ನಾ ನೋಡಿದ ಸಿನೆಮಾ: ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು

– ಕಿಶೋರ್ ಕುಮಾರ್.

ಕಾಲದಿಂದ ಕಾಲಕ್ಕೆ ಎಲ್ಲಾ ಚಿತ್ರರಂಗಗಳಲ್ಲೂ ಹೊಸ ಪ್ರತಿಬೆಗಳು ಹಾಗೂ ಹೊಸತನದ ಸಿನೆಮಾಗಳು ಬರುತ್ತವೆ. ಇದು ಕೆಲವು ಸಾರಿ ವರುಶಗಳನ್ನೇ ತೆಗೆದುಕೊಳ್ಳಬಹುದು, ಇಲ್ಲವೇ ದಶಕಗಳೇ ಹಿಡಿಯಬಹುದು. ಈ ವಿಶಯದಲ್ಲಿ ಕನ್ನಡ ಸಿನೆಮಾರಂಗವೂ ಸಹ ಹೊರತಲ್ಲ. 80ರ ದಶಕವನ್ನು ಕನ್ನಡ ಚಿತ್ರರಂಗದ ತನಕ ಕನ್ನಡ ಸಿನೆಮಾರಂಗದ ಸುವರ‍್ಣ ಕಾಲವೆಂದು ಕರೆಯುವುದನ್ನು ಕೇಳಿದ್ದೇವೆ. ನಂತರ ಸುಮಾರು 3 ದಶಕಗಳ ಕಾಲ ಹೆಚ್ಚಾಗಿ ರಿಮೇಕ್ ಹಾಗೂ ಪಾರ‍್ಮುಲಾ ಸಿನೆಮಾಗಳನ್ನೇ ನೆಚ್ಚಿಕೊಂಡು ಕಾಲ ಕಳೆದದ್ದನ್ನೂ ನೋಡಿದ್ದೇವೆ.

ಆದರೆ 2010 ರಲ್ಲಿ ಇಲ್ಲೊಂದು ಅಲ್ಲೊಂದರಂತೆ ಸದಬಿರುಚಿಯ ಸಿನೆಮಾಗಳು ಕನ್ನಡದಲ್ಲಿ ಬರಲು ಮೊದಲಾದವು. ಎತ್ತುಗೆಗೆ ಲೂಸಿಯಾ, ಉಳಿದವರು ಕಂಡಂತೆ, ಉಗ್ರಂ, ರಂಗಿ ತರಂಗ ಹೀಗೆ. ಆದರೆ 2015 ರ ನಂತರ ಈ ವೇಗ ಇನ್ನು ಹೆಚ್ಚಾಗಿ ಹೊಸತನದ ಅಲೆಯೇ ಎದ್ದಿದೆ. ಅದಕ್ಕೆ ಇಂಬು ಕೊಡುವಂತೆ ಕನ್ನಡದಲ್ಲಿ ಪ್ರತಿ ವರುಶವೂ ಹೆಚ್ಚೆಚ್ಚು ಹೊಸಬರ ಹಾಗೂ ಹೊಸತನದ ಸಿನೆಮಾಗಳು ಕನ್ನಡಿಗರ ಮುಂದೆ ಬರುತ್ತಿವೆ. ಕೆ.ಜಿ.ಎಪ್, ಕವಲುದಾರಿ, ಸಪ್ತ ಸಾಗರದಾಚೆ ಎಲ್ಲೋ, ಕಾಂತಾರ, 777 ಚಾರ‍್ಲಿ, ಶಾಕಾಹಾರಿ, ಬ್ಲಿಂಕ್, ಆಚಾ‍ರ್ & ಕೋ, ಡೇ‍ರ್ ಡೆವಿಲ್ ಮುಸ್ತಾಪಾ, ಹೊಂದಿಸಿ ಬರೆಯಿರಿ ಹೀಗೆ ಹಲವಾರು ಸಿನೆಮಾಗಳು ಬಂದು ಕನ್ನಡಿಗರನ್ನು ರಂಜಿಸಿವೆ. ಇವುಗಳಲ್ಲಿ ಎಲ್ಲವೂ ಎಲ್ಲಾ ವರ‍್ಗದ ನೋಡುಗರನ್ನ ಸೆಳೆದವು ಎಂದಲ್ಲ, ಆದರೆ ಅದೇ ರಿಮೇಕ್ ಹಾಗೂ ಪಾರ‍್ಮುಲಾ ಸಿನೆಮಾ ಲೆಕ್ಕಾಚಾರದಿಂದ ಹೊರ ಉಳಿದು, ಹೊಸತನದೆಡೆಗೆ ಕರೆದೊಯ್ದವು. ಕೆಲವು ಬ್ಲಾಕ್ ಬಸ್ಟರ್ ಗಳಾದರೆ, ಕೆಲವು ಪೀಲ್ ಗುಡ್ ಮೂವಿಗಳು. ಈ ಸಾಲಿಗೆ ಸೇರುವಂತೆ ಈ ಸಾರಿ ಹೊಸತನವನ್ನು ಹೊತ್ತು ತಂದಿರುವ ಮತ್ತೊಂದು ಸಿನೆಮಾ ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’.

ಒಂದೇ ಸಿನೆಮಾದಲ್ಲಿ ಮೂರು ಕತೆಗಳು, ಆದರೆ ಇಲ್ಲಿ ಒಂದಕ್ಕೊಂದು ನಂಟಿಲ್ಲ. ಮೂರೂ ಕತೆಗಳಲ್ಲೂ 3 ಆಯಾಮಗಳು. ಮೊದಲ ಕತೆಯಲ್ಲಿ ಅದ್ರುಶ್ಟ, ದುರಾದ್ರುಶ್ಟ ಇವುಗಳನ್ನೇ ಹೆಚ್ಚು ನಂಬುವ ಒಬ್ಬಾತ. ಏನೇ ಕಶ್ಟವಿರಲಿ, ಯಾವುದೇ ದಾರಿಯಿರಲಿ, ಆತನ ನಂಬಿಕೆಯಂತೆ ನಡೆದರೆ ಎಲ್ಲವೂ ಸರಿಯಾಗಿಯೇ ನಡೆಯುತ್ತದೆ ಎನ್ನುವ ದ್ರುಡವಾದ ನಂಬಿಕೆ. ತಪ್ಪು ದಾರಿಯಲ್ಲಿ ನಡೆಯುತ್ತಿರುವ ಈತ, ಇನ್ನೇನು ಎಲ್ಲವೂ ಮುಗಿಯಿತು ಎನ್ನುವಶ್ಟರಲ್ಲಿ ಮತ್ತೆ ಆತನ ಮುಂದೆ ಬರುವ ಆ ಅದ್ರುಶ್ಟದ ಸಂಕೇತ, ಹೇಗೆ ಆತನಲ್ಲಿ ನವ ಚೈತನ್ಯ ತುಂಬುತ್ತದೆ ಎಂಬುದನ್ನು ಹಾಸ್ಯಮಯವಾಗಿ ಕೊಂಡೊಯ್ಯಲಾಗಿದೆ.

ಎರಡನೇ ಕತೆಯಲ್ಲಿ ಮಾನಸಿಕ ಕಾಯಿಲೆಯೊಂದರಿಂದ ಬೇಟಿಯಾಗುವ ಜೋಡಿಯೊಂದು ಹೇಗೆ ತಮ್ಮ ಕಾಯಿಲೆಯೊಂದಿಗೆ ಪಯಣಿಸಿ, ಆ ಪಯಣದಲ್ಲೇ ಬಾಳಸಂಗಾತಿಗಳಾಗುತ್ತಾರೆ. ಇವರ ಈ ರೊಮ್ಯಾನ್ಟಿಕ್ ಪಯಣ ನೋಡುಗರನ್ನು ಒಂದು ಹೊಸ ಆಯಾಮಕ್ಕೆ ಕರೆದೊಯ್ಯುತ್ತದೆ.

ಮೂರನೇ ಕತೆ, ಇದೇ ಸಿನೆಮಾದ ಹೈಲೆಟ್. ಅವಶ್ಯಕತೆಗಳಿಗಾಗಿ ಜೊತೆ ಸೇರಿ, ಒಂದು ತಪ್ಪು ದಾರಿ ಹಿಡಿದಿರುವ ತಂಡ. ಈ ತಂಡದ ಹೊಸ ಯೋಜನೆ ಹೇಗೆ ಊಹಿಸಲಾಗದ ತಿರುವು ಪಡೆದುಕೊಳ್ಳುತ್ತದೆ ಎನ್ನುವುದೇ ಕತೆ. ಏನದು ಆ ಊಹಿಸಲಾಗದ ತಿರುವು ಎಂಬ ಪ್ರಶ್ನೆ ನಿಮ್ಮದಾಗಿದ್ದರೆ. ಅದಕ್ಕೆ ಸಿನೆಮಾದಲ್ಲಿದೆ ಉತ್ತರ.

2009 ರಲ್ಲಿ ತೆರೆಕಂಡ ಲವ್ ಗುರು ಸಿನೆಮಾ ಕ್ಯಾತಿಯ ದಿಲೀಪ್ ರಾಜ್ ಅವರು ಇಲ್ಲಿ ತಮ್ಮ ನಟನೆಯ ಮೂಲಕ ಗಮನ ಸೆಳೆದಿದ್ದಾರೆ. ದಿಲೀಪ್ ರಾಜ್ ರಂತಹ ಒಂದೊಳ್ಳೆ ಪ್ರತಿಬೆ ಅದು ಹೇಗೆ ಕನ್ನಡ ಸಿನಿಮಾರಂಗದಲ್ಲಿ ಅವಕಾಶಗಳಿಂದ ವಂಚಿತವಾಯಿತು ಎಂಬ ಪ್ರಶ್ನೆ ನೋಡುಗರಿಗೆ ಮೂಡದೆ ಇರದು. ಪ್ರಸನ್ನ ವಿ ಶೆಟ್ಟಿ ಅವರು ಒಂದು ಪಾತ್ರವನ್ನೂ ನಿರ‍್ವಹಿಸಿರುವುದಲ್ಲದೆ, ಈ ಸಿನಿಮಾದ ಕತೆ ಬರೆದಿರುವುದು ಮತ್ತೊಂದು ವಿಶೇಶ. ಇವರು ಒಬ್ಬ ಅಂಜುಬುರುಕ ಮುಕ್ಯ ಪಾತ್ರದಾರಿಯಾಗಿ ನೋಡುಗರನ್ನು ನಗಿಸುತ್ತಾರೆ. ಕ್ರಿಟಿಕಲ್ ಕೀರ‍್ತನೆಗಳು ಕ್ಯಾತಿಯ ನಟಿ ಅಪೂರ‍್ವ ಬಾರದ್ವಾಜ್ ಹಾಗೂ ಮದುಸೂದನ್ ಗೋವಿಂದ್ ಅವರ ಪಾತ್ರಗಳು ನೋಡುಗರ ಮನಸ್ಸಿಗೆ ಮುದ ನೀಡುತ್ತವೆ. ಕನ್ನಡಕ್ಕೆ ಬರವಸೆಯ ನಟರಾಗುವ ಲಕ್ಶಣಗಳಿವೆ ಎಂದರೆ ತಪ್ಪಾಗಲಾರದು. ರಿಯಾಲಿಟಿ ಶೋ ಮೂಲಕ ಕನ್ನಡಿಗರಿಗೆ ಪರಿಚಯವಾದ ಶಿಲ್ಪ ಮಂಜುನಾತ್ ಅವರು ಇಲ್ಲಿ ಒಂದು ವಿಶೇಶ ಪಾತ್ರ ನಿರ‍್ವಹಿಸಿದ್ದಾರೆ. ಇನ್ನುಳಿದಂತೆ ಹರಿ ಸಮಶ್ಟಿ, ವಂಶಿ ಕ್ರಿಶ್ಣ ಶ್ರೀನಿವಾಸ್ ಹಾಗೂ ಇತರರು ನಟಿಸಿದ್ದಾರೆ.

ನಿರ‍್ದೇಶಕ ಕೇಶವ್ ಮೂರ‍್ತಿ ಅವರು ತಮ್ಮ ಚೊಚ್ಚಲ ಪ್ರಯತ್ನದಲ್ಲೇ ನೋಡುಗರಿಗೆ ಹೊಸತನದ ಔತಣ ನೀಡಿ ಗೆದ್ದಿದ್ದಾರೆ. ಪ್ರಸನ್ನ ವಿ ಶೆಟ್ಟಿ ಅವರ ಕತೆ ಕೂಡ ಚಿತ್ರದ ಪ್ಲಸ್ ಪಾಯಿಂಟ್. ಹರೀಶ್ ಕುಮಾರ್ ಗೌಡ ಅವರ ಸಿನೆಮಾಟೋಗ್ರಾಪಿ ಚೆನ್ನಾಗಿ ಮೂಡಿ ಬಂದಿದ್ದು, ಕುಬೇಂದ್ರನ್ ಜಯವೇಲ್ ಅವರ ಎಡಿಟಿಂಗ್ ಇದೆ. ಮಗೇಶ್ ರವೀಂದ್ರನ್ ಹಾಗೂ ಕುಬೇಂದ್ರನ್ ಜಯವೇಲ್ ಅವರು ಈ ಸಿನೆಮಾವನ್ನು ನಿರ‍್ಮಿಸಿದ್ದಾರೆ. ಜನವರಿ 10, 2025 ರಂದು ಈ ಸಿನೆಮಾ ತೆರೆಗೆ ಬಂದಿದ್ದು, ನೋಡುಗರನ್ನು ರಂಜಿಸುತ್ತಿದೆ. ಒಟ್ಟಾರೆ ಹೊಸಬರೆ ತುಂಬಿರುವ ಈ ಸಿನೆಮಾ ತಂಡವು ಕನ್ನಡ ಸಿನೆಮಾರಂಗಕ್ಕೆ ಒಂದು ಸದಬಿರುಚಿಯ ಸಿನೆಮಾವನ್ನು ಕಟ್ಟಿಕೊಟ್ಟಿದೆ ಎಂದರೆ ತಪ್ಪಾಗಲಾರದು.

(ಚಿತ್ರಸೆಲೆ: paytm.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *