ಕುಮಾರವ್ಯಾಸ ಬಾರತ ಓದು-ಆದಿ ಪರ‍್ವ-ಚತ್ರವತಿ ನಗರದತ್ತ ಪಾಂಡವರು

ಸಿ. ಪಿ. ನಾಗರಾಜ.

ಪ್ರಸಂಗ-25

ಚತ್ರವತಿ ನಗರದತ್ತ ಪಾಂಡವರು
(ಆದಿಪರ‍್ವ:ಹನ್ನೊಂದನೆಯ ಸಂದಿ: ಪದ್ಯ 1 ರಿಂದ 22)

ಪಾತ್ರಗಳು:

ದರ‍್ಮರಾಯ: ಪಾಂಡುರಾಜ ಮತ್ತು ಕುಂತಿಯ ಮಗ.
ಬ್ರಾಹ್ಮಣ: ಅನೇಕ ರಾಜ್ಯಗಳಲ್ಲಿ ಸಂಚರಿಸುತ್ತ ಏಕಚಕ್ರನಗರಕ್ಕೆ ಬಂದು, ಪಾಂಡವರ ಮನೆಯಲ್ಲಿ ಒಂದು ದಿನ ತಂಗಿದ್ದವನು.
ಪಾಂಡವರು: ದರ‍್ಮರಾಯ-ಬೀಮ-ಅರ‍್ಜುನ-ನಕುಲ-ಸಹದೇವ

*** ಛತ್ರವತಿ ನಗರದತ್ತ ಪಾಂಡವರು ***

ಅರಸ ಕೇಳೈ, ಕಲಿ ಬಕಾಸುರ ಮರಣ ಸಮನಂತರದೊಳು…ಆ ಪುರವರದೊಳು ವಿಮಲ ವಿಪ್ರಸ್ತೋಮದ ಒಡಗೂಡಿ ಇರ್ದರು.

ಧರ್ಮರಾಯ: ನಮ್ಮ ಹಸ್ತಿನಪುರವ ಹೊರವಂಟಂದಿನಲಿ ವರುಷ ತುಂಬಿತು.
(ಎಂದು ಅರಸ ಧರ್ಮಸುತ ನಗುತ ಕುಂತೀದೇವಿಗೆ ಎಂದನು…ಆ ಸಮಯದಲಿ ಒಬ್ಬನು ಭೂಸುರನು ಬಂದನು… ಸಕುತೂಹಲನು ಬಹು ದೇಶ ಪರಿಯಟಣ ಪ್ರವಾಸ ಅಭ್ಯಾಸ ಶಿಕ್ಷೆಯಲಿ ಗ್ರಾಸ ಯಾಚಕನಾಗಿ…ತಮ್ಮ ನಿವಾಸದಲಿ ಸಲೆ ತುಷ್ಟನಾದ ಪರಾಶಿತ ಅಧ್ವಶ್ರಮನ… ಅರಸ ವಿನಯದಲಿ ನುಡಿಸಿದನು.)

ಧರ್ಮರಾಯ: ಎತ್ತಣಿಂದಲಿ ಬರವು…ಬಳಿಕ ಇನ್ನೆತ್ತ ಗಮನವು…ಇಂದಿನ ದಿವಸವಿದೆಲಾ… ಪೂರ್ವ ಸುಕೃತವ ಹೊತ್ತುದು…ಎಮಗೆ ಇಲ್ಲಿಂದಿತ್ತಲು ಸುಜನ ಸಂಸರ್ಗ… ಉತ್ತರೋತ್ತರ ಸಿದ್ಧಿ.
(ಎನೆ)

ಬ್ರಾಹ್ಮಣ: ಹಸ್ತಿನಾಪುರದತ್ತಣಿಂದವೆ ಬಂದೆವು…ನಿಮಗೆ ಆವುದು ದೇಶ.
(ಎಂದ.)

ಧರ್ಮರಾಯ: ನಾವು ನಿಮ್ಮೋಪಾದಿಯಲಿ ತೀರ್ಥಾವಲೋಕನ ಪರರು… ಭಿಕ್ಷಾಜೀವಿಗಳು…ನೀವು ಗಜಪುರವ ಹೊರವಂಟು ಏಸು ದಿನ…ಆವನು ಅಲ್ಲಿಗೆ ಪತಿ…ಯುಧಿಷ್ಠಿರ ದೇವನೋ….ದುರ್ಯೋಧನನೊ…ಕೌರವ ಪಾಂಡುತನಯರಲಿ ಬಳಿಕ ವಿಶೇಷ ಆವುದುಂಟು.

ಬ್ರಾಹ್ಮಣ: ಮರುಳುಗಳೊ ನೀವ್…ಮೇಣು… ನಮ್ಮನು ಮರುಳು ಮಾಡುವ ಪರಿಯೊ… ಪಾಂಡವರು ಅರಗು ಮನೆಯಲಿ ಬೆಂದರು…ಇದು ಲೋಕಪ್ರಸಿದ್ಧವಲೆ…ಅರಸು ಕೌರವರಾಯನು…ಆತನ ಸಿರಿಯನು…ಆತನ ಬಲುಹನು…ಆತನ ಪರಿಯನು ಅಭಿವರ್ಣಿಸುವಡೆ ಅರಿಯೆನು…ವಿಪ್ರ ಕೇಳು .
(ಎಂದ)

ಧರ್ಮರಾಯ: ಅಕಟ…ಪಾಂಡವರು ಅಳಿದರೇ…ಪರರಿಗೆ ಬಾಧಕರೆ…ಲೇಸಿನಲಿ ಕಂಟಕವು…ದುಗ್ಧ ವಿಷಂಗಳಲಿ ಹಾಲಿಂಗೆ ಹಾನಿಯಲೆ…ವಿಕಳ ಪುಣ್ಯರು ನಿಲಲಿ…ಕುರು ರಾಜಕದೊಳಗೆ ಭೀಷ್ಮಾದಿ ವೃದ್ಧ ಪ್ರಕರ…ಗುರುಸುತ…ಗುರು…ಕೃಪಾದ್ಯರು ಕುಶಲರೇ.
(ಎಂದ)

ಬ್ರಾಹ್ಮಣ: ಗುರುಸುತಾದಿ ಸಮಸ್ತ ಪರಿಜನ ಪುರಜನಕೆ ಸುಕ್ಷೇಮ…ದ್ರುಪದನ ವರ ಕುಮಾರಿಯ ಮದುವೆ ಗಡ…ಪಾಂಚಾಲ ನಗರದಲಿ…ನಾನಾ ದಿಗಂತದ ಧರಣಿಪತಿಗಳು ಭೂರಿಯಲಿ ನೆರವುತಿದೆ…ನಮಗೆ ಮಿಗೆ ಭರಿತ ದಕ್ಷಿಣೆ…ಮೃಷ್ಟ ಭೋಜನವುಂಟು.
(ಎಂದ.)

ಧರ್ಮರಾಯ: ಸಾರವಿದು…ನೃಪ ಕನ್ನಿಕೆಗೆ ವರನಾರು…ಲಗ್ನವದು ಎಂದು…ಬಳಿಕ ಭೂಪತಿಗಳು ಆರಾರು ಬಂದರು…ಅದನೆಂದು ಕೇಳಿದಿರಿ…ಭೂರಿಯಲಿ ನಮಗುಂಟೆ ಮೃಷ್ಟಾಹಾರ ದಕ್ಷಿಣೆ…ನಮ್ಮ ಅಭೀಷ್ಟ ವಿಹಾರ ವಾರ್ತೆಯಿದು. 
(ಎಂದು ಧರ್ಮಜ…ಆ ದ್ವಿಜಗೆ ನುಡಿದನು…ಇವರು ಕಪಟೋಪಾಧ್ಯರು ಎಂಬುದನು ಅವನು ಬಲ್ಲನೆ… ಧರ್ಮನಂದನನ …ಭೂಮಿದೇವ ಪ್ರವರನೈಸಲೆ ಎಂದು ಬಗೆದನು.)

ಬ್ರಾಹ್ಮಣ: ಅವನಿಯಲಿ ಪಾತಾಳದಲಿ… ಸುರಭವನದಲಿ…ಪಾಂಚಾಲ ತನುಜೆಗೆ ಯುವತಿಯರು ಸರಿಯಲ್ಲ ಎಂಬುದ ಆವು ಕೇಳ್ದೆವು…ಈಕೆಗೆ ಎಣೆಯಹ ವರನನು…ಈ ನರಲೋಕದಲಿ ತಾ ಕಾಣೆನು…ಅರ್ಜುನನು ಈ ಕುಮಾರಿಯ ರಮಣನೆಂದೇ ಮನದ ಸಂಕಲ್ಪ… ಈಕೆಯ ಅಪದೆಸೆ ಉದಯದಲಿ…
ಕುಂತೀಕುಮಾರಕರು ಅನಲ ಮುಖದಲಿ ನಾಕದಲಿ ನೆಲೆಗೊಂಡರೆಂದು…ದ್ರುಪದ ಉಮ್ಮಳಿಸುವನು…ಜ್ವಲನ ನೆರೆ ನುಂಗಿದನೊ…ಮೇಣ್…ಎಂಜಲಿಸಿ ಬಿಟ್ಟನೊ…ಆವನು ಬಲ್ಲನು… ಕಮಲಭವನು ಕಲು ಹೃದಯನೈ…ಈ ಪಾಂಡುನಂದನರ ಸುಳಿವ ಸೈರಿಸನು…
ಅಕಟ…ಹೂಹೆಗಳು ಅಳಿವ ಹರೆಯವೆ ಶಿವಶಿವಾ ಎಂದು…ದ್ರುಪದಪತಿ ಅಳಲು ತೊರೆಯಲಿ ಮುಳುಗಿ ಮೂಡುವ… ಸಕಲ ದೈವಜ್ಞರಲಿ… ಉಪಶ್ರುತಿಗಳಲಿ… ಋಷಿಗಳ ಪರಮ ಸಿದ್ಧಾಂತದಲಿ…ಮಂತ್ರಾವೇಶ ವಚನದಲಿ ಅರಸ ಕೇಳ್ವನು…ಪುರೋಹಿತನು ನೃಪನ ಉಪಚರಿಸಿ ನುಡಿದು “ಧರೆಯೊಳು
ಈಗಳು ಪಾಂಡುಸುತ ಸಂಚರಣೆಯುಂಟು…ಅದು ಸತ್ಯವೆಂದು”  ಸಂತವಿಸುವನು… ಸರಸಿಜಾನನೆ ನೃಪರಲಿ ನೋಡಿ ವಲ್ಲಭನನು ವರಿಸುವಳು ಎಂದು… ಸವಿವಾತುಗಳ ಸಾರಾಯ ಸೋನೆಯಲಿ ಉಪಚರಿಸುವನು…ಬಹುದೇಶ ಭೂಮೀಶ್ವರರನು ಬರಿಸುವುದು… ಅವರೊಳು ಪುಣ್ಯದಲಿ ಗರುವೆಯರ ದೇವಿಗೆ
ಪಾಂಡುಸುತರು ಗೋಚರಿಸರೇ” ಎಂದ.…
ಆದೊಡೆ ಈ ಮಗುವಿನ ಮಹಾಪುಣ್ಯೋದಯದ ಫಲವೈಸಲೇ….ಮೇದಿನೀಶ್ವರರೆಲ್ಲರಿಗೆ ಲೇಖಾರ್ಥ ಸಂಗತಿಯ ಬರೆ…ಸೋದರರು ಸಹಿತಾ ಸುಯೋಧನನಾದಿಯಾದ ಸಮಸ್ತ ನೃಪರು ವಿವಾದವಿಲ್ಲದೆ ಬರಲಿ… ಪಾವುಡವನು ಕಟ್ಟಿಸು.” ಎಂದ…
ಅಖಿಳ ಭೂಮೀಶ್ವರರಿಗೆ ಬರೆದ ವೋಲೆಗಳ ಉಡುಗೊರೆ ಸಹಿತ ದೂತರು ಉತ್ತರ ಪೂರ್ವ ದಕ್ಷಿಣ ಪಶ್ಚಿಮಂಗಳಿಗೆ ಹರಿದರು…“ಧರೆಯ ಕನ್ಯಾಜನ ಶಿರೋಮಣಿ ವರ ದ್ರುಪದ ತನುಜಾ ಸ್ವಯಂವರಕೆ ಅರಸುಗಳು ಬಹುದು” ಎಂದು ಅಖಿಳ ಲೇಖಾರ್ಥ ವಾಚಿಸಿತು.
ಶತ ಯಾಗವನು ಮಾಡಿದರೆ ಶಚಿ ಕೈಗೂಡುವಳು…ಮಖ ಸಹಸ್ರವ ಮಾಡಿ ಮೇಣ್ ಜನಿಸಿದೊಡೆ ಬಹಳೇ ದ್ರೌಪದಾದೇವಿ…ನೋಡುವೆವು ನಡೆ…ಜನ್ಮ ಶತದಲಿ ಕೂಡಿ ಕೊಬ್ಬಿದ ಪುಣ್ಯಫಲ ಕೈಗೂಡುವುದೊ… ತಪ್ಪೇನು ಎನುತ ನೃಪಸ್ತೋಮ ನೆರೆದುದು.
ಆ ಪುರೋಹಿತ ವಚನದಲಿ…ನಿರ್ವ್ಯಾಪಿತ ಅಂತರ್ವ್ಯಥೆಯಲಿ…ಅವನಿಪನು ಆ ಪುರಪ್ರಾಂತ್ಯದಲಿ…ಸುತ್ತಲು ಮೂರು ಯೋಜನದ ತೋಪಿನಲಿ…ಅಗ್ಗದ ಭೂಪರಿಗೆ ಭವನವನು ಕಟ್ಟಿಸಿದನು…ಕೇಳೈ, ದ್ರೌಪದಿಯ ವೈವಾಹ ರಚನಾ ರಾಮಾಣೀಯಕವ ಕನ್ಯಾರ್ಥಿಗಳು…ನಾನಾ ದಿಗಂತದ ಧರಣಿಪರು
ನೆರವುತಿದೆ…ದಕ್ಷಿಣಾರ್ಥದಲಿ ಭೂಸುರ ಸಮೂಹದ ಸಾಲು ನೆರೆದುದು… ಎರಡರೊಳು ನಿಮಗೇನು ಕನ್ಯಾವರಣವೋ… ಮೇಣ್… ದಕ್ಷಿಣಾರ್ಥವೊ… ಬರವು ನಿಮಗುಂಟೇ .
(ಎನುತ ದ್ವಿಜನು…ಇವರ ಬೆಸಗೊಂಡ.)

ಧರ್ಮರಾಯ: ಈಸು ಪರಿಯಲಿ ನಮ್ಮ ನೀವು ಅಪಹಾಸ ಮಾಡುವಿರಾ…ಆವು ಭಿಕ್ಷುಕರೈಸಲೇ…ಕನ್ಯಾರ್ಥದಲಿ ನಾವೆತ್ತ…ನೃಪರೆತ್ತ……ಐಸೆ ನಿಮ್ಮೊಡೆ ನಾವು ಬಹೆವು…ಈ ಭೂಸುರರ ನೆರವುಂಟಲಾ…ಶುಭವಾಸರವ ಬೆಸಗೊಂಬೆನು.
(ಎಂದನು ಧರ್ಮಸುತ ನಗುತ…ಇವನು ಬಳಿಕ…ನಿಜ ಪ್ರಯೋಜನ ಭವನಕೆ ಐದಿದನು…ಅಖಿಳ ವಾರ್ತಾ ವಿವರಣ ವ್ಯಾಖ್ಯಾನ ಸಮನಂತರದ ಸಮಯದಲಿ ಇವರು ತಮ್ಮೊಳಗೆ ಎಂದರು.)

ಪಾಂಡವರು: ಅವನೀ ದಿವಿಜಪುರದಲಿ ದೈನ್ಯವೃತ್ತಿಯ ನಿವಹ ನಿಲಲಿ…ಆ ದ್ರುಪದ ಪಟ್ಟಣವ ನಿರೀಕ್ಷಿಸುವೆವು…ಆ ಲತಾಂಗಿಯ ಮದುವೆಗೆ ಅವನೀಪಾಲವರ್ಗದ ಬರವು ಗಡ…ಹರನ ಊಳಿಗದ ಹೆಚ್ಚಾಳು ಮಕರಧ್ವಜನ ಮೌಳಿ ಗಡ…ಮೇಳವಹ
ಕಿವಿಗಳಿಗೆ ಹಂಗು ಅಹವು… ಆಲಿಗಳು…ಪರಿವಿಡಿಯ ವೇಧೆಗೆ ಸೋಲುವವು.
(ಎಂದು ಐವರು ಒಳಗೊಳಗೆ ಆಳೋಚಿಸಿದರು…ಅರಸ ಚಿತ್ತೈಸು…ಅಮಳ ಲಗ್ನಾಂತರದಲಿ…ಇವರು ಉದಯದಲಿ ಹೊರವಂಟರು.)

ಹೊಸಗನ್ನಡ ಗದ್ಯ

ಬಕಾಸುರನ ಮರಣದ ತರುವಾಯ ಪಾಂಡವರು ಏಕಚಕ್ರನಗರದಲ್ಲಿಯೇ ಬ್ರಾಹ್ಮಣ ಸಮೂಹದೊಂದಿಗೆ ಇದ್ದರು. ಒಂದು ದಿನ ದರ‍್ಮರಾಯನು ನಗುತ್ತ “ನಮ್ಮ ಹಸ್ತಿನಪುರವನ್ನು ಬಿಟ್ಟು ಹೊರಟು, ಇಂದಿಗೆ ಒಂದು ವರುಶ ತುಂಬಿತು” ಎಂದು ಕುಂತಿಗೆ ಹೇಳಿದನು.

ಆ ಸಮಯದಲ್ಲಿ ವಿದ್ಯೆಯನ್ನು ಕಲಿಯುವುದಕ್ಕಾಗಿ ನಾನಾ ದೇಶಗಳಲ್ಲಿ ಕುತೂಹಲದಿಂದ ಸಂಚರಿಸುತ್ತಿದ್ದ ಬ್ರಾಹ್ಮಣನೊಬ್ಬನು ಯಾಚಕನಾಗಿ ಪಾಂಡವರ ಬಳಿಗೆ ಬಂದನು. ಆಹಾರ ಪಡೆದು, ಪಯಣದ ಆಯಾಸವನ್ನು ಪರಿಹರಿಸಿಕೊಂಡ ಬ್ರಾಹ್ಮಣನನ್ನು ದರ‍್ಮರಾಯನು ವಿನಯದಿಂದ ಮಾತನಾಡಿಸಿದನು.

“ಎಲ್ಲಿಂದ ಬಂದಿರಿ…ಇನ್ನು ಯಾವ ಯಾವ ಕಡೆಗೆ ಹೋಗುವಿರಿ…ಹಿಂದೆ ನಾವು ಮಾಡಿದ ಪುಣ್ಯದಿಂದ, ಈ ದಿವಸ ನಮಗೆ ನಿಮ್ಮಂತಹ ಸಜ್ಜನರ ಒಡನಾಟ ದೊರೆತಿದೆ. ಇನ್ನು ಮುಂದೆ ನಮಗೆ ಎಲ್ಲವೂ ಒಳ್ಳೆಯದಾಗುತ್ತದೆ” ಎಂದು ದರ‍್ಮರಾಯನು ಹೇಳಲು, “ನಾವು ಹಸ್ತಿನಾಪುರದಿಂದ ಬಂದೆವು. ನಿಮ್ಮದು ಯಾವ ದೇಶ” ಎಂದು ಬ್ರಾಹ್ಮಣನು ಪಾಂಡವರನ್ನು ಕೇಳಿದನು.

“ನಾವು ನಿಮ್ಮಂತೆಯೇ ಪುಣ್ಯಕ್ಶೇತ್ರಗಳನ್ನು ನೋಡಬೇಕೆಂಬ ಹಂಬಲವುಳ್ಳವರು. ನಾವು ಬಿಕ್ಕೆ ಬೇಡಿ ಜೀವಿಸುವವರು. ನೀವು ಹಸ್ತಿನಾಪುರವನ್ನು ಬಿಟ್ಟು ಎಶ್ಟು ದಿನಗಳಾದವು…ಯಾರು ಅಲ್ಲಿಗೆ ರಾಜ… ದರ‍್ಮರಾಯನೋ…ದುರ‍್ಯೋದನನೋ… ಕೌರವರು ಮತ್ತು ಪಾಂಡವರಿಗೆ ಸಂಬಂದಪಟ್ಟಂತೆ ಮತ್ತೇನಾದರು ಹೊಸ ಸಂಗತಿಗಳು ಉಂಟೇನು” ಎಂದು ದರ‍್ಮರಾಯನು ಆ ಬ್ರಾಹ್ಮಣನನ್ನು ಮರು ಪ್ರಶ್ನಿಸಿದನು.

“ನೀವು ಹುಚ್ಚರೋ ಇಲ್ಲವೇ ನಮ್ಮನ್ನು ಹುಚ್ಚರನ್ನಾಗಿಸುವ ರೀತಿಯೋ…ಪಾಂಡವರು ಅರಗಿನ ಮನೆಯಲ್ಲಿ ಸುಟ್ಟು ಹೋದರೆಂಬ ಸಂಗತಿಯು ಲೋಕದಲ್ಲಿ ಎಲ್ಲರಿಗೂ ತಿಳಿದಿದೆಯಲ್ಲವೇ…ಈಗ ಹಸ್ತಿನಾಪುರಕ್ಕೆ ದುರ‍್ಯೋದನನು ಅರಸನಾಗಿದ್ದಾನೆ. ಅತಿಶಯವಾದ ಅವನ ಸಂಪತ್ತನ್ನು, ಅವನ ಶಕ್ತಿಯನ್ನು, ಅವನ ರೀತಿಯನ್ನು ಬಣ್ಣಿಸುವುದಕ್ಕೆ ನನ್ನಿಂದ ಆಗದು” ಎಂದು ಬ್ರಾಹ್ಮಣನು ಹೇಳಿದನು.

“ಅಯ್ಯೋ…ಪಾಂಡವರು ನಾಶವಾದರೆ…ಅವರು ಉಳಿದವರಿಗೆ ತೊಂದರೆ ಕೊಡುತ್ತಿದ್ದರೆ…ಒಳ್ಳೆಯವರಿಗೆ ಕೇಡಾಯಿತೆ…ಹಾಲು ಮತ್ತು ವಿಶ ಸೇರಿದಾಗ ಹಾಲಿಗೇ ಹಾನಿಯಲ್ಲವೇ…ಪಾಂಡವರು ಪುಣ್ಯಹೀನರು…ಅವರ ವಿಚಾರ ಹಾಗಿರಲಿ…ಕುರುರಾಜರ ಗುಂಪಿನಲ್ಲಿ ಬೀಶ್ಮರೇ ಮೊದಲಾದ ಹಿರಿಯರು…ಗುರುಸುತ, ಕ್ರುಪ ಮೊದಲಾದವರು ಚೆನ್ನಾಗಿದ್ದಾರೆಯೇ” ಎಂದು ದರ‍್ಮರಾಯನು ಕೇಳಿದನು.

“ಅಶ್ವತ್ತಾಮ ಮೊದಲಾದ ಸಕಲ ಪರಿವಾರದವರೂ, ಪುರಜನವೂ ಚೆನ್ನಾಗಿದ್ದಾರೆ. ಪಾಂಚಾಲ ನಗರದಲ್ಲಿ ದ್ರುಪದನ ಮಗಳ ಮದುವೆ ಇದೆ..ಕಂಡಿರಾ… ನಾನಾ ದಿಕ್ಕುಗಳ ತುದಿಗಳಿಂದ ಅನೇಕ ರಾಜರುಗಳು ಬಂದು ಸೇರುತ್ತಿದ್ದಾರೆ. ನಮಗೆ ದೊಡ್ಡ ಮೊತ್ತದ ದಕ್ಶಿಣೆ, ರುಚಿಕರವಾದ ಊಟವೂ ಉಂಟು” ಎಂದು ಆ ಬ್ರಾಹ್ಮಣನು ಹೇಳಿದನು.

“ಇದು ಸಾರವತ್ತಾದ ಸುದ್ದಿ…ರಾಜಕನ್ಯೆಗೆ ವರ ಯಾರು…ಲಗ್ನ ಯಾವತ್ತು…ಯಾವ ಯಾವ ರಾಜರು ಬಂದರು…ಈ ವಿಚಾರವನ್ನು ನೀವು ಯಾವತ್ತು ಕೇಳಿದಿರಿ…ನಮಗೂ ರುಚಿಕರವಾದ ಊಟ, ಹೆಚ್ಚಿನ ದಕ್ಶಿಣೆ ಸಿಗುತ್ತದೆಯಲ್ಲವೇ… ಇದು ನಮಗೆ ಇಶ್ಟವಾದ ಆನಂದದ ಸುದ್ದಿಯಾಗಿದೆ” ಎಂದು ದರ‍್ಮರಾಯನು ಆ ಬ್ರಾಹ್ಮಣನ ಬಳಿ ನುಡಿದನು.

ಇವರು ಬ್ರಾಹ್ಮಣವೇಶವನ್ನು ತಳೆದಿರುವವರು ಎಂದು ಅವನು ಬಲ್ಲನೆ,,ದರ‍್ಮರಾಯನನ್ನು ಬ್ರಾಹ್ಮಣೋತ್ತಮನೆಂದೇ ತಿಳಿದನು. ಆ ಬ್ರಾಹ್ಮಣನು ಈಗ ವಿವರವಾಗಿ ದ್ರುಪದನ ಮಗಳ ಮದುವೆಯ ಸಂಗತಿಯನ್ನು ಬಣ್ಣಿಸತೊಡಗುತ್ತಾನೆ.

“ಸಗ್ಗ ಬೂಮಿ ಪಾತಾಳಗಳಲ್ಲಿ ಪಾಂಚಾಲಪುತ್ರಿಗೆ ಯಾವ ಯುವತಿಯರೂ ಸಮರಲ್ಲ ಎಂಬುದನ್ನು ನಾವು ಕೇಳಿದ್ದೇವೆ…ಈ ರಾಜಕುಮಾರಿಗೆ ಸಮಾನನಾದ ವರನನ್ನು ಈ ಮಾನವ ಲೋಕದಲ್ಲಿ ನಾನು ನೋಡಿಲ್ಲ. ಅರ‍್ಜುನನು ಈ ಕುಮಾರಿಯ ಪತಿಯೆಂದೇ ಮನದಲ್ಲಿ ಸಂಕಲ್ಪಿಸಿದ್ದೆ. ಈಕೆಯ ಕೆಟ್ಟ ಗ್ರಹಚಾರದಿಂದಾಗಿ ಪಾಂಡವರು ಬೆಂಕಿಗೆ ಬಲಿಯಾಗಿ ನಾಕದಲ್ಲಿ ನೆಲೆಸಿದರು” ಎಂದು ದ್ರುಪದನು ಸಂಕಟಪಡುತ್ತಿದ್ದ.

“ಅಗ್ನಿಯು ಅವರನ್ನು ನುಂಗಿದನೋ…ಇಲ್ಲವೇ…ಸ್ವಲ್ಪ ಮಾತ್ರ ಗಾಸಿಗೊಳಿಸಿಬಿಟ್ಟನೋ…ಕಂಡವರು ಯಾರು…ಕಲ್ಲು ಮನಸ್ಸಿನವನು…ಆ ಬ್ರಹ್ಮ…ಅಯ್ಯೋ…ಪಾಂಡುವಿನ ಮಕ್ಕಳ ಇರುವಿಕೆಯನ್ನು ಅವನು ಸಹಿಸಲಿಲ್ಲವಲ್ಲ…ಆ ಮಕ್ಕಳಿಗೆ ಸಾಯುವ ಪ್ರಾಯವೆ…ಶಿವ ಶಿವಾ ಎಂದು ದ್ರುಪದನು ಸಂಕಟದ ಹೊಳೆಯಲ್ಲಿ ಮುಳುಗೇಳುತ್ತಿದ್ದಾನೆ…ಅರಸನು ಎಲ್ಲ ಜೋಯಿಸರ ಹತ್ತಿರ ಕೇಳುತ್ತಿದ್ದ… ಗ್ರಹಗತಿಗಳ ಚಲನೆಯಲ್ಲಿ ಈಗಲೂ ಪಾಂಡುಸುತರ ಸಂಚಾರ ಈ ಬೂಮಿಯ ಮೇಲಿದೆಯೆಂದು, ಇದು ಸತ್ಯ” ಎಂದು ಉಪಚರಿಸಿ ಮಾತನಾಡಿ, ರಾಜಪುರೋಹಿತನು ದ್ರುಪದನನ್ನು ಸಮಾದಾನಪಡಿಸುತ್ತಿದ್ದ.

“ದ್ರೌಪದಿಯು ನೆರೆದ ಎಲ್ಲ ರಾಜರಲ್ಲಿ ಪತಿಯನ್ನು ಆರಿಸುವಳು. ಬಹಳ ದೇಶಗಳಿಂದ ದೊರೆಗಳನ್ನು ಬರಮಾಡಿಕೋ. ಅವರಲ್ಲಿ ಪುಣ್ಯವಿದ್ದರೆ ಚೆಲುವೆಯಾದ ದ್ರೌಪದಿಗೆ ಪಾಂಡವರು ಮಕ್ಕಳು ಕಾಣಿಸಿಕೊಳ್ಳದಿರುವರೆ” ಎಂದು ಹೇಳುತ್ತಿದ್ದ.

“ಹಾಗೆ ಆಗುವುದಾದರೆ, ಈ ಮಗುವಿನ ಮಹಾ ಪುಣ್ಯೋ ದಯದ ಪಲವೇ ಅಲ್ಲವೇ…ಬೂಮಿಯ ಎಲ್ಲ ರಾಜರಿಗೂ ಸ್ವಯಂವರದ ಸಂಗತಿಯನ್ನು ತಿಳಿಸುವ ಪತ್ರವನ್ನು ಕಳಿಸು. ಸೋದರರೊಂದಿಗೆ ಸುಯೋದನನೇ ಮೊದಲಾದ ಎಲ್ಲ ರಾಜರೂ ಯಾವ ಗೊಂದಲವೂ ಇಲ್ಲದೇ ಬರಲಿ. ಉಡುಗೊರೆಗಳನ್ನು ಸಿದ್ದಪಡಿಸು” ಎಂದು ದ್ರುಪದನು ಪುರೋಹಿತನಿಗೆ ಹೇಳಿದನು.

ಎಲ್ಲ ರಾಜರಿಗೆ ಉಡುಗೊರೆ ಸಮೇತ ಪತ್ರಗಳನ್ನು ತಲಪಿಸಲು ಉತ್ತರ-ಪೂರ‍್ವ-ದಕ್ಶಿಣ-ಪಶ್ಚಿಮ ದಿಕ್ಕುಗಳಿಗೆ ದೂತರು ದಾವಿಸಿದರು. ಬೂಮಂಡಲದ ಕನ್ಯೆಯರಲ್ಲಿ ಉತ್ತಮಳು ಎನಿಸಿದ ದ್ರುಪದನ ಪುತ್ರಿ ದ್ರೌಪದಿಯ ಸ್ವಯಂವರಕ್ಕೆ ಅರಸುಗಳು ಬರುವುದು ಎಂದು ಪತ್ರದ ಬರೆಹವಿತ್ತು.

“ಒಂದು ನೂರು ಯಾಗಗಳನ್ನು ಮಾಡಿದರೆ ಶಚಿಯು ಜೊತೆಗೂಡುವಳು…ಸಾವಿರ ಯಾಗಗಳನ್ನು ಮಾಡಿ ಮತ್ತೆ ಹುಟ್ಟಿ ಬಂದರೆ ತಾನೆ ದ್ರೌಪದಿಯು ದೊರೆಯತ್ತಾಳೆಯೇ… ನೂರು ಜನ್ಮಗಳಿಂದ ಸಂಗ್ರಹವಾದ ಪುಣ್ಯದ ಪಲದಿಂದ ದೊರಕುತ್ತಾಳೆಯೋ…ಪ್ರಯತ್ನ ಮಾಡುವುದರಲ್ಲಿ ತಪ್ಪೇನು” ಎನ್ನುತ್ತ ರಾಜರು ಸೇರಿದರು.

ಆ ಪುರೋಹಿತನ ಮಾತುಗಳಿಂದ ದ್ರುಪದನ ಮನಸ್ಸಿನ ಸಂಕಟ ನಿವಾರಣೆಯಾಯಿತು. ಮಹಾರಾಜನು ಆ ಪಟ್ಟಣದಲ್ಲಿ ಮೂರು ಯೋಜನದಶ್ಟು ಪ್ರದೇಶದಲ್ಲಿ ರಾಜರಿಗೆ ಉತ್ತಮವಾದ ಮಹಲುಗಳನ್ನು ಕಟ್ಟಿಸಿದನು. ದ್ರೌಪದಿಯ ವಿವಾಹಕ್ಕೆ ಅಣಿಗೊಳಿಸಿದ ಸಿದ್ದತೆಯ ಸೊಗಸನ್ನು ಕೇಳು…

“ಕನ್ಯೆಯನ್ನು ಮದುವೆಯಾಗಲು ಬಯಸಿ ದೊರೆಗಳು ನಾನಾ ದಿಕ್ಕುಗಳಿಂದ ಬಂದು ಸೇರುತ್ತಿದ್ದಾರೆ…ದಕ್ಶಿಣೆಯ ಆಸೆಯಿಂದ ಬ್ರಾಹ್ಮಣರು ಸಾಲು ಸಾಲಾಗಿ ಒಟ್ಟುಗೂಡುತ್ತಿದ್ದಾರೆ…ಈ ಎರಡರಲ್ಲಿ ನಿಮ್ಮ ಆಸೆ ಯಾವುದು…ಕನ್ಯೆಯನ್ನು ವರಿಸುವುದೋ…ದಕ್ಶಿಣೆಗೋಸ್ಕರ ಬರುತ್ತೀರೋ” ಎನ್ನುತ್ತ ಬ್ರಾಹ್ಮಣನು ಪಾಂಡವರನ್ನು ಕೇಳಿದನು.

“ಈ ಬಗೆಯಲ್ಲಿ ನೀವು ನಮ್ಮನ್ನು ಅಪಹಾಸ್ಯ ಮಾಡುವಿರಾ… ನಾವು ಬಿಕ್ಕೆಬೇಡುವವರಲ್ಲವೇ…ಕನ್ಯೆಯನ್ನು ಬಯಸುವುದರಲ್ಲಿ ನಾವೆತ್ತ…ಆ ರಾಜರೆತ್ತ…ಆನಂದವಾಗಿ ನಿಮ್ಮ ಜೊತೆ ಬರುತ್ತೇವೆ. ಬ್ರಾಹ್ಮಣರ ಸಮೂಹವು ಜೊತೆಗೆ ಇರುತ್ತದೆಯಲ್ಲಾ…ಹೊರಡಲು ಒಳ್ಳೆ ದಿನವನ್ನು ವಿಚಾರಿಸುವೆನು” ಎಂದು ದರ‍್ಮರಾಯನು ನಗುತ್ತ ಹೇಳಿದನು.

ಆ ಬ್ರಾಹ್ಮಣನು ದ್ರೌಪದಿಯ ಸ್ವಯಂವರದ ಸುದ್ದಿಯ ವಿವರವನ್ನು ಬಣ್ಣಸಿದ ತರುವಾಯ ತಾನು ಉಳಿದುಕೊಂಡಿದ್ದ ಎಡೆಗೆ ತೆರಳಿದನು. ಪಾಂಡವರು ಈಗ ತಮ್ಮ ತಮ್ಮಲ್ಲೇ ಮಾತನಾಡಿಕೊಂಡರು.

“ಈ ಊರಿನಲ್ಲಿ ನಡೆಸುತ್ತಿರುವ ಬಿಕ್ಕೆ ಬೇಡುವ ಜೀವನ ನಿಲ್ಲಲಿ. ಆ ದ್ರುಪದನ ಪಟ್ಟಣವನ್ನು ನೋಡೋಣ… ಆ ಸುಂದರಿಯ ಮದುವೆಗೆ ರಾಜರು ಬರುತ್ತಿದ್ದಾರಂತೆ. ಆ ದ್ರೌಪದಿಯು ಶಿವನೊಡನೆ ಹೋರಾಡಿದ ಕಾಮದೇವನ ಕಿರೀಟದಂತೆ ಅಲ್ಲವೇ. ಇದನ್ನು ಕಿವಿಗಳು ಕೇಳಿದ ಮೇಲೆ ಕಣ್ಣುಗಳು ಆಕೆಯನ್ನು ನೋಡಲು ಬಯಸುತ್ತವೆ” ಎಂದು ತಮ್ಮೊಳಗೆ ಆಲೋಚಿಸಿದರು. ಆಮೇಲೆ, ಒಳ್ಳೆಯ ಲಗ್ನದಲ್ಲಿ ಪಾಂಡವರು ಏಕಚಕ್ರನಗರದಿಂದ ದ್ರುಪದನ ನಗರದ ಕಡೆಗೆ ಹೊರಟರು.

(ಚಿತ್ರ ಸೆಲೆ: quoracdn.net)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *