ಮಾಡಿ ನೋಡಿ ಮಟನ್ ದಮ್ ಬಿರಿಯಾನಿ

– ನಿತಿನ್ ಗೌಡ.

ಏನೇನು ಬೇಕು ?

  • ಮಟನ್ – 400 ಗ್ರಾಂ
  • ಬೆಳ್ಳುಳ್ಳಿ- 14 ಎಸಳು
  • ಶುಂಟಿ – 2 ಇಂಚು
  • ಹಸಿ ಮೆಣಸು – 6
  • ಪುದೀನ – ಒಂದು ಹಿಡಿ
  • ಕೊತ್ತಂಬರಿ – ಒಂದು ಹಿಡಿ
  • ಅರಿಶಿಣ – ಅರ‌್ದ ಚಮಚ
  • ಉಪ್ಪು- ರುಚಿಗೆ ತಕ್ಕಶ್ಟು
  • ತುಪ್ಪು – ಸ್ವಲ್ಪ
  • ಗೋಡಂಬಿ – 7 ರಿಂದ 8
  • ಎಣ್ಣೆ – ಸ್ವಲ್ಪ
  • ಈರುಳ್ಳಿ – 2
  • ಟೊಮೊಟೊ – 3
  • ದನಿಯಾ ಪುಡಿ – 1 ಚಮಚ
  • ಬಾಸ್ಮತಿ ಅಕ್ಕಿ – 2 ಲೋಟ  ( 4 ಜನಕ್ಕೆ )
  • ಚಕ್ಕೆ – 4-5 ಸಿಪ್ಪೆ
  • ಏಲಕ್ಕಿ – 4
  • ಲವಂಗ – 4
  • ಮರಾಟಿ/ಸ್ಟಾರ್ ಮೊಗ್ಗು – 1
  • ಬಿರಿಯಾನಿ ಎಲೆ – 2
  • ಬಿರಿಯಾನಿ ಮಸಾಲೆ – ಅರ್‍ದ ಚಮಚ
  • ಕಾರದ ಪುಡಿ – ಒಂದು ಚಮಚ
  • ಮೊಸರು – ಒಂದು ಕಪ್ಪು

ಮಾಡುವ ಬಗೆ:

ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ‌ ತೊಳೆದಿಟ್ಟುಕೊಳ್ಳಿರಿ. ಆಮೇಲೆ ಮಟನ್ ಅನ್ನು ಚೆನ್ನಾಗಿ ತೊಳೆದುಕೊಳ್ಳಿರಿ. ಈಗ ಒಂದು ಕುಕ್ಕರ್ ಒಂಚೂರು ಎಣ್ಣೆ ಮತ್ತು ತುಪ್ಪ ಹಾಕಿ , ಮಟನ್, ಅರಿಶಿಣ ಪುಡಿ, ಉಪ್ಪು, ಸ್ವಲ್ಪ ಕೊತ್ತಂಬರಿ, ಪುದೀನ ಹಾಕಿ ಕಲಸಿ ಒಂದು ಲೋಟ ನೀರು ಹಾಕಿ, ಕುಕ್ಕರ್ ಮುಚ್ಚಳ ಹಾಕಿ ಒಂದು ಐದರಿಂದ ಆರು ಶೀಟಿ ಹೊಡಿಸಿ. ಈಗ ಬೆಳ್ಳುಳ್ಳಿ, ಶುಂಟಿ ಪೇಶ್ಟ್ ಮಾಡಿಟ್ಟುಕೊಳ್ಳಿರಿ. ಈಗ ಮಿಕ್ಸಿಗೆ ಒಂದು ಹೆಚ್ಚಿಟ್ಟುಕೊಂಡ ಈರುಳ್ಳಿ, ಮೆಣಸಿನಕಾಯಿ, ಪುದೀನ, ಕೊತ್ತಂಬರಿ ಸೊಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿರಿ. ಈಗ ಒಂದು ಪಾತ್ರೆಗೆ ಸ್ವಲ್ಪ ಎಣ್ಣೆ ಮತ್ತು ತುಪ್ಪ ಹಾಕಿ ಅದಕ್ಕೆ ಗೋಡಂಬಿ, ಬಿರಿಯಾನಿ ಪದಾರ್‍ತ ಅಂದರೆ; ಪಲಾವು ಎಲೆ, ಮರಾಟಿ ಮೊಗ್ಗು, ಏಲಕ್ಕಿ, ಲವಂಗ, ಸ್ಟಾರ್ ಮೊಗ್ಗು, ಚಕ್ಕೆ, ಸೋಂಪು, ಜೀರಿಗೆ ಹಾಕಿ ಸಣ್ಣನೆಯ ಉರಿಯಲ್ಲಿ ಹುರಿದುಕೊಳ್ಳಿರಿ. ಈಗ ಇದಕ್ಕೆ ಉದ್ದನೆಯದಾಗಿ ಹೆಚ್ಚಿಟ್ಟುಕೊಂಡ ಈರುಳ್ಳಿ ಹಾಕಿ, ಶುಂಟಿ ಬೆಳ್ಳುಳ್ಳಿ ಪೇಶ್ಟ್ ಹಾಕಿ ಕಂದು ಬಣ್ಣ ಬರುವ ವರೆಗೆ ಹುರಿದಿಟ್ಟುಕೊಳ್ಳಿರಿ. ಈಗ ಇದಕ್ಕೆ ಕಸ್ತೂರಿ ಮೇತಿ ಮತ್ತು ರುಬ್ಬಿಟ್ಟುಕೊಂಡ ಮಸಾಲೆ ಹಾಕಿ, ಮಸಾಲೆಯ ಹಸಿಗಮ ಹೋಗುವವರೆಗೆ ಹುರಿಯಿರಿ. ಈಗ ಇದಕ್ಕೆ ಹೆಚ್ಚಿಟ್ಟುಕೊಂಡ ಟೊಮೊಟೊ, ಮೊಸರು ಹಾಕಿರಿ.

ಈಗ ಪಕ್ಕದಲ್ಲಿ ಬೇಯಿಸಿಕೊಂಡ ಮಟನ್ ಅನ್ನು ಇದಕ್ಕೆ ಹಾಕಿರಿ. ನಂತರ ಬಿರಿಯಾನಿ ಮಸಾಲೆ, ಕಾರದಪುಡಿ, ಅರಿಶಿಣ, ದನಿಯಾ ಪುಡಿ ಹಾಕಿ ಕಲಸಿ, ಉಳಿದ ಮೂರು ಲೋಟ ನೀರು ಹಾಕಿ. ನೆನಪಿರಲಿ ಎರಡು ಲೋಟ ಅಕ್ಕಿಗೆ ಒಟ್ಟಾರೆಯಾಗಿ 4 ಲೋಟ ನೀರು ಹಾಕಬೇಕು. ಈಗ ಇದು ಒಂದು ಕುದಿ ಬಂದಮೇಲೆ, ಇದಕ್ಕೆ ತೊಳೆದಿಟ್ಟುಕೊಂಡ ಅಕ್ಕಿ ಹಾಕಿ, ಚೂರು ಕಲಸಿ ಮುಚ್ಚಳ ಮುಚ್ಚಿ ಒಂದು ಹತ್ತು ನಿಮಿಶ ಬಿಡಿ. ಈಗ ಸ್ವಲ್ಪ ನೀರು ಆರಿರುತ್ತದೆ. ಈಗ ಪಾತ್ರೆಯನ್ನು ಸಿಲ್ವರ್ ಪೇಪರ್ ಅಲ್ಲಿ ಸುತ್ತಿ, ಮುಚ್ಚಳ ಮುಚ್ಚಿ ,ಮುಚ್ಚಳದ ಮೇಲೆ ಚಿಕ್ಕ ಕಲ್ಲು ಇಡಿ. ಸ್ವಲ್ಪ ಹೊತ್ತಿನ ನಂತರ ಒಲೆ ಆರಿಸಿ. ಈಗ ಬಿಸಿ ಬಿಸಿ ದಮ್ ಬಿರಿಯಾನಿ ತಯಾರಿದೆ. ಮೊಸರು ಬಜ್ಜಿ, ಜೊತೆ ಇದನ್ನು ಸವಿಯಬಹುದು.

( ಚಿತ್ರಸೆಲೆ: ಬರಹಗಾರರು )

 

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *