ಕಾಲ್ತುಳಿತದ ಮೂಲಕ ಕರೆಂಟ್

– ಜಯತೀರ‍್ತ ನಾಡಗವ್ಡ

ಜಪಾನೀಯರು ಮೊದಲಿನಿಂದಲೂ ಹೊಸ ಸಂಶೋದನೆ, ತಂತ್ರಜ್ನಾನದ ವಿಶಯಗಳಲ್ಲಿ ಮುಂಚೂಣಿಯಲ್ಲಿರುತ್ತಾರೆ. ಎಶ್ಟೇ ಹಿನ್ನಡೆಯಾದರೂ ಚಲಬಿಡದ ಮಲ್ಲನಂತೆ ಮುಂದೆಬರುವುದು ಇವರ ಹುಟ್ಟುಗುಣವೇ ಎನ್ನಬಹುದು. ಜಪಾನೀಯರ ಹೊಸ ತಂತ್ರಜ್ನಾನವೊಂದು ಇದೀಗ ಜಗತ್ತಿನೆಲ್ಲೆಡೆ ಸುದ್ದಿಯಾಗಿದೆ. ಕೆಲವರು ಕಾಲಿಟ್ಟರೆ ಕೆಲಸ ಕೆಡುತ್ತದೆ, ಐರನ್ ಲೆಗ್(Iron Leg) ಎಂದೆಲ್ಲ ನಮ್ಮಲ್ಲಿ ಕೆಲವರು ಆಡಿಕೊಳ್ಳುವುದು ನೋಡಿರುತ್ತೇವೆ. ಆದರೆ ಇದೀಗ ಜಪಾನಿನಲ್ಲಿ ಎಂತವರೇ ಕಾಲಿಟ್ಟರು ದೇಶಕ್ಕೆ ಶುಬ ಶಕುನ. ಹೌದು, ಇದು ನಿಜ. ನೀವು ದಾರಿಯಲ್ಲಿ ಹೋಗುವಾಗ ಕಾಲಿಟ್ಟರೆ ಅದು ಹೇಗೆ ಶುಬ ಎಂದೀರಾ? ಬರೀ, ನಿಮ್ಮ ನಡಿಗೆಯ ಮೂಲಕ ವಿದ್ಯುತ್ ಹುಟ್ಟುಹಾಕಬಹುದು. ಈ ರೀತಿಯ ಹೊಸ ತಂತ್ರಜ್ನಾನವೊಂದನ್ನು ಜಪಾನನಲ್ಲಿ ಜಾರಿಗೆ ತರಲಾಗುತ್ತಿದೆ.

ನಾವು ಕಾಲಿಟ್ಟಾಗ, ಕಾಲು ನೆಲದ ಮೇಲೆ ಒತ್ತಡ ಅಂದರೆ ಸ್ಟ್ರೆಸ್(Stress) ಹಾಕುತ್ತದೆ. ಈ ಒತ್ತಡವನ್ನೇ ವಿದ್ಯುತ್ತಾಗಿ ಬದಲಾಯಿಸಬಹುದು. ಕಾಲಿನ ಒತ್ತಡ-ಮೆಕ್ಯಾನಿಕಲ್ ಸ್ಟ್ರೆಸ್ ಹಾಕಿದಾಗ ಕೆಳಗೆ ಸಾಮಾನ್ಯ ನೆಲದ ಬದಲು ಪೀಜೊಇಲೆಕ್ಟ್ರಿಕ್ ಅರಿವಿಕಗಳು(Piezoelectric Sensors) ಕೂಡಲೇ ಈ ಒತ್ತಡವನ್ನು ವಿದ್ಯುತ್ತಾಗಿ ಬದಲಾಯಿಸುತ್ತವೆ. ಪೀಜೊಇಲೆಕ್ಟ್ರಿಕ್ ವಸ್ತುಗಳು, ಸಾಮಾನ್ಯವಾಗಿ ವಸ್ತುವೊಂದರ ಮೇಲೆ ಬೀಳುವ ಒತ್ತಡ/ಬಲವನ್ನು ಬಳಸಿ ಅದನ್ನು ವಿದ್ಯುತ್ ಶಕ್ತಿಯಾಗಿ ಬದಲಾಯಿಸುವಂತವು. ಸಾಮಾನ್ಯವಾಗಿ ಮ್ಯೂಸಿಕಲ್ ಗ್ರೀಟಿಂಗ್ ಕಾರ‍್ಡ್ಸ್, ಮೊಬೈಲ್, ಸದ್ದು ಮಾಡುವ ಆಟಿಕೆ, ಮ್ಯೂಸಿಕಲ್ ಬಲೂನ್, ಕಾರಿನ ಬೀಗದ ಕೈ, ಮೆಡಿಕಲ್ ಸಂಬಂದಿತ ಉಪಕರಣಗಳು, ಅಲ್ಟ್ರಾಸೋನಿಕ್ ಸದ್ದು ಹೊರಸೂಸಿ ಇಲಿ/ಹೆಗ್ಗಣ ದೂರವಿಡುವ ಉಪಕರಣಗಳು ಹೀಗೆ ಮುಂತಾದ ದಿನಬಳಕೆಯ ಸಾಮಗ್ರಿಗಳಲ್ಲಿ ಪೀಜೊಇಲೆಕ್ಟ್ರಿಕ್ ವಸ್ತುಗಳನ್ನು ಬಳಸಲಾಗುತ್ತದೆ. ಇದೇ ಚಳಕವನ್ನು ಬಳಸಿ ಕಾಲಿನ ಒತ್ತಡದ ಮೂಲಕ ವಿದ್ಯುತ್ ತಯಾರಿಸುವ ಜಪಾನಿನ ನಡೆ ಎಲ್ಲರಿಗೆ ಮೆಚ್ಚುಗೆಯಾಗಿದೆ.

ಜನ ಓಡಾಡುವ ಹಲವು ಜಾಗಗಳಲ್ಲಿ, ಈ ಪೀಜೊಇಲೆಕ್ಟ್ರಿಕ್ ಟೈಲ್ಸ್(ನೆಲಹಾಸು)ಗಳನ್ನು ಅಳವಡಿಸಲಾಗಿದೆ. ಜನ ಹೆಜ್ಜೆಯಿಟ್ಟ ತಕ್ಶಣ ವಿದ್ಯುತ ಉತ್ಪಾದನೆಯಾಗುತ್ತಿರುತ್ತದೆ. ಪೀಜೊಇಲೆಕ್ಟ್ರಿಕ್ ವಸ್ತುಗಳು ಸಾಮಾನ್ಯವಾಗಿ ಕಿರುಮಟ್ಟದಲ್ಲಿ ವಿದ್ಯುತ್ ಉಂಟು ಮಾಡುತ್ತವೆ. ಜನ ಹೆಜ್ಜೆಯಿಟ್ಟಶ್ಟು ವಿದ್ಯುತ್ ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚುತ್ತ ಹೋಗುತ್ತದೆ. ಜನನಿಬಿಡ ಮಾರುಕಟ್ಟೆ, ರೈಲು ನಿಲ್ದಾಣ, ಬಾನೋಡ ನಿಲ್ದಾಣ, ಮಾಲ್‌ಗಳಲ್ಲಿ ಈ ತೆರನಾದ ನೆಲಹಾಸುಗಳನ್ನು ಜಪಾನನಲ್ಲಿ ಅಳವಡಿಸಲಾಗಿದೆ. ಈ ಪೀಜೊಇಲೆಕ್ಟ್ರಿಕ್ ನೆಲದ ಹಾಸುಗಳಿಗೆ ಜೋಡಿಸಿರುವ ವಿದ್ಯುತ್ ಕೂಡಿಡುವ ಉಪಕರಣದ ಮೂಲಕ ವಿದ್ಯುತ್ತನ್ನು ಕೂಡಿಟ್ಟುಕೊಳ್ಳಬಹುದು. ಇದೇ ವಿದ್ಯುತ್ ಬಳಸಿ, ಜಪಾನನಲ್ಲಿ ಬೀದಿ ದೀಪಗಳು, ಟ್ರಾಪಿಕ್ ದೀಪಗಳು, ಮುಂತಾದ ದೈನಂದಿನ ಅಗತ್ಯತೆಗೆ ಬಳಸಿಕೊಳ್ಳಲಾಗುತ್ತಿದೆ. ಈ ರೀತಿ ಮಾಡುವುದರಿಂದ ಜಪಾನ್ ಅಳಿದುಹೋಗುವ ಮೂಲಗಳನ್ನು ಬಳಸದೇ ವಿದ್ಯುತ್ ಪಡೆಯುವ ಕೆಲಸಮಾಡುತ್ತಿದೆಯಲ್ಲದೇ, ಜಾಗತಿಕ ಬಿಸುಪು ಹೆಚ್ಚಳವಾಗುವುದನ್ನು ತಡೆಯುವುದರಲ್ಲಿ ತನ್ನದೇ ಕಾಣಿಕೆ ನೀಡುತ್ತಿದೆ.

ಯಾವುದೇ ತಂತ್ರಜ್ನಾನ ಅನುಕೂಲಗಳೊಂದಿಗೆ ಅನಾನುಕೂಲಗಳನ್ನು ಹೊತ್ತು ತರುತ್ತದೆ. ಮುಂಚೆ ಹೇಳಿದಂತೆ ಪೀಜೊಇಲೆಕ್ಟ್ರಿಕ್‌ಗಳು ಕಿರುಮಟ್ಟದ ವಿದ್ಯುತ್ ಮಾತ್ರ ಉಂಟುಮಾಡಬಲ್ಲವು. ಇವುಗಳ ಅಳವಡಿಕೆಗೆ ಹೂಡಿಕೆಯ ವೆಚ್ಚವೂ ಹೆಚ್ಚಿನ ಮಟ್ಟದಲ್ಲಿದೆ. ಈ ಎರಡು ಪ್ರಮುಕ ಅನಾನುಕೂಲಗಳನ್ನು ಬಿಟ್ಟರೆ , ಈ ಹೊಸ ಚಳಕ ನಿಜಕ್ಕೂ ಅನುಕೂಲಕರವಾಗಿದೆ. ಕಡಿಮೆ ಪ್ರಮಾಣದ ವಿದ್ಯುತ್ ಮಾಡುವ ಪೀಜೊಇಲೆಕ್ಟ್ರಿಕ್ ನೆಲದಹಾಸುಗಳಿಂದ ಯಾವುದೇ ಶಾಕ್ ಹೊಡೆಯುವ ಬಯವೂ ಇಲ್ಲ. ಅಳವಡಿಕೆಯ ವೆಚ್ಚ ತಗ್ಗಿಸಲು, ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆ, ರೈಲು ನಿಲ್ದಾಣ, ಜನನಿಬಿಡ ಪ್ರದೇಶಗಳಲ್ಲಿ ಇದನ್ನು ಬಳಸುತ್ತ ಸಾಗಿದರೆ ಇದು “ಸ್ಕೇಲಿಂಗ್” ಆಗಿ ವೆಚ್ಚ ತಗ್ಗಿಸಬಹುದು. ಬೇರೆ ದೇಶಗಳು ಇದನ್ನು ಅಳವಡಿಸಿ, ಜಾಗತಿಕ ಬಿಸುಪು ಹೆಚ್ಚಳ ತಡೆಯಬಹುದು.

(ಚಿತ್ರ ಸೆಲೆ: blog.piezo.com)

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *