ಹೊಸ ವರುಶ – ಇದು ಪರಿವರ‍್ತನೆಯ ಸಮಯ

–  ಪ್ರಕಾಶ್ ಮಲೆಬೆಟ್ಟು.

ನಾವು ಬದಲಾಗಬೇಕಾದರೆ ಹೊಸ ವರುಶವೇ ಬರಬೇಕೆಂದಿಲ್ಲ. ನಮ್ಮ ಮನಸ್ತಿತಿ ಬದಲಾದ ದಿನ ನಾವು ಬದಲಾಗುತ್ತೆವೆ. ನಮ್ಮ ನಿರ‍್ದಾರಗಳು ಪ್ರಾಮಾಣಿಕವಾಗಿದ್ದರೆ ಯಾವುದೇ ದಿನಾಂಕದಿಂದಲೂ ಕೂಡ ನಾವು ಬದಲಾಗಬಹುದು. ಆದರೂ ಅನೇಕರು ಬದಲಾಗಲು, ಹೊಸ ನಿರ‍್ಣಯ, ಸಂಕಲ್ಪ ಕೈಗೊಳ್ಳಲು ಹೊಸ ವರುಶವನ್ನೇ ಆಯ್ದು ಕೊಳ್ಳುತ್ತಾರೆ ಯಾಕೆ ? ಏಕೆಂದರೆ ಹೊಸ ವರ‍್ಶ ಎಂದರೆ ಕೇವಲ ಕ್ಯಾಲೆಂಡರ್ ಬದಲಾವಣೆ ಅಲ್ಲ. ಬದುಕು ನಮ್ಮೊಡನೆ ಮಾಡಿಕೊಳ್ಳುವ 365 ದಿನಗಳ ಹೊಸ ಒಪ್ಪಂದ. ಬದುಕು ನಮಗೆ ಹೇಳುತ್ತದೆ “ನೋಡೋ ಮಾರಾಯ ಆಗಿದ್ದು ಆಗಿ ಹೋಯಿತು, ಕಳೆದ 365 ದಿನಗಳು ಬಹಳ ಕೆಟ್ಟದಾಗಿತ್ತು ಸ್ವಲ್ಪ ಪರವಾಗಿಲ್ಲ, ಕೆಟ್ಟದನ್ನು, ಒಳ್ಳೆಯದನ್ನಾಗಿ ಪರಿವರ‍್ತಿಸಲು ನಿನಗೆ ಮತ್ತೆ ಹೊಚ್ಚ ಹೊಸ 365 ದಿನಗಳನ್ನು ಕೊಡುತ್ತೇನೆ”. ಇನ್ನು ಕೆಲವರಿಗೆ “ಕಳೆದ ವರ‍್ಶ ಚೆನ್ನಾಗಿತ್ತು ನಿನಗೆ. ಸರಿ ಮತ್ತೆ ಹೊಸ 365 ದಿನಗಳನ್ನು ನಿನಗೆ ಕೊಡುತೇನೆ. ಮುಂದಿನ 365 ದಿನಗಳನ್ನು ಅದ್ಬುತವನ್ನಾಗಿ ಪರಿವರ‍್ತಿಸು” ಎನ್ನುತ್ತದೆ ಬದುಕು.

2026 ರಿಂದ ನಮಗೆ ದೊರಕುವ ಮುಂದಿನ 365 ದಿನಗಳನ್ನು ಅದ್ಬುತವನ್ನಾಗಿ ನಾವು ಹೇಗೆ ಪರಿವರ‍್ತಿಸಬಹುದು? ನಮ್ಮ ಹೊಸ ನಿರ‍್ಣಯಗಳು ಹಾಗೂ ಸಂಕಲ್ಪಗಳನ್ನು ಕೆಲವೇ ದಿನಗಳಿಗೆ ಸೀಮಿತ ಮಾಡದೇ, ವರ‍್ಶದ 365 ದಿನಗಳೂ ಕೂಡ ಮುಂದುವರೆಸುವುದು ಹೇಗೆ ? ಸಲ್ಪ ಕಶ್ಟವೇ, ಆದರೆ ಅಸಾದ್ಯವಂತೂ ಅಲ್ಲ. ಪ್ರತಿಯೊಬ್ಬರ ಹೊಸ ವರುಶದ ನಿರ‍್ಣಯಗಳು ವಿಬಿನ್ನವಾಗಿರುತ್ತವೆ. ಕೆಲವರಿಗೆ ಮುಂದಿನ ವರ‍್ಶ ಕೆಲಸ ಬದಲಾವಣೆ ಮಾಡುವ ಆಲೋಚನೆ ಇರುತ್ತದೆ, ಮತ್ತೆ ಕೆಲವರಿಗೆ ಮದುವೆಯಾಗುವ ಯೋಜನೆ, ಮನೆ ಕಟ್ಟುವ ಆಲೋಚನೆ ಹೀಗೆ ಪ್ರತಿಯೊಬ್ಬರ ಯೋಜನೆ ವಿಬಿನ್ನ. ಆದರೆ ಪ್ರತಿಯೊಬ್ಬರೂ ಮಾಡಲೇಬೇಕಾದ ಅತವಾ ಮಾಡಬಹುದಾದ ಹಲವು ಕಾರ‍್ಯಗಳಿವೆ. ಆ ಕಾರ‍್ಯಗಳು ನಮ್ಮೆಲ್ಲ ಯೋಜನೆಗಳಿಗೆ ಪೂರಕವಾಗಿ, ಪ್ರೇರಕವಾಗಿ ಬದುಕು ಬದಲಾಯಿಸುವ ಕೆಲಸ ಮಾಡುತ್ತವೆ. ಹಾಗಾದರೆ ಆ ಕಾರ‍್ಯಗಳು ಯಾವುವು ?

ದೇಶ ಸುತ್ತು ಕೋಶ ಓದು

ನಮ್ಮ ಹಿರಿಯರು ಹೇಳುತಿದ್ದ ಮಾತುಗಳು ಇಂದಿಗೂ, ಮುಂದೆಂದಿಗೂ ಪ್ರಸ್ತುತ. ಪ್ರವಾಸವು ಅನುಬವಗಳನ್ನು ಹೆಚ್ಚಿಸಿದರೆ, ಓದುವುದು ಜ್ನಾನದ ಪರಿದಿಯನ್ನು ವಿಸ್ತರಿಸುತ್ತದೆ ಮತ್ತು ಇವೆರಡೂ ನಮ್ಮ ಜೀವನವನ್ನು ಸಮ್ರುದ್ದಗೊಳಿಸುತ್ತವೆ. ದಿನಕ್ಕೆ ಕೇವಲ 15 ನಿಮಿಶ ಓದಿದರೂ, ಒಂದು ವರ‍್ಶದಲ್ಲಿ 91 ಗಂಟೆಗಳ ಜ್ನಾನ ನಮಗೆ ದೊರಕುತ್ತದೆ. ನಿಜಕ್ಕೂ ಇದೊಂದು ಸಣ್ಣ ಅಬ್ಯಾಸ, ಆದರೆ ನಮ್ಮ ಈ ಸಣ್ಣ ಅಬ್ಯಾಸದಲ್ಲಿ ನಿರಂತರತೆ ಇದ್ದರೆ, ಬದುಕಿನಲ್ಲಿ ನಮಗೆ ಅರಿವಿಲ್ಲದಂತೆ ದೊಡ್ಡ ಬದಲಾವಣೆ ಕಾಣುತ್ತೇವೆ. ಹಾಗೆ ಪ್ರವಾಸ, ಸಣ್ಣ ಪುಟ್ಟ ಹತ್ತಿರದ ಊರಿನ ಪ್ರವಾಸವಾದರೂ ಸರಿ. ನಾವು ಹೋಗಬೇಕು. ಜನರ ಪರಿಚಯ, ಸಂಸ್ಕ್ರತಿಯ ಅರಿವು, ನಮ್ಮಲ್ಲಿ ಕೂಡ ಬದಲಾವಣೆ ತರುತ್ತದೆ. ನಾವು ಎಶ್ಟು ಓದುತ್ತೇವೆಯೋ, ಎಶ್ಟು ಸುತ್ತಾಡುತ್ತೇವೆಯೋ ಅಶ್ಟು ನಮ್ಮ ಅರಿವು ಹೆಚ್ಚುತ್ತದೆ. ಸರಿ ತಪ್ಪಿನ ವ್ಯತ್ಯಾಸ ಅರಿವಾಗಲು ಇದು ತುಂಬಾ ಮುಕ್ಯ. ಹೊಸ ವರ‍್ಶದಲ್ಲಿ ಈ ಒಂದು ಅಬ್ಯಾಸವನ್ನು ನಾವು ಬೆಳೆಸಿಕೊಳ್ಳಬೇಕು.

ಇಕಿಗೈ
ಇಕಿಗೈ ಜಪಾನ್ ದೇಶದ ಒಂದು ಪರಿಕಲ್ಪನೆ. ಇದರ ಅರ‍್ತ ನಾವು “ಬೆಳಿಗ್ಗೆ ಎಚ್ಚರಗೊಳ್ಳಲು ಕಾರಣ” ಏನು ಎಂದು. ಅಂದರೆ ಇದು ದೊಡ್ಡ ದೊಡ್ಡ ಗುರಿಯ ಬಗ್ಗೆ ಮಾತನಾಡುವುದಲ್ಲ. ಇದು ನಮ್ಮ ದೈನಂದಿನ ಜೀವನದಲ್ಲಿ ಸಂತೋಶ, ಉದ್ದೇಶ ಮತ್ತು ಅರ‍್ತವನ್ನು ಕಂಡುಕೊಳ್ಳುವುದರ ಬಗ್ಗೆ. ಇಕಿಗೈ ಕೆಳಗಿನ 4 ವಿಶಯಗಳ ಸುತ್ತಾ ಸುತ್ತುತ್ತದೆ.

  1. ನಾವು ಯಾವುದನ್ನೂ ಪ್ರೀತಿಸುತ್ತೆವೆ ?
  2. ನಾವು ಯಾವುದರಲ್ಲಿ ನಿಪುಣರಾಗಿದ್ದೀವೆ ?
  3. ಜಗತ್ತಿಗೆ ನಮ್ಮಿಂದ ಏನು ಬೇಕು ?
  4. ನಮಗೇನು ಜಗತ್ತಿನಿಂದ ದೊರಕುತ್ತದೆ ?

ಹೊಸವ ವರುಶದಲ್ಲಿ ನಾವು ನಮ್ಮ ಇಕಿಗೈ ಯನ್ನು ಕಂಡುಕೊಳ್ಳುವ ಪ್ರಯತ್ನ ಮಾಡೋಣ. ದಿನ ಬೆಳಿಗ್ಗೆ ಎದ್ದು ನಮ್ಮ ಪ್ರೀತಿಯ ಕೆಲಸ ಮಾಡಲು ನಮ್ಮ ಮನ ಹಾತೊರೆಯಬೇಕು. ಗಿಡಗಳಿಗೆ ನೀರುಣಿಸುವ ಕೆಲಸದಿಂದ ಹಿಡಿದು, ನಮ್ಮ ವ್ರುತ್ತಿ ಜೀವನದ ತನಕ ನಾವು ಪ್ರೀತಿಸುವ ಕೆಲಸಗಳನ್ನು ಮಾಡಬೇಕು. ನಮ್ಮ ಸಾಮರ‍್ತ್ಯವನ್ನು ಅರಿಯುವ ಪ್ರಯತ್ನ ಹೊಸ ವರುಶದಲ್ಲಿ ನಮ್ಮಿಂದ ನಡೆಯಲಿ. ನಮ್ಮೊಳಗಿನ ಪ್ರತಿಬೆ ಹೊರ ಬರಲಿ. ಜಗತ್ತಿಗೆ ನಮ್ಮಿಂದಾದ ಸಹಾಯವನ್ನು ನಾವು ಮಾಡಬೇಕು, ಬದಲಿಗೆ ಜಗತ್ತಿನಿಂದ ನಮಗೆ ದೊರಕುವ ಮೆಚ್ಚುಗೆ, ಸಮಾದಾನಗಳಿಂದ ನಾವು ದನ್ಯರಾಗಬೇಕು. ಇಕಿಗೈ ಅಂದ್ರೆ ದೊಡ್ಡ ದೊಡ್ಡ ಸಾದನೆಗಳಲ್ಲ, ಜೀವನದ ಪುಟ್ಟ ಪುಟ್ಟ ಆನಂದಗಳು ಮತ್ತು ಆ ಆನಂದಗಳ ಪ್ರೇರಣೆ ಬದುಕ ಸಾಗಿಸಲು!

ಯುಡೈಮೋನಿಯಾ

ಯುಡೈಮೋನಿಯಾ ಪ್ರಾಚೀನ ಗ್ರೀಸ್‌ನಿಂದ ಹುಟ್ಟಿದ ವಿಚಾರದಾರೆ.ಯುಡೈಮೋನಿಯಾ ಎಂದರೆ ಕೆಲವೊಂದು ಸದ್ಗುಣಗಳು.

ಮೊದಲನೆಯದು ಬುದ್ದಿವಂತಿಕೆ. ಪ್ರತಿಯೊಂದು ವಿಚಾರದಲ್ಲಿ ದುಡುಕಿಗೆ ಬಲಿಯಾಗದೆ ಬುದ್ದಿವಂತಿಕೆಯ ನಿರ‍್ದಾರ ಕೈಗೊಳ್ಳುವುದು. ನಾವು ಕೈಗೊಳ್ಳುವ ತೀರ‍್ಮಾನಗಳು ಬದುಕಿಗೆ ಪೂರಕವಾಗಿರಬೇಕು.

ಎರಡನೇಯದು ದೈರ‍್ಯ. ಜೀವನದಲ್ಲಿ ಅನೇಕ ಕಶ್ಟ, ಸೋಲು ಬರುತ್ತದೆ. ಆದರೆ ಪ್ರತಿಯೊಂದನ್ನೂ ನಾನು ಸರಿಯಾದ ದಾರಿಯಲ್ಲೇ ಎದುರಿಸುತ್ತೇನೆ ಎನ್ನುವ ನಿರ‍್ದಾರವನ್ನು ನಾವು ಈ ಹೊಸ ವರುಶದಲ್ಲಿ ಕೈಗೊಳ್ಳಬೇಕು.

ಮೂರನೆಯದು ಸಂಯಮ ಸ್ವಯಂ ನಿಯಂತ್ರಣ ತುಂಬಾ ಅಗತ್ಯ. ಕೆಟ್ಟ ಚಟಗಳಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬೇಕು. ದಿನದ ಬೇಹುತೇಕ ಸಮಯವನ್ನು ನಾವು ಮೊಬೈಲ್ ಗೆ ಮೀಸಲಿಡುತ್ತೇವೆ. ಆದರೆ ಅದರಲ್ಲಿ ಒಳ್ಳೆ ವಿಚಾರಗಳನ್ನು ನೋಡುವ, ಕಲಿಯುವ ಅರಿಯುವ ಬದಲು ಬೇಡದ ವಿಶಯಗಳಿಗೆ ನಮ್ಮ ಸಮಯ ಮೀಸಲಿಡುತ್ತೇವೆ ಇದು ತಪ್ಪು.

ಯುಡೈಮೋನಿಯಾ ಹೇಳುವ ಮತ್ತೊಂದು ವಿಚಾರದಾರೆ ನಾವು ಯಾವತ್ತಿಗೂ ನ್ಯಾಯದ ಪರವಿರಬೇಕು. ತಪ್ಪು ಅಂತ ತಿಳಿದು ಅದನ್ನು ಸಮರ‍್ತನೆಮಾಡಿಕೊಳ್ಳುವುದು ಒಳ್ಳೆಯದಲ್ಲ.

ಕಡೆಯದಾಗಿ ಪ್ರಾಮಾಣಿಕತೆ ಮತ್ತು ಜವಾಬ್ದಾರಿಯನ್ನು ಸರಿಯಾಗಿ ನಿರ‍್ವಹಿಸುವುದು. ಇವೆಲ್ಲ ಬದಲಾವಣೆ ನಮ್ಮ ಬದುಕನ್ನು ಕಂಡಿತವಾಗಿಯೂ ಬದಲಾಯಿಸಬಲ್ಲದು.

ಈ ಹೊಸ ವರುಶ ಎಲ್ಲರಿಗೂ ಹೊಸ ಹುರುಶವ ಹೊತ್ತು ತರಲಿ.

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *