ಹಣವೆಂಬ ಸಾದನ
ಬದುಕು ಅನಿವಾರ್ಯವಲ್ಲ.. ಅವಕಾಶ. ದೇವರು ಕೊಟ್ಟ ವರ. ಆ ಜನ್ಮ ಈ ಜನ್ಮ ಎಂಬುದನ್ನು ನಂಬುವುದಾದರೆ ಹಿಂದಿನ ಜನ್ಮದಲ್ಲಿ ನಾವೇನು ಆಗಿದ್ದೆವು? ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಮುಂದಿನ ಜನ್ಮದಲ್ಲಿ ನಾವೇನು ಆಗಿರುತ್ತೇವೆ? ಎಂಬುದಕ್ಕೆ ದಾಕಲೆಗಳಿಲ್ಲ . ಸದ್ಯ ಈ ಜನ್ಮದಲ್ಲಿ ನಾವು ಮನುಶ್ಯರಾಗಿ ಹುಟ್ಟಿದ್ದೇವೆ . ಈ ಹುಟ್ಟು ನಿಜ ಅರ್ತದಲ್ಲಿ ಒಂದು ವರವೇ ಸರಿ.
ಬದುಕು ಎಂಬುದು ಕೆಲವರಿಗೆ ಅನಿವಾರ್ಯವಾಗುತ್ತದೆ. ಏಕೆ ಹೀಗೆ ಎಂಬುದನ್ನು ಸ್ವಲ್ಪ ವಿಚಾರ ಮಾಡೋಣ. ಹುಟ್ಟಿದ ನಂತರ ಹಸಿವು , ನೀರಡಿಕೆ , ವಸತಿ, ಬೋಗ ಇತ್ಯಾದಿಗಳು ಅನಿವಾರ್ಯ. ಇವೆಲ್ಲವುಗಳನ್ನು ದೇಹಕ್ಕೆ , ಮನಸ್ಸಿಗೆ ಒದಗಿಸಲೇಬೇಕು . ಅದಕ್ಕೆಂದೇ ಹಲವಾರು ಸಾದನಗಳಿವೆ. ಅವುಗಳಲ್ಲಿ ಹಣವೂ ಒಂದು ಸಾದನ. ಈ ಸಾದನಗಳನ್ನು ಬಳಸಿ ಬದುಕನ್ನು ಸುಂದರವಾಗಿಸಿಕೊಳ್ಳುವುದು ನಮ್ಮ ಗುರಿ ಆಗಿರಬೇಕೇ ಹೊರತು ಹಣಗಳಿಸುವುದೊಂದೇ ಗುರಿಯಾಗಬಾರದು. ಹಣದ ಗಳಿಕೆಯೇ ಗುರಿ ಎಂದುಕೊಂಡಾಗ ಬದುಕು ಅನಿವಾರ್ಯವೆಂದು ಅನಿಸುವುದರಲ್ಲಿ ಸಂಶಯವಿಲ್ಲ. ಬಲವಂತವಾಗಿ ಬದುಕುವ ಅನಿವಾರ್ಯತೆಗಳನ್ನು ನಾವಾಗಿ ನಾವೇ ಹುಟ್ಟು ಹಾಕಿಕೊಳ್ಳುತ್ತೇವೆ.
ಹಣದ ಹಿಂದೆ ಓಡುವ ಬದುಕು ಬದುಕೇ? ಆದರೆ ಹಣವಿಲ್ಲದೆ ಬದುಕುವುದು ಇಂದಿನ ಯುಗದಲ್ಲಿ ಸಾದ್ಯವೇ..? ಕೆಲವೊಮ್ಮೆ ಸಾದ್ಯ ಅನಿಸಿದರೂ ನಾವು ಅಂದುಕೊಂಡಂತೆ ಬದುಕುವುದು ತುಂಬಾ ಕಶ್ಟ. ಅಂದುಕೊಂಡಂತೆ ಬದುಕಲು ಹಣದ ಹಿಂದೆ ಬಿದ್ದಾಗ ಹಣ ಗಳಿಸುವುದೇ ಬದುಕಾಗುತ್ತದೆ. ಹಾಗಾದರೆ ಯಾವುದು ಮುಕ್ಯ .. ? ಹಣ ಗಳಿಸುವುದೇ ಅತವಾ ಬದುಕುವುದೇ..? ಜೀವನದ ಹಲವು ಸಂದರ್ಬಗಳು , ಸನ್ನಿವೇಶಗಳಲ್ಲಿ ಬಹುತೇಕ ಬದುಕೇ ಮುಕ್ಯವಾಗುತ್ತದೆ. ಈ ಬದುಕು ಅತಿ ಅಮೂಲ್ಯ.
ಹಣ ಇಲ್ಲದಿದ್ದರೆ ಬದುಕಬಹುದು . ಆದರೆ ಬದುಕೇ ಇಲ್ಲದಿದ್ದರೆ..? ಎಶ್ಟೋ ಜನರು ಹಣದ ಹಿಂದೆ ಬಿದ್ದು ಸುಂದರ ಬದುಕನ್ನೇ ಮರೆತಿದ್ದಾರೆ. ಬದುಕು ಅಮೂಲ್ಯ ಎಂದಾದರೆ ಅದನ್ನು ಕಣ್ಣಿನ ರೆಪ್ಪೆಯಂತೆ ಕಾಪಾಡಿಕೊಳ್ಳಬೇಕು ಅಲ್ಲವೇ. ಮೊದಲು ಬದುಕಿ, ಆಮೇಲೆ ಬದುಕಿಗೆ ಬೇಕಾದ ಹಲವು ಸಾದನಗಳನ್ನು ಹುಡುಕಿ. ಬದುಕಿನ ಪ್ರತಿ ಕ್ಶಣಗಳನ್ನು ಸುಂದರವಾಗಿಸಿ. ಸುಕ ನೆಮ್ಮದಿಗಳನ್ನು ಆನಂದದಿಂದ ಸ್ವೀಕರಿಸಿದಂತೆ ಕಶ್ಟಗಳನ್ನು ಸ್ವೀಕರಿಸುವುದು ಅನಿವಾರ್ಯ. ಈ ಸತ್ಯವನ್ನು ಸದಾ ಕಾಲ ನೆನಪಿಟ್ಟುಕೊಳ್ಳಬೇಕು. ಹಣವೆಂಬ ಸಾದನದ ಹಿಂದೆ ಓಡುತ್ತಲೇ ಇರಬೇಡಿ. ಬದುಕಿನ ಪ್ರತಿ ಕ್ಶಣಗಳನ್ನು ಬಹುಮಾನದಂತೆ ಸ್ವೀಕರಿಸಿ.. ಆಗಲೇ ಬದುಕು ಬಂಗಾರವಾಗುವುದು.
(ಚಿತ್ರ ಸೆಲೆ: needpix.com)


ಇತ್ತೀಚಿನ ಅನಿಸಿಕೆಗಳು