ದೇಶ ಹಾಳಾಗೋಗ್ಲಿ ಹಿಂದಿ ಮಾತ್ರ ಇರಲಿ

ರತೀಶ ರತ್ನಾಕರ

P-906

ದೇಶದ ಹಣಕಾಸಿನ ಸ್ತಿತಿ ಸದ್ಯಕ್ಕೆ ಹದಗೆಟ್ಟಿದೆ. ಕಚ್ಚಾ ಎಣ್ಣೆ, ಚಿನ್ನ ಮತ್ತು ಇತರೆ ವಸ್ತುಗಳನ್ನು ಅತಿ ಹೆಚ್ಚು ಆಮದು ಮಾಡಿಕೊಳ್ಳುವುದರಿಂದ ಜಾಗತಿಕ ಮಟ್ಟದಲ್ಲಿ ಡಾಲರ್‍ ಎದುರು ರೂಪಾಯಿಯ ಬೆಲೆ ಕುಸಿದಿದೆ. ಮಂದಿಗೆ ಬೆಲೆಯೇರಿಕೆಯ ಬಿಸಿ ತಟ್ಟುವ ಮುನ್ಸೂಚನೆಗಳಿವೆ. ಇಂತಹ ಪರಿಸ್ತಿತಿಯಲ್ಲಿ ದೇಶದ ಹಣಕಾಸು ಸ್ತಿತಿಯನ್ನು ಮೇಲೆತ್ತಲು ಕೇಂದ್ರ ಸರಕಾರವು ಹಲವು ಕೆಲಸಗಳನ್ನು ಮಾಡಬೇಕಿದೆ. ದೇಶದಲ್ಲಿ ಪೋಲಾಗಿ ಹೊಗುತ್ತಿರುವ ಹಣಕ್ಕೆ ಕಡಿವಾಣ ಹಾಕಬೇಕಿದೆ, ಈ ನಿಟ್ಟಿನಲ್ಲಿ ಕೇಂದ್ರ ಸರಕಾರವು ಕೆಲವು ಹಣಕಾಸಿನ ಶಿಸ್ತನ್ನು ಪಾಲಿಸಬೇಕಾಗುತ್ತದೆ. ಅಂದರೆ, ಕೇಂದ್ರ ಸರಕಾರವು ಮಂದಿಯ ತೆರಿಗೆ ಹಣವನ್ನು ಪೋಲಾಗಿ ಹೋಗದಂತೆ ನೋಡಿಕೊಂಡು ಬೊಕ್ಕಸವನ್ನು ಕಾಪಾಡಬೇಕು.

ಹಾಗದರೆ, ಕೇಂದ್ರ ಸರಕಾರವು ಈ ಪರಿಸ್ತಿತಿಯಲ್ಲಿ ಹಣಕಾಸಿನ ಶಿಸ್ತನ್ನು ಪಾಲಿಸುತ್ತಿದೆಯೇ? ‘ಇಲ್ಲ’. ಎಂದು ಬೊಟ್ಟುಮಾಡಿ ತೋರಿಸುತ್ತಿವೆ ಸರಕಾರದ ಕೆಲವು ಕಾರ್‍ಯಕ್ರಮಗಳು. ಅದರಲ್ಲಿ ಒಂದು ‘ಹಿಂದಿ ದಿವಸ’ದ ಆಚರಣೆ! ಈ ಹಿಂದಿ ದಿವಸಕ್ಕೆ ಯಾವ ದೊಡ್ಡ ಕರ‍್ಚಾಗುತಪ್ಪ ಎಂದು ಅಂದುಕೊಳ್ಳಬಹುದು, ಆದರೆ ಕೇಂದ್ರ ಸರಕಾರವು 349 ಕೋಟಿ ಹಣವನ್ನು 3 ವರ್‍ಶಗಳ (2009 – 2012) ಹಿಂದಿ ದಿವಸದ ಆಚರಣೆಗೆ ತೆಗೆದಿಟ್ಟಿದೆ! ಹಿಂದಿಯನ್ನು ಉಳಿಸಿಕೊಳ್ಳಲು ಕೇಂದ್ರ ಸರಕಾರ ಮಾಡುತ್ತಿರುವ ಕರ‍್ಚಿನ ಬಗ್ಗೆ ಈ ಕೊಂಡಿಯಲ್ಲಿ ತಿಳಿಯಬಹುದು. ಈ ಬಾರಿಯೂ ಕೂಡ ಹಿಂದಿ ದಿವಸದ ಆಚರಣೆಯನ್ನು ಕಯ್ ಬಿಟ್ಟಿಲ್ಲ. ಹಿಂದಿ ದಿವಸ, ಈಗ ಹಿಂದಿ ವಾರ ಹಾಗು ’ಹಿಂದಿ ಹದಿನಯ್ದು ದಿವಸ’ವಾಗಿ, ಎಲ್ಲಾ ಕೇಂದ್ರ ಸರಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಆಚರಿಸುವಂತೆ ಸರಕಾರ ನೋಡಿಕೊಳ್ಳುತ್ತಿದೆ. ಇದಕ್ಕೆ ಮಂದಿಯ ತೆರಿಗೆ ಹಣವನ್ನು ಮತ್ತುಶ್ಟು ಪೋಲು ಮಾಡುತ್ತಿದೆ.

ಕೇಂದ್ರದ ಮಾನವ ಸಂಪನ್ಮೂಲ ಸಚಿವರಾಗಿದ್ದ ಕಪಿಲ್ ಸಿಬಲ್‍ರವರು, ದೇಶದ ಎಲ್ಲಾ ಸ್ಕೂಲುಗಳಲ್ಲಿ ಹಿಂದಿಯನ್ನು ಕಡ್ಡಾಯವಾಗಿ ಕಲಿಸುವಂತೆ ಸಿ.ಬಿ.ಎಸ್.ಇ (Council of Boards of School Education)ಗೆ 2009 ರಲ್ಲಿ ತಾಕೀತು ಮಾಡಿದ್ದರು. ಅದಕ್ಕಾಗಿ, 68000 ಕ್ಕೂ ಹೆಚ್ಚಿನ ಕೇಂದ್ರ ಸರಕಾರಿ ಕೆಲಸಗಾರರಿಗೆ ಹಿಂದಿ ಕಲಿಯುವ ತರಬೇತಿ ನೀಡಲಾಗಿದೆ. ಸುಮಾರು 20000 ಕೆಲಸಗಾರರಿಗೆ ಅಂಚೆ ಕಲಿಕೆ ಹಾಗು ನೇರ ತರಬೇತಿ ಮೂಲಕ ತರಬೇತಿ ನೀಡಲಾಗಿದೆ. ಈ ಎಲ್ಲಾ ಕಾರ‍್ಯಕ್ರಮಗಳಿಗೆ ಮಂದಿಯ ತೆರಿಗೆ ಹಣ ದುಂದು ವೆಚ್ಚವಾಗಿ ಕರ‍್ಚಾಗಿದೆ.

ನುಡಿಯ ಹಲತನದಿಂದ ಕೂಡಿರುವ ಈ ದೇಶದಲ್ಲಿ ‘ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ’ ಅನ್ನುವ ಹಾಗೆ ಕೇಂದ್ರ ಸರಕಾರವು ಹಿಂದಿಗೆ ಬೇರೆಲ್ಲಾ ನುಡಿಗಳಿಗಿಂತ ಹೆಚ್ಚಿನ ಮನ್ನಣೆ ನೀಡುತ್ತಿದೆ. ಕಶ್ಟದ ಹಣಕಾಸು ಸ್ತಿತಿಯಲ್ಲಿಯೂ ಕೂಡ ಹಿಂದಿ ದಿವಸದ ಆಚರಣೆಗೆ ಮುಂದಾಗಿರುವುದನ್ನು ನೋಡಿದರೆ ಹಿಂದಿಯೇತರ ಮಂದಿಯ ಮೇಲೆ ಹಿಂದಿ ಹೇರಿಕೆಗೆ ಟೊಂಕ ಕಟ್ಟಿ ನಿಂತಂತಿದೆ. ‘ಏನಾದರು ಆಗಲಿ ನಾವು ಹಿಂದಿ ಹೇರಿಕೆ ಮಾಡಿಯೇ ತೀರುತ್ತೇವೆ’ ಎನ್ನುವ ದೋರಣೆ ಕೇಂದ್ರ ಸರಕಾರದ ಕೆಲಸಗಳಲ್ಲಿ ಕಾಣಸಿಗುತ್ತಿದೆ. ಹಣಕಾಸು ಶಿಸ್ತನ್ನು ಪಾಲಿಸಿ ದೇಶದ ಹಣಕಾಸು ಸ್ತಿತಿಯನ್ನು ಮೇಲೆತ್ತಲು, ಹಿಂದಿ ದಿವಸಗಳಂತಹ ತಾರತಮ್ಯ ಎಸಗುವ ಕೆಲಸಗಳನ್ನು ಮೊದಲು ನಿಲ್ಲಿಸುವ ಮೂಲಕ ಬೇಡದ ವೆಚ್ಚಗಳನ್ನು ತಡೆಹಿಡಿಯಬೇಕಾಗಿದೆ.

(ಚಿತ್ರ: ಪೋಟೋ ಡಿವಿಶನ್)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *