ಹಿಂದಿ ಹೇರಿಕೆ ವಿರೋದಿ ಹೋರಾಟ – ಬಾಗ 2

– ರತೀಶ ರತ್ನಾಕರ.
himpಹಿಂದಿ ಹೇರಿಕೆ ವಿರೋದಿ ಹೋರಾಟ – ಬಾಗ 1 ರಲ್ಲಿ ಮೊತ್ತ ಮೊದಲ ಹಿಂದಿ ಹೇರಿಕೆಯ ಎದುರಿನ ಹೋರಾಟದ ಕುರಿತು ತಿಳಿದೆವು. ಇಂಡಿಯಾದ ಹಳಮೆಯಲ್ಲಿ ದೊಡ್ಡ ಹೋರಾಟಗಳಲ್ಲೊಂದಾದ 1965 ರ ಹಿಂದಿ ಹೇರಿಕೆಯ ಎದುರಿನ ಹೋರಾಟದ ಕುರಿತು ಈಗ ತಿಳಿಯೋಣ.

1965ರ ಹೋರಾಟ:
1950ರ ಸಂವಿದಾನ ರಚನೆಯಾಗುವ ಹೊತ್ತಿನಲ್ಲಿ ಹಿಂದಿಯನ್ನು ಮಾತ್ರ ಆಡಳಿತ ನುಡಿಯನ್ನಾಗಿ ಮಾಡುವ ಹುನ್ನಾರ ನಡೆದಿತ್ತು. ತೆಂಕಣ ಇಂಡಿಯಾದವರ ಎದುರು ಮಾತಿಗೆ ಮಣಿದು ಹಿಂದಿಯ ಜೊತೆ ಇಂಗ್ಲಿಶನ್ನು ಮುಂದಿನ ಹದಿನೈದು ವರುಶಗಳವರೆಗೆ ಇರಿಸಿಕೊಳ್ಳುವ ತೀರ‍್ಮಾನವನ್ನು ಕೇಂದ್ರ ಸರಕಾರ ಮಾಡಿತು. ನೋಡ ನೋಡುತ್ತಲೇ 15 ವರುಶಗಳು ಕಳೆಯುವ ಹೊತ್ತು ಬಂದಿತು. ಸಂವಿದಾನದಲ್ಲಿ ಹೇಳಿರುವಂತೆ ಕೇವಲ 15 ವರುಶಗಳು ಮಾತ್ರ ಹಿಂದಿಯ ಜೊತೆ ಇಂಗ್ಲಿಶನ್ನು ಬಳಸಬೇಕಿದೆ, ಆ ಬಳಿಕ ಹಿಂದಿಯನ್ನು ಮಾತ್ರ ಆಡಳಿತ ನುಡಿಯನ್ನಾಗಿ ಬಳಸಬೇಕು. ಅದಕ್ಕಾಗಿ ಇಂಗ್ಲಿಶನ್ನು ಆಡಳಿತ ನುಡಿಯ ಜಾಗದಿಂದ ತೆಗೆದು ಹಾಕಬೇಕು ಎಂಬ ಮಸೂದೆಯನ್ನು 1963ರಲ್ಲಿ ನೆಹರೂ ರವರು ಸಂಸತ್ತಿನಲ್ಲಿ ಮಂಡಿಸಿದರು. ಹಿಂದಿ ಹೇರಿಕೆಯ ಈ ಹುನ್ನಾರಕ್ಕೆ ಮತ್ತೊಮ್ಮೆ ಹೋರಾಟಗಳು ಶುರುವಾದವು. ಹಿಂದಿಯ ಜೊತೆಗೆ ಇಂಗ್ಲಿಶನ್ನು ಆಡಳಿತ ನುಡಿಯನ್ನಾಗಿ ಮುಂದುವರಿಸಬೇಕು ಎಂಬ ಕೂಗು ಗಟ್ಟಿಯಾಗುತ್ತಾ ಹೋಯಿತು.

1964ರಲ್ಲಿ ನೆಹರೂ ರವರು ಸಾವನ್ನಪ್ಪಿದರು. ಆ ಬಳಿಕ ಪ್ರದಾನಿಯಾದ ಲಾಲ್ ಬಹದ್ದೂರ್ ಶಾಸ್ತ್ರಿಯವರೂ ಕೂಡ ಹಿಂದಿಯ ಪರ ಒಲವನ್ನು ಹೊಂದಿದ್ದವರು. ಆಗಿನ ಕ್ಯಾಬಿನೆಟ್ ನಾಯಕರುಗಳಾದ ಮೊರಾರ‍್ಜಿ ದೇಸಾಯಿ ಮತ್ತು ಗುಲ್ಜಾರಿಲಾಲ್ ನಂದ ಹಿಂದಿಯನ್ನು ಮಾತ್ರ ಆಡಳಿತ ನುಡಿಯನ್ನಾಗಿರಿಸಬೇಕು ಎಂದು ಪಟ್ಟು ಹಿಡಿದರು. ಸಾಕಶ್ಟು ವಿರೋದದ ನಡುವೆಯೂ 1965 ಜನವರಿ 26ರ ಗಣರಾಜ್ಯೋತ್ಸವದಂದು ಹಿಂದಿಯನ್ನು ಮಾತ್ರ ಆಡಳಿತ ನುಡಿಯನ್ನಾಗಿಸುವ ತೀರ‍್ಮಾನಗಳು ಕೇಳಿಬಂದವು.

ಇತ್ತ ತೆಂಕಣ ಇಂಡಿಯಾದಲ್ಲಿ ಹಿಂದಿ ಹೇರಿಕೆಯ ಎದುರಿನ ಹೋರಾಟಗಳು ಸಿದ್ದವಾದವು. ಆ ಹೊತ್ತಿಗಾಗಲೇ ಹಲವಾರು ಹಿಂದಿ ಹೇರಿಕೆ ವಿರೋದಿ ಬಳಗಗಳು ಹುಟ್ಟಿಕೊಂಡಿದ್ದವು. ಆಗ ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಶವು ಸರಕಾರ ನಡೆಸುತ್ತಿತ್ತು. ಕೇಂದ್ರ ಸರಕಾರದ ಹಿಂದಿ ಹೇರಿಕೆಯ ಮಸೂದೆಯ ಎದುರು ಹೋರಾಟಕ್ಕೆ ತಮಿಳುನಾಡಿನ ಪ್ರಾದೇಶಿಕ ಪಕ್ಶಗಳು ಕರೆಕೊಟ್ಟವು. ಜನವರಿ 25, 1965 ರಂದು ದೊಡ್ಡ ಮಟ್ಟದ ಹೋರಾಟವನ್ನು ಹಮ್ಮಿಕೊಳ್ಳಲಾಯಿತು. ಈ ಹೋರಾಟದ ವಿಶೇಶತೆ ಏನೆಂದರೆ ಸುಮಾರು 50 ಸಾವಿರಕ್ಕೂ ಹೆಚ್ಚು ವಿದ್ಯಾರ‍್ತಿಗಳು ಪಾಲ್ಗೊಂಡಿದ್ದು ಮತ್ತು ಒಂದು ಕಾಲದಲ್ಲಿ ತಮಿಳರ ಮೇಲೆ ಹಿಂದಿಯನ್ನು ಹೇರಲು ಹೊರಟಿದ್ದ ರಾಜಾಜಿಯವರು ಹಿಂದಿ ಹೇರಿಕೆಯನ್ನು ವಿರೋದಿಸಿದ್ದು!

ತೆಂಕಣ ಇಂಡಿಯಾದ ಹಲವು ಕಡೆ ಹಿಂದಿ ಹೇರಿಕೆ ಎದುರಿನ ಹೋರಾಟದ ಕಾವು ಹೆಚ್ಚತೊಡಗಿತು. ಆಂದ್ರ ಪ್ರದೇಶದ ಹಲವು ಬಾಗಗಳಲ್ಲಿ ರೈಲನ್ನು ತಡೆದು ಚಳವಳಿಯನ್ನು ಮಾಡಿದರು. ಕರ‍್ನಾಟಕದ ಬೆಂಗಳೂರು ಹಾಗು ಮೈಸೂರಿನಲ್ಲಿ ಈ ಹಿಂದಿ ಹೇರಿಕೆಯ ಎದುರಿನ ಹೋರಾಟ ಹೆಚ್ಚಿತ್ತು. ಮೈಸೂರಿನಲ್ಲಿ ಸುಮಾರು 2000 ಮಂದಿ ಮೆರವಣಿಗೆಯನ್ನು ಮಾಡಿ ವಿರೋದವನ್ನು ತೋರ‍್ಪಡಿಸಿದ್ದರು, ಆಗ ಪೋಲಿಸಿನವರು ಲಾಟಿಯೇಟಿನಿಂದ ಗುಂಪನ್ನು ಚದುರಿಸಿದ್ದರು.

ತಮಿಳುನಾಡಿನ ಹಲವು ಬಾಗಗಳಲ್ಲಿ ಹೋರಾಟವು ಬಿಸಿಯೇರಿತ್ತು. ಹಿಂದಿ ತರಗತಿಗಳನ್ನು ತಡೆಯುವುದು, ಕೇಂದ್ರ ಸರಕಾರಿ ಕಚೇರಿಗಳಿಗೆ ಮುತ್ತಿಗೆ, ಹೇರಿಕೆಯನ್ನು ವಿರೋದಿಸಿ ಮೆರವಣಿಗೆ ಹೀಗೆ ಹತ್ತು ಹಲವು ಬಗೆಯಲ್ಲಿ ಹೋರಾಟವನ್ನು ನಡೆಸಲಾಯಿತು. ಹಲವು ಕಡೆಗಳಲ್ಲಿ ಪೋಲಿಸರಿಂದ ಲಾಟಿಚಾರ‍್ಚ್ ನಡೆಯಿತು, ಸಾವಿರಾರು ಮಂದಿಯನ್ನು ಸೆರೆಹಿಡಿಯಲಾಯಿತು. ಹೋರಾಟವನ್ನು ಹತ್ತಿಕ್ಕಲು ಸರಕಾರವು ಪ್ಯಾರಾ ಮಿಲಿಟರಿಯನ್ನೇ ಕರೆಸಬೇಕಾಯಿತು. ಎಡಬಿಡದೆ ಸುಮಾರು ಎರೆಡು ವಾರಗಳವರೆಗೆ ಈ ಹೋರಾಟ ಮುಂದುವರೆಯಿತು ಇದರಲ್ಲಿ ಸುಮಾರು 70 ಮಂದಿ ಹೋರಾಟಗಾರರು ಮಡಿದರು! ಸಾವಿರಾರು ಮಂದಿ ಸೆರೆಯಾದರು. ತಮಿಳುನಾಡಿನ ಕೆಲವು ಸಂಸತ್ ಸದಸ್ಯರು ಹಿಂದಿ ಹೇರಿಕೆಯನ್ನು ವಿರೋದಿಸಿ ರಾಜಿನಾಮೆಯನ್ನು ನೀಡಿದರು. ಈ ಬಗೆಯಲ್ಲಿ ಬಿಸಿಯೇರಿದ ಹೋರಾಟವನ್ನು ಕಂಡು ದಂಗಾದ ಪ್ರದಾನಿ ಶಾಸ್ತ್ರಿಯವರು  11 ಪೆಬ್ರವರಿ, 1965 ರಂದು ಹಿಂದಿಯನ್ನು ಮಾತ್ರ ಆಡಳಿತ ನುಡಿಯಾಗಿ ಬಳಸುವ ಮಸೂದೆಯನ್ನು ಕೈಬಿಟ್ಟರು. 70 ಕ್ಕಿಂತ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡ ಈ ಹೋರಾಟಕ್ಕೆ, 2015ರ ಜನವರಿ 26ಕ್ಕೆ 50 ವರುಶಗಳು ತುಂಬಲಿವೆ. ಆದರೂ ಹಿಂದಿ ಹೇರಿಕೆಯ ಪಿಡುಗು ಕೇಂದ್ರ ಸರಕಾರದ ಆರೈಕೆಯಲ್ಲಿ ಇನ್ನೂ ಜೀವಂತವಾಗಿದೆ!

ಪಟ್ಟು ಬಿಡದ ಕೇಂದ್ರ ಸರಕಾರ:
ಇಶ್ಟೆಲ್ಲಾ ಹೋರಾಟವಾದರು ಕೇಂದ್ರ ಸರಕಾರ ತನ್ನ ಪಟ್ಟು ಬಿಟ್ಟಿಲ್ಲ. ಹಿಂದಿಯನ್ನು ಇತರೆ ನುಡಿಯಾಡುಗರ ಮೇಲೆ ಹೇರಲು ಹಲವಾರು ತಂತ್ರಗಳನ್ನು ರೂಪಿಸುತ್ತಾ ಬಂದಿದೆ, 1967ರಲ್ಲಿ ತ್ರಿಬಾಶ ಸೂತ್ರವನ್ನು ಜಾರಿಗೆ ತಂದು ಎಲ್ಲಾ ರಾಜ್ಯಗಳಲ್ಲಿ ಹಿಂದಿಯ ಜಾಗವನ್ನು ಗಟ್ಟಿಗೊಳಿಸಲು ನೋಡುತ್ತಿದೆ. 1986ರಲ್ಲಿ ನ್ಯಾಶನಲ್ ಎಜುಕೇಶನ್ ಪಾಲಿಸಿಯನ್ನು ತಂದು ನವೋದಯ ಶಾಲೆಗಳ ಮೂಲಕ ಹಿಂದಿಯನ್ನು ಹೇರುವ ಕೆಲಸವನ್ನು ಗೊತ್ತಾಗದಂತೆ ನಡೆಸುವ ಪ್ರಯತ್ನ ಮಾಡುತ್ತಿದೆ. ಇತ್ತೀಚೆಗೆ ಎಂದರೆ 2014 ರಲ್ಲಿ ರಾಜ್ಯಗಳು ಕೇಂದ್ರದೊಡನೆ ಹಿಂದಿಯಲ್ಲೇ ವ್ಯವಹರಿಸಬೇಕು ಎಂಬ ಸುತ್ತೋಲೆಯನ್ನು ಹೊರಡಿಸಿತ್ತು, ತೆಂಕಣದವರ ವಿರೋದದ ಬಳಿಕ ಅದನ್ನು ಕೈ ಬಿಟ್ಟಿತು. ಹಿಂದಿ ದಿವಸ, ಹಿಂದಿ ಸಾಪ್ತಾಹಿಕ ಎಂಬ ತಾರತಮ್ಯ ಎಸಗುವ ಕಾರ‍್ಯಕ್ರಮಗಳ ಮೂಲಕ ಹಿಂದಿಯನ್ನು ಹೇರುವ ಕೆಲಸವನ್ನು ಮುಂದುವರಿಸುತ್ತಲೇ ಇದೆ. ಹೀಗೆ ಕಾಲದಿಂದ ಕಾಲಕ್ಕೆ ಹಿಂದಿ ಹೇರಿಕೆಯ ಗುಮ್ಮ ನಮ್ಮನ್ನು ಬಂದು ಕಾಡುತ್ತಲೇ ಇದೆ. ಇತ್ತ ಸಂವಿದಾನದ 8ನೇ ಪರಿಚ್ಚೇದದಲ್ಲಿರುವ 22 ನುಡಿಗಳಿಗೂ ಆಡಳಿತ ನುಡಿಯ ಸ್ತಾನಮಾನ ನೀಡಬೇಕು ಎಂಬ ಕೂಗು ಕೂಡ ಕೇಳಿ ಬರುತ್ತಿದೆ. ಆದರೂ ಸರಕಾರ ಮಾತ್ರ ಹಿಂದಿ ಮತ್ತು ಇಂಗ್ಲಿಶನ್ನು ಬಿಟ್ಟು ಬೇರಾವ ನುಡಿಗು ಆಡಳಿತ ನುಡಿಯ ಸ್ತಾನಮಾನ ಕೊಟ್ಟಿಲ್ಲ.

ಹಿಂದಿ ಹೇರಿಕೆಯ ಕೆಟ್ಟ ಪರಿಣಾಮಗಳು:Hindi1ಕನ್ನಡಿಗನೊಬ್ಬ, ಕನ್ನಡದ ನೆಲದಲ್ಲಿ ತಾನೊಬ್ಬ ಪರಕೀಯ ಎಂಬ ಪರಿಸ್ತಿತಿ ಈ ಹಿಂದಿ ಹೇರಿಕೆಯಿಂದ ನಿರ‍್ಮಾಣವಾಗುತ್ತಿದೆ. ಕರ‍್ನಾಟಕದ ಬ್ಯಾಂಕು, ರೈಲು, ವಿಮಾನ, ಪಾಸ್‌ಪೋರ‍್ಟ್ ಕಚೇರಿ, ಪಾಸ್‍ಪೋರ‍್ಟ್, ವಿಮೆ ಎಲ್ಲೆಡೆ ಕನ್ನಡಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಒಬ್ಬ ಹಿಂದಿ ನುಡಿಯಾಡುವವನು ಕರ‍್ನಾಟಕದ ಯಾವ ಮೂಲೆಯಲ್ಲಿ ಬೇಕಾದರು ಹಿಂದಿಯಲ್ಲೇ ವ್ಯವಹರಿಸಿ ಕೇಂದ್ರ ಸರಕಾರದ ಕೆಲಸ ಮಾಡಿಕೊಳ್ಳಬಹುದು ಆದರೆ ಈ ಸವಲತ್ತು ಕನ್ನಡಿಗನಿಗೆ ಕರ‍್ನಾಟಕದಲ್ಲಿ ಇಲ್ಲ! ವಲಸೆ ಬಂದಿರುವ ಹಿಂದಿಯವರಿಗೆ ಮನ್ನಣೆ, ಅವಕಾಶ ಕಳೆದುಕೊಳ್ಳುತ್ತಿರುವ ಕನ್ನಡಿಗರು! ಕನ್ನಡಿಗನೊಬ್ಬ ಕರ‍್ನಾಕದಲ್ಲಿ ಬದುಕಲು ತನ್ನದಲ್ಲದ ಹಿಂದಿ ನುಡಿಯನ್ನು ಕಲಿಯ ಬೇಕಾದ ಪರಿಸ್ತಿತಿ!

ಎಲ್ಲರೂ ಒಂದೇ ಎಂದು ಹೇಳುವ ಸಂಸತ್ತಿನಲ್ಲಿ ಕನ್ನಡಿಗನೊಬ್ಬ ಕನ್ನಡದಲ್ಲಿ ಮಾತನಾಡಲು ಸ್ಪೀಕರ್ ಅವರ ಅನುಮತಿ ಕೇಳಿ ಒಪ್ಪಿಗೆ ಪಡೆದು ಮಾತನಾಡಬೇಕಾದ ಪರಿಸ್ತಿತಿ ಇದೆ. ಹಿಂದಿ ನುಡಿಯವನೊಬ್ಬ ತನ್ನ ತಾಯ್ನುಡಿಯಲ್ಲಿಯೇ ಐ.ಎ.ಎಸ್, ಐ.ಪಿ.ಎಸ್ ನಂತಹ ಕೇಂದ್ರ ಸರಕಾರಿ ಕೆಲಸಗಳನ್ನು ಗಿಟ್ಟಿಸಿಕೊಂಡು ಕೆಲಸ ಮಾಡಬಹುದು, ಆದರೆ ಕನ್ನಡಿಗನಿಗೆ ಆ ಅವಕಾಶವಿಲ್ಲ. ಗ್ಯಾಸ್ ಸಿಲಿಂಡರ್, ರೈಲ್ವೇ, ರಾಶ್ಟ್ರಿಯ ಹೆದ್ದಾರಿ ಹಲವಾರು ಕಡೆಗಳಲ್ಲಿ ಸುರಕ್ಶತೆಯ ಮಾಹಿತಿ ಕನ್ನಡದಲ್ಲಿ ಇಲ್ಲ, ಅದೂ ಕರ‍್ನಾಟಕದಲ್ಲಿ! ಅಂದರೆ ಕನ್ನಡಿಗನ ಜೀವಕ್ಕೆ ಯಾವ ಕಿಮ್ಮತ್ತು ಇಲ್ಲವೇ? ಇಂತಹ ಹಲಾವರು ಸಮಸ್ಯೆಗಳ ಬಗ್ಗೆ ಹೊನಲಿನಲ್ಲಿ ಈ ಮುಂಚೆ ಮೂಡಿ ಬಂದಿರುವ ಬರಹಗಳಲ್ಲಿ ನೋಡಬಹುದು.

ಕೊನೆ ಹನಿ:
ಮೊದಲೇ ಅರಿತಂತೆ, ಹಿಂದಿ ಹೇರಿಕೆಯ ಎದುರಿನ ಹೋರಾಟಕ್ಕೆ 50 ಕ್ಕಿಂತ ಹೆಚ್ಚಿನ ವರುಶದ ಹಿನ್ನಲೆಯಿದೆ. ಹಿಂದಿ ಹೇರಿಕೆಯೆಂಬ ದೊಡ್ಡ ತಿಮಿಂಗಿಲ ಉಳಿದ ನುಡಿಗಳನ್ನು ನುಂಗಿ ಹಾಕುವುದೆಂಬ ಅರಿವು ನಮ್ಮ ಹಿರಿಯರಿಗೆ ಆಗಲೇ ತಿಳಿದಿತ್ತು. ಅದಕ್ಕಾಗಿ ಪ್ರಾಣವನ್ನೂ ಲೆಕ್ಕಿಸದೆ ಹೋರಾಡಿ ಮಡಿದಿದ್ದಾರೆ. ಆದರೂ ಕೇಂದ್ರ ಸರಕಾರ ತನ್ನ ತಂತ್ರವನ್ನು ಮುಂದುವರಿಸುತ್ತಲೇ ಇದೆ. ಒಗ್ಗಟ್ಟಿಗಾಗಿ ಹಿಂದಿ ಬೇಕು, ಅದು ದೇಶಪ್ರೇಮದ ಸಂಕೇತ, ಅದು ರಾಶ್ಟ್ರಬಾಶೆ, ಅದು ನಾಡುಗಳನ್ನು ಬೆಸೆಯುವ ಕೊಂಡಿ ಎಂಬೆಲ್ಲಾ ಹಸಿ ಹಸಿ ಸುಳ್ಳುಗಳನ್ನು ಹೇಳುತ್ತಾ ಮಂದಿಯನ್ನು ಮರುಳು ಮಾಡುತ್ತಿದೆ.

ಕನ್ನಡಿಗನೊಬ್ಬ ಹಿಂದಿಹೇರಿಕೆಯನ್ನು ಒಪ್ಪಿಕೊಂಡರೆ ಕನ್ನಡ ಹಾಗು ಕನ್ನಡದ ಅವನತಿ ಕಟ್ಟಿಟ್ಟಬುತ್ತಿ. ಮಂದಿಯ ತೆರಿಗೆಯ ಹಣದಿಂದ ಕೋಟಿ ಕೋಟಿ ಸುರಿದು ಕೇಂದ್ರ ಸರಕಾರವೇ ಸಾಕುತ್ತಿರುವ ಹಿಂದಿ ಹೇರಿಕೆಯೆಂಬ ತಿಮಿಂಗಿಲವು ಒಂದೊಂದಾಗಿ ಸಣ್ಣ ನುಡಿಗಳನ್ನು ನುಂಗುತ್ತಾ ಬರುತ್ತಿದೆ. ನಮ್ಮನ್ನು ನುಂಗುವ ಮೊದಲೇ ಕನ್ನಡಿಗ ಎಚ್ಚೆತ್ತುಕೊಳ್ಳಬೇಕಿದೆ. 1965 ರಲ್ಲಿ ನಡೆದ ಹಿಂದಿ ಹೇರಿಕೆಯ ಎದುರಿನ ಹೋರಾಟಕ್ಕಿಂತ ನೂರುಪಟ್ಟು ದೊಡ್ಡದಾದ ಹೋರಾಟ, ಮಂದಿಯಾಳ್ವಿಕೆಯ ಚೌಕಟ್ಟಿನಲ್ಲಿ ನಡೆಯಬೇಕಿದೆ. ಇಂಡಿಯಾದ ಒಕ್ಕೂಟದ ಆಳ್ವಿಕೆಯಲ್ಲಿರುವ ಎಲ್ಲಾ ನುಡಿಗಳಿಗೆ ಒಂದೇ ಸ್ತಾನಮಾನ ನೀಡುವ ನುಡಿನೀತಿ ರೂಪುಗೊಳ್ಳಬೇಕಿದೆ.

(ಮಾಹಿತಿ ಸೆಲೆ: wikipedia)

(ಚಿತ್ರ ಸೆಲೆ: tamilseemanvideos)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *