ನಾನು ಮತ್ತೆ ನಾನಾದೆ – ಆತಂಕದಿಂದ ಪಾರಾಗಲು 6 ಸರಳ ಮಾರ‍್ಗಗಳು

ಚೈತ್ರಾ ಸುಪ್ರೀತ್.

ನೀವು ತಿಳಿದಿದ್ದೀರಾ? ನಾವು ದೇಹದ ಆರೋಗ್ಯದ ಬಗ್ಗೆ ಎಶ್ಟು ತೀವ್ರವಾದ ಕಾಳಜಿಯನ್ನು ತೋರುತ್ತೇವೆ! ಜ್ವರ ಬಂದರೆ ಕೂಡ ತಕ್ಶಣ ವೈದ್ಯರನ್ನು ನೋಡುತ್ತೇವೆ. ಆದರೆ, ನಮ್ಮ ಮನಸ್ಸಿನ ಅಶಾಂತಿ, ಆತಂಕ, ಒತ್ತಡಗಳ ಬಗ್ಗೆ ಎಶ್ಟು ಪ್ರಾಮುಕ್ಯತೆ ನೀಡುತ್ತೇವೆ? ಬಹಳಶ್ಟು ಬಾರಿ ಈ ಅಂತರಂಗದ ಯುದ್ದವನ್ನು ನಾವೇ ತಡೆದಿದ್ದೇವೆ. ಆತಂಕ ಮತ್ತು ಒತ್ತಡವನ್ನು ನಿರ‍್ಲಕ್ಶ್ಯ ಮಾಡುವುದು ದೀರ‍್ಗಕಾಲದಲ್ಲಿ ದೇಹಕ್ಕೂ ತೊಂದರೆ ಉಂಟುಮಾಡಬಹುದು; ತಲೆನೋವು, ನಿದ್ರಾಹೀನತೆ, ಹ್ರುದಯದ ಸಮಸ್ಯೆಗಳು ಮುಂತಾದವು. ಈ ಲೇಕನದಲ್ಲಿ, ನಾನು ಆತಂಕವನ್ನು ನಿಯಂತ್ರಿಸಲು ಅನುಸರಿಸಿದ 6 ಸರಳ, ಪರಿಣಾಮಕಾರಿ ಮತ್ತು ಆದ್ಯಾತ್ಮಿಕ ಮಾರ‍್ಗಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಇದು ಸರಳವಾದ ಹಂತಗಳ ಮೂಲಕ ಆತಂಕವನ್ನು ಕಡಿಮೆ ಮಾಡಿ, ನಿಮ್ಮೊಳಗಿನ ಶಾಂತಿಯನ್ನು ಮರುಸ್ತಾಪಿಸಲು ಸಹಾಯ ಮಾಡುತ್ತದೆ.

1. ಉಸಿರಾಟದ ತಂತ್ರ (Deep Breathing Technique)

“ಒತ್ತಡದ ಕ್ಶಣದಲ್ಲಿ ಉಸಿರೇ ನಮ್ಮ ಶಕ್ತಿಯ ಮೂಲ”

ಯಾವಾಗ ಆತಂಕ ಹೆಚ್ಚಾಗುತ್ತದೆಯೆಂದರೆ, ನಮ್ಮ ಉಸಿರಾಟ ಸ್ವಲ್ಪ ಗಂಬೀರ, ಕಡಿಮೆ, ಅತವಾ ವೇಗವಾಗಿ ನಡೆಯುತ್ತಿರಬಹುದು. ಇಂತಹ ಸಂದರ‍್ಬದಲ್ಲಿ, ನಾಲ್ಕು ಸೆಕೆಂಡು ಉಸಿರು ತೆಗೆದುಕೊಳ್ಳಿ, ನಾಲ್ಕು ಸೆಕೆಂಡು ಹಿಡಿದಿಡಿ ಮತ್ತು ನಾಲ್ಕು ಸೆಕೆಂಡು ಬಿಟ್ಟಿಡಿ. (4-4-4 ಬ್ರದಿಂಗ್).

ಪಲಿತಾಂಶ: ಇದು ಮೆದುಳಿಗೆ ಶಾಂತಿಯ ಸೂಚನೆ ನೀಡುತ್ತದೆ ಮತ್ತು ಹ್ರುದಯದ ಗತಿ ಸಹ ಸಾಮಾನ್ಯಗೊಳ್ಳುತ್ತದೆ.

2. ಬರೆಯುವ ಚಟ (Journaling)

“ಮಾತುಗಳಿಂದ ಹೇಳಲಾಗದ ಬಾವನೆಗಳನ್ನು ಬರವಣಿಗೆಯ ಮೂಲಕ ಬಿಡುಗಡೆ ಮಾಡಿ.”

ಪ್ರತಿದಿನವೂ 5 ನಿಮಿಶ, ನೀವು ಅನುಬವಿಸುತ್ತಿರುವ ಬಾವನೆಗಳನ್ನು ಬರೆಯಿರಿ. ಆತಂಕ ಯಾವಾಗ ಬರುತ್ತಿದೆ, ಏಕೆ ಬರುತ್ತಿದೆ ಎನ್ನುವ ಅನುಮಾನಗಳಿಗೆ ಉತ್ತರಗಳು ಇಲ್ಲಿ ಸಿಗಬಹುದು.

ಪಲಿತಾಂಶ: ನಿಮ್ಮ ಬಾವನೆಗಳಿಗೆ ಸ್ಪಶ್ಟತೆ ಬರುತ್ತದೆ. ಆತಂಕವೂ ಕ್ರಮೇಣ ಕಡಿಮೆಯಾಗುತ್ತದೆ.

3. ದೈಹಿಕ ಚಟುವಟಿಕೆ (Physical Activity)

“ಸಾಕಶ್ಟು ಚಲನೆ – ಆತಂಕ ಬಗೆಹರಿಸುವ ಉತ್ತಮ ವೈದ್ಯ”

ಪ್ರತಿದಿನವೂ 20-30 ನಿಮಿಶ ನಡೆಯುವುದು, ಓಡುವುದು, ನ್ರುತ್ಯ ಅತವಾ ಯೋಗ ಮಾಡುವುದು ಉತ್ತಮ. ದೇಹ ಚಲನೆಯಲ್ಲಿದ್ದಾಗ, ಮೆದುಳು ಎಂಡಾರ‍್ಪಿನ್ ಹೆಸರಿನ “ಹ್ಯಾಪಿ ಹೆರ‍್ಮೋನ್” ಬಿಡುಗಡೆ ಮಾಡುತ್ತದೆ.

ಪಲಿತಾಂಶ: ಇದು ನಿಮ್ಮ ಮನಸ್ಸನ್ನು ತಾಜಾ ಮತ್ತು ಸಮತೋಲನದಲ್ಲಿ ಇಡುತ್ತದೆ.

4. ಡಿಜಿಟಲ್ ಡಿಟಾಕ್ಸ್ (Digital Detox)

“ಮೊಬೈಲ್‌ನಿಂದ ದೂರ ಇದ್ದರೆ ಮನಸ್ಸು ಹತ್ತಿರ ಬರುತ್ತದೆ”

ದಿನದಲ್ಲಿ ಕನಿಶ್ಟ 1 ಗಂಟೆ ಕಾಲ, ಪೋನ್, ಸೋಶಿಯಲ್ ಮೀಡಿಯಾ ಹಾಗೂ ಟಿವಿಯಿಂದ ದೂರವಿರಿ. ಪೋನ್, ಟಿವಿ ಅತವಾ ಸೋಶಿಯಲ್ ಮೀಡಿಯಾದ ಮೂಲಕ ಬರುವ ದುಕ್ಕದ ಬೀತಿಯ ಮತ್ತು ನಕಾರಾತ್ಮಕ ಸುದ್ದಿಗಳನ್ನು ಹೆಚ್ಚು ಓದುವುದು ನಮ್ಮ ಆತಂಕವನ್ನು ಹೆಚ್ಚಿಸುತ್ತದೆ. ಆದಕಾರಣ, ಸಾದ್ಯವಾದಶ್ಟು ಇಂತಹ ಸುದ್ದಿಗಳಿಂದ ದೂರವಿರಿ. ಬದಲಾಗಿ, ನಿಮ್ಮ ಮನಸ್ಸಿಗೆ ತಾಳ್ಮೆ ಮತ್ತು ಶಾಂತಿ ನೀಡುವ, ಸಕಾರಾತ್ಮಕ ವಿಶಯಗಳನ್ನು ಆರಿಸಿ ಓದಿರಿ. ಅತವಾ ಪ್ರಕ್ರುತಿಯೊಂದಿಗೆ ಕಾಲ ಕಳೆಯಿರಿ.

ಪಲಿತಾಂಶ: ತಾತ್ಕಾಲಿಕ ಓವರ್ ಲೋಡ್ ಕಡಿಮೆಯಾಗುತ್ತದೆ ಮತ್ತು ನಿಮ್ಮ ಮನಸ್ಸು ನೈಜವಾಗಿ ವಿಶ್ರಾಂತಿ ಪಡೆಯುತ್ತದೆ.

5. ನಿಜವಾದ ಸಂಪರ‍್ಕ (Real Human Connection)

“ಬಲವಾದ ಸಂಬಂದಗಳು ಮನಸ್ಸಿನ ಔಶದಿಗಳಂತೆ ಕೆಲಸ ಮಾಡುತ್ತವೆ.”

ನಿಮಗೆ ನಂಬಿಕೆ ಇರುವ ವ್ಯಕ್ತಿಯೊಂದಿಗೆ ಬುದ್ದಿವಂತ ಸಂಬಾಶಣೆ ನಡೆಸಿ. ಆತಂಕದ ವಿಶಯದಲ್ಲಿ ಮಾತನಾಡುವುದು ದೌರ‍್ಬಲ್ಯ ಅಲ್ಲ, ಅದು ದೈರ‍್ಯವಾಗಿದೆ.

ಪಲಿತಾಂಶ: ಮಾತನಾಡಿದರೆ ಮನಸ್ಸು ಹಗುರವಾಗುತ್ತದೆ. ನೀವು ಒಬ್ಬರೇ ಅಲ್ಲ ಎಂಬ ಬಾವನೆ ಬರುತ್ತದೆ.

6. ದ್ಯಾನ (Meditation)

ದ್ಯಾನವು ಮನಸ್ಸನ್ನು ನಿಯಂತ್ರಿಸಲು ಪರಿಣಾಮಕಾರಿಯಾದ ಮತ್ತು ಸರಳವಾದ ತಂತ್ರವಾಗಿದೆ. ದ್ಯಾನದ ಮೂಲಕ ನಾವು ಶಾಂತಿಯನ್ನು ಮರಳಿ ಪಡೆದುಕೊಳ್ಳಬಹುದು. ಕೆಲವೇ ಕ್ಶಣಗಳು ಉಸಿರಿನ ಮೇಲೆ ಗಮನ ಹರಿಸುತ್ತಿದ್ದಾಗ, ನಮ್ಮ ಮನಸ್ಸು ನಿದಾನವಾಗಿ ಆಳವಾದ ವಿಶ್ರಾಂತಿಯನ್ನು ಅನುಬವಿಸಲು ಪ್ರಾರಂಬಿಸುತ್ತದೆ. ಒಂದು ಪದ ಅತವಾ ಚಿತ್ರವನ್ನು ಮನಸ್ಸಿನಲ್ಲಿ ನೆನೆಸಿಕೊಳ್ಳುವುದು ಇದರಲ್ಲಿ ಸೇರುತ್ತದೆ. ದ್ಯಾನವು ಅತಿಯಾಗಿ ಚಲಿಸುವ ಮನಸ್ಸಿನ ಅಲೆಯ ತಡೆಯುತ್ತದೆ ಮತ್ತು ಪ್ರಸ್ತುತ ಕ್ಶಣದಲ್ಲಿ ನಿಮ್ಮನ್ನು ಎಚ್ಚರಿಸುತ್ತದೆ. ಈ ಮೂಲಕ ನಾವು ಒತ್ತಡ ಮತ್ತು ಆತಂಕದಿಂದ ಹೊರಬರಲು ಸಾದ್ಯ.

ಆತಂಕದಿಂದ ಪಾರಾಗಲು ಒಂದು ದಿನ ಸಾಕಾಗದು. ಆದರೆ ಪ್ರತಿದಿನವೂ ಒಂದೊಂದು ಹೆಜ್ಜೆ ಇಡುತ್ತಾ ಹೋದರೆ, ನೀವು ಮತ್ತೆ ನಿಮ್ಮ ಶಾಂತಿಯತ್ತ ಹಿಂದಿರುಗಬಹುದು. ಈ 6 ಪ್ರಯತ್ನಗಳು ಯಾವುದಾದರೂ ನವೀನ ಚಿಕಿತ್ಸೆಗಳಾಗಿರಲಾರದು. ಆದರೆ ಅವು ಮನಸ್ಸನ್ನು ಸ್ಪಶ್ಟಗೊಳಿಸಲು, ಆತ್ಮಚಿಂತನೆಗೆ ಅವಕಾಶ ಕೊಡಲು ಮತ್ತು ನಿಮ್ಮ ನಿಜವಾದ ನಾನನ್ನು ಮತ್ತೆ ಹುಡುಕಲು ಒಂದು ದಾರಿ ನೀಡುತ್ತವೆ. “ನೀವು ನಿಮ್ಮ ಆತಂಕವಲ್ಲ; ನೀವು ನಿಮ್ಮ ಶಕ್ತಿ ಮತ್ತೆ ನಾನಾಗಲು” ಇಂದು ಪ್ರಾರಂಬಿಸಿ.

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *