ರನ್ನ ಕವಿಯ ಗದಾಯುದ್ದ ಪ್ರಸಂಗ ಓದು – 5ನೆಯ ಕಂತು

– ಸಿ.ಪಿ.ನಾಗರಾಜ.

*** ಪ್ರಸಂಗ – 5: ಸಂಜಯನ ಹಿತನುಡಿ ***

(ತೀ.ನಂ.ಶ್ರೀಕಂಠಯ್ಯ (ಸಂಪಾದಕರು): ರನ್ನ ಕವಿ ಗದಾಯುದ್ಧ ಸಂಗ್ರಹಂ (ಕಾವ್ಯ ಭಾಗ ಮತ್ತು ಟಿಪ್ಪಣಿಗಳು) ಈ ಹೊತ್ತಗೆಯ ‘ಸಂಜಯ ವಚನಮ್’ ಎಂಬ ಹೆಸರಿನ 3 ನೆಯ ಅಧ್ಯಾಯದ 35 ನೆಯ ಪದ್ಯದಿಂದ 43 ನೆಯ ಪದ್ಯದ ವರೆಗಿನ ಕಾವ್ಯವನ್ನು ನಾಟಕ ರೂಪಕ್ಕೆ ಅಳವಡಿಸಿದೆ.)

ಪಾತ್ರಗಳು

ದುರ್ಯೋಧನ: ಗಾಂದಾರಿ ಮತ್ತು ದ್ರುತರಾಶ್ಟ್ರ ದಂಪತಿಗಳ ಹಿರಿಯ ಮಗ. ಹಸ್ತಿನಾವತಿಯ ರಾಜ.
ಸಂಜಯ: ದ್ರುತರಾಶ್ಟ್ರನ ಆಪ್ತ ಸೇವಕ. ಕುರುಕ್ಶೇತ್ರ ರಣರಂಗದ ಸುದ್ದಿಯನ್ನು ದ್ರುತರಾಶ್ಟ್ರನಿಗೆ ವರದಿ ಮಾಡುವ ಕೆಲಸದಲ್ಲಿ ತೊಡಗಿದ್ದವನು

*** ಸಂಜಯನ ಹಿತನುಡಿ ***

ದುರ್ಯೋಧನನ್ ಕಪಿರಾಜನುಮನ್ ಕಂಜೋದರನುಮನ್ ನಿರಾಕರಣಮ್ ಗೆಯ್ದು… ಅನಿತರೊಳಮ್ ಮಾಣ್ದು ಸೈರಿಸಲಾರದೆ…ಸಮರೋದ್ಯೋಗಮ್ ಗೆಯ್ಯೆ…ಸಂಜಯನ್ ಅಂಜದೆ ಮಾರ್ಕೊಂಡು…

ಸಂಜಯ: ನೀನ್ ಪ್ರತಿಕೂಲ ದೈವನಯ್…ಪ್ರತಿನೃಪರ್ ಅನುಕೂಲದೈವರ್; ನೀನ್ ಅಸಹಾಯನೆ…ಪ್ರತಿನೃಪರ್ ಅಸಹಾಯರ್; ನೀನ್ ಪ್ರತಿಬಲನ್…ಅದರಿಂದೆ ವಾಕ್ಯಾರ್ಥಮ್ ಅನರ್ಥಕಮ್.

(ಎಂದು ನುಡಿದ ಸಂಜಯನ ನುಡಿಗೆ ದುರ್ಯೋಧನನ್ ನಿರ್ವೈಸಿ…)

ದುರ್ಯೋಧನ: ಸಮರಜಯಮ್ ದೈವಾಯತ್ತಮ್. ಅದರಿನ್ ಆ ಪುರುಷಕಾರಮ್ ಎಮಗಾಯ್ತು. ಈಗಳ್ ಯಮನಂದನಾದಿಗಳೊಳ್ ಒಂದೆ ಮೆಯ್ಯೊಳ್ ಆಂತು ಇರಿವೆನ್…ಎನ್ನ ಛಲಮಮ್ ಮೆರೆವೆನ್. “ ಸುರಸಿಂಧೂದ್ಭವ ಕುಂಭಜನ್ಮ ದಿನಕೃತ್ಪುತ್ರಾದಿಗಳ್ ಸಂಗರದೊಳ್ ಸಾಯೆ ಏಕಾಕಿ ದುರ್ಯೋಧನನ್ ಪಾಂಡವರಮ್ ಗೆಲಲ್ ನೆರೆದನಿಲ್ಲ ಸೆರಗಮ್ ಪಾರ್ದಪನ್ ” ಈ ಧರೆ ಎಂಗುಮ್. ಸಂಜಯ, ಭುಜಾದಂಡಮ್ ಗದಾದಂಡಮ್ ಎಂಬ ಎರಡುಮ್ ಮತ್ ಜಯಕ್ಕೆ ಒದವಿರಲ್…ಮತ್ತನ್ಯರಮ್ ಪಾರ್ವೆನೇ. ಮದವತ್ ಕರಿಗಳ ಬಿದುವಮ್ ವಿದಾರಣಮ್ ಗೆಯ್ದು ಕೊಲ್ವ ಕಂಠೀರವಕಮ್…ಕದನದೊಳ್ ಅರಿನೃಪರಮ್ ಕೋಪದೆ ಕೊಲ್ವ ಎನಗಮ್ ಸಹಾಯರ್ ಎಂಬರುಮ್ ಒಳರೇ.

(ಎಂದು ನುಡಿದು, ಕಾಲದಂಡ ಪ್ರಚಂಡಮಪ್ಪ ತನ್ನ ಗದಾದಂಡಮಮ್ ಭುಜಾದಂಡದೊಳ್ ಅಳವಡಿಸಿಕೊಂಡು ಸಮರಾಭಿಮುಖನಾಗಿ ನಡೆವ ಫಣಿರಾಜಕೇತನನನ್…ಸಂಜಯನ್ ಅಂಜದೆ ಮಾರ್ಕೊಂಡು..)

ಸಂಜಯ: ಪವನಾತ್ಮಜನ್ ಮಹಾರಥನ್…ಅವನಿಪ, ನೀನ್ ಸಮರಥನೆ…ಅದರ್ಕೆ ಅಧಿಕನೊಳ್…ಆ ಪವನಾತ್ಮಜನೊಳ್ ಬದ್ಧವೈರಮಮ್ ಮರೆ. ಸಂಧಿಮಾಳ್ಪುದು ಉತ್ತಮ ಪಕ್ಷಮ್.

(ಎಂದು ನುಡಿದ ಸಂಜಯನ ನುಡಿಗೆ ಪಿಂಗಾಕ್ಷನ್ ಅತಿವಿಷಮ ಪರುಷವೇಷಾವೇಶಧರನಾಗಿ…)

ದುರ್ಯೋಧನ: ಬಲಯುತ ಸಮರಥನ್ ಎನ್ನೊಳ್ ಆತನ್ ಅತಿರಥನ್ ಗಡ… ಅಧಿಕ ಬಲವಂತನ್ ಮಾರುತಿ ಗಡ…ಮಹಾರಥನ್ ಮಾರುತಿಯುಮ್ ತದ್ರಥದ ಗಾಲಿಗಳ್ ದೊಡ್ಡಿದುವೇ ಪೆರರಮ್ ಪೊಗಳ್ದಪೆ…ಎಮ್ಮನ್ ಕಿರಿಯರ್ ಮಾಡಿದಪೆ…ಎಲವೊ, ಸಂಜಯ ನೀನುಮ್ ಪೆರನೊರ್ವನ್ ಬಿಲ್ಲೋಜನ್…ಪೆರನೊರ್ವನ್ ಸಿಂಧುಪುತ್ರನಾಗಲ್ ಬಗೆವೋ.

(ಎಂದು ಅರಸನ್ ಅವಂಗೆ ವಿರಸಮಾಗಿ ಪರುಷಮಮ್ ನುಡಿಯೆ…ಸಂಜಯನ್ ಅಂಜಿ..)

ಸಂಜಯ: (ತನ್ನಲ್ಲಿಯೇ)

ಎನಿತೆನಿತಮ್ ಕಲಿಸಿದೊಡೆ ಅಂತು ಅನಿತನಿತುಮ್ ನೈಜಭಾವಮ್ ಅಕ್ಕುಮ್. ಉನ್ನತವಂಶಮ್ ಕರ್ಕಶತನು ಅಂತಃಶೂನ್ಯಮಕ್ಕುಮ್. ನೃಪನಂದನನ್ ಎಂತುಮ್ ಅಂತು.

(ಎಂದು ಅರಿದು)

ಮೌನಮ್ ಸರ್ವಾರ್ಥಸಾಧನಮ್ “ ಎಂಬುದು…ಈತಂಗೆ ಅನುಕೂಲವೃತ್ತಿಯುಮ್ ಸ್ವಚ್ಛಂದನಾವೃತ್ತಿಯುಮಾಗಿ ನೆಗಳ್ದುದು. ಎಂತುಮ್ “ ಆರಾಧ್ಯನ್ ನ ಪ್ರಕೋಪಯೇತ್.”

(ಎಂದು ಮೋನಂಗೊಂಡು ಸಂಜಯನ್ ಕಿರಿದು ಬೇಗಮಿರ್ದು…ಫಣಿರಾಜಕೇತನನ್ ಯುದ್ಧಸನ್ನದ್ಧನಾಗಿ ನಡೆವುದಮ್ ಕಂಡು…ಮತ್ತಮ್ ಆ ಸಂಜಯನ್ ನಿಸರ್ಗಮೂರ್ಖನುಮ್ ಸ್ವಭಾವದೃಢನುಮ್ ಸ್ವಾಮಿಹಿತನುಮಪ್ಪದರಿಂದೆ ಇರಲಾರದೆ..)

ಸಂಜಯ: ಬಲದೆ ಅಶ್ವತ್ಥಾಮನ್ ಒಳನ್…ಬಲನೊಳನ್…ಇರ್ವರುಮನ್ ಆಸೆಗೆಯ್ಯದೆ…ವಿದ್ಯಾಬಲದಿಮ್ ಕಾದದೆ…ಅರಸ, ನಿಜಭುಜಬಲದಿಮ್ ಪಾಂಡವರೊಳ್ ಕಾದಲ್ ಬಗೆದಯ್…ಆ ಬಲದೇವ ಅಶ್ವತ್ಥಾಮರುಮ್ ಇರ್ದರ್…ಅವರ್ ಇರ್ವರುಮಲ್ಲದೆ ಕೃಪ ಕೃತವರ್ಮರುಮ್ ಇರ್ದರ್. ಅಂತು ನಾಲ್ವರೊಳ್ ಒರ್ಬಂಗೆ ವೀರಪಟ್ಟಮಮ್ ಕಟ್ಟಿ, ವೀರಪ್ರಮುಖಂಗೆ ಸೇನಾಧಿಪತ್ಯಾಭಿಷೇಕಮಮ್ ಮಾಡಿ ಪಗೆಯನ್ ಕಯ್ಗೆ ಮಾಳ್ಪುದು.

(ಎಂಬುದುಮ್ ಸಂಜಯನ ನುಡಿಗೆ ದುರ್ಯೋಧನನ್ ಇಂತು ಎಂದನ್.)

ತಿರುಳು: ಸಂಜಯನ ಹಿತನುಡಿ

ದುರ್ಯೋಧನನ್ ಕಪಿರಾಜನುಮನ್ ಕಂಜೋದರನುಮನ್ ನಿರಾಕರಣಮ್ ಗೆಯ್ದು=ದುರ್‍ಯೋದನನು ಹನುಮಂತನನ್ನು ಕ್ರಿಶ್ಣನನ್ನು ಕಡೆಗಣಿಸಿ ನುಡಿದು;

ಅನಿತರೊಳಮ್ ಮಾಣ್ದು ಸೈರಿಸಲಾರದೆ=ಅಶ್ಟೆಲ್ಲ ಆಕ್ರೋಶವನ್ನು ಕಾರಿಕೊಂಡರೂ ದುರ್‍ಯೋದನನು ಸುಮ್ಮನಿರಲಾಗದೆ;

ಸಮರೋದ್ಯೋಗಮ್ ಗೆಯ್ಯೆ=ಯುದ್ದವನ್ನು ಮಾಡಲೆಂದು ರಣರಂಗದತ್ತ ಅಡಿಯಿಡುತ್ತಿರಲು;

ಸಂಜಯನ್ ಅಂಜದೆ ಮಾರ್ಕೊಂಡು=ಸಂಜಯನು ದುರ್‍ಯೋದನನ ಕೋಪತಾಪದಿಂದ ಕೂಡಿದ ಆಕ್ರೋಶಕ್ಕೆ ಹೆದರಿ ಹಿಂಜರಿಯದೆ, ಎದುರಾಗಿ ಬಂದು ನಿಂತು…

ನೀನ್ ಪ್ರತಿಕೂಲ ದೈವನೈ=ನಿನಗೆ ದೇವರ ಸಹಾಯವಿಲ್ಲ/ಅನುಗ್ರಹವಿಲ್ಲ;

ಪ್ರತಿನೃಪರ್ ಅನುಕೂಲದೈವರ್=ನಿನ್ನ ಹಗೆಗಳಾದ ಪಾಂಡವರಿಗೆ ದೇವರ ಸಹಾಯವಿದೆ/ಅನುಗ್ರಹವಿದೆ;

ನೀನ್ ಅಸಹಾಯನೆ=ನಿನಗೆ ಯಾರ ಸಹಾಯವೂ ಇಲ್ಲವಾಗಿದೆ; ಅಂದರೆ ಈಗ ನೀನು ಒಬ್ಬಂಟಿಯಾಗಿರುವೆ;

ಪ್ರತಿನೃಪರ್ ಅಸಹಾಯರ್=ನಿನ್ನ ಹಗೆಗಳಾದ ಪಾಂಡವರೂ ಯಾರ ಸಹಾಯವನ್ನು ಬಯಸದವರು. ಅಂದರೆ ಮಹಾ ಪರಾಕ್ರಮಿಗಳು;

ನೀನ್ ಪ್ರತಿಬಲನ್=ನೀನು ಪಾಂಡವರಿಗೆ ಶತ್ರುವಾಗಿರುವೆ;

ಅದರಿಂದೆ ವಾಕ್ಯಾರ್ಥಮ್ ಅನರ್ಥಕಮ್ ಎಂದು ನುಡಿದ ಸಂಜಯನ ನುಡಿಗೆ ದುರ್ಯೋಧನನ್ ನಿರ್ವೈಸಿ =ಆದ್ದರಿಂದ ಪಾಂಡವರೊಡನೆ ಹೋರಾಡಿ ಗೆಲ್ಲುವೆನೆಂಬ ನಿನ್ನ ಆಕ್ರೋಶದ ಮಾತುಗಳಲ್ಲಿ ಯಾವುದೇ ಹುರುಳಿಲ್ಲವೆಂದು ನುಡಿದ ಸಂಜಯನ ಮಾತುಗಳಿಗೆ ದುರ್‍ಯೋದನನು ಬೇಸರಗೊಂಡು;

ಸಮರಜಯಮ್ ದೈವಾಯತ್ತಮ್=ಕಾಳೆಗದಲ್ಲಿ ಜಯವೆಂಬುದು ದೇವರ ಇಚ್ಚೆಯನ್ನು ಅವಲಂಬಿಸಿದೆ;

ಅದರಿನ್ ಆ ಪುರುಷಕಾರಮ್ ಎಮಗಾಯ್ತು=ಆದ್ದರಿಂದ ಗೆಲುವನ್ನು ಪಡೆಯುವುದಕ್ಕಾಗಿ ನಾನೇ ಪರಾಕ್ರಮಶಾಲಿಯಾಗಿ ಹೋರಾಡಲು ತೀರ್‍ಮಾನಿಸಿದ್ದೇನೆ;

ಈಗಳ್ ಯಮನಂದನಾದಿಗಳೊಳ್ ಒಂದೆ ಮೆಯ್ಯೊಳ್ ಆಂತು ಇರಿವೆನ್=ಈಗ ಆ ಪಾಂಡವರನ್ನು ನಾನೊಬ್ಬನೇ ಎದುರಿಸಿ, ಅವರನ್ನು ಕೊಲ್ಲುತ್ತೇನೆ;

ಎನ್ನ ಛಲಮಮ್ ಮೆರೆವೆನ್=ನನ್ನ ಚಲವನ್ನು ತೋರಿಸುತ್ತೇನೆ. ಅಂದರೆ ಯಾವುದೇ ಕಾರಣಕ್ಕೂ ರಾಜ್ಯದ ಒಡೆತನವನ್ನು ಪಾಂಡವರಿಗೆ ಬಿಟ್ಟುಕೊಡುವುದಿಲ್ಲವೆಂಬ ನನ್ನ ಹಟವನ್ನು ಸಾದಿಸಿ ತೋರಿಸುತ್ತೇನೆ;

 ಸುರಸಿಂಧೂದ್ಭವ ಕುಂಭಜನ್ಮ ದಿನಕೃತ್ಪುತ್ರಾದಿಗಳ್ ಸಂಗರದೊಳ್ ಸಾಯೆ= ಬೀಶ್ಮ, ದ್ರೋಣ, ಕರ್‍ಣ, ನನ್ನ ತಮ್ಮಂದಿರು ಮತ್ತು ಮಕ್ಕಳೆಲ್ಲರೂ ರಣರಂಗದಲ್ಲಿ ಸತ್ತಿರುವುದರಿಂದ; (ಬೀಶ್ಮರು ಸತ್ತಿಲ್ಲ…ರಣರಂಗದಲ್ಲಿಯೇ ಶರಮಂಚದ ಮೇಲೆ ಮಲಗಿದ್ದಾರೆ);

ಏಕಾಕಿ ದುರ್ಯೋಧನನ್ ಪಾಂಡವರಮ್ ಗೆಲಲ್ ನೆರೆದನಿಲ್ಲ=ಈಗ ಒಬ್ಬಂಟಿಯಾಗಿರುವ ದುರ್‍ಯೋದನನು ಪಾಂಡವರ ಮೇಲೆ ಗೆಲುವನ್ನು ಪಡೆಯಲು ಶಕ್ತನಲ್ಲ;

 ಸೆರಗಮ್ ಪಾರ್ದಪನ್ ಈ ಧರೆ ಎಂಗುಮ್=ಪಾಂಡವರನ್ನು ಸೋಲಿಸಲು ಬೇರೆಯವರಿಂದ ಸಹಾಯವನ್ನು ಬಯಸುತ್ತಾನೆ ಎಂದು ಲೋಕದ ಜನರು ಆಡಿಕೊಳ್ಳುತ್ತಾರೆ;

ಸಂಜಯ, ಭುಜಾದಂಡಮ್ ಗದಾದಂಡಮ್ ಎಂಬ ಎರಡುಮ್ ಮತ್ ಜಯಕ್ಕೆ ಒದವಿರಲ್…ಮತ್ತನ್ಯರಮ್ ಪಾರ್ವೆನೇ=ಸಂಜಯ, ಈ ನನ್ನ ತೋಳುಗಳು ಮತ್ತು ಗದಾದಂಡವೆಂಬ ಎರಡು ಶಕ್ತಿಗಳು ನನ್ನ ಜಯಕ್ಕೆ ನೆರವಾಗಲು ಸಿದ್ದವಾಗಿರುವಾಗ… ಮತ್ತೆ ಬೇರೆಯವರ ನೆರವನ್ನು ನಾನು ಬಯಸುತ್ತೇನೆಯೇ;

ಬಿದು=ಆನೆಯ ನೆತ್ತಿ/ಕುಂಬಸ್ತಳ;

ಮದವತ್ ಕರಿಗಳ ಬಿದುವಮ್ ವಿದಾರಣಮ್ ಗೆಯ್ದು ಕೊಲ್ವ ಕಂಠೀರವಕಮ್… ಕದನದೊಳ್ ಅರಿನೃಪರಮ್ ಕೋಪದೆ ಕೊಲ್ವ ಎನಗಮ್ ಸಹಾಯರ್ ಎಂಬರುಮ್ ಒಳರೇ=ಮದಿಸಿದ ಆನೆಗಳ ನೆತ್ತಿಯನ್ನು ಸೀಳಿ ಕೊಲ್ಲುವ ಶಕ್ತಿಯುಳ್ಳ ಸಿಂಹಕ್ಕೂ…ರಣರಂಗದಲ್ಲಿ ಶತ್ರುರಾಜರನ್ನು ಕೋಪದಿಂದ ಕೊಲ್ಲುವ ನನಗೂ ಸಹಾಯಕರು ಎನ್ನುವವರು ಇದ್ದಾರೆಯೇ; ಅಂದರೆ ಪಾಂಡವರ ಮೇಲೆ ಜಯವನ್ನು ಪಡೆಯಲು ಯಾರ ನೆರವೂ ನನಗೆ ಬೇಕಾಗಿಲ್ಲ. ಸಿಂಹದಂತೆ ಏಕಾಂಗಿಯಾಗಿ ಹೋರಾಡಿ ಶತ್ರುವನ್ನು ಕೊಲ್ಲಬಲ್ಲ ಶಕ್ತಿ ನನ್ನಲ್ಲಿದೆ;

ಎಂದು ನುಡಿದು ಕಾಲದಂಡ ಪ್ರಚಂಡಮಪ್ಪ ತನ್ನ ಗದಾದಂಡಮಮ್ ಭುಜಾದಂಡದೊಳ್ ಅಳವಡಿಸಿಕೊಂಡು ಸಮರಾಭಿಮುಖನಾಗಿ ನಡೆವ ಫಣಿರಾಜ ಕೇತನನನ್=ಎಂದು ನುಡಿದು, ಯಮದಂಡದಂತೆ ಬಲವಾಗಿದ್ದ ತನ್ನ ಗದೆಯನ್ನು ಬುಜದ ಮೇಲೆ ಹಾಕಿಕೊಂಡು ರಣರಂಗದತ್ತ ನಡೆಯುತ್ತಿರುವ ದುರ್‍ಯೋದನನನ್ನು;

ಸಂಜಯನ್ ಅಂಜದೆ ಮಾರ್ಕೊಂಡು=ಸಂಜಯನು ಯಾವ ಹೆದರಿಕೆಯೂ ಇಲ್ಲದೆ ಎದುರುಗೊಂಡು;

ಮಹಾರಥ=ರತವನ್ನು ತಾನೇ ಮುನ್ನಡೆಸುತ್ತಾ, ಏಕಾಂಗಿಯಾಗಿ ಹತ್ತು ಸಾವಿರ ಯೋದರೊಡನೆ ಹೋರಾಡಬಲ್ಲ ವೀರ; ರತದಲ್ಲಿ ಕುಳಿತು ಈ ರೀತಿ ಏಕಾಂಗಿಯಾಗಿ ಯುದ್ದವನ್ನು ಮಾಡುವ ವೀರರನ್ನು ‘ಅತಿರತ-ಮಹಾರತ-ಸಮರತ-ಅರ್‍ದರತ’ ಎಂದು ನಾಲ್ಕು ಬಗೆಯಲ್ಲಿ ಗುರುತಿಸಿದ್ದಾರೆ; ಅತಿರತ ಎಲ್ಲರಿಗಿಂತ ಉತ್ತಮ; ಅವನ ನಂತರ ಮಹಾರತ; ಅನಂತರ ಸಮರತ; ಕೊನೆಯವನು ಅರ್‍ದರತ;

ಪವನಾತ್ಮಜನ್ ಮಹಾರಥನ್=ವಾಯುಪುತ್ರನಾದ ಬೀಮಸೇನನು ಮಹಾರತ;

ಅವನಿಪ, ನೀನ್ ಸಮರಥನೆ ನೀನ್=ರಾಜನೇ, ನೀನು ಸಮರತ;

ಅದರ್ಕೆ ಅಧಿಕನೊಳ್…ಆ ಪವನಾತ್ಮಜನೊಳ್ ಬದ್ಧವೈರಮಮ್ ಮರೆ=ಆದ್ದರಿಂದ ನಿನಗಿಂತ ಹೆಚ್ಚು ಬಲಶಾಲಿಯಾಗಿರುವ ಆ ಬೀಮಸೇನನ ಬಗ್ಗೆ ಹೊಂದಿರುವ ಕಡುಹಗೆತನವನ್ನು ಮರೆತುಬಿಡು;

ಸಂಧಿಮಾಳ್ಪುದು ಉತ್ತಮ ಪಕ್ಷಮ್ ಎಂದು ನುಡಿದ ಸಂಜಯನ ನುಡಿಗೆ=ಪಾಂಡವರೊಡನೆ ಸಂದಿ ಮಾಡಿಕೊಳ್ಳುವುದು ಒಳ್ಳೆಯದು ಎಂದು ಹೇಳಿದ ಸಂಜಯನ ಮಾತುಗಳಿಗೆ;

ಪಿಂಗಾಕ್ಷನ್ ಅತಿವಿಷಮ ಪರುಷವೇಷಾವೇಶಧರನಾಗಿ=ದುರ್‍ಯೋದನನು ಅತಿ ಬಯಂಕರವಾದ ಕೋಪತಾಪದಿಂದ ಆಕ್ರೋಶಗೊಂಡವನಾಗಿ;

ಬಲಯುತ ಸಮರಥನ್ ಎನ್ನೊಳ್ ಆತನ್ ಅತಿರಥನ್ ಗಡ=ಓಹೋ…ಬಲವುಳ್ಳ ಸಮರತನಾಗಿರುವ ನನ್ನ ಮುಂದೆ ಆತ ಅತಿರತನೋ;

ಅಧಿಕ ಬಲವಂತನ್ ಮಾರುತಿ ಗಡ=ನನಗಿಂತಲೂ ದೊಡ್ಡ ಬಲಶಾಲಿಯೋ ಆ ಬೀಮ;

ಮಹಾರಥನ್ ಮಾರುತಿಯುಮ್ ತದ್ರಥದ ಗಾಲಿಗಳ್ ದೊಡ್ಡಿದುವೇ=ಬೀಮನನ್ನು ಮಹಾರತನೆಂದು ಹೇಳುತ್ತಿರುವೆಯಲ್ಲ “ಅವನ ರತದ ಚಕ್ರಗಳು ನನ್ನ ರತದ ಚಕ್ರಗಳಿಗಿಂತ ದೊಡ್ಡದಾಗಿವೆಯೋ” ಎಂದು ವ್ಯಂಗ್ಯದ ನುಡಿಗಳಿಂದ ಸಂಜಯನು ಬೀಮನ ಬಗ್ಗೆ ಆಡಿದ ಹೊಗಳಿಕೆಯ ಮಾತುಗಳನ್ನು ದುರ್‍ಯೋದನನು ಅಲ್ಲಗಳೆಯುತ್ತಿದ್ದಾನೆ;

ಪೆರರಮ್ ಪೊಗಳ್ದಪೆ…ಎಮ್ಮನ್ ಕಿರಿಯರ್ ಮಾಡಿದಪೆ=ಬೇರೆಯವನ್ನು ದೊಡ್ಡವರನ್ನಾಗಿ ಮಾಡಿ ಹೊಗಳುತ್ತೀಯೆ… ನಮ್ಮನ್ನು ಚಿಕ್ಕವರನ್ನಾಗಿ ಮಾಡಿ ಕಡೆಗಣಿಸುತ್ತಿರುವೆ;

ಎಲವೊ, ಸಂಜಯ ನೀನುಮ್ ಪೆರನೊರ್ವನ್ ಬಿಲ್ಲೋಜನ್…ಪೆರನೊರ್ವನ್ ಸಿಂಧುಪುತ್ರನಾಗಲ್ ಬಗೆವೋ=ಎಲವೋ ಸಂಜಯ, ನೀನು ಕೂಡ ಮತ್ತೊಬ್ಬ ದ್ರೋಣನಾಗಲು…ಮತ್ತೊಬ್ಬ ಬೀಶ್ಮನಾಗಲು ಬಯಸುತ್ತಿರುವೆಯಾ; ಆ ದ್ರೋಣ ಮತ್ತು ಬೀಶ್ಮರು ತಮ್ಮ ಜೀವನದ ಉದ್ದಕ್ಕೂ ಆ ಪಾಂಡವರನ್ನು ನನ್ನ ಮುಂದೆ ಯಾವಾಗಲೂ ಹೊಗಳುತ್ತಿದ್ದರು; ಕೌರವರಾದ ನಮ್ಮನ್ನು ಕಡೆಗಣಿಸುತ್ತಿದ್ದರು. ಈಗ ನೀನು ಅವರಂತೆಯೇ ಆಗಿದ್ದೀಯೆ;

ಎಂದು ಅರಸನ್ ಅವಂಗೆ ವಿರಸಮಾಗಿ ಪರುಷಮಮ್ ನುಡಿಯೆ=ಎಂದು ದುರ್‍ಯೋದನನು ಸಂಜಯನ ಬಗ್ಗೆ ಕುಪಿತನಾಗಿ ಬಿರುಸಾದ ಮಾತನ್ನಾಡಲು;

ಸಂಜಯನ್ ಅಂಜಿ=ದುರ್‍ಯೋದನನ ಕೋಪೋದ್ರೇಕವನ್ನು ಕಂಡು ಸಂಜಯನು ತುಸು ಹಿಂಜರಿದು;

ಎನಿತೆನಿತಮ್ ಕಲಿಸಿದೊಡೆ ಅನಿತನಿತುಮ್ ನೈಜಭಾವಮ್ ಅಕ್ಕುಮ್=ಇತರರಿಗೆ ನಾವು ಎಶ್ಟೆಶ್ಟು ಒಳ್ಳೆಯದನ್ನು ಹೇಳಿಕೊಟ್ಟರೂ , ಅಶ್ಟಶ್ಟೇ ಪ್ರಮಾಣದಲ್ಲಿ ಅವರಲ್ಲಿರುವ ಹುಟ್ಟುಗುಣವೇ ಕಂಡುಬರುತ್ತದೆ. ಅಂದರೆ ನಾವು ಹೇಳುವ ಅರಿವಿನ ಮಾತು ಅವರ ಮನಕ್ಕೆ ತಟ್ಟುವುದಿಲ್ಲ; “ಹುಟ್ಟುಗುಣ ಸುಟ್ಟರೂ ಹೋಗುವುದಿಲ್ಲ” ಎಂಬ ಗಾದೆಯಂತೆ ಕೆಲವು ವ್ಯಕ್ತಿಗಳು ತಮ್ಮಲ್ಲಿರುವ ನೀಚಗುಣವನ್ನು ಯಾವ ತಿಳುವಳಿಕೆಯ ಮಾತುಗಳಿಂದಲೂ ಸರಿಪಡಿಸಿಕೊಳ್ಳುವುದಿಲ್ಲ;

ಉನ್ನತ=ಎತ್ತರವಾದ; ವಂಶ=ಬಿದಿರು; ಉನ್ನತವಂಶ=ಎತ್ತರವಾದ ಬಿದುರಿನ ಮೆಳೆ; ಕರ್ಕಶ=ಗಟ್ಟಿಯಾದ/ಕಟಿಣವಾದ; ತನು=ದೇಹ; ಕರ್ಕಶತನು=ಗಟ್ಟಿಯಾದ ಹೊರಬಾಗ; ಅಂತಃಶೂನ್ಯಮ್+ಅಕ್ಕುಮ್; ಅಂತಃಶೂನ್ಯ=ಒಳಗೆ ಟೊಳ್ಳು; ಅಕ್ಕುಮ್=ಆಗಿರುವುದು; ಅಂತು=ಹಾಗೆ;

ಉನ್ನತವಂಶಮ್ ಕರ್ಕಶ ತನು ಅಂತಃಶೂನ್ಯಮಕ್ಕುಮ್=ಬಿದಿರಿನ ಮೆಳೆಯ ಹೊರಮಯ್ ಗಟ್ಟಿಯಾಗಿದ್ದರೂ ಅದರ ಒಳಮಯ್ ಟೊಳ್ಳಾಗಿರುತ್ತದೆ;

 ನೃಪನಂದನನ್ ಎಂತುಮ್ ಅಂತು=ಅದೇ ರೀತಿಯಲ್ಲಿ ಬಹಿರಂಗವಾಗಿ ಈ ದುರ್‍ಯೋದನನಿಗೆ ಎಶ್ಟೇ ತಿಳುವಳಿಕೆಯನ್ನು ಹೇಳಿದರೂ, ಅಂತರಂಗದ ಅವನ ಮನದಲ್ಲಿರುವ ಪಾಂಡವರ ಬಗೆಗಿನ ಹಗೆತನ ಹೋಗುವುದಿಲ್ಲ ಎಂಬುದನ್ನು ಸಂಜಯನು ಮನಗಂಡು;

ದುರ್‍ಯೋದನನು ಮಯ್ ಕಟ್ಟಿನಲ್ಲಿ ಮಹಾಬಲನಾಗಿದ್ದಾನೆ. ಆದರೆ ಮಾನಸಿಕವಾಗಿ ದುರ್‍ಬಲನಾಗಿದ್ದಾನೆ. ಪಾಂಡವರ ಬಗೆಗಿನ ಹಗೆತನ ಅವನ ವ್ಯಕ್ತಿತ್ವವನ್ನು ಟೊಳ್ಳಾಗಿಸಿದೆ;

“ಮೌನಮ್ ಸರ್ವಾರ್ಥಸಾಧನಮ್” ಎಂಬುದು=“ಸಮಸ್ಯೆಯು ಉಂಟಾದಾಗ ಮಾತನಾಡದೇ ಸುಮ್ಮನಿದ್ದು ತಾಳ್ಮೆ ಮತ್ತು ಶಾಂತಿಯಿಂದ ಎಲ್ಲವನ್ನೂ ಸಾದಿಸಬಹುದು” ಎಂಬುದು ಲೋಕನೀತಿಯ ನುಡಿ. ಈಗ ನಾನು ಅದನ್ನೇ ಅನುಸರಿಸಬೇಕು ಎಂದು ಸಂಜಯನು ನಿಶ್ಚಯಿಸಿಕೊಂಡು;

ಈತಂಗೆ ಅನುಕೂಲವೃತ್ತಿಯುಮ್ ಸ್ವಚ್ಛಂದನಾವೃತ್ತಿಯುಮಾಗಿ ನೆಗಳ್ದುದು=ಈತನಿಗೆ ಒಪ್ಪಿಗೆಯಾಗುವಂತೆಯೇ ನಾನು ಮೆದುವಾಗಿಯೇ ನಡೆದುಕೊಳ್ಳಬೇಕು; ಆರಾಧ್ಯ=ಪೂಜ್ಯನಾದ/ಸೇವೆಗೆ ಯೋಗ್ಯನಾದ/ಓಲಯಿಸಬೇಕಾದ;

ಎಂತುಮ್ “ಆರಾಧ್ಯನ್ ನ ಪ್ರಕೋಪಯೇತ್” ಎಂದು ಮೋನಂಗೊಂಡು=ಹೇಗಾದರೂ ಆಗಲಿ “ಒಲಿಸಿಕೊಳ್ಳಬೇಕಾದ ವ್ಯಕ್ತಿಯನ್ನು ಕೋಪಗೊಳ್ಳುವಂತೆ ಮಾಡಬಾರದು” ಎಂದು ಸಂಜಯನು ಸುಮ್ಮನಾಗಿ;

ಸಂಜಯನ್ ಕಿರಿದುಬೇಗಮಿರ್ದು=ಸಂಜಯನು ಸ್ವಲ್ಪ ಹೊತ್ತು ಮಾತನಾಡದೆ ಸುಮ್ಮನಿದ್ದು;

ಫಣಿರಾಜಕೇತನನ್ ಯುದ್ಧಸನ್ನದ್ಧನಾಗಿ ನಡೆವುದಮ್ ಕಂಡು=ದುರ್‍ಯೋದನನು ಯುದ್ದಕ್ಕೆ ಸಿದ್ದನಾಗಿ ನಡೆಯುತ್ತಿರುವನ್ನು ನೋಡಿ;

ನಿಸರ್ಗಮೂರ್ಖ=ಹುಟ್ಟಿನಿಂದಲೇ ದಡ್ಡ/ತನಗೆ ಅನಿಸಿದ್ದನ್ನು ಹಿಂದೆ ಮುಂದೆ ನೋಡದೆ ಮಾಡುವವನು; ಸ್ವಭಾವ ದೃಢ=ಕಯ್ಗೊಂಡ ಕೆಲಸವನ್ನು ಬಿಡದೆ ಮಾಡುವವನು; ಸ್ವಾಮಿಹಿತನ್=ಒಡೆಯನಿಗೆ ಒಳ್ಳೆಯದನ್ನು ಮಾಡುವವನು;

ಮತ್ತಮ್ ಆ ಸಂಜಯನ್ ನಿಸರ್ಗಮೂರ್ಖನುಮ್ ಸ್ವಭಾವದೃಢನುಮ್ ಸ್ವಾಮಿಹಿತನುಮಪ್ಪದರಿಂದೆ ಇರಲಾರದೆ=ದುರ್‍ಯೋದನನು ರಣರಂಗಕ್ಕೆ ತೆರಳುತ್ತಿರುವುದನ್ನು ಕಂಡು ಮತ್ತೆ ಸಂಜಯನು ಸುಮ್ಮನಿರಲಾಗಲಿಲ್ಲ. ಏಕೆಂದರೆ ಸಂಜಯನು ತನಗೆ ಅನಿಸಿದ್ದನ್ನು ಮಾಡುವ, ಕಯ್ಗೊಂಡ ಕೆಲಸವನ್ನು ಮುಂದುವರಿಸುವ ಮತ್ತು ಒಡೆಯನ ಹಿತವನ್ನೇ ಸದಾಕಾಲ ಚಿಂತಿಸುವ ವ್ಯಕ್ತಿಯಾಗಿದ್ದರಿಂದ ಸುಮ್ಮನಿರಲಾದೆ;

ಬಲದೆ ಅಶ್ವತ್ಥಾಮನ್ ಒಳನ್=ನಿನ್ನ ಸೇನಾಪಡೆಯಲ್ಲಿ ಅಶ್ವತ್ತಾಮನು ಇದ್ದಾನೆ;

ಬಲನೊಳನ್=ನಿನ್ನ ಕಡೆಯಲ್ಲಿರುವ ಬಲರಾಮನಿದ್ದಾನೆ;

ಇರ್ವರುಮನ್ ಆಸೆಗೆಯ್ಯದೆ=ಯುದ್ದವನ್ನು ಮಾಡಲು ಇವರಿಬ್ಬರ ನೆರವನ್ನು ಬಯಸದೆ;

ವಿದ್ಯಾಬಲದಿಮ್ ಕಾದದೆ=ಅಳಿದುಳಿದಿರುವ ಪಡೆಯೆಲ್ಲವನ್ನೂ ಜತೆಗೂಡಿಸಿಕೊಂಡು ಸಮಸ್ತ ಶಕ್ತಿಯೊಡಗೂಡಿ ಕುಶಲತೆಯಿಂದ ಯುದ್ದವನ್ನು ಮಾಡಲು ಯೋಜಿಸಿಕೊಳ್ಳದೆ;

ಅರಸ, ನಿಜಭುಜಬಲದಿಮ್ ಪಾಂಡವರೊಳ್ ಕಾದಲ್ ಬಗೆದಯ್=ದುರ್‍ಯೋದನನೇ, ನಿನ್ನೊಬ್ಬನ ಬುಜಬಲವನ್ನು ನಂಬಿಕೊಂಡು ಪಾಂಡವರೊಡನೆ ಯುದ್ದ ಮಾಡಲು ಹೊರಟಿರುವೆ;

ಆ ಬಲದೇವ ಅಶ್ವತ್ಥಾಮರುಮ್ ಇರ್ದರ್=ಆ ಬಲದೇವ ಮತ್ತು ಅಶ್ವತ್ತಾಮರು ಇದ್ದಾರೆ;

ಅವರ್ ಇರ್ವರುಮಲ್ಲದೆ ಕೃಪ ಕೃತವರ್ಮರುಮ್ ಇರ್ದರ್=ಅವರಿಬ್ಬರೇ ಅಲ್ಲದೆ ಕ್ರುಪ ಮತ್ತು ಕ್ರುತವರ್ಮರು ಇದ್ದಾರೆ. ಇವರೆಲ್ಲರೂ ನಿನ್ನ ಕಡೆಯವರು;

ಅಂತು ನಾಲ್ವರೊಳ್ ಒರ್ಬಂಗೆ ವೀರಪಟ್ಟಮಮ್ ಕಟ್ಟಿ=ಉಳಿದಿರುವ ಈ ನಾಲ್ವರಲ್ಲಿ ಒಬ್ಬರಿಗೆ ವೀರಪಟ್ಟವನ್ನು ಕಟ್ಟಿ;

ವೀರಪ್ರಮುಖಂಗೆ ಸೇನಾಧಿಪತ್ಯಾಭಿಷೇಕಮಮ್ ಮಾಡಿ ಪಗೆಯನ್ ಕಯ್ಗೆ ಮಾಳ್ಪುದು ಎಂಬುದುಮ್=“ಪರಾಕ್ರಮಿಯಾದ ವೀರನಿಗೆ ಸೇನಾದಿಪತಿಯ ಪಟ್ಟವನ್ನು ಕಟ್ಟಿ, ಹಗೆಯಾದ ಪಾಂಡವರ ಮೇಲೆ ಜಯಗಳಿಸಿ, ಅವರನ್ನು ವಶಪಡಿಸಿಕೊಳ್ಳುವುದು” ಎಂದು ಸಂಜಯನು ರಣರಂಗಕ್ಕೆ ಹೋಗುವ ಮುನ್ನ ಯಾವ ರೀತಿ ದುರ್‍ಯೋದನನು ಸಜ್ಜಾಗಬೇಕೆಂಬುದನ್ನು ಹೇಳಲು;

ಸಂಜಯನ ನುಡಿಗೆ ದುರ್ಯೋಧನನ್ ಇಂತು ಎಂದನ್=ಸಂಜಯನ ಮಾತುಗಳಿಗೆ ದುರ್‍ಯೋದನನು ಈ ರೀತಿ ಪ್ರತಿಕ್ರಿಯಿಸಿದನು;

(ಚಿತ್ರ ಸೆಲೆ: jainheritagecentres.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *