ರನ್ನ ಕವಿಯ ಗದಾಯುದ್ದ ಪ್ರಸಂಗ ಓದು – 4ನೆಯ ಕಂತು

– ಸಿ.ಪಿ.ನಾಗರಾಜ.

*** ಪ್ರಸಂಗ – 4: ದುರ್ಯೋಧನನ ಆಕ್ರೋಶ ***

ತೀ.ನಂ.ಶ್ರೀಕಂಠಯ್ಯ (ಸಂಪಾದಕರು): ರನ್ನ ಕವಿ ಗದಾಯುದ್ಧ ಸಂಗ್ರಹಂ ( ಕಾವ್ಯ ಭಾಗ ಮತ್ತು ಟಿಪ್ಪಣಿಗಳು) ಈ ಹೊತ್ತಗೆಯ ‘ಸಂಜಯ ವಚನಮ್’ ಎಂಬ ಹೆಸರಿನ 3 ನೆಯ ಅಧ್ಯಾಯದ 23 ನೆಯ ಪದ್ಯದಿಂದ 34 ನೆಯ ಪದ್ಯದ ವರೆಗಿನ ಕಾವ್ಯವನ್ನು ನಾಟಕ ರೂಪಕ್ಕೆ ಅಳವಡಿಸಿದೆ.

ಪಾತ್ರಗಳು

ದುರ್ಯೋಧನ: ಗಾಂದಾರಿ ಮತ್ತು ದ್ರುತರಾಶ್ಟ್ರ ದಂಪತಿಗಳ ಹಿರಿಯ ಮಗ. ಹಸ್ತಿನಾವತಿಯ ರಾಜ.
ಸಂಜಯ: ದ್ರುತರಾಶ್ಟ್ರನ ಆಪ್ತ ಸೇವಕ. ಕುರುಕ್ಶೇತ್ರ ರಣರಂಗದ ಸುದ್ದಿಯನ್ನು ದ್ರುತರಾಶ್ಟ್ರನಿಗೆ ವರದಿ ಮಾಡುವ ಕೆಲಸದಲ್ಲಿ ತೊಡಗಿದ್ದವನು

*** ದುರ್ಯೋಧನನ ಆಕ್ರೋಶ ***

ಸಂಜಯನ ನುಡಿಗೆ ಫಣಿರಾಜಕೇತನನ್ ಸಿಡಿಲ್ದು…

ದುರ್ಯೋಧನ: ಆ ಧರ್ಮಪುತ್ರನ್ ಸ್ಥಿರಸತ್ಯವ್ರತಿಯೆಂದು… ಧರ್ಮರುಚಿಯೆಂದು… ದಯಾಪರನೆಂದು… ಎಲ್ಲರ ಪೇಳ್ದ ಮಾತು… ಆ

ಕಾರ್ಮುಕಾಚಾರ್ಯನನ್… ಗುರುವನ್… ಬ್ರಾಹ್ಮಣನನ್… ತೊದಳ್ ನುಡಿದು ಕೊಂದಂದು ಪುಸಿಯಾಯ್ತು.“ಮೃಷಾಪಾತಕಮ್ ಪರಮ್ ”

ಎಂಬ ಈ ನುಡಿಯಿಮ್… ಪೃಥಾಪ್ರಿಯಸುತನ್ ಪಾಪಕ್ಕೆ ಪಕ್ಕಾಗನೇ … “ಈ ದೊರೆಯ ಅರಮಗನುಮ್ ಮೃಷವಾದನ್ ನೋಡು” ಎಂದು

ಧರ್ಮನನ್ ಮೂದಲಿಸಲ್ ಯಮಪುರಕೆ ಮುಕ್ತಬಾಣನ್ ದ್ರೋಣನ್ ಪೋದನ್. ಪುತ್ರನನ್ ಅರಸಲ್ ಪೋದನೆ.

ಸಭೆಯೊಳ್ ಎನ್ನ ಅನುಜನ್ ವನಿತೆಯ ಕೇಶಮಮ್ ತೆಗೆವಲ್ಲಿ… ಗಂಡನಾಗನೆ; ಭಗದತ್ತನ ಆನೆ ಬರಿಯೆಲ್ವು ಉಡಿವನ್ನೆಗಮ್

ಒತ್ತೆ… ಗಂಡನಾಗನೆ; ಅಂಗಪತಿ ಕೊಲಲ್ ಒಲ್ಲದೆ ಬಿಲ್ಲೊಳೆ ಕೋದು ಎಳೆವಲ್ಲಿ… ಗಂಡನಾಗನೆ; ಕುರುಬಾಲಸಂಹರಣ ಮಾತ್ರದೆ

ಮಾರುತಿ… ಗಂಡನಾದನೇ… ಒಡವುಟ್ಟಿದರಮ್ ಕೊಂದು… ಅವರ ಅಡಗಮ್ ತಿಂದು… ಅವರ ನೆತ್ತರಮ್ ಬೆಲಗಸೆಯೊಳ್ ಕುಡಿವ ಈ

ನಿಶ್ತ್ರಿಂಶತೆಯಮ್ ಭೀಮನ್ ಹಿಡಿಂಬಿಯನ್ ಪೊರ್ದಿ ಕಲ್ತನಾಗನೆ.

ಎನಗೆ ಆ ಜೂದಿನೊಳ್ ಪೃಥಾನಂದನನ್ ಅಗ್ರಜಾನುಜ ಸಮೇತಮ್ ಗಂಡು ತೊಳ್ತಾಗಿ… ಕಾನನದೊಳ್ ವಲ್ಕಲಧಾರಿಯಾಗಿ… ಹರನೊಳ್

ದಿವ್ಯಾಸ್ತ್ರಮಮ್ ಬೇಡೆ ಬೆಳ್ತನದಿಮ್ ತಾಪಸನಾಗಿ… ಮತ್ಸ್ಯಾವಾಸದೊಳ್ ಪೇಡಿಯೆನೆ ವಾಸುದೇವನ ನಂಟಮ್ ನಟನಾಗಿ ಬಾರದ ಭವಮ್

ಬಂದನ್;

ಗುರುವನ್ ಪ್ರೋಜ್ಝಿತಚಾಪನನ್ ಪುಸಿದು ಕೊಂದ ಆ ಬೀರಮಮ್… ಶರಶಯ್ಯಾಗತರಮ್ ಭೀಷ್ಮರನ್ ಕರುತ್ತು ಗುರಿಯೆಚ್ಚ ಆ ಪೊಚ್ಚರಮ್…

ವಿರಥಜ್ಯಾಯುಧನ್ ಎನ್ನದೆ ಕರ್ಣನನ್ ಎಚ್ಚು ತಲೆಗೊಂಡ ಆ ಶೌರ್ಯಮಮ್ ಮೆರೆಯಲ್ಕೆ ಪಾಂಡುಪುತ್ರರೆ ಬಲ್ಲರ್… ಸಾಹಸಧನಮ್

ದುರ್ಯೋಧನನ್ ಬಲ್ಲನೇ.

ಅಕ್ಕಟ… ಯಮಜನ್ ದರ್ಭಪಾಣಿ … ವಾಯುಪುತ್ರಕನುಮ್ ದರ್ವೀಕರಮ್ … ಇಂದ್ರತನಯನ್ ಜರ್ಜರ ಹಸ್ತನ್ … ದಸ್ರಾತ್ಮಜರ್

ದಂಡಮುಷ್ಟಿಕರರ್… ಸೊಕಮ್ ಇರ್ಕೆ… ಅವರ್ಗಮ್ ಶಸ್ತ್ರವಿಡಂಬಮ್ ಏವುದು… ಪಾಂಚಾಲಿಯುಮ್ ಗಂಧದಾಯಕಿಯಾಗಿರ್ಪಿನಮ್ … ಅಂದು

ಮತ್ಸ್ಯಗೃಹದಿಂದೆ ಈ ನಿಗ್ರಹಮ್ ಪೊಲ್ಲದೇ.

ಸಭೆಯೊಳ್ ತಮ್ಮಯ ಪಕ್ಕದೆ ಎನ್ನ ಅನುಜನ್ ಆ ಪಂಚವಲ್ಲಭೆಯನ್ ಪಾಂಚಾಲಿಯನ್ ಮೋದೆಯುಮ್… ಅಲ್ಲಿ ಮಿಳ್ಮಿಳನೆ ನೋಡುತ್ತಿರ್ದ

ಬಲ್ಲಾಳ್ಗಳ್… ಇಲ್ಲಿ ಭರಂಗೆಯ್ದಪರ್ … ಈ ಪರಾಕ್ರಮುಮ್… ಈ ಪೆರ್ಮಾತುಮ್… ಈ ಗಂಡುಮ್… ಈ ಸುಭಟ ಆಲಾಪಮುಮೆಲ್ಲಮ್ ಆ

ನೃಪತಿಗಳ್ಗೆ ಅಂದು ಎಲ್ಲಿ ಪೊಕ್ಕಿರ್ದುದೊ.

(ಎಂದು ಧೃತರಾಷ್ಟ್ರನಂದನನ್ ಧರ್ಮನಂದನನುಮನ್, ವಾಯುನಂದನನುಮನ್, ಸಂಕ್ರಂದನ ನಂದನನುಮನ್,

ಅಶ್ವಿನೀನಂದನರುಮನ್ ನಿರಾಕರಣಮ್ ಗೆಯ್ದು ಅನಿತರೊಳಮ್ ಮಾಣದೆ… )

ಪವನಂಗೆ ಪುಟ್ಟಿದನ್… ರಾಘವನ ಅಣುಗಾಳ್… ತ್ರಿಣಯನಾಂಶಮ್ ಎನಿಪ ಅಣುವನ್ ಪಾಂಡವಕೇತುದಂಡದೊಳ್ ನೆಲಸುವುದು ಆವ

ಅಗ್ಗಳಿಕೆ… ಕಪಿಗೆ ಚಪಲತೆ ಸಹಜಮ್.

ಕೃಷ್ಣನ್ ನರಂಗೆ ಅನುಜೆಯನ್ ಇತ್ತು… ಆತನ ತನಯಂಗೆ ತನ್ನ ಮಗಳನ್ ಇತ್ತು… ತಾನ್ ಆತನ ರಥಮನ್ ಎಸಗಿ… ಧರ್ಮಜನ ಅನುಜನ

ನೆವದಿಂದಮ್ ಅರಸುಗೆಯ್ವನ್. ಪುರುಷರ್ ಮೂವರೊಳ್ ಒರ್ಬನ್ ಎಂಬರ್… ಅಸುರಪ್ರಧ್ವಂಸಿಯೆಂಬರ್… ಜಗದ್ಗುರುವೆಂಬರ್… ಪೆರರ್ಗೆ ಏಕೆ

ತೇರನ್ ಎಸಪನ್… ಧರ್ಮಾನುಜಂಗೆ ಏಕೆ ಕಿಂಕರನಾದನ್… ಕರವೇಳಿಯಾದನ್… ಅದರಿಮ್ ಕೃಷ್ಣಂಗೆ ಸೂತನ್ … ಭಟನ್ … ಪೇಳಿ ಎಂಬರ

ಮಾತು ಒಪ್ಪುಗುಮ್. ಆದಿ ದೇವನ್ ಎನಿಸಲ್… ಅದು ಎಂತು ಒಪ್ಪುಗುಮ್. ಅನಿಮೇಷಾದ್ಯವತಾರಮ್ ದಶಾವತಾರಮ್ ತನಗಾಯ್ತು.

ಅನಿತರೊಳ್ ಇರದೆ ಅರ್ಜುನನ ರಥಮ್ ಎಸಪ ಪನ್ನೊಂದನೆಯದು ಸೂತಾವತಾರಮುಮ್ ಹರಿಗಾಯ್ತೇ.

( ಎಂದು ದುರ್ಯೋಧನನ್ ಕಪಿರಾಜನುಮನ್ ಕಂಜೋದರನುಮನ್ ನಿರಾಕರಣಮ್ ಗೆಯ್ದು… ಅನಿತರೊಳಮ್ ಮಾಣ್ದು

ಸೈರಿಸಲಾರದೆ… ಸಮರೋದ್ಯೋಗಮ್ ಗೆಯ್ಯೆ… ಸಂಜಯನ್ ಅಂಜದೆ ಮಾರ್ಕೊಂಡು… )

ತಿರುಳು: ದುರ್‍ಯೋದನನ ಆಕ್ರೋಶ

ಫಣಿರಾಜಕೇತನ=ಹಾವಿನ ಚಿತ್ರವನ್ನು ಬಾವುಟದಲ್ಲಿ ರಾಜ ಲಾಂಚನವಾಗುಳ್ಳ ದುರ್‍ಯೋದನ;

ಸಂಜಯನ ನುಡಿಗೆ ಫಣಿರಾಜಕೇತನನ್ ಸಿಡಿಲ್ದು=ಸಂಜಯನು ಅಯ್ದು ಮಂದಿ ಪಾಂಡವರ ಪರಾಕ್ರಮವನ್ನು ಹೊಗಳಿದ್ದನ್ನು ಕೇಳಿ ದುರ್‍ಯೋದನನು ಕೆರಳಿ ಕೋಪೋದ್ರೇಕದಿಂದ;

ಆ ಧರ್ಮಪುತ್ರನ್ ಸ್ಥಿರಸತ್ಯವ್ರತಿಯೆಂದು=ಆ ದರ್‍ಮರಾಯನು ಸದಾಕಾಲ ಸತ್ಯದ ನಡೆನುಡಿಯುಳ್ಳವನೆಂದು;

ಧರ್ಮರುಚಿಯೆಂದು=ಒಳ್ಳೆಯ ನಡೆನುಡಿಯಲ್ಲಿಯೇ ಆಸಕ್ತಿಯುಳ್ಳವನೆಂದು;

ದಯಾಪರನೆಂದು=ಕರುಣಾಶೀಲನೆಂದು;

ಎಲ್ಲರ ಪೇಳ್ದ ಮಾತು=ದರ್ಮರಾಯನ ಸಜ್ಜನಿಕೆಯ ಬಗ್ಗೆ ಜನರೆಲ್ಲರೂ ಹೇಳುತ್ತಿದ್ದ ಮಾತು;

ಕಾರ್ಮುಕ+ಆಚಾರ್ಯನನ್; ಕಾರ್ಮುಕ=ಬಿಲ್ಲು; ತೊದಳ್ ನುಡಿದು=ಸುಳ್ಳನ್ನು ಹೇಳಿ; ಪುಸಿ+ಆಯ್ತು; ಪುಸಿ=ಸುಳ್ಳು;

ಆ ಕಾರ್ಮುಕಾಚಾರ್ಯನನ್… ಗುರುವಮ್… ಬ್ರಾಹ್ಮಣನನ್… ತೊದಳ್ ನುಡಿದು ಕೊಂದಂದು ಪುಸಿಯಾಯ್ತು=ದರ್‍ಮರಾಯನು ಬಿಲ್ ವಿದ್ಯೆಯನ್ನು ಕಲಿಸುವ ಗುರುವಾದ ಆ ಬ್ರಾಹ್ಮಣ ದ್ರೋಣನನ್ನು ಸುಳ್ಳು ನುಡಿಯನ್ನಾಡಿ ಕೊಂದ ಗಳಿಗೆಯಿಂದಲೇ “ದರ್‍ಮರಾಯನು ಸತ್ಯವಂತ” ಎಂದು ಜನರಾಡುವ ಮಾತು ಸುಳ್ಳಾಯಿತು;

ಮೃಷಾ=ಸುಳ್ಳು; ಪಾತಕ=ಪಾಪ/ಕೆಟ್ಟ ಕೆಲಸ;

“ಮೃಷಾಪಾತಕಮ್ ಪರಮ್” ಎಂಬ ಈ ನುಡಿಯಿಮ್=“ಸುಳ್ಳನ್ನಾಡುವುದು ಅತ್ಯಂತ ಪಾಪದ ಕೆಲಸ ” ಎಂಬ ನುಡಿಯಂತೆ; ಪೃಥಾಸುತರು=ಕುಂತಿಯ ಮಕ್ಕಳು/ಪಂಚ ಪಾಂಡವರು;

ಪೃಥಾಪ್ರಿಯಸುತ=ಈ ಸನ್ನಿವೇಶದಲ್ಲಿ ಈ ಪದಕ್ಕೆ ದರ್‍ಮರಾಯ ಎಂಬ ತಿರುಳಿದೆ;

ಪೃಥಾಪ್ರಿಯಸುತನ್ ಪಾಪಕ್ಕೆ ಪಕ್ಕಾಗನೇ=ಕುಂತಿಯ ಮೆಚ್ಚಿನ ಮಗನಾದ ದರ್‍ಮರಾಯನು ಪಾಪಕ್ಕೆ ಗುರಿಯಾಗುವುದಿಲ್ಲವೇ;

ದೊರೆ=ಸಮಾನ/ರೀತಿ/ಬಗೆ; ಅರ=ಯಮ; ಅರಮಗ=ಯಮನೆಂಬ ದೇವತೆಯ ಅಂಶದಿಂದ ಹುಟ್ಟಿರುವ ದರ್‍ಮರಾಯ; ಮೃಷವಾದನು=ಸುಳ್ಳುಗಾರನಾದನು; ಮುಕ್ತಬಾಣ=ಯುದ್ದ ಮಾಡದೆ ಬಾಣವನ್ನು ಕೆಳಗಿಟ್ಟ ದ್ರೋಣ;

“ಈ ದೊರೆಯ ಅರಮಗನುಮ್ ಮೃಷವಾದನ್ ನೋಡು” ಎಂದು ಧರ್ಮನನ್ ಮೂದಲಿಸಲ್ ಯಮಪುರಕೆ ಮುಕ್ತಬಾಣನ್ ದ್ರೋಣನ್ ಪೋದನ್=“ಎಲೆ ಯಮದೇವತೆಯೇ, ಸತ್ಯವಂತನೆಂದು ಹೆಸರಾಂತ ನಿನ್ನ ಮಗ ದರ್‍ಮರಾಯನು ಸುಳ್ಳುಗಾರನಾಗಿದ್ದಾನೆ ನೋಡು” ಎಂದು ಯಮನನ್ನು ಹಂಗಿಸಲು ಯಮಪುರಕ್ಕೆ ದ್ರೋಣನು ಹೋಗಿದ್ದಾನೆ;

ಪುತ್ರನನ್ ಅರಸಲ್ ಪೋದನೆ=ದ್ರೋಣನೇನು ಮಗನಾದ ಅಶ್ವತ್ತಾಮನನ್ನು ಹುಡುಕಿಕೊಂಡು ಯಮಲೋಕಕ್ಕೆ ಹೋಗಿದ್ದಾನೆಯೇ; ಬಿಲ್ಲುಬಾಣಗಳನ್ನು ತೊರೆದು ದ್ರೋಣರ ಸಾವನ್ನಪ್ಪಿದ ರೀತಿಯನ್ನು ದುರ್‍ಯೋದನನು ಕಟುವಾದ ನುಡಿಗಳಿಂದ ಹಂಗಿಸುತ್ತ, ಜತೆಜತೆಗೆ ದರ್‍ಮರಾಯನ ವಂಚನೆಯನ್ನು ತೆಗಳುತ್ತಿದ್ದಾನೆ; ಯುದ್ದ ನಡೆಯುತ್ತಿರುವಾಗ ಕೌರವರ ಪಡೆಯಲ್ಲಿದ್ದ ಅಶ್ವತ್ತಾಮ ಎಂಬ ಹೆಸರಿನ ಆನೆಯು ಸಾವನ್ನಪ್ಪಿದ್ದನ್ನು ದರ್‍ಮರಾಯನುಕ್ರಿಶ್ಣನ ಕಪಟತನದ ಸೂಚನೆಯಂತೆ ದ್ರೋಣಾಚಾರ್‍ಯರಿಗೆ ಕೇಳಿಸುವಂತೆ “ಅಶ್ವತ್ತಾಮ ಹತಹ” ಎಂದು ಕಿರುಚುತ್ತಾನೆ. ಇದನ್ನು ಕೇಳಿದ ಕೂಡಲೇ ದ್ರೋಣಾಚಾರ್‍ಯರು ತಮ್ಮ ಮಗ ಅಶ್ವತ್ತಾಮನೇ ಸತ್ತನೆಂದು ತಿಳಿದು, ಪುತ್ರಶೋಕದಿಂದ ಪರಿತಪಿಸುತ್ತ, ಬಿಲ್ಲುಬಾಣಗಳನ್ನು ಕೆಳಕ್ಕಿಡುತ್ತಾರೆ. ಅನಂತರ ದ್ರುಪದನ ಮಗನಾದ ದ್ಯುಶ್ಟದ್ಯುಮ್ನನಿಂದ ಸಾವನ್ನಪ್ಪುತ್ತಾರೆ;

ಈಗ ದುರ್ಯೋದನನ ಆಕ್ರೋಶ ಮತ್ತು ವ್ಯಂಗದ ನುಡಿಗಳು ಬೀಮನತ್ತ ತಿರುಗುತ್ತವೆ; ಗಂಡ=ಶೂರ/ವೀರ; ಗಂಡನಾಗನೆ=ಏಕೆ ಶೂರನಾಗಲಿಲ್ಲ/ಅವನ ಗಂಡುತನಕ್ಕೆ ಏನಾಗಿತ್ತು;

ಸಭೆಯೊಳ್ ವನಿತೆಯ ಕೇಶಮಮ್ ಎನ್ನ ಅನುಜನ್ ತೆಗೆವಲ್ಲಿ… ಗಂಡನಾಗನೆ=ದರ್‍ಮರಾಯನು ಜೂಜಿನಲ್ಲಿ ಸೋತ ದಿನದಂದು ರಾಜಸಬೆಯಲ್ಲಿ ದ್ರೌಪದಿಯು ಮುಡಿಯನ್ನು ನನ್ನ ತಮ್ಮನಾದ ದುಶ್ಶಾಸನನು ಹಿಡಿದೆಳೆಯುವಾಗ… ಈ ನಿನ್ನ ಬೀಮನು ಏಕೆ ಶೂರನಾಗಿ ತಡೆಯಲಿಲ್ಲ. ಅಂದು ಬೀಮನ ಗಂಡುತನಕ್ಕೆ ಏನಾಗಿತ್ತು;

ಉಡಿ+ಅನ್ನೆಗಮ್; ಉಡಿ=ಮುರಿ/ತುಂಡಾಗು; ಅನ್ನೆಗಮ್=ವರೆಗೂ/ತನಕ; ಒತ್ತು=ಅದುಮು;

ಭಗದತ್ತನ ಆನೆ ಬರಿಯೆಲ್ವು ಉಡಿವನ್ನೆಗಮ್ ಒತ್ತೆ… ಗಂಡನಾಗನೆ=ಕೌರವ ಪಡೆಯ ವೀರನಾದ ಭಗದತ್ತನ ಸುಪ್ರತೀಕವೆಂಬ ಹೆಸರಿನ ಆನೆಯು ಕುರುಕ್ಶೇತ್ರದ ರಣರಂಗದಲ್ಲಿ ಬೀಮನ ಎದೆಯ ಪಕ್ಕೆಲೆಬು ಮುರಿಯುವಂತೆ ತುಳಿಯತೊಡಗಿದಾಗ … ಬೀಮನ ಪರಾಕ್ರಮಕ್ಕೆ ಏನಾಗಿತ್ತು; ಆನೆಯ ತುಳಿತಕ್ಕೆ ಸಿಲುಕಿದ್ದ ನಲುಗುತ್ತಿದ್ದ ಬೀಮನನ್ನು ಅರ್‍ಜುನನು ಬಂದು ಕಾಪಾಡುತ್ತಾನೆ;

ಅಂಗಪತಿ=ಅಂಗರಾಜ್ಯದ ಒಡೆಯನಾದ ಕರ್‍ಣ; ಕೋದು=ಚುಚ್ಚಿ;

ಅಂಗಪತಿ ಕೊಲಲ್ ಒಲ್ಲದೆ ಬಿಲ್ಲೊಳೆ ಕೋದು ಎಳೆವಲ್ಲಿ… ಗಂಡನಾಗನೆ=ಕರ್‍ಣನು ಬೀಮನನ್ನು ಕೊಲ್ಲಲು ಇಚ್ಚಿಸದೆ, ತನ್ನ ಬಿಲ್ಲಿನ ಬಾಗಿದ ತುದಿಯಿಂದ ಬೀಮನನ್ನು ಚುಚ್ಚಿ ಗಾಸಿಗೊಳಿಸಿ, ತನ್ನತ್ತ ಎಳೆದಾಡುವಾಗ… ಬೀಮನೇಕೆ ಪರಾಕ್ರಮಿಯಾಗಿ ಹೋರಾಡಲಿಲ್ಲ; ಕುರುಕ್ಶೇತ್ರ ರಣರಂಗದಲ್ಲಿ ಒಂದು ದಿನ ಕರ್‍ಣ ಮತ್ತು ಬೀಮನು ಎದುರೆದುರಾಗಿ ಹೋರಾಡುವಾಗ, ಬೀಮನು ಸೋಲುತ್ತಾನೆ. ಆಗ ಕರ್‍ಣನು ತಾಯಿಯಾದ ಕುಂತಿಗೆ ಕೊಟ್ಟ ಮಾತಿನಂತೆ ಬೀಮನನ್ನು ಕೊಲ್ಲದೆ, ಬಿಲ್ಲಿನ ತುದಿಯಿಂದ ಬೀಮನನ್ನು ಚುಚ್ಚಿ ಗಾಸಿಗೊಳಿಸಿ ಎಳೆದಾಡಿ ಅಪಮಾನಗೊಳಿಸಿ ಬಿಟ್ಟುಬಿಡುತ್ತಾನೆ. ಇದನ್ನು ನೋಡಿದ್ದ ದುರ್ಯೋದನನು ಅಂದಿನ ಪ್ರಸಂಗವನ್ನು ನೆನಪಿಸಿಕೊಂಡು ಬೀಮನ ಶೂರತನದ ಬಗ್ಗೆ ವ್ಯಂಗ್ಯವಾಡುತ್ತಿದ್ದಾನೆ;

ರುತಿ=ವಾಯುಪುತ್ರನಾದ ಬೀಮ;

ಕುರುಬಾಲಸಂಹರಣ ಮಾತ್ರದೆ ಮಾರುತಿ… ಗಂಡನಾದನೇ=ಕುರುವಂಶದ ಮಕ್ಕಳನ್ನು ಅಂದರೆ ನನ್ನ ತಮ್ಮಂದಿರೆಲ್ಲರನ್ನೂ ಕೊಂದ ಮಾತ್ರದಿಂದಲೇ ಬೀಮನು ಶೂರನಾದನೇ;

ಒಡವುಟ್ಟಿದರಮ್ ಕೊಂದು=ಒಡಹುಟ್ಟಿದ ತಮ್ಮಂದಿರನ್ನೇ ಕೊಂದು; ಅಂದರೆ ನನ್ನ ತಮ್ಮಂದಿರು ಬೀಮನಿಗೂ ತಮ್ಮಂದಿರಾಗಬೇಕು;

ಅವರ ಅಡಗಮ್ ತಿಂದು=ಅವರ ಮಾಂಸವನ್ನು ತಿಂದು;

ನೆತ್ತರು=ರಕ್ತ; ಬೆಲಗಸೆ=ಬೊಗಸೆ; ನಿಶ್ತ್ರಿಂಶತೆ=ಕರುಣೆಯಿಲ್ಲದಿರುವುದು/ಕ್ರೂರತನ; ಪೊರ್ದು=ಕೂಡಿ;

ಅವರ ನೆತ್ತರಮ್ ಬೆಲಗಸೆಯೊಳ್ ಕುಡಿವ ಈ ನಿಶ್ತ್ರಿಂಶತೆಯಮ್ =ನನ್ನ ತಮ್ಮಂದಿರ ರಕ್ತವನ್ನು ಬೊಗಸೆಯಲ್ಲಿ ಕುಡಿದ ಕ್ರೂರತನವನ್ನು;

ಭೀಮನ್ ಹಿಡಿಂಬಿಯನ್ ಪೊರ್ದಿ ಕಲ್ತನಾಗನೆ=ಬೀಮನು ಹಿಡಿಂಬಿಯ ಜತೆಗೂಡಿ ಕಲಿತಿದ್ದಾನಲ್ಲವೇ; ಕಾಡಿನ ಬುಡಕಟ್ಟು ಜನಸಮುದಾಯಕ್ಕೆ ಸೇರಿದ ಹಿಡಿಂಬಿಯು ಬೀಮನ ಹೆಂಡತಿ; ಜೂಜಿನ ಸನ್ನಿವೇಶದಲ್ಲಿ ದರ್‍ಮರಾಯನು ದ್ರೌಪದಿಯನ್ನು ಪಣವಾಗಿ ಒಡ್ಡಿ ಸೋತ ನಂತರ, ದುರ್‍ಯೋದನನ ಆಜ್ನೆಯಂತೆ ದುಶ್ಶಾಸನನು ರಾಣಿವಾಸದ ಕೊಟಡಿಯಲ್ಲಿದ್ದ ದ್ರೌಪದಿಯ ಮುಡಿ ಹಿಡಿದು ರಾಜಸಬೆಗೆ ಎಳೆ ತಂದು, ದ್ರೌಪದಿಯ ಸೀರೆಯನ್ನು ಸುಲಿದು ಅಪಮಾನ ಮಾಡಿದ್ದಕ್ಕಾಗಿ, ಕುರುಕ್ಶೇತ್ರ ರಣರಂಗದಲ್ಲಿ ದುಶ್ಶಾಸನನ್ನು ಕೊಂದು, ಅವನ ಹೊಟ್ಟೆಯನ್ನು ಬಗೆದು, ಕರುಳನ್ನು ಹೊರತೆಗೆದು, ಅದನ್ನೇ ದ್ರೌಪದಿಗೆ ಮಾಲೆಯಾಗಿ ಮುಡಿಸಿ, ದುಶ್ಶಾಸನನ ನೆತ್ತರನ್ನು ಬೀಮನು ಕುಡಿದು, ಅವನ ಮಾಂಸವನ್ನು ತಿಂದು, ದ್ರೌಪದಿಗೆ ಆಗಿದ್ದ ಅಪಮಾನಕ್ಕೆ ತಕ್ಕ ಪ್ರತೀಕಾರವನ್ನು ಎಸಗಿದ್ದನು;

ಈಗ ದುರ್‍ಯೋದನನು ಅರ್‍ಜುನನ್ನು ಹಂಗಿಸತೊಡಗುತ್ತಾನೆ;

ಜೂದು=ಜೂಜು/ದ್ಯೂತ/ಪಣವನ್ನು ಕಟ್ಟಿ ಆಡುವ ಪಗಡೆಯಾಟ; ಪೃಥಾನಂದನ=ಅರ್‍ಜುನ; ತೊಳ್ತು=ದಾಸ/ಸೇವಕ;

ಆ ಜೂದಿನೊಳ್ ಎನಗೆ ಪೃಥಾನಂದನನ್ ಅಗ್ರಜಾನುಜ ಸಮೇತಮ್ ಗಂಡು ತೊಳ್ತಾಗಿ=ಅಂದು ನಡೆದ ಜೂಜಾಟದ ಸನ್ನಿವೇಶದಲ್ಲಿ ನನಗೆ ಅರ್‍ಜುನನು ತಮ್ಮ ಅಣ್ಣನಾದ ದರ್‍ಮರಾಯನ ಸಮೇತ ದಾಸನಾಗಿ;

ಕಾನನದೊಳ್ ವಲ್ಕಲಧಾರಿಯಾಗಿ=ಹನ್ನೆರಡು ವರುಶದ ವನವಾಸದಲ್ಲಿ ನಾರುಬಟ್ಟೆಯನ್ನುಟ್ಟು;

ಬೆಳ್ತನ=ಬೆಪ್ಪುತನ/ದಡ್ಡತನ;

ಹರನೊಳ್ ದಿವ್ಯಾಸ್ತ್ರಮಮ್ ಬೇಡೆ ಬೆಳ್ತನದಿಮ್ ತಾಪಸನಾಗಿ=ಶಿವನಿಂದ ಪಾಶುಪತಾಸ್ತ್ರವನ್ನು ಬೇಡಿ ಪಡೆಯಲೆಂದು ಬೆಪ್ಪುತನದಿಂದ ಅಂದರೆ ದೀನನಂತೆ ಬೇಡುವ ತಪಸ್ವಿಯಾಗಿ;

ಮತ್ಸ್ಯಾವಾಸದೊಳ್ ಪೇಡಿಯೆನೆ=ಮತ್ಸ್ಯದೇಶದ ವಿರಾಟರಾಜನ ರಾಣಿವಾಸದಲ್ಲಿ ನಪುಂಸಕನಾಗಿ; ಅಜ್ನಾತವಾಸ ಅವದಿಯಲ್ಲಿ ಅರ್‍ಜುನನು ವಿರಾಟರಾಜನ ರಾಣಿವಾಸದ ಹೆಂಗಸರಿಗೆ ನಾಟ್ಯವಿದ್ಯೆಯನ್ನು ಹೇಳಿಕೊಡುವ ಬ್ರುಹನ್ನಳೆಯಾಗಿ ವೇಶವನ್ನು ತೊಟ್ಟು;

ವಾಸುದೇವನ ನಂಟಮ್ ನಟನಾಗಿ ಬಾರದ ಭವಮ್ ಬಂದನ್=ಕ್ರಿಶ್ಣನ ತಂಗಿ ಸುಬದ್ರೆಯ ಗಂಡನಾದ ಅರ್‍ಜುನನು ನಾಟ್ಯಗುರುವಾಗಿ, ಪಡಬಾರದ ಪಾಡೆಲ್ಲವನ್ನು ಪಟ್ಟನು; ನಪುಂಸಕನಾಗಿ ತಲೆಮರೆಸಿಕೊಂಡು ಬಾಳುವಂತಹ ಹೀನಸ್ತಿತಿಗೆ ಅರ್‍ಜುನನು ಒಳಗಾಗಿದ್ದನು;

ಪ್ರೋಜ್ಝಿತಚಾಪನ್=ಬಿಲ್ಲನ್ನು ಬಿಸುಟವನು/ದ್ರೋಣ;

ಗುರುವನ್ ಪ್ರೋಜ್ಝಿತಚಾಪನನ್ ಪುಸಿದು ಕೊಂದ ಆ ಬೀರಮಮ್=ಬಿಲ್ಲನ್ನು ಬಿಸುಟು ಪುತ್ರಶೋಕದಲ್ಲಿದ್ದ ಗುರುವನ್ನು ಸುಳ್ಳನ್ನಾಡಿ ಕೊಂದ… ಆ ವೀರತನವನ್ನು; ಇಲ್ಲಿ ‘ವೀರತನ’ ಎಂಬ ಪದ “ ಕಪಟತನದಿಂದ ಕೂಡಿದ ಕ್ರೂರತನ” ಎಂಬ ವ್ಯಂಗ್ಯದ ತಿರುಳಿನಲ್ಲಿ ಬಳಕೆಗೊಂಡಿದೆ;

ಕರುತ್ತು=ಕೆರಳಿ; ಪೊಚ್ಚರ=ಪರಾಕ್ರಮ;

ಶರಶಯ್ಯಾಗತರಮ್ ಭೀಷ್ಮರನ್ ಕರುತ್ತು ಗುರಿಯೆಚ್ಚ ಆ ಪೊಚ್ಚರಮ್=ಈಗ ಬಾಣಗಳ ಮಂಚದ ಮೇಲೆ ಮಲಗಿರುವ ಬೀಶ್ಮರನ್ನು ಅಂದು ಕುರುಕ್ಶೇತ್ರ ರಣರಂಗದಲ್ಲಿ ಅವರತ್ತ ಕೆರಳಿ ಗುರಿಯಿಟ್ಟು ಬಾಣವನ್ನು ಪ್ರಯೋಗಿಸಿದ ಪರಾಕ್ರಮ;

ವಿರಥಜ್ಯಾಯುಧನ್=ರತವಿಲ್ಲದೆ, ಬಿಲ್ಲುಬಾಣಗಳಿಲ್ಲದೆ ಇರುವವನು;

ವಿರಥಜ್ಯಾಯುಧನ್ ಎನ್ನದೆ ಕರ್ಣನನ್ ಎಚ್ಚು ತಲೆಗೊಂಡ ಆ ಶೌರ್ಯಮಮ್ ಮೆರೆಯಲ್ಕೆ ಪಾಂಡುಪುತ್ರರೆ ಬಲ್ಲರ್=ರತವಿಲ್ಲದ, ಬಿಲ್ಲುಬಾಣಗಳಿಲ್ಲದ ಕರ್‍ಣನ ಮೇಲೆ ಬಾಣವನ್ನು ಪ್ರಯೋಗಿಸಿ, ಕರ್‍ಣನ ತಲೆಯನ್ನು ಕತ್ತರಿಸಲು ಮುಂದಾಗುವ ಪರಾಕ್ರಮವನ್ನು ತೋರಿಸಲು ಪಾಂಡುಪುತ್ರರು ಮಾತ್ರ ಬಲ್ಲರು; ಕರ್‍ಣನ ರತಕ್ಕೆ ಸಾರತಿಯಾಗಿದ್ದ ಶಲ್ಯನು ಕರ್‍ಣನೊಡನೆ ಮುನಿಸಿಕೊಂಡು ಹೊರಟುಹೋದಾಗ, ಕರ್‍ಣನು ರತವನ್ನು ತಾನೆ ಮುನ್ನಡೆಸುತ್ತ ಅರ್‍ಜುನನೊಡನೆ ಹೋರಾಡುತ್ತಿದ್ದಾಗ, ಕರ್‍ಣನ ರತದ ಚಕ್ರ ರಣರಂಗದ ನೆತ್ತರಿನ ಕೆಸರಿನಲ್ಲಿ ಹೂತುಹೋಗುತ್ತದೆ. ಅದನ್ನು ಮೇಲೆತ್ತಲು ಕರ್‍ಣನು ಬಿಲ್ಲುಬಾಣಗಳನ್ನು ರತದಲ್ಲಿಟ್ಟು ಕೆಳಕ್ಕಿಳಿದು ಬಂದು ರತದ ಚಕ್ರವನ್ನು ಮೇಲೆ ಎತ್ತುತ್ತಿರುವಾಗಲೇ ಕ್ರಿಶ್ಣನು ಕರ್‍ಣನನ್ನು ಕೊಲ್ಲಲು ಅರ್‍ಜುನನಿಗೆ ಆದೇಶ ನೀಡುತ್ತಾನೆ; ಆದರೆ ಅರ್‍ಜುನನು ಕ್ರಿಶ್ಣನ ಮಾತನ್ನು ಕೇಳದೆ, ಚಕ್ರವನ್ನು ಮೇಲಕ್ಕೆತ್ತಿ ರತಕ್ಕೆ ಮರಳಿದ ನಂತರ ಕರ್‍ಣನನ್ನು ಕೊಲ್ಲುತ್ತಾನೆ. ಆದರೆ ಅರ್‍ಜುನನ ಮೇಲೆ ಆಪಾದನೆ ಮಾಡುವಾಗ ಈ ರೀತಿ ದುರ್‍ಯೋದನನು ಹಂಗಿಸಿದ್ದಾನೆ;

ಸಾಹಸಧನಮ್ ದುರ್ಯೋಧನನ್ ಬಲ್ಲನೇ=ಈ ರೀತಿ ಮರೆಮೋಸದಿಂದ ಗುರುಹಿರಿಯರನ್ನು ಮತ್ತು ಒಡಹುಟ್ಟಿದವರನ್ನು ಕೊಲ್ಲುವ ತಂತ್ರವನ್ನು ಪಾಂಡವರು ಬಲ್ಲರೇ ಹೊರತು ಪರಾಕ್ರಮಿಯಾದ ಈ ದುರ್‍ಯೋದನ ಹೇಗೆ ತಾನೆ ತಿಳಿದಿದ್ದಾನೆ; ನಾನು ಪಾಂಡವರಂತೆ ಸುಳ್ಳುಗಾರನಲ್ಲ/ವಂಚಕನಲ್ಲ/ಕ್ರೂರಿಯಲ್ಲ;

ಅಕ್ಕಟ=ಅಯ್ಯೋ… ಇದು ಸಂಕಟದ ಪದವಲ್ಲ. ಪಾಂಡವರ ಬಗ್ಗೆ ಆಡುತ್ತಿರುವ ಅಣಕದ ಪದ; ಪಾಂಡವರು ಅಜ್ನಾತವಾಸದ ಸಂದರ್‍ಬದಲ್ಲಿ ಇದ್ದ ಹೀನಸ್ತಿತಿಗತಿಯನ್ನು ಕುರಿತು ಈಗ ದುರ್‍ಯೋದನನು ಅಣಕವಾಡತೊಡಗಿದ್ದಾನೆ;

ಯಮಜನ್ ದರ್ಭಪಾಣಿ=ದರ್‍ಮರಾಯನು ದರ್‍ಬೆಯನ್ನು ಕಯ್ಯಲ್ಲಿ ಹಿಡಿದುಕೊಂಡು ಪುರೋಹಿತನಾಗಿದ್ದ;

ವಾಯುಪುತ್ರಕನುಮ್ ದರ್ವೀಕರಮ್=ವಾಯುಪುತ್ರನಾದ ಬೀಮನು ಸವುಟನ್ನು ಹಿಡಿದು ಅಡುಗೆಬಟ್ಟನಾಗಿದ್ದ;

ಇಂದ್ರತನಯನ್ ಜರ್ಜರ ಹಸ್ತನ್ =ಅರ್‍ಜುನನು ಜರ್‍ಜರವೆಂಬ ವಾದ್ಯವನ್ನು ಹಿಡಿದುಕೊಂಡು ನಾಟ್ಯಶಾಸ್ತ್ರದ ಗುರುವಾಗಿದ್ದ; ನಾಟ್ಯವನ್ನು ಮಾಡುತ್ತಿರುವಾಗ ತಾಳವನ್ನು ಹಾಕಲು ಬಳಸುವ ವಾದ್ಯ;

ದಸ್ರಾತ್ಮಜರ್ ದಂಡಮುಷ್ಟಿಕರರ್=ಅಶ್ವಿನಿ ದೇವತೆಯ ಮಕ್ಕಳಾದ ನಕುಲ ಸಹದೇವರು ತಮ್ಮ ಕಯ್ಗಳಲ್ಲಿ ಕೋಲುಗಳನ್ನು ಹಿಡಿದುಕೊಂಡು ದನಗಳನ್ನು ಕಾಯುತ್ತಿದ್ದರು ಮತ್ತು ಕುದುರೆಗಳನ್ನು ಮೇಯಿಸುತ್ತಿದ್ದರು;

ಸೊಕಮ್ ಇರ್ಕೆ=ಈ ಕಸುಬುಗಳಲ್ಲಿಯೇ ಪಾಂಡವರು ಸುಕದಿಂದ ಇರಬಹುದಾಗಿತ್ತು;

ವಿಡಂಬ=ಆಡಂಬರ;

ಅವರ್ಗಮ್ ಶಸ್ತ್ರವಿಡಂಬಮ್ ಏವುದು=ಇಂತಹ ಕಸುಬನ್ನು ಮಾಡುತ್ತಿರುವ ಪಾಂಡವರಿಗೆ ಆಯುದಗಳ ಆಡಂಬರವೇಕೆ; ಆಯುದಗಳನ್ನು ಹಿಡಿದು ಅವರು ಮಾಡುವುದೇನು;

ಗಂಧದಾಯಕಿ+ಆಗಿ+ಇರ್ಪಿನಮ್; ಗಂಧದಾಯಕಿ=ಸಿರಿಗಂದದ ಕೊರಡನ್ನು ಅರೆದು ಗಂದದ ಲೇಪನವನ್ನು ಸಿದ್ದಪಡಿಸುವ ಸೇವಕಿ;

ಪಾಂಚಾಲಿಯುಮ್ ಗಂಧದಾಯಕಿಯಾಗಿರ್ಪಿನಮ್=ಪಾಂಚಾಲ ರಾಜನ ಮಗಳಾದ ದ್ರೌಪದಿಯು ವಿರಾಟರಾಜನ ರಾಣಿವಾಸದಲ್ಲಿ ಗಂದವನ್ನು ತೇಯುವ ದಾಸಿಯಾಗಿರಲಿಲ್ಲವೇ;

ನಿಗ್ರಹ=ನಿಂದೆ/ಬಯ್ಗುಳು;

ಅಂದು ಮತ್ಸ್ಯಗೃಹದಿಂದೆ ಈ ನಿಗ್ರಹಮ್ ಪೊಲ್ಲದೇ=ಅಜ್ನಾತವಾಸದಲ್ಲಿ ಅವರೆಲ್ಲರೂ ಪಟ್ಟಪಾಡು ಮತ್ತು ಅವಮಾನದ ಬದುಕಿಗಿಂತಲೂ ಈಗ ನಾನು ಆಡುತ್ತಿರುವ ನಿಂದನೆಯ ನುಡಿಗಳು ಕೆಟ್ಟದ್ದಾಗಿದೆಯೇ;

ಸಭೆಯೊಳ್ ತಮ್ಮಯ ಪಕ್ಕದೆ ಎನ್ನ ಅನುಜನ್ ಆ ಪಂಚವಲ್ಲಭೆಯನ್ ಪಾಂಚಾಲಿಯನ್ ಮೋದೆಯುಮ್=ರಾಜಸಬೆಯಲ್ಲಿ ತಮ್ಮ ಕಣ್ಣ ಮುಂದೆಯೇ ನನ್ನ ತಮ್ಮನಾದ ದುಶ್ಶಾಸನನು ಆ ಅಯ್ದುಮಂದಿ ಪಾಂಡವರ ಹೆಂಡತಿಯಾದ ದ್ರೌಪದಿಯ ಮೇಲೆ ಹಲ್ಲೆ ಮಾಡುತ್ತಿದ್ದರೂ;

ಅಲ್ಲಿ ಮಿಳ್ಮಿಳನೆ ನೋಡುತ್ತಿರ್ದ ಬಲ್ಲಾಳ್ಗಳ್=ಹೆಂಡತಿಯ ಮಾನ ಪ್ರಾಣವನ್ನು ಕಾಪಾಡಲಾರದೆ ರಾಜಸಬೆಯಲ್ಲಿ ಸುಮ್ಮನೆ ಕಣ್ಣು ಬಿಟ್ಟುಕೊಂಡು ಕಂಗಾಲಾಗಿ ನೋಡುತ್ತಿದ್ದ ಈ ಶೂರರು;

ಭರಂಗೆಯ್=ಅಬ್ಬರಿಸು/ಜೋರುಮಾಡು/ಮೇಲೆ ಬೀಳು;

ಇಲ್ಲಿ ಭರಂಗೆಯ್ದಪರ್=ಈ ಕುರುಕ್ಶೇತ್ರ ರಣರಂಗದಲ್ಲಿ ಅಬ್ಬರಿಸುತ್ತಿದ್ದಾರೆ;

ಈ ಪರಾಕ್ರಮುಮ್… ಈ ಪೆರ್ಮಾತುಮ್… ಈ ಗಂಡುಮ್… ಈ ಸುಭಟ ಆಲಾಪಮುಮೆಲ್ಲಮ್ ಆ ನೃಪತಿಗಳ್ಗೆ ಅಂದು ಎಲ್ಲಿ ಪೊಕ್ಕಿರ್ದುದೊ= ಈಗ ಕುರುಕ್ಶೇತ್ರ ರಣರಂಗದಲ್ಲಿ ಈ ಪಾಂಡವರು ತೋರಿಸುತ್ತಿರುವ ಈ ಪರಾಕ್ರಮ… ಈಗ ಅವರು ಆಡುತ್ತಿರುವ ದೊಡ್ಡ ದೊಡ್ಡ ಮಾತುಗಳು… ಈ ಶೂರತನದ ಅಬ್ಬರದಿಂದ ಕೂಡಿದ ಮಾತುಕತೆಗಳೆಲ್ಲವೂ ಅಂದು ದ್ರೌಪದಿಯ ಮೇಲೆ ಹಲ್ಲೆ ನಡೆಸಿ ಅಪಮಾನಗೊಳಿಸುವಾಗ ಪಾಂಡವರ ಪರಾಕ್ರಮ ಎಲ್ಲಿ ಅಡಗಿತ್ತು;

ಸಂಕ್ರಂದನ=ದೇವೇಂದ್ರ; ನಿರಾಕರಣಮ್ ಗೆಯ್ದು=ತಿರಸ್ಕರಿಸಿ/ಕಡೆಗಣಿಸಿ;

ಎಂದು ಧೃತರಾಷ್ಟ್ರನಂದನನ್ ಧರ್ಮನಂದನನುಮನ್, ವಾಯುನಂದನನುಮನ್, ಸಂಕ್ರಂದನ ನಂದನನುಮನ್, ಅಶ್ವಿನೀನಂದನರುಮನ್ ನಿರಾಕರಣಮ್ ಗೆಯ್ದು= ಎಂದು ದುರ್‍ಯೋದನನು ದರ್‍ಮರಾಯನನ್ನು, ಬೀಮನನ್ನು, ಅರ್‍ಜುನನ್ನು, ನಕುಲಸಹದೇವರನ್ನು ಅಲ್ಲಗಳೆದು;

ಅನಿತರೊಳಮ್ ಮಾಣದೆ=ಅಶ್ಟಕ್ಕೆ ಸುಮ್ಮನಾಗದೆ;ಈಗ ದುರ್‍ಯೋದನನು ಅರ್‍ಜುನನ ರತದಲ್ಲಿರುವ ಬಾವುಟದ ದಂಡದ ಮಗ್ಗುಲಲ್ಲಿ ಕುಳಿತಿರುವ ಹನುಮಂತನನ್ನು ಅಣಕ ಮಾಡಿ ಅಲ್ಲಗಳೆಯುತ್ತಾನೆ. ತನ್ನ ಹಗೆಗಳಾದ ಪಾಂಡವರನ್ನು ಮಾತ್ರವಲ್ಲ. ಪಾಂಡವರಿಗೆ ಬೆಂಬಲವಾಗಿರುವ ಹನುಮಂತ ಮತ್ತು ಕ್ರಿಶ್ಣನನ್ನು ದುರ್‍ಯೋದನನು ತೆಗಳತೊಡಗುತ್ತಾನೆ;

ಪವನಂಗೆ ಪುಟ್ಟಿದನ್=ವಾಯುದೇವನಿಗೆ ಹುಟ್ಟಿದವನು;

ರಾಘವನ ಅಣುಗಾಳ್=ಅಯೋದ್ಯೆಯ ರಾಮಚಂದ್ರನ ಪ್ರೀತಿಯ ಸೇವಕ;

ತ್ರಿಣಯನ+ಅಂಶಮ್; ತ್ರಿಣಯನ=ಮೂರು ಕಣ್ಣುಳ್ಳ ಶಿವ; ಅಣುವ=ಹನುಮಂತ;

ತ್ರಿಣಯನಾಂಶಮ್ ಎನಿಪ ಅಣುವನ್=ಮೂರು ಕಣ್ಣುಳ್ಳ ಶಿವನ ಅಂಶದಿಂದ ಕೂಡಿದವನು ಎಂದು ಹೆಸರಾಂತ ಹನುಮಂತನು;

ಕೇತು=ಬಾವುಟ; ಅಗ್ಗಳಿಕೆ=ಹಿರಿಮೆ/ದೊಡ್ಡಸ್ತಿಕೆ;

ಪಾಂಡವಕೇತುದಂಡದೊಳ್ ನೆಲಸುವುದು ಆವ ಅಗ್ಗಳಿಕೆ=ಪಾಂಡುಪುತ್ರನಾದ ಅರ್‍ಜುನನ ರತದ ಬಾವುಟದ ದಂಡದ ಬಳಿ ಕುಳಿತುಕೊಳ್ಳುವುದು ಯಾವ ದೊಡ್ಡಸ್ತಿಕೆ;

ಕಪಿಗೆ ಚಪಲತೆ ಸಹಜಮ್=ಕಪಿಗೆ ಚಂಚಲತೆ ಎಂಬುದು ಹುಟ್ಟುಗುಣವಲ್ಲವೇ;

ಕೃಷ್ಣನ್ ನರಂಗೆ ಅನುಜೆಯನ್ ಇತ್ತು=ಕ್ರಿಶ್ಣನು ಅರ್‍ಜುನನಿಗೆ ತನ್ನ ತಂಗಿಯಾದ ಸುಬದ್ರೆಯನ್ನು ಕೊಟ್ಟು ಮದುವೆ ಮಾಡಿ, ಪಾಂಡವರೊಡನೆ ನೆಂಟಸ್ತಿಕೆಯನ್ನು ಬೆಳೆಸಿಕೊಂಡನು;

ಆತನ ತನಯಂಗೆ ತನ್ನ ಮಗಳನ್ ಇತ್ತು=ಅರ್‍ಜುನನ ಮಗನಾದ ಅಬಿಮನ್ಯುವಿಗೆ ತನ್ನ ಅಣ್ಣನಾದ ಬಲರಾಮನ ಮಗಳಾದ ವತ್ಸಲೆಯನ್ನು ಕೊಟ್ಟು ಮದುವೆ ಮಾಡಿ ನೆಂಟಸ್ತಿಕೆಯನ್ನು ಪಾಂಡವರ ಮಕ್ಕಳ ಕಾಲಕ್ಕೂ ಮುಂದುವರಿಸಿನು;

ತಾನ್ ಆತನ ರಥಮನ್ ಎಸಗಿ=ಕುರುಕ್ಶೇತ್ರ ರಣರಂಗದಲ್ಲಿ ತಾನು ಅರ್‍ಜುನನ ರತವನ್ನು ಮುನ್ನಡೆಸುತ್ತಾ;

ಧರ್ಮಜನ ಅನುಜನ ನೆವದಿಂದಮ್ ಅರಸುಗೆಯ್ವನ್=ದರ್‍ಮರಾಯನ ತಮ್ಮನಾದ ಅರ್‍ಜುನನಿಗೆ ಸಾರತಿಯಾಗಿ ಜತೆಯಲ್ಲಿರುವುದನ್ನು ನೆಪಮಾಡಿಕೊಂಡು ಹಸ್ತಿನಾಪುರವನ್ನು ಅರಸನಾಗಿ ಆಳುತ್ತಿದ್ದಾನೆ. ಕ್ರಿಶ್ಣನಿಗೆ ದ್ವಾರಕಾವತಿಯಲ್ಲಿ ಅರಸನಾಗಿ ಮೆರೆಯುವ ಅವಕಾಶವಿಲ್ಲ. ಕ್ರಿಶ್ಣನ ಅಣ್ಣ ಬಲರಾಮನು ಅಲ್ಲಿ ಅರಸನಾಗಿದ್ದಾನೆ; ಆದ್ದರಿಂದ ಕ್ರಿಶ್ಣನು ಹಸ್ತಿನಾವತಿಗೆ ಬಂದು ತನ್ನ ಇಚ್ಚೆಗೆ ತಕ್ಕಂತೆ ಪಾಂಡವರನ್ನು ನಿಯಂತ್ರಿಸುತ್ತಿದ್ದಾನೆ. ಮೇಲು ನೋಟಕ್ಕೆ ಪಾಂಡವರು ರಾಜರಂತೆ ಕಂಡು ಬಂದರೆ ನಿಜಕ್ಕೂ ಈತನೇ ರಾಜನಾಗಿದ್ದಾನೆ ಎಂದು ದುರ್‍ಯೋದನನು ಆರೋಪಿಸುತ್ತಿದ್ದಾನೆ;

ಪುರುಷರ್ ಮೂವರೊಳ್ ಒರ್ಬನ್ ಎಂಬರ್=ಲೋಕದಲ್ಲಿ ಕ್ರಿಶ್ಣನನ್ನು ತ್ರಿಮೂರ್‍ತಿಗಳಾದ ‘ವಿಶ್ಣು-ಬ್ರಹ್ಮ-ಮಹೇಶ್ವರ’ ರಲ್ಲಿ ಒಬ್ಬನೆಂದು ಕರೆಯುತ್ತಾರೆ;

ಸುರಪ್ರಧ್ವಂಸಿಯೆಂಬರ್=ರಕ್ಕಸರನ್ನು ಸಂಪೂರ್‍ಣವಾಗಿ ನಾಶಪಡಿಸಿದವನು ಎನ್ನುತ್ತಾರೆ;

ಜಗದ್ಗುರುವೆಂಬರ್=ಜಗತ್ತಿಗೆ ಗುರುವೆನ್ನುತ್ತಾರೆ;

ಪೆರರ್ಗೆ ಏಕೆ ತೇರನ್ ಎಸಪನ್=ಇಶ್ಟೆಲ್ಲಾ ಮಹಿಮೆ ಮತ್ತು ಕೀರ್‍ತಿಯಿಂದ ಕೂಡಿರುವ ಈ ಕ್ರಿಶ್ಣನು ಏಕೆ ರಣರಂಗದಲ್ಲಿ ಬೇರೆಯವರ ರತವನ್ನು ನಡೆಸುವ ಸಾರತಿಯಾಗಿದ್ದಾನೆ;

ಧರ್ಮಾನುಜಂಗೆ ಏಕೆ ಕಿಂಕರನಾದನ್=ದರ್‍ಮರಾಯನ ತಮ್ಮನಿಗೆ ಏಕೆ ದಾಸನಾಗಿದ್ದಾನೆ;

ಕರವೇಳಿಯಾದನ್=ಬಲು ಹೇಡಿಯಾದನು; ಕ್ರಿಶ್ಣನು ನೇರವಾಗಿ ಕಾಳೆಗವನ್ನು ಮಾಡಲಾರದ ಹೇಡಿಯಾಗಿದ್ದಾನೆ;

ಅದರಿಮ್ ಕೃಷ್ಣಂಗೆ ಸೂತನ್ ಭಟನ್ ಪೇಳಿ ಎಂಬರ ಮಾತು ಒಪ್ಪುಗುಮ್=ಆದ್ದರಿಂದ ಕ್ರಿಶ್ಣನಿಗೆ ತೇರನ್ನು ನಡೆಸುವವನು, ದಾಸ, ಹೇಡಿ ಎಂದು ಹೇಳುವವರ ಮಾತು ಸರಿಯೆನಿಸುತ್ತದೆ;

ಆದಿ ದೇವನ್ ಎನಿಸಲ್… ಅದು ಎಂತು ಒಪ್ಪುಗುಮ್=ಇಂತಹ ಕ್ರಿಶ್ಣನನ್ನು ಆದಿದೇವನೆಂದು ಹೇಳಿದರೆ… ಅದು ಹೇಗೆ ತಾನೆ ಕ್ರಿಶ್ಣನಿಗೆ ಒಪ್ಪುತ್ತದೆ;

ಅನಿಮೇಷ+ಆದಿ+ಅವತಾರಮ್; ಅನಿಮೇಷ=ಮೀನು/ಮತ್ಸ್ಯ;

ಅನಿಮೇಷಾದ್ಯವತಾರಮ್ ದಶಾವತಾರಮ್ ತನಗಾಯ್ತು=ಮತ್ಸ್ಯ ಮೊದಲುಗೊಂಡು ಹತ್ತು ಅವತಾರಗಳನ್ನು ಕ್ರಿಶ್ಣನು ತಳೆದನು; ಮತ್ಸ್ಯ-ಕೂರ್‍ಮ-ವರಾಹ-ನರಸಿಂಹ-ವಾಮನ-ಪರಶುರಾಮ-ರಾಮ-ಕ್ರಿಶ್ಣ-ಬುದ್ದ-ಕಲ್ಕಿ ಎಂಬ ಹತ್ತು ಅವತಾರಗಳನ್ನು ವಿಷ್ಣು ಪಡೆದನೆಂದು ಪುರಾಣದ ಕತೆಗಳಲ್ಲಿ ಹೇಳಲಾಗಿದೆ;

ಅನಿತರೊಳ್ ಇರದೆ=ಇಶ್ಟು ಅವತಾರಗಳು ಸಾಕು ಎನ್ನಿಸದೆ;

ಅರ್ಜುನನ ರಥಮ್ ಎಸಪ ಪನ್ನೊಂದನೆಯದು ಸೂತಾವತಾರಮುಮ್ ಹರಿಗಾಯ್ತೇ=ಈಗ ಅರ್‍ಜುನನ ರತವನ್ನು ಮುನ್ನಡೆಸುವ ಹನ್ನೊಂದನೆಯ ಸೂತಾವತಾರವು ಕ್ರಿಶ್ಣನಿಗೆ ಬಂದಿತೆ; ಕಂಜೋದರ=ವಿಶ್ಣು/ಕ್ರಿಶ್ಣ;

ಎಂದು ದುರ್ಯೋಧನನ್ ಕಪಿರಾಜನುಮನ್ ಕಂಜೋದರನುಮನ್ ನಿರಾಕರಣಮ್ ಗೆಯ್ದು=ಎಂದು ದುರ್‍ಯೋದನನು ಹನುಮಂತನನ್ನು ಮತ್ತು ಕ್ರಿಶ್ಣನನ್ನು ಕಡೆಗಣಿಸಿ ನುಡಿದು;

ಅನಿತರೊಳಮ್ ಮಾಣ್ದು ಸೈರಿಸಲಾರದೆ=ಅಶ್ಟೆಲ್ಲ ಆಕ್ರೋಶವನ್ನು ಕಾರಿಕೊಂಡರೂ ದುರ್‍ಯೋದನನು ಶಾಂತನಾಗದೆ;

ಸಮರೋದ್ಯೋಗಮ್ ಗೆಯ್ಯೆ=ಯುದ್ದವನ್ನು ಮಾಡಲೆಂದು ರಣರಂಗದತ್ತ ಅಡಿಯಿಡುತ್ತಿರಲು;

ಸಂಜಯನ್ ಅಂಜದೆ ಮಾರ್ಕೊಂಡು=ಸಂಜಯನು ದುರ್‍ಯೋದನನ ಕೋಪತಾಪದ ಆಕ್ರೋಶಕ್ಕೆ ಹೆದರಿ ಹಿಂಜರಿಯದೆ, ಅವನಿಗೆ ಎದುರಾಗಿ ಬಂದು ನಿಂತು…

(ಚಿತ್ರ ಸೆಲೆ: jainheritagecentres.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *