ಮಾಡಿ ಸವಿಯಿರಿ ಪ್ಲಮ್ ಕೇಕ್
– ಸವಿತಾ.
ಏನೇನು ಬೇಕು
- ಕಿತ್ತಳೆ ಹಣ್ಣು – 2
- ಬೆಲ್ಲ ಅತವಾ ಸಕ್ಕರೆ – 1/2 ಲೋಟ
- ಗೋದಿ ಹಿಟ್ಟು – 1 ಲೋಟ
- ಎಣ್ಣೆ – 1/4 ಲೋಟ
- ನೀರು – 1/2 ಲೋಟ
- ತುಪ್ಪ – 2 ಚಮಚ
- ಏಲಕ್ಕಿ – 2
- ಒಣ ಹಣ್ಣು ಗಳು (ಗೋಡಂಬಿ, ಬಾದಾಮಿ, ಒಣದ್ರಾಕ್ಶಿ, ಕರ‍್ಜೂರ) – 4 ಚಮಚ
- ಅಡುಗೆ ಸೋಡಾ – 1& 1/2 (ಒಂದೂವರೆ) ಚಮಚ
- ಮೊಸರು – 4 ಚಮಚ
- ನಿಂಬೆ ಹಣ್ಣಿನ ರಸ – 1/2 ಹೋಳು
- ಉಪ್ಪು – 1/2 ಚಮಚ
- ಚಕ್ಕೆ ಸ್ವಲ್ಪ
- ಒಣ ಶುಂಟಿ ಸ್ವಲ್ಪ
ಮಾಡುವ ಬಗೆ
ಕಿತ್ತಳೆ ಹಣ್ಣಿನ ರಸದಲ್ಲಿ ನಿಮಗೆ ಬೇಕಾದ ಒಣ ಹಣ್ಣು (ಬಾದಾಮಿ, ಅಕ್ರೋಡ್, ಪಿಸ್ತಾ, ಒಣ ದ್ರಾಕ್ಶಿ ಇತ್ಯಾದಿ) ಕತ್ತರಿಸಿ ಹಾಕಿ 1/2 ಗಂಟೆ ನೆನೆಯಲು ಇಡಬೇಕು. ಬೆಲ್ಲ ಅತವಾ ಸಕ್ಕರೆಗೆ 2 ಚಮಚ ನೀರು ಸೇರಿಸಿ, ಬಿಸಿ ಮಾಡಿ ಕರಗಿಸಿ ಸ್ವಲ್ಪ ಹೊಂಬಣ್ಣ ಆದಾಗ 4 ಚಮಚ ನೀರು ಸೇರಿಸಿ ತಿರುಗಿಸಿ, ಒಲೆ ಆರಿಸಿ ಪಾಕ ಆರಲು ಬಿಡಿ.
ಗೋದಿ ಹಿಟ್ಟು ಸಾಣಿಸಿ ಇಟ್ಟುಕೊಳ್ಳಿರಿ. ಒಂದು ಸ್ಟೀಲ್ ಪಾತ್ರೆ ಅತವಾ ಡಬ್ಬಿಗೆ ಎಣ್ಣೆ ಹಚ್ಚಿ, ಗೋದಿ ಹಿಟ್ಟು ಉದುರಿಸಿ. ಒಂದು ಬಿಳಿಯ ಹಾಳೆಯನ್ನು ಪಾತ್ರೆಯ/ಡಬ್ಬಿಯ ತಳಕ್ಕೆ ಹಾಕಿ ಇಟ್ಟುಕೊಳ್ಳಿ. ಇದಕ್ಕೆ ಸ್ವಲ್ಪ ಎಣ್ಣೆ ಸವರಿ ಇಟ್ಟರೆ ಕೇಕ್ ತಳ ಹಿಡಿಯುವುದಿಲ್ಲ. ಒಂದು ದಪ್ಪ ತಳದ ಪಾತ್ರೆ, ಅದರಲ್ಲಿ ಎತ್ತರ ವಾಗಲು ಸ್ಟಾಂಡ್ ಅತವಾ ತಟ್ಟೆ ಇಟ್ಟು ಮೇಲೆ ಮುಚ್ಚಳ ಮುಚ್ಚಿ 10 ನಿಮಿಶ ಕಾಯಲು ಇಡಬೇಕು. (ಕುಕ್ಕರ್ ನಲ್ಲಿಯೂ ಮಾಡಬಹುದು, ಗ್ಯಾಸ್ಕೆಟ್, ವಿಶಲ್ ಹಾಕಬಾರದು. ಎತ್ತರಕ್ಕೆ ಒಂದು ತಟ್ಟೆ ಇಡಬೇಕು). ನಂತರ ಆರಲು ಬಿಡಿ.
ಒಂದು ಪಾತ್ರೆ ಗೆ ಅರ‍್ದ ಲೋಟ ನೀರು, ಎಣ್ಣೆ, ತುಪ್ಪ, ಅಡುಗೆ ಸೋಡಾ ಮತ್ತು ಮೊಸರು ಅಳತೆಯಂತೆ ಹಾಕಿ ಕಲಸಿ. ಕರಿಗಿಸಿಟ್ಟಿದ್ದ ಬೆಲ್ಲದ ಪಾಕ, ಸ್ವಲ್ಪ ಉಪ್ಪು, ಚಕ್ಕೆ, ಏಲಕ್ಕಿ, ಒಣ ಶುಂಟಿ ಸ್ವಲ್ಪ ಪುಡಿ ಮಾಡಿ ಸೇರಿಸಿ ಚೆನ್ನಾಗಿ ಕಲಸಿ. ಸ್ವಲ್ಪ, ಗೋದಿ ಹಿಟ್ಟು ಸೇರಿಸಿ ಚೆನ್ನಾಗಿ ಕಲಸಿ. ಕಿತ್ತಳೆ ಹಣ್ಣಿನ ರಸ ಮತ್ತು ಒಣ ಹಣ್ಣುಗಳ ಮಿಶ್ರಣ ಹಾಕಿ ಕಲಸಿ. ಕೊನೆಗೆ ನಿಂಬೆ ಹಣ್ಣಿನ ರಸ ಸೇರಿಸಿ ಚೆನ್ನಾಗಿ ಕಲಸಿ. ಇದನ್ನು ಎಣ್ಣೆ ಹಚ್ಚಿದ ಪಾತ್ರೆಗೆ ಸುರಿದು ಇಟ್ಟಕೊಳ್ಳಿ.
ಆರಿಸಿದ ಪಾತ್ರೆಯನ್ನು ಮತ್ತೆ ಸಣ್ಣ ಉರಿಯಲ್ಲಿ ಇಟ್ಟು, ಒಳಗೆ ಸ್ಟಾಂಡ್ ಮೇಲೆ ಕೇಕ್ ಡಬ್ಬಿ (ಪಾತ್ರೆ) ಇಟ್ಟು ಮುಚ್ಚಳ ಮುಚ್ಚಿ, ಮಿಡಿಯಮ್ ಉರಿಯಲ್ಲಿ 45 ರಿಂದ 50 ನಿಮಿಶ ಬೇಯಿಸಬೇಕು. (ಕೇಕ್ ಸುವಾಸನೆ ಬರುತ್ತದೆ. ಪೋರ‍್ಕ್ ಚಮಚ ಹಾಕಿ ಬೆಂದಿರುವ ಬಗ್ಗೆ ಚೆಕ್ ಮಾಡಬಹುದು). ಹತ್ತು ನಿಮಿಶ ಬಿಟ್ಟು ಪಾತ್ರೆ ಹೊರಗೆ ತೆಗೆಯಿರಿ. ಚಾಕುವಿನಿಂದ ಸುತ್ತಲೂ ಸಡಿಲ ಮಾಡಿ ತಿರುವಿ ಹಾಕಿ ಕತ್ತರಿಸಿ, ಪ್ಲಮ್ ಕೇಕ್ ಸವಿಯಿರಿ.
ಇತ್ತೀಚಿನ ಅನಿಸಿಕೆಗಳು