ಕವಿತೆ: ಬಿಟ್ಟುಬಿಡಿ ನನ್ನ

– ವೆಂಕಟೇಶ ಚಾಗಿ

ನೂರಾರು ಕನಸುಗಳ ಬಿತ್ತಿ
ಬದುಕುವ ಆಸೆ ಎಮ್ಮರವಾಗಿಸಿ
ನೀವೇನು ಸಾದಿಸಿದಿರಿ
ಸ್ವಚ್ಚಂದವಾದ ಕನಸಲಿ ಮಿಂದು
ಆಗಸದ ಹಕ್ಕಿಯಾಗಿದ್ದ ನಾನು
ನಿಮಗೆ ಏಕೆ ಬಲಿಯಾಗಲಿ
ಒಬ್ಬಂಟಿಯಾದರೂ ಬದುಕುವೆ
ನಗುವ ಹಂಚಿ ಬಿಟ್ಟುಬಿಡಿ ನನ್ನ..

ಹೊಸ ಹೊಸ ತಂತ್ರಗಳಲ್ಲಿ ಸಿಕ್ಕು
ನಾನೇನೆಂಬುದೇ ಮರೆತಿರುವೆ
ಹಗಲು ಓಟ ಇರುಳೂ ಓಟ
ಪ್ರತಿ ಗಳಿಗೆ ಏಕೆ ಈ ಆಟ
ನನ್ನ ಮನಸ್ಸಿಗೂ ದಿಗ್ಬಂದನ
ನನ್ನ ಮಾತುಗಳಿಗೂ ಈಗ ಮೌನ
ನಾನೇನು ಸಾದಿಸಲು ಹೊರಟಿರುವೆ
ನಾನು ನಾನಾಗಬೇಕಿದೆ ಬಿಟ್ಟುಬಿಡಿ ನನ್ನ..

ಆಗಸದ ಬಣ್ಣಗಳ ಕದಿಯುವಿರಿ
ಹಸಿರು ಹೊದಿಕೆಯ ಮಡಿಚಿದಿರಿ
ಯಾವುದು ಕಸ ಯಾವುದು ಅಮ್ರುತ
ನಿಮ್ಮ ಮಾತುಗಳ ಹೇಗೆ ನಂಬಲಿ
ನೀವಾದರೂ ಸುಕವಾಗಿರುವಿರೆ
ನ್ಯಾಯ ಅನ್ಯಾಯದ ತಿಕ್ಕಾಟ
ಹಿಂಸೆ ಅಹಿಂಸೆಯ ಜೂಜಾಟ
ನಾನು ನಿಜವಾಗುವೆ ಬಿಟ್ಟುಬಿಡಿ ನನ್ನ..

ತಾರಾ ಗಣತಿ ಸಾಗುತ್ತಲೇ ಇದೆ
ತ್ರುಪ್ತಿ ಎಂಬ ಬೆಳಕು ತುಂಬಾ ದೂರ
ಇರುವ ಬಾಗ್ಯ ಗಂಟು ಕಟ್ಟಿ
ನಡೆಯುತ್ತಿರುವುದು ಎಲ್ಲಿಗೆ
ಅಂತರಂಗದ ಬಾಗಿಲು ತೆರೆದಿಲ್ಲ
ಇತಿಹಾಸದ ಅರಿವು ಮೂಡಿಲ್ಲ
ನೀವೆಂದಿಗೂ ನನಗೆ ನಾಯಕರಲ್ಲ
ನಾನು ಆಳಾಗಲಾರೆ ಬಿಟ್ಟುಬಿಡಿ ನನ್ನ..

(ಚಿತ್ರಸೆಲೆ: copilot.mocrosoft.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *