371(ಜಿ) ಇಂದ ಏನು ಉಪಯೋಗ?

ಹಯ್ದರಾಬಾದಿನ ನಿಜಾಮರು, ಇಲಸ್ಟ್ರೇಟೆಡ್ ಲಂಡನ್ ನ್ಯೂಸ್, 1889

ಹಯ್ದರಾಬಾದಿನ ನಿಜಾಮರು, ಇಲಸ್ಟ್ರೇಟೆಡ್ ಲಂಡನ್ ನ್ಯೂಸ್, 1889

ಇನ್ನು ಸರಿಯಾಗಿ ಒಂದು ವಾರದ ನಂತರ ಕರ್‍ನಾಟಕ ವಿದಾನಸಬೆಗೆ ಚುನಾವಣೆಗಳು ನಡೆಯಲಿವೆ. ಈಗಾಗಲೇ ವಿವಿದ ರಾಜಕೀಯ ಪಕ್ಶಗಳು ನಿಮ್ಮ ಮನೆಗೆ ಬಂದು ತಾವುಗಳು ಮಾಡಿರುವ ಸಾದನೆ ಹಾಗೂ ಮುಂದೆ ಮಾಡಲಿರುವ ಕೆಲಸಗಳ ಬಗ್ಗೆ ಹೇಳಿ ನಿಮ್ಮ ಮತ ಅವರಿಗೆ ಅತವಾ ಅವರ ಪಕ್ಶಕ್ಕೆ ಹಾಕಿ ಅಂತ ಕೇಳೋದು ಸಾಮಾನ್ಯ. ಇದರಲ್ಲಿ ವಿಶೇಶ ಅಂತ ಏನೂ ಅನ್ನಿಸುವುದಿಲ್ಲ ಅಲ್ಲವೇ? ಹವ್ದು, ನಗರ ಪ್ರದೇಶದಲ್ಲಿ ಇರುವುವರಾದರೆ ನಿಮಗೆ ಇದರಲ್ಲಿ ವಿಶೇಶ ಅಂತ ಏನು ಅನ್ನಿಸುವುದಿಲ್ಲ. ಆದರೆ ಹಳ್ಳಿಗಳಲ್ಲಿ ಇದು ಹೇಗಿರುತ್ತದೆ? ಅಲ್ಲಿ ಚುನಾವಣೆಗಳು ಹೇಗೆ ನಡೆಯುತ್ತವೆ? ಅಲ್ಲಿ ನಿಜಕ್ಕೂ ಜನರಿಗೆ ರಾಜಕೀಯ ಪಕ್ಶಗಳು ಮೇಲೆ ಹೇಳಿದಂತೆ ನಡೆದುಕೊಳ್ಳುತವೆಯೇ? ಕಂಡಿತವಾಗಿಯೂ ಇಲ್ಲಾ! ಅಲ್ಲಿ ಮುಕ್ಯವಾಗಿ ಚುನಾವಣೆ ನಡೆಯುವುದೇ ಜಾತಿ, ಹಣ ಹಾಗೂ ಹೆಂಡದ ಓಲಯ್ಕೆಯ ಮೇಲೆ.

ಉತ್ತರ ಕರ್‍ನಾಟಕ ಅದರಲ್ಲೂ ಮುಕ್ಯವಾಗಿ ಹಯ್ದರಾಬಾದ್-ಕರ್‍ನಾಟಕ ಬಾಗದಿಂದ ಬಂದವನಾಗಿರುವುದರಿಂದ ಈ ಸಾರಿಯ ಚುನಾವಣೆಗಳಲ್ಲಿ ಆ ಬಾಗ ಯಾವ ರೀತಿಯ ದಾಳವಾಗಿದೆ ಅನ್ನೋದನ್ನ ನೋಡೋಣ. ಹಯ್ದರಾಬಾದ್ ಕರ್‍ನಾಟಕ ಬಾಗ ಹಿಂದಿನಿಂದಲೂ ಅಬಿವ್ರುದ್ದಿಯಲ್ಲಿ ಹಿಂದುಳಿದಿದೆ. ಅದಕ್ಕೆ ಕಾರಣಗಳು ಹಲವಾರು: ತಮ್ಮದಲ್ಲದ ಆಡಳಿತದಲ್ಲಿ ಬದುಕಬೇಕಾದ ಅನಿವಾರ್‍ಯತೆ, ಈ ಪ್ರದೇಶಗಳು ಗಡಿ ಬಾಗಗಳಾಗಿದ್ದರಿಂದ ಎರಡೂ ಕಡೆಯಿಂದ ಕಡೆಗಣಿಸಲ್ಪಟ್ಟಿದ್ದವು. ಕಲ್ಬುರ್‍ಗಿ, ಬೀದರ್‍, ರಾಯಚೂರು ಹಾಗೂ ಬಳ್ಳಾರಿಯ ಕೆಲವು ಬಾಗಗಳು ಹಯ್ದ್ರಬಾದ್ ನಿಜಾಮನ ಆಳ್ವಿಕೆಗೆ ಒಳಪಟ್ಟಿದ್ದವು. ನಿಜಾಮನ ಆಡಳಿತ ಈ ಬಾಗಕ್ಕೆ ಮಾಡಿರುವ ಉಪಯೋಗ ಏನು ಇಲ್ಲ. ನಯ್ಸರ್‍ಗಿಕವಾಗಿಯೂ ಈ ಪ್ರದೇಶಗಳು ಅಂತಹ ಚೆನ್ನಾಗಿದ್ದ ಪ್ರದೇಶಗಳೇನಲ್ಲ. ಇಂತಹ ಪ್ರದೇಶ ಬಾರತಕ್ಕೆ ಸ್ವಾತಂತ್ರ್‍ಯ ಬಂದು ಒಂದು ವರ್‍ಶವಾದ ಮೇಲೆ ಕರ್‍ನಾಟಕಕ್ಕೆ ಸೇರ್‍ಪಡೆಗೊಂಡಿತು. ಈ ಕುರಿತು ಡಾ. ಡಿ. ಎಮ್. ನಂಜುಂಡಪ್ಪ ವರದಿಯ ಸಾರಾಂಶವನ್ನು ನೋಡಿ.

ಇಂತಹ ಸಮಯದಲ್ಲಿ ಈಗ ಈ ಬಾಗಕ್ಕೆ 371 (ಜೆ) ಕಲಮಿನ ಅನ್ವಯ ವಿಶೇಶ ಸ್ತಾನಮಾನ ನೀಡಲಾಗಿದೆ. ಬಿಜೆಪಿ ಸರ್‍ಕಾರದ ಅವದಿಯಲ್ಲಿ ಡಾ. ಡಿ. ಎಮ್. ನಂಜುಂಡಪ್ಪ ವರದಿ ಅನುಶ್ಟಾನಕ್ಕೆ ಸಮಿತಿಯೊಂದನ್ನ ರಚಿಸಿತು. ಆದರೆ ಈ ಸಮಿತಿಯಿಂದ ಆಗಿರುವ ಪ್ರಯೋಜನದ ಮಾಹಿತಿ ಸಿಕ್ಕಿಲ್ಲ. ಆದರೆ ಈಗ ಮಾತ್ರ ಎರಡೂ ರಾಶ್ಟ್ರೀಯ ಪಕ್ಶಗಳು ಹಯ್ದರಾಬಾದ್ ಕರ್‍ನಾಟಕ್ಕೆ ವಿಶೇಶ ಸ್ತಾನಮಾನ ಸಿಕ್ಕಿದ್ದು ತಮ್ಮಿಂದ ಅಂತಹ ಜನರ ಮುಂದೆ ಬೀಗುತ್ತಿವೆ. ಇನ್ನು ಮುಂದೆ ನಿಮ್ಮ ಉದ್ದಾರ ನಮ್ಮ ಕಯ್ಯಿಂದ ಮಾತ್ರ ಸಾದ್ಯ, ನಿಮ್ಮನ್ನು ಉದ್ದಾರ ಮಾಡಲು ಬಂದಿರುವ ಅವತಾರ ಪುರುಶರ ತರಹ ಮಾತನಾಡುತ್ತಿವೆ. ಆದರೆ ನಿಜಕ್ಕೂ ಈ ವಿಶೇಶ ಸ್ತಾನಮಾನ ಅಲ್ಲಿಯ ಜನರ ಬದುಕನ್ನು ಹಸನುಗೊಳಿಸುವ ಶಕ್ತಿ ಇದೆಯಾ? ಈ ವಿಶೇಶ ಸ್ತಾನಮಾನ ಅನುಶ್ಟಾನದ ಹೊಣೆ ದೆಹಲಿಯ ದೊರೆಗಳ ಕಯ್ಯಲ್ಲಿ ಕೊಟ್ಟಿರುವುದು ಎಶ್ಟರ ಮಟ್ಟಿಗೆ ಸರಿ? ಇಲ್ಲಿಯವರೆಗೂ ಆಗದಿರುವ ಅಬಿವ್ರುದ್ದಿ ಈ ಸಮಿತಿಗಳು, ಸ್ತಾನಮಾನಗಳು ಮಾಡಿಬಿಡುತ್ತವೆಯೇ? ಜನರು ಎಚ್ಚೆತ್ತುಕೊಳ್ಳದ ಹೊರತು, ಅಲ್ಲಿಯ ಜನಪ್ರತಿನಿದಿಗಳು ಕೆಲಸ ಮಾಡದ ಹೊರತು ಸರ್‍ಕಾರದಿಂದ ಏನು ಮಾಡಲು ಸಾದ್ಯ?

ಅನೇಕ ವರದಿಗಳು ಈ ಬಾಗ ಹಿಂದುಳಿಯಲು ಕಲಿಕೆಯ ಮಟ್ಟವೂ ಕಾರಣವೆಂದು ಹೇಳುತ್ತಿವೆ. ಹಾಗಾಗಿ ಇಲ್ಲಿ ಮುಕ್ಯವಾಗಿ ಒಳ್ಳೆಯ ಶಾಲೆಗಳು ಬರಬೇಕು, ಕಲಿಕೆಯ ಮಟ್ಟ ಸುದಾರಿಸಬೇಕು. ಕಲಿಕೆಯಲ್ಲಿ ಎಲ್ಲರ ಕನ್ನಡದ ಪಾತ್ರವೂ ತುಂಬ ದೊಡ್ಡದಿದೆ. ಕಲಿಕೆಯಿಂದಲೇ ಅಲ್ಲಿಯ ಜನರು ತಮ್ಮ ಕಶ್ಟಗಳು ಏನೆಂದು ಅರಿತುಕೊಳ್ಳಲು ಸಾದ್ಯ. ಆಗ ಮಾತ್ರ ಅವರು ಅಲ್ಲಿಯ ಜನಪ್ರತಿನಿದಿಗಳನ್ನು ಕೊರಳು ಪಟ್ಟಿ ಹಿಡಿದು ಆಗಬೇಕಾಗಿರುವ ಕೆಲಸ ಮಾಡಿಸಲು ಸಾದ್ಯ. ಕೊನೆಗೆ ನಮ್ಮ ಏಳಿಗೆಗೆ ನಾವೇ ಜವಾಬ್ದಾರರೇ ಹೊರತು ಬೇರೆಯವರಲ್ಲ. ನಾವು ಎಚ್ಚೆತ್ತುಕೊಳ್ಳದ ಹೊರತು ಆ ದೇವರು ಕೂಡ ನಮಗೆ ಸಹಾಯ ಮಾಡಲು ಸಾದ್ಯವಿಲ್ಲ.

ಚೇತನ್ ಜೀರಾಳ್

(ಚಿತ್ರ: ಕೊಲಂಬಿಯ ಕಲಿಕೆವೀಡು)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: