ದುಮುಕಿ ನೀರಾದ ಲಿಕಾಯಮ್ಮನ ಕತೆ

sadnewoman

ಮೇಗಾಲಯದ ಬೆಟ್ಟಗುಡ್ಡಗಳ ನಾಡಿನ ಒಂದು ಹಳ್ಳಿ ರಂಗ್ಯಿರ್‍ಟೆ.  ಈ ಹಳ್ಳಿಯ ಅಂಚಿನಲ್ಲಿ ನೊಹ್ ಕಾಲಿಕಾಯ್ ಎಂಬ ನೀರ್‍ಬೀಳು ಇದೆ. ಆ ನೀರ್‍ಬೀಳು ಅದೇ ಹಳ್ಳಿಯಲ್ಲಿ ವಾಸಿಸುತ್ತಿದ್ದ ಒಬ್ಬ ಹೆಣ್ಣುಮಗಳ ಹೆಸರು ಹೊತ್ತಿದೆ. ಆ ಹಳ್ಳಿಯಲ್ಲಿ ಲಿಕಾಯ್ ಎಂಬ ಹೆಂಗಸಿದ್ದಳು. ಕಾಲಿಕಾಯ್ ಅಂದರೆ ಲಿಕಾಯಮ್ಮ ಎಂದರ್‍ತ. ನಮ್ಮಲ್ಲಿ ತೆರೇಸ ಎಂಬುದನ್ನು ತೆರೇಸಮ್ಮ ಎಂದೂ ಅಲಮೇಲು ಎಂಬುದನ್ನು ಅಲಮೇಲಮ್ಮ ಎಂದೂ ಕರೆಯುವುದಿಲ್ಲವೇ ಹಾಗೆ. ಹತ್ತಿರದ ಗಣಿಯಿಂದ ಕಬ್ಬಿಣದ ಅದಿರನ್ನು ಸಿಲ್ಹೆಟ್ ಎಂಬ ಊರಿಗೆ ಹೊತ್ತೊಯ್ಯುವುದೇ ಅವಳ ಗಂಡನ ಕೆಲಸ. ಅದರಿಂದ ಬರುವ ಅಲ್ಪ ಗಳಿಕೆಯಿಂದಲೇ ಅವರಿಬ್ಬರೂ ಸಂತಸದಿಂದಿದ್ದರು. ಆದರೆ ಒಂದು ದಿನ ಲಿಕಾಯಳ ಮಡಿಲಲ್ಲಿ ಪುಟ್ಟ ಕಂದಮ್ಮ ಆಡಿಕೊಂಡಿರುವಾಗಲೇ ಗಂಡ ಸತ್ತನೆಂಬ ಸುದ್ದಿ ಬಂತು. ಲಿಕಾಯ್ ಅತ್ತಳು, ಅವಳ ಅಳುವನ್ನು ಕೇಳಿ ಅವಳ ಪುಟ್ಟ ಮಗಳೂ ಅತ್ತಳು. ಕೊನೆಗೆ ಲಿಕಾಯ್  ಸಾವರಿಸಿಕೊಂಡು ಗಂಡ ಹೊರುತ್ತಿದ್ದ ಹೊರೆಯನ್ನು ತಾನೇ ಹೊರತೊಡಗಿದಳು. ಇಲ್ಲದಿದ್ದರೆ ಬದುಕು ನಡೆಯಬೇಕಲ್ಲ? ಅವಳು ಹೊರಹೊರಟಾಗ ಪುಟ್ಟ ಮಗುವನ್ನು ನೆರೆಯವರ ಕಯ್ಗೊಪ್ಪಿಸಿ ಹೊರಡುತ್ತಿದ್ದಳು. ಹೀಗೆ ಲಿಕಾಯ್ ಮಗಳು ಕಂಡವರ ಕಯ್ಗೂಸಾದಳು.

ಕಂಡವರು ಎಶ್ಟು ದಿನ ತಾನೇ ಮಗುವನ್ನು ಲಾಲಿಸಬಲ್ಲರು, ಅವರು ಒಂದು ದಿನ ಲಿಕಾಯ್ ಮನೆಗೆ ಹಿಂದಿರುಗುತ್ತಿದ್ದಂತೆ ನೀನು ಮತ್ತೊಂದು ಮದುವೆಯಾಗು ನಿನ್ನ ಮಗು ಅಮ್ಮ ಬೇಕೆಂದು ರಚ್ಚೆ ಹಿಡಿಯುವುದು ತಪ್ಪುತ್ತದೆ, ಅದಕ್ಕೂ ಒಬ್ಬ ಅಪ್ಪನೂ ಬೇಕಲ್ಲವೇ? ಎಂದು ಹೇಳಿದರು. ಅವರ ಮಾತನ್ನು ಅರಗಿಸಿಕೊಂಡ ಲಿಕಾಯ್ ಕೆಲದಿನಗಳಲ್ಲೇ ತನಗೊಬ್ಬ ಗಂಡನನ್ನು ಹುಡುಕಿಕೊಂಡಳು. ಹೊಸ ಗಂಡ ಅವಳನ್ನು ಚೆನ್ನಾಗಿ ನೋಡಿಕೊಂಡ. ಆದರೆ ಲಿಕಾಯಳು ತನಗಿಂತಲೂ ತನ್ನ ಮಗುವನ್ನು ಹೆಚ್ಚು ರಮಿಸುವುದು ಅವನಲ್ಲಿ ಹೊಟ್ಟೆಕಿಚ್ಚು ಹುಟ್ಟಿಸಿತು. ಹೆಂಡತಿಯು ತನ್ನನ್ನು ಗಮನಿಸುವುದಕ್ಕಿಂತ ಹೆಚ್ಚಾಗಿ ಮಗುವಿನತ್ತಲೇ ಗಮನ ಹರಿಸುತ್ತಾಳಲ್ಲ, ಆ ಮಗುವನ್ನು ಹೇಗಾದರೂ ತವಿಸಬೇಕು ಎಂದುಕೊಂಡ. ಎಶ್ಟಾದರೂ ಅದು ಅವನ ಮಗು ಅಲ್ಲವಲ್ಲ. ಅದರ ಬಗ್ಗೆ ಅವನಿಗೆ ಮಮತೆ ಅಕ್ಕರೆ ಮೂಡುವುದಾದರೂ ಹೇಗೆ? ತೀಟೆ ತೆವಲುಗಳ ಮೇಲಾಟದಲ್ಲಿ ಮಕ್ಕಳೇ ದೇವರುಗಳೆಂಬ ಅನಿಸಿಕೆ ಬರುವುದುಂಟೇ?

ಒಂದು ದಿನ ಲಿಕಾಯಳು ಎಂದಿನಂತೆ ಹೊರೆ ಸಾಗಿಸಲು ಹೋಗಿದ್ದಾಗ ಅವನು ಹೊಂಚು ಹಾಕಿ ಮಗುವನ್ನು ಕೊಂದುಬಿಟ್ಟ. ಕೊಂದ ಮೇಲೆ ಮಗುವಿನ ಒಡಲನ್ನು ಏನು ಮಾಡುವುದು? ಅದನ್ನು ಕತ್ತರಿಸಿ ಅಡುಗೆ ಮಾಡಿದ. ಆಮೇಲೆ ಏನೂ ಗೊತ್ತಿಲ್ಲದವನಂತೆ ಅಂಡಲೆಯುತ್ತಾ ಹೋದ. ಸಂಜೆ ಲಿಕಾಯ್ ಮನೆಗೆ ಹಿಂದಿರುಗಿದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಮಗು ನೆರೆಹೊರೆಯ ಯಾರದಾದರೂ ತೊಡೆಯೇರಿರುತ್ತದೆ ಎಂದುಕೊಂಡ ಆಕೆ  ಹಸಿವಾಗಿದ್ದರಿಂದಲೂ ಅಡುಗೆ ಮನೆಯಿಂದ ಒಳ್ಳೆ ಗಮಲು ಬರುತ್ತಿದ್ದರಿಂದಲೂ ಉಣ್ಣಲು ಕೂತಳು. ಊಟದ ಕೊನೆಯವರೆಗೂ ಅದು ಯಾವ ಪ್ರಾಣಿಯ ಮಾಂಸವಿರಬಹುದು ಎಶ್ಟು ಚೆನ್ನಾಗಿದೆಯಲ್ಲ ಎಂದುಕೊಂಡು ಸವಿದು ಸವಿದು ತಿಂದಳು.

ಉಂಡ ಮೇಲೆದ್ದು ಪಾತ್ರೆಗಳನ್ನು ಮರುಜೋಡಿಸುವಾಗ ಒಲೆಯ ಬಳಿ ಪುಟ್ಟ ಬೆರಳುಗಳು ಕಂಡವು. ಅವಳ ಗಂಡ ಮಗುವಿನ ಕಯ್ ಕಾಲು ತಲೆಗಳನ್ನು ಬಿಸಾಡಿದ್ದನಾದರೂ ಮಗುವಿನ ಬೆರಳುಗಳನ್ನು ತೆಗೆದುಹಾಕಲು ಮರೆತುಬಿಟ್ಟಿದ್ದ. ಆ ಬೆರಳುಗಳನ್ನು ಕಂಡಿದ್ದೇ ಲಿಕಾಯಳಿಗೆ ಕಣ್ಣು ಕತ್ತಲಿಟ್ಟಂತಾಯಿತು. ಕೋಪ ಮತ್ತು ಅಳು ಒಟ್ಟೊಟ್ಟಿಗೇ ಉಮ್ಮಳಿಸಿ ಬಂದವು. ತನ್ನ ಕರುಳ ಕುಡಿಯನ್ನು ತಾನೇ ಚಪ್ಪರಿಸಿ ತಿಂದುದರ ಬಗ್ಗೆ ಅವಳಿಗೆ ತುಂಬಾ ಹೇಸಿಗೆಯೆನಿಸಿತು. ಮುಶ್ಟಿ ಬಿಗಿದು ನೆಲಕ್ಕೆ ಬಡಿದಳು, ಹಣೆಯನ್ನು ಗೋಡೆಗೆ ಗಟ್ಟಿಸಿಕೊಂಡಳು, ಬೋರಾಡಿ ಚೀರಾಡಿ ಅತ್ತಳು, ತಲೆ ಕೆದರಿಕೊಂಡು ಹಾದಿ ಬೀದಿಯೆಲ್ಲ ಹುಚ್ಚಿಯಂತೆ ಓಡಿದಳು. ಕೊಂದ ತಪ್ಪಿಗಿಂತ ತಿಂದುದೇ ದೊಡ್ಡತಪ್ಪು ಎನ್ನಿಸಿತು.

ಆಕೆ ಓಡಿಯೇ ಓಡಿದಳು, ಎಡವಿದ್ದು ಮುಳ್ಳುಚುಚ್ಚಿದ್ದು ಯಾವುದನ್ನೂ ಲೆಕ್ಕಿಸದೆ ಓಡಿದಳು. ಊರವರೂ ಆಕೆ ಯಾತಕ್ಕಾಗಿ ಹಾಗೆ ಓಡುತ್ತಿದ್ದಾಳೆಂದು ತಿಳಿಯದೇ ಅವಳ ಹಿಂದೆಯೇ ಓಡಿದರು. ಓಡುತ್ತಾ ಓಡುತ್ತಾ ಲಿಕಾಯ್ ಊರ ಅಂಚನ್ನು ಮುಟ್ಟಿ ಅಲ್ಲಿಂದ 335 ಮೀಟರುಗಳ ಆಳಕ್ಕೆ ಬೀಳುತ್ತಿದ್ದ ನೀರಿನೊಂದಿಗೆ ಸೇರಿಕೊಂಡು ದುಮ್ಮಿಕ್ಕಿದಳು. ಹೀಗೆ ಮಗಳೊಂದಿಗೆ ಸೇರಿಕೊಂಡಳು. ಆ ನೀರ್‍ಬೀಳು ಇಂದಿಗೂ ಲಿಕಾಯಮ್ಮನ ಹೆಸರು ಹೊತ್ತಿದೆ. NOH KA LIKAI  ಎಂದರೆ ಲಿಕಾಯಮ್ಮನ ದುಮುಕು ಎಂದರ್‍ತ.

ಸಿ. ಮರಿಜೋಸೆಪ್

(ಚಿತ್ರ: www.thenational.ae)

ನಿಮಗೆ ಹಿಡಿಸಬಹುದಾದ ಬರಹಗಳು

5 Responses

  1. ಒಂದು ಚಣ ಮಯ್ ಅದುರಿತು. ಮಾನವ ಎಶ್ಟು ಕ್ರೂರಿ! ಮನುಶ್ಯ ಮತ್ತೊಬ್ಬ ಮನುಶ್ಯನನ್ನು ಕೊಲ್ಲುವುದೇಕೆ ಎಂಬ ಪ್ರಶ್ನೆಯೇ ಎಶ್ಟೋ ವೇಳೆ ಆಳವಾಗಿ ಕಾಡುತ್ತದೆ. ಅಂತದರಲ್ಲಿ ಎಳೆಗೂಸನ್ನು ಕೊಂದು ಅದನ್ನು ಸಾರು ಮಾಡಿ ತಿನ್ನುವುದು ಮನುಶ್ಯ ಎಶ್ಟು ಶತಮಾನಗಳು ಕಳೆದರೂ ನಾಗರಿಕನಾಗಿಲ್ಲ ಎಂಬುದನ್ನೂ, ಅದಕ್ಕಿಂತ ಹೆಚ್ಚಾಗಿ ತಾನೂ ಒಂದು ಪ್ರಾಣಿ ಎಂಬುದನ್ನು ಸಾರಿ ಸಾರಿ ಹೇಳುತ್ತದೆ. ಲಿಕಾಯಮ್ಮನ “ಕೆರೆಗೆ ಹಾರ” ಮಾಡಿಕೊಂಡ ಹಾಗೆ ಮಾಡಿಕೊಂಡಿದ್ದರಲ್ಲಿ ಯಾವ ಅಚ್ಚರಿಯೂ ಇಲ್ಲ! ಎಲ್ಲೋ ಒಂದು ಕಡೆ ಬಕ್ತ ಸಿರಿಯಾಳನ ಕತೆ ನೆನಪಿಸಿತು. ಕಾಪಾಲಿಕರು ಹೀಗೆಯೇ ಮಾಡುತ್ತಿದ್ದರೆಂದು ಓದಿದ್ದೇನೆ. ಬಕುತರೇ ಹೀಗೆ ಮಾಡುತ್ತಾರೆಂದ ಮೇಲೆ ಬವಿಗಳು ಮಾಡುವುದರಲ್ಲಿ ಏನೂ ಅಚ್ಚರಿಯಿಲ್ಲ.

  2. olleya kate. adee igoo da gooLu
    maanava idarindayaavaaga horage baruttaanoo naa kaambenu,
    talebeeteya angaami naaga da ondu kateyide,kaLuhutteene

  3. ಬಗೆ ಕಲಕುವ ಕತೆ….!!

  4. Maaysa says:

    Horrid ಕತೆ.

  5. ನಮ್ಮಲ್ಲಿ ಸಹಜವಾಗಿ ಮೂರು ಸ್ವಭಾವಗಳಿವೆ.
    ೧. ದೈವ, ೨. ಮಾನವ ಮತ್ತು ೩. ದಾನವ ಗುಣಗಳು. ನಮ್ಮ ಮನಸ್ಸಾಕ್ಷಿ ಈ ಮೂರು ಗುಣಗಳ ಮದ್ಯೆ ಸಮರ ಸಾಗಿಸುತ್ತ, ಬಾಳಿನ ದೂರದ ತೀರವನ್ನು ಸೇರಲು ಪ್ರಯತ್ನಿಸುತ್ತಲೇ ಇರುತ್ತದೆ. ಮಹಾತ್ಮರು ದೈವ ಸ್ವಭಾವವನ್ನು ಆರಿಸಿಕೊಂಡರೆ, ಸಾಮಾನ್ಯರು ಮಾನವರಾಗಿ ಉಳಿಯುತ್ಟಾರೆ ಆದರೆ ದುಷ್ಟರು ದಾನವಾಗುದರಲ್ಲಿ ಸಂಶಯವಿಲ್ಲ. ಅಸೂಯೆ ಕ್ರೂರತನಕ್ಕೆ, ನಂತರ ಸ್ವಂತ ಮಗಳನ್ನೇ ಕೊಲೆ ಮಾಡಿ, ಅದನ್ನೇ ಮಾಂಸ ಮಾಡಿ ತಿನ್ನುವ ಮಟ್ಟಕ್ಕೆ ಕರೆದೊಯ್ದರೆ….. ಮಾನವ ಪ್ರಗತಿಯನ್ನು ಜೀರ್ಣಿಸಿಕೊಳ್ಳಲು ಲಿಕಾಯಮ್ಮನಿಗೆ ಹೇಗೆ ಸಾದ್ಯ?

ಅನಿಸಿಕೆ ಬರೆಯಿರಿ: