ಸಣ್ಣ ಕತೆ: ಕಾಂಚಾಣದ ಸದ್ದು
ಲೋಕಾಪುರದ ಗ್ರಾಮದಲ್ಲಿ ಮಲ್ಲಯ್ಯ ಒಳ್ಳೆಯ ದುಡಿಮೆ ಮಾಡಿ ಇತಿ ಮಿತಿಯಲ್ಲಿ ವ್ಯವಹಾರ ಮಾಡಿ ಹಣ ಉಳಿತಾಯ ಮಾಡುತ್ತಾ ಬಂದನು. ಇದರಿಂದ ಮಲ್ಲಯ್ಯ ಗ್ರಾಮದಲ್ಲಿ ಅತ್ಯಂತ ಶ್ರೀಮಂತ ವ್ಯಕ್ತಿಯಾದ. ಶ್ರೀಮಂತನಾದರೂ ದುಡಿಮೆಯೇ ದೇವರು ಎಂದು ಮೈ ಮುರಿದು ಜಮೀನಿನಲ್ಲಿ ದುಡುಮೆ ಮಾಡುತ್ತಿದ್ದ. ಒಳ್ಳೆಯ ಬಟ್ಟೆಯನ್ನು ದರಿಸದೆ ಸಾಮಾನ್ಯ ಸರಳ ಜೀವನ ಸಾಗಿಸುತ್ತಿದ್ದ. ಇವನಲ್ಲಿನ ಸಂಪತ್ತಿನ ಸಂಗ್ರಹ, ದುಡ್ಡು ನೋಡಿ ಜನರು ಕೈಮುಗಿದು, ಮೇಲೆ ಬಿದ್ದು ಮಾತನಾಡಿಸಲು ಪ್ರಾರಂಬಿಸಿದರು. ಹೋದಲ್ಲಿ ಬಂದಲ್ಲಿ ಅಲ್ಲಿ ಬನ್ನಿ, ಇಲ್ಲಿ ಬನ್ನಿ ಅಂತಾ ಬಹಳ ಗೌರವಿಸಲು ಹತ್ತಿದರು. ಗ್ರಾಮದಲ್ಲಿ ಒಳ್ಳೆಯ ಬಟ್ಟೆ ಹಾಕಿಕೊಂಡು ಹಿರಿಯತನ ಮಾಡುವವರನ್ನು, ಜ್ನಾನವಂತರನ್ನು, ಬಲಿಶ್ಟ ದೇಹ ಹೊಂದಿದವರನ್ನು ಸರಿಸಿ ಮಲ್ಲಯ್ಯನಿಗೆ ವೇದಿಕೆಯಲ್ಲಿ ಜಾಗ ನೀಡಿದರು. ಅವನ ಸುತ್ತಲೂ ಜನರು ಸುತ್ತಾಡಲು ಪ್ರಾರಂಬಿಸಿ ಹೊಗಳಿದರು. ಇದರಿಂದ ಮಲ್ಲಯ್ಯನಿಗೆ ಸೋಜಿಗವಾಯಿತು. ನನಗೆ ಇತ್ತೀಚೆಗೆ ಏಕೆ ಜನರು ಇಶ್ಟು ಗೌರವಿಸುತ್ತಿದ್ದಾರೆ ಅಂತಾ ತಿಳಿಯದಾಯಿತು.
ನನಗೆ ಜನರು ಬಹಳ ಗೌರವ ಕೊಡುತ್ತಾರೆ. ನಾನು ಇಲ್ಲಾ ಅಂದ್ರೆ ಇಲ್ಲಿ ಏನು ಇಲ್ಲಾ ಎನ್ನುವ ಅಹಂ ಮಲ್ಲಯ್ಯನಿಗೆ ಬಂದಿತು. ಸಾರ್ವಜನಿಕ ಕಾರ್ಯಕ್ರಮಗಳಿಗೆ ಮನ ಬಂದಂತೆ ಮಿತಿ ಹಣ ನೀಡ ತೊಡಗಿದ. ಒಳ್ಳೆಯ ದುಬಾರಿ ಬೆಲೆಯ ಬಟ್ಟೆ ತೊಟ್ಟಿಕೊಂಡು, ಹಿಂಬಾಲಕರನ್ನು ಕರೆದುಕೊಂಡು ಹೋಟೆಲ್, ಬಾರ್, ಪ್ರವಾಸ ಅಂತಾ ತಿರುಗಲು ಪ್ರಾರಂಬಿಸಿದ. ದಿನೇ ದಿನೇ ದುಡಿದು ಸಂಗ್ರಹಿಸಿದ ಸಂಪತ್ತು ಕಳೆದು ಹೋಗುತ್ತಿತ್ತು. ಹೀಗೆ ಕರ್ಚು ಹೆಚ್ಚಾಯಿತು. ದುಡಿಮೆ ಕಡೆ ಗಮನ ಕಡಿಮೆಯಾಯಿತು. ಇದರಿಂದ ಮನೆಯಲ್ಲಿದ್ದ, ಬ್ಯಾಂಕಿನಲ್ಲಿದ್ದ ಹಣ, ಎಪ್ ಡಿ ಕಾಲಿಯಾಯಿತು. ದೊಡ್ಡತನ ತೋರಿಸಲು ಬೇರೆ ಬೇರೆ ಕಡೆ ಸಾಲ ಮಾಡಿ ದೊಡ್ಡ ವ್ಯಕ್ತಿ ರೀತಿ ತೋರಿಸಿಕೊಂಡ. ಇದರಿಂದ ಮನೆಯಲ್ಲಿನ ಆಬರಣ, ವಾಹನ, ಹೊಲ ಗದ್ದೆ ಎಲ್ಲವನ್ನೂ ಮಾರಬೇಕಾಯಿತು. ಆದರೂ ಒಳ್ಳೆಯ ಬಟ್ಟೆ ತೊಟ್ಟುಕೊಂಡು ನಕಲಿ ಬಂಗಾರ ಹಾಕಿಕೊಂಡು ಗ್ರಾಮದಲ್ಲಿ ಸಂಚಾರ ಮಾಡಿದ. ಸಾಲಗಾರರು ಮನೆಗೆ ಬಂದು ಸಾಲ ಮುಟ್ಟಿಸುವಂತೆ ಹೇಳಿ ಹೋದರು. ಇದರಿಂದ ನನ್ನ ದೊಡ್ಡತನಕ್ಕೆ ದಕ್ಕೆ ಬರುತ್ತದೆ ಎಂದು ಅವರಿಗೆ ವಿನಂತಿ ಮಾಡಿ, ಬೇಗ ಸಾಲ ತೀರಿಸುತ್ತೇನೆ ಎಂದು ಹೇಳಿ ಕಳಿಸಿದ. ಮಲ್ಲಯ್ಯ ದೊಡ್ಡ ಸಾಲಗಾರ, ಇವನ ಹತ್ತಿರ ದುಡ್ಡು ಇಲ್ಲಾ ಅಂತಾ ಜನರಿಗೆ ತಿಳಿಯಿತು. ಇದರಿಂದ ಹಿಂದೆ ಅಡ್ಡಾಡುವ ಜನರ ಸಂಕ್ಯೆ ಕಡಿಮೆಯಾಗುತ್ತಾ ಬಂದಿತು. ಆತ್ಮೀಯವಾಗಿ ಮೇಲೆ ಬಿದ್ದು ಮಾತನಾಡುವವರು ಇವನನ್ನು ನೋಡಿದರೆ ನಮ್ಮನ್ನೆ ಸಾಲ ಕೇಳುತ್ತಾನೆ ಅಂತಾ ದೂರ ಸರಿದು ಹೊರಟರು.
ಕೆಲವು ತಿಂಗಳ ನಂತರ ಮನೆಯಲ್ಲಿ ಎಲ್ಲಾ ಸಂತೆ, ದಾನ್ಯ ಕಾಲಿಯಾದ ಮೇಲೆ ಮಲ್ಲಯ್ಯನ ಹೆಂಡತಿ ಓಣಿಯಲ್ಲಿ ಕಡ ಕೇಳಿದಳು ಯಾರು ಕೊಡಲಿಲ್ಲಾ. ತಡೆದು ತಡೆದು ಮಲ್ಲಯ್ಯನ ಹೆಂಡತಿ ಗ್ರಾಮದಲ್ಲಿ ಕೂಲಿಗೆ ಹೋದರೆ ಮರಿಯಾದೆ ಕಮ್ಮಿಯಾಗುತ್ತದೆ ಎಂದು ನಗರಕ್ಕೆ ಕೂಲಿಗೆ ಹೊರಟಳು. ಜನರು ಗೌರವದಿಂದ ಮಲ್ಲಯ್ಯ ಅನ್ನುವುದನ್ನು ಬಿಟ್ಟು ಮಲ್ಲಪ್ಪ ಅಂತ ಕರೆದರು. ಮತ್ತೆ ಕೆಲವು ದಿನದ ನಂತರ ಮಲ್ಯಾ ಅಂತಾ ಕರೆದರು. ಮತ್ತೆ ಬರುಬರುತ್ತಾ ಕಸಕ್ಕೆ ಬೆಲೆ ನೀಡುವುದಕ್ಕಿಂತ ಕಡಿಮೆ ಬೆಲೆ ನೀಡಿದರು. ಇದರಿಂದ ಮಲ್ಲಯ್ಯನಿಗೆ ಪಾಪ ಪ್ರಜ್ನೆಯಾಗಿ ವಿಚಾರಿಸತೊಡಗಿದ. ನಾನು ಅಂದು ಒಳ್ಳೆಯ ಬಟ್ಟೆ ಹಾಕಿಕೊಳ್ಳದಿದ್ದರೂ ನನ್ನನ್ನು ಗೌರವಿಸುತ್ತಿದ್ದರು. ನನ್ನ ಹಿಂದೆ ಜನ ಬರುತ್ತಿದ್ದರು. ಆದರೆ ಈಗ ಒಳ್ಳೆಯ ಬಟ್ಟೆ ದರಿಸಿದರೂ ಜನರು ನನ್ನ ಹಿಂದೆ ಬರುತ್ತಿಲ್ಲಾ. ಹೋಗಲಿ ಮಾತನಾಡಿಸಲೂ ಹಿಂಜರಿಯುತ್ತಿದ್ದಾರೆ ಅಂತಾ ಅನಿಸಿತು. ಇದಕ್ಕೆ ಕಾರಣ ಹುಡುಕುತ್ತಾ ಹೊರಟ. ಮಲ್ಲಯ್ಯ ಹಿಂದಿನ ಸಂಪತ್ತು ಸ್ತಿತಿ ಗತಿ ನೆನಪಿಸಿಕೊಂಡ. ಈಗಿನ ಸ್ತಿತಿಗತಿ ನೋಡಿಕೊಂಡ. ಮಲ್ಲಯ್ಯನಿಗೆ ನಿದಾನವಾಗಿ ತಿಳಿಯಿತು. ಈ ಗೌರವ, ಗನತೆ, ಪ್ರತಿಶ್ಟೆ ಮತ್ತು ಜನರು ಹಿಂದೆ ಬರಲು ಅಂದು ತನ್ನಲ್ಲಿದ್ದ ಹಣ ಕಾರಣ ಎನ್ನುವುದು ಅರಿವಾಯಿತು.
ಮಲ್ಲಯ್ಯ ಎಲ್ಲಾ ಬಿಟ್ಟು ಮೊದಲಿನ ತರ ಒಳ್ಳೆಯ ದುಡುಮೆ ಮಾಡಲು ಪ್ರಾರಂಬಿಸಿದ. ಬುದ್ದಿವಂತಿಕೆಯಿಂದ ಲಾಬ ಗಳಿಸಿದ. ಜಮೀನು, ಗದ್ದೆ ಮತ್ತೆ ಕರೀದಿಸಿದ. ವಾಹನ, ಐಶಾರಾಮಿ ವಸ್ತುಗಳನ್ನು ಮನೆಗೆ ತೆಗೆದುಕೊಂಡು ಬಂದ. ಒಳ್ಳೆಯ ಲಾಬದ ವ್ಯಾಪಾರ ಮಾಡಿ, ಅತ್ಯುತ್ತಮ ಬೆಳೆ ಬೆಳೆದು ಲಾಬಗಳಿಸಿ ಅಪಾರ ಹಣ ಬ್ಯಾಂಕಿನಲ್ಲಿ ಇಟ್ಟ. ಹೆಂಡತಿ ಮಕ್ಕಳಿಗೆ ಬಂಗಾರ ಬೆಳ್ಳಿ ಕೊಡಿಸಿದ. ಮಲ್ಲಯ್ಯ ಮತ್ತೆ ಆಗರ್ಬ ಸಿರಿವಂತನಾದ. ಆಗ ಜನರು ಮತ್ತೆ ಬುದ್ದಿ ಅಂತಾ ಮನೆಯ ಮುಂದೆ ಬಂದು ನಿಲ್ಲಲು ಪ್ರಾರಂಬಿಸಿದರು. ಆಗ ಮಲ್ಲಯ್ಯನಿಗೆ ಅನುಬವದ ಕಟು ಸತ್ಯ ತಿಳಿದಿತ್ತು. ನಮ್ಮ ಹತ್ತಿರ ಕಾಂಚಾಣದ ಸದ್ದು ಕೇಳಿದರೆ ಜನರು ಒಂದು ತರಾ ಇರುತ್ತಾರೆ. ಅದೆ ಕಾಂಚಾಣ ಸದ್ದು ನಿಲ್ಲಿಸಿದರೆ ಒಂದು ತರಾ ಇರುತ್ತಾರೆ ಎನ್ನುವ ಸತ್ಯ ತಿಳಿದ. ಮಲ್ಲಯ್ಯ ಶ್ರೀಮಂತನಾದರೂ ಸಾಮಾನ್ಯ ವ್ಯಕ್ತಿಯಂತೆ ಬದುಕುವ ಜೀವನ ಆಯ್ಕೆ ಮಾಡಿಕೊಂಡು ಜೀವನ ಸಾಗಿಸಿದ.
(ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು