ದ್ರಾವಿಡ ನುಡಿಗಳು ಅಯ್ದಲ್ಲ, ಇಪ್ಪತ್ತಾರು!

ಡಿ.ಎನ್.ಶಂಕರ ಬಟ್

ನುಡಿಯರಿಮೆಯ ಇಣುಕುನೋಟ – 35

nudi_inuku

ಕನ್ನಡ, ತಮಿಳು, ಮಲಯಾಳ, ತೆಲುಗು ಮತ್ತು ತುಳು ಎಂಬುದಾಗಿ ಒಟ್ಟು ದ್ರಾವಿಡ ನುಡಿಗಳ ಎಣಿಕೆ ಅಯ್ದು ಮಾತ್ರ (ಪಂಚದ್ರಾವಿಡ) ಎಂಬ ಅನಿಸಿಕೆ ಇವತ್ತಿಗೂ ಹಲವು ಜನರಲ್ಲಿದೆ. ಕೆಲವರು ಈ ಪಟ್ಟಿಯಲ್ಲಿ ತುಳುವಿನ ಬದಲು ಮರಾಟಿಯನ್ನು ಸೇರಿಸುತ್ತಾರೆ; ಆದರೆ, ಮರಾಟಿ ದ್ರಾವಿಡ ನುಡಿಯಲ್ಲ, ಇಂಡೋ-ಆರ‍್ಯನ್ ನುಡಿ.

ಕರ‍್ನಾಟಕದಲ್ಲೇನೇ ಕೊಡಗು ಎಂಬ ಇನ್ನೊಂದು ದ್ರಾವಿಡ ನುಡಿ ಇರುವುದನ್ನು ಈ ದ್ರಾವಿಡ ನುಡಿಗಳ ಪಟ್ಟಿಯನ್ನು ಕೊಡುವವರು ಮರೆತಂತಿದೆ. ದಕ್ಶಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೊರಗ ಎಂಬ ಮತ್ತೊಂದು ದ್ರಾವಿಡ ನುಡಿಯೂ ಬಳಕೆಯಲ್ಲಿದೆ. ಇದಲ್ಲದೆ, ನೀಲಗಿರಿಯ ಗುಡ್ಡಕಾಡುಗಳಲ್ಲಿ ತೊದ, ಕೋತ, ಕುರುಂಬ, ಮತ್ತು ಇರುಳ ಎಂಬ ಬೇರೆಯೂ ನಾಲ್ಕು ದ್ರಾವಿಡ ನುಡಿಗಳು ಬಳಕೆಯಲ್ಲಿವೆ.

ಮೇಲಿನ ಈ ಹನ್ನೊಂದು ನುಡಿಗಳಲ್ಲಿ ತೆಲುಗು ನುಡಿಯೊಂದನ್ನು ಬಿಟ್ಟು ಉಳಿದ ಹತ್ತು ನುಡಿಗಳನ್ನು ತೆಂಕುದ್ರಾವಿಡ ಎಂಬ ನುಡಿಗುಂಪಿನಲ್ಲಿ ಸೇರಿಸಿ ಹೇಳಲಾಗುತ್ತದೆ, ಮತ್ತು ತೆಲುಗು ನುಡಿಯನ್ನು ಬೇರೆ ಏಳು ನುಡಿಗಳೊಂದಿಗೆ ಸೇರಿಸಿ ತೆಂಕು-ನಡುದ್ರಾವಿಡವೆಂಬ ಬೇರೊಂದು ನುಡಿಗುಂಪನ್ನು ಮಾಡಲಾಗುತ್ತದೆ. ಈ ತೆಂಕು-ನಡುದ್ರಾವಿಡ ಗುಂಪಿನಲ್ಲಿ ತೆಲುಗು ನುಡಿಯಲ್ಲದೆ ಸುಮಾರು 24 ಲಕ್ಶ ಜನರ ಮಾತಾಗಿರುವ ಗೋಂಡಿ ಮತ್ತು ಆರೂವರೆ ಲಕ್ಶ ಜನರ ಮಾತಾಗಿರುವ ಕೂಯಿ ನುಡಿಗಳು ಬರುತ್ತವೆ. ಉಳಿದಂತೆ, ಕುವಿ, ಕೊಂಡ, ಪೆಂಗೊ, ಮತ್ತು ಮಂಡ ಎಂಬ ನುಡಿಗಳೂ ಈ ಗುಂಪಿನಲ್ಲಿ ಸೇರುತ್ತವೆ.

