ಸಣ್ಣಕತೆ: ನಮ್ಮ ಸಂವಿದಾನ

– .

ಲಾಯರ್ ನಿರ್‍ಮಲಾ ವರುಣ್ ಕರಿ ಕೋಟು ದರಿಸಿ ‘ಆಡಿ’ ಕಾರು ಏರಿ ಮನೆಯ ಗೇಟು ದಾಟಿ ಸಾಗುವಾಗ ಮನೆಯ ಮುಂದಿನ ಸಾಲಿನಲ್ಲಿ ಬಹುಮಹಡಿ ಕಟ್ಟಡದ ಕಾಮಗಾರಿ ನಡೆಯುವ ಪಕ್ಕದ ಜೋಪಡಿಯಲ್ಲಿ ವಾಸವಿರುವ ವಾಚ್‌ಮನ್ ಆಂಜನೇಯನ ಮಗಳು ಸಾವಿತ್ರಿಯತ್ತ ನೋಡಿ ಮುಗುಳ್ನಕ್ಕು ಟಾಟಾ ಮಾಡಿದಳು. ಪ್ರತಿಯಾಗಿ ನಿರ್‍ಮಲಾ ಮುಗುಳ್ನಕ್ಕು ಟಾಟಾ ಮಾಡಿ ಕಾರು ಮುಂದಕ್ಕೆ ಚಲಾಯಿಸಿದಳು.

ನಿತ್ಯ ಹಲವಾರು ಕೇಸು ನಿಬಾಯಿಸುವ ವಕೀಲೆ ನಿರ್‍ಮಲಾ ವರುಣ್ ಕೋರ‍್ಟಿನಲ್ಲಿ ಸತತ ಸರಣಿ ವಾದ ಮಾಡಿ ಸುಸ್ತಾಗಿ ಬಿಡುತಿದ್ದಳು. ವಾದ ಮಾಡಿ ಕೇಸು ಗೆಲ್ಲಬೇಕು ಎನ್ನುವ ಈ ಚಲಗಾತಿ, ನಿತ್ಯ ಅದಕ್ಕಾಗಿ ಹಲವು ಗಂಟೆಗಳು ಕಾನೂನು ಪುಸ್ತಕದ ಆಳವಾದ ಅದ್ಯಯನ ನಡೆಸುತಿದ್ದಳು. ಎಶ್ಟೋ ಕೇಸುಗಳಿಗೆ ನ್ಯಾಯದೀಶರು ಕೊಟ್ಟ ತೀರ‍್ಪಿನ ಡ್ರಾಪ್ಟ್ ಓದಿ ಮನನ ಮಾಡಿಕೊಳ್ಳುತಿದ್ದಳು. ಈಕೆ ಹೆಚ್ಚಾಗಿ ಮಹಿಳಾ ಸ್ವಾತಂತ್ರ್ಯ ಮತ್ತು ಮಹಿಳಾ ಹಕ್ಕುಗಳ ಬಗ್ಗೆ ಆಸ್ತೆವಹಿಸಿ ಮಹಿಳೆಯರಿಗೆ ನ್ಯಾಯ ಕೊಡಿಸಲು ಹೋರಾಡುತಿದ್ದಳು.

ಸಂಜೆ ಕೋರ‍್ಟಿನಿಂದ ಮನೆಗೆ ಬಂದ ನಿರ್‍ಮಲಾ ಕರಿ ಕೋಟು ಬಿಚ್ಚಿ ಗೊಡೆಯ ಗೂಟಕ್ಕೆ ನೇತು ಹಾಕಿ ಸೋಪಾ ಮೇಲೆ ನಿರಾಳವಾಗಿ ಕುಳಿತು, “ಅಮ್ಮ… ಒಂದು ಕಪ್ ಬಿಸಿ ಕಾಪಿ ಮಾಡಿಕೊಡು, ತಲೆ ಸಿಡಿತಿದೆ” ಎಂದು ಕೂಗಿ ಹೇಳಿ ಅರೆ ನಿದ್ರೆಗೆ ಜಾರಿದಂತೆ ಕುಳಿತಳು.

