ಕುಮಾರವ್ಯಾಸ ಬಾರತ ಓದು: ಆದಿಪರ‍್ವ – ಬೀಮ ದುರ‍್ಯೋದನರ ಜನನ ನೋಟ-10

– ಸಿ. ಪಿ. ನಾಗರಾಜ.

ಬೀಮ ದುರ‍್ಯೋದನರ ಜನನ

( ಆದಿ ಪರ್ವ: ನಾಲ್ಕನೆಯ ಸಂದಿ: ಪದ್ಯ-47 ರಿಂದ 54)

ಪಾತ್ರಗಳು:

ವಾಯುದೇವ: ದೇವಲೋಕದ ದೇವತೆ.

ಕುಂತಿ: ಪಾಂಡುರಾಜನ ಮೊದಲನೆಯ ಹೆಂಡತಿ

ವಿದುರ: ವ್ಯಾಸ ಮುನಿ ಮತ್ತು ದಾಸಿಯ ಮಗ.

ದ್ವಿಜರು: ದ್ರುತರಾಶ್ಟ್ರನ ಓಲಗದಲ್ಲಿರುವ ಬ್ರಾಹ್ಮಣರು

*** ಬೀಮ ದುರ‍್ಯೋದನರ ಜನನ ***

ಧರಣೀ ಕಾಂತ ಕೇಳೈ, ಬನದೊಳು ಇತ್ತಲು ಭೀಮನ ಉದ್ಭವವ. ಕಾಮಿನಿ ಸರೋವಾರಿಯಲಿ ನಿಯಮದಲಿ ಮಿಂದಳು. ಬೀಜಮಂತ್ರ ವ್ಯಯವ ಮಾಡಿದಳು. ಅಮರ ನಿಕರವ ನೋಡಿ…ಕೈ ಮುಗಿದು ವಾಯುವನು ಬಯಸಿದಳು. ಸಮೀರನು ನಿಜ ಮೂರ್ತಿಯಲಿ ಬಂದು ಆ ಕುಂತಿಯನು ನುಡಿಸಿದನು.

ವಾಯುದೇವ: ಎಮ್ಮ ಬರಿಸಿದ ಹದನ ಅದೇನು?

ಕುಂತಿ: ಬರಿಸಿದುದು ಬೇರೇನು.. ಸುತನನು ಕರುಣಿಸುವುದೈಸಲೆ.

( ಎನಲು, ಸಂಸ್ಪರುಶನದಿ )

ವಾಯುದೇವ: ಭವತ್ ಇಷ್ವಮಸ್ತು.

( ಎನುತ್ತಲು… ಪವಮಾನನು ಅಂಬರಕೆ ಮರಳಿದನು… ಈ ಪಂಕರುಹಮುಖಿ
ಬೆಸಲಾದಳು… ಒಂದೇ ವರುಷ ಗರ್ಭವ ಧರಿಸಿ… ಅವನಿಸುತ ವಾರ ತ್ರಯೋದಶಿ
ದಿವದ ಮಧ್ಯದೊಳು ಅರ್ಕನಿರೆ… ಮಘೆಯಲಿ ಶುಭಗ್ರಹ ಲಗ್ನದ ಉದಯದಲಿ
ಸಂಭವಿಸಿದನು… ಪರಬಲ ಕಾಲ ಭೈರವನ ಭವದ ಮಾತ್ರದೊಳು… ಅಹಿತ
ಪಾರ್ಥಿವ ನಿವಹ ನಡುಗಿತು… ಭೂಮಿಪತಿ, ಭೀಮಸೇನನ ಜನನದ ಅದ್ಭುತವ
ಅದೇನನು ಹೇಳುವೆನು… ಭೀಮನು ಉದಯಿಸಿದ ಇರುಳು ಕೌರವ ಭೂಮಿಪತಿ
ಜನಿಸಿದನೆಲೈ… ನಿಮ್ಮ ಆ ಮಹಾತ್ಮನ ಹುಟ್ಟು ಅಖಿಳ ಜನಮನವ ಬೆದರಿಸಿತು…
ಭೂಮಿ ನಡುಗಿತು… ಧೂಮಕೇತುಗಳು ದೆಸೆಗೆ ಹರಿದವು… ಬಳಿಕ ಆ
ಮಹಾನಗರದಲಿ ಭರದಲಿ ಭೂರಿ ಗೋಮಾಯು ಒದರಿದವು… ಧೃತರಾಷ್ಟ್ರನು
ಅವನೀಸುರರ ಕರೆಸಿದನು… ಕುಮಾರನ ದರುಶನದ ಸಮನಂತರದಲಿ ಉತ್ಪಾತ
ಫಲಗತಿಯ ಬೆಸಗೊಂಡನು.)

ದ್ವಿಜರು: ಭರತ ವಂಶವನು… ಉಳಿದ ಭೂಮೀಶ್ವರರ ಅನಂತವನು… ಈತನೇ ಸಂಹರಿಸುವನು. ಇದಕೇನು ಸಂದೇಹ.

( ಎಂದರು ಆ ದ್ವಿಜರು )

ವಿದುರ: ಕುಲಕೆ ಕಂಟಕನಾದಡೆ ಒಬ್ಬನ ಕಳೆವುದು… ಊರ ಅಳಿವಿನಲಿ ಕುಲವನು ಒಂದನು ಕಳೆವುದು… ದೇಶದ ಅಳಿವಿನಲಿ ಊರ ಕೆಡಿಸುವುದು… ಇಳೆಯನು ಅಖಿಳವ ಬಿಸುಡುವುದು… ತನ್ನ ಉಳಿವ ಮಾಡುವುದು ಎಂಬ ವಚನವ ತಿಳಿವುದು…ನೀನು ಈತನ ಬಿಸುಟು ಕಳೆ.

( ಎಂದನಾ ವಿದುರ… ಸುತನ ಮೋಹದ ತಿಮಿರವು ಆ ದುಸ್ಥಿತಿಯನು ಈಕ್ಷಿಸಲು ಈವುದೇ…
ಗಾಂಧಾರಿ ದುರ್ಮತಿಯೊಳು ಈತನ ಬಿಸುಡಲು ಈಸಿದುದಿಲ್ಲ… ಅನಿಬರಿಗೆ
ಗುಣನಾಮಕರಣದಲಿ ಸುತನಿರೀಕ್ಷಣ ಜಾತಕರ್ಮ ಉಚಿತದ ದಾನಂಗಳಲಿ
ಭೂಸುರತತಿಯ ದಣಿಸಿದನು… ಜನಪ, ದುರ್ಯೋಧನನು… ದುಶ್ಯಾಸನ… ವಿಕರ್ಣ…
ಸುಬಾಹು… ದುಸ್ಸಹ… ಕನಕವರ್ಣ… ಸುಷೇಣ… ದೀರ್ಘೋದರ… ಮಹೋದರನು…
ಜನವಿಜಯ… ಜಲಸಂಧ… ದೃಢವಾಹನ… ವಿವಿಂಶತಿ… ಕುಂಡಧಾರಕನು
ಎನಲು…ನೂರ್ವರ ನಾಮಕರಣವನು ಅರಸ ಮಾಡಿಸಿದ.)

ಪದ ವಿಂಗಡಣೆ ಮತ್ತು ತಿರುಳು

ಧರಣೀ=ಬೂಮಿ; ಧರಣೀಕಾಂತ=ರಾಜ; ಧರಣೀ ಕಾಂತ ಕೇಳೈ=ಜನಮೇಜಯ ರಾಜನೇ ಕೇಳು. ವೈಶಂಪಾಯನ ಮುನಿಯು ಜನಮೇಜಯ ರಾಜನಿಗೆ ಮತ್ತೊಮ್ಮೆ ವ್ಯಾಸರು ರಚಿಸಿದ ಮಹಾಬಾರತದ ಕತೆಯನ್ನು ಹೇಳುತ್ತಿದ್ದಾನೆ; ಬನ=ಕಾಡು/ಅರಣ್ಯ; ಉದ್ಭವ=ಹುಟ್ಟು/ಜನನ; ಕಾಮಿನಿ=ಹೆಂಗಸು; ಸರೋವಾರಿ=ಸರೋವರದ ನೀರು;

ಬೀಜಮಂತ್ರ=ಮಗು ಹುಟ್ಟುವುದಕ್ಕೆ ಅಗತ್ಯವಾದ ಮೂಲಮಂತ್ರ;  ಅಮರ=ದೇವತೆ;  ನಿಕರ=ಗುಂಪು; ವಾಯು=ವಾಯುದೇವ; ಸಮೀರ=ವಾಯುದೇವ;  ಹದನ=ಕಾರಣ; ಸಂಸ್ಪರುಶನ=ಮುಟ್ಟುವಿಕೆ; ಭವತ್=ನಿನ್ನ; ಇಷ್ಟಮ್+ಅಸ್ತು; ಪವಮಾನ=ವಾಯುದೇವ; ಅಂಬರ=ಬಾನು/ಮುಗಿಲು;

ಪಂಕರುಹ=ತಾವರೆಯ ಹೂವು;

ಪಂಕರುಹಮುಖಿ=ತಾವರೆ ಮೊಗದವಳು/ಕುಂತಿ; ಪರಬಲ=ಶತ್ರುಸೇನೆ; ಕಾಲ=ಯಮ; ಭೈರವ=ರುದ್ರರೂಪದ ಶಿವ; ಬೆಸಲಾಗು=ಮಗುವನ್ನು ಹೆರು; ಅವನಿಸುತ ವಾರ=ಮಂಗಳವಾರ; ತ್ರಯೋದಶಿ=ಹದಿಮೂರನೆಯ ದಿನ; ದಿವ=ಹಗಲು; ದಿವದ ಮಧ್ಯದೊಳು=ನಡುಹಗಲಿನಲ್ಲಿ ; ಅರ್ಕನ್+ಇರೆ; ಅರ್ಕ=ರವಿ;

ಭವ=ಹುಟ್ಟು; ಅಹಿತ=ಶತ್ರು; ಪಾರ್ಥಿವ=ರಾಜ; ನಿವಹ=ಸಮೂಹ; ಮಹಾತ್ಮ=ದೊಡ್ಡ ವ್ಯಕ್ತಿತ್ವವುಳ್ಳವನು. ಈ ಪದ ಈ ಸನ್ನಿವೇಶದಲ್ಲಿ ಅಣಕದ ಮಾತಾಗಿ ಬಳಕೆಗೊಂಡು “ ಕೆಟ್ಟ ವ್ಯಕ್ತಿತ್ವವುಳ್ಳವನು ” ಎಂಬ ತಿರುಳಿನಲ್ಲಿದೆ; ಧೂಮಕೇತು=ಮುಗಿಲಿನಿಂದ ನೆಲಕ್ಕೆ ಬೀಳುವ ಆಕಾಶಕಾಯ. ಇದು ಬೀಳುವುದು ಲೋಕದಲ್ಲಿ ನಡೆಯುವ ದುರಂತಗಳಿಗೆ ಮುನ್ಸೂಚನೆ ಎಂಬ ಕಲ್ಪನೆ ಜನಮನದಲ್ಲಿದೆ;   ಭರ=ಹೆಚ್ಚಾಗಿ;

ಗೋಮಾಯು=ನರಿ; ಒದರು=ಊಳಿಡು;

ಅವನೀ=ಬೂಮಿ; ಸುರ=ದೇವತೆ; ಅವನೀಸುರ=ಬ್ರಾಹ್ಮಣ; ಸಮನಂತರ=ತರುವಾಯ; ಉತ್ಪಾತ= ನಿಸರ್ಗದಲ್ಲಿ ಉಂಟಾಗುವ ಬೂಮಿ ಕಂಪಿಸುವುದು/ದೂಮಕೇತುಗಳು ಬೀಳುವುದು/ನರಿಗಳು ಊಳಿಡುವುದು ಮುಂತಾದ ಕ್ರಿಯೆಗಳು; ಫಲ=ಪರಿಣಾಮ/ಪ್ರಯೋಜನ; ಫಲಗತಿ=ಉಂಟಾಗುವ ಪರಿಣಾಮ;

ಅನಂತ=ಗುಂಪು/ಸಮೂಹ;  ದ್ವಿಜ=ಬ್ರಾಹ್ಮಣ; ಕಂಟಕನ್+ಆದಡೆ; ಕಂಟಕ=ಕೇಡು/ವಿಪತ್ತು;

ಇಳೆ=ಬೂಮಿ; ಅಖಿಲ=ಸಮಸ್ತ/ಎಲ್ಲ; ತಿಮಿರ=ಕತ್ತಲೆ; ಮೋಹದ ತಿಮಿರ=ಇದು ಒಂದು ರೂಪಕ. ಕುರುಡು ಪ್ರೇಮ/ಯಾವುದೇ ವ್ಯಕ್ತಿಗಳನ್ನಾಗಲಿ ಅವರ ಒಳ್ಳೆಯ/ಕೆಟ್ಟ ಗುಣವನ್ನು ನೋಡದೆ ಮೋಹಿಸುವುದು; ಈಸು=ಅವಕಾಶ ಕೊಡು; ಅನಿಬರ=ಅವರೆಲ್ಲರು; ಗುಣ=ಮಕ್ಕಳ ಜಾತಕದಲ್ಲಿ ಕೂಡಿಬರುವ ಅಂಶ; ನಿರೀಕ್ಷಣ=ಬರವಸೆ; ಸುತನರೀಕ್ಷಣ=ಮಕ್ಕಳಿಗೆ ಒಳ್ಳೆಯದಾಗಲಿ ಎಂಬ ಆಸೆ;  ಜಾತಕರ್ಮ=ಮಗು ಹುಟ್ಟಿದಾಗ ಮಾಡುವ ಆಚರಣೆ;

 

(ಚಿತ್ರ ಸೆಲೆ: quoracdn.net)

 

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *