ಒಣಹಣ್ಣುಗಳ ಬರ್‍ಪಿ
– ನಿತಿನ್ ಗೌಡ.
ಏನೇನು ಬೇಕು ?
- ಕರ್‍ಜೂರ -200 ಗ್ರಾಂ
- ಬಾದಾಮಿ – 50 ಗ್ರಾಂ
- ಗೋಡಂಬಿ – 50 ಗ್ರಾಂ
- ಕಲ್ಲಂಗಡಿ ಬೀಜ – 25 ಗ್ರಾಂ
- ಪಿಸ್ತ – 25 ಗ್ರಾಂ
- ಗಸಗಸೆ – 3 ಚಮಚ
- ಬಿಳಿ ಎಳ್ಳು – 3 ಚಮಚ
- ತುಪ್ಪ – ಸ್ವಲ್ಪ
ಮಾಡುವ ಬಗೆ
ಮೊದಲಿಗೆ ಗೋಡಂಬಿ, ಬಾದಾಮಿ ಮತ್ತು ಪಿಸ್ತ ಈ ಮೂರನ್ನು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿರಿ. ಆಮೇಲೆ ಕರ್‍ಜೂರದ ಬೀಜ ತೆಗೆದುಕೊಂಡು ಆದಶ್ಟು ನುಣ್ಣಗೆ ರುಬ್ಬಿಟ್ಟುಕೊಳ್ಳಿರಿ. ನೆನಪಿರಲಿ, ಇದಕ್ಕೆ ನೀರು ಹಾಕಬಾರದು. ಈಗ ಗಸಗಸೆ ಮತ್ತು ಎಳ್ಳನ್ನು ಸ್ವಲ್ಪ ಬಣ್ಣ ಬದಲಾಗುವವರೆಗೆ ಸಣ್ಣ ಉರಿಯಲ್ಲಿ ಹುರಿದುಕೊಳ್ಳಿರಿ. ಈಗ ಒಂದು ಬಾಣಲೆಗೆ ಎರಡು ಚಮಚ ತುಪ್ಪ ಹಾಕಿ, ಹೆಚ್ಚಿಟ್ಟುಕೊಂಡ ಗೋಡಂಬಿ, ಬಾದಾಮಿ, ಪಿಸ್ತ ಮತ್ತು ಕಲ್ಲಂಗಡಿ ಬೀಜ ಇವನ್ನು ಹಾಕಿ ಹೊಂಬಣ್ಣ ಬರುವವರೆಗೆ ಸಣ್ಣ ಉರಿಯಲ್ಲಿ ಹುರಿದು ಎತ್ತಿಟ್ಟುಕೊಳ್ಳಿರಿ. ಈಗ ಆ ಬಾಣಲಿಗೆ ರುಬ್ಬಿಟ್ಟುಕೊಂಡ ಕರ್‍ಜೂರ ಪುಡಿ ಹಾಕಿ ಸಣ್ಣ ಉರಿಯಲ್ಲಿ ಮೂರರಿಂದ ನಾಲ್ಕು ನಿಮಿಶ ಹುರಿಯಿರಿ. ಈಗ ಇದಕ್ಕೆ ಈ ಮೊದಲು ಹುರಿದುಕೊಂಡ ಗೋಡಂಬಿ, ಬಾದಾಮಿ ಮತ್ತು ಪಿಸ್ತ ಹಾಕಿ ಚೆನ್ನಾಗಿ ಕಲಸಿ ಕೊಳ್ಳುತ್ತಾ ಇನ್ನೆರಡು ನಿಮಿಶ ಸಣ್ಣ ಉರಿಯಲ್ಲಿ ಹುರಿಯಿರಿ. ಯಾವುದೇ ಕಾರಣಕ್ಕೂ ಇದು ಸೀದಕೂಡದು. ಈಗ ಒಂದು ತಟ್ಟೆಗೆ ತುಪ್ಪ ಸವರಿ, ಈ ಮಿಶ್ರಣವನ್ನು ಹಾಕಿ, ಅದು ಬಿಸಿ ಇರುವಾಗಲೆ ಚೆನ್ನಾಗಿ ನಾದಿಕೊಂಡು(ಕಲಸಿ) ಸುತ್ತಿಕೊಳ್ಳಿರಿ(Roll). ಈಗ ತಟ್ಟೆಗೆ ಗಸಗಸೆ ಮತ್ತು ಎಳ್ಳನ್ನು ಉದುರಿಸಿಕೊಂಡು ಅದರ ಮೇಲೆ ಈ ಸುತ್ತಿಟ್ಟುಕೊಂಡ ಬಿಸಿ ಮಿಶ್ರಣವನ್ನು ಉರುಳಾಡಿಸಿ. ಬಿಸಿ ಇರುವಾಗಲೇ ಉರುಳಾಡಿಸಿದಲ್ಲಿ, ಮಿಶ್ರಣಕ್ಕೆ ಎಳ್ಳು ಮತ್ತು ಗಸಗಸೆ ಚೆನ್ನಾಗಿ ಹಿಡಿದುಕೊಳ್ಳುತ್ತದೆ. ಈಗ ಇದನ್ನು ಒಂದು ದಪ್ಪನೆಯ ಬ್ಯಾಗಡೆ(cover) ಇಲ್ಲವೆ ಬಟರ್ ಕವರ್ ನಲ್ಲಿ ಸುತ್ತಿ , ಪ್ರೀಜರ್ ನಲ್ಲಿ ಒಂದು 30 ನಿಮಿಶ ಇಟ್ಟು ತೆಗೆದು, ಚಿಕ್ಕ ಚಿಕ್ಕ ಹೋಳುಗಳಾಗಿ ಕತ್ತರಿಸಿಕೊಳ್ಳಲು, ನಿಮ್ಮ ರುಚಿ ರುಚಿಯಾದ ಒಣಹಣ್ಣುಗಳ ಬರ್‍ಪಿ (Dryfruit Barfi) ತಯಾರಾಗುವುದು.
(ಚಿತ್ರಸೆಲೆ: ಬರಹಗಾರರು )
ಇತ್ತೀಚಿನ ಅನಿಸಿಕೆಗಳು