ಕೋ ಕೋ ಆಟ

– ಶ್ಯಾಮಲಶ್ರೀ.ಕೆ.ಎಸ್.

ಕೋ ಕೋ ನಮ್ಮ ದೇಸೀಯ ಆಟಗಳಲ್ಲೊಂದಾದ ಅತೀ ಜನಪ್ರಿಯ ಆಟ. ಬಾರತವಲ್ಲದೇ ದಕ್ಶಿಣ ಏಶ್ಯಾದ ಕೆಲವು ಪ್ರಮುಕ ಬಾಗಗಳಲ್ಲಿಯೂ ಆಡುವುದರಿಂದ ದಕ್ಶಿಣ ಏಶ್ಯಾದ ಸಾಂಪ್ರದಾಯಿಕ ಆಟ ಎಂದೇ ಕೋ ಕೋ ವನ್ನು ಗುರುತಿಸಲಾಗಿದೆ. ಕೋ ಕೋ ಆಟದ ಮೂಲ ನಿಕರವಾಗಿ ತಿಳಿಯದಿದ್ದರೂ, ಮಹಾರಾಶ್ಟ್ರ ಎನ್ನುವ ಅಬಿಪ್ರಾಯವಿದೆ.

ಶಾಲಾ ದಿನಗಳಲ್ಲಿ ಈ ಆಟವನ್ನು ಆಡಿರುವವರು ಎಂದಿಗೂ ಮರೆಯಲು ಸಾದ್ಯವಿಲ್ಲ. ಹಿಂದೆ ಕಬಡ್ಡಿ, ಕೋ ಕೋ ಎಲ್ಲಾ ಶಾಲೆಗಳಲ್ಲೂ ಕಡ್ಡಾಯವಾಗಿ ಆಡುತ್ತಿದ್ದಂತಹ ಅಚ್ಚು ಮೆಚ್ಚಿನ ಆಟಗಳು. ಈಗಲೂ ಸಹ ಈ ಆಟಗಳು ಅಸ್ತಿತ್ವದಲ್ಲಿರುವುದು ಸಂತಸದ ವಿಶಯ. ಕೋ ಕೋ ಒಂದು ಆಯತಾಕಾರದ ಅಂಕಣದಲ್ಲಿ, ಬೆನ್ನಟ್ಟಿ ಓಡಿ ಮುಟ್ಟಿಸುವ ಆಟ. ಮೇಲ್ನೋಟಕ್ಕೆ ಈ ಆಟ ಸರಳವಾಗಿ ಕಂಡರೂ, ಆಕ್ರಮಣಕಾರಿ ತಂಡದವರಿಂದ ತಪ್ಪಿಸಿಕೊಳ್ಳಲು ಎದುರಾಳಿ ತಂಡದ ಆಟಗಾರರು ನೈಪುಣ್ಯತೆಯಿಂದ ಪ್ರದರ‍್ಶಿಸುವ ಕುತೂಹಲಕಾರಿ ಆಟ. ಈ ಆಟ ಹುಡುಗರು ಮಾತ್ರವಲ್ಲದೆ ಹುಡುಗಿಯರೂ ಕೂಡ ಆಡುವಂತ ಅದ್ಬುತ ಆಟ. ಎಶ್ಟೋ ಶಾಲೆಗಳು ತಾಲೂಕು, ಜಿಲ್ಲಾ, ರಾಜ್ಯ ಮಟ್ಟ ಹಾಗೂ ರಾಶ್ಟ್ರಮಟ್ಟಗಳಲ್ಲಿಯೂ ಗುರುತಿಸಿಕೊಂಡಿವೆ.

ಕೋ ಕೋ ವನ್ನು 27*16 ಮೀ ಅಳತೆಯ ಮೈದಾನದಲ್ಲಿ ಆಡಲಾಗುತ್ತದೆ. ಕೋ ಕೋ ಆಡಲು ಅನುಕೂಲವಾಗಿರುವ ಗೆರೆಗಳನ್ನು ಬೋರಿಕ್ ಪುಡಿಯಿಂದ ಎಳೆದಿರಲಾಗುತ್ತದೆ. ಆಯತಾಕಾರದ ಪೆಟ್ಟಿಗೆಯ ನಡುವಿನ ಎರಡು ತುದಿಯಲ್ಲಿ ಒಂದೊಂದು ಮರದ ಸ್ತಂಬವನ್ನು ನಿಲ್ಲಿಸಲಾಗುವುದು. ಕಂಬದಿಂದ ಕಂಬಕ್ಕೆ 24 ಮೀ ಉದ್ದ ಮತ್ತು 30 ಸೆಂ.ಮೀ. ಅಗಲ ಅಳತೆಯ ಒಂದು ದೊಡ್ಡ ಓಣಿಯನ್ನು ಎಳೆಯಲಾಗುವುದು. ಈ ಓಣಿಗೆ 35 ಸೆಂ.ಮೀ. ಅಗಲ ಅಳತೆಯ 8 ಅಡ್ಡ ಓಣಿಗಳನ್ನು ಹಾಕಲಾಗುವುದು.

ಆಟದ ಕಟ್ಟಳೆಗಳು:

ಕೋ ಕೋ ಆಟದಲ್ಲಿ ಎರಡು ತಂಡಗಳಿರುತ್ತವೆ. ಒಟ್ಟಾರೆ 24 ಜನ ಆಟಗಾರರಿರುತ್ತಾರೆ. ಒಂದೊಂದು ತಂಡದಲ್ಲಿ ತಲಾ 12 ಮಂದಿ ಆಟಗಾರರಿರುತ್ತಾರೆ. ಸ್ಪರ‍್ದೆಯಲ್ಲಿ ಕಣಕ್ಕಿಳಿಯುವವರು 9 ಜನ ಮತ್ತು 3 ಜನ ಹೆಚ್ಚುವರಿ ಆಟಗಾರರು. ಒಂದು ಪಂದ್ಯದಲ್ಲಿ ಎರಡು ಸರದಿಗಳಿರುತ್ತವೆ. ಪ್ರತಿ ಸರದಿಯೂ 9 ನಿಮಿಶದ್ದಾಗಿರುತ್ತದೆ.

ಮೊದಲ ತಂಡದ 9 ಮಂದಿ ಕ್ರೀಡಾಳುಗಳಲ್ಲಿ 8 ಜನ ಸ್ಪರ‍್ದಿಗಳು ಅಂಕಣದ ಮದ್ಯದ ಸಾಲಿನ ಚೌಕಗಳಲ್ಲಿ ಅಕ್ಕ ಪಕ್ಕ, ವಿರುದ್ದ ದಿಕ್ಕಿಗೆ ಮುಕ ಮಾಡಿ ಮಂಡಿಯೂರಿ ಕೂರುತ್ತಾರೆ. ಒಬ್ಬರು ಅಂಕಣದ ಕಂಬದ ಬಳಿ ನಿಂತು ವಿರೋದಿ ಬಣದ ಆಟಗಾರರನ್ನು ಬೆನ್ನಟ್ಟಲು ಸಜ್ಜಾಗುತ್ತಾರೆ. ಎದುರಾಳಿ ತಂಡದ ಮೂವರು ಮಂದಿ ಓಟಗಾರರು ಅಂಕಣಕ್ಕೆ ಇಳಿಯುತ್ತಾರೆ. ಜೊತೆಗೆ ಬೆನ್ನು ಹತ್ತಿ ಬರುವ ಆಕ್ರಮಣಕಾರಿ ಸ್ಪರ‍್ದಿಗಳಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ಇವರು ಕುಳಿತಿರುವವರ ಸಾಲಿನ ನಡುವೆ ಓಡಬಹುದು. ಬೆನ್ನಟ್ಟುವ ಆಟಗಾರ, ಸಾಲನ್ನು ಸುತ್ತಿಯೇ ಬರಬೇಕು ಹಾಗೂ ಔಟ್ ಮಾಡಲು ಅನುಕೂಲವಾಗುವಂತೆ ಕುಳಿತಿರುವವರ ಬೆನ್ನಿನ ಹಿಂದೆ ‘ಕೋ’ ಎಂದು ಹೇಳಿ ಮುಟ್ಟಬೇಕು. ಕೋ ಹೇಳಿಸಿಕೊಂಡಾತ ವಿರೋದಿ ತಂಡದವರನ್ನು ಹಿಡಿಯಲು ಮುಂದುವರೆಯಬೇಕು. ಮುಟ್ಟಿದಾತ ಓಡಿಸುವವನ ಜಾಗದಲ್ಲಿ ಕೂರಬೇಕು.

ಹೀಗೆ ಆಟವು ಮುಂದುವರೆದು ಎರಡು ಸರದಿಯ ನಂತರ ಆಟಗಾರರ ಪಾತ್ರ ಬದಲಾವಣೆಯಾಗುವುದು. ಯಾವ ತಂಡ ನಿಗದಿತ ಅವದಿಯಲ್ಲಿ ಅತವಾ ಅತೀ ಕಡಿಮೆ ಅವ‌ದಿಯಲ್ಲಿ ತಪ್ಪಿಸಿಕೊಳ್ಳುವವರನ್ನು ಔಟ್ ಮಾಡುತ್ತಾರೋ ಆ ತಂಡ ಗೆಲ್ಲುತ್ತದೆ. ಕೋ ಕೋ ಆಟ ಆಡುವ ವ್ಯಕ್ತಿಯ ಮನಸ್ಸು ಕ್ರಿಯಾಶೀಲ ಹಾಗೂ ಶರೀರ ಸದಾ ಚಟುವಟಕೆಯಿಂದ ಇರುವಂತೆ ಕಾಯುತ್ತದೆ.

(ಚಿತ್ರಸೆಲೆ: khokhoskills.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *