲಿ ಒತ್ತಡ, ದಾವಂತ ಇದ್ದರೂ ಅದು ಮತ್ತೆ ಸರಿದೂಗಿಸಿಕೊಳ್ಳುವ ಮಟ್ಟದಲ್ಲಿಇತ್ತು. ಈಗ ಪರಿಸ್ತಿತಿ ಕೈ ಮೀರುತ್ತಿದೆ. ಹಣ, ಅಂತಸ್ತು, ಐಶಾರಾಮಿ ಜೀವನದ ಆಸೆ ಹೆಚ್ಚಿದಂತೆ, ಹೆಚ್ಚು ಹೆಚ್ಚು ಹಣಗಳಿಕೆಯ ಹುಚ್ಚು ನಮಗೆ ನೆತ್ತಿಗೇರುತ್ತಿದೆ. ಹೆಚ್ಚು ಹಣಗಳಿಕೆಗೆ ಆದುನಿಕ ತಂತ್ರಜ್ನಾನ ನಮಗೆ ಇಂಬು ಕೊಡುತ್ತಿವೆ. ಇಶ್ಟೇ ಆಗಿದ್ದರೆ ಹೇಗೊ ನಿಬಾಯಿಸಬಹುದಿತ್ತು ಆದರೆ ವಾಸ್ತವದಲ್ಲಿ ಪರಿಸ್ತಿತಿ ಬೇರೆಯೇ ಆಗುತ್ತಿದೆ.
ಇವತ್ತು ಲಕ್ಶಗಟ್ಟಲೆ ಮೌಲ್ಯದ ಸ್ಮಾರ‍್ಟ್ ಪೋನುಗಳು ನಮ್ಮ ಕೈಯಲ್ಲಿದೆ, ಟ್ಯಾಬ್, ಲ್ಯಾಪ್ ಟ್ಯಾಪ್ ಜೊತೆಗೆ ಕ್ರುತಕ ಬುದ್ದಿಮತ್ತೆ (Artificial Intelligence) ಯ ತಂತ್ರ ಜ್ನಾನವೂ ಅತಿ ವೇಗವಾಗಿ ಅಬಿವ್ರುದ್ದಿ ಹೊಂದುತ್ತಿದೆ ಮತ್ತು ನಮ್ಮಂತಹ ಸಾಮಾನ್ಯರ ಉಪಯೋಗಕ್ಕೂ ಕೈಗೆಟಕುವ ದರದಲ್ಲಿ ಬೆಳವಣಿಗೆ ಆಗುತ್ತಿದೆ. ಒಟ್ಟಾರೆ ಈ ತಂತ್ರಜ್ನಾನದಿಂದ ನಮ್ಮ ಮುಂಜಾನೆ ಪ್ರಾರಂಬವಾಗುವುದು ಸ್ಮಾರ‍್ಟ್ ಪೋನಿನಿಂದ ಜೊತೆಗೆ ಟ್ಯಾಬ್, ಲ್ಯಾಪ್‌ಟಾಪ್ ನಮ್ಮ ಕೈ ಜೋಡಿಸುತ್ತವೆ. ಇಂದು ಮನೆಮಂದಿ ಜೊತೆಗೆ ಮಾತನಾಡುವುದಕ್ಕಿಂತ ಹೆಚ್ಚಾಗಿ ಪೋನಿನಲ್ಲಿ ಮಾತನಾಡುತ್ತೇವೆ. ಮನೆಗೆ ಬಂದರೂ ಪೋನಿನ ಮಾತನಾಡುವುದು ಕಮ್ಮಿಯಾಗುವುದಿಲ್ಲ. ಇನ್ನೂ ಹೆಚ್ಚಾಗಿ ಸ್ಮಾರ‍್ಟ್ ಪೋನಿನಲ್ಲೆ, ಬ್ಯಾಂಕಿಂಗ್, ಶಾಪಿಂಗ್, ಆಪೀಸ್ ಮೇಲ್, ವ್ಯಾಟ್ಸಾಪ್, ಇನ್ಸಟಾಗ್ರಾಂ, ಪೇಸ್‌ಬುಕ್, ಆನ್ ಲೈನ್ ಗೇಮ್ಸ್, ಸಿನಿಮಾ, ದಾರಾವಾಹಿ, ಕ್ರಿಕೆಟ್ ಮುಂತಾದವುಗಳೆಲ್ಲ ಇದರೊಳಗೆ ನಡೆಯುವುದರಿಂದ ಈ ಮಾಯಜಾಲಕ್ಕೆ ಸಿಲುಕದವರಿಲ್ಲ.
ಮನೆಯೊಳಗೆ ಬಂದರೂ ಮನೆಯ ಸದಸ್ಯರು ಒಂದೊಂದು ಕೋಣೆ ಹಿಡಿದು ತಮ್ಮತಮ್ಮ ಸ್ಮಾರ‍್ಟ್ ಪೋನ್, ಲ್ಯಾಪ್‌ಟಾಪ್, ಟ್ಯಾಬ್ ನ ಪ್ರಪಂಚದಲ್ಲಿ ಮುಳುಗಿಬಿಡುತ್ತಾರೆ. ಇವರಿಗೆ ಹಗಲು ಯಾವುದು, ರಾತ್ರಿ ಯಾವುದು ಎಂಬುದರ ಪರಿವೆ ಇರುವುದಿಲ್ಲ. ಇಶ್ಟೆಲ್ಲ ಒತ್ತಡವನ್ನು ತಡೆದುಕೊಳ್ಳಬೇಕಾದ ನಮ್ಮ ಮನಸ್ಸು ಕಂಡಿತ ಕದಲುತ್ತದೆ. ಜನರು ಒತ್ತಡದ ಜೀವನದಿಂದ ರೋಸಿ ಹೋಗಿ, ಕಿನ್ನತೆಗೆ ಒಳಗಾಗಿ ಮನೋರೋಗಿಗಳಾಗಿ ಪರಿವರ‍್ತನೆಗೊಳ್ಳುತ್ತಿದ್ದಾರೆ. ಇಂದು ಮನೋ ವೈದ್ಯರ ಕ್ಲಿನಿಕ್ಕುಗಳು ತುಂಬಿ ತುಳುಕುತ್ತಿವೆ. ಅವರ ಪೀಸು ದುಬಾರಿಯಾಗಿದೆ. ಇನ್ನು ಆದ್ಯಾತ್ಮ, ಯೋಗ, ದ್ಯಾನ, ವ್ಯಾಯಮ ಚುರುಕಿನ ನಡಿಗೆಗಳಿಗೆ ಪುರುಸೊತ್ತೆ ಇಲ್ಲದೆ ಹುಚ್ಚರ ಸಂತೆಯಾಗಿದೆ. ಸಣ್ಣಪುಟ್ಟ ವಿಚಾರಗಳಿಗೂ ರೇಗುವುದು, ಶೀಗ್ರ ಕೋಪ, ಗಂಡ ಹೆಂಡತಿಯರ ನಡುವೆ ಜಗಳ ವೈಮನಸ್ಯ, ನಿತ್ಯದ ಸತ್ಯ ಎನ್ನುವಂತಾಗಿದೆ. ಇದರ ನಡುವೆ ನೆಮ್ಮದಿ ಎಂಬುದು ಮರೀಚಿಕೆಯಾಗಿದೆ.
ಈ ಆದುನಿಕತೆಯ ಹೆಸರಲ್ಲಿ, ಹಣಗಳಿಕೆಯ ನಾಗಲೋಟದಲ್ಲಿ ನೆಮ್ಮದಿ ಕಳೆದುಕೊಂಡು ನೆಮ್ಮದಿ ಹುಡುಕಿದರೆ ಸಿಗುವುದೆಲ್ಲಿ? ಆ ನೆಮ್ಮದಿ ಬೇಕಾದರೆ ನಾವು ಸ್ವಲ್ಪ ಆದ್ಯಾತ್ಮದ ಒಲವು ಬೆಳೆಸಿಕೊಂಡು ಶಿಸ್ತುಬದ್ದ ಜೀವನ ನಡೆಸಲು ವಿದ್ಯುಕ್ತರಾಗಬೇಕು.
ಆದ್ಯಾತ್ಮದ ಲೋಕದಲ್ಲಿ ಬಜನೆ, ದೇವರ ಆರಾದನೆ, ಯೋಗ, ದ್ಯಾನಗಳೆಲ್ಲವೂ ಮಿಳಿತವಾಗಿರುವುದರಿಂದ ಏಕಗವಾಕ್ಶಿ ಸೇವೆಯಂತೆ ಆದ್ಯಾತ್ಮದ ಒಲವು ಬೆಳೆಸಿಕೊಳ್ಳುವುದರಿಂದ ಕಂಡಿತವಾಗಿಯೂ ರೋಸಿ ಹೋದ ಮನಕ್ಕೆ ನೆಮ್ಮದಿ ನೀಡಬಲ್ಲದು. ಆದ್ಯಾತ್ಮ ಚಿಕಿತ್ಸಕನಂತೆ ಕೆಲಸ ಮಾಡಿ, ನಮ್ಮ ಕಿನ್ನತೆಗೆ ಮದ್ದಾಗಿ ಬಿಡಬಲ್ಲದು. ಪರಸ್ಪರ ಆದ್ಯಾತ್ಮದ ಒಲವಿನಿಂದ ಗಾಡ ಮೈತ್ರಿ ಏರ‍್ಪಟ್ಟು ಸಂಬಂದಗಳ ಅನ್ಯೋನ್ಯತೆ ಹೆಚ್ಚಿಸಬಲ್ಲದು. ಆದ್ಯಾತ್ಮದ ಒಲವಿನಿಂದ ತಾಮಸಗುಣ ಕಳೆದು ಬದುಕಿಗೆ ಬೆಳಕು ನೀಡಬಲ್ಲದು. ನೆಮ್ಮದಿ ಅರಸಿ ಹೊರಟವರಿಗೆ ಇದು ಶ್ರೀರಕ್ಶೆ ಆಗಬಲ್ಲದು.
ಆದ್ಯಾತ್ಮಕ್ಕೆ ಮನಸ್ಸು ಹೊರಳುವಾಗ, ಆದ್ಯಾತ್ಮದ ಹೆಸರಲ್ಲಿ ಮೌಡ್ಯಗಳು ನಮ್ಮ ಮೇಲೆ ಸವಾರಿ ಮಾಡದಂತೆ ಎಚ್ಚರವಹಿಸಬೇಕು, ಇಲ್ಲದಿದ್ದರೆ ಕ್ರಮೇಣ ಇದು ಮತ್ತೊಂದು ಸಮಸ್ಯೆಗೆ ಬಾಗಿಲು ತೆಗೆದುಕೊಳ್ಳುತ್ತದೆ. ಒಟ್ಟಾರೆಯಾಗಿ ಇಂದಿನ ಆದುನಿಕ ತಂತ್ರಜ್ನಾನದ ಜೊತೆಗೆ ನಮ್ಮ ಗಳಿಕೆಯ ಓಟದಿಂದ ಯಾಂತ್ರಿಕ ಜೀವನ ನಡೆಸುತ್ತಿರುವ ಮನುಶ್ಯರಿಗೆ ಈ ಆದ್ಯಾತ್ಮದ ಒಲವು ಕೊಂಚ ನಿರಾಳತೆಯೊಂದಿಗೆ ನೆಮ್ಮದಿ ತಂದುಕೊಡಬಲ್ಲದು.
(ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು