’ಸಣ್ಣ’ – ಒಂದು ಸಣ್ಣ ಕತೆ
– ಬರತ್ ಕುಮಾರ್.
ಆಗ ಶಾಲೆಗೆ ಬೇಸಿಗೆಯ ರಜೆ ಬಂದಿತ್ತು. ಸುಮಾರು ಹನ್ನೆರಡರ ಹರೆಯದ ನಾನು ನನ್ನ ತಮ್ಮನೊಡನೆ ನಮ್ಮ ಹಳ್ಳಿಗೆ ಬೇಸಿಗೆ ರಜೆಯನ್ನು ಕಳೆಯಲು ಹೋದೆ. ಸುಡುಸುಡು ಬಿಸಿಲಿದ್ದರೂ ಗದ್ದೆ ಬಯಲಾಗಿದ್ದುದರಿಂದ ಅಲ್ಲದೆ ನಮ್ಮ ಹಳ್ಳಿ ಮನೆ ಹದಿನಾರು ಕಂಬದ ತೊಟ್ಟಿ ಮನೆಯಾದುದರಿಂದ ಮಯ್ಸೂರಿನಶ್ಟು ಸೆಕೆ ಆಗುತ್ತಿರಲಿಲ್ಲ. ಅದರಿಂದ ಹಳ್ಳಿಗೆ ಹೋಗುವುದೆಂದರೆ ನನಗಂತೂ ನಲಿವೋ ನಲಿವು. ಹಳ್ಳಿಯ ಕಾವಲಿಯಲ್ಲಿ ಈಜುವುದು, ದನಗಳನ್ನ ಮೇಯಿಸುವುದು ಮತ್ತು ನನ್ನ ವಾರಿಗೆವರೊಂದಿಗೆ ಪಚ್ಚಿ ಆಡುವುದು, ಗೋಲಿ ಆಡುವುದು, ಹರಟೆ ಹೊಡೆಯುವುದು – ಹೀಗೆ ಹಳ್ಳಿಗೆ ಹೋದರೆ ಹೊತ್ತು ಹೋಗುವುದೇ ಗೊತ್ತಾಗುತ್ತಿರಲಿಲ್ಲ.
ನಮ್ಮ ಹಳ್ಳಿಯ ಮನೆಯಲ್ಲಿ ಒಬ್ಬ ಆಳು ಇದ್ದ. ಅವನನ್ನು ’ಸಣ್ಣ’ ಎಂದು ಕರೆಯುತ್ತಿದ್ದರು. ನೋಡುವುದಕ್ಕೆ ಕೂಡ ತೆಳುವಾದ ಮಯ್ ಮತ್ತು ಅವನು ಅಶ್ಟೇನೂ ಎತ್ತರವಿರಲಿಲ್ಲ. ಅವನ ದನಿಯೂ ಅವನ ಹೆಸರಿನಂತೆ ತೀರ ಸಣ್ಣ. ಗಟ್ಟಿಯಾಗಿ ಅವನು ಮಾತಾಡಿದ್ದು ನನಗೆ ನೆನಪೇ ಇಲ್ಲ. ಆದರೆ ಹೊಲ ಊಳುವುದು, ದನಗಳನ್ನು ಮೇಯಿಸುವುದು ಹೀಗೆ ಹತ್ತು ಹಲವು ಹಳ್ಳಿಕೆಲಸಗಳಲ್ಲಿ ಅವನು ಎತ್ತಿದಕಯ್. ಸಣ್ಣನಂತ ಆಳು ಹುಡುಕಿದರೂ ಸಿಗುವುದಿಲ್ಲ ಎಂದು ಮನೆಯವರು ಮಾತಾಡಿಕೊಂಡಿದ್ದನ್ನು ನಾನು ಕೇಳಿದ್ದೆ. ಆದರೆ ಅವನನ್ನು ನಾವು ಮುಟ್ಟಿ ಇಲ್ಲವೆ ಹತ್ತಿರ ಹೋಗಿ ಮಾತಾಡುವಂತಿರಲಿಲ್ಲ. ’ಅಮ ಏಕೇಸ್, ಅಮ್ನ ಮುಟ್ಟುಸ್ಕಬ್ಯಾಡ!!’ ಎಂಬುದಾಗಿ ನಮ್ಮ ಹಿರಿಯರಿಂದ ಸೆಲವು ಹೊರಡಿಸಲಾಗಿತ್ತು. ಅವನಿಗೆ ಊಟವನ್ನು ಕೂಡ ದನದ ಕೊಟ್ಟಿಗೆಯಲ್ಲಿಯೇ ಊಟದ ಎಲೆಯ ಮೇಲೆ ಹಾಕಲಾಗುತ್ತಿತ್ತು. ಮನೆಯ ಸ್ಟೀಲ್ ತಟ್ಟೆಗಳಲ್ಲಿ ಅವನಿಗೆ ಊಟ ಹಾಕುವ ಹಾಗಿರಲಿಲ್ಲ. ಆದರೆ ಮನೆಯವರೆಲ್ಲರೂ ಅವನನ್ನು ತುಂಬ ಒಲವಿನಿಂದ ಮಾತಾಡಿಸುತ್ತಿದ್ದರು.
ಹೀಗೆಲ್ಲ ಇರುವಾಗ ಒಂದು ಹೊತ್ತಾರೆ ನನಗೆ ಬೇಗನೆ ಎಚ್ಚರವಾಗಿತ್ತು. ಸಣ್ಣ, ಮನೆಯ ಹಿಂದಿನ ಕೊಟ್ಟಿಗೆ ಬಾಗಿಲಿನಿಂದ ಒಳಬಂದು ಎತ್ತುಗಳನ್ನು ಗೂಟದಿಂದ ಬಿಚ್ಚಿ ಕಾವಲಿಯ ಕಡೆ ಹೊಡೆದುಕೊಂಡು ಹೋಗುತ್ತಿರುವುದನ್ನು ಗಮನಿಸಿದೆ.
“ಸಣ್ಣೊ, ನಾನು ಕಾವ್ಲಿ ತಾವ್ಕೆ ಬತ್ತಿನ್ ತಡಿ” – ಎಂದೆ. ಸಣ್ಣ ನನಗಿಂತಲೂ ಹರೆಯದಲ್ಲಿ ದೊಡ್ಡವನಾದರೂ ಅವನನ್ನು ಅವನ ಹೆಸರಿನಿಂದಲೇ ಕರೆಯುವ ಅನುವು ನನಗಿತ್ತು.
“ಬ್ಯಾಡಿ. ಸ್ಯಾನೆ ಸಳಿ ಆಯ್ತುದೆ ಅಲ್ಲಿ. ನಿಮ್ ಪ್ಯಾಟೆ ಮಯ್ಗೆ ಆಗಲ್ಲ” ಅಂದ.
“ಸುಮ್ಕಿರು, ನಿನ್ ಅತ್ರ ವಸಿ ಮಾತಾಡದಯ್ತೆ” ಅಂದೆ
“ನಿಮ್ಮಿಸ್ಟ” ಅಂದ.
ಸರಿ ಎದ್ಮೊಕದಲ್ಲೇ ಅವನ ಹಿಂದೆ ಹಿಂದೆ ಹೊರಟೆ. ಕಾವಲಿಗೆ ಹೋಗುವಾಗ ಸಿಗುವ ಅರಳಿಕಟ್ಟೆಯ ಹತ್ತಿರ ಬಂದಾಗ “ಸಣ್ಣೊ, ನಂಗೆ ಈಜು ಕಲಿಸ್ಕೊಡ್ತಿಯ” ಅಂತ ಒಮ್ಮೆಲೆ ಕೇಳಿದೆ.
ಅವನು ದಂಗು ಬಡಿದವನಂತೆ ’ಇವೆಲ್ಲ ಆಗಲ್ಲ ಬುಡಿ. ಆಮ್ಯಾಕ್ ನಂಗೆ ಬುದ್ದೇರ್ ಉಗಿತಾರೆ, ಅಸ್ಟೆ” ಅಂತಂದ.
“ಇಲ್ಲ, ಅವರಿಗೆ ಗೊತ್ತಾಗ್ದಂಗೆ ಈ ಕೆಲಸ ಆಗ್ಬೇಕು” ಅಂದೆ.
ಕಾವಲಿ ಹತ್-ಹತ್ತಿರ ಬಂದರೂ ಸಣ್ಣ ಈಜು ಕಲಿಸುವುದಕ್ಕೆ ಒಪ್ಪಲಿಲ್ಲ. ಕೊನೆಗೆ ಅಂಗಲಾಚಿದೆ, ನನ್ನ ಬೇಡಿಕೆಯನ್ನು ಕೊನೆಗೂ ಸಣ್ಣ ಮನ್ನಿಸಿದ.
“ಸರಿ, ಅಂಗಾದ್ರೆ ನಾಳೆ ವತಾರ್‍ಗೆ ದೊಡ್ ಕಾವ್ಲಿ ತಾವ್ಕೆ ಬನ್ಬುಡಿ, ಯಾರ್‍ಗೂ ಗೊತ್ತಾಗ್ಬಾರ್‍ದು” ಕಾವಲಿಗೆ ಇಳಿದ ಎತ್ತುಗಳ ಮಯ್ದಡವುತ್ತ ಅಂದ.
ಊರೊಳಗೆ ಮನೆಯ ಹತ್ತಿರ ಇದ್ದ ಕಾವಲಿಯನ್ನು ’ಚಿಕ್ಕ ಕಾವಲಿ’ ಎಂದು ಕರೆಯುತ್ತಿದ್ದರು. ಆದರೆ ಊರಿಂದ ಆಚೆ ಗದ್ದೆ ಬಯಲಿಗೆ ಹತ್ತಿರ ಇದ್ದ ಕಾವಲಿಗೆ ’ದೊಡ್ಡ ಕಾವಲಿ’ ಎಂದು ಹೆಸರು. ಸಣ್ಣ ನನಗೆ ಬರ ಹೇಳಿದ್ದು ಈ ದೊಡ್ಡ ಕಾವಲಿಯೇ. ದೊಡ್ದ ಕಾವಲಿಯಲ್ಲಿ ದಿಟಕ್ಕೂ ದೊಡ್ಡ ಕಾವಲಿಯೇ ಆಗಿತ್ತು. ಈಜುವುದಕ್ಕೆ ಹೇಳಿ ಮಾಡಿಸಿದ ನೀರಿನ ಹರಿವು ಮತ್ತು ಮುಕ್ಯವಾಗಿ ಗದ್ದೆ ಬಯಲಾದುದರಿಂದ ಅಶ್ಟು ಮಂದಿ ಸುಳಿದಾಡುತ್ತಿರಲಿಲ್ಲ. ಆದರೆ ಚಿಕ್ಕ ಕಾವಲಿಯ ಹತ್ತಿರ ಬಟ್ಟೆ ಒಗೆಯೋರು, ಪಾತ್ರೆ ತೊಳೆಯೋರು, ಎಮ್ಮೆ-ದನಗಳ ಮಯ್ ತೊಳೆಯೋರು, ಎರಡಕ್ಕೆ ಹೋಗಿ ಬಂದವರು -ಹೀಗೆ ಯಾವಾಗಲೂ ಅಲ್ಲಿ ಮಂದಿ ನೆರೆದಿರುತ್ತಿದ್ದರು. ಅದಕ್ಕಾಗಿಯೇ ಸಣ್ಣ ನನಗೆ ದೊಡ್ಡ ಕಾವಲಿಗೆ ಬರಹೇಳಿದ್ದು ಅಂತ ಎಣಿಸುವುದು ನನಗೆ ಕಶ್ಟವೇನಾಗಲಿಲ್ಲ.
* * *
ಮಾರನೆ ಹೊತ್ತಾರೆ ಯಾವಾಗ ಬರುವುದೆಂದು ಆ ದಿನವೆಲ್ಲಾ ಮನೆಯ ಜಗಲಿಯ ಮೇಲೆ ಕುಂತ್ಕೊಂಡು ’ಈಜಿನ ಹಗಲುಗನಸು’ ಕಾಣುತ್ತಿದ್ದೆ. ಆ ದಿನ ಹೇಗೆ ಉರುಳಿ ಹೋಯಿತೋ ನನ್ನ ಅರಿವಿಗೇ ಬರಲಿಲ್ಲ. ಮಾರನೇ ಹೊತ್ತಾರೆಗೆ ಎದ್ಮೊಕದಲ್ಲೇ ಯಾರಿಗೂ ಕಾಣದ ಹಾಗೆ ದೊಡ್ದ ಕಾವಲಿಯ ಕಡೆ ಹೆಜ್ಜೆ ಹಾಕಿದೆ. ಊರಿನ ಆಚೆ ಬಂದು ಗದ್ದೆ ಬಯಲಿನ ದಾರಿಯಲ್ಲಿ ಹಾದು ಹೋಗುತ್ತಿರುವಾಗ ಯಾರೊ ನನ್ನನ್ನು ದೂರದಿಂದ ಕೂಗಿದಂತೆ ಆಯಿತು. ದೂರದ ಕೂಗು ಆದುದರಿಂದ ಕೂಡಲೆ ಆ ದನಿಯ ಗುರುತು ಹತ್ತಲಿಲ್ಲ.
ಕೂಗು ಹತ್ತಿರ ಬಂದಂತೆ ಆಯಿತು. ಅದು ಸಣ್ಣನ ಕೂಗು ಅಂತ ಎಣಿಸುವುದು ನನಗೆ ಈಗ ಕಶ್ಟವೆನಿಸಲಿಲ್ಲ. ಆಮೇಲೆ ಸಣ್ಣ, ನಾನು ದೊಡ್ಡಕಾವಲಿಯ ದಂಡೆಗೆ ಬಂದೆವು. ಬೇಸಿಗೆಯಾದರೂ ಕಾವಲಿಯ ನೀರಿನ ಸೆಲೆ ಇದ್ದುದರಿಂದ ಚಳಿಯೇ ಅಗುತ್ತಿತ್ತು. ಈಜು ಕಲಿಯಬೇಕೆಂಬ ಹುರುಪು ಹೆಚ್ಚಿದ್ದರೂ ಕಾವಲಿಯ ಹತ್ತಿರ ಬಂದಾಗ ಅದೆಲ್ಲ ಉಡುಗಿ ಹೋದಂತೆ ಆಯಿತು.
“ಯಾಕ್ ಅಂಗೆ ಪದರುಗುಡ್ತಿದ್ದರಿ? ಒಂದ್ ಮಯ್ ನೀರ್‍ಗ್ ಇಳೀರಿ ಏನೂ ಆಗಕಿಲ್ಲ” ಅಂದ.
ಎದುರಾಡದೆ ಸಣ್ಣನ ಆಗ್ನೆಯನ್ನು ಪಾಲಿಸಿದೆ. ಇಳಿದು ಕೊಂಚ ಹೊತ್ತಿನಲ್ಲೇ ಉಡುಗಿ ಹೋಗಿದ್ದ ಹುರುಪು ಮತ್ತೆ ಚಿಗುರೊಡೆಯಿತು. ಆಮೇಲೆ ಉಸಿರು ಹಿಡಿದುಕೊಂಡು ತೇಲುವುದನ್ನು ಸಣ್ಣ ಹೇಳಿಕೊಟ್ಟ. ಮೂಗನ್ನು ಬೆರಳಿನಲ್ಲಿ ಅದುಮಿ ಹಿಡುಕೊಂಡು ಡುಬುಕಿ ಹೊಡೆಯುತ್ತಾ ಹೊಡೆಯುತ್ತಾ ತೇಲುವುದನ್ನು ಕಲಿತೆ. ಹೀಗೆ ನನ್ನ ಈಜಿನ ಮೊದಲ ಕಲಿಕೆ ನಡೆಯುತ್ತಿತ್ತು.
“ಇವತ್ಗೆ ಇಶ್ಟು ಸಾಕು..ಬೊ ವೊತ್ತಾಯ್ತು. ನಂಗೆ ಗದ್ದೆಕ್ಯಾಮೆ ಅಯ್ತೆ” ಎಂದು ಸಣ್ಣ ಕಡಕ್ಕಾಗಿಯೇ ಹೇಳಿದ.
“ಇನ್ನು ವಸಿ ವೊತ್ತು ಆಡುಮ” ಅಂದೆ
“ಅಗಾಕಿಲ್ಲ ಕಪ್ಪೊ ಬೊ ಕ್ಯಾಮೆ ಅಯ್ತೆ” ಅಂದ.
“ಸರಿ, ನಾಳೆಕೂ ಬರ್‍ನೆ?” ಎಂದು ಕೇಳಿದೆ.
“ಆಗ್ಲಿ” ಅಂತ ಸಣ್ಣ ಒಪ್ಪಿಕೊಂಡ.
* * *
ಮನೆಗೆ ಬರುವ ಹೊತ್ತಿಗೆ ಮಯ್ಯಲ್ಲೆಲ್ಲ ಹೊಸ ಹುರುಪು ಬಂದಂತೇ ಆಗಿತ್ತು. ಮಯ್ಯ ಒಳಗಿಂದ ತಂಗಾಳಿ ಬೀಸುತ್ತಿದಿಯೇನೋ ಅಂತ ಅನಿಸಿತ್ತಿತ್ತು. ಆವತ್ತು ನಾನು ಎಲ್ಲೂ ಹೊರಗೆ ಹೋಗಲೇ ಇಲ್ಲ. ಮನೆಯಲ್ಲಿ ಮಾಡಿದ್ದ ರಾಗಿ ರೊಟ್ಟಿ-ಉಚ್ಚೆಳ್ಳ್ ಚಟ್ನಿಯನ್ನು ಗಡದ್ದಾಗಿ ತಿಂದು ನಿದ್ದೆ ಹೋದೆ. ನೀರಿಗೆ ಬಿದ್ದಿದ್ದರಿಂದಲೊ, ರಾಗಿ ರೊಟ್ಟಿ ತಿಂದಿದ್ದರಿಂದಲೊ ಏನೊ ತಿಳಿಯದು ಚೆನ್ನಾಗಿ ನಿದ್ದೆ ಬಂತು. ಎದ್ದಾಗ ಸಂಜೆಯಾಗಿತ್ತು. ಮೊಕ ತೊಳ್ಕೊಂಡು ಟೀ ಕುಡಿದುಕೊಂಡು ಹೊರಗೆ ಒಂದು ಸುತ್ತು ಹೋಗಿ ಬಂದೆ. ಮಾರನೇ ದಿನವೂ ಈಜಿಗೆ ಹೋಗಬೇಕೆಂದು ನೆನಪಿಸಿಕೊಂಡಿದ್ದರಿಂದಲೊ, ದಿನವೆಲ್ಲ ನಿದ್ದೆ ಮಾಡಿದ್ದರಿಂದಲೊ ಏನೊ ಆ ಇರುಳು ನನಗೆ ಸರಿಯಾಗಿ ನಿದ್ದೆ ಹತ್ತಲಿಲ್ಲ.
ಮಾರನೇ ಹೊತ್ತಾರೆಗೆ ನಾನು ಏಳಲೇ ಇಲ್ಲ. ಎಚ್ಚರವಾದಾಗ ಚೆನ್ನಾಗಿ ಬೆಳಕು ಹರಿದಿತ್ತು. ಆದರೆ ಏಳಲು ಆಗಲೇ ಇಲ್ಲ. ಮಯ್ ಸುಡುತ್ತಿತ್ತು ಜೊತೆಗೆ ಕೊಂಚ ನಡುಕವಿತ್ತು. ಜರ ಬಂದಿದೆಯೆಂದು ಮನೆಯವರಿಗೆಲ್ಲ ಗೊತ್ತಾಯಿತು. ಆದರೆ ಕಾರಣ ಅವರಿಗೆ ಗೊತ್ತಿರಲಿಲ್ಲ. ನನಗೆ ಗೊತ್ತಿತ್ತು. ಜರದ ಜೊತೆಗೆ ನನ್ನ ಗುಟ್ಟು ಎಲ್ಲಿ ರಟ್ಟಾಗುವುದೆಂದು ನನ್ನ ನಡುಕ ಇನ್ನು ಹೆಚ್ಚಿತು. ಕೊನೆಗೆ ಕ್ರೋಸಿನ್ ಗುಳಿಗೆ ತರಿಸಿದರು. ಕೊಂಚ ಹಾಯೆನಿಸಿತು. ಸಂಜೆಗೆ ಎದ್ದು ದನಗಳನ್ನು ನೋಡುತ್ತ ಕೊಟ್ಟಿಗೆಯ ಚರಣಿಯ ಮೇಲೆ ಕೂತ್ಕೊಂಡಿದ್ದೆ. ಸಣ್ಣ, ಕೊಟ್ಟಿಗೆ ಬಾಗಿಲು ತಳ್ಳಿಕೊಂಡು ಇಣುಕಿದ. ನನ್ನ ಮೊಕ ನೋಡಿ ಹತ್ತಿರ ಬಂದು ಮೆಲುದನಿಯಲ್ಲಿ
“ನಾ ಮೊದ್ಲೆ ಯೋಳ್ನಿಲ್ವೆ. ನಿಮ್ ಪ್ಯಾಟೆ ಮಯ್ಗೆ ಇವೆಲ್ಲ ಆಗಾಕಿಲ್ಲ ಅಂತ” ಪಿಸುಗುಟ್ಟಿದ.
ಅವನ ಆ ಮಾತಿಗೆ ನನ್ನ ಹತ್ತಿರ ಉತ್ತರವಿರಲಿಲ್ಲ.
“ಯೋಳಿ, ದನಕ್ಕೆ ಮೇವು ಹಾಕ್ಬೇಕು” ಅಂತ ನನ್ನನ್ನು ಚರಣಿಯಿಂದ ಎಬ್ಬಿಸಿದ.
ಅವನ ಕೆಲಸವನ್ನು ಮುಗಿಸಿ ’ಬತ್ತಿನಿ” ಅಂತ ಹೇಳಿ ಹೊರಟು ಹೋದ.
ಅವನನ್ನು ತಡೆದು “ನಾಳಿಕೆ ಸಿಗುಮಾ?” ಎಂದು ಕೇಳಿದೆ.
ಮರುಮಾತಾಡದೆ ಹೊರಟು ಹೋದ. ಅವನ ಮೊಕಬಗೆಯೇ ನನ್ನ ಬೇಡಿಕೆಗೆ ಒಪ್ಪದಿಕೆ ಸೂಚಿಸುತ್ತಿತ್ತು. ಅಲ್ಲಿಗೆ ನನ್ನ ಈಜಿನ ಪಾಟವು ಮುಗಿದಿತ್ತು. ಆಮೇಲೆ ಏಕೊ ಏನೊ ನನಗೆ ಈಜು ಕಲಿಯಲು ಆಗಲೇ ಇಲ್ಲ. ಆದರೆ ಆ ಹೊತ್ತಾರೆಯನ್ನು, ಸಣ್ಣನನ್ನು ಮರೆಯಲು ಕೂಡ ಆಗಲೇ ಇಲ್ಲ.
* * *
(ಚಿತ್ರ: ಡೆಕನ್ ಹೆರಾಲ್ಡ್)
ತುಂಬ ಚೆನ್ನಾಗಿ ಓದಿಸಿಕೊಂಡು ಹೋಯ್ತು… ಮುಂದೇನಾಯಯ್ತು ? ದಯವಿಟ್ಟು ಹೇಳಿ… ಬರತ್
ತುಂಬಾ ಚೆನ್ನಾಗಿದೆ ಈ ಸಣ್ಣ(ನ)ಕತೆ, ನನ್ನ ಬಾಲ್ಯದ ನೆನಪುಗಳು ಬರಿಬೇಕು ಎನಿಸಿದೆ, ಪುರುಸೊತ್ತಿದ್ದಾಗ ಬರಿತೀನಿ.
“ಗದ್ದೆ ಬಯಲಾಗಿದ್ದುದರಿಂದ”
ಇದು “ಗದ್ದೆಯ ಬಯಲಾಗಿದ್ದುದರಿಂದ” ಇರಬೇಕು ಇಲ್ಲವೇ “ಗದ್ದೆಬಯಲಾಗಿದ್ದುದರಿಂದ” ಎನ್ದಿರಬೆಕು.
ಸುಮಾರು ಕಡೆ ಇಂತಹ ಕನ್ನಡದ ತಪ್ಪು-ಪ್ರಯೋಗಗಳಿವೆ. ತುಸು ವಿಭಕ್ತಿಗಳ ಕಡೆ ನಿಗಾ ಇಡಿರಿ.
maaysa, ಹವ್ದು,
ಎರಡನೆಯ ‘ಗದ್ದೆಬಯಲಾಗಿದ್ದುದರಿಂದ’ ಸರಿ. ನಿಡಿದಾದುರಿಂದ ಒಂದು ಎಡೆ ನುಸಿಳಿದೆ.
ಅದಿರಲಿ, ಕತೆ ಬಗ್ಗೆ ಏನೂ ಹೇಳಲಿಲ್ಲವಲ್ಲ?
ನನ್ನಿ ಜಗದೀಶ್