ಕಿರುಗವಿತೆಗಳು
– ನಿತಿನ್ ಗೌಡ.
ನನ್ನಮ್ಮ
ನಿನ್ನ ಮುನಿಸ ಹಿಂದಿನ ಗುಟ್ಟನು
ನಾ ಅರಿಯದವನೇನು?
ನಿನ್ನ ಶಿಸ್ತಿನ ಕಡಿವಾಣದ ಗುಟ್ಟನು
ನಾ ಅರಿಯದವನೇನು?
ನಿನ್ನೊಳು ಇರುವ ಅಂಜಿಕೆಯ ಹಿಂದಿನ ಗುಟ್ಟನು
ನಾ ಅರಿಯದವನೇನು?
ಎನ್ಗೆಲುವ ಬಯಸುತ ಕಾಯುವ ನಿನ್ನ ಕಾತುರವ;
ನಾ ಅರಿಯದವನೇನು?
ಇಂತಿಪ್ಪ ನಿನ್ನೆಲ್ಲ ನಡೆಗಳ ಹಿಂದಿನ,
ಅಕ್ಕರೆಯೆಂಬ ಬಾವನೆಯ ಸಕ್ಕರೆಯ ಸವಿಯ,
ನಾ ಅರಿಯದವನೇನು?
ನಾ ಏನರಿತರೇನಂತೆ ನನ್ನಮ್ಮ?
ನಿನ್ನ ಮಡಿಲಿನಿಂದ ದೊರೆವ
ಈ ಮಮತೆಯ ಉಡಿಗೆ
ಸರಿ ಸಮ ಇರುವುದೇ ಜಗದಲಿ
ಏನಾದರೂ..
*********
ಸೋನೆ ಮಳೆ
ನಿನ್ನ ಮುನಿಸೆಂಬ ಕಾರ್‍ಮೋಡ ಕರಗಲು..
ಬೆಳಗುವುದು ಮಂದಹಾಸವೆಂಬ ಕೋಲ್ಮಿಂಚು..
ಸುರಿವುದು ಒಲವಿನ ಸೋನೆ ಮಳೆಯು..
ಸೆರೆ ಹಿಡಿಯುವೆ ನಾ ಅದನು,
ಎನ್ಮನವೆಂಬ ಬೊಗಸೆಯಲಿ..
***********
ಉಸಿರ ದೀವಿಗೆ
ನಿನ್ನ ಕಂಗಳ ನೋಟದಲಿ
ಬೆಳಗುತಿದೆ ಎನ್ನುಸಿರೆಂಬ ದೀವಿಗೆ
ಆರದದು ಎಂದಿಗೂ,
ನಿನ್ನೊಲವೆಂಬ ಎಣ್ಣೆಯ ಎರಕವಿರಲು!
(ಚಿತ್ರ ಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು