ರೂಪಾಯಿ ಕುಸಿತ: ಯಾರಿಗೆ ಲಾಬ, ಯಾರಿಗೆ ನಶ್ಟ?

ಚೇತನ್ ಜೀರಾಳ್.

Rupee_Dollar

ಇತ್ತೀಚಿನ ದಿನಗಳಲ್ಲಿ ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೂ, ಸುದ್ದಿ ಮಾದ್ಯಮಗಳಿಂದ ಹಿಡಿದು ಸುದ್ದಿ ಹಾಳೆಗಳಲ್ಲಿ ಎಲ್ಲಿ ನೋಡಿದರೂ ಇದರದೇ ಸುದ್ದಿ. ಯಾರ ಬಾಯಲ್ಲಿ ನೋಡಿದರೂ ರೂಪಾಯಿ ಹಾಗೂ ಡಾಲರ್‍ ಬಗ್ಗೆಯೇ ಮಾತು. ಇತ್ತೀಚಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಆಗುತ್ತಿರುವ ರೂಪಾಯಿ ಬೆಲೆಯ ಕುಸಿತದ ಬಗ್ಗೆ ಹಲವಾರು ಚರ್‍ಚೆಗಳು ನಡೆಯುತ್ತಿವೆ. ಈ ವಿಶಯದ ಬಗ್ಗೆ ಮಾತನಾಡದವರೇ ಇಲ್ಲ ಅನ್ನುವಶ್ಟರ ಮಟ್ಟಿಗೆ ರೂಪಾಯಿ ಬೆಲೆ ಕುಸಿತದ ಬಗ್ಗೆ ಮಾತುಕತೆ ನಡೆಯುತ್ತಿದೆ. ಇವತ್ತಿಗೆ ಡಾಲರ್‍ ಬೆಲೆ ಬಾರತದ 65 ರೂಪಾಯಿಗೂ ಹೆಚ್ಚಿದೆ. ಸಾಮಾನ್ಯವಾದ ನಂಬಿಕೆಯಂದರೆ ಬಾರತದ ಹಣಕಾಸಿನ ಮಟ್ಟ ಕುಸಿತ ಕಂಡರೆ, ಬೆಲೆ ಏರಿಕೆ, ಹೆಚ್ಚು ಬಡ್ಡಿದರ, ವ್ಯಾಪಾರದಲ್ಲಿ ನಶ್ಟ ಆಗುತ್ತದೆ ಅನ್ನುವುದಿದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಬಾರತದ ಹಣಕಾಸಿನ ಮಟ್ಟದಲ್ಲಿ ಆಗುತ್ತಿರುವ ಕುಸಿತದಿಂದ ಕೆಲವರು ನಶ್ಟ ಅನುಬವಿಸಿದರೆ ಇನ್ನು ಕೆಲವರು ಲಾಬ ಮಾಡಿಕೊಳ್ಳುತ್ತಿದ್ದಾರೆ. ಹಾಗಿದ್ರೆ ರೂಪಾಯಿ ಕುಸಿತದಿಂದ ಯಾರಿಗೆ ಲಾಬ ಮತ್ತು ಯಾರಿಗೆ ನಶ್ಟ ಅನ್ನುವುದನ್ನು ನೋಡೋಣ.

ನಶ್ಟ ಯಾರಿಗೆ?

ರೂಪಾಯಿ ಬೆಲೆ ಕುಸಿತದಿಂದ ಜಾಗತಿಕ ಮಟ್ಟದಲ್ಲಿ ಕಚ್ಚಾ ವಸ್ತುಗಳನ್ನು ಕೊಳ್ಳಲು ಬೇಕಾಗಿರುವ ಹಣ ಹೆಚ್ಚಾಗುತ್ತದೆ ಇದರ ಪರಿಣಾಮ ಬಾರತದಲ್ಲಿ ಮಾರಾಟವಾಗುವ ವಸ್ತುಗಳ ಬೆಲೆಯೇರಿಕೆಯಾಗುತ್ತದೆ. ಎತ್ತುಗೆಗೆ ಹೊರದೇಶದಿಂದ ತರಿಸಿಕೊಳ್ಳುವ ಸಾಮಾನುಗಳು, ಕಚ್ಚಾ ಎಣ್ಣೆ, ಮುಂತಾದವುಗಳು. ಇದರ ಜೊತೆಗೆ ಪ್ರಪಂಚದೆಲ್ಲೆಡೆ ಇರುವ ಸ್ತಿತಿಯು ಸಹ ಈ ಬೆಲೆ ಏರಿಕೆಗೆ ಕಾರಣವಾಗುತ್ತಿದೆ. ರೂಪಾಯಿ ಬೆಲೆ ಕುಸಿತದಿಂದ ಹೊರದೇಶದಿಂದ ಸಾಲ ತಂದಿರುವ ಕಂಪನಿಗಳಿಗೆ ಹೆಚ್ಚಿನ ಹೊರೆ ಬೀಳಲಿದೆ. ಬಾರ‍್ತಿ ಏರ್‍ಟೆಲ್, ಅಯ್ಡಿಯಾ ಸೆಲುಲಾರ್‍ ಮತ್ತು ರಿಲಾಯನ್ಸ್ ಕಮ್ಯೂನಿಕೇಶನ್ ತಮಗೆ ಬೇಕಿರುವ ಹಣವನ್ನು ಹೊರದೇಶದಿಂದ ತಂದಿದ್ದವು. ಈಗ ರೂಪಾಯಿ ಬೆಲೆ ಇಳಿಕೆಯಿಂದ ಈ ಸಂಸ್ತೆಗಳ ಮೇಲೆ 7300 – 7500 ಕೋಟಿ ರೂಪಾಯಿಗಳ ಹೊರೆ ಬೀಳಲಿದೆಯಂತೆ. ಇದರ ಜೊತೆಗೆ ಕಚ್ಚಾ ಎಣ್ಣೆಯನ್ನು ಆಮದು ಮಾಡಿಕೊಳ್ಳುವ ಸಂಸ್ತೆಗಳ ಮೇಲೂ ಸಹ ದೊಡ್ಡ ಪರಿಣಾಮ ಬೀರಲಿದೆ, ಕಾರಣ ಈಗಿರುವ ಸಬ್ಸಿಡಿಯನ್ನು ಮುಂದುವರೆಸುತ್ತಾ ಹೋದರೆ ನಶ್ಟ ಕಟ್ಟಿಟ್ಟ ಬುತ್ತಿ. ಇದರ ಜೊತೆಗೆ ಕೇವಲ ಬಾರತದ ಉದ್ದಿಮೆಗಳಲ್ಲದೇ ಹಲನಾಡಿನ ಕಂಪನಿಗಳೂ ಸಹ ನಶ್ಟ ಅನುಬವಿಸುತ್ತಿವೆ.

ಲಾಬ ಯಾರಿಗೆ?

ಇಂತಹ ಕೆಟ್ಟ ಪರಿಸ್ತಿತಿಯಲ್ಲೂ ಲಾಬ ಮಾಡಿಕೊಳ್ಳುವ ಸಂಸ್ತೆಗಳಿವೆಯೇ ಅನ್ನುವ ಕೇಳ್ವಿ ಮೂಡಬಹುದು. ಇದಕ್ಕೆ ಉತ್ತರ ಹವ್ದು! ರಿಲಾಯನ್ಸ್ ಇಂಡಸ್ಟ್ರೀಸ್, ಕಾರಿನ್ ಇಂಡಿಯಾ ದಂತಹ ಪೆಟ್ರೋಲಿಯಂ ಸಂಸ್ತೆಗಳು, ಕಚ್ಚಾ ಎಣ್ಣೆಯನ್ನು ಡಾಲರ್‍ ಲೆಕ್ಕದಲ್ಲಿ ಬಾರತಕ್ಕೆ ಮಾರುತ್ತವೆ ಹಾಗಾಗಿ ಇವುಗಳು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಲಾಬ ಮಾಡಿಕೊಳ್ಳುತ್ತವೆ. ಇದರ ಜೊತೆಗೆ ಇಲ್ಲಿ ಸಾಮಾನುಗಳನ್ನು ತಯಾರಿಸಿ ಡಾಲರ್‍ ಲೆಕ್ಕದಲ್ಲಿ ಮಾರುವ ಕಯ್ಗಾರಿಕೆಗಳು, ಡಾಲರ್‍ ಲೆಕ್ಕದಲ್ಲಿ ವ್ಯವಹಾರ ಮಾಡುವ ಅಯ್.ಟಿ ಉದ್ಯಮಗಳು, ಹೆಚ್ಚಿನ ಬೆಲೆಯೆಂಬ ಕಾರಣದಿಂದ  ಹೊರದೇಶದಿಂದ ಸಾಮಾನು ತರಿಸಿಕೊಳ್ಳಲು ಅಗದೇ ಬಾರತದಲ್ಲಿರುವ ಉದ್ಯಮಗಳಿಂದ ಸಾಮಾನುಗಳನ್ನು ಕೊಂಡರೆ ಇಲ್ಲಿನ ಉದ್ಯಮಗಳಿಗೆ ಲಾಬ. ಹೊರದೇಶದಲ್ಲಿ ದುಡಿದು ಬಾರತಕ್ಕೆ ಹಣ ಕಳುಹಿಸುವ ಕೆಲಸಗಾರರೂ ಲಾಬ ಮಾಡಿಕೊಳ್ಳುತ್ತಿರುವವರ ಸಾಲಿಗೆ ಸೇರುತ್ತಾರೆ.

ಹೀಗೆ ಒಂದು ಸಂದರ್‍ಬ ದೇಶದಲ್ಲಿರುವ ಕೆಲವು ಉದ್ದಿಮೆಗಳಿಗೆ ಲಾಬ ಹಾಗೂ ಕೆಲವು ಉದ್ದಿಮೆಗಳಿಗೆ ನಶ್ಟಗಳನ್ನು ಒಟ್ಟಿಗೆ ತಂದೊಡ್ಡಬಹುದು. ಆದರೆ ಏರು-ಪೇರಾಗುವ ಸ್ತಿತಿ ಹೀಗೆಯೇ ಮುಂದುವರೆದರೆ, ಉದ್ದಿಮೆಗಳಿಗೆ ಮುಂದಿನ ದಿನಗಳಿಗೆ ತಕ್ಕ ಯೋಜನೆ ಹಾಕಿಕೊಳ್ಳುವುದು ಕಶ್ಟವಾಗುತ್ತದೆ. ಯೋಜನೆ ಹಾಕಿಕೊಳ್ಳುವುದೇ ಕಶ್ಟ ಎಂಬಂತಾದಾಗ, ಉದ್ದಿಮೆಗಳು ಹೂಡಿಕೆಯನ್ನು ತಡೆಹಿಡಿಯುತ್ತವೆ. ಉದ್ದಿಮೆಗಳು ಹೂಡಿಕೆಯನ್ನು ತಡೆಹಿಡಿದರೆ, ಅಶ್ಟು ಮಟ್ಟಿನ ಕೆಲಸಗಳು ಹುಟ್ಟುಕೊಳ್ಳುವುದು ನಿಂತಂತೆಯೇ. ಇಂತಹ ಬೆಲೆಯೇರಿಕೆಯ ಹೊತ್ತಿನಲ್ಲಿ ಕೆಲಸಗಳೂ ಕಮ್ಮಿಯಾದರೆ, ಜನರಿಗೆ ಹೊರೆ ಜಾಸ್ತಿ. ಹಾಗಾಗಿ, ಏರು-ಪೇರು ಆಗದಂತೆ ತಡೆಯಲು ಹಣಕಾಸಿನ ಮಟ್ಟವನ್ನು ಸಮಾನ ಮಟ್ಟದಲ್ಲಿ ಕಾಯ್ದುಕೊಳ್ಳಬೇಕಾದ ಪರಿಸ್ತಿತಿ ಇದೆ.

(ಚಿತ್ರ: topnews.in)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *