ಬ್ರೆಕ್ಟ್ ಕವನಗಳ ಓದು – 7 ನೆಯ ಕಂತು

– ಸಿ.ಪಿ.ನಾಗರಾಜ.

ಓದು ಬಲ್ಲ ದುಡಿಮೆಗಾರನೊಬ್ಬನ ಪ್ರಶ್ನೆಗಳು

(ಕನ್ನಡ ಅನುವಾದ:ಶಾ.ಬಾಲುರಾವ್)

ಸಪ್ತದ್ವಾರಗಳ ಥೀಬ್ಸ್ ನಗರವನ್ನು ಯಾರು ಕಟ್ಟಿದರು?
ಪುಸ್ತಕಗಳು ರಾಜಮಹಾರಾಜರುಗಳ ಹೆಸರನ್ನು ಹೇಳುತ್ತವೆ.
ಏನು, ರಾಜಮಹಾರಾಜರು ಕಲ್ಲು ಹೊತ್ತರೆ?

ಬೇಬಿಲಾನ್ ನಗರ ಎಷ್ಟೊಂದು ಸಲ ನೆಲಸಮವಾಯಿತು
ಅಷ್ಟು ಸಲವೂ ಅದನ್ನು ಯಾರು ಮತ್ತೆ ಮತ್ತೆ ಕಟ್ಟಿದರು?

ಸ್ವರ್ಣೋಜ್ವಲ ಲೀಮಾ ನಗರದಲ್ಲಿ ಕಲ್ಲುಕುಟಿಗರು
ವಾಸಿಸುತ್ತಿದ್ದುದಾದರೂ ಎಲ್ಲಿ?

ಚೀನಾದ ದೊಡ್ಡಗೋಡೆಯನ್ನು ಕಟ್ಟಿ ಮುಗಿಸಿದ ಸಂಜೆ
ಅದನ್ನು ಕಟ್ಟಿದವರು ಎಲ್ಲಿ ಹೋದರು?

ಮಹಾನಗರ ರೋಮ್ ವಿಜಯತೋರಣಗಳಿಂದ ತುಂಬಿದೆ
ಅವನ್ನು ಯಾರು ನಿಲ್ಲಿಸಿದರು?
ಯಾರ ಮೇಲೆ ಸೀಸರರು ವಿಜಯ ಸ್ಥಾಪಿಸಿದರು?

ಹಾಡಿ ಹೊಗಳಿಸಿಕೊಂಡ ಬೈಜ್ಹಾಂಟಿಯಮ್ ನಲ್ಲಿ
ಆವಾಸಿಗಳಿಗೆಲ್ಲ ಅರಮನೆಗಳೇ ಇದ್ದವೆ?

ದಂತಕತೆಗಳ ಅಟ್ಲಾಂಟಿಸ್ ಭೂಖಂಡದಲ್ಲಿ ಸಹ
ಅದು ಮಹಾಸಾಗರದಲ್ಲಿ ಮುಳುಗಿಹೋದ ರಾತ್ರಿ
ಮುಳುಗುತ್ತಿದ್ದವರು ಅವರವರ ಗುಲಾಮರನ್ನು ಅರಚಿ ಕರೆಯುತ್ತಿದ್ದರು.

ಯುವ ಅಲೆಕ್ಸಾಂಡರ್ ಭಾರತವನ್ನು ಗೆದ್ದ
ಏನು, ಒಂಟಿಯಾಗಿಯೆ?

ಸೀಸರ್ ಗಾಲ್ ಜನರನ್ನು ಸೋಲಿಸಿದ
ಆಗ ಅವನೊಂದಿಗೆ ಒಬ್ಬ ಅಡಿಗೆಭಟ್ಟ ಸಹ ಇರಲಿಲ್ಲವೆ?
ಸ್ಪೇನಿನ ಫಿಲಿಪ್ ತನ್ನ ನೌಕಾದಳ ಮುಳುಗಿಹೋದಾಗ ಬಿಕ್ಕಿಬಿಕ್ಕಿ ಅತ್ತ
ಏನು, ಅತ್ತವನು ಅವನೊಬ್ಬನೇಯೆ?

ಎರಡನೆ ಫ್ರೆಡರಿಕ್ ಏಳುವರ್ಷಗಳ ಯುದ್ಧದಲ್ಲಿ ಗೆದ್ದ
ಅವನಲ್ಲದೆ ಮತ್ತೆ ಯಾರು ಗೆದ್ದರು?

ಒಂದೊಂದು ಪುಟದಲ್ಲೂ ಒಂದೊಂದು ವಿಜಯವಿದೆ
ವಿಜಯಭೋಜನವನ್ನು
ಯಾರು ಅಟ್ಟಿ ಬಡಿಸಿದರು?

ಪ್ರತಿ ಹತ್ತು ವರ್ಷಕ್ಕೊಬ್ಬ ಮಹಾಪುರುಷ
ಅವನ ಖರ್ಚನ್ನು ಯಾರು ತೆತ್ತರು?

ಎಷ್ಟೊಂದು ಸಂಗತಿಗಳು
ಎಷ್ಟೊಂದು ಪ್ರಶ್ನೆಗಳು.

ಮಾನವ ಸಮುದಾಯದ ಚರಿತ್ರೆಯಲ್ಲಿ ರಾಜಮಹಾರಾಜರ ಮತ್ತು ಶೂರರಾದ ಸೇನಾನಿಗಳ ಹೆಸರು ಕಂಡುಬರುತ್ತದೆಯೇ ಹೊರತು, ಕೋಟೆಕೊತ್ತಲಗಳನ್ನು ಮತ್ತು ಅರಮನೆಗಳನ್ನು ಕಟ್ಟಿದವರ ಇಲ್ಲವೇ ಕಾಳೆಗದಲ್ಲಿ ಪಡೆದ ಜಯಕ್ಕಾಗಿ ರಾಜಮಹಾರಾಜರ ಮತ್ತು ಸೇನಾನಿಯ ಪರವಾಗಿ ಹೋರಾಡಿ ಮಡಿದ ಕೋಟಿಗಟ್ಟಲೆ ಮಂದಿ ಶ್ರಮಜೀವಿಗಳ ಹೆಸರಾಗಲಿ ಕಾಣುವುದಿಲ್ಲ. ಆದರೆ ಈ ಜಗತ್ತಿನಲ್ಲಿ ಮಾನವ ಸಮುದಾಯ ಉಳಿದು ಬೆಳೆದು ಬಾಳುತ್ತಿರುವುದು ಕೋಟಿಗಟ್ಟಲೆ ಶ್ರಮಜೀವಿಗಳ ದುಡಿಮೆಯ ಪರಿಶ್ರಮದಿಂದ ಉತ್ಪನ್ನಗೊಂಡ ದವಸದಾನ್ಯಗಳಿಂದ ಮತ್ತು ನಿರ್‍ಮಾಣಗೊಂಡ ವಸ್ತುಗಳಿಂದಲೇ ಹೊರತು, ಆಡಳಿತ ಗದ್ದುಗೆಯಲ್ಲಿ ಕುಳಿತಿರುವ ರಾಜ ಮಹಾರಾಜನ ಇಲ್ಲವೇ ವೀರಸೇನಾನಿಯೆಂದು ಹೆಸರುವಾಸಿಯಾದ ಕೆಲವೇ ವ್ಯಕ್ತಿಗಳಿಂದಲ್ಲ ಎಂಬ ಸಂಗತಿಯನ್ನು ಈ ಕವನದಲ್ಲಿ ಹೇಳಲಾಗಿದೆ.

ದುಡಿಮೆಗಾರರು=ಹೊಲಗದ್ದೆತೋಟಗಳಲ್ಲಿ ಹಗಲು ಇರುಳೆನ್ನದೆ ದುಡಿದು ಮಾನವ ಸಮುದಾಯದ ಹಸಿವಿಗೆ ಉಣಿಸನ್ನು ನೀಡುತ್ತಿರುವವರು; ದೊಡ್ಡ ದೊಡ್ಡ ಅರಮನೆಗಳನ್ನು ಒಳಗೊಂಡಂತೆ ಮಾನವರು ಬಾಳುವುದಕ್ಕೆ ಅತ್ಯಗತ್ಯವಾದ ಮನೆಮಟಗಳನ್ನು ಕಟ್ಟುವವರು; ಕೋಟೆಕೊತ್ತಲಗಳನ್ನು, ಅಣೆಕಟ್ಟುಗಳನ್ನು, ಗುಡಿಗೋಪುರಗಳನ್ನು , ಹೆದ್ದಾರಿಗಳನ್ನು ನಿರ್‍ಮಿಸುವವರು; ನಾಡನ್ನು ಮತ್ತು ಒಡೆಯನನ್ನು ಕಾಪಾಡುವುದಕ್ಕಾಗಿ ತಮ್ಮ ಜೀವವನ್ನು ಪಣವಾಗಿ ಒಡ್ಡಿ ಕಾಳೆಗದಲ್ಲಿ ಹೋರಾಡುವವರು; ಒಟ್ಟಿನಲ್ಲಿ ಮಾನವ ಸಮುದಾಯದ ನೆಮ್ಮದಿಯ ಬದುಕಿಗೆ ಬೇಕಾದ ಅನ್ನ, ಬಟ್ಟೆ, ವಸತಿಯನ್ನು ಒಳಗೊಂಡಂತೆ ಎಲ್ಲವನ್ನೂ ತಮ್ಮ ದುಡಿಮೆಯಿಂದ ಒದಗಿಸಿಕೊಡುವವರು; ಆದರೆ ನಾಡಿನ ಸಂಪತ್ತಿನಲ್ಲಿ ತಮ್ಮ ದುಡಿಮೆಗೆ ತಕ್ಕ ವರಮಾನವನ್ನು ಇಲ್ಲವೇ ಪಾಲನ್ನು ಪಡೆಯದೆ ಜೀವನದ ಉದ್ದಕ್ಕೂ ಬಡತನದಲ್ಲಿಯೇ ನರಳುತ್ತಿರುವವರು;

ಇಪ್ಪತ್ತನೆಯ ಶತಮಾನಕ್ಕೆ ಮೊದಲು ಜಗತ್ತಿನಲ್ಲಿರುವ ಕೋಟಿಗಟ್ಟಲೆ ದುಡಿಮೆಗಾರರಲ್ಲಿ ಬಹುತೇಕ ಮಂದಿ ಓದುಬರಹವನ್ನು ಕಲಿತವರಲ್ಲ. ಜಾತಿ, ದರ್‍ಮ ಮತ್ತು ಕರಿಯರು/ಬಿಳಿಯರು ಎಂಬ ವರ್‍ಣ ತಾರತಮ್ಯದಿಂದಾಗಿ ಆಸ್ತಿ, ವಿದ್ಯೆ ಮತ್ತು ಆಡಳಿತದ ಗದ್ದುಗೆಯಿಂದ ವಂಚಿತರಾಗಿ ಕಡು ಬಡತನದಲ್ಲಿಯೇ ನರಳುತ್ತಿದ್ದ ದುಡಿಮೆಗಾರರು ತಮ್ಮ ಜೀವನದ ಉದ್ದಕ್ಕೂ ದಿನದ ಎರಡು ಹೊತ್ತು ಹೊಟ್ಟೆ ತುಂಬಾ ಆಹಾರವಿಲ್ಲದೆ, ತೊಡಲು ಸರಿಯಾಗಿ ಬಟ್ಟೆಯಿಲ್ಲದೆ, ವಾಸಿಸಲು ಮನೆಯಿಲ್ಲದವರಾಗಿದ್ದರು. ಹೊಟ್ಟೆಪಾಡಿಗಾಗಿ ಸೇನೆಯನ್ನು ಸೇರಿಕೊಂಡಿದ್ದ ದುಡಿಮೆಗಾರರು ರಾಜಮಹಾರಾಜರ ನಡುವೆ ಪರಸ್ಪರ ಕಾಳೆಗ ನಡೆದಾಗ, ಹೆಚ್ಚಿನ ಸಂಕೆಯಲ್ಲಿ ಸಾವು ನೋವುಗಳಿಗೆ ಗುರಿಯಾಗುತ್ತಿದ್ದರು. ಸೋತು ಸೆರೆಯಾದವರು ಸಾಯುವ ತನಕ ಗೆದ್ದವನಿಗೆ ಗುಲಾಮರಾಗಿ ಬಿಟ್ಟಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದರು. ಜಗತ್ತಿನ ಇತಿಹಾಸದ ಉದ್ದಕ್ಕೂ ಯಶಸ್ಸಿನಿಂದ ಮೆರೆದ ದೊಡ್ಡ ದೊಡ್ಡ ಸಾಮ್ರಾಜ್ಯಗಳ ಏಳುಬೀಳಿನಲ್ಲಿ ಮತ್ತು ರಾಜಮಹಾರಾಜರ ವಿಜಯದ ಅಟ್ಟಹಾಸದಲ್ಲಿ ಲಕ್ಶಾಂತರ ಮಂದಿ ದುಡಿಮೆಗಾರರ ಜೀವಗಳು ಬಲಿಯಾಗಿವೆ. ಹಸಿವು, ಬಡತನ ಮತ್ತು ಅಪಮಾನದ ಬದುಕಿಗೆ ತಾವು ಹಿಂದಿನ ಜನ್ಮದಲ್ಲಿ ಮಾಡಿದ ಪಾಪಪುಣ್ಯಗಳೇ ಕಾರಣವೆಂಬ ಮಾನಸಿಕ ಗುಲಾಮತನಕ್ಕೆ ಒಳಗಾಗಿದ್ದ ದುಡಿಮೆಗಾರರು ಮೂಕಪ್ರಾಣಿಗಳಂತೆ ಯಾವುದನ್ನು ಪ್ರಶ್ನಿಸದೆ ಬದುಕನ್ನು ಕಳೆಯುತ್ತಿದ್ದರು;

ಓದು ಬಲ್ಲ ದುಡಿಮೆಗಾರ=ಅಕ್ಕರದ ವಿದ್ಯೆಯನ್ನು ಕಲಿತು ಓದುಬರಹದಲ್ಲಿ ಜಾಣನಾಗಿರುವ ದುಡಿಮೆಗಾರ. ಲಿಪಿರೂಪದಲ್ಲಿದ್ದ ಬರಹವನ್ನು ಓದತೊಡಗಿದ ದುಡಿಮೆಗಾರನಿಗೆ ಮಾನವ ಸಮುದಾಯದಲ್ಲಿ ದುಡಿಯುವ ಶ್ರಮಜೀವಿಗಳು ಮೇಲು ವರ್‍ಗ ಮತ್ತು ಮೇಲು ಜಾತಿ ಮತದ ಜನರಿಂದ ಹೇಗೆ ಸುಲಿಗೆಗೆ ಒಳಗಾಗಿದ್ದಾರೆ ಎಂಬ ಸಾಮಾಜಿಕ ಅರಿವು ದೊರೆಯಿತು. ಅರಿವಿನ ಜತೆಗೆ ತನ್ನ ಬಡತನದ ಬಾಳಿಗೆ ಯಾವ ಬಗೆಯ ವ್ಯವಸ್ತೆ ಮತ್ತು ಯಾರು ಕಾರಣರು ಎಂಬ ಸಾಮಾಜಿಕ ಎಚ್ಚರವೂ ಮೂಡಿಬಂದಿತು. ಆಡಳಿತದ ಗದ್ದುಗೆಯಲ್ಲಿರುವ ರಾಜಮಹಾರಾಜರು, ಜಾತಿಬಲ, ದರ್‍ಮದ ಬಲ, ತೋಳ್ಬಲ ಮತ್ತು ಹಣಬಲವುಳ್ಳ ವ್ಯಕ್ತಿಗಳು ಅದಿಕಾರವನ್ನು ಮತ್ತು ಸಂಪತ್ತನ್ನು ಉಳಿಸಿಕೊಳ್ಳುವುದಕ್ಕಾಗಿ ದುಡಿಮೆಗಾರರ ಮಯ್ ಮನದ ಮೇಲೆ ಯಾವ ಯಾವ ಬಗೆಗಳಲ್ಲಿ ಹತೋಟಿಯನ್ನಿಟ್ಟುಕೊಂಡಿದ್ದಾರೆ ಎನ್ನುವುದು ಮನದಟ್ಟಾಯಿತು. ಜಾತಿಮತದ ಮೇಲು ಕೀಳಿನ ವ್ಯವಸ್ತೆ ಮತ್ತು ಸಂಪತ್ತಿನ ವಿತರಣೆಯಲ್ಲಿರುವ ವಂಚನೆ ಹಾಗೂ ಸುಲಿಗೆಯ ನೂರಾರು ಬಗೆಗಳು ದುಡಿಮೆಗಾರರನ್ನು ಹೇಗೆ ತಲೆಯೆತ್ತಿ ಬಾಳದಂತೆ ತಡೆಗಟ್ಟಿವೆ ಎಂಬುದು ಕಂಡುಬಂದಿತು. ದುಡಿಮೆಗಾರರ ಹಸಿವು, ಬಡತನ ಮತ್ತು ಅಪಮಾನಕ್ಕೆ ದೇವರು ಇಲ್ಲವೇ ಹಣೆಬರಹ ಕಾರಣವಲ್ಲ; ಮೇಲು ಜಾತಿ , ಮೇಲು ವರ್‍ಗ ಮತ್ತು ಆಡಳಿತದಲ್ಲಿರುವವರ ಹುನ್ನಾರಗಳೇ ಕಾರಣವೆಂಬ ಸಂಗತಿಯು ಮನಕ್ಕೆ ನಾಟಿತು. ಇಂತಹ ಸಾಮಾಜಿಕ ಅರಿವು ಮತ್ತು ಎಚ್ಚರದಿಂದಾಗಿಯೇ ದುಡಿಮೆಗಾರನ ಮನದಲ್ಲಿ ಅನೇಕ ಪ್ರಶ್ನೆಗಳು ಮೂಡತೊಡಗಿದವು;

ಸಪ್ತ=ಏಳು; ದ್ವಾರ=ಬಾಗಿಲು; ಥೀಬ್ಸ್ ನಗರ=ಪ್ರಾಚೀನ ಗ್ರೀಸ್ ದೇಶದಲ್ಲಿ ತುಂಬಾ ಹೆಸರುವಾಸಿಯಾಗಿದ್ದ ದೊಡ್ಡ ನಗರ; ಪುಸ್ತಕಗಳು=ಮಾನವ ಸಮುದಾಯದ ಸಾಮಾಜಿಕ, ದಾರ್‍ಮಿಕ, ಸಂಪತ್ತಿನ ವಿತರಣೆ, ರಾಜಕೀಯ ಮತ್ತು ಸಾಂಸ್ಕ್ರುತಿಕ ಸಂಗತಿಗಳನ್ನು ವಿವರಿಸಿರುವ ಹೊತ್ತಿಗೆಗಳು;

ಏನು, ರಾಜಮಹಾರಾಜರು ಕಲ್ಲು ಹೊತ್ತರೆ?=ನಗರವನ್ನು ಕಟ್ಟಿದವರು ರಾಜಮಹಾರಾಜರಲ್ಲ. ಸಾವಿರಾರು ಮಂದಿ ದುಡಿಮೆಗಾರರ ಪರಿಶ್ರಮದಿಂದ ನಗರ ನಿರ್‍ಮಾಣವಾಯಿತು ಎಂಬ ವಾಸ್ತವದ ಅರಿವಾಯಿತು;

ನೆಲಸಮ+ಆಯಿತು; ನೆಲಸಮ=ಬೂಮಿಯ ಮಟ್ಟಕ್ಕೆ ಉರುಳುವುದು;

ಬೇಬಿಲಾನ್ ನಗರ=ಕ್ರಿಸ್ತ ಪೂರ್‍ವ 2300 ರಲ್ಲಿ ಅಕ್ಕಾಡಿಯನ್ ಸಾಮ್ರಾಜ್ಯದ ಕಾಲದಲ್ಲಿ ನಿರ್‍ಮಾಣಗೊಂಡಿದ್ದ ಒಂದು ಸಣ್ಣ ಪಟ್ಟಣ. ಅನಂತರದ ಕಾಲದಲ್ಲಿ ದೊಡ್ಡ ನಗರವಾಗಿ ಬೆಳೆಯಿತು. ಕ್ರಿಸ್ತ ಪೂರ್‍ವ 1800 ರಲ್ಲಿ ಹಮ್ಮುರಾಬಿ ಎಂಬ ದೊರೆಯು ಇದನ್ನು ತನ್ನ ರಾಜದಾನಿಯನ್ನಾಗಿ ಮಾಡಿಕೊಂಡಿದ್ದ. ಪದೇ ಪದೇ ಶತ್ರುಗಳ ಆಕ್ರಮಣಕ್ಕೆ ಒಳಗಾಗಿ ಅನೇಕ ಸಲ ನೆಲಸಮವಾಗುತ್ತಿತ್ತು. ಕಾಳೆಗದಲ್ಲಿ ಗೆದ್ದ ರಾಜನು ಮತ್ತೆ ಮತ್ತೆ ಹೊಸದಾಗಿ ಬೇಬಿಲಾನ್ ನಗರವನ್ನು ದುಡಿಮೆಗಾರರಿಂದ ಕಟ್ಟಿಸುತ್ತಿದ್ದ. ಈಗ ಈ ನಗರ ಇಲ್ಲ. ಕುಸಿದುಬಿದ್ದಿರುವ ಈ ನಗರದ ಕಟ್ಟಡಗಳ ಪಳೆಯುಳಿಕೆಗಳು ಇಂದಿನ ಇರಾಕ್ ದೇಶದ ಬಾಗ್ದಾದ್ ನಗರದ ಸಮೀಪದಲ್ಲಿ ಕಾಣಸಿಗುತ್ತವೆ;

ಸ್ವರ್ಣ+ಉಜ್ವಲ; ಸ್ವರ್ಣ=ಚಿನ್ನ; ಉಜ್ವಲ=ಕಾಂತಿ/ತೇಜಸ್ಸು; ಸ್ವರ್ಣೋಜ್ವಲ=ಚಿನ್ನದಂತೆ ಹೊಳೆಹೊಳೆಯುತ್ತಿರುವ/ಕಾಂತಿಯಿಂದ ಕಂಗೊಳಿಸುತ್ತಿರುವ; ಲೀಮಾ ನಗರ=ದಕ್ಷಿಣ ಅಮೆರಿಕಾ ಪ್ರಾಂತ್ಯದಲ್ಲಿರುವ ಪೆರು ಎಂಬ ಗಣರಾಜ್ಯದ ರಾಜದಾನಿ;

ಕಲ್ಲುಕುಟಿಗ=ಕಲ್ಲಿನ ಬಂಡೆಗಳನ್ನು ಸೀಳಿ ಕಲ್ಲು ಚಪ್ಪಡಿಗಳನ್ನು ಕಲ್ಲು ದಿಂಡುಗಳನ್ನು ಮತ್ತು ಸಣ್ಣ ಸಣ್ಣ ಜಲ್ಲಿಯನ್ನು ತಯಾರು ಮಾಡುವವನು/ಶಿಲೆಯಲ್ಲಿ ಶಿಲ್ಪವನ್ನು ಕೆತ್ತುವವನು;

ಸ್ವರ್ಣೋಜ್ವಲ ಲೀಮಾ ನಗರದಲ್ಲಿ ಕಲ್ಲುಕುಟಿಗರು ವಾಸಿಸುತ್ತಿದ್ದುದಾದರೂ ಎಲ್ಲಿ?=ಕಟ್ಟಡಗಳನ್ನು ಕಟ್ಟುವುದಕ್ಕೆ ಅಗತ್ಯವಾದ ಕಲ್ಲಿನ ಸಾಮಗ್ರಿಗಳೆಲ್ಲವನ್ನೂ ಪರಿಶ್ರಮದಿಂದ ನೀಡಿದ ಮತ್ತು ಕಲ್ಲಿನಲ್ಲಿ ಕಲೆಯನ್ನು ರೂಪಿಸಿದ ಕಲ್ಲುಕುಟಿಗರು ತಾವೇ ಕಟ್ಟಿದ ನಗರದಲ್ಲಿ ನೆಲಸಲು ತಮ್ಮದೇ ಆದ ಸ್ವಂತ ನಿವೇಶನವಿಲ್ಲದೆ ಬೀದಿಪಾಲಾಗಿದ್ದಾರೆ;

ಚೀನಾದ ದೊಡ್ಡಗೋಡೆ: “ದಿ ಗ್ರೇಟ್ ವಾಲ್ ಆಪ್ ಚೀನಾ” ಎಂದು ಹೆಸರುವಾಸಿಯಾಗಿರುವ ಈ ಗೋಡೆಯನ್ನು ಚೀನಾ ದೇಶದ ರಾಜನಾದ ಕ್ವಿನ್ ಶಿಹು ವಾಂಗ್ (ಕ್ರಿಸ್ತಪೂರ್‍ವ 220-206) ಮೊದಲು ಕಟ್ಟಿಸಿದನು. ಅನಂತರ ಮಿಂಗ್ ರಾಜವಂಶದ ವರೆಗೆ(ಕ್ರಿಸ್ತಶಕ 1368-1644) ಅನೇಕ ರಾಜರು ಈ ಗೋಡೆಯನ್ನು ವಿಸ್ತರಿಸ ತೊಡಗಿ 21,196 ಕಿಲೋ ಮೀಟರ್ ಉದ್ದದ ಗೋಡೆಯು ಅಂತಿಮವಾಗಿ ನಿರ್‍ಮಾಣಗೊಂಡಿದೆ. ಅನೇಕ ಶತಮಾನಗಳ ಕಾಲ ನಿರ್‍ಮಾಣಗೊಂಡ ಈ ಗೋಡೆಯನ್ನು ಕಟ್ಟುವಾಗ ಕೋಟಿಗಟ್ಟಲೆ ದುಡಿಮೆಗಾರರ ಪರಿಶ್ರಮದ ಜತೆಗೆ ಲಕ್ಶಾಂತರ ದುಡಿಮೆಗಾರರು ಸಾವನ್ನಪ್ಪಿದ್ದಾರೆ;

ಚೀನಾದ ದೊಡ್ಡಗೋಡೆಯನ್ನು ಕಟ್ಟಿ ಮುಗಿಸಿದ ಸಂಜೆ ಅದನ್ನು ಕಟ್ಟಿದವರು ಎಲ್ಲಿ ಹೋದರು=ಜಗತ್ತಿನ ಅಚ್ಚರಿಗಳಲ್ಲಿ ಒಂದೆಂದು ಹೆಸರುವಾಸಿಯಾದ ಚೀನಾದ ಗೋಡೆಯನ್ನು ಕಟ್ಟಿ ಮುಗಿಸಿದ ದುಡಿಮೆಗಾರರ ಬದುಕಿನಲ್ಲಿ ಮುಂದೆ ಏನಾಯಿತೆಂಬುದು ಯಾರಿಗೂ ತಿಳಿಯದು; ದೊಡ್ಡ ಗೋಡೆ ಎದ್ದು ನಿಂತಿತೇ ಹೊರತು ಅದನ್ನು ಕಟ್ಟಿದ ದುಡಿಮೆಗಾರರ ಬದುಕು ದೊಡ್ಡದಾಗಲಿಲ್ಲ;

ರೋಮ್ ನಗರ=ಇಟಲಿ ದೇಶದ ರಾಜದಾನಿ.; ವಿಜಯ=ಗೆಲುವು/ಯಶಸ್ಸು; ತೋರಣ=ಹಬ್ಬ ಇಲ್ಲವೇ ಉತ್ಸವದ ದಿನಗಳಲ್ಲಿ ಮನೆಯ ಬಾಗಿಲುಗಳಿಗೆ ಕಟ್ಟುವ ಹೂವುಗಳ ಮತ್ತು ಮಾವಿನ ತಳಿರಿನ ಮಾಲೆ; ವಿಜಯತೋರಣ=ಜಯಮಾಲೆ;

ಮಹಾನಗರ ರೋಮ್ ವಿಜಯತೋರಣಗಳಿಂದ ತುಂಬಿದೆ= ತಮ್ಮ ಸುತ್ತಮುತ್ತಣ ನಾಡುಗಳೆಲ್ಲವನ್ನೂ ಗೆದ್ದು ಕ್ರಿಸ್ತಪೂರ್‍ವ 27 ರಿಂದ ಕ್ರಿಸ್ತಶಕ 476 ರ ವರೆಗೆ ಬಹು ದೊಡ್ಡ ಸಾಮ್ರಾಜ್ಯದ ಒಡೆಯರಾಗಿ ರೋಮನ್ನರು ಜಗತ್ತಿನಲ್ಲಿಯೇ ಹೆಸರುವಾಸಿಯಾಗಿದ್ದರು; ವಿಜಯತೋರಣವನ್ನು ಕಟ್ಟಿ ನಿಲ್ಲಿಸುವಲ್ಲಿ ಲಕ್ಶಾಂತರ ಮಂದಿ ರೋಮನ್ ಪ್ರಜೆಗಳ ಹೋರಾಟ, ತ್ಯಾಗ ಮತ್ತು ಬಲಿದಾನವೇ ಕಾರಣವಾಗಿದೆ;

ಸೀಸರ್=ರೋಮ್ ಚಕ್ರವರ್‍ತಿತಿಗಳಲ್ಲಿ ಜ್ಯೂಲಿಯಸ್ ಸೀಸರ್(ಕ್ರಿಸ್ತಪೂರ್‍ವ 102-44) ಹೆಸರುವಾಸಿಯಾದವನು. ದೊಡ್ಡ ಸೇನಾಬಲದ ಬೆಂಬಲದಿಂದ ಸೀಸರನು ಮೊದಲು ಇತರ ನಾಡುಗಳ ಹಗೆಗಳನ್ನು, ಅನಂತರ ತನಗೆ ತಿರುಗಿಬಿದ್ದ ಆಂತರಿಕ ಶತ್ರುಗಳನ್ನು ಸದೆಬಡಿದನು;

ಬೈಜಾಂಟಿಯಮ್=ಒಂದು ಸಾಮ್ರಾಜ್ಯದ ಹೆಸರು. ಇದನ್ನು ಪೂರ್‍ವ ರೋಮನ್ ಸಾಮ್ರಾಜ್ಯ ಎಂಬ ಹೆಸರಿನಿಂದಲೂ ಗುರುತಿಸಿದ್ದಾರೆ. ಕ್ರಿಸ್ತಶಕ 4 ನೆಯ ಶತಮಾನದಿಂದ ಕ್ರಿಸ್ತಶಕ 15 ನೆಯ ಶತಮಾನದವರೆಗೂ ಅತ್ಯಂತ ಶಕ್ತಿಶಾಲಿಯಾದ ಸಾಮ್ರಾಜ್ಯವೆಂದು ಹೆಸರುವಾಸಿಯಾಗಿತ್ತು;

ಆವಾಸಿಗಳಿಗೆ+ಎಲ್ಲ; ಆವಾಸಿ=ವಾಸಮಾಡುವವನು;

ಹಾಡಿ ಹೊಗಳಿಸಿಕೊಂಡ ಬೈಜಾಂಟಿಯಮ್ ನಲ್ಲಿ ಆವಾಸಿಗಳಿಗೆಲ್ಲ ಅರಮನೆಗಳೇ ಇದ್ದವೆ=ಸಂಪತ್ತಿನಲ್ಲಿ, ಸೇನಾ ಬಲದಲ್ಲಿ ಮತ್ತು ಸಾಂಸ್ಕ್ರುತಿಕವಾಗಿ ಬಹು ದೊಡ್ಡ ಸಾಮ್ರಾಜ್ಯವಾಗಿದ್ದ ಬೈಜಾಂಟಿಯಮ್ ನಲ್ಲಿ ವಾಸಮಾಡುತ್ತಿದ್ದವರೆಲ್ಲರೂ ಅರಮನೆಗಳಲ್ಲಿ ನೆಲೆಸಿರಲಿಲ್ಲ. ಸಿರಿವಂತಿಕೆ ತುಂಬಿ ತುಳುಕುತ್ತಿದ್ದ ಈ ಸಾಮ್ರಾಜ್ಯದಲ್ಲಿಯೂ ದುಡಿಯುವ ಶ್ರಮಜೀವಿಗಳು ಹಸಿವು, ಬಡತನ ಮತ್ತು ಅಪಮಾನದಲ್ಲಿಯೇ ನರಳುತ್ತಿದ್ದರು. ಏಕೆಂದರೆ ನಾಡಿನ ಸಂಪತ್ತು ಕೆಲವರ ಬಳಿ ಮಾತ್ರ ಸಂಗ್ರಹಗೊಂಡಿತ್ತು;

ದಂತಕತೆ=ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಜನಸಮುದಾಯದಲ್ಲಿ ಬಾಯಿ ಮಾತಿನ ಮೂಲಕ ಹರಡಿಕೊಂಡು ಬಂದ ಕಲ್ಪಿತ ಕತೆ; ಅಟ್ಲಾಂಟಿಸ್=ಒಂದು ದ್ವೀಪದ ಹೆಸರು; ಭೂಖಂಡ=ಪ್ರಾಂತ್ಯ/ಪ್ರದೇಶ; ಸಹ=ಸಮೇತವಾಗಿ/ಜೊತೆಯಲ್ಲಿ;

ಗುಲಾಮ=ಅಡಿಯಾಳು/ದಾಸ/ಸೇವಕ; ಅಟ್ಲಾಂಟಿಸ್ ಭೂಖಂಡ=ಅಟ್ಲಾಂಟಿಕ್ ಮಹಾಸಾಗರದಲ್ಲಿ ಇದ್ದಿತೆಂದು ಕಲ್ಪಿಸಿಕೊಂಡಿದ್ದ ಒಂದು ದ್ವೀಪದ ಹೆಸರು. ಸಾಗರದ ಅಲೆಗಳ ಉಬ್ಬರವಿಳಿತಕ್ಕೆ ಗುರಿಯಾಗಿ ಈ ದ್ವೀಪವು ಮುಳುಗಿಹೋಯಿತೆಂಬ ದಂತಕತೆಯೊಂದು ಪ್ರಚಲಿತವಾಗಿದೆ.

ದಂತಕತೆಗಳ ಅಟ್ಲಾಂಟಿಸ್ ಭೂಖಂಡದಲ್ಲಿ ಸಹ ಅದು ಮಹಾಸಾಗರದಲ್ಲಿ ಮುಳುಗಿಹೋದ ರಾತ್ರಿ ಮುಳುಗುತ್ತಿದ್ದವರು ಅವರವರ ಗುಲಾಮರನ್ನು ಅರಚಿ ಕರೆಯುತ್ತಿದ್ದರು=ದ್ವೀಪವನ್ನು ಆಳುತ್ತಿದ್ದ ರಾಜ ಮತ್ತು ರಾಜ ಪರಿವಾರದವರು ಆಪತ್ತಿನ ಸನ್ನಿವೇಶದಲ್ಲಿ ಕಂಗಾಲಾಗಿ ತಮ್ಮ ಜೀವವನ್ನು ಉಳಿಸಿಕೊಳ್ಳಲೆಂದು ಸೇವಕರಲ್ಲಿ ಮೊರೆಯಿಡುತ್ತಿದ್ದರು. ಅಂದರೆ ರಾಜರು ಬದುಕಿದ್ದಾಗ ಮಾತ್ರವಲ್ಲ, ರಾಜರ ಸಾವಿನ ಸನ್ನಿವೇಶದಲ್ಲಿಯೂ ದುಡಿಯುವ ಶ್ರಮಜೀವಿಗಳಾಗಿದ್ದ ಸೇವಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ನೆರವನ್ನು ನೀಡಲೆಂದು ಮುನ್ನುಗ್ಗುತ್ತಿದ್ದರು ಎಂಬ ತಿರುಳನ್ನು ಈ ನುಡಿಗಳು ಸೂಚಿಸುತ್ತಿವೆ;

ಯುವ=ತರುಣ/ಯುವಕ; ಅಲೆಕ್ಸಾಂಡರ್( ಕ್ರಿಸ್ತ ಪೂರ್‍ವ.356-323). ‘ಅಲೆಕ್ಸಾಂಡರ್ ದಿ ಗ್ರೇಟ್’ ಎಂದು ಹೆಸರುವಾಸಿಯಾಗಿರುವ ಅಲೆಕ್ಸಾಂಡರನು ಗ್ರೀಸ್ ದೇಶದ ಒಬ್ಬ ಮಹಾನ್ ದಂಡನಾಯಕ. ಗ್ರೀಸ್ ದೇಶಕ್ಕೆ ಸೇರಿದ ಮಸೆಡೊನಿಯ ರಾಜ್ಯದ ರಾಜ. ಅಲೆಕ್ಸಾಂಡರನು ತನ್ನ ಜೀವಿತ ಕಾಲದಲ್ಲಿ ಬಹು ದೊಡ್ಡ ಸಾಮ್ರಾಜ್ಯವನ್ನು ಕಟ್ಟಿದನು. ಇವನ ದಂಡಯಾತ್ರೆಯು ಗ್ರೀಸಿನಿಂದ ಹಿಡಿದು ಇಂಡಿಯಾ ದೇಶದ ಹಿಮಾಲಯದ ತಪ್ಪಲಿನವರೆಗೂ ವಿಸ್ತರಿಸಿತ್ತು. ಇಡೀ ಜಗತ್ತನ್ನೇ ಗೆದ್ದು ಎಲ್ಲೆಲ್ಲಿಯೂ ಗ್ರೀಕರ ನಾಗರಿಕತೆಯನ್ನು ನೆಲೆಗೊಳಿಸಬೇಕೆಂಬುದು ಇವನ ದೊಡ್ಡ ಆಸೆಯಾಗಿತ್ತು. ಆದರೆ ಇಂಡಿಯಾ ದೇಶದ ಮೇಲಣ ದಂಡಯಾತ್ರೆಯ ನಂತರ ಸಿಂದೂ ನದಿಯನ್ನು ದಾಟಿ ಕ್ರಿ.ಪೂ.325 ರಲ್ಲಿ ಸೂಸ್ ಎಂಬ ಪಟ್ಟಣವನ್ನು ಸೇರಿದ. ಅಲ್ಲಿಂದ ಬ್ಯಾಬಿಲೋನ್ ನಗರಕ್ಕೆ ಹೋದಾಗ, ಜ್ವರದ ಕಾಯಿಲೆಗೆ ಗುರಿಯಾಗಿ ಕೇವಲ 32 ನೆಯ ವಯಸ್ಸಿನಲ್ಲಿಯೇ ಸಾವನ್ನಪ್ಪಿದನು. ಒಂಟಿ=ಒಬ್ಬಂಟಿಗ/ಒಬ್ಬ;

ಯುವ ಅಲೆಕ್ಸಾಂಡರ್ ಭಾರತವನ್ನು ಗೆದ್ದ. ಏನು, ಒಂಟಿಯಾಗಿಯೆ?=ಅಲೆಕ್ಸಾಂಡರನ ಗೆಲ್ಲುವಿಕೆಯಲ್ಲಿ ಸಾವಿರಾರು ಮಂದಿ ದುಡಿಮೆಗಾರರ ಹೋರಾಟ ಮತ್ತು ಬಲಿದಾನವಾಗಿದೆ;

ಗಾಲ್ ಜನರು=ಈಗಿನ ಪ್ರಾನ್ಸ್ ಮತ್ತು ಜರ್‍ಮನ್ ಪ್ರಾಂತ್ಯದಲ್ಲಿ ಕ್ರಿಸ್ತಪೂರ್‍ವ ಒಂದು ಮತ್ತು ಎರಡನೆಯ ಶತಮಾನದಲ್ಲಿ ಗಾಲ್ ಎಂಬ ಹೆಸರಿನ ಬುಡಕಟ್ಟಿನ ಜನರಿದ್ದರು. ಇವರನ್ನು ಜೂಲಿಯಸ್ ಸೀಸರನು ದೊಡ್ಡ ಸೇನೆಯೊಡನೆ ಹೋಗಿ ಸೋಲಿಸಿದ್ದನು;

ಸೀಸರ್ ಗಾಲ್ ಜನರನ್ನು ಸೋಲಿಸಿದ ಆಗ ಅವನೊಂದಿಗೆ ಒಬ್ಬ ಅಡಿಗೆಭಟ್ಟ ಸಹ ಇರಲಿಲ್ಲವೆ?=ಸೀಸರನ ವಿಜಯಯಾತ್ರೆಯು ಅವನೊಬ್ಬನಿಂದ ಆದುದಲ್ಲ. ಸೀಸರನ ಗೆಲುವಿನಲ್ಲಿ ಅಡಿಗೆಯವನು ಪಾತ್ರವು ದೊಡ್ಡದಾಗಿದೆ. ಏಕೆಂದರೆ ಸೇನೆಯ ಜತೆಯಲ್ಲಿ ಅಡಿಗೆಯವರು ಇಲ್ಲದಿದ್ದರೆ , ಕಾದಾಡುವವರು ಹಸಿವಿನ ಸಂಕಟದಲ್ಲಿ ನರಳುತ್ತ ಕಾಳೆಗವನ್ನು ಮಾಡಲಾಗುವುದಿಲ್ಲ;

ಸ್ಪೇನಿನ ಫಿಲಿಪ್=ಕ್ರಿಸ್ತಶಕ 1527 ರ ಕಾಲದಲ್ಲಿ ಸ್ಪೇನ್ ದೇಶದ ದೊರೆಯಾಗಿದ್ದವನು; ನೌಕಾದಳ=ಹಡಗಿನ ಪಡೆ;

ಸ್ಪೇನಿನ ಫಿಲಿಪ್ ತನ್ನ ನೌಕಾದಳ ಮುಳುಗಿಹೋದಾಗ ಬಿಕ್ಕಿಬಿಕ್ಕಿ ಅತ್ತ ಏನು, ಅತ್ತವನು ಅವನೊಬ್ಬನೇಯೆ?=ಪಿಲಿಪ್ ದೊರೆಯಂತೆಯೇ ಸಾವಿರಾರು ಮಂದಿ ದುಡಿಯುವ ಶ್ರಮಜೀವಿಗಳು ಸಂಕಟಕ್ಕೆ ಬಲಿಯಾದರು;

ಎರಡನೆಯ ಫ್ರೆಡರಿಕ್=ಕ್ರಿಸ್ತಶಕ 1772-1786 ರ ಕಾಲದಲ್ಲಿ ಪರ್‍ಶಿಯಾ ದೇಶದ ದೊರೆಯಾಗಿದ್ದವನು;

ಎರಡನೆ ಫ್ರೆಡರಿಕ್ ಏಳುವರ್ಷಗಳ ಯುದ್ಧದಲ್ಲಿ ಗೆದ್ದ ಅವನಲ್ಲದೆ ಮತ್ತೆ ಯಾರು ಗೆದ್ದರು=ರಾಸ್ ಬಾಕ್ ಎಂಬ ಜಾಗದಲ್ಲಿ ಪ್ರಾಂಕೊ-ಆಸ್ಟ್ರಿಯನ್ ಸೇನೆಯೊಡನೆ ನಡೆದ ಏಳು ವರುಶಗಳ ಕಾಳೆಗದಲ್ಲಿ ಗೆಲುವು ದೊರೆಯಲು ಇವನೊಬ್ಬನೇ ಕಾರಣನಲ್ಲ. ಇವನ ಪರವಾಗಿ ಲಕ್ಶಾಂತರ ಮಂದಿ ವೀರರು ಹೋರಾಡಿ ಸಾವು ನೋವುಗಳಿಗೆ ಒಳಗಾಗಿ ಜಯವನ್ನು ತಂದಿತ್ತರು;

ಪುಟ=ಪುಸ್ತಕದ ಹಾಳೆ; ಭೋಜನ=ಊಟ; ವಿಜಯಭೋಜನ=ಗೆಲುವಿನ ಆನಂದಕ್ಕಾಗಿ ಅಣಿಗೊಳಿಸಿರುವ ಊಟ; ಅಡು=ಅಡಿಗೆ ಮಾಡು; ಬಡಿಸು=ಉಣಲು ನೀಡುವುದು;

ಒಂದೊಂದು ಪುಟದಲ್ಲೂ ಒಂದೊಂದು ವಿಜಯವಿದೆ ವಿಜಯಭೋಜನವನ್ನು ಯಾರು ಅಟ್ಟಿ ಬಡಿಸಿದರು?=ಜಗತ್ತಿನ ಉದ್ದಗಲದಲ್ಲಿರುವ ನಾಡುಗಳಲ್ಲಿ ಎಲ್ಲ ಶತಮಾನಗಳಲ್ಲಿಯೂ ಒಂದಲ್ಲ ಒಂದು ಬಗೆಯ ವಿಜಯದ ಪ್ರಸಂಗಗಳಿವೆ. ಆದರೆ ಇಂತಹ ವಿಜಯಗಳ ಶ್ರೇಯಸ್ಸು ಮತ್ತು ಕೀರ್‍ತಿಯನ್ನು ನಾಡಿಗೆ ತಂದುಕೊಟ್ಟವರು ಕೋಟಿಗಟ್ಟಲೆ ಶ್ರಮಜೀವಗಳೇ ಹೊರತು ಬೆರಳೆಣಿಕೆಯ ರಾಜಮಹಾರಾಜರುಗಳಲ್ಲ ಎಂಬ ರೂಪಕದ ತಿರುಳಿನಲ್ಲಿ ಈ ನುಡಿಗಳು ಬಳಕೆಗೊಂಡಿವೆ;

ಮಹಾಪುರುಷ=ದೊಡ್ಡ ವ್ಯಕ್ತಿ; ಖರ್ಚು=ವೆಚ್ಚ/ವ್ಯಯ; ತೆರು=ಕೊಡು/ನೀಡು;

ಪ್ರತಿ ಹತ್ತು ವರ್ಷಕ್ಕೊಬ್ಬ ಮಹಾಪುರುಷ. ಅವನ ಖರ್ಚನ್ನು ಯಾರು ತೆತ್ತರು?=ಮಾನವ ಸಮುದಾಯದ ಬದುಕಿನಲ್ಲಿ ಮಹಾವ್ಯಕ್ತಿಯೆಂದು ಹೆಸರು ಪಡೆದವರು ಆಗಾಗ್ಗೆ ಕಂಡು ಬರುತ್ತಲೇ ಇರುತ್ತಾರೆ. ಆದರೆ ಆ ರೀತಿ ಒಬ್ಬ ಸಾಮಾನ್ಯ ವ್ಯಕ್ತಿಯು ಮಹಾ ವ್ಯಕ್ತಿಯೆಂದು ಹೆಸರುವಾಸಿಯಾಗಲು ಅವನ ಕಾಲದ ಕೋಟಿಗಟ್ಟಲೆ ದುಡಿಮೆಗಾರರ ಪರಿಶ್ರಮ, ತ್ಯಾಗ ಮತ್ತು ಬಲಿದಾನಗಳೇ ಕಾರಣವಾಗಿರುತ್ತವೆ ಎಂಬ ರೂಪಕದ ತಿರುಳಿನಲ್ಲಿ ಈ ನುಡಿಗಳು ಬಳಕೆಗೊಂಡಿವೆ;

ಎಷ್ಟೊಂದು=ಅನೇಕ/ಬಹಳ; ಸಂಗತಿ=ವಿಚಾರ/ಸುದ್ದಿ/ಪ್ರಸಂಗ; ಪ್ರಶ್ನೆ=ಇತರರಿಂದ ಯಾವುದಾದರೂ ವಸ್ತು/ವ್ಯಕ್ತಿ/ಪ್ರಸಂಗದ ಬಗ್ಗೆ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕಾಗಿ ಆಡುವ ಮಾತುಗಳು;

ಎಷ್ಟೊಂದು ಸಂಗತಿಗಳು… ಎಷ್ಟೊಂದು ಪ್ರಶ್ನೆಗಳು= ನಮ್ಮ ಕಣ್ಣಮುಂದಿನ ಜಗತ್ತಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಸಾಮಾಜಿಕ ಅರಿವು ಮತ್ತು ಎಚ್ಚರದಿಂದ ನೋಡಿದಾಗ, ನೂರಾರು ಬಗೆಯ ಪ್ರಶ್ನೆಗಳು ಓದು ಬಲ್ಲ ದುಡಿಮೆಗಾರನೊಬ್ಬನನ್ನು ಕಾಡುವಂತೆಯೇ ಎಲ್ಲರನ್ನು ಕಾಡತೊಡಗುತ್ತವೆ.

(ಚಿತ್ರ ಸೆಲೆ: wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks