ಕಿರುಕವಿತೆ: ತುಸುಹೊತ್ತಿನ ಕಾಮನಬಿಲ್ಲು
– ನಿತಿನ್ ಗೌಡ.
ತುಸುಹೊತ್ತಿನ ಕಾಮನಬಿಲ್ಲು
ಎಶ್ಟೊಂದು ಸುಂದರವಾಗಿರುವೆ ನಾ;
ಬಹುಶಹ ಈ ಅಂದ ನೀ ನೋಡುವ ನೋಟದಲ್ಲಿರುವುದೇನೋ?
ಎಶ್ಟೊಂದು ಸೊಗಸು ಈ ಬದುಕು;
ಬಹುಶಹ ಈ ಸೊಗಸು, ನೀ ಬಾಳುವ ಪರಿಯಲ್ಲಡಗಿರುವುದೇನೋ?
ಎಶ್ಟೊಂದು ಸೋಬಿಯಾಗಿತ್ತು ಈ ಪಯಣ;
ಬಹುಶಹ ಪಯಣದಲ್ಲಿನ ಸಂಗ, ಸೊಗಸಾಗಿತ್ತೇನೋ?
ಎಶ್ಟೊಂದು ನೀರಸವಾಗಿದೆ ಈ ಗೆಲುವು;
ಬಹುಶಹ ಈ ಗೆಲುವ ಸಂಬ್ರಮಿಸಲು ಗೆಳೆಯನಿಲ್ಲವೇನೋ?
ಎಶ್ಟೊಂದು ಸೋಬಿಯಾಗಿದೆ ಈ ಯಶಸ್ಸು;
ಬಹುಶಹ ಬೆನ್ನಟ್ಟಿದ ಗುರಿ ದೊಡ್ಡದಿಲ್ಲವೇನೋ?
ಎಶ್ಟೊಂದು ನೀರಸ ಕೆಲವರ ಸಂಗ;
ಬಹುಶಹ ಅವರಿರುವಿಕೆಯ ಬೆಲೆ; ಅವರಿರುವರೆಗೂ ಅರಿವಾಗದೇನೋ?
ಎಶ್ಟೊಂದು ವರ್‍ಣರಂಜಿತ ಕೆಲವರ ಬದುಕು;
ಬಹುಶಹ ನೋವು-ನಲಿವು, ಏಳು-ಬೀಳುಗಳೆಂಬ ಕಾಮನಬಿಲ್ಲು ಕಾರಣವೇನೋ?
ಎಶ್ಟೊಂದು ಬಾರ ಈ ಹೆಜ್ಜೆ;
ಬಹುಶಹ ಬಾವನೆಗಳೇ ತುಂಬಿಕೊಂಡಿರುವುದೇನೋ ಜೋಳಿಗೆಯಲಿ?
ಎಶ್ಟೊಂದು ಮುಗ್ದ ಆ ನಗು;
ಬಹುಶಹ ಯೋಚನೆ-ಆಲೋಚನೆಗೆ ನಿಲುಕದೇನೂ ಈ ಮಗುವಿನ ಮನಸ್ಸು;
ಎಶ್ಟೊಂದು ಚೆಂದ ಈ ಸಾವು, ಗರಿಬಿಚ್ಚಿದ ನವಿಲಹಾಗೆ;
ಬಹುಶಹ ಬದುಕೆಂಬ ಬಿಸಿಲು ಮಳೆಗೆ ಮೂಡುವ ತುಸುಹೊತ್ತಿನ ಕಾಮನಬಿಲ್ಲೇನೊ ಈ ಸಾವು;
( ಚಿತ್ರಸೆಲೆ: copilot.microsoft.com )
ಇತ್ತೀಚಿನ ಅನಿಸಿಕೆಗಳು