“ಆಂಟಿ… ಕಾಪಿ ತಗೊಳಿ” ಎಂದು ಪುಟ್ಟ ಬಾಲೆ ಸಾವಿತ್ರಿ ಟ್ರೇ ಹಿಡಿದು ಕೂಗಿದಾಗ ನಿದ್ರೆಯಿಂದ ಎಚ್ಚೆತ್ತು ಸಾವಿತ್ರಿಯನ್ನು ಕಂಡು “ಅರೇ ನೀನು” ಎಂದು ಮುಗುಳ್ನಕ್ಕು ಕಾಪಿ ಕಪ್ ತೆಗೆದುಕೊಂಡು ಕಾಪಿ ಹೀರುತ್ತ ದೀರ‍್ಗವಾದ ಉಸಿರು ಬಿಟ್ಟರು.

ಮನೆಯ ಎದುರಿನ ಜೋಪಡಿಯಲ್ಲಿ ವಾಸಿಸುವ ವಾಚ್‌ಮನ್ ಆಂಜನೇಯನ ಹೆಂಡತಿ ನಿಂಗಮ್ಮ ಲಾಯರ್ ಮನೆಯ ಕೆಲಸಕ್ಕೆ ಬರುತಿದ್ದಳು, ಅವಳ ಹಿಂಬಾಲಕಳಾಗಿ ಮಗಳು ಸಾವಿತ್ರಿಯೂ ಬಂದು ಮನೆ ಕೆಲಸದಲ್ಲಿ ಅಮ್ಮನಿಗೆ ನೆರವಾಗುತಿದ್ದಳು. ಸಾವಿತ್ರಿಗೆ ಆಗಲೆ ಎಂಟು ವರ‍್ಶವಿರಬಹುದು ಶಾಲೆಗೆ ದಾಕಲಾಗದೆ ಅಮ್ಮನ ಜೊತೆಗೆ ಮನೆ ಮನೆಯ ಕಸಮುಸುರೆ ಕೆಲಸಕ್ಕೆ ಹೋಗಿ ನೆರವಾಗುತಿದ್ದಳು. ಕಾಪಿ ಹೀರುತ್ತಿದ್ದ ನಿರ್‍ಮಲಾ, ಸಾವಿತ್ರಿಯನ್ನು ಕರೆದು ಮ್ರುದುವಾಗಿ ಬೆನ್ನು ತಟ್ಟುತ್ತ “ನೀನು ಶಾಲೆಗೆ ಹೋಗುತ್ತಿಲ್ಲೇನು…?” ಎಂದು ಕೇಳಿದಳು. “ಇಲ್ಲ ಆಂಟೀ…” ಎಂದಳು.

ದೇಶದ ಸಂವಿದಾನ ಮಹಿಳೆಯರಿಗೆ ಸಮಾಜದಲ್ಲಿ ಸಮಾನ ಹಕ್ಕು ನೀಡಿದ್ದರು ಬಡತನದ ಕಾರಣಕ್ಕೆ ಸಾಮಾಜಿಕ, ಆರ‍್ತಿಕ ಹಿನ್ನಡೆ ಸಾದಿಸುವವಳು ಮಹಿಳೆಯೇ ಆಗಿದ್ದಾಳೆ ಎಂಬುದನ್ನರಿತಿದ್ದ ನಿರ್‍ಮಲಾ, “ಸಾವಿತ್ರಿ, ಹೋಗಿ ನಿನ್ನ ಅಮ್ಮನನ್ನು ಕರಿ” ಎಂದಳು. ನಿಂಗಮ್ಮ ಒದ್ದೆಯಾದ ಕೈಯನ್ನು ಸೆರಗಿಗೆ ಒರೆಸಿ ಕೊಳ್ಳುತ್ತ “ಅಮ್ಮವರೇ ಕರದ್ರ…” ಎಂದು ಲಾಯರ್ ಎದುರಿಗೆ ಬಂದು ನಿಂತಳು.

“ಹೂಂ… ನಿಂಗಮ್ಮ … ನೋಡಮ್ಮ ನಮ್ಮ ದೇಶದ ಸಂವಿದಾನ ಮತ್ತು ಕಾನೂನು ಬಾಲ ಕಾರ‍್ಮಿಕ ನಿಶೇದ ಕಾಯ್ದೆ ಜಾರಿ ಮಾಡಿದೆ, ಬಾಲಕಾರ‍್ಮಿಕ ನಿಶೇದ ಮತ್ತು ನಿಯಂತ್ರಣ ಕಾಯಿದೆ, 1986ರ ಅಡಿಯಲ್ಲಿ ಯಾವುದೇ ಮಗುವನ್ನು ತನ್ನ 14ನೇ (ಹದಿನಾಲ್ಕನೇ) ವರ‍್ಶವನ್ನು ಪೂರ‍್ಣಗೊಳಿಸಿಲ್ಲದ ಸಂದರ‍್ಬದಲ್ಲಿ ಯಾರದಾರೂ ಆ ಮಕ್ಕಳನ್ನು ಕೆಲಸಕ್ಕೆ ನೇಮಿಸುವುದಾಗಲಿ, ನೇಮಿಸಿಕೊಳ್ಳುವುದಾಗಲಿ ಶಿಕ್ಶಾರ‍್ಹ ಅಪರಾದ. ಮಕ್ಕಳಿಗೆ ಕಡ್ಡಾಯ ಶಿಕ್ಶಣದ ಕಾನೂನಿದೆ. ಮಕ್ಕಳು ಕಡ್ಡಾಯವಾಗಿ ಶಾಲೆಗೆ ದಾಕಲಾಗಿ ಶಿಕ್ಶಣ ಪಡೆಯಬೇಕು. ಇಲ್ಲದಿದ್ದರೆ ನೀನು, ನಿನ್ನ ಗಂಡ ಶಿಕ್ಶೆಗೆ ಗುರಿಯಾಗುತ್ತೀರಿ”

“ಹೌದು ಅಮ್ಮವರ‍್ರೇ ನೀವು ಹೇಳೋದೇನೋ ಸರಿ ಆದ್ರೆ ದಿನ ಹೊಟ್ಟೆ ತುಂಬುಸ್ಕೊಳೊದೆ ಕಶ್ಟ ಆಗೈತೆ, ಇನ್ನೂ ಮಗಿಗೆ ಇಸ್ಕೋಲಿಗೆ ಎಲ್ಲಿ ಕಳ್ಸೋನಾ? ಗಂಡ ಬೇರೆ ಹುಟ್ಟು ಕುಡ್ಕ, ಸರಿಯಾಗಿ ದುಡಿಯಂಗಿಲ್ಲ, ದುಡಿದಿದ್ದೆಲ್ಲ ಅವನ ಕುಡ್ತಕ್ಕೆ ಆಯ್ತು ಇನ್ನು ಜೀವನಕ್ಕೆ ಏನು ಮಾಡಾನ ಹೇಳಿ?”

“ಹೌದು ನಿಂಗಮ್ಮ ನಿನ್ನ ಕಶ್ಟ ನನಗೆ ಅರ‍್ತ ಆಗುತ್ತೆ. ಆದರೆ ಮಕ್ಕಳ ಮೂಲಬೂತ ಹಕ್ಕಿನಲ್ಲಿ ಶಿಕ್ಶಣನೂ ಒಂದು. ಅದರಲ್ಲೂ ಹೆಣ್ಣು ಮಕ್ಕಳು ಶಿಕ್ಶಣದಿಂದ ವಂಚಿತರಾಗಲೇಬಾರ‍್ದು. ಸರ‍್ಕಾರ ಮಕ್ಕಳಿಗೆ ಕಡ್ಡಾಯ ಶಿಕ್ಶಣವನ್ನು ಉಚಿತವಾಗಿ ನೀಡುತ್ತಿದೆ. ನೀನು ಮಗಳಿಗೆ ಶಾಲೆಗೆ ಸೇರಿಸು. ಅವಳ ಶಿಕ್ಶಣಕ್ಕೆ ಬರುವ ವೆಚ್ಚವನ್ನು ನಮ್ಮ ಮಹಿಳಾ NGO ನಿಂದ ಬರಿಸುವ ಪ್ರಯತ್ನ ಮಾಡುತ್ತೇನೆ, ಅಶ್ಟಕ್ಕೂ ನಿಂಗಮ್ಮ… ನಮ್ಮ ಸಂವಿದಾನ ಮಹಿಳೆಯರಿಗೆ ವಿಶೇಶ ಹಕ್ಕು ಮತ್ತು ಸೌಲಬ್ಯಗಳು ಕೊಟ್ಟಿದೆ. ಸಂವಿದಾನದಲ್ಲಿ ಮಹಿಳೆಯರಿಗೆ ಒದಗಿಸಿರುವ ಸವಲತ್ತುಗಳು ಹೀಗಿವೆ,

  • 14ನೇ ವಿದಿಯ ಪ್ರಕಾರ ಕಾನೂನು ಮುಂದೆ ಎಲ್ಲರು ಸಮಾನರು.
  • 15ನೇ ವಿದಿಯ ಪ್ರಕಾರ ದರ‍್ಮ, ಜಾತಿ, ಲಿಂಗ, ಬಾಶೆ, ಜನ್ಮಸ್ತಳ ಇವುಗಳ ಆದಾರದ ಮೇಲೆ ತಾರತಮ್ಯ ಮಾಡುವಂತಿಲ್ಲ.
  • 16ನೇ ವಿದಿಯ ಪ್ರಕಾರ ಸಾರ‍್ವಜನಿಕ ಹುದ್ದೆಗಳನ್ನು ಹೊಂದಲು
  • 39(ಅ) ಸ್ತ್ರೀ ಅತವಾ ಪುರುಶರು ಎಂಬ ಬೇದಬಾವವಿಲ್ಲದೆ ಜೀವನಕ್ಕೆ ಅವಶ್ಯಕವಾದ ಸಾದನಗಳನ್ನು ಒದಗಿಸುವ ನೀತಿ ಜಾರಿ.
  • 1961ಲ್ಲಿ ಮೆಟರ್‍ನಿಟಿ ಬೆನಿಪಿಟ್ ಕಾಯ್ದೆ.
  • 1955ರಲ್ಲಿ ಹಿಂದೂ ವಿವಾಹ ಅದಿನಿಯಮ ಕಾಯ್ದೆ ಜಾರಿಗೆ ಇದರಲ್ಲಿ ವಿಚ್ಚೇದ ವಿಶಯವು ಬರುತ್ತದೆ.
  • 1955 ವಿವಾಹ ನೋಂದಾಯಿತ ಕಾಯ್ದೆ.
  • 1956 ಹಿಂದೂ ವಾರಸಾ ಅದಿನಿಯಮ ಕಾಯ್ದೆ ಜಾರಿಗೆ – ತವರು ಮನೆಯ ಆಸ್ತಿಯ ಹಕ್ಕನ್ನು ಪಡೆಯುವುದು.
  • 1961ರಲ್ಲಿ ಪ್ರಸೂತಿ ಸೌಲಬ್ಯ ಕಾಯ್ದೆ.
  • 1971ರಲ್ಲಿ ವೈದ್ಯಕೀಯ ಗರ‍್ಬ ನಿವಾರಣ ಕಾಯ್ದೆ.
  • 1976ರಲ್ಲಿ ಸಮಾನ ವೇತನ ಕಾಯ್ದೆ.
  • 1961ರಲ್ಲಿ ವರದಕ್ಶಿಣೆ ನಿಶೇದ ಕಾಯ್ದೆ.
  • 1956ರಲ್ಲಿ ಹಿಂದೂ ದತ್ತ ಜೀವನಾಂಶಗಳ ಕಾಯ್ದೆ ಜಾರಿಗೆ ತಂದಿದೆ.

ಆದ್ದರಿಂದ ನೀನು ಮಗಳಿಗೆ ಒಳ್ಳೆಯ ಶಿಕ್ಶಣ ಕೊಟ್ಟು ಈ ದೇಶದ ಒಬ್ಬ ಉತ್ತಮ ಪ್ರಜೆಯನ್ನು ನಿರ‍್ಮಾಣ ಮಾಡುವುದು ನಿನ್ನ ಕರ‍್ತವ್ಯ” ಎಂದಳು.

“ಏನ್ರಮ್ಮ ನನಗೆ ಇದ್ಯಾವುದು ತಿಳಿಯಕಿಲ್ಲ! ನನಗೂ ನನ್ನ ಮಗಳು ನನ್ನಂಗೆ ಹೆಬ್ಬೆಟ್ಟು ಆಗಿ ಬಡತನ ಅನುಬವಿಸದು ಬೇಡ ಅಂತ ಮನಸ್ಸನಾಗೆ ಐತೆ. ಆಯ್ತು ಕಣ್ರಮ್ಮ ನನ್ನ ಮಗಳಿಗೆ ಇಸ್ಕೋಲಿಗೆ ಸೇರ‍್ಸಕ್ಕೆ ನೀವೆ ಒಸಿ ಸಹಾಯ ಮಾಡ್ರಿ” ಎಂದು ಕೈಮುಗಿದು ಲಾಯರ‍್ರ್ ನಿರ್‍ಮಲಾಗೆ ವಿನಂತಿಸಿದಳು.

“ಸರಿ ನಿಂಗಮ್ಮ ನಿನ್ನ ಮಗಳಿಗೆ ಶಾಲೆಗೆ ಸೇರಿಸೋ ಜವಾಬ್ದಾರಿ ನನಗೆ ಬಿಡು” ಎಂದು ಮುಗುಳ್ನಕ್ಕಳು.

ಸೋಮವಾರ ಬೆಳಿಗ್ಗೆ ಲಾಯರ್ ನಿರ್‍ಮಲಾ ವರುಣ್ ತನ್ನೆಲ್ಲ ಕೇಸುಗಳ ಪೈಲ್ ಎತ್ತಿಕೊಂಡು ಕಾರು ಏರಿ ಮನೆಯ ಗೇಟಿನಿಂದ ಹೊರ ಬಂದಾಗ ನಿಂಗಮ್ಮನ ಮಗಳು ಎಂದಿನಂತೆ ಜಿಡ್ಡು ಗಟ್ಟಿದ ಕೂದಲು, ಮಾಸಿದ ಅಂಗಿ, ಕೊಳೆಯಾದ ಕೈಕಾಲುಗಳಿಂದ ದರುಶನ ಕೊಡದೆ, ಸ್ವಚ್ಚವಾದ ಬಟ್ಟೆ ತೊಟ್ಟು, ನೀಟಾಗಿ ಬೈತಲೆ ತೆಗೆದು ರಿಬ್ಬನ್ ಕಟ್ಟಿದ ಎರಡು ಹೆಣೆದ ಜಡೆ, ಸ್ವಚ್ಚವಾಗಿದ್ದ ಮುಕ, ಕೈಕಾಲುಗಳು, ಬೆನ್ನಿಗೆ ಶಾಲೆಯ ಪಾಟಿಚೀಲ ನೇತು ಹಾಕಿಕೊಂಡು ಅಮ್ಮನ ಕೈ ಹಿಡಿದು ನಗುತ್ತ ಟಾಟಾ ಮಾಡುತಿದ್ದ ಸಾವಿತ್ರಿಯನ್ನು ಕಂಡಳು. ನಿರ್‍ಮಲಾ ಹ್ರುದಯ ತುಂಬಿ ಬಂತು ಕಣ್ಣಲ್ಲಿ ಎರಡು ಹನಿ ನೀರಾಡಿದವು.

ನಡೆದು ಹೋಗುತಿದ್ದ ಸಾವಿತ್ರಿಯನ್ನು ಕಾರಿನಲ್ಲಿ ಹತ್ತಿಸಿಕೊಂಡು ಸಾವಿತ್ರಿಯ ಮುಕ ನೋಡುತ್ತ ಜೋರಾಗಿ ನಗುತ್ತ, “ಸಾವಿತ್ರಿ, ನಾನು ಹೇಳಿದಂತೆ ನೀನು ನಗುತ್ತ ಹೇಳಬೇಕು ಏನು… ಹೇಳು…”ಇದೇ ಸಂವಿದಾನದ ಶಕ್ತಿ! ಇದೇ ಮಹಿಳಾ ವಿಮೋಚನೆಯ ಸೂಪರ್ ಶಕ್ತಿ” ಎಂದಂತೆ, ಸಾವಿತ್ರಿಯೂ ಜೋರಾಗಿ ನಗುತ್ತ ಕೈ ಎತ್ತಿ “ಇದೇ ಸಂವಿದಾನದ ಶಕ್ತಿ, ಇದೇ ಮಹಿಳಾ ವಿಮೋಚನೆಯ ಸೂಪರ್ ಶಕ್ತಿ” ಎಂದು ಜೋರಾಗಿ ಕೂಗಿ ಹೇಳತೊಡಗಿದಳು. ಇಬ್ಬರ ನಗು ರಸ್ತೆಯ ಮೇಲೆ ಓಡಾಡುವ ವಾಹನಗಳ ಸದ್ದಿನಲ್ಲಿ ಲೀನವಾಯ್ತು.

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *