ಕವಿತೆ: ನಾವಿಬ್ಬರೂ ಮತ್ತೆ ನಗುವುದು ಯಾವಾಗ

ಕನಸುಗಳ ಹಬ್ಬ ಮುಗಿದುಹೋದಂತಿದೆ
ಮತ್ತೆ ಆ ನಿನ್ನ
ಬಣ್ಣದ ಕೊಡೆಯನ್ನು ತರುವೆಯಾ
ಕೊಡೆಯ ಅಡಿಯಲ್ಲಿ
ಆ ಅನಾತ ಬೆಂಚಿನ ಮೇಲೆ
ಅತಿತಿಗಳಾಗಿ ಕುಳಿತುಕೊಂಡು
ನಾವಿಬ್ಬರೂ ಮತ್ತೆ ನಗಬೇಕಾಗಿದೆ
ಮಳೆಗೆ ಜೀವ ತರಬೇಕಿದೆ
ನಗುವಿಂದ ನಗುವಿನ ಜನನ
ಎತ್ತಲೋ ಏನನ್ನೋ ತೋರುವ
ನನ್ನ ಕೈ ಬೆರಳುಗಳಿಗೆ
ನಿನ್ನ ಮುಂಗುರುಳ ಸರಿಸುವ ಕೆಲಸ ಬೇಕಿದೆ
ತಂಪಾದ ಗಾಳಿಗೂ ಇಬ್ಬರ ಮೈಬಿಸಿಯ
ಹೀರುವ ಆಸೆ
ಒಂದಿಶ್ಟು ಸುಳ್ಳುಗಳ ಕರೀದಿಸಿ
ಅಪ್ಪುಗೆಯ ನಡುವಿನಲಿ
ಜಗವ ಅರಳಿಸಬೇಕಿದೆ
ತುಂತುರು ಮಳೆಯ ನಾದಕೆ
ಬೆಟ್ಟಗಳೂ ಮೈ ಮರೆತಂತಿವೆ
ಹಸಿರು ಕಂಗೊಳಿಸುತಲಿದೆ
ಮನವ ತನುವ ಕದಡುತಲಿದೆ
ಬಯಲಿನ ಮೇಲೆ
ಮಳೆಹನಿಗಳ ಕವಿತೆ ಬರೆದು
ನಿನಗಾಗಿ ಮತ್ತೆ ಓದಬೇಕಾಗಿದೆ
ಬಾನಿಂದ ಬಂದ ಮಿಂಚು
ಬುವಿಯೊಡಲ ಸೇರುತಲೆಂತ ಸೊಗಸು
ನಿಸರ್ಗದ ಸವಿಗೆ ನಾವೇ ದನ್ಯರು
ಎಲ್ಲವೂ ಮಳೆಯಾಟ ಬದುಕಿನಾಟ
ನಾಳೆಗಳ ಹಸಿವಿಗೆ ಈಗಲೇ ಬಲಿ ಏಕೆ
ಬಾ ಮತ್ತೆ ನಗುವರಳಿಸುವ
ಮಾಯದ ಮಳೆಯಲಿ
ಮತ್ತೆ ಮರೆಯಾಗುವ
( ಚಿತ್ರ ಸೆಲೆ: pixabay.com )

ಇತ್ತೀಚಿನ ಅನಿಸಿಕೆಗಳು