ಕೋಲಾಮಿ, ನಾಯ್ಕಿ, ಪಾರ‍್ಜಿ, ಒಲ್ಲಾರಿ, ಮತ್ತು ಗದಬ ಎಂಬ ಅಯ್ದು ನುಡಿಗಳನ್ನು ನಡುದ್ರಾವಿಡವೆಂಬ ಬೇರೆಯೇ ಒಂದು ನುಡಿಗುಂಪಿನಲ್ಲಿ ಸೇರಿಸಲಾಗುತ್ತದೆ. ಈ ನುಡಿಗಳನ್ನಾಡುವವರು ಮುಕ್ಯವಾಗಿ ಆಂದ್ರಪ್ರದೇಶ, ಮದ್ಯಪ್ರದೇಶ ಮತ್ತು ಒರಿಸ್ಸಾಗಳಲ್ಲಿ ನೆಲೆಸಿದ್ದಾರೆ. ಇದಲ್ಲದೆ, ಕುಡುಕ್, ಮಾಲ್ಟೋ, ಮತ್ತು ಬ್ರಾಹುಯೀ ಎಂಬ ಬೇರೆ ಮೂರು ನುಡಿಗಳನ್ನು ಬಡಗುದ್ರಾವಿಡವೆಂಬ ಇನ್ನೊಂದು ನುಡಿಗುಂಪಿನಲ್ಲಿ ಸೇರಿಸಲಾಗುತ್ತದೆ. ಈ ಮೂರು ನುಡಿಗಳಲ್ಲಿ ಕುಡುಕ್ ನುಡಿಯನ್ನು ಸುಮಾರು 20 ಲಕ್ಶ ಮಂದಿ ಆಡುತ್ತಿದ್ದು, ಇವರು ಮುಕ್ಯವಾಗಿ ಒರಿಸ್ಸಾದಲ್ಲಿ ನೆಲೆಸಿದ್ದಾರೆ; ನೇಪಾಳದ ದನಗರ‍್ ಜನಾಂಗದವರೂ ಇದೇ ನುಡಿಯನ್ನಾಡುತ್ತಾರೆ. ಮಾಲ್ಟೋ ನುಡಿಯನ್ನಾಡುವ ಒಂದು ಲಕ್ಶ ಮಂದಿ ಬಿಹಾರದ ರಾಜಮಹಲ್ ಗುಡ್ಡಗಳಲ್ಲಿ ನೆಲೆಸಿದ್ದಾರೆ, ಮತ್ತು ಬ್ರಾಹುಯೀ ನುಡಿಯನ್ನಾಡುವ 20 ಲಕ್ಶ ಮಂದಿ ಮುಕ್ಯವಾಗಿ ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ನೆಲೆಸಿದ್ದಾರೆ; ಅಪ್ಗಾನಿಸ್ತಾನ ಮತ್ತು ಇರಾನ್ನಲ್ಲೂ ಬ್ರಾಹುಯೀ ನುಡಿಯನ್ನಾಡುವವರು ಹಲವರಿದ್ದಾರೆ.

ಈ ರೀತಿ, ನಾಲ್ಕು ಮುಕ್ಯ ಗುಂಪುಗಳಲ್ಲಿ ಸೇರುವ ದ್ರಾವಿಡ ನುಡಿಗಳ ಒಟ್ಟು ಎಣಿಕೆ ಇಪ್ಪತ್ತಾರು ಎಂದು ಹೇಳಬಹುದು. ಆದರೆ, ಹಲವೆಡೆಗಳಲ್ಲಿ ಯಾವುದನ್ನು ಒಂದು ನುಡಿ ಎಂದು ಕರೆಯಬೇಕು, ಮತ್ತು ಯಾವುದನ್ನು ಬರಿಯ ಒಳನುಡಿ ಎಂದು ತಿಳಿಯಬೇಕು ಎಂಬುದನ್ನು ಕಚಿತವಾಗಿ ತೀರ‍್ಮಾನಿಸಲು ಬರುವುದಿಲ್ಲ. ಎತ್ತುಗೆಗಾಗಿ, ನೀಲಗಿರಿಯಲ್ಲಿ ಬಳಕೆಯಲ್ಲಿರುವ ಬಡಗ ಜನರ ಮಾತನ್ನು ಕೆಲವರು ಕನ್ನಡದ ಒಳನುಡಿಯೆಂದು ಕರೆಯುತ್ತಾರೆ, ಮತ್ತು ಬೇರೆ ಕೆಲವರು ಅದೊಂದು ಬೇರೆಯೇ ನುಡಿಯೆಂದೂ ಹೇಳುತ್ತಾರೆ. ಹಾಗಾಗಿ, ಒಟ್ಟು ದ್ರಾವಿಡ ನುಡಿಗಳು ಎಶ್ಟಿವೆ ಎಂಬುದನ್ನು ಕಚಿತವಾಗಿ ಹೇಳಲು ಬರುವುದಿಲ್ಲ; ಹಾಗಿದ್ದರೂ, ಅದು ಅಯ್ದಕ್ಕಿಂತ ಹೆಚ್ಚು ಎಂಬುದರಲ್ಲಿ ಯಾವ ಸಂಶಯವೂ ಇಲ್ಲ.

ಹಿಂದಿನ ಒಂದು ಕಾಲದಲ್ಲಿ ದ್ರಾವಿಡರು ಬಾರತದಲ್ಲಿ ಎಲ್ಲೆಡೆಗಳಲ್ಲೂ ನೆಲೆಸಿದ್ದಿರಬೇಕು, ಮತ್ತು ಇಂಡೋ-ಆರ‍್ಯನ್ ನುಡಿಗಳನ್ನಾಡುವ ಜನರು ಬಡಗು ನಾಡುಗಳಿಂದ ಬಾರತಕ್ಕೆ ವಲಸೆ ಬಂದ ಮೇಲೆ, ಹಲವಾರು ಮಂದಿ ದ್ರಾವಿಡ ನುಡಿಗಳನ್ನಾಡುವ ಜನರು ತಮ್ಮ ನುಡಿಗಳನ್ನು ಕಳೆದುಕೊಂಡು ಮರಾಟಿ, ಗುಜರಾತಿ, ಒಡಿಯಾ, ಹಿಂದಿ ಮೊದಲಾದ ಇಂಡೋ-ಆರ‍್ಯನ್ ನುಡಿಗಳನ್ನಾಡುವಂತಾಗಿರಬೇಕೆಂದು ಹಲವು ಮಂದಿ ಅರಿವಿಗರು ತೀರ‍್ಮಾನಕ್ಕೆ ಬಂದಿದ್ದಾರೆ. ಬಾರತದಲ್ಲಿ ಬಳಕೆಯಲ್ಲಿರುವ ಈ ಇಂಡೋ-ಆರ‍್ಯನ್ ನುಡಿಗಳು ಹಲವು ವಿಶಯಗಳಲ್ಲಿ ದ್ರಾವಿಡ ನುಡಿಗಳನ್ನು ಹೋಲುತ್ತಿರುವುದಕ್ಕೆ ಅವುಗಳ ಆಡುಗರು ಮೊದಲಿಗೆ ದ್ರಾವಿಡ ನುಡಿಗಳನ್ನಾಡುತ್ತಿದ್ದುದೇ ಕಾರಣವಿರಬೇಕೆಂದೂ ತಿಳಿಯಲಾಗುತ್ತಿದೆ.

ಬಾರತದಲ್ಲಿ ಬಳಕೆಯಲ್ಲಿರುವ ಹಿಂದಿ, ಮರಾಟಿ, ಗುಜರಾತಿ ಮೊದಲಾದ ಇಂಡೋ-ಆರ‍್ಯನ್ ನುಡಿಗಳನ್ನು ಯುರೋಪಿನ ಇಂಗ್ಲಿಶ್, ಜರ‍್ಮನ್, ಸ್ಪೇನಿಶ್, ಇಟೇಲಿಯನ್ ಮೊದಲಾದ ನುಡಿಗಳೊಂದಿಗೆ ಸಂಬಂದಿಸಲು ಸಾದ್ಯವಾಗಿದೆ; ಆದರೆ, ದ್ರಾವಿಡ ನುಡಿಗಳನ್ನು ಆ ರೀತಿ ಬೇರೆ ಯಾವ ನುಡಿಗಳೊಂದಿಗೂ ಎಲ್ಲರಿಗೂ ಒಪ್ಪಿಗೆಯಾಗುವಂತೆ ಇದುವರೆಗೆ ಸಂಬಂದಿಸಲು ಸಾದ್ಯವಾಗಿಲ್ಲ. ಹಾಗಾಗಿ, ಇಂಡೋ-ಆರ‍್ಯನ್ ನುಡಿಗಳು ಬಾರತಕ್ಕೆ ಹೊರಗಿನಿಂದ ಬಂದುವೆಂದು ಹೇಳಲು ಸಾದ್ಯವಾಗುವಂತೆ ದ್ರಾವಿಡ ನುಡಿಗಳು ಹೊರಗಿನಿಂದ ಬಂದುವೆಂದು ಹೇಳಲು ಸಾದ್ಯವಾಗುವುದಿಲ್ಲ.

ನುಡಿಗಳ ಎಣಿಕೆಯ ಕುರಿತು ಮಾತನಾಡುವಾಗ ಇನ್ನೊಂದು ಸಂಶಯವೂ ಹಲವರನ್ನು ಕಾಡುತ್ತದೆ; ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳ ಎಂಬ ನಾಲ್ಕು ನುಡಿಗಳಿಗೆ ಅವುಗಳದೇ ಆದ ಲಿಪಿಯಿದೆ; ಆದರೆ, ಉಳಿದವುಗಳಲ್ಲಿ ಯಾವುದಕ್ಕೂ ಅದರದೇ ಆದ ಲಿಪಿಯಿಲ್ಲ (ಇತ್ತೀಚೆಗೆ ಅವುಗಳಲ್ಲಿ ಕೆಲವಕ್ಕೆ ಲಿಪಿಗಳನ್ನು ಅಳವಡಿಸಲಾಗಿದೆ). ಲಿಪಿಯಿಲ್ಲದ ನುಡಿಗಳನ್ನು ಲಿಪಿಯಿರುವವುಗಳೊಂದಿಗೆ ಸರಿದೂಗಿಸಬಹುದೇ ಎಂಬುದೇ ಈ ಸಂಶಯ. ಅಯ್ದನೆಯ ದ್ರಾವಿಡ ನುಡಿಯಾಗಿ ಕೆಲವರು ತುಳುವಿನ ಬದಲು ಮರಾಟಿಯನ್ನು ಹೆಸರಿಸುತ್ತಿರುವುದಕ್ಕೆ ಇದೇ ಕಾರಣವಿರಬಹುದು.

ಆದರೆ, ನುಡಿಗಳ ಎಣಿಕೆಗೂ ಅವಕ್ಕೆ ಲಿಪಿಯಿದೆಯೇ, ಎಂದರೆ ಅವನ್ನು ಬರಹಕ್ಕೆ ಇಳಿಸಲಾಗಿದೆಯೇ ಎಂಬುದಕ್ಕೂ ನಡುವೆ ಯಾವ ಸಂಬಂದವೂ ಇಲ್ಲ. ಮುಕ್ಯವಾಗಿ, ಎರಡು ನುಡಿಗಳ ನಡುವೆ ವ್ಯತ್ಯಾಸ ಎಶ್ಟಿದೆ ಎಂಬುದರ ಮೇಲೆ ಅವೆರಡು ಒಂದೇ ನುಡಿಯ ಒಳನುಡಿಗಳೇ ಇಲ್ಲವೇ ಬೇರೆ ಬೇರೆ ನುಡಿಗಳೇ ಎಂಬುದನ್ನು ತೀರ‍್ಮಾನಿಸಲಾಗುತ್ತದೆ. ಇದಲ್ಲದೆ, ಇಂಡೋ-ಆರ‍್ಯನ್, ದ್ರಾವಿಡ ಎಂಬಂತಹ ನುಡಿಗಳ ಗುಂಪಿಸುವಿಕೆಗೂ ಅವು ಬಳಸುವ ಲಿಪಿಗಳಿಗೂ ನಡುವೆ ಯಾವ ಸಂಬಂದವೂ ಇಲ್ಲ. ನಿಜಕ್ಕೂ ಬಾರತದ ನುಡಿಗಳು ಬಳಸುವ ಲಿಪಿಗಳಲ್ಲಿ ಹೆಚ್ಚಿನವೂ ಬ್ರಾಹ್ಮೀ ಲಿಪಿ ಎಂಬ ಒಂದೇ ಮೂಲದಿಂದ ಬಂದಿವೆ.

ಹಲವು ನುಡಿಗಳು ಒಂದೇ ಲಿಪಿಯನ್ನು ಬಳಸುತ್ತಿರಬಲ್ಲುವು, ಮತ್ತು ಒಂದೇ ನುಡಿ ಹಲವು ಲಿಪಿಗಳನ್ನು ಬಳಸುತ್ತಿರಬಲ್ಲುದು: ಮರಾಟಿ, ಹಿಂದಿ, ಮತ್ತು ನೇಪಾಲಿ ನುಡಿಗಳು ಬಳಸುವ ಲಿಪಿಗಳ ನಡುವೆ ಹೆಚ್ಚಿನ ವ್ಯತ್ಯಾಸವೇನಿಲ್ಲ, ಮತ್ತು ತೆಲುಗು ಹಾಗೂ ಕನ್ನಡ ಲಿಪಿಗಳು ಹದಿನೆಂಟನೇ ಶತಮಾನದ ವರೆಗೆ ಒಂದೇ ಲಿಪಿಯಾಗಿದ್ದುವು. ಕೊಂಕಣಿ ನುಡಿ ರೋಮನ್, ನಾಗರಿ, ಮತ್ತು ಕನ್ನಡ ಲಿಪಿಗಳನ್ನು ಬಳಸುತ್ತಿದೆ, ಮತ್ತು ಸಿಂದಿ ನುಡಿ ನಾಗರಿ ಮತ್ತು ಪರ‍್ಸೋ-ಅರೇಬಿಕ್ ಲಿಪಿಗಳನ್ನು ಬಳಸುತ್ತಿದೆ. ಇದಲ್ಲದೆ, ಮಣಿಪುರಿ, ಮಲಯಾಳ ಮೊದಲಾದ ಬೇರೆ ಕೆಲವು ನುಡಿಗಳು ತಮ್ಮಲ್ಲಿ ಬಳಕೆಯಲ್ಲಿದ್ದ ಲಿಪಿಯನ್ನು ಬಿಟ್ಟುಕೊಟ್ಟು ಬೇರೆ ಲಿಪಿಯನ್ನು ಬಳಸತೊಡಗಿವೆ. ಹಾಗಾಗಿ, ನುಡಿಗಳು ಲಿಪಿಯನ್ನು ಬಳಸುವುದು ಒಂದು ಮಟ್ಟಿಗೆ ಜನರು ಉಡುಪನ್ನು ಬಳಸುವ ಹಾಗೆ ಎನ್ನಬಹುದು.

ಆದರೆ, ದ್ರಾವಿಡ ಮತ್ತು ಇಂಡೋ-ಆರ‍್ಯನ್ ಎಂಬ ನುಡಿಗಳ ವಿಂಗಡನೆಗೆ ಅವುಗಳ ನಡುವಿನ ವ್ಯತ್ಯಾಸವೇ ಮುಕ್ಯ ಆದಾರವಾಗಿದೆ: ಎರಡು ನುಡಿಗಳು ಒಂದೇ ನುಡಿಕುಟುಂಬಕ್ಕೆ ಸೇರಿವೆಯೆಂದು ಹೇಳಬೇಕಿದ್ದಲ್ಲಿ, ಅವೆರಡರ ನಡುವೆ ಕಾಣಿಸುವ ವ್ಯತ್ಯಾಸಗಳಲ್ಲಿ ಹೆಚ್ಚಿನವೂ ಅವುಗಳ ಹಿನ್ನಡವಳಿಯಲ್ಲಿ ನಡೆದ ಮಾರ‍್ಪಾಡುಗಳಿಂದಾಗಿ ಮೂಡಿಬಂದಿವೆಯೆಂಬುದನ್ನು ತೋರಿಸಿಕೊಡಲು ಸಾದ್ಯವಾಗಬೇಕು. ಮೇಲೆ ಪಟ್ಟಿಮಾಡಿದ ಇಪ್ಪತ್ತಾರು ದ್ರಾವಿಡ ನುಡಿಗಳ ನಡುವೆ ಕಾಣಿಸುವ ವ್ಯತ್ಯಾಸಗಳಲ್ಲಿ ಹೆಚ್ಚಿನವನ್ನೂ ಈ ರೀತಿ ಅವುಗಳ ಹಿನ್ನಡವಳಿಯಲ್ಲಿ ನಡೆದಿವೆಯೆಂದು ಹೇಳಹುದಾದ ಮಾರ‍್ಪಾಡುಗಳ ಮೂಲಕ ವಿವರಿಸಲು ಸಾದ್ಯವಾಗಿದೆ. ಹಾಗಾಗಿ, ಅವನ್ನೆಲ್ಲ ಒಟ್ಟಿಗೆ ಒಂದೇ ನುಡಿಕುಟುಂಬದಲ್ಲಿ ಗುಂಪಿಸಲಾಗಿದೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

<< ನುಡಿಯರಿಮೆಯ ಇಣುಕುನೋಟ – 34

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 09/04/2014

    […] <<ನುಡಿಯರಿಮೆಯ ಇಣುಕುನೋಟ – 35 […]

ಅನಿಸಿಕೆ ಬರೆಯಿರಿ:

Enable Notifications OK No thanks