ಕನೆಕ್ಟೆಡ್ ಕಾರುಗಳು – ಕಂತು 1
ಮಿಂಬಲೆ(ಇಂಟರ‍್ನೆಟ್)ಗೆ ಬೆಸೆದುಕೊಂಡಿರುವ ಯಾವುದೇ ಕಾರನ್ನು ಕನೆಕ್ಟೆಡ್ ಕಾರು ಎನ್ನಬಹುದು. ಕನೆಕ್ಟೆಡ್ ಕಾರು ಮಿಂಬಲೆ ಮೂಲಕ ಡೇಟಾ ಹಂಚಿಕೊಂಡು ಬೇರೆ ಎಲೆಕ್ಟ್ರಾನಿಕ್ ವಸ್ತುಗಳೊಂದಿಗೆ ವ್ಯವಹರಿಸುವುದು. ಈ ವಸ್ತು ಇಲ್ಲವೇ ಉಪಕರಣಗಳು ಕಾರಿನ ಒಳಗೂ ಇರುವಂತ ಇಲ್ಲವೇ ಹೊರಗಿರುವಂತವವೂ ಆಗಿರಬಹುದು. ಉದಾಹರಣೆಗೆ ಕಾರೊಂದು ಮಿಂಬಲೆ ಮೂಲಕ ಇನ್ನೊಂದು ಕಾರಿನೊಂದಿಗೆ ಇಲ್ಲವೇ ಸ್ಮಾರ‍್ಟ್‌ಪೋನ್ /ಸ್ಮಾರ‍್ಟ್‌ವಾಚ್‌ಗಳಂತ ಬೇರೆ ಉಪಕರಣೊಂದಿಗೆ ಮಾಹಿತಿ ಹಂಚಿಕೆ ಅತವಾ ಮಾಹಿತಿ ಪಡೆದುಕೊಳ್ಳಬಹುದು. ಈ ರೀತಿ ಕಾರೊಂದು ಇನ್ನೊಂದು ವಸ್ತುವಿನೊಂದಿಗೆ ಬೆಸೆದುಕೊಂಡರೆ ಅದು ಬೆಸುಗೆಯ ಕಾರು ಎನ್ನಿಸಿಕೊಳ್ಳುತ್ತದೆ.
ಕಾರುಗಳು ಹೇಗೆ ಬೆಸೆದುಕೊಳ್ಳುತ್ತವೆ? ಇದರ ಕೆಲಸ ಮಾಡುವ ವಿದಾನ ಹೇಗೆ?
ಈ ಬೆಸುಗೆಯ ಕಾರುಗಳು ಕೆಳಗೆ ನೀಡಿರುವ ಎರಡರಲ್ಲಿ ಒಂದು ಏರ‍್ಪಾಟಿನ ಮೂಲಕ ಕೆಲಸ ಮಾಡುತ್ತವೆ.
ಮೊದಲನೇ ಏರ‍್ಪಾಟು, ಟೆತೆರ‍್ಡ್(Tethered) – ಟೆತೆರ‍್ ಅಂದರೆ ವ್ಯಾಪ್ತಿ/ಮಿತಿಯೊಳಗೆ ಎಂಬ ಅರ‍್ತ ಬರುತ್ತದೆ. ಈ ಏರ‍್ಪಾಟಿನಲ್ಲಿ ಕಾರು ಪಯಣಿಗರ ಮೊಬೈಲ್ ನೊಂದಿಗೆ ಬೆಸೆದುಕೊಳ್ಳುವ ಸಾಮರ‍್ತ್ಯ ಹೊಂದಿರುತ್ತದೆ.
ಎರಡನೇ ಏರ‍್ಪಾಟು, ಎಂಬೆಡೆಡ್(Embedded) – ಈ ಏರ‍್ಪಾಟನ್ನು ಕನ್ನಡದಲ್ಲಿ ನಾಟಿದ/ಹುದುಗಿಸಿದ ಏರ‍್ಪಾಟು ಎನ್ನಬಹುದು. ಇದರಲ್ಲಿ ಗಾಡಿಯ ಒಳಗಿನ ಟೆಲೆಮಾಟಿಕ್ಸ್ ಕಂಟ್ರೋಲರ್ ದಲ್ಲಿ(Telematics ECU) ಎಂಟೆನ್ನಾ(Antenna) ಮತ್ತು ಸೆಮಿಕಂಡಕ್ಟರ್ ಚಿಪ್ ಸೇರಿರುತ್ತದೆ. ಇವುಗಳ ಮೂಲಕ ಗಾಡಿಯು ಬೇರೆ ದೂರದ ಉಪಕರಣಗಳೊಂದಿಗೆ ಸುಲಬವಾಗಿ ಸಂಪರ‍್ಕ ಮಾಡಬಹುದು.
ಇದನ್ನು ಒಟ್ಟಾರೆಯಾಗಿ ಹೇಳಬೇಕೆಂದರೆ, ಮೊಬೈಲ್ ಪೋನ್‌ಗೆ ಬರುವ ತಂತ್ರಾಂಶದ ಅಪ್ಡೇಟ್‌ಗಳಂತೆ, ಬೆಸುಗೆಯ ಕಾರುಗಳು ಈ ರೀತಿ ಸಾಪ್ಟ್‌ವೇರ್ ಅಪ್ಡೇಟ್‌ಗಳನ್ನು ಪಡೆದು ಕೆಳಗಿಸಿಕೊಳ್ಳಬಲ್ಲವು, ಹೊರ ಜಗತ್ತಿನ ವಸ್ತುಗಳೊಂದಿಗೆ ಸಂಪರ‍್ಕ ಪಡೆಯಬಲ್ಲವು ಮತ್ತು ತನ್ನ ಸುತ್ತಲಿನ ಮಿತಿಯಲ್ಲಿನ ಇತರೆ ವಸ್ತುಗಳೊಂದಿಗೆ ಮಿಂಬಲೆ ಇಲ್ಲವೇ ಕಾರಿನ ವೈಪೈ (Wifi) ಮೂಲಕ ಸಂಪರ‍್ಕ ಹೊಂದಬಲ್ಲವು.
ಬೆಸುಗೆಯ ಕಾರುಗಳು ಹೇಗೆ ಮಾತುಕತೆ ನಡೆಸಬಲ್ಲವು?
ಬೆಸುಗೆಯ ಕಾರುಗಳು ಹೊರಜಗತ್ತಿನ ವಸ್ತುಗಳೊಂದಿಗೆ ವ್ಯವಹಾರ/ಸಂಪರ‍್ಕ ಮಾಡುವುದನ್ನು 5 ಬಗೆಗಳಾಗಿ ವಿಂಗಡಿಸಬಹುದು.
ಒಂದು ಬಂಡಿ(ಕಾರು/ಗಾಡಿ) ಮತ್ತೊಂದು ಬಂಡಿ ಇಲ್ಲವೇ ಬಂಡಿಗಳೊಂದಿಗೆ ಮಾಹಿತಿ ಸಂಪರ‍್ಕ ಮಾಡಬಹುದು. ಇದನ್ನು ವೆಹಿಕಲ್ ಟು ವೆಹಿಕಲ್ ಮಾಹಿತಿ ಒಡನಾಟ ಎನ್ನುತ್ತಾರೆ(V2V). ಒಂದು ಕಾರು ನಿರ‍್ದಿಶ್ಟ ಜಾಗದಲ್ಲಿ ಸಾಗುತ್ತಿರುತ್ತದೆ, ಅದು ಸಾಗುವ ವೇಗ, ದಾರಿ, ತಡೆತದ ಸ್ತಿತಿ(braking situation) ಮುಂತಾದ ಮಾಹಿತಿಯನ್ನು ಈ ಕಾರು ಕಲೆ ಹಾಕಿ ಇನ್ನೊಂದು ಕಾರಿಗೆ ಕಳಿಸಬಹುದು. ಈ ವಿದದ ಮೂಲಕ ಬೇಜವ್ದಾರಿ ಬಂಡಿ ಓಡಿಸುಗರನ್ನು, ಇಲ್ಲವೇ ದಾರಿ ತಪ್ಪಿಸಿ ಬೇರೆ ದಾರಿಯಲ್ಲಿ ಹೋಗುವ ಬಂಡಿಗಳನ್ನು ಗುರುತಿಸಿ, ಅಗತ್ಯ ಕ್ರಮ ಕೈಗೊಳ್ಳಬಹುದು. ಬಹುತೇಕ ಕ್ಯಾಬ್/ಟ್ಯಾಕ್ಸಿ ಸೇವೆಗಳನ್ನು ಒದಗಿಸುವ ಕಂಪನಿಯವರು ತಮ್ಮ ಕಾರುಗಳು ಸರಿಯಾದ ದಾರಿಯಲ್ಲಿ ಸಾಗುತ್ತಿವೆಯೇ ಇಲ್ಲವೇ ಎಂಬುದನ್ನು ಪತ್ತೆ ಹಚ್ಚಬಹುದು. ಗಾಡಿಗಳಲ್ಲಿ ಪರಾರಿಯಾಗುವ ಕಳ್ಳಕಾಕರನ್ನು/ಅಪಹರಣಕಾರರನ್ನು, ಅವರು ಸಾಗುವ ದಾರಿಯ ಬಗ್ಗೆ ನಿಕರ ಮಾಹಿತಿ ನೀಡುವ ಮೂಲಕ ಈ ಬಗೆಯು ಪೋಲೀಸ್‍ರಿಗೆ ನೆರವಾಗುತ್ತದೆ.
ಎರಡನೇ ಬಗೆ, ಗಾಡಿ ಮತ್ತು ದಾರಿಹೋಕರ ನಡುವೆ ಸಂಪರ‍್ಕ(V2P-ವೆಹಿಕಲ್ ಟು ಪೆಡೆಸ್ಟ್ರಿಯನ್):
ಇಲ್ಲಿ ಕಾರು ದಾರಿಯಲ್ಲಿ ಓಡಾಡುವ ಇತರೆ ದಾರಿಹೋಕರನ್ನು ಅರಿವುಕಗಳ ಮೂಲಕ ಗುರುತಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿ ಅಪಗಾತ ತಡೆಯುತ್ತದೆ.
ಗಾಡಿ ಮತ್ತು ಇತರೆ ಮೂಲಬೂತ ಸೌಕರ‍್ಯಗಳ ನಡುವಿನ ಸಂಪರ‍್ಕ(V2I-ವೆಹಿಕಲ್ ಟು ಇನ್ಪ್ರಾಸ್ಟ್ರಕ್ಚರ್):
ಈ ಬಗೆಯಲ್ಲಿ ಕಾರು ತನ್ನ ಸುತ್ತಲಿನ ಪರಿಸರ, ಸೇತುವೆ, ಕಟ್ಟಡ, ಬೀದಿ ದೀಪ, ಸಂಚಾರದ ದಟ್ಟಣೆ, ಎದುರಾಗುವ ಸಂಚಾರಿ ಸಿಗ್ನಲ್ ಹೀಗೆ ಹಲವಾರು ಮಾಹಿತಿಯನ್ನು ಪಡೆದು ಅದನ್ನು ಹಂಚಿಕೊಳ್ಳಬಲ್ಲದು. ಈ ಮಾಹಿತಿ ಸಂಚಾರ ದಟ್ಟಣೆ ನಿರ‍್ವಹಿಸುವ ಪೋಲೀಸ್‍ರಿಗೆ, ತುರ‍್ತು ಸಮಯದಲ್ಲಿ ಅಂಬ್ಯುಲೆನ್ಸ್‌ಗಳಿಗೆ ನೆರವಾಗುತ್ತವೆ. ನಮ್ಮ ಮೊಬೈಲ್‌ಗಳಲ್ಲಿ ಕಂಡುಬರುವ ದಾರಿತಲುಪು ಏರ‍್ಪಾಟು(Navigation System) ಮಾಹಿತಿಗಿಂತಲೂ ಇಲ್ಲಿ ಹೆಚ್ಚು ನಿಕರ ಮತ್ತು ನೇರವಾದ ಮಾಹಿತಿ(Real time Data) ಒದಗಿಸುವ ವ್ಯವಸ್ತೆ ಇರುತ್ತದೆ.
ಗಾಡಿ ಮತ್ತು ಕ್ಲೌಡ್ ಮಾಹಿತಿ ಸಂಪರ‍್ಕ(V2C-ವೆಹಿಕಲ್ ಟು ಕ್ಲೌಡ್): ಕಾರುಗಳು ಮೂಲಕ ಕ್ಲೌಡ್‍ನಲ್ಲಿ ಮಾಹಿತಿ ಕೂಡಿಟ್ಟುಕೊಳ್ಳಬಹುದು. ಉದಾಹರಣೆಗೆ, ಗಾಡಿಯೊಂದು ಎಶ್ಟು ಬಾರಿ ರಿಪೇರಿಯಾಗಿದೆ, ಎಶ್ಟು ಸಲ ಸರ‍್ವೀಸ್ ಮಾಡಿಸಲ್ಪಟ್ಟಿದೆ, ದಾರಿ ಮದ್ಯೆದಲ್ಲಿ ಕಾರು ಕೆಟ್ಟು ನಿಂತ ಪರಿಸ್ತಿತಿ, ಹೀಗೆ ಎಲ್ಲ ದಾಕಲೆಗಳನ್ನು ಕ್ಲೌಡ್ ಮೂಲಕ ಕೂಡಿಟ್ಟು, ಬೇಕೆಂದಾಗ ಅದನ್ನು ಬಳಸಿಕೊಳ್ಳಬಹುದು.
ಗಾಡಿ ಮತ್ತು ಮೇಲಿನ ಎಲ್ಲವೂಗಳೊಂದಿಗೆ ಸಂಪರ‍್ಕ(V2X-ವೆಹಿಕಲ್ ಟು ಎವೆರಿತಿಂಗ್):
ಈ ವಿದದಲ್ಲಿ ಗಾಡಿಯೊಂದು ಮೇಲೆ ತಿಳಿಸಿದ ಎಲ್ಲವೂಗಳೊಂದಿಗೆ ಮಾಹಿತಿ ಪಡೆಯುವುದು-ಹಂಚುವುದನ್ನು ಮಾಡಬಹುದು. ಇದರಿಂದ ಗಾಡಿಯೊಂದು ಒಂದೇ ಸಮಯದಲ್ಲಿ ಬೇರೆ ಗಾಡಿಯೊಂದಕ್ಕೆ ಬೆಸೆದುಕೊಂಡು ಸುತ್ತಲಿನ ವಾತಾವರಣದ ಮಾಹಿತಿ ಹಂಚಿ, ಸಂಚಾರ ದಟ್ಟಣೆಯ ಮಾಹಿತಿ ಪಡೆದು, ದಾರಿಹೋಕರು ಎದುರಾದರೆ ಗಾಡಿ ನಿಲ್ಲಿಸುವಂತೆ ಓಡಿಸುಗನನ್ನು ಎಚ್ಚರಿಸಬಹುದು. ಮತ್ತೆ ಎಲ್ಲ ಮಾಹಿತಿಯನ್ನು ಮುಂದೆ ಬಳಸಲು ಕ್ಲೌಡ್‌ನಲ್ಲಿ ಕೂಡಿಡಬಹುದು. ಈ ಎಲ್ಲವೂ ಒಟ್ಟಿಗೆ ನಡೆದು, ಸಾಕಶ್ಟು ಮಾಹಿತಿ ಒಂದು ಗಾಡಿಯಿಂದ ಇನ್ನೊಂದು ಗಾಡಿಗೆ ರವಾನೆಯಾಗುತ್ತಿರುತ್ತದೆ.
(ಮಾಹಿತಿ ಹಾಗೂ ಚಿತ್ರ ಸೆಲೆ: qorvo.com)
ಇತ್ತೀಚಿನ ಅನಿಸಿಕೆಗಳು