ಡಿ.ಎನ್.ಎ ‘ತಂದೆ’ಯ $5.3ಮಿ ಓಲೆ
ಹೆಸರಾಂತ ಅರಿಮೆಗಾರ ಪ್ರಾನ್ಸಿಸ್ ಕ್ರಿಕ್ ಅವರು ತಮ್ಮ 12 ವರ‍್ಶದ ಮಗನಿಗೆ ಬರೆದ ಓಲೆಯೊಂದನ್ನು ಹೆಸರು ಹೇಳಲು ಬಯಸದ ಕೊಳ್ಳುಗರೊಬ್ಬರು ನ್ಯೂ ಯಾರ‍್ಕಿನಲ್ಲಿ ಎಪ್ರಿಲ್ 10, 2013 ರಂದು ನಡೆದ ಹರಾಜಿನಲ್ಲಿ ಕೊಂಡುಕೊಂಡರು. ಆ ಓಲೆಯಲ್ಲಿ ಕ್ರಿಕ್ ಅವರು ಆಗತಾನೆ ಮಾರ‍್ಚ್ 1953ರಲ್ಲಿ ಕಂಡುಹಿಡಿದಿದ್ದ ಡಿ.ಎನ್.ಎ. ಇಟ್ಟಳದ ಬಗ್ಗೆ ವಿವರವಾಗಿ ತಮ್ಮ ಮಗನಿಗೆ ಬರೆದಿದ್ದಾರೆ. ತಮ್ಮ ಚಿಕ್ಕ ವಯಸ್ಸಿನ ಮಗನಿಗೆ ದೊಡ್ಡ ವಿಚಾರವನ್ನ ಹಂಚಿಕೊಂಡಿದ್ದ ಪ್ರಾನ್ಸಿಸ್ ಅವರದ್ದು ತಕ್ಕ ತಂದೆಯ ಹಾರಯ್ಕೆ! ಅವರು 1962ರಲ್ಲಿ ಪಡೆದ ನೋಬೆಲ್ ಪದಕವನ್ನೂ ಮುಂದೆ ಹರಾಜಿಗೆ ಇಡಲಾಗುತ್ತದೆ. ಅದಕ್ಕೆ ಅರ‍್ದದಿಂದ ಹಲವು ಮಿಲಿಯನ್ ಡಾಲರುಗಳು ದೊರಕುವ ಅಂದಾಜಿದೆ.
ಜೀವಿಯಿಂದ ಜೀವಿ ಹೇಗೆ ಬರುತ್ತದೆ?
ಹಲವು ಹಾಳೆಗಳ ಓಲೆಯಲ್ಲಿ ಅವರು ಜೇಮ್ಸ್ ವಾಟ್ಸನ್ ಅವರೊಡಗೂಡಿ ಡಿ.ಎನ್.ಎ ಇಟ್ಟಳವನ್ನೂ ಅದು ಒಂದೆರಡಾಗುವ ಬಗೆಯನ್ನು ಕಂಡುಹಿಡಿದುದರ ಬಗ್ಗೆಯೂ ತಮ್ಮ ಮಗನಿಕೆ ತಿಳಿಸುತ್ತಾರೆ. ಸೋಜಿಗದ ಸಂಗತಿಯೆಂದರೆ ಅವರು ಕಂಡುಹಿಡಿದಿದ್ದನ್ನ ಅರಿಮೆಯ ಜರ‍್ನಲ್ಗಳಲ್ಲಿ ಅಚ್ಚಾಗುವುದಕ್ಕೆ ತಿಂಗಳಿಗೂ ಮೊದಲೇ ತಮ್ಮ ಮಗನಿಕೆ ಓಲೆಯಲ್ಲಿ ವಿವರಿಸಿದ್ದಾರೆ! ಓಲೆ ಹೀಗೆ ಆರಂಬವಾಗುತ್ತದೆ: “ನಲ್ಮೆಯ ಮಯ್ಕೆಲ್, ಜಿಮ್ ವಾಟ್ಸನ್ ಮತ್ತು ನಾನು ಸೇರಿ ಮೇಲ್ಮಟ್ಟದ್ದನ್ನು ಕಂಡುಹಿಡಿದಿದ್ದೇವೆ…ನಾವು ಡೆಸ್-ಆಕ್ಸಿ-ರಯ್ಬೋಸ್-ನೂಕ್ಲಿಕ್-ಆಸಿಡ್ ಗೆ (ಗಮನವಿಟ್ಟು ಓದು) ಮಾದರಿಯನ್ನು ಕಟ್ಟಿದ್ದೇವೆ. ಅದನ್ನು ಚಿಕ್ಕದಾಗಿ ಡಿ.ಎನ್.ಎ ಅನ್ನುತ್ತೇವೆ.”
ಮುಂದೆ ಓಲೆಯಲ್ಲಿ ಅವರು ಕಂಡುಹಿಡಿದ ಇಟ್ಟಳವನ್ನು ‘ಅಂದವಾಗಿದೆ’ ಎಂದು ಹೇಳಿಕೊಳ್ಳುತ್ತಾರೆ! ಓಲೆಯಲ್ಲಿ ಡಿ.ಎನ್.ಎ. ಇಟ್ಟಳವನ್ನು ಗೀಚಿದ್ದಾರೆ. ಅದರ ಕೆಳಗೆ “ನಾವು ಕಟ್ಟಿರುವ ಮಾದರಿ ಇಲ್ಲಿ ಗೀಚಿರುವ ತಿಟ್ಟಕ್ಕಿಂತ ಅಂದವಾಗಿ ಕಾಣುತ್ತದೆ” ಅನ್ನುತ್ತಾರೆ.
ಓಲೆಯ ಕೊನೆಯಲ್ಲಿ ಇಟ್ಟಳದ ಮಾದರಿಯನ್ನು ಮನೆಗೆ ಬಂದಾಗ ತೋರಿಸುವುದಾಗಿ ತಿಳಿಸುತ್ತಾರೆ: “ಇದನ್ನ ಗಮನವಿಟ್ಟು ಓದಿಕೊ. ಆಗ ನಿನಗೆ ಚೆನ್ನಾಗಿ ತಿಳಿಯುತ್ತದೆ. ನೀನು ಮನೆಗೆ ಬಂದಾಗ ನಾವು ಕಟ್ಟಿರುವ ಮಾದರಿಯನ್ನು ತೋರಿಸುತ್ತೇನೆ”. ಈ ಓಲೆಗೆ ಒಂದು ಮಿಲಿಯನ್ ಡಾಲರ್ ಸಿಗಬಹುದು ಎಂದು ಊಹಿಸಿಲಾಗಿತ್ತು. ಆದರೆ, ಅಂದುಕೊಂಡಿದ್ದಕ್ಕಿಂತಲೂ ಅಯ್ದು ಪಟ್ಟಿಗೂ ಹೆಚ್ಚು ಹಣ ದೊರಕಿದೆ! ಈ ಮೊತ್ತ ಯಾವುದೇ ಹರಾಜಿನಲ್ಲಿ ಓಲೆಯೊಂದಕ್ಕೆ ದೊರೆತ ಅತಿ ಹೆಚ್ಚು ಹಣ! ಇದುವರೆಗೂ 3.4 ಮಿಲಿಯನ್ ಡಾಲರುಗಳಿಗೆ ಹರಾಜಾಗಿದ್ದ ಅಬ್ರಹಾಮ್ ಲಿಂಕನ್ನರು ಬರೆದ ಓಲೆಯೇ ಅತಿ ಹೆಚ್ಚು ಹಣಕ್ಕೆ ಮಾರಾಟವಾಗಿದ್ದಿದ್ದು.
1962ರಲ್ಲಿ ಕ್ರಿಕ್, ವಾಟ್ಸನ್ ಮತ್ತು ಮವ್ರೀಸ್ ವಿಲ್ಕೀಸ್ ಸೇರಿ ಮೂವರಿಗೆ “ನೂಕ್ಲಿಕ್-ಆಸಿಡ್ಗಳ ಇಟ್ಟಳವನ್ನು ಕಂಡುಹಿಡಿದುದಕ್ಕೆ ಮತ್ತು ಅದು ಜೀವಿಗಳಲ್ಲಿ ಮಾಹಿತಿ ಒಯ್ಯುವುದರ ಹಿರಿಮೆಗೆ” ಮಯ್ಯರಿಮೆ ಮತ್ತು ಮಾಂಜರಿಮೆ ಮಾಳದಲ್ಲಿ ನೋಬೆಲ್ ಪದಕ ಕೊಡಮಾಡಲಾಗಿತ್ತು. ಆ ಪದಕವನ್ನು ನ್ಯೂಯಾರ‍್ಕಿನ ‘ಹೆರಿಟೇಜ್ ಹರಾಜು’ ಎಂಬಲ್ಲಿ ಹರಾಜಿಗೆ ಇಡಲಾಗುವುದು. ಪದಕದ ಜೊತೆ ಕ್ರಿಕ್ ಅವರಿಗೆ ಕೊಡಲಾದ ಚೆಕ್, ಡಿಪ್ಲೋಮಾಗಳು, ಹಾಗೂ ಅವರು ಬಳಸುತ್ತಿದ್ದ ‘ಹಲವು ಕರೆಗಳಿರುವ’ ಅರಕೆಕೋಣೆಯ ಉಡುಗೆಯನ್ನೂ ಹರಾಜಿಗೆ ಇಡಲಾಗುವುದು. ಕ್ರಿಕ್ ಅವರ ಮನೆಯವರು ದೊರೆಯುವ ಹಣದಲ್ಲಿ ನೂರಕ್ಕೆ ಇಪ್ಪತ್ತರಶ್ಟನ್ನು ಲಂಡನ್ನಿನಲ್ಲಿರುವ ‘ಪ್ರಾನ್ಸಿಸ್ ಕ್ರಿಕ್ ಸಂಸ್ತೆ’ಯಲ್ಲಿರುವ ಅರಕೆಗಾರಿಗೆ ಕೊಡುಗೆಯಾಗಿ ನೀಡುವರು. ಮತ್ತು ನೂರಕ್ಕೆ ಅಯ್ವತ್ತರಶ್ಟು ದುಡ್ಡನ್ನು ಸಾಲ್ಕ್ ಸಂಸ್ತೆಗೆ ಕೊಡಲಾಗುವುದು. ಸಾಲ್ಕ್ ಸಂಸ್ತೆಯಲ್ಲಿ ಕ್ರಿಕ್ ಕೆಲಸ ಮಾಡುತ್ತಿದ್ದರು.
ಕ್ರಿಕ್ ಅವರ ಮೊಮ್ಮಗಳು ಕಿಂಡರ್ ಕ್ರಿಕ್ ಹೇಳುವಂತೆ ಪದಕವು ದೊರೆತಾಗಿನಿಂದಲೂ ಬೀಗ ಹಾಕಿ ಮುಚ್ಚಿಡಲಾಗಿತ್ತು. ಹರಾಜಿನಂದು ಡಿ.ಎನ್.ಎ. ಇಟ್ಟಳವನ್ನು ಕಂಡುಹಿಡಿದು ಇತಿಹಾಸ ಕಟ್ಟಿದ ದಿನದ 60ನೇ ವರ‍್ಶದ ಆಚರಣೆಯ ದಿನ ಮತ್ತು ನೋಬೆಲ್ ಪದಕ ದೊರೆತು 50 ವರ‍್ಶಗಳಾಯಿತು. ಕ್ರಿಕ್ ಅವರ ಮೊಮ್ಮಗಳು ಹೇಳುವಂತೆ: “ಮುಚ್ಚಿಡುವ ಬದಲು ಪದಕವನ್ನ ಎಲ್ಲರಿಗೂ ಕಾಣುವಂತೆ ತೋರಿಕೆಯಾಗಿ ಇಟ್ಟಲ್ಲಿ ಮುಂದಿನ ತಲೆಮಾರಿನ ಅರಿಮೆಗಾರರಲ್ಲಿ ಅದು ಹುರುಪು ತುಂಬಬಲ್ಲದು”. ಬಲು ವಿವರವಾಗಿರುವ ಓಲೆಯಲ್ಲಿ ಅರಿಮೆಗಾರನ ಅರಿಮೆಯಶ್ಟೇ ಅಲ್ಲದೇ ಒಬ್ಬ ತಂದೆಯ ಮಮಕಾರವೂ ತುಂಬಿದೆಯೆನ್ನುವುದು “ತುಂಬಾ ಪ್ರೀತಿಯೊಂದಿಗೆ, ಅಪ್ಪ” ಎಂದು ಅಕ್ಕರೆಯಿಂದ ಕೊನೆಗೊಳ್ಳುವುದರಲ್ಲಿ ತಿಳಿದು ಬರುತ್ತದೆ.
ಕ್ರಿಕ್ ಹುಟ್ಟಿದ್ದು ಇಂಗ್ಲೆಂಡಿನ ನಾರ‍್ತಂಪಟಾನ್ ಹತ್ತಿರವಿರುವ ವೆಸ್ಟನ್ ಪವೆಲ್ ಎಂಬಲ್ಲಿ 1916ರರಲ್ಲಿ. ಎರಡು ಬಾರಿ ಮದುವೆಯಾಗಿದ್ದರು. 2004ರಲ್ಲಿ ತಮ್ಮ 88ನೆ ವಯಸ್ಸಿನಲ್ಲಿ ಸಾನ್ ಡಿಯಾಗೋದಲ್ಲಿ ಅಸುನೀಗಿದರು. ರೋಸಲಿಂಡ್ ಪ್ರಾಕ್ಲಿನ್ ಎಂಬ ಮಹಿಳೆಯೂ ಡಿ.ಎನ್.ಎ. ಇಟ್ಟಳ ಕಂಡುಹಿಡಿಯುವಲ್ಲಿ ಅರಿದಾದ ಕೊಡುಗೆ ಕೊಟ್ಟಿದ್ದರು. ಆದರೆ, 1958ರಲ್ಲಿ ನೋಬೆಲ್ ಸಿಗುವದಕ್ಕೆ ಮೊದಲೇ ಅಸುನೀಗಿದ್ದರು.
- http://science.jrank.org/kids/pages/140/Making-up-Molecules.html
- http://newswatch.nationalgeographic.com/2013/04/11/francis-cricks-letter-to-son-describing-dna-auctioned/
ವಿಜ್ಞಾನವನ್ನು ಮೆಚ್ಚುವವರು ಮತ್ತು ಪ್ರೋತ್ಸಾಹಿಸುವವರು ಇದ್ದಾರೆ ಎಂಬುದೋ ತುಂಬಾ ಸಂತೋಷಕರವಾದ ವಿಚಾರ. ನಮ್ಮ ನಾಡಿನಲ್ಲೂ ನಮ್ಮ ನಾಡಿನ ವಿಜ್ಞಾನಿಗಳಿಗೆ ನಮ್ಮ ನಾಡಿನವರು ಇದೇ ರೀತಿ ಪ್ರೋತ್ಸಾಹಿಸಿದರೆ ನಮ್ಮಲ್ಲಿ ಅರಿಮೆ ಇನ್ನೂ ಹೆಚ್ಚು ಶೀಘ್ರವಾಗಿ ಬೆಳೆಯಬಹುದೆಂದುಕೊಂಡಿದ್ದೇನೆ.
ಮಹೇಶ್ ಅವರೇ,
ನಾವು ನಮ್ಮ ಅರಿಮೆಗಾರರಿಗೆ ಬೆಂಬಲ ಕೋಡಬೇಕಿರುವುದು ದಿಟ. ಆದರೆ, ಆತುರದಲ್ಲಿ ಆಗಬೇಕಿರುವುದು ಉಲ್ಟಾ!! ಇಂದು ಅರಿಮೆಗಾರರು ಕನ್ನಡಿಗರನ್ನ ತಲುಪಬೇಕಿದೆ. ಅವರು ಹಾಗೆ ಮಾಡದೇ ಸುತ್ತಲೂ ಗೋಡೆ ಕಟ್ಟಿಕೊಂಡು ಒಳಗೇ ಕುಳಿತುಬಿಟ್ಟಿದ್ದಾರೆ. ಕನ್ನಡಿಗರಲ್ಲಿ ‘ಅರಿಮೆಯ ಬರಹದರಿವು’ ಬಹಳ ಕಡಿಮೆ.
ನಿಜ. ಅರಿಮೆಗಾರರು ಮತ್ತು ಜನಸಾಮಾನ್ಯರ ನಡುವೆ ಕ್ನಾಲೆಡ್ಜ್ ಎಕ್ಸಚೇಂಜ್ ಆಗುತ್ತಿಲ್ಲ. ಹೀಗಿಲ್ಲದೇ ಹೋದಾಗ ಅರಿಮೆಗಾರರಿಗೆ ಜನಸಾಮಾನ್ಯರಿಂದ ಹೆಚ್ಚಿನ ಪ್ರೋತ್ಸಾಹ ನಿರೀಕ್ಷಿಸುವಂತಿಲ್ಲ. ಕನ್ನಡಿಗರ ನಿತ್ಯ ಜೀವನದ ಸಮಸ್ಯೆಗಳನ್ನು ಪರಿಹರಿಸಬೇಕಾದ ಅರಿಮೆಗಾರರ ಸಂಖ್ಯೆ ಹೆಚ್ಚಬೇಕಿದೆ. ಕನಿಷ್ಠ ಜನಸಾಮಾನ್ಯರ ಭಾಷೆಯಲ್ಲಿ ಮಾತನಾಡಬೇಕಾದ ಅರಿಮೆಗಾರರ ಸಂಖ್ಯೆಯಾದರೂ ಹೆಚ್ಚಬೇಕಾಗಿದೆ. (ನೀವು ಬಳಸಿದ ಆತುರ ಪದ ಒಂದು ಸಲ ಗಾಬರಿ ಹುಟ್ಟಿಸಿತು.. ನಿಧಾನವಾಗಿ ವಿಚಾರ ಮಾಡಿದಾಗ ಇದು ಶೀಘ್ರ ಎಂಬರ್ಥದಲ್ಲಿ ಪ್ರಯೋಗವಾಗಿದೆ ಅಲ್ವಾ)
ಗಾಬರಿ ಹುಟ್ಟಿಸಲೆಂದೇ ‘ಆತುರ’ ಪದ ಬಳಸಿದೆ. ಕರ್ನಾಟಕದ ಇಂದಿನ ಪಾಡು ನೋಡಿದರೆ ‘ಅತಿ ಶೀಗ್ರದಲ್ಲಿ’ ಅರಿಮೆಗಾರರು ಕನ್ನಡಿಗರನ್ನ ತಲುಪುವ ಕೆಲ್ಸ ಮಾಡಬೇಕಿದೆ. ಅರಿಮೆಗಾರರು ಜನಸಾಮಾನ್ಯರ ಬಾಶೆಯಲ್ಲಿ ಮಾತಾಡುವುದಶ್ಟೆ ಅಲ್ಲ, ಅವರುಗಳು ಮಾಡುವ ಅರಕೆಯನ್ನೂ (Research) ಕನ್ನಡದಲ್ಲೇ ಮಾಡಬೇಕು. ಎಲ್ಲಿಯವರೆಗೂ ಇಂಗ್ಲಿಶ್ನಲ್ಲಿ ಅರಕೆ ಮಾಡುವರೋ ಅಲ್ಲಿವರೆಗೂ ಗೋಡೆಯೊಳಗೇ ಉಳಿದುಬಿಡುತ್ತಾರೆ.
ಸುಪ್ರಸಿದ್ಧ ಮಹಾವಿಜ್ಞಾನಿ ಅಲ್ಬರ್ಟ್ ಐನ್ ಸ್ಟೈನ್ ತನ್ನ ಜಗದ್ವಿಖ್ಯಾತವಾದ “ಸಾಪೇಕ್ಷತಾ ಸಿದ್ಧಾಂತವನ್ನು” ಜರ್ಮನ್ ಭಾಷೆಯಲ್ಲಿ ಮಂಡಿಸಿದ ಹಾಗೆ. ಭಾಷಾಭಿಮಾನ ತೋರಿಸಲೆಂದೇ ಆತ ಹಾಗೆ ಮಾಡಿದ್ದಲ್ಲ. ಆತ ಬಾಲ್ಯದಲ್ಲಿ ಕಲಿತದ್ದು, ಉನ್ನತ ಶಿಕ್ಷಣದಲ್ಲಿ ಕಲಿತ ಭಾಷೆ, ಆತನಿಗೆ ವಿವಿಧ ವಿಷಯಗಳು ದೊರಕಿದ ಭಾಷೆ ಎಲ್ಲವೂ ಜರ್ಮನ್ ಭಾಷೆಯೇ ಆಗಿದ್ದರಿಂದ ಸಹಜವಾಗಿ ಆತ ತನ್ನ ಅರಕೆಗಳನ್ನು ಮಂಡಿಸಿದ ಭಾಷೆ ಕೂಡಾ ಜರ್ಮನ್ ಆಗಿತ್ತು. ನಮ್ಮಲ್ಲೂ ಜನರಾಡುವ ಭಾಷೆಯಲ್ಲಿ ಅರಕೆಗಳು ಹೆಚ್ಚು ಸಿಗುತ್ತಾ ಹೋದರೆ ಕೇವಲ ಕನ್ನಡ ಬಲ್ಲವನೂ ಕೂಡಾ ಜಗತ್ತು ನಿಬ್ಬೆರಗಾಗುವ ಸಂಶೋಧನೆಗಳನ್ನು ಮಾಡುವ ಸಾಧ್ಯತೆ ತುಂಬಾ ಹೆಚ್ಚು.
ದಿಟ. ಒಳ್ಳೆಯ ಮಟ್ಟದ ಅರಕೆ ಮಾಡುವ ನಾಡುಗಳೂ, ಮಂದಿಗೆ ಅರಿಮೆಯ ಅರಿವನ್ನು ಹೆಚ್ಚಿಸಿದ ನಾಡುಗಳೂ ಎಲ್ಲವನ್ನೂ ಆಡುನುಡಿಯಲ್ಲೇ ಮಾಡಿವೆ. ಇತ್ತೀಚಿಗೆ ಬೆಳಕಿಗೆ ಬಂದ ಕೊರಿಯಾದಂತ ನಾಡುಗಳೂ ಇಂದು ಪುರುಳರಿಮೆಯಲ್ಲಿ (physics) ಬೆಸುಗೆ (fusion) ಮಾಳದಲ್ಲಿ, ಉರಿರರಿಮೆಯಲ್ಲಿ (biology) ಬುಡಕಣ (stem cells) ಮಾಳಗಳಲ್ಲಿ ಇಡೀ ನೆಲದಲ್ಲೇ ಎಲ್ಲರಿಗಿಂತಲೂ ಮುಂದುವರಿದ ಅರಕೆ ಮಾಡುತ್ತಿದ್ದಾರೆ. ಅಡಿಯಾಳು ಬುದ್ದಿಯವರು ಇರುವ ನಾಡುಗಳಲ್ಲಿ ಮಾತ್ರ ತಾಯ್ನುಡಿ ಬಳಕೆ ಇಲ್ಲ. ಬಾರತ, ಆಪ್ರಿಕಾ ಮತ್ತು ಮುಸ್ಲಿಮ್ ದೇಶಗಳಲ್ಲಿ ಮಾತ್ರ ತಾಯ್ನುಡಿ ಬಳಕೆ ಇಲ್ಲ. ಈ ನಾಡುಗಳಲ್ಲಿ ಹೀಗೇ ಮುಂದುವರಿದರೆ ಏಳಿಗೆಯನ್ನು ಮರೆತಂತೆಯೇ!