ಮಲೆಗಳ ಮದುಮಗಳು ಕಣ್ಣೆದುರು ನಿಂತಾಗ

ಗಿರೀಶ್ ಕಾರ‍್ಗದ್ದೆ.

malegaLalli madumagaLu stage3

ಮಲೆಗಳಲ್ಲಿ ಮದುಮಗಳು‘ ರಾಶ್ಟ್ರಕವಿ ಕುವೆಂಪುರವರ ಕಾದಂಬರಿಗಳಲ್ಲೊಂದು. ಮಲೆನಾಡಿನ ದಟ್ಟ ಅನುಬವವನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸಿರುವ ಮೇರುಕ್ರುತಿಯದು. ಮಲೆನಾಡಿನ ಮೇಗರವಳ್ಳಿಯ ಸುತ್ತಮುತ್ತಲ ಪರಿಸರದ ಹಿನ್ನೆಲೆಯಲ್ಲಿ ನಡೆಯುವ ಕಡು ಸಂಕೀರ‍್ಣವಾದ ಇಂತಹ ವಸ್ತುವನ್ನು ರಂಗರೂಪಕ್ಕಿಳಿಸುವುದು ಯಾವುದೇ ರಂಗಬೂಮಿಯ ನಿರ‍್ದೇಶಕನಿಗೆ ಒಂದು ಸವಾಲು. ಅವಸರವೂ ಸಾವದಾನದ ಬೆನ್ನೇರುವ ಈ ಮಹಾಕಾದಂಬರಿಯ ರಂಗರೂಪಕವೊಂದು ಸಾವದಾನವೂ ಸಹ ಅವಸರದ ಬೆನ್ನೇರಿರುವ ಬೆಂಗಳೂರು ನಗರಿಯ ಕಲಾಗ್ರಾಮದಲ್ಲಿ ನಡೆಯುತ್ತಿದೆ.

ಮಯ್ಸೂರಿನ ರಂಗಾಯಣದ ತಂಡದವರು ನಡೆಸುತ್ತಿರುವ ಒಂಬತ್ತು ಗಂಟೆಗಳ ಕಾಲ ಇರುಳಿಡೀ ನಡೆಯುವ ಈ ರಂಗಪ್ರಯೋಗ ಬೆಂಗಳೂರಿನ ಮಟ್ಟಿಗೆ ಹೊಸತು. ಉತ್ತರಕರ‍್ನಾಟಕದ ಕೆಲ ಪ್ರದೇಶಗಳಲ್ಲಿ ಇರುಳಿಡೀ ಕಂಪನಿ ನಾಟಕಗಳು ಈಗಲೂ ನಡೆಯುತ್ತವೆ, ನಾನು ಯಾವತ್ತೂ ಇಂತಹ ಅನುಬವ ಪಡೆದಿಲ್ಲ. ಇರುಳಿಡೀ ಕುಳಿತು ನಾಟಕ ನೋಡಿದ್ದು ನನಗೂ ಹೊಸ ಅನುಬವ.

ಕಾದಂಬರಿಯ ಅಯ್ವತ್ತನಾಲ್ಕು ಬಾಗಗಳನ್ನು ಇಲ್ಲಿ ಆಡಿ ತೋರಿಸಲಾಗುತ್ತದೆ. ನಾಲ್ಕು ವೇದಿಕೆಗಳಲ್ಲಿ ನಡೆಯುವ ಈ ನಾಟಕದ ಮೊದಲ ಅಂಗಳ ಕೆರೆಯಂಗಳ. ಮಲೆಸೀಮೆಯ ಅಡಿಕೆ ತೋಟವನ್ನು, ಕೆರೆಯನ್ನು, ಹರಿಯುವ ಹಳ್ಳವನ್ನೂ, ದಾಟುವ ಸಂಕ, ಹುಲಿಕಲ್ಲು ನೆತ್ತಿ ಮುಂತಾದವನ್ನು ಮರುಸ್ರುಶ್ಟಿಸುವ ಇವರ ಪ್ರಯತ್ನವನ್ನು ಮೆಚ್ಚದಿರಲು ಕಾರಣವೇ ಇಲ್ಲ. ನಾಯಿಗುತ್ತಿಯ ನಾಯಿ ‘ಹುಲಿಯ’ನ ಚುರುಕುತನ ಎಲ್ಲರ ಮನಸೆಳೆಯುತ್ತದೆ. ಉಬ್ಬುತಗ್ಗುಗಳನ್ನು ಹೊಂದಿರುವ ಈ ವೇದಿಕೆಯಲ್ಲಿ ಗಟ್ಟಿಯಾದ ಸಪಾಟು ನೆಲದ ಮೇಲೆಯೇ ನಡೆಯುವಂತೆಯೇ ವೇಗವಾಗಿ ಓಡಾಡಿಕೊಂಡು ನಟಿಸುವ ಇವರ ಚಳಕವು ಅಚ್ಚರಿ ಮೂಡಿಸುತ್ತದೆ. ಈ ವೇಗವನ್ನು ದಕ್ಕಿಸಿಕ್ಕೊಳ್ಳಲು ಕಲಾವಿದರೆಲ್ಲರೂ ನಿರಂತರ ತಾಲೀಮು ಮಾಡಿರುವುದು ಎದ್ದು ಕಾಣುತ್ತದೆ.

ಸಹಜವಾಗಿರುವ ಅಂಕುಡೊಂಕಿನ ನೆಲವನ್ನು ಕತೆಗೆ ಪೂರಕವಾಗುವಂತೆ ತುಂಬಾ ಚೆನ್ನಾಗಿ ಬಳಸಿಕೊಳ್ಳಲಾಗಿದೆ, ಬಯಲಿನಲ್ಲಿ ನಾಟಕ ನಡೆಯುವಾಗ ನೆರಳುಬೆಳಕಿನ ಸಂಯೋಜನೆಯ  ಹಿಡಿತ ನಮ್ಮ ಕಯ್‍ಲಿಲ್ಲ, ಆದರೆ ಇಲ್ಲಿ ಅ‍ದನ್ನು ತುಂಬಾ ಅಚ್ಚುಕಟ್ಟಾಗಿ ಮಾಡಲಾಗಿದೆ. ಕೆರೆಯಂಗಳದ ಬಾಗದಲ್ಲಿ ನಾಯಿಗುತ್ತಿ ಮತ್ತು ಅವನ ಸಾಕುನಾಯಿ ಹುಲಿಯನ ಅಬಿನಯವೇ ಎದ್ದು ಕಾಣುತ್ತದೆಯಾದರೂ, ಹಂದಿ ಹಿಡಿಯುವುದು, ಪಾದ್ರಿಯ ಬೀಸೆಕಲ್ಲು ಸವಾರಿ, ಇವೇ ಮೊದಲಾದ ಪ್ರತಿಯೊಂದು ಗಟನೆಯೂ ದ್ರುಶ್ಯಕಾವ್ಯವನ್ನು ಬಿಚ್ಚಿಡುತ್ತದೆ.

ವಿರಾಮದ ನಂತರ ಕೆರೆಯಂಗಳದಿಂದ ಬಯಲುರಂಗಕ್ಕೆ ಜಾಗ ಬದಲಾವಣೆಯಾಗುತ್ತದೆ. ಪುಡಿ ಮಾರಾಟದ ಸಾಬಿ ಮತ್ತವನ ಸಂಗಡಿಗರ ಮಾತುಗಳು, ಹಾವಬಾವ ಮತ್ತು ವೆಂಕಟ್ಟಪ್ಪ ನಾಯ್ಕನ ಅನಾಚಾರಗಳು ಇಲ್ಲಿ ಬಂದು ಹೋಗುತ್ತವೆ. ಗುತ್ತಿ ಮತ್ತು ಹುಲಿಯನ ಚುರುಕುತನ ಇಲ್ಲಿಯೂ ಕಾಣಸಿಗುತ್ತದೆ. ಸನ್ಯಾಸಿಗಳ ಬಾಗವು ಕುವೆಂಪುರವರಿಗೆ ಕಪಟ ಸನ್ಯಾಸಿಗಳ ಬಗ್ಗೆಯಿದ್ದ ಸಾತ್ವಿಕ ಸಿಟ್ಟನ್ನು ಮೆಲುಕು ಹಾಕುವಂತೆ ಮಾಡುತ್ತದೆ.

ಬಯಲು ರಂಗದಿಂದ ಬಿದಿರುಮೆಳೆಗೆ ನಾಟಕವು ಜಾಗ ಬದಾಲಾಯಿಸುವುದಶ್ಟೇ ಅಲ್ಲ, ಮಲೆನಾಡಿನ ಜನರ ಬದುಕಿನಲ್ಲಾಗುವ ಬದಲಾವಣೆಗಳನ್ನು ಎತ್ತಿ ತೋರಿಸುತ್ತದೆ. ಆದುನಿಕತೆಯ ಗುರುತುಗಳಾದ ಇಂಗ್ಲಿಶ್ ಸ್ಕೂಲು, ಅಂತಕ್ಕನ ಹೋಟ್ಲು, ಪೋಲೀಸು, ಕಶಾಯದ ಬದಲಿಗೆ ಕಾಪಿ, ದೊಂದಿಯ ಜಾಗದಲ್ಲಿ ಲಾಟೀನು ಕಂಡುಬರುತ್ತವೆ. ಇದು ಹಳತು ಮತ್ತು ಹೊಸತರ ನಡುವಿನ ಸಂಕ್ರಮಣ ಕಾಲ. ಕಡ್ಡಿಯಾಡಿಸುವ ಅಯ್ಗಳ ಬಾಗವಂತೂ ನಗುವಿನ ಅಲೆಯೆಬ್ಬಿಸುತ್ತದೆ.

ನಾಟಕದ ಕೊನೆಯಬಾಗ ಹೊಂಗೆರಂಗದಲ್ಲಿ ಹುಲಿಕಲ್ಲು ನೆತ್ತಿಮೇಲೆ ನಡೆಯುವ ಪ್ರಸಂಗಗಳು, ಚಿನ್ನಿಯ ಮದುವೆ ಮನೆಯಲ್ಲಿ ನಡೆಯುವ ಅವಾಂತರಗಳು. ಇಲ್ಲಿ ಹಳತು ಮತ್ತು ಪಾದ್ರಿಗಳ ಹೊಸತು ಎರಡೂ ಮುಕಾಮುಕಿಯಾಗಿ ನಿಲ್ಲುತ್ತವೆ. ಕೆರೆಯಂಗಳದ ಬಾಗದಲ್ಲಿ ಹೊಸತಾಗಿ ಕಾಣಿಸಿಕೊಂಡು ಎಲ್ಲರ ಅಚ್ಚರಿಗೆ ಕಾರಣವಾಗಿದ್ದ, ಮತ ಪ್ರಚಾರಕ್ಕೆ ಬಯ್ಬಲ್ಲಿಗಿಂತ ಇವೇ ಒಳ್ಳೆಯದು ಎಂದು ಪಾದ್ರಿಗಳಿಂದ ಮನ್ನಣೆ ಪಡೆದಿದ್ದ ಬೀಸೆಕಲ್ಲುಗಳು ಇಲ್ಲಿ ಸಾಮಾನ್ಯ ಬಯ್ಸಿಕಲ್‍ಗಳಶ್ಟೇ.

ರಂಗಗೀತೆಗಳಿಗೆ ಬೇರೆಯೇ ತರದ ಹದವಿರುತ್ತದೆ. ಹಂಸಲೇಕರ ಸಂಗೀತ ಇಲ್ಲಿ ಆ ಕಟ್ಟುಪಾಡನ್ನು ಮುರಿದಿದೆ ಎನ್ನಬಹುದು. ಸಿನೆಮಾ ಸಂಗೀತಕ್ಕೆ ಹತ್ತಿರದಲ್ಲಿರುವಂತೆ ಅನಿಸುತ್ತದೆಯಾದರೂ, ಎಲ್ಲಿಯೂ ಅಬ್ಬರವೆನಿಸದೆ ಕತೆಗೆ ಪೂರಕವಾಗಿವೆ. ಚಿತ್ರಕತೆ, ರಂಗಸಜ್ಜಿಕೆಯ ವಿಶಯದಲ್ಲಿ ನಿರ‍್ದೇಶಕರ ಶ್ರಮ ಸಾರ‍್ತಕವಾಗಿದೆ, ಅಲ್ಲಲ್ಲಿ ಹಾ‍ಸ್ಯದ ಹೊನಲು ಹರಿದಿದೆ. ಕತೆಯು ಮಲೆಸೀಮೆಯಲ್ಲಿ ನಡೆಯುವಂತಾಗಿದ್ದರಿಂದ ಅಲ್ಲಿನ ಒಳನುಡಿಯನ್ನು ಇನ್ನೂ ಚೆನ್ನಾಗಿ ಬಳಸಿಕೊಂಡಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ಬೇರೆ ಬೇರೆ ಊರುಗಳ ಕಲಾವಿದರು ಪಾಲ್ಗೊಂಡಿರುವುದರಿಂದ, ಇದು ಅಶ್ಟು ಸುಲಬವಲ್ಲ.

ಸುಮಾರು ಎಪ್ಪತ್ತೆಂಟು ಕಲಾವಿದರ ಚುರುಕಾದ ತಂಡವನ್ನು ನಿರ‍್ದೇಶಿಸುತ್ತಿರುವವರು ಬಸವಲಿಂಗಯ್ಯನವರು. ಇದು ಈ ತಿಂಗಳ ಮೂವತ್ತರವರೆಗೆ ವಾರಕ್ಕೆ ಮೂರು ಶೋಗಳಂತೆ ನಡೆಯಲಿದೆ. ನಿಮಗೂ ಇದನ್ನು ನೋಡಲು ಇಚ್ಚೆಯಿದ್ದರೆ bookmyshow ಅತವಾ ಕನ್ನಡ ಸಂಸ್ಕ್ರುತಿ ಇಲಾಕೆಯ ಮೂಲಕ ಟಿಕೇಟ್ ಕಾಯ್ದಿರಿಸಿ.

ಒಟ್ಟು ಪ್ರದರ‍್ಶನ ಸಮಯ: ಒಂಬತ್ತು ಗಂಟೆಗಳು.
ಟಿಕೇಟ್ ದರ: ನೂರು ರೂಪಾಯಿಗಳು
ಜಾಗ: ಬೆಂಗಳೂರು ಯೂನಿವರ‍್ಸಿಟಿಯ ಸಮೀಪ. ಮಲ್ಲತ್ತಹಳ್ಳಿಯ ಕಲಾಗ್ರಾಮ.

(ಚಿತ್ರ: http://www.facebook.com/malegalalli.madhumagalu/photos)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: