ನಾ ನೋಡಿದ ಸಿನೆಮಾ: ಮರ್ಯಾದೆ ಪ್ರಶ್ನೆ
ರಸ್ತೆ ಅಪಗಾತಗಳ ಬಗ್ಗೆ ಕೇಳುತ್ತಲೇ ಇರುತ್ತೇವೆ. ಈ ವಿಶಯದ ಸುತ್ತಲೇ ನಡೆಯಿವ ಕತೆ ಹೊಂದಿದ ಸಿನೆಮಾವೊಂದು ತೆರೆಗೆ ಬಂದು, ಈಗ OTT ಯಲ್ಲಿ ಬಿಡುಗಡೆಯಾಗಿದೆ.
ಸೂರಿ (ರಾಕೇಶ್ ಅಡಿಗ), ಸತೀಶ (ಸುನೀಲ್ ರಾವ್) ಹಾಗೂ ಮಂಜ (ಪೂರ್ಣಚಂದ್ರ ಮೈಸೂರು) ಗೆಳೆಯರು. ಸೂರಿ ತನ್ನ ಕ್ಶೇತ್ರದ ಶಾಸಕನ ಬೆಂಬಲಿಗನಾಗಿ ಇದ್ದುಕೊಂಡು, ಕಾರ್ಪೊರೇಟರ್ ಆಗುವ ಕನಸುಹೊತ್ತು ಬದುಕುತ್ತಿರುವ ಅನಾತ. ಈತ ಶಾಸಕನಿಗಾಗಿ ಏನಾದರೂ ಮಾಡಲು ಸಿದ್ದನಿರುವ ಬಂಟ. ಸತೀಶನದು ಊಟ ತಲುಪಿಸುವ (Food Delivery Boy) ಕೆಲಸ. ಈತನದು ಒಂದು ಬಡ ಕುಟುಂಬ, ತಂಗಿ (ತೇಜು ಬೆಳವಾಡಿ), ತಾಯಿ ಹಾಗೂ ಆರೋಗ್ಯ ಕೆಟ್ಟ ತಂದೆ. ಮನೆಗೆ ಈತನೇ ಬೆನ್ನೆಲುಬು. ಮಂಜ ಒಬ್ಬ ಡ್ರೈವರ್. ತನ್ನ ಸ್ವಂತ ಕಾರ್ ತೆಗೆದುಕೊಳ್ಳಬೇಕೆಂಬ ಕನಸು ಹೊತ್ತವ. ಮಂಜ ಹಾಗೂ ಸತೀಶನಿಗೆ ಯಾವಾಗಲೂ ಸಹಾಯಕ್ಕೆ ನಿಲ್ಲುವ ಸೂರಿ. ಈ ಮೂವರು ಸಹ ತಮ್ಮ ತಮ್ಮ ಕಶ್ಟಗಳನ್ನು ಹೇಗೋ ಸಹಿಸಿಕೊಂಡು ಬದುಕುತ್ತಿರುವಾಗ, ನಡೆವ ಒಂದು ಅಪಗಾತದಲ್ಲಿ ಸತೀಶ ಸಾಯುತ್ತಾನೆ ಮುಂದೆ ಏನಾಗುತ್ತದೆ ಎನ್ನುವುದೇ ಸಿನೆಮಾದ ಕತೆ.
ಮದ್ಯಮ ವರ್ಗದ ಮಂದಿಯ ಬದುಕಿನ ಜಂಜಾಟಗಳ ಬಗ್ಗೆ ಹಲವಾರು ಸಿನೆಮಾಗಳು ಬಂದಿದ್ದು, ಇಲ್ಲಿ ಅಂತ ಹೊಸತನವೇನಿಲ್ಲ. ಆದರೆ ರಸ್ತೆ ಅಪಗಾತ ಹಾಗೂ ಅದರಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಸಿನೆಮಾ ಸ್ವಲ್ಪ ಬೆಳಕು ಚೆಲ್ಲುತ್ತದೆ. ರಾಕೇಶ್ ಅಡಿಗ ಅವ್ರಿಗೆ ಹಲವು ದಿನಗಳ ನಂತರ ಒಳ್ಳೆಯ ಪಾತ್ರ ಸಿಕ್ಕಿದೆ ಎನ್ನಬಹುದು, ಅದಕ್ಕೆ ತಕ್ಕಂತೆ ನಟಿಸಿದ್ದಾರೆ ಕೂಡ. ಕಳನಟನಾಗಿ ನರಸಿಂಹಪ್ರಬು ಮುಂಡ್ಕೂರ್ ಅವರ ನಟನೆ ಚೆನ್ನಾಗಿದೆ. ಇನ್ನುಳಿದಂತೆ ರೇಕಾ ಕೂಡ್ಲಿಗಿ, ಶೈನ್ ಶೆಟ್ಟಿ, ಶ್ವೇತಾ ಆರ್ ಪ್ರಸಾದ್ ಹಾಗೂ ಇತರರು ನಟಿಸಿದ್ದಾರೆ.
ನಾಗರಾಜ್ ಸೋಮಯ್ಯಾಜಿ ಅವರ ನಿರ್ದೇಶನ ಹಾಗೂ ಚಿತ್ರಕತೆ ಇದ್ದು, ಆರ್. ಜೆ. ಪ್ರದೀಪ ಅವರ ಕತೆ, ಸಂದೀಪ್ ವಲ್ಲೂರಿ ಅವರ ಸಿನೆಮಾಟೋಗ್ರಾಪಿ, ಸಂಕೇತ್ ಶಿವಪ್ಪ ಅವರ ಎಡಿಟಿಂಗ್ ಹಾಗೂ ಅರ್ಜುನ್ ರಾಮು ಅವರ ಸಂಗೀತವಿದ್ದು, ಆರ್. ಜೆ. ಪ್ರದೀಪ ಸಾರತ್ಯದ ಸಕ್ಕತ್ ಸ್ಟುಡಿಯೋ ಈ ಸಿನೆಮಾವನ್ನು ನಿರ್ಮಿಸಿದೆ. ನವೆಂಬರ್ 22, 2024 ರಂದು ತೆರೆಕಂಡ ಈ ಸಿನೆಮಾ ಈಗ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿದೆ. ಕುಟುಂಬ ಸಮೇತ ಕೂತು, ಒಮ್ಮೆ ನೋಡಬಹುದಾದ ಸಿನೆಮಾ ಇದಾಗಿದೆ.
(ಚಿತ್ರಸೆಲೆ: imdb.com )
ಇತ್ತೀಚಿನ ಅನಿಸಿಕೆಗಳು