ರನ್ನ ಕವಿಯ ಗದಾಯುದ್ದ ಪ್ರಸಂಗ ಓದು – 24ನೆಯ ಕಂತು
– ಸಿ.ಪಿ.ನಾಗರಾಜ.
*** ದುರ‍್ಯೋದನನ ದರ‍್ಮಯುದ್ದ… ಬೀಮಸೇನನ ಗೆಲುವು ***
ತೀ.ನಂ.ಶ್ರೀಕಂಠಯ್ಯ (ಸಂಪಾದಕರು): ರನ್ನ ಕವಿ ಗದಾಯುದ್ಧ ಸಂಗ್ರಹಂ (ಕಾವ್ಯ ಭಾಗ ಮತ್ತು ಟಿಪ್ಪಣಿಗಳು) ಈ ಹೊತ್ತಗೆಯ ‘ಗದಾಯುದ್ಧಂ’ ಎಂಬ ಹೆಸರಿನ 8ನೆಯ ಅದ್ಯಾಯದ 15ನೆಯ ಗದ್ಯದಿಂದ 29ನೆಯ ಗದ್ಯದ ವರೆಗಿನ ಕಾವ್ಯವನ್ನು ನಾಟಕ ರೂಪಕ್ಕೆ ಅಳವಡಿಸಿದೆ.
ಪಾತ್ರಗಳು:
ಭೀಮಸೇನ: ಕುಂತಿ ಮತ್ತು ಪಾಂಡುರಾಜನ ಅಯ್ದು ಮಂದಿ ಮಕ್ಕಳಲ್ಲಿ ಒಬ್ಬ. ವಾಯುದೇವನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿದವನು.
ದುರ್ಯೋಧನ: ಗಾಂದಾರಿ ಮತ್ತು ದ್ರುತರಾಶ್ಟ್ರ ರಾಜ ದಂಪತಿಯ ಹಿರಿಯ ಮಗ. ಹಸ್ತಿನಾವತಿಯ ರಾಜ.
ಧರ್ಮರಾಯ: ಕುಂತಿ ಮತ್ತು ಪಾಂಡುರಾಜನ ಅಯ್ದು ಮಂದಿ ಮಕ್ಕಳಲ್ಲಿ ಒಬ್ಬ. ಯಮದೇವನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿದವನು.
ಅರ್ಜುನ: ದೇವೇಂದ್ರನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿದವನು. ಪಾಂಡುರಾಜನ ಅಯ್ದು ಮಂದಿ ಮಕ್ಕಳಲ್ಲಿ ಒಬ್ಬ.
ನಕುಲ: ಅಶ್ವಿನಿ ದೇವತೆಗಳ ಅನುಗ್ರಹದಿಂದ ಮಾದ್ರಿಯ ಹೊಟ್ಟೆಯಲ್ಲಿ ಹುಟ್ಟಿದವನು. ಪಾಂಡುರಾಜನ ಅಯ್ದು ಮಂದಿ ಮಕ್ಕಳಲ್ಲಿ ಒಬ್ಬ.
ಸಹದೇವ: ಅಶ್ವಿನಿ ದೇವತೆಗಳ ಅನುಗ್ರಹದಿಂದ ಮಾದ್ರಿಯ ಹೊಟ್ಟೆಯಲ್ಲಿ ಹುಟ್ಟಿದವನು. ಪಾಂಡುರಾಜನ ಅಯ್ದು ಮಂದಿ ಮಕ್ಕಳಲ್ಲಿ ಒಬ್ಬ.
ಬಲರಾಮ: ದೇವಕಿ ಮತ್ತು ವಸುದೇವ ದಂಪತಿಯ ಮಗ. ದ್ವಾರಾವತಿ ಪಟ್ಟಣದ ಒಡೆಯ. ಕ್ರುಶ್ಣನ ಅಣ್ಣ. ದುರ‍್ಯೋದನನ ಹಿತಚಿಂತಕ.
ಕೃಷ್ಣ: ದೇವಕಿ ಮತ್ತು ವಸುದೇವ ದಂಪತಿಯ ಮಗ. ದ್ವಾರಾವತಿ ಪಟ್ಟಣದ ಒಡೆಯ. ಬಲರಾಮನ ತಮ್ಮ. ಪಾಂಡವರ ಹಿತಚಿಂತಕ.
*** ದುರ್ಯೋಧನನ ಧರ್ಮಯುದ್ಧ… ಭೀಮಸೇನನ ಗೆಲುವು ***
ಅಂತು ನೆಳಲೊಳ್ ಪೋರ್ಕುಳಿಯಾಡುವಂತೆ ಒರ್ವರ್ ಒರ್ವರಮ್ ಗೆಲಲ್ ನೆರೆಯದಿರೆ ದುರ್ಯೋಧನನ್ ಕರಮ್ ಮುಳಿದು… ಕುರುರಾಜನ್ ವಿದ್ಯಾಧರಕರಣದೆ ಅಂಬರಕ್ಕೆ ನೆಗೆದು… ಗದೆಯಮ್ ಕ್ರಮದಿಮ್ ತಿರಿಪೆ… ಧರಾಚಕ್ರಮ್ ಕೋವರ ಚಕ್ರಮ್ ತಿರಿವ ತೆರದೆ ಎನಸುಮ್ ತಿರಿದತ್ತು… ಅಂತು ಮೂದಲಿಸದೆ ಇರಿವುದು ತುಳಿಲಾಯ್ತುಮಲ್ಲೆಂದು ಮುಟ್ಟಿ ಮೂದಲಿಸಿ… .ತೆರಪಮ್ ನಿಟ್ಟಿಸಿ ಕುರುಪತಿ ಬರಸಿಡಿಲ್ ಎರಗುವವೊಲ್ ಎರಗಿ ಪೊಯ್ಯಲೊಡಮ್… ಪವನಜನುಮ್ ಏನೆಂದು ಅರಿಯದೆ ಮತಿವಿಕಳನಾಗಿ ಮೆಯ್ ಮರೆದು ಮೂರ್ಛೆಗೆ ಸಂದನ್… ..ಅಂತು ಕುಲಿಶಾಭಿಘಾತದೊಳ್ ನೀಲಾಚಲಮೆ ಕೆಡೆವಂತೆ ಕೆಡೆದು ಮೂರ್ಛಾಗತನಾಗಿರ್ದ ಭೀಮಸೇನನ ಇರವಮ್ ಕಂಡು ಗಾಂಡೀವಿ ಕೋಪಾತುರ ಆಟೋಪಮನ್ ತಾಳ್ದಿ… .
ಅರ್ಜುನ: ಎಲ್ಲಿಯ ಬಲದೇವನ್ ಮತ್ತೆಲ್ಲಿಯ ಸತ್ಯವ್ಯವಸ್ಥೆ ದುರ್ಯೋಧನನನ್ ಕೊಲ್ಲದಿರೆನ್.
(ಎಂದು ಭಾರತ ಮಲ್ಲನ್ ಗಾಂಡಿವಕೆ ಕರತಳಮಮ್ ನೇರಿದನ್.)
ನಕುಲ: ಹಲಿ ಮುಳಿದು ಏವನ್…
ಸಹದೇವ: ಕೃಷ್ಣನ್ ಮುಳಿದು ಏವನ್…
ನಕುಲ: ಧರ್ಮನಂದನನ್ ಮುಳಿದು ಏವನ್…
ನಕುಲ/ಸಹದೇವ: ಮುಳಿದರನ್ ಇಕ್ಕುವೆವು.
(ಎಂದು ನಕುಲ ಸಹದೇವರ್ಕಳ್ ಇರಿಯಲ್ಕೆ ಉಮ್ಮಳಿಸಿದರ್.)
ಧರ್ಮರಾಯ: ಅರಿಗೆ ಇಂಬಾಯ್ತು… ಮರುತ್ ಸುತಂಗೆ ಅಳಿವಾದುದು… ಅರ್ಜುನಾದಿಗಳ್ ಮೂವರುಮ್ ಮುಳಿದರ್… ಎನ್ನ ನನ್ನಿಗೆ ಈಗಳೆ ಪರಿಭವಮ್ ಆಯ್ತು.
( ಎಂದು ಧರ್ಮಜನ್ ಚಿಂತಿಸಿದನ್… ಹಲಧರನ ಅಲರ್ದ ಮೊಗಮಮ್… ಧರ್ಮತನಯನ ತಲೆಯಮ್ ಬಾಗಿರ್ದ ಮೊಗಮಮ್ ಜಲರುಹನಾಭನ್ ಕಂಡು ಎರ್ದೆ ಕಲಂಕಿ ಗಾಂಡಿವಿಯನ್ ಕಣ್ಜರ್ಬು ಜರ್ಬಿದನ್ … .ಆ ಪ್ರಸ್ತಾವದೊಳ್ ಧಾತು ನಿರ್ಜರಗಿರಿ ಕೆಡೆವಂತು ಕೆಡೆದಿರ್ದ ಪಗೆಯಮ್ ನೋಡಿ ಧರ್ಮಯುದ್ಧಮಮ್ ನೆನೆದು)
ದುರ್ಯೋಧನ: ಬಿಳ್ದನನ್ ಇರಿಯೆನ್.
(ಎಂಬ ಈ ಬಿರುಬಿಂದಮ್ ಬೀಸೆ… ಗದೆಯ ಗಾಳಿಯ ಕೋಳ್ ಮೆಯ್ ಮರೆದವನನ್ ಭೀಮನನ್ ಎಳ್ಚರಿಸಿದುದು… ಸುತರ್ಗೆ ಕೂರದರ್ ತಂದೆ ಒಳರೇ… ಅಂತು ಮೂರ್ಛೆಯಿಮ್ ಮಾರುತಿ ಎಳ್ಚತ್ತಾಗಳ್… ಪೊಡೆಯಲರಾತನ್ ರಾಗದೆ ತೊಡೆಯಮ್ ಪೊಯ್ದು ಆರ್ವ ನೆವದೆ ನೆರನ್ ಈತಂಗೆ ಈ ಎಡೆಯೆಂದು ತೋರಿ ಕುಡೆ… ಪೊಲಗಿಡದೆ ಪರಮಪಂಡಿತನ್ ಪವನಸುತನ್ ಅರಿದನ್… ನೆರನ್ ಇಂತುಟೆಂದು ತಿಳಿದು… ಆಗಳ್ ಕಯ್ಯಿಮ್ ನೆಲನಮ್ ಮಾರುದ್ದಿ… ಧರಾತಳದೊಳ್ ಸೂಸಿದ ತನ್ನ ತೀವ್ರ ಗದೆಯನ್ ಕಂಡು ಎತ್ತಿಕೊಂಡು… ಅಂಬರ ಸ್ಥಳದಿಂದಮ್ ಸಿಡಿಲ್ ಏಳ್ಗೆಯಿಂದೆ ಎರಗಿ ಪೊಯ್ವಾಗಳ್ ಗದಾದಂಡದಿಮ್ ಕುರುಕುಭೃತ್ ಚಂಡ ಊರು ದಂಡಂಗಳಮ್ ಕಲಿ ಸತ್ತಿಗನ್ ಮುಳಿದು ಇಟ್ಟನ್… ತೊಡೆಯಮ್ ಇಡೆ… ಉಡಿದು ನೆಟ್ಟನೆ ಕೆಡೆಯುತ್ತುಮ್ ನೆಲನನ್ ಆನ್ ಇದನ್ ಎಂತುಮ್ ಬಿಡೆನ್ ಎಂಬ ತೆರದೆ ಕರ್ಚಿ ಕುಲಗಿರಿ ಕೆಡೆವ ಅಂದದೆ ಆಗಳ್ ಕೌರವೇಂದ್ರನ್ ಕೆಡೆದನ್… .ಅಂತು ದಿಕ್ಕರಿಕರಾನುಕಾರಿಗಳಪ್ಪ ನಿಜಭುಜಸ್ತಂಭಂಗಳಿಮ್ ಕುರುಕುಲ ಮಹೀಶನ ಕದಳೀಸ್ತಂಭಂಗಳನ್ ಅನುಕರಿಸುವ ತೊಡೆಗಳನ್ ಅಶ್ರಮದೊಳ್ ಉಡಿದು… ಪುಡಿಯೊಳ್ ಪೊರಳ್ಚಿ… ತನ್ನ ಮುನ್ನ ನುಡಿದ ಊರುಭಂಗ ಪ್ರತಿಜ್ಞೆಯಮ್ ತೀರ್ಚಿ… ಮಕುಟಭಂಗ ಪ್ರತಿಜ್ಞೆಯಮ್ ತೀರ್ಚಲೆಂದು ಕುರುಕುಲಾಂತಕನ್ ಮಾಮಸಕಮ್ ಮಸಗಿ..)
ಭೀಮ: ಇದು ಭುವನಾಧಿಪತ್ಯ ಸವನೋದಕದಿಮ್ ಗಡ ಪೂತಮಾದುದು… ಇಂತು ಇದು ಧವಳಾತಪತ್ರದ ನೆಳಲ್ಗೆ ಗಡಮ್ ಗುರಿಯಾದುದು… ಆರ್ಗಮ್ ಇಂತು ಇದು ಗಡ ಬಾಗದು… ಈ ತಲೆಗೆ ತಕ್ಕುದನ್ ಈಗಳೆ ಮಾಳ್ಪೆನ್.
(ಎಂದು ಕೋಪದಿನ್ ಒದೆಯಲ್ಕೆ ಸಾರ್ತರೆ ಸಪತ್ನ ಹತೋರು ಕಿರೀಟಶೃಂಗಮಮ್ ಬಲದೇವಾದಿಗಳ್… )
ಬಲರಾಮ: ಆಗದು… ಆಗದು ಒದೆಯಲ್ಕೆ… ಏಕಾದಶಾಕ್ಷೋಹಿಣೀ ಬಲ ಲಕ್ಷ್ಮೀಪತಿಯನ್ ಪರಾಭವಿಸದಿರ್… ಚಿಃ … ತಕ್ಕುದಲ್ತು.
(ಎಂದು ಬಲದೇವಾದಿಗಳ್… ಮಾರ್ಕೊಳೆಯುಮ್ ಮಾಣದೆ… ಭೀಮಸೇನನ್ ಕೌರವ್ಯ ರಾಜೇಂದ್ರನಾ ರತ್ನಮಂಡಲ ರಶ್ಮಿಪ್ರಕಟ ಜ್ವಲನ್ಮಕುಟಮನ್ ವಾಮಾಂಘ್ರಿಯಿಮ್ ಒದೆದನ್…ಅಂತು ಗುಣರತ್ನಾರ್ಣವನ್ ಪ್ರತಿಜ್ಞಾಪೂರ್ಣನುಮ್ ಆಗೆ… ಸುರಾಂಗನೆಯರ್ ಸುರತರು ಕುಸುಮೋತ್ಕರಮಮ್ ಸುರಿಯೆ ಸುರದುಂದುಭಿಗಳ್ ಉಲಿಯೆ… ಸತ್ತಿಗನನ್ ಮೆಚ್ಚಿ ಪರಮ ಆಶೀರ್ವಚನ ಪರಂಪರೆಯಿಂದಮ್ ಪರಸಿದರ್ … ..ಬಳದೇವನ್ ಭೀಮನ ಭುಜ ಬಳದ ಏವಮ್ ಮನಮನ್ ಅಲೆಯೆ… ಮಾರ್ಕೊಳೆಯುಮ್ ಕುರುಪತಿಯನ್ ಪರಿಭವಿಸಿದನ್ ಎಂದು ಅಳವಲ್ಲದೆ ಮುಳಿದು ಕೆಳರ್ದು ನೋಡುತ್ತಿರ್ದನ್… ..ಅಂತು ಮುಳಿದಿರ್ದು ತನ್ನ ತಮ್ಮನನ್ ನೋಯಿಸಲಾರದೆಯುಮ್… ದುರ್ಯೋಧನಂಗೆ ಆದ ಅವಸ್ಥೆಯಮ್ ನೋಡಲಾರದೆಯುಮ್ ಬಲದೇವನ್ ದ್ವಾರಾವತಿಗೆ ಪೋದನ್.)
ಪದ ವಿಂಗಡಣೆ ಮತ್ತು ತಿರುಳು: ದುರ‍್ಯೋದನನ ದರ‍್ಮಯುದ್ದ… ಬೀಮಸೇನನ ಗೆಲುವು
ಅಂತು=ಆ ರೀತಿ; ಪೋರ್ಕುಳಿ+ಆಡುವಂತೆ; ಪೋರ್ಕುಳಿ=ಹೋರಾಟ; ನೆರೆ=ಸಾಕಾಗು/ಉಂಟಾಗು; ಕರ=ಹೆಚ್ಚಾಗಿ/ಅತಿಯಾಗಿ;
ಅಂತು ನೆಳಲೊಳ್ ಪೋರ್ಕುಳಿಯಾಡುವಂತೆ ಒರ್ವರ್ ಒರ್ವರಮ್ ಗೆಲಲ್ ನೆರೆಯದಿರೆ ದುರ್ಯೋಧನನ್ ಕರಮ್ ಮುಳಿದು=ಬೀಮ ಮತ್ತು ದುರ್‍ಯೋದನರಿಬ್ಬರೂ ಸಮಬಲರಾದ್ದರಿಂದ ನೆರಳಿನ ಸಂಗಡ ಹೋರಾಡುವಂತೆ ಒಬ್ಬರು ಮತ್ತೊಬ್ಬರನ್ನು ಗೆಲಲಾಗದೆ ಗದಾಯುದ್ದ ಮುಂದುವರಿಯುತ್ತಿರುವುದನ್ನು ಕಂಡು ದುರ್‍ಯೋದನನು ಅತಿಯಾಗಿ ಕೋಪೋದ್ರೇಕಕ್ಕೆ ಒಳಗಾಗಿ;
ವಿದ್ಯಾಧರಕರಣ=ಗದಾಯುದ್ದದ ಒಂದು ವರಸೆ. ಹೋರಾಡುವವನು ಗದೆಯನ್ನು ಚಕ್ರಾಕಾರವಾಗಿ ವೇಗವಾಗಿ ತಿರುಗಿಸುತ್ತ, ಮೇಲಕ್ಕೆ ನೆಗೆದು ಎದುರಾಳಿಯ ಮೇಲೆ ಗದೆಯಿಂದ ಆಕ್ರಮಣ ಮಾಡುವುದು; ಅಂಬರ=ಆಕಾಶ;
ಕುರುರಾಜನ್ ವಿದ್ಯಾಧರಕರಣದೆ ಅಂಬರಕ್ಕೆ ನೆಗೆದು ಗದೆಯಮ್ ಕ್ರಮದಿಮ್ ತಿರಿಪೆ=ದುರ್‍ಯೋದನನು ವಿದ್ಯಾದರಕರಣದ ವರಸೆಯಿಂದ ಮೇಲಕ್ಕೆ ನೆಗೆದು ಗದೆಯನ್ನು ಚಕ್ರಾಕಾರವಾಗಿ ತಿರುಗಿಸತೊಡಗಲು;
ಧರಾಚಕ್ರ=ಬೂಮಂಡಲ; ಕೋವ=ಕುಂಬಾರ; ಎನಸುಮ್=ಬಹಳವಾಗಿ/ಅತಿಯಾಗಿ; ತಿರಿ=ತಿರುಗು/ಚಕ್ರಾಕಾರವಾಗಿ ತಿರುಗುವುದು;
ಧರಾಚಕ್ರಮ್ ಕೋವರ ಚಕ್ರಮ್ ತಿರಿವ ತೆರದೆ ಎನಸುಮ್ ತಿರಿದತ್ತು=ಇಡೀ ಬೂಮಂಡಲವು ಕುಂಬಾರನು ಮಡಕೆಯನ್ನು ಮಾಡುವಾಗ ರೊಯ್ಯನೆ ತಿರುಗಿಸುತ್ತಿರುವ ಚಕ್ರದಂತೆ ಅತಿಯಾದ ವೇಗದಿಂದ ತಿರುಗತೊಡಗಿತು. ಅಂದರೆ ಕಣ್ಣ ಮುಂದಿನ ಎಲ್ಲವೂ ಗದೆಯ ಚಕ್ರಾಕಾರದ ಸುತ್ತುವಿಕೆಯೊಡನೆ ತಿರುಗುತ್ತಿರುವಂತೆ ಬಾಸವಾಗುತ್ತಿತ್ತು;
ಮೂದಲಿಸು=ಹೀಯಾಳಿಸು/ಮನೋಬಲವನ್ನು ಕುಗ್ಗಿಸುವಂತೆ ಮಾತನಾಡುವುದು; ಇರಿ=ಹೊಡೆ/ಹೋರಾಡು/ಕೊಲ್ಲು; ತುಳಿಲಾಯ್ತಮ್+ಅಲ್ಲ+ಎಂದು; ತುಳಿಲಾಯ್ತ=ವೀರವೃತ್ತಿ/ಪರಾಕ್ರಮದ ಗುಣ; ಮುಟ್ಟಿ ಮೂದಲಿಸಿ=ಮನಸ್ಸನ್ನು ಗಾಸಿಗೊಳಿಸುವಂತೆ ಹಂಗಿಸಿ ನುಡಿಯುವುದು;
ಅಂತು ಮೂದಲಿಸದೆ ಇರಿವುದು ತುಳಿಲಾಯ್ತಮಲ್ಲೆಂದು ಮುಟ್ಟಿ ಮೂದಲಿಸಿ=ದ್ವಂದ್ವಯುದ್ದದಲ್ಲಿ ಎದುರಾಳಿಯ ಮನೋಬಲವನ್ನು ಕುಗ್ಗಿಸುವಂತೆ ಹಂಗಿಸಿ ನುಡಿಯದೆ, ಕೇವಲ ಹೋರಾಡುವುದು ವೀರನಾದವನಿಗೆ ತಕ್ಕುದಲ್ಲವೆಂದು ಬಾವಿಸಿದ ದುರ್‍ಯೋದನನು ಬೀಮನನ್ನು ಹಂಗಿಸಿ ಅಪಮಾನಗೊಳಿಸುತ್ತ;
ತೆರಪು=ಎಡೆ/ಜಾಗ; ನಿಟ್ಟಿಸು=ಗಮನವಿಟ್ಟು ನೋಡು; ಎರಗು=ಆಕ್ರಮಣಮಾಡು/ಮೇಲೆ ಬೀಳು;
ತೆರಪಮ್ ನಿಟ್ಟಿಸಿ ಕುರುಪತಿ ಬರಸಿಡಿಲ್ ಎರಗುವವೊಲ್ ಎರಗಿ ಪೊಯ್ಯಲೊಡಮ್=ದುರ್‍ಯೋದನನು ಬೀಮನ ದೇಹದ ಮೇಲೆ ಯಾವ ಕಡೆ ಹೊಡೆಯಬೇಕೆಂಬುದನ್ನು ಸರಿಯಾಗಿ ಗಮನಿಸಿ ಬರಸಿಡಿಲು ಬಡಿಯುವಂತೆ ಬೀಮನ ಮೇಲೆ ಎರಗಿ ಗದೆಯಿಂದ ಹೊಡೆಯಲು;
ಪವನಜ=ವಾಯುಪುತ್ರನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿರುವವನು/ಬೀಮ; ಮತಿವಿಕಳನ್+ಆಗಿ; ಮತಿವಿಕಳ=ಅರಿವನ್ನು ಕಳೆದುಕೊಂಡವನು;
ಪವನಜನುಮ್ ಏನೆಂದು ಅರಿಯದೆ ಮತಿವಿಕಳನಾಗಿ ಮೆಯ್ ಮರೆದು ಮೂರ್ಛೆಗೆ ಸಂದನ್=ಬೀಮನು ಏನಾಯಿತು ಎಂಬುದನ್ನು ತಿಳಿಯದವನಾಗಿ, ಬಿದ್ದ ಬಲವಾದ ಪೆಟ್ಟಿಗೆ ಮಯ್ ಮೇಲಿನ ಪ್ರಜ್ನೆಯನ್ನು ಕಳೆದುಕೊಂಡು ಕೆಳಕ್ಕೆ ಉರುಳಿ ಬಿದ್ದನು;
ಕುಲಿಶ+ಅಭಿಘಾತದ+ಒಳ್; ಕುಲಿಶ=ಇಂದ್ರನ ವಜ್ರಾಯುದ; ಅಭಿಘಾತ=ಹೊಡೆತ/ಪೆಟ್ಟು; ಕುಲಿಶಾಭಿಘಾತ=ಬೆಟ್ಟಗಳಿಗೆ ರೆಕ್ಕೆಗಳಿದ್ದು, ಅವು ತಮ್ಮ ಇಚ್ಚೆ ಬಂದ ಕಡೆ ಹಾರಾಡುತ್ತಿದ್ದುವೆಂದೂ, ಅವುಗಳ ರೆಕ್ಕೆ ಯನ್ನು ಇಂದ್ರನು ಕುಲಿಶವೆಂಬ ಆಯುದದಿಂದ ಕತ್ತರಿಸುತ್ತಿದ್ದನೆಂಬ ಕಲ್ಪನೆಯು ಜನಮನದಲ್ಲಿದೆ; ನೀಲ+ಅಚಲ; ಅಚಲ=ಬೆಟ್ಟ; ನೀಲಾಚಲ=ನೀಲಗಿರಿ; ಆಟೋಪ=ಅಬ್ಬರ;
ಅಂತು ಕುಲಿಶಾಭಿಘಾತದೊಳ್ ನೀಲಾಚಲಮೆ ಕೆಡೆವಂತೆ ಕೆಡೆದು ಮೂರ್ಛಾಗತನಾಗಿರ್ದ ಭೀಮಸೇನನ ಇರವಮ್ ಕಂಡು ಗಾಂಡೀವಿ ಕೋಪಾತುರ ಆಟೋಪಮನ್ ತಾಳ್ದಿ=ಆ ರೀತಿ ಇಂದ್ರನ ವಜ್ರಾಯುದದ ಹೊಡೆತಕ್ಕೆ ಸಿಲುಕಿ ನೀಲಗಿರಿಯು ಕೆಳಕ್ಕೆ ಬೀಳುವಂತೆ ದುರ್‍ಯೋದನನ ಗದೆಯ ಹೊಡೆತಕ್ಕೆ ಸಿಲುಕಿ ಮಯ್ ಮರೆತು ಕೆಳಕ್ಕೆ ಬಿದ್ದಿರುವ ಬೀಮಸೇನನ ಸ್ತಿತಿಯನ್ನು ಕಂಡ ಅರ್‍ಜುನನು ಕೋಪೋದ್ರೇಕದಿಂದ ಅಬ್ಬರಿಸತೊಡಗಿದನು; ಅಣ್ಣ ಬೀಮಸೇನನು ಕೆಳಕ್ಕೆ ಬಿದ್ದಿರುವಾಗ ಯಾರನ್ನು ಲೆಕ್ಕಿಸದೆ… ಸರಿ-ತಪ್ಪುಗಳನ್ನು ಗಮನಿಸಿದೆ ದುರ್‍ಯೋದನನನ್ನು ಕೊಲ್ಲುವುದಾಗಿ ಹೇಳುತ್ತ ಅರ್‍ಜುನನು ಯುದ್ದಕ್ಕೆ ಸಿದ್ದನಾಗುತ್ತಾನೆ;
ಎಲ್ಲಿಯ ಬಲದೇವನ್=ದುರ್‍ಯೋದನನಿಗೆ ಬೆಂಬಲವಾಗಿ ನಿಂತಿರುವ ಬಲದೇವನನ್ನು ನಾನು ಲೆಕ್ಕಸುವುದಿಲ್ಲ;
ಮತ್ತೆ+ಎಲ್ಲಿಯ; ಸತ್ಯವ್ಯವಸ್ಥೆ= “ ದುರ್‍ಯೋದನನೊಡನೆ ಅಯ್ದು ಮಂದಿ ಪಾಂಡವರಲ್ಲಿ ಒಬ್ಬ ಮಾತ್ರ ಯುದ್ದವನ್ನು ಮಾಡಬೇಕು. ಆ ಯುದ್ದದಲ್ಲಿ ಗೆಲ್ಲುವ ದುರ್‍ಯೋದನನಿಗೆ ಉಳಿದ ನಾಲ್ವರು ಅಡಿಯಾಳುಗಳಾಗಿ ಸೇವೆಮಾಡಬೇಕು” ಎಂದು ಬಲರಾಮನು ಹಾಕಿದ್ದ ಕರಾರು;
ಮತ್ತೆಲ್ಲಿಯ ಸತ್ಯವ್ಯವಸ್ಥೆ=ಇನ್ನೆಲ್ಲಿಯ ಕರಾರು. ಅದನ್ನು ಈಗ ನಾನು ಕಡೆಗಣಿಸುತ್ತೇನೆ;
ಭಾರತ ಮಲ್ಲ=ಅರ್‍ಜುನ; ಗಾಂಡಿವ=ಅರ್‍ಜುನನ ಬಿಲ್ಲು. ಅಗ್ನಿದೇವನು ಅರ್‍ಜುನನಿಗೆ ಕೊಟ್ಟಿದ್ದ ಬಿಲ್ಲು; ಕರತಳ=ಅಂಗಯ್/ಹಸ್ತಿ; ನೇರು=ನೀಡು/ಚಾಚು;
ದುರ್ಯೋಧನನನ್ ಕೊಲ್ಲದಿರೆನ್ ಎಂದು ಭಾರತ ಮಲ್ಲನ್ ಗಾಂಡಿವಕೆ ಕರತಳಮಮ್ ನೇರಿದನ್=ದುರ್‍ಯೋದನನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಅರ್‍ಜುನನು ಗಾಂಡಿವದತ್ತ ಕಯ್ ಚಾಚಿದನು; ಅರ್‍ಜುನನ ರೀತಿಯಲ್ಲಿಯೇ ನಕುಲ ಸಹದೇವರು ಕೋಪೋದ್ರೇಕದಿಂದ ಕುದಿಯುತ್ತ ಬಲರಾಮನು ಒಡ್ಡಿರುವ ಕರಾರರನ್ನು ಮೀರಿ ಈಗ ನಾವು ದುರ್‍ಯೋದನನೊಡನೆ ಯುದ್ದ ಮಾಡಲು ತೊಡಗಿದಾಗ, ಯಾರು ಕೋಪಿಸಿಕೊಂಡರೂ… ಯಾರು ಅಡ್ಡಬಂದರೂ ಲೆಕ್ಕಿಸುವುದಿಲ್ಲವೆಂದು ಅಬ್ಬರಿಸತೊಡಗುತ್ತಾರೆ;
ಹಲಿ=ಬಲರಾಮ; ಮುಳಿ=ಕೆರಳು/ ಕೋಪಗೊಳ್ಳು; ಏವನ್=ಏನನ್ನು ತಾನೆ ಮಾಡಬಲ್ಲ;
ಹಲಿ ಮುಳಿದು ಏವನ್=ಬಲರಾಮನು ಕೋಪಿಸಿಕೊಂಡು ಏನನ್ನು ತಾನೆ ಮಾಡಬಲ್ಲ;
ಕೃಷ್ಣನ್ ಮುಳಿದು ಏವನ್=ಕ್ರಿಶ್ಣನು ಕೋಪಿಸಿಕೊಂಡು ಏನನ್ನು ತಾನೆ ಮಾಡಬಲ್ಲ;
ಧರ್ಮನಂದನನ್ ಮುಳಿದು ಏವನ್=ದರ್‍ಮರಾಯನು ಕೋಪಿಸಿಕೊಂಡು ಏನನ್ನು ತಾನೆ ಮಾಡಬಲ್ಲ; ಉಮ್ಮಳಿಸು=ತವಕಿಸು;
ಮುಳಿದರನ್ ಇಕ್ಕುವೆವು ಎಂದು ನಕುಲಸಹದೇವರ್ಕಳ್ ಇರಿಯಲ್ಕೆ ಉಮ್ಮಳಿಸಿದರ್=ಕೋಪಿಸಿಕೊಂಡವರನ್ನು… ತಡೆಯಬಂದವರನ್ನು ಕೊಲ್ಲುವೆವು ಎಂದು ನಕುಲ ಸಹದೇವನು ಹೋರಾಡಲು ತವಕಿಸಿದರು; ತನ್ನ ತಮ್ಮಂದಿರಾದ ಅರ್‍ಜುನ, ನಕುಲ, ಸಹದೇವರು ಕೋಪೋದ್ರೇಕದಿಂದ ದುರ್‍ಯೋದನನ ಮೇಲೆ ಬೀಳಲು ಸಿದ್ದರಾಗುತ್ತಿರುವುದನ್ನು ಕಂಡ ದರ್‍ಮರಾಯನು ಬಲರಾಮನೊಡ್ಡಿರುವ ಕರಾರಿಗೆ ಹಾನಿಯುಂಟಾಗುವುದೆಂಬ ಆತಂಕದಿಂದ;
ಅರಿ=ಹಗೆ/ಶತ್ರು; ಇಂಬು+ಆಯ್ತು; ಇಂಬು=ಒಳಿತು/ಲೇಸು;
ಅರಿಗೆ ಇಂಬಾಯ್ತು=ಹಗೆಯಾದ ದುರ್‍ಯೋದನನಿಗೆ ಒಳಿತಾಯಿತು; ಮರುತ್ ಸುತ=ವಾಯುದೇವನ ಅನುಗ್ರಹದಿಂದ ಕುಂತಿಯ ಹೊಟ್ಟೆಯಲ್ಲಿ ಹುಟ್ಟಿರುವ ಮಗ/ಬೀಮಸೇನ; ಅಳಿ=ಕೇಡು;
ಮರುತ್ ಸುತಂಗೆ ಅಳಿವಾದುದು=ಬೀಮಸೇನನಿಗೆ ಕೇಡಾಯಿತು;
ಅರ್ಜುನಾದಿಗಳ್ ಮೂವರುಮ್ ಮುಳಿದರ್=ಅರ್‍ಜುನನನ್ನು ಒಳಗೊಂಡಂತೆ ನಕುಲ ಸಹದೇವರು ಕೋಪೋದ್ರೇಕಗೊಂಡು ಯುದ್ದಕ್ಕೆ ಅಣಿಯಾದರು; ನನ್ನಿ=ಸತ್ಯ/ದಿಟ; ಪರಿಭವ=ಸೋಲು/ಹಾನಿ;
ಎನ್ನ ನನ್ನಿಗೆ ಈಗಳೆ ಪರಿಭವಮ್ ಆಯ್ತು ಎಂದು ಧರ್ಮಜನ್ ಚಿಂತಿಸಿದನ್=“ಬೀಮನೊಡನೆ ಗದಾಯುದ್ದ ಮಾಡುವ ದುರ್‍ಯೋದನನು ಗೆದ್ದರೆ, ಅವನಿಗೆ ಅಡಿಯಾಳುಗಳಾಗಿ ಪಾಂಡವರಾದ ನಾವು ಬಾಳುತ್ತೇವೆ” ಎಂದು ಬಲರಾಮನಿಗೆ ಕೊಟ್ಟಿರುವ ಮಾತಿಗೆ ತಪ್ಪಿನಡದಂತಾಗುತ್ತದೆ ಎಂದು ದರ್‍ಮರಾಯನು ಚಿಂತಿಸತೊಡಗಿದನು. ದರ್‍ಮರಾಯನ ಪಾಲಿಗೆ ಬೀಮಸೇನನ ಸಾವಿಗಿಂತಲೂ ತನ್ನ ನನ್ನಿಗೆ ಹಾನಿಯುಂಟಾಗುವ ಕಾಲ ಬಂದಿತಲ್ಲ ಎನ್ನುವ ಚಿಂತೆಯೇ ದೊಡ್ಡದಾಗಿದೆ;
ಹಲಧರ= ಬಲರಾಮ; ಅಲರ್=ಅರಳು/ಬಿರಿ;
ಹಲಧರನ ಅಲರ್ದ ಮೊಗಮನ್=ಬಲರಾಮನ ಅರಳಿದ ಮೊಗವನ್ನು; ದುರ್‍ಯೋದನನ ಗೆಲುವು ಬಲರಾಮನಿಗೆ ಅಪಾರವಾದ ಆನಂದವನ್ನುಂಟು ಮಾಡಿದೆ;
ಧರ್ಮತನಯನ ತಲೆಯಮ್ ಬಾಗಿರ್ದ ಮೊಗಮನ್=ದರ್‍ಮರಾಯನ ತಲೆಬಾಗಿದ ಮೊಗವನ್ನು; ಬೀಮಸೇನನು ಕೆಳಕ್ಕೆ ಉರುಳಿಬಿದ್ದಿರುವುದನ್ನು ಕಂಡ ದರ್‍ಮರಾಯನು ಸಂಕಟದಿಂದ ತಲೆಬಗ್ಗಿಸಿದ್ದಾನೆ;
ಜಲರುಹ=ತಾವರೆ; ಜಲರುಹನಾಭ=ಕ್ರಿಶ್ಣ; ಎರ್ದೆ ಕಲಂಕಿ=ಮನ ನೊಂದು;
ಜಲರುಹನಾಭನ್ ಕಂಡು=ಬಲರಾಮನ ಆನಂದ ಮತ್ತು ದರ್‍ಮರಾಯನ ಸಂಕಟವನ್ನು ಕಂಡು;
ಎರ್ದೆ=ಮನಸ್ಸು; ಕಲಂಕಿ=ಕದಡು;
ಎರ್ದೆ ಕಲಂಕಿ=ಮನ ನೊಂದು;
ಕಣ್+ಜರ್ಬು; ಜರ್ಬು= ಬಾವನೆಯನ್ನು ಪ್ರಕಟಿಸುವುದು/ಸನ್ನೆ ಮಾಡುವುದು/ಗದರಿಸು;
ಗಾಂಡಿವಿಯನ್ ಕಣ್ಜರ್ಬು ಜರ್ಬಿದನ್=ಅರ್‍ಜುನನನ್ನು ಕಣ್ಸನ್ನೆಯಿಂದಲೇ ಗದರಿಸಿದನು; ದುರ್‍ಯೋದನನೊಡನೆ ಯುದ್ದಕ್ಕೆ ಸನ್ನದ್ದನಾಗುತ್ತಿರುವ ಅರ್‍ಜುನನನ್ನು ಆ ರೀತಿ ಮಾಡಬೇಡವೆಂದು ಕ್ರಿಶ್ಣನು ಕಣ್ಸನ್ನೆಯಿಂದಲೇ ಎಚ್ಚರಿಸಿದನು;
ಪ್ರಸ್ತಾವ=ಸಮಯ;
ಆ ಪ್ರಸ್ತಾವದೊಳ್=ಆ ಸಮಯದಲ್ಲಿ; ಬೀಮಸೇನನು ಕೆಳಕ್ಕೆ ಬಿದ್ದಿರುವಾಗ… ಅರ್‍ಜುನ ನಕುಲ ಸಹದೇವರು ಯುದ್ದಕ್ಕೆ ಸಿದ್ದರಾಗುತ್ತಿದ್ದಾಗ… ದರ್‍ಮರಾಯನು ಸಂಕಟದಿಂದ ಆತಂಕಗೊಂಡಿದ್ದಾಗ… ಇದೆಲ್ಲವನ್ನೂ ಕಂಡು ಕ್ರಿಶ್ಣನು ಮನನೊಂದು ಅರ್‍ಜುನನನ್ನು ಯುದ್ದಕ್ಕೆ ಮುನ್ನುಗ್ಗದಂತೆ ಎಚ್ಚರಿಸುತ್ತಿದ್ದಾಗ;
ಧಾತು=ಕೆಂಪು ಬಣ್ಣದ ಕಲ್ಲು; ನಿರ್ಜರ=ಬೆಟ್ಟದಿಂದ ಕೆಳಕ್ಕೆ ಹರಿಯುವ ಪ್ರವಾಹ/ಬೆಟ್ಟದ ಹೊಳೆ; ಗಿರಿ=ಬೆಟ್ಟ; ಧಾತುನಿರ್ಜರಗಿರಿ=ಕೆಂಪು ಬಣ್ಣದ ಕಲ್ಲುಗಳಿಂದ ಮತ್ತು ದುಮ್ಮಿಕ್ಕುವ ಹೊಳೆಯಿಂದ ಕೂಡಿದ ಮೇರು ಪರ್‍ವತ; ಕೆಡೆ=ಬೀಳು/ಕುಸಿ/ಉರುಳು;
ಧಾತು ನಿರ್ಜರಗಿರಿ ಕೆಡೆವಂತು ಕೆಡೆದಿರ್ದ ಪಗೆಯಮ್ ನೋಡಿ=ಆ ಸಮಯದಲ್ಲಿ ಮೇರು ಪರ್‍ವತವು ಕುಸಿದು ಉರುಳುವಂತೆ ರಣರಂಗದಲ್ಲಿ ಬಿದ್ದಿದ್ದ ಹಗೆಯಾದ ಬೀಮಸೇನನನ್ನು ದುರ್‍ಯೋದನನು ನೋಡಿ;
ಧರ್ಮಯುದ್ಧಮಮ್ ನೆನೆದು=ದರ್‍ಮಯುದ್ದ ನಿಯಮವನ್ನು ನೆನಪಿಸಿಕೊಂಡು;
ಬಿರುಬು= ಹೆಚ್ಚಳ/ಹೆಚ್ಚುಗಾರಿಕೆ/ಹಿರಿಮೆ/ದೊಡ್ಡಸ್ತಿಕೆ;
ಬಿಳ್ದನನ್ ಇರಿಯೆನ್ ಎಂಬ ಈ ಬಿರುಬಿಂದಮ್ ಬೀಸೆ=ಬಿದ್ದವನನ್ನು ಕೊಲ್ಲುವುದಿಲ್ಲ ಎಂಬ ದೊಡ್ಡಸ್ತಿಕೆಯಿಂದ ಬೀಮಸೇನನ ಮಯ್ ಮೇಲೆ ಗದೆಯನ್ನು ಬೀಸಿ ಗಾಳಿಯನ್ನಾಡಿಸಲು;
ಕೋಳ್=ತಂಪು/ತಣ್ಣನೆಯ ಹವ;
ಗದೆಯ ಗಾಳಿಯ ಕೋಳ್ ಮೆಯ್ ಮರೆದವನನ್ ಭೀಮನನ್ ಎಳ್ಚರಿಸಿದುದು=ಗದೆಯನ್ನು ಬೀಸಿದಾಗ ಉಂಟಾದ ಗಾಳಿಯ ತಂಪು ಮೆಯ್ ಮರೆತು ನೆಲದ ಮೇಲೆ ಬಿದ್ದಿದ್ದ ಬೀಮನನ್ನು ಎಚ್ಚರಿಸಿತು;
ಸುತ=ಮಗ; ಕೂರ್=ಪ್ರೀತಿ/ಒಲವು; ಕೂರದರ್=ಪ್ರೀತಿಸದವರು; ಒಳರೇ=ಇದ್ದಾರೆಯೇ;
ಸುತರ್ಗೆ ಕೂರದರ್ ತಂದೆ ಒಳರೇ=ಮಗನನ್ನು ಪ್ರೀತಿಸದ ತಂದೆಯಿರುವನೇ/ಮಗನನ್ನು ಪ್ರೀತಿಸದ ತಂದೆಯೇ ಜಗತ್ತಿನಲ್ಲಿ ಇಲ್ಲ ಎಂಬ ಅತಿಶಯದ ನುಡಿ; ಈ ಪ್ರಸಂಗದಲ್ಲಿ ಬೀಮನು ಮಗನಾಗಿದ್ದಾನೆ; ತಂದೆ ವಾಯುದೇವನ ತಣ್ಣನೆಯ ಗಾಳಿಯ ತೀಡುವಿಕೆಯಿಂದ ಮಯ್ ಮರೆತು ಬಿದ್ದಿದ್ದ ಬೀಮನು ಚೇತರಿಸಿಕೊಳ್ಳಲು ನೆರವಾಯಿತು;
ಅಂತು ಮೂರ್ಛೆಯಿಮ್ ಮಾರುತಿ ಎಳ್ಚತ್ತಾಗಳ್=ಆ ರೀತಿ ಪ್ರಜ್ನೆತಪ್ಪಿ ಕೆಳಗುರುಳಿದ್ದ ಬೀಮನು ದುರ್‍ಯೋದನನು ಉದಾರವಾದ ನಿಲುವಿನ ಕ್ರಿಯೆಯಿಂದ ಎಚ್ಚರಗೊಳ್ಳಲು;
ಪೊಡೆ+ಅಲರ್+ಆತನ್; ಪೊಡೆ=ಹೊಟ್ಟೆ; ಅಲರ್=ಹೂವು; ಪೊಡೆಯಲರಾತನ್=ಹೊಕ್ಕುಳಲ್ಲಿ ತಾವರೆಯ ಹೂವುಳ್ಳವನು/ವಿಶ್ಣು/ಕ್ರಿಶ್ಣ; ರಾಗ=ಆಸಕ್ತಿ; ಪೊಯ್ದು=ತಟ್ಟಿ; ಆರ್=ಅಬ್ಬರಿಸು/ಗರ್‍ಜಿಸು; ನೆವ=ನೆಪ; ನೆರ=ಮರ್ಮಸ್ತಾನ/ಆಯಕಟ್ಟು/ಮುಕ್ಯವಾದ ಜಾಗ; ಎಡೆ=ಜಾಗ;
ಪೊಡೆಯಲರಾತನ್ ರಾಗದೆ ತೊಡೆಯಮ್ ಪೊಯ್ದು ಆರ್ವ ನೆವದೆ ಈತಂಗೆ ನೆರನ್ ಈ ಎಡೆಯೆಂದು ತೋರಿ ಕುಡೆ=ಕ್ರಿಶ್ಣನು ಬೀಮನನ್ನು ಹುರಿದುಂಬಿಸುವಂತೆ ತನ್ನ ತೊಡೆಯನ್ನು ತಟ್ಟಿ ಅಬ್ಬರಿಸುವ ನೆಪದಲ್ಲಿ, ಈ ದುರ್‍ಯೋದನನ ಮರ್ಮಸ್ತಾನವು ಈ ಜಾಗವೆಂದು ತೋರಿಸಿಕೊಡಲು;
ಪವನಸುತ=ಬೀಮ; ಪೊಲಗಿಡು=ದಾರಿ ತಪ್ಪು/ತಪ್ಪಾಗಿ ತಿಳಿ; ಪೊಲಗಿಡದೆ=ತಪ್ಪಾಗಿ ತಿಳಿಯದೆ/ಸರಿಯಾಗಿ ತಿಳಿದುಕೊಂಡು;
ಪರಮಪಂಡಿತನ್ ಪವನಸುತನ್ ಪೊಲಗಿಡದೆ ಅರಿದನ್=ಪರಮ ಜ್ನಾನಿಯಾದ ಬೀಮನು ಕ್ರಿಶ್ಣನ ಸನ್ನೆಯನ್ನು ಸರಿಯಾಗಿಯೇ ಅರಿತುಕೊಂಡನು;
ನೆರನ್ ಇಂತುಟೆಂದು ತಿಳಿದಾಗಳ್=ದುರ್‍ಯೋದನನನ್ನು ಕೊಲ್ಲುವುದಕ್ಕೆ ಮರ್‍ಮಸ್ತಾನ ಈ ಎಡೆಯಲ್ಲಿದೆಯೆಂದು ತಿಳಿದ ನಂತರ;
ಮಾರುದ್ದು=ಒಂದನ್ನೊಂದು ತಿಕ್ಕು;
ಕಯ್ಯಿಮ್ ನೆಲನಮ್ ಮಾರುದ್ದಿ=ಕಯ್ಯಿಂದ ನೆಲವನ್ನು ಬಡಿದು; ಎಚ್ಚರಗೊಂಡ ನಂತರ ನೆಲದ ಮೇಲೆಯೇ ಕುಳಿತಿದ್ದ ಬೀಮಸೇನನು ಆಕ್ರೋಶವನ್ನು ವ್ಯಕ್ತಪಡಿಸುವಂತೆ ನೆಲವನ್ನು ಕಯ್ಯಿಂದ ಒಮ್ಮೆ ಜೋರಾಗಿ ಬಡಿದು ಮೇಲಕ್ಕೆ ಎದ್ದು ನಿಂತು;
ಸೂಸು=ಎಸೆ/ಬಿಸುಡು;
ಧರಾತಳದೊಳ್ ಸೂಸಿದ ತನ್ನ ತೀವ್ರ ಗದೆಯನ್ ಕಂಡು ಎತ್ತಿಕೊಂಡು=ಬೂಮಿಯ ಮೇಲೆ ಬಿದ್ದಿದ್ದ ತನ್ನ ಬಯಂಕರವಾದ ಗದೆಯನ್ನು ನೋಡಿ, ಅದನ್ನು ಅಲ್ಲಿಂದ ಎತ್ತಿಕೊಂಡು;
ಸತ್ತಿಗ=ಸತ್ಯಾಶ್ರಯ ಚಕ್ರವರ್‍ತಿ/ಬೀಮ; ರನ್ನ ಕವಿಯು ತಾನು ರಚಿಸಿದ ಗದಾಯುದ್ದ ಕಾವ್ಯದಲ್ಲಿ ಬೀಮನ ಪಾತ್ರದೊಡನೆ ಸತ್ಯಾಶ್ರಯ ಚಕ್ರವರ್‍ತಿಯ ಹೆಸರನ್ನು ಸಮೀಕರಿಸಿದ್ದಾನೆ; ಅಂಬರ=ಆಕಾಶ; ಸಿಡಿಲ್ ಏಳ್ಗೆ=ಮೇಲೇರುವಿಕೆ; ಸಿಡಿಲ್ ಏಳ್ಗೆ=ಸಿಡಿಲು ಬಡಿಯುವುದು; ಕುಭೃತ್=ರಾಜ; ಚಂಡ=ಬಲಯುತವಾದ/ಶಕ್ತಿಯುತವಾದ; ಊರು=ತೊಡೆ; ಊರುದಂಡ=ದೊಡ್ಡ ತೊಡೆ;
ಕಲಿ ಸತ್ತಿಗನ್ ಅಂಬರ ಸ್ಥಳದಿಂದಮ್ ಸಿಡಿಲ್ ಏಳ್ಗೆಯಿಂದೆ ಎರಗಿ ಗದಾದಂಡದಿಮ್ ಪೊಯ್ವಾಗಳ್ ಕುರುಕುಭೃತ್ ಚಂಡ ಊರುದಂಡಂಗಳಮ್ ಮುಳಿದು ಇಟ್ಟನ್=ಬೀಮಸೇನನು ಆಕಾಶದಿಂದ ಬರಸಿಡಿಲು ಬಂದು ಬಡಿಯುವಂತೆ ದುರ್‍ಯೋದನನ ಮೇಲೆ ಎರಗಿ ಗದಾದಂಡದಿಂದ ಹೊಡೆಯುವಾಗ, ಕುರುರಾಜನ ಬಲಯುತವಾದ ತೊಡೆಗಳನ್ನು ಕೋಪೋದ್ರೇಕದಿಂದ ಹೊಡೆದನು;
ತೊಡೆಯಮ್ ಇಡೆ=ತೊಡೆಯನ್ನು ಗದೆಯಿಂದ ಹೊಡೆಯಲು;
ಉಡಿ=ಮುರಿ/ತುಂಡಾಗು; ನೆಟ್ಟನೆ= ಕೂಡಲೇ;
ಉಡಿದು ನೆಟ್ಟನೆ ಕೆಡೆಯುತ್ತುಮ್=ತೊಡೆ ಮುರಿದು ಕೂಡಲೇ ನೆಲದ ಮೇಲೆ ದೊಪ್ ಎಂದು ಬೀಳುತ್ತ;
ಕರ್ಚು=ತಬ್ಬಿ ಹಿಡಿದು/ಬಲವಾಗಿ ಹಿಡಿದು;
ನೆಲನನ್ ಇದನ್ ಆನ್ ಎಂತುಮ್ ಬಿಡೆನ್ ಎಂಬ ತೆರದೆ ಕರ್ಚಿ=ಈ ಬೂಮಂಡಲವನ್ನು… ಇದನ್ನು ನಾನು ಯಾವ ರೀತಿಯಿಂದಲೂ ಯಾರಿಗೂ ಬಿಡುವುದಿಲ್ಲ ಎಂಬ ರೀತಿಯಲ್ಲಿ ನೆಲವನ್ನು ತಬ್ಬಿ ಹಿಡಿದುಕೊಂಡು; ಕುಲಗಿರಿ=ಏಳು ಬೆಟ್ಟಗಳ ಗುಂಪು/ದೊಡ್ಡ ಬೆಟ್ಟ;
ಕುಲಗಿರಿ ಕೆಡೆವ ಅಂದದೆ ಆಗಳ್ ಕೌರವೇಂದ್ರನ್ ಕೆಡೆದನ್=ದೊಡ್ಡ ಬೆಟ್ಟ ಕುಸಿದು ಕೆಳಕ್ಕೆ ಬೀಳುವಂತೆ ಆಗ ದುರ್‍ಯೋದನನು ರಣರಂಗದಲ್ಲಿ ನೆಲದ ಮೇಲೆ ಉರುಳಿಬಿದ್ದನು;
ಅಂತು=ಆ ರೀತಿ; ದಿಕ್+ಕರಿ+ಕರ+ಅನುಕಾರಿ+ಗಳ್+ಅಪ್ಪ; ಕರಿ=ಆನೆ; ಕರ=ಸೊಂಡಿಲು; ಅನುಕಾರಿ=ಹೋಲುವಂತಹ; ನಿಜ+ಭುಜ+ಸ್ತಂಭಮ್+ಗಳ್+ಇಮ್; ನಿಜ=ತನ್ನ; ಭುಜ=ತೋಳು; ಸ್ತಂಭ=ಕಂಬ;
ಅಂತು ದಿಕ್ಕರಿಕರಾನುಕಾರಿಗಳಪ್ಪ ನಿಜಭುಜಸ್ತಂಭಂಗಳಿಮ್=ಆ ರೀತಿಯಲ್ಲಿ ಬೀಮಸೇನನು ದಿಕ್ಕನ್ನು ಹೊತ್ತಿರುವ ಆನೆಯ ಸೊಂಡಿಲನ್ನು ಹೋಲುವ ತನ್ನ ದೊಡ್ಡ ಬಾಹುಗಳಿಂದ;
ಕದಳೀಸ್ತಂಭ=ಬಾಳೆಯ ಗಿಡ; ಅನುಕರಿಸು=ಹೋಲುವ; ಮಹೀಶ=ರಾಜ; ಅಶ್ರಮ=ತೊಂದರೆಯಿಲ್ಲದೆ /ದಣಿವಿಲ್ಲದೆ/ಆಯಾಸವಿಲ್ಲದೆ;
ಕದಳೀಸ್ತಂಭಂಗಳನ್ ಅನುಕರಿಸುವ ಕುರುಕುಲ ಮಹೀಶನ ತೊಡೆಗಳನ್ ಅಶ್ರಮದೊಳ್ ಉಡಿದು=ಬಾಳೆಯ ಗಿಡವನ್ನು ಹೋಲುವ ದುರ್‍ಯೋದನನ ನುಣ್ಣನೆಯ ತೊಡೆಗಳನ್ನು ಅನಾಯಾಸವಾಗಿ ಮುರಿದು;
ಪುಡಿ=ಮಣ್ಣು;
ಪುಡಿಯೊಳ್ ಪೊರಳ್ಚಿ=ನೆಲದ ಮಣ್ಣಿನಲ್ಲಿ ಹೊರಳಾಡಿಸಿ; ಊರುಭಂಗ ಪ್ರತಿಜ್ಞೆ=ತೊಡೆಯನ್ನು ಮುರಿಯುವುದಾಗಿ ತೊಟ್ಟಿದ್ದ ಪ್ರತಿಜ್ನೆ. ಕಪಟ ದ್ಯೂತದಲ್ಲಿ ದರ್‍ಮರಾಯನನ್ನು ಸೋಲಿಸಿ, ದ್ರೌಪದಿಯನ್ನು ಒಳಗೊಂಡಂತೆ ಪಾಂಡವರ ಸಕಲ ಸಂಪತ್ತನ್ನು ವಶಪಡಿಸಿಕೊಂಡಿದ್ದ ದುರ್‍ಯೋದನನು ಆ ಸಬೆಯಲ್ಲಿ ತನ್ನ ತೊಡೆಯನ್ನೇರಿ ಕುಳಿತುಕೊಳ್ಳುವಂತೆ ದ್ರೌಪದಿಯನ್ನು ಕರೆದು ಅಪಮಾನಗೊಳಿಸಿದ್ದನು. ಆಗ ಕೋಪಾವೇಶದಿಂದ ಕೆರಳಿದ ಬೀಮಸೇನನು ದುರ್‍ಯೋದನನ ತೊಡೆಯನ್ನು ಮುರಿಯುವುದಾಗಿ ಪ್ರತಿಜ್ನೆಯನ್ನು ಕಯ್ಗೊಂಡಿದ್ದನು;
ತನ್ನ ಮುನ್ನ ನುಡಿದ ಊರುಭಂಗ ಪ್ರತಿಜ್ಞೆಯಮ್ ತೀರ್ಚಿ=ಈ ಮೊದಲು ತಾನು ನುಡಿದಿದ್ದ “ದುರ್‍ಯೋದನನ ತೊಡೆಯನ್ನು ಮುರಿಯುವ” ಪ್ರತಿಜ್ನೆಯನ್ನು ಈಡೇರಿಸಿಕೊಂಡು;
ಮಕುಟ=ಕಿರೀಟ; ಭಂಗ=ನಾಶ;
ಮಕುಟಭಂಗಪ್ರತಿಜ್ಞೆಯಮ್ ತೀರ್ಚಲೆಂದು=ಕಿರೀಟವನ್ನು ನಾಶಮಾಡುವ ಪ್ರತಿಜ್ನೆಯನ್ನು ಈಡೇರಿಸಿಕೊಳ್ಳಲೆಂದು;
ಕುರುಕುಲ+ಅಂತಕನ್; ಅಂತಕ=ಯಮ; ಕುರುಕುಲಾಂತಕ=ಕುರುಕುಲಕ್ಕೆ ಯಮನಾಗಿರುವವನು/ಕುರುಕುಲವನ್ನು ನಾಶಮಾಡುವವನು/ ಬೀಮಸೇನ; ಮಹಾ+ಮಸಕಮ್; ಮಸಕ=ಕೋಪ/ಸಿಟ್ಟು; ಮಸಗು=ಕೆರಳು;
ಕುರುಕುಲಾಂತಕನ್ ಮಾಮಸಕಮ್ ಮಸಗಿ=ಬೀಮಸೇನನು ಅತಿಯಾದ ಕೋಪೋದ್ರೇಕದಿಂದ ಕೆರಳಿ, ಕಿರೀಟವನ್ನು ಹಾನಿಗೊಳಿಸುವ ಮುನ್ನ ಈ ರೀತಿ ಅಬ್ಬರಿಸುತ್ತಾನೆ;
ಭುವನ+ಆಧಿಪತ್ಯ+ಸವನ+ಉದಕದ+ಇಮ್; ಭುವನ=ಜಗತ್ತು/ಬೂಮಿ; ಆಧಿಪತ್ಯ=ಒಡೆತನ; ಸವನ=ರಾಜನಿಗೆ ಪಟ್ಟವನ್ನು ಕಟ್ಟುವಾಗ ಮಾಡಿಸುವ ಸ್ನಾನ; ಉದಕ=ನೀರು; ಭುವನಾಧಿಪತ್ಯಸವನೋದಕ=ರಾಜ್ಯದ ಒಡೆತನದ ಪಟ್ಟಾಬಿಶೇಕವನ್ನು ಮಾಡುವಾಗ ಎರೆದ ನೀರು; ಪೂತಮ್+ಆದುದು; ಪೂತ=ಪವಿತ್ರವಾದ;
ಇದು ಭುವನಾಧಿಪತ್ಯಸವನೋದಕದಿಮ್ ಪೂತಮಾದುದು… ಗಡ=ಈ ಕಿರೀಟವು ಪಟ್ಟಾಬಿಶೇಕದ ನೀರಿನಿಂದ ಪವಿತ್ರವಾದುದು…
ಕಂಡೆಯಾ; ಧವಳ+ಆತಪತ್ರದ; ಧವಳ=ಬಿಳುಪು; ಆತಪತ್ರ=ಕೊಡೆ/ಚತ್ರಿ; ಧವಳಾತಪತ್ರ=ಬೆಳ್ಗೊಡೆ; ರಾಜಲಾಂಚನವಾಗಿ ಬಳಸುತ್ತಿದ್ದ ಬೆಳ್ಳನೆಯ ಬಣ್ಣದ ಕೊಡೆ;
ಇಂತು ಇದು ಧವಳಾತಪತ್ರದ ನೆಳಲ್ಗೆ ಗುರಿಯಾದುದು… ಗಡಮ್=ಈ ರೀತಿ ಈ ಕಿರೀಟವು ಬೆಳ್ಗೊಡೆಯ ನೆರಳಿನಲ್ಲಿ ಆಶ್ರಯವನ್ನು ಹೊಂದಿತ್ತು…
ಕಂಡೆಯಾ; ಆರ್ಗಮ್=ಯಾರಿಗೂ; ಆರ್ಗಮ್ ಇಂತು ಇದು ಬಾಗದು..ಗಡ=ಯಾರಿಗೂ ಈ ಕಿರೀಟವು ತಲೆಬಾಗದು ಕಂಡೆಯಾ; ಸಾರು=ಹತ್ತಿರಕ್ಕೆ ಬರು;
ಈ ತಲೆಗೆ ತಕ್ಕುದನ್ ಈಗಳೆ ಮಾಳ್ಪೆನ್ ಎಂದು ಕೋಪದಿನ್ ಒದೆಯಲ್ಕೆ ಸಾರ್ತರೆ=ಕಿರೀಟವನ್ನು ತೊಟ್ಟಿರುವ ಈ ತಲೆಗೆ ಸರಿಯಾದುದನ್ನು ಈಗಲೇ ಮಾಡುತ್ತೇನೆ ಎಂದು ಕೋಪದಿಂದ ಅಬ್ಬರಿಸುತ್ತ… ಕಿರೀಟವನ್ನುಳ್ಳ ದುರ್‍ಯೋದನನ ಹತ್ತಿರಕ್ಕೆ ಬೀಮಸೇನನು ಅಡಿಯಿಟ್ಟು ಬರುತ್ತಿರಲು;
ಸಪತ್ನ=ಹಗೆ/ಶತ್ರು; ಹತ+ಊರು; ಹತೋರು=ಮುರಿದ ತೊಡೆ; ಶೃಂಗ= ತುದಿ/ ಉನ್ನತಿಕೆ; ಕಿರೀಟಶೃಂಗ=ಉನ್ನತವಾದ ಕಿರೀಟವನ್ನು;
ಸಪತ್ನ ಹತೋರು ಕಿರೀಟಶೃಂಗಮಮ್= ಹಗೆಯಾದ ದುರ್‍ಯೋದನನ ಮುರಿದ ತೊಡೆಯನ್ನು ಮತ್ತು ಉನ್ನತವಾದ ಕಿರೀಟವನ್ನು; ಬಲದೇವಾದಿಗಳ್=ಬಲದೇವ ಮತ್ತು ಇತರರು;
ಆಗದು… ಆಗದು ಒದೆಯಲ್ಕೆ=ಆಗದು… ಆಗದು… ಆ ರೀತಿ ಒದೆಯಬಾರದು;
ಏಕಾದಶಾಕ್ಷೋಹಿಣೀ ಬಲ ಲಕ್ಷ್ಮೀಪತಿಯನ್ ಪರಾಭವಿಸದಿರ್=ಹನ್ನೊಂದು ಅಕ್ಷೋಹಿಣಿ ಸೇನೆಗೆ ಒಡೆಯನಾಗಿದ್ದ ಚಕ್ರವರ್‍ತಿಯನ್ನು ಅಪಮಾನಿಸಬೇಡ; ಮಾರ್ಕೊಳ್= ತಡೆಗಟ್ಟು/ ವಿರೋದಿಸು/ನಿಂದಿಸು;
ಚಿಃ ತಕ್ಕುದಲ್ತು ಎಂದು ಬಲದೇವಾದಿಗಳ್ ಮಾರ್ಕೊಳೆಯುಮ್ =ಚೀ… ಇದು ನಿನ್ನಂತಹ ವೀರನಿಗೆ ಯೋಗ್ಯವಾದ ನಡತೆಯಲ್ಲ ಎಂದು ಬಲದೇವ ಮತ್ತು ಅಲ್ಲಿದ್ದ ಕೆಲವರು ತಡೆದು ನಿಲ್ಲಿಸಲು ಪ್ರಯತ್ನಿಸಿದರೂ;
ಮಾಣದೆ=ಸುಮ್ಮನಾಗದೆ; ಜ್ವಲತ್+ಮಕುಟಮನ್; ಜ್ವಲತ್= ಹೊಳೆಯುವ/ಬೆಳಗುವ; ವಾಮ+ಅಂಘ್ರಿ+ಇಮ್; ವಾಮ=ಎಡಗಡೆಯ; ಅಂಘ್ರಿ=ಪಾದ;
ಮಾಣದೆ ಭೀಮಸೇನನ್ ಕೌರವ್ಯ ರಾಜೇಂದ್ರನಾ ರತ್ನಮಂಡಲ ರಶ್ಮಿಪ್ರಕಟ ಜ್ವಲನ್ಮಕುಟಮನ್ ವಾಮಾಂಘ್ರಿಯಿಮ್ ಒದೆದನ್=ಬೀಮಸೇನನು ಸುಮ್ಮನಾಗದೆ, ಮುಂದಕ್ಕೆ ಅಡಿಯಿಟ್ಟು ರತ್ನ ಮುತ್ತು ವಜ್ರಗಳ ಕಾಂತಿಯನ್ನು ಚೆಲ್ಲುತ್ತ ಹೊಳೆಹೊಳೆಯುತ್ತಿದ್ದ ದುರ್‍ಯೋದನನ ಕಿರೀಟವನ್ನು ತನ್ನ ಎಡಗಾಲಿನಿಂದ ಒದ್ದನು;
ಗುಣ+ರತ್ನ+ಅರ್ಣವನ್; ಗುಣರತ್ನ=ಒಳ್ಳೆಯ ನಡೆನುಡಿ; ಅರ್ಣವ=ಕಡಲು/ಸಮುದ್ರ; ಗುಣರತ್ನಾರ್ಣವ=ಒಳ್ಳೆಯ ನಡೆನುಡಿಗಳಿಂದ ಕೂಡಿರುವುದು ಎಂಬ ರೂಪಕದ ತಿರುಳು; ಸತ್ಯಾಶ್ರಯ ಚಕ್ರವರ್‍ತಿಗೆ ಇದ್ದ ಬಿರುದು;
ಅಂತು ಗುಣರತ್ನಾರ್ಣವನ್ ಪ್ರತಿಜ್ಞಾಪೂರ್ಣನುಮ್ ಆಗೆ=ಆ ರೀತಿ ಗುಣರತ್ನಾರ್‍ಣವನಾದ ಬೀಮಸೇನನು ಪ್ರತಿಜ್ನೆಯನ್ನು ಈಡೇರಿಸಿಕೊಂಡವನಾಗಿರಲು;
ಸುರ+ಅಂಗನೆ+ಅರ್; ಸುರ=ದೇವತೆ; ಅಂಗನೆ=ಹೆಣ್ಣು; ಸುರತರು=ದೇವಲೋಕದಲ್ಲಿ ಮರ/ಕಲ್ಪವ್ರುಕ್ಶ; ಕುಸುಮ+ಉತ್ಕರಮ್+ಅಮ್; ಕುಸುಮ=ಹೂವು; ಉತ್ಕರ=ರಾಶಿ; ದುಂದುಭಿ=ನಗಾರಿ/ದೊಡ್ಡ ಚರ್ಮವಾದ್ಯ; ಉಲಿ=ದನಿ ಮಾಡು; ಪರಂಪರೆ+ಇಂದಮ್; ಪರಂಪರೆ=ಸಂಪ್ರದಾಯ/ಹಿಂದಿನಿಂದಲೂ ನಡೆದು ಬಂದಿರುವ ಆಚರಣೆ; ಸತ್ತಿಗ=ಸತ್ಯಾಶ್ರಯ/ಬೀಮಸೇನ;
ಸುರಾಂಗನೆಯರ್ ಸುರತರು ಕುಸುಮೋತ್ಕರಮಮ್ ಸುರಿಯೆ ಸುರದುಂದುಭಿಗಳ್ ಉಲಿಯೆ… ಸತ್ತಿಗನನ್ ಮೆಚ್ಚಿ ಪರಮ ಆಶೀರ್ವಚನ ಪರಂಪರೆಯಿಂದಮ್ ಪರಸಿದರ್=ದೇವಲೋಕದ ಹೆಂಗಸರು ಕಲ್ಪವ್ರುಕ್ಶದ ಹೂವುಗಳನ್ನು ರಾಶಿರಾಶಿಯಾಗಿ ಸುರಿಯುತ್ತಿರಲು, ದೇವಲೋಕದ ಚರ್‍ಮವಾದ್ಯಗಳು ಮಂಗಳದ ದನಿ ಮಾಡುತ್ತಿರಲು, ಬೀಮಸೇನನನ್ನು ಮೆಚ್ಚಿಕೊಂಡು ಒಳ್ಳೆಯ ಆಶೀರ್‍ವಾದದ ನುಡಿಗಳಿಂದ ಹರಸಿದರು;
ಏವ=ಅಳಲು/ಸಂಕಟ; ಅಲೆ=ಹಿಂಸೆ/ಕಾಟ;
ಬಳದೇವನ್ ಭೀಮನ ಭುಜ ಬಳದ ಏವಮ್ ಮನಮನ್ ಅಲೆಯೆ=ಬಲರಾಮನು ಬೀಮನ ಹೊಡೆತದಿಂದ ದುರ್‍ಯೋದನನಿಗೆ ಆದ ಸೋಲು ಮತ್ತು ಒದೆತದಿಂದ ಉಂಟಾದ ಸಂಕಟವು ತನ್ನ ಮನಸ್ಸಿಗೆ ಗಾಸಿಯನ್ನುಂಟುಮಾಡಲು;
ಮಾರ್ಕೊಳ್= ತಡೆಗಟ್ಟು/ ವಿರೋದಿಸು/ಬೇಡವೆಂದು ಹೇಳು; ಕೆಳರ್=ಉದ್ವಿಗ್ನಗೊಳ್ಳು/ಉದ್ರಿಕ್ತನಾಗು; ಅಳವು+ಅಲ್ಲದೆ; ಅಳವು=ಅಳತೆ; ಅಳವಲ್ಲದೆ=ಮಿತಿಮೀರಿ/ಹೆಚ್ಚಿನ;
ಮಾರ್ಕೊಳೆಯುಮ್ ಕುರುಪತಿಯನ್ ಪರಿಭವಿಸಿದನ್ ಎಂದು ಅಳವಲ್ಲದೆ ಮುಳಿದು ಕೆಳರ್ದು ನೋಡುತ್ತಿರ್ದನ್=ನಾನು ಬೇಡವೆಂದು ಹೇಳುತ್ತಿದ್ದರೂ ಕುರುಪತಿಯನ್ನು ಅಪಮಾನಗೊಳಿಸಿದನು ಎಂದು ಬೀಮಸೇನನ ಬಗ್ಗೆ ತುಂಬಾ ಕೋಪಗೊಂಡು, ಕೋಪಾವೇಶದಿಂದ ಉದ್ವಿಗ್ನನಾಗಿ ಬೀಮಸೇನನನ್ನೇ ದುರುಗುಟ್ಟಿಕೊಂಡು ನೋಡುತ್ತಿದ್ದನು;
ಅಂತು ಮುಳಿದಿರ್ದು=ಆ ರೀತಿ ಬೀಮಸೇನನ ಬಗ್ಗೆ ತುಂಬಾ ಕೋಪಗೊಂಡು;
ತನ್ನ ತಮ್ಮನನ್ ನೋಯಿಸಲಾರದೆಯುಮ್ ದುರ್ಯೋಧನಂಗೆ ಆದ ಅವಸ್ಥೆಯಮ್ ನೋಡಲಾರದೆಯುಮ್ ಬಲದೇವನ್ ದ್ವಾರಾವತಿಗೆ ಪೋದನ್=ತನ್ನ ತಮ್ಮನಾದ ಕ್ರಿಶ್ಣನ ಮನಸ್ಸಿಗೆ ನೋವುಂಟುಮಾಡುವಂತೆ ಬೀಮಸೇನನಿಗೆ ಯಾವ ಕೇಡನ್ನೂ ಬಗೆಯದೆ, ದುರ್‍ಯೋದನನಿಗೆ ಆದ ದುರಂತವನ್ನೂ ನೋಡಲಾರದೆ ಬಲರಾಮನು ದ್ವಾರಾವತಿಯತ್ತ ನಡೆದನು;
(ಚಿತ್ರ ಸೆಲೆ: jainheritagecentres.com)


ಇತ್ತೀಚಿನ ಅನಿಸಿಕೆಗಳು