ರಾಗವಾಂಕ ಕವಿಯ ಹರಿಶ್ಚಂದ್ರ ಕಾವ್ಯ ಪ್ರಸಂಗ ಓದು – 10 ನೆಯ ಕಂತು – ಗಾಣ ರಾಣಿಯರ ಮೊರೆ
– ಸಿ.ಪಿ.ನಾಗರಾಜ.
*** ಗಾಣ ರಾಣಿಯರ ಮೊರೆ ***
(ಟಿ.ಎಸ್.ವೆಂಕಣ್ಣಯ್ಯ ಮತ್ತು ಎ.ಆರ್.ಕೃಷ್ಣಶಾಸ್ತ್ರಿ (ಸಂಪಾದಕರು) : ಹರಿಶ್ಚಂದ್ರಕಾವ್ಯ ಸಂಗ್ರಹ. ಈ ಹೊತ್ತಗೆಯ ‘ವಿಶ್ವಾಮಿತ್ರಾಶ್ರಮಪ್ರವೇಶ’ ಎಂಬ ನಾಲ್ಕನೆಯ ಅಧ್ಯಾಯದ 45 ಮತ್ತು 46ನೆಯ ಎರಡು ಪದ್ಯಗಳನ್ನು ನಾಟಕ ರೂಪಕ್ಕೆ ಅಳವಡಿಸಲಾಗಿದೆ.)
ಪಾತ್ರಗಳು
ವಿಶ್ವಾಮಿತ್ರ: ಒಬ್ಬಮುನಿ. ಈತನು ಕುಶಿಕನೆಂಬ ರಾಜನ ಮಗನಾದ್ದರಿಂದ ಕೌಶಿಕ ಎಂಬ ಮತ್ತೊಂದು ಹೆಸರಿದೆ.
ಇಬ್ಬರು ಗಾಣ ರಾಣಿಯರು: ವಿಶ್ವಾಮಿತ್ರನಿಂದ ರೂಪುಗೊಂಡ ಇಬ್ಬರು ತರುಣಿಯರು. ‘ಗಾಣ’ ಎಂಬ ಪದಕ್ಕೆ ‘ಗಾಯನ/ಗಾನ/ಹಾಡುವಿಕೆ’ ಎಂಬ ತಿರುಳು ಇದೆ.
*** ಗಾಣ ರಾಣಿಯರ ಮೊರೆ ***
ಬಿಡುಮುಡಿಯ… ಸುರಿವ ಕಂಬನಿವೊನಲ… ಕಳೆದಎಳಲುವುಡುಗೆಗಳ… ಬೆನ್ನೊಡೆದು ಹನಿವ ರಕುತದ… ಹೊಯ್ವಕುಡಿಅಳ್ಳೆಗಳ… ಹರಿವ ಕಾಲುಗಳ… ಮರಳಿ ನೋಡುವ
ಹೆದರುಗಣ್ಣ… ತೃಣವ ತುಡುಕಿ ನೆಗಹಿದ ಕೈಯ ಗಾಣ ರಾಣಿಯರು…
ಗಾಣ ರಾಣಿಯರು: ಎಲೆ ಕೌಶಿಕಮುನೀಂದ್ರ, ನೃಪತಿ ನಿಷ್ಕಾರಣಮ್ಹೊಡೆದನ್… ಮೊರೆಯೋ..
(ಎಂಬ ನಿಡುಸರದ ಮಡದಿಯರ ದನಿಯನ್ಆಲಿಸಿ ಪರ್ಣಶಾಲೆಯಮ್ಹೊರಮಟ್ಟನು.)
ಗಾಣ ರಾಣಿಯರು: ತಂದೆ,ಓರಂತೆ ಕೇಳ್.ಆರಮನೆಯವರ್ಎಂದು ಕೇಳ್ದಡೆ,ಎರಡನೆಯ ಪುರವೈರಿ ವಿಶ್ವಾಮಿತ್ರಮುನಿಯ ಮನೆಯವರ್ಎಂದಡೆ, ಆ ರಾಯನ್ಎದ್ದು ಕೈಯಾರೆ ಎಮ್ಮನ್ ಸದೆಬಡಿದನ್… ನಿರಪರಾಧಿಗಳನು ಕಾರುಣ್ಯಚಿತ್ತದಿಮ್ ಕಳುಹಿ ಕೊಲಿಸಿದೆ.
(ಎಂದು ಮೊರೆಯಿಟ್ಟಡೆ…)
ವಿಶ್ವಾಮಿತ್ರ:ಎನ್ನಯ ಮನೋರಥಮ್ ಕೈಸಾರ್ದುದುಅಳಲಬೇಡಿ.
(ಎಂದು ಕೋಪಾಟೋಪದಿಮ್ಹರಿದನು.)
ತಿರುಳು: ಗಾಣರಾಣಿಯರ ಮೊರೆ
ಬಿಡುಮುಡಿಯ=ಕೂದಲು ಕೆದರಿದ ತಲೆಯ;
ಸುರಿವ ಕಂಬನಿವೊನಲ=ಕಣ್ಣುಗಳಿಂದ ಒಂದೇ ಸಮನೆ ಸುರಿಯುತ್ತಿರುವ ಕಣ್ಣೀರಿನ ಕೋಡಿಯ;
ಕಳೆದಎಳಲು ಉಡುಗೆಗಳ=ಹರಿದು ಚಿಂದಿ
ಚಿಂದಿಯಾಗಿ ನೇತಾಡುತ್ತಿರುವಬಟ್ಟೆಗಳ;
ಬೆನ್ನೊಡೆದು ಹನಿವ ರಕುತದ=ಬೆನ್ನಿನ ತೊಗಲು ಹರಿದು ಮೂಳೆ ಮುರಿದು ತೊಟ್ಟಿಕ್ಕಿತ್ತಿರುವ ನೆತ್ತರಿನ;
ಹೊಯ್ವಕುಡಿಅಳ್ಳೆಗಳ=ಏದುಸಿರನ್ನು ಬಿಡುತ್ತಿರುವಾಗ ಉಬ್ಬಿ ತಗ್ಗುತ್ತಿರುವ ಪಕ್ಕೆಗಳ;
ಹರಿವ ಕಾಲುಗಳ=ಬಿದ್ದಂಬೀಳ ಓಡಿಬರುತ್ತಿರುವ ಕಾಲುಗಳ;
ಮರಳಿ ನೋಡುವ ಹೆದರುಗಣ್ಣ=ರಾಜ ಹರಿಶ್ಚಂದ್ರನು ತಮ್ಮನ್ನು ಬೆನ್ನಟ್ಟಿ ಬರುತ್ತಿರಬಹುದೆಂಬ ಅಂಜಿಕೆಯಿಂದ ಹಿಂತಿರುಗಿ ನೋಡುತ್ತಿರುವ ಹೆದರಿದ ಕಣ್ಣುಗಳ;
ತೃಣವ ತುಡುಕಿ ನೆಗಹಿದ ಕೈಯ ಗಾಣ ರಾಣಿಯರು=ಹುಲ್ಲುಕಡ್ಡಿಯನ್ನು ಕಯ್ಗಳಲ್ಲಿ ಎತ್ತಿಹಿಡಿದುಕೊಂಡು ಓಡಿಬರುತ್ತಿರುವ ಗಾಣ ರಾಣಿಯರು; ಹುಲ್ಲುಕಡ್ಡಿಯನ್ನು ಕಯ್ಗಳಲ್ಲಿ ಎತ್ತಿ ಹಿಡಿದುಕೊಂಡು ಬರುವುದು ಒಂದು ಆಚರಣೆಯ ಸಂಕೇತ.
1. ವ್ಯಕ್ತಿಗಳು ಬೇರೆಯವರಿಂದ ಆಪತ್ತಿಗೆ ಗುರಿಯಾಗುವ ಸನ್ನಿವೇಶದಲ್ಲಿ “ತಮ್ಮ ಮಾನಪ್ರಾಣಗಳಿಗೆ ಅಪಾಯ ತಟ್ಟುತ್ತಿದೆತಮ್ಮನ್ನು ಕಾಪಾಡಿ” ಎಂಬುದನ್ನು ಇತರರಿಗೆ ಸೂಚಿಸಲು ಹುಲ್ಲುಕಡ್ಡಿಗಳನ್ನು ಕಯ್ಗಳಲ್ಲಿ ಹಿಡಿದು ಬರುತ್ತಿದ್ದರು;
2. ಜನರು ತಮ್ಮ ಮಾನಪ್ರಾಣವನ್ನು ಉಳಿಸಿಕೊಳ್ಳಲೆಂದುಶರಣಾಗತಿ ಸೂಚಕವಾಗಿಕಯ್ಯಲ್ಲಿ ಹುಲ್ಲನ್ನು ಹಿಡಿದು ಇಲ್ಲವೇ ಬಾಯಲ್ಲಿ ಹುಲ್ಲನ್ನು ಕಚ್ಚಿಹಿಡಿದು ಹಗೆಗಳ ಬಳಿಗೆಬರುತ್ತಿದ್ದರು;
ಎಲೆ ಕೌಶಿಕಮುನೀಂದ್ರ ನೃಪತಿ ನಿಷ್ಕಾರಣಮ್ಹೊಡೆದನ್… ಮೊರೆಯೋ ಎಂಬ ನಿಡುಸರದ ಮಡದಿಯರ ದನಿಯನ್ ಆಲಿಸಿ=ಎಲೆ ವಿಶ್ವಾಮಿತ್ರ ಮುನಿಯೇ… ರಾಜ ಹರಿಶ್ಚಂದ್ರನು ವಿನಾಕಾರಣವಾಗಿ ನಮ್ಮನ್ನು ಹೊಡೆದನು… ನಮ್ಮ ಸಂಕಟವನ್ನು ನೋಡುಎಂದು ದೊಡ್ಡ ದನಿಯಲ್ಲಿ ಅರಚುತ್ತ , ತನ್ನತ್ತ ಬರುತ್ತಿರುವ ಗಾಣರಾಣಿಯರಗೋಳಿನ ದನಿಯನ್ನು ಕೇಳಿ;
ಪರ್ಣಶಾಲೆಯಮ್ಹೊರಮಟ್ಟನು=ಆಶ್ರಮದ ಎಲೆಮನೆಯಿಂದ ವಿಶ್ವಾಮಿತ್ರನು ಹೊರಬಂದನು;
ತಂದೆ,ಓರಂತೆ ಕೇಳ್=ತಂದೆಯೇ, ಮನವಿಟ್ಟು ಕೇಳು;
ಆರ ಮನೆಯವರ್ಎಂದು ಕೇಳ್ದಡೆ=ರಾಜ ಹರಿಶ್ಚಂದ್ರನು ನಮ್ಮನ್ನು ನೀವು ಯಾರ ಮನೆಯವರು ಎಂದು ಕೇಳಿದಾಗ;
ಎರಡನೆಯ ಪುರವೈರಿ ವಿಶ್ವಾಮಿತ್ರಮುನಿಯ ಮನೆಯವರ್ಎಂದಡೆ=ಎರಡನೆಯ ಶಿವನಾದ ವಿಶ್ವಾಮಿತ್ರ ಮುನಿಯ ಮನೆಯವರು ಎಂದು ಹೇಳಿದಾಗ;
ಆ ರಾಯನ್ಎದ್ದು ಕೈಯಾರೆಎಮ್ಮನ್ಸದೆಬಡಿದನ್=ಆ ರಾಜನು ಎದ್ದು ಬಂದು ತನ್ನ ಕಯ್ಯಾರೆ ನಮ್ಮ ಮೇಲೆ ಹಲ್ಲೆ ಮಾಡಿ, ಮನಬಂದಂತೆ ಹೊಡೆದನು;
ನಿರಪರಾಧಿಗಳನು ಕಾರುಣ್ಯಚಿತ್ತದಿಮ್ಕಳುಹಿ ಕೊಲಿಸಿದೆ ಎಂದು ಮೊರೆಯಿಟ್ಟಡೆ=ಯಾವ ತಪ್ಪನ್ನು ಮಾಡದ ಮುಗ್ದರಾದ ನಮ್ಮನ್ನು “ಮಕ್ಕಳಿಗೆ ಒಳ್ಳೆಯದಾಗಲಿ” ಎಂಬ ಕರುಣೆಯ ಮನದಿಂದ ನೀನು ಅವನ ಬಳಿಗೆ ಕಳುಹಿಸಿ ನಮ್ಮನ್ನು ಸಂಕಟಕ್ಕೆ ಗುರಿಮಾಡಿದೆ ಎಂದು ದೂರನ್ನು ಹೇಳಿದಾಗ;
ಎನ್ನಯ ಮನೋರಥಮ್ ಕೈಸಾರ್ದುದುಅಳಲಬೇಡಿ ಎಂದು ಕೋಪಾಟೋಪದಿಮ್ಹರಿದನು=ನನ್ನ ಮನದ ಉದ್ದೇಶ ಈಡೇರಿತು. ನೀವು ಇನ್ನು ಸಂಕಟಪಡಬೇಡಿ ಎಂದು ಗಾಣ ರಾಣಿಯರನ್ನು ಸಂತಯಿಸಿ, ಕೋಪೋದ್ರೇಕದಿಂದ ಅಬ್ಬರಿಸುತ್ತ ರಾಜ ಹರಿಶ್ಚಂದ್ರನು ಇದ್ದ ಎಡೆಗೆ ಬಂದನು;
(ಚಿತ್ರ ಸೆಲೆ: wikipedia.org)
ಇತ್ತೀಚಿನ ಅನಿಸಿಕೆಗಳು