ಕವಿತೆ: ನಾನು ಬರೆದ ಕವಿತೆ

– ವೆಂಕಟೇಶ ಚಾಗಿ

ಅಂದು ನಾನು ಬರೆದ ಕವಿತೆ
ಇನ್ನೂ ಬದುಕಿದೆ
ಕೇಳಿದ ಕಿವಿಗಳು
ಅಂದೇ ಮರೆತುಬಿಟ್ಟಿವೆ

ಕವಿತೆಗೆ ಅಂದೇ ಹುಟ್ಟು ಹಬ್ಬ
ದಿನಗಳು ಕಳೆದರೂ
ಪ್ರತಿದಿನವೂ ಹಬ್ಬವೇ
ಸಾವು ಇರದ ಜೀವ
ಅದು ನನ್ನ ಕವಿತೆ

ಆಗಸದ ನಕ್ಶತ್ರಗಳ ಬೆಳಕನ್ನು
ಕವಿತೆ ಕದಿಯುತಿದೆ
ಕತ್ತಲು ಮಾತ್ರ ಅಪ್ಪಿಕೊಂಡಿದೆ
ಕವಿತೆ ದಿನಗಳನ್ನು ಹೊದ್ದು
ಗಾಡ ನಿದ್ದೆಯಲ್ಲಿದೆ ರಾತ್ರಿ

ಕನಸುಗಳಾಗಿ ನದಿಯಾಗಿ ಹರಿದು
ಎಲ್ಲರ ಮನಗಳ ಕದ
ತಾಕುತ್ತಿದೆ ನಿಶ್ಯಬ್ದವಾಗಿ
ಆಸ್ವಾದಿಸುವ ಅಬಿಲಾಶೆ
ಸತ್ತ ಕಿವಿಗಳಿಗಿಲ್ಲ

ಸಮಯದ ಓಟದಲ್ಲಿ
ಎಲ್ಲರೂ ಬಾಗವಹಿಸಿದ್ದಾರೆ
ಗೆಲ್ಲುವರು ಯಾರೋ
ಸೋಲುವರು ಯಾರೋ
ಕವಿತೆ ಮಾತ್ರ ಗೆದ್ದಾಗಿದೆ
ಸಂಬ್ರಮವನ್ನು ತಾನೇ ನುಂಗಿದೆ
ಹೊಸ ಬೆಳಕಿನ ನಿರೀಕ್ಶೆಯಲಿ.

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *