ಶಾವಿಗೆ ಬಾತ್

ಪ್ರತೀಕ್ಶಾ ಬೂಶಣ್

ಏನೇನು ಬೇಕು

  • ಶಾವಿಗೆ – 1 ಬಟ್ಟಲು
  • ಹಸಿಮೆಣಸಿನಕಾಯಿ – 7
  • ಗೋಡಂಬಿ – 10
  • ಹಸಿ ಬಟಾಣಿ – 2 ಚಮಚ
  • ಬೀನ್ಸ್ – 2 ಚಮಚ
  • ಕ್ಯಾರೆಟ್ – 2 ಚಮಚ
  • ಅಡುಗೆ ಎಣ್ಣೆ
  • ಉದ್ದಿನ ಬೇಳೆ – 1 ಚಮಚ
  • ಕಡಲೆ ಬೇಳೆ – 1 ಚಮಚ
  • ಅರಿಶಿಣದ ಪುಡಿ – 1 ಚಿಟಿಕೆ
  • ಇಂಗು – 1 ಚಿಟಿಕೆ
  • ಸಾಸಿವೆ – 1 ಚಮಚ
  • ಕೊತ್ತಂಬರಿ ಸೊಪ್ಪು – ಸ್ವಲ್ಪ
  • ಕರಿಬೇವು – 10 ಎಲೆ
  • ಉಪ್ಪು

ಮಾಡುವ ಬಗೆ

ಶಾವಿಗೆ ಹುರಿಯುವುದು: ನಿಮ್ಮ ಶಾವಿಗೆ ಹುರಿದಿಲ್ಲದಿದ್ದರೆ, ಒಂದು ಬಾಣಲೆಯಲ್ಲಿ ಎಣ್ಣೆ ಹಾಕದೆ, ಶಾವಿಗೆಯನ್ನು ಚಿನ್ನದ ಬಣ್ಣ(Golden brown) ಬರುವವರೆಗೆ ಹುರಿಯಿರಿ. ಹುರಿದ ಶಾವಿಗೆ ಆಗಿದ್ದರೆ, ಈ ಹಂತವನ್ನು ಬಿಟ್ಟುಬಿಡಿ.

ಒಗ್ಗರಣೆ ಮಾಡುವುದು: ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ನಂತರ ಸಾಸಿವೆ ಹಾಕಿ. ಸಾಸಿವೆ ಸಿಡಿದ ನಂತರ ಉದ್ದಿನ ಬೇಳೆ, ಕಡ್ಲೆ ಬೇಳೆ, ಹಸಿಮೆಣಸಿನಕಾಯಿ, ಗೋಡಂಬಿ, ಕರಿಬೇವಿನ ಎಲೆಗಳು, ಇಂಗು ಹಾಕಿ ಹುರಿಯಿರಿ.

ಒಗ್ಗರಣೆ ತಯಾರಾದ ನಂತರ, ಹೆಚ್ಚಿದ ಕ್ಯಾರೆಟ್, ಬೀನ್ಸ್ ಮತ್ತು ಹಸಿ ಬಟಾಣಿ ಹಾಕಿ ಕಡಿಮೆ ಉರಿಯಲ್ಲಿ ಹುರಿಯಿರಿ. ತರಕಾರಿಗಳು ಕಂದು ಬಣ್ಣಕ್ಕೆ ತಿರುಗಬಾರದು ಎಚ್ಚರವಿರಲಿ. ತರಕಾರಿಗಳನ್ನು ಹುರಿಯುವಾಗ ಒಂದು ಚಿಟಿಕೆ ಉಪ್ಪು ಸೇರಿಸಿ. ಈಗ, ಮುಕ್ಕಾಲು ಬಟ್ಟಲು (ಕಪ್) ನೀರು ತೆಗೆದುಕೊಂಡು ಬಾಣಲೆಗೆ ಸೇರಿಸಿ. ರುಚಿಗೆ ತಕ್ಕಶ್ಟು ಉಪ್ಪು ಮತ್ತು ಒಂದು ಚಿಟಿಕೆ ಅರಿಶಿಣದ ಪುಡಿ ಸೇರಿಸಿ. ಬಾಣಲೆಯನ್ನು ಮುಚ್ಚಿ, ನೀರು ಕುದಿಯುವವರೆಗೆ ಕಾಯಿರಿ. ನಂತರ, ತರಕಾರಿಗಳು ಸರಿಯಾಗಿ ಬೆಂದಿವೆಯೇ ಎಂದು ಪರೀಕ್ಶಿಸಿ. ಉರಿಯನ್ನು ಕಡಿಮೆ ಮಾಡಿ. ಹುರಿದ ಶಾವಿಗೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಮುಚ್ಚಳವನ್ನು ಮುಚ್ಚಿ.

1 ನಿಮಿಶದ ನಂತರ ಒಮ್ಮೆ ಶಾವಿಗೆಯನ್ನು ತಿರುಗಿಸಿ ಮತ್ತೆ ಮುಚ್ಚಳವನ್ನು ಮುಚ್ಚಿ, ಕಡಿಮೆ ಉರಿಯಲ್ಲಿ ಬೇಯಲು ಬಿಡಿ. ಕೆಲವು ಸೆಕೆಂಡ್‌ಗಳ ಅಂತರದಲ್ಲಿ, ಶಾವಿಗೆ ಬೆಂದಿದೆಯೇ ಎಂದು ಪರಿಶೀಲಿಸಿ. ಶಾವಿಗೆ ಸಂಪೂರ‍್ಣವಾಗಿ ಬೆಂದ ನಂತರ, ಒಲೆಯನ್ನು ಆರಿಸಿ ಮತ್ತು ಬಾಣಲೆಯನ್ನು ಕೆಳಗಿಳಿಸಿ. ಹೆಚ್ಚಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಬಿಸಿಬಿಸಿಯಾದ, ರುಚಿಕರವಾದ ಶಾವಿಗೆ ಬಾತ್ ಸವಿಯಲು ಸಿದ್ದ.

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *