ಕೇಂದ್ರ ಸರಕಾರದಿಂದ ಕಲಿಕೆ ಹದಗೆಡುತ್ತಿದೆ
ಕಲಿಕೆಯಲ್ಲಿ ಹಿನ್ನಡೆ ಎಂಬುದು ಈವೊತ್ತಿನ ಜಗತ್ತಿನಲ್ಲಿ ಒಂದು ತೊಡಕಶ್ಟೇ ಅಲ್ಲದೆ ಬರ-ಬರುತ್ತಾ ಒಂದು ಗಂಡಾಂತರವೆಂದೇ ಗೋಚರವಾಗುತ್ತಿದೆ. ಬೆಳವಣಿಗೆ, ಜಾಗತೀಕರಣ, ತೆರೆದ ಮಾರುಕಟ್ಟೆಯಂತಹ ಜಾಗತಿಕ ನಂಬಿಕೆಗಳನ್ನು ಅಪ್ಪಿಕೊಳ್ಳುತ್ತಿರುವ ದೇಶಗಳ ಮತ್ತು ಮಾರುಕಟ್ಟೆಗಳ ನಡುವಿನ ಪಯ್ಪೋಟಿಯಲ್ಲಿ ಗೆದ್ದು ಬೆಳಗಲು, ಬದುಕುಳಿಯಲು ಹೆಚ್ಚಿನ ಮಂದಿ ಬಳಕೆ ಮಾಡುತ್ತಿರುವ ಒಂದು ಪ್ರಮುಕ ಸಲಕರಣೆ ಕಲಿಕೆಯೇ. ಶಾಂತ ರೀತಿಯಲ್ಲಿ ಈ ಪಯ್ಪೋಟಿಯಲ್ಲಿ ಗೆಲ್ಲಲು ಕಲಿಕೆಯೊಂದೇ ಮನುಶ್ಯನಿಗೆ ಇವತ್ತು ತಿಳಿದಿರುವ ರೀತಿ. ಹೀಗಾಗಿ ಶಾಂತಿಯನ್ನು ಕಾಪಾಡಿಕೊಳ್ಳುವುದು ಒಂದು ಜನಾಂಗದ ಆಸೆಯಾಗಿದ್ದರೆ ಕಲಿಕೆಯೆಂಬ ಸಲಕರಣೆಯನ್ನು ಒಲಿಸಿಕೊಳ್ಳುವುದು ಅವರವರ ಕೆಲಸವೆಂದು ಆಯಾ ಜನಾಂಗದವರು ಅರಿತುಕೊಳ್ಳುವುದೇ ಒಳ್ಳೆಯ ಜೀವನದ ಗುಟ್ಟು.
ಹೀಗಿರುವಾಗ ಬಾರತದಲ್ಲಿ ಕಲಿಕೆಯೇರ್‍ಪಾಡು ಹೇಗೆ ಹದಗೆಡುತ್ತಿದೆ ಎಂದು ಹೇಳುತ್ತಿರುವ (ಪ್ರತಮ್ ಸಂಸ್ತೆಯೋರು ಹೊರತಂದಿರುವ) ಈ ವರದಿ ಜನರನ್ನು ಗಾಬರಿ ಪಡಿಸುವಂತಿದೆ. ಅಂದ ಹಾಗೆ, ಕರ್‍ನಾಟಕದ ಬಗೆಗಿನ ವರದಿಯನ್ನು ಇಲ್ಲಿ ಕಾಣಬಹುದು. ಬಾರತದಲ್ಲಿ ಕಲಿಕೆಯೆಂಬುದು ಜನರ ಕಯ್ಯಲ್ಲೇ ಉಳಿಯದೇ (ರಾಜ್ಯ ಸರ್‍ಕಾರದ ಹಿಡಿತ ಎಳ್ಳಶ್ಟೇ ಇರುವ,) ಕೇಂದ್ರ ಸರ್‍ಕಾರದ್ದೇ ಬಿಗಿ ಹಿಡಿತದಲ್ಲಿರುವ ಜಂಟಿ ಪಟ್ಟಿಯಲ್ಲಿ ಇರುವುದೆಂಬ ನಿಜಾಂಶದೊಡನೆ ಈ ವರದಿಯನ್ನು ಬೆರೆಸಿ ಓದಿದಾಗ ಕಲಿಕೆಯಲ್ಲಿ ನಮ್ಮೆಲ್ಲರ ಹಿನ್ನಡೆಗೆ ಕೇಂದ್ರ ಸರ್‍ಕಾರದ ಮೂಗು-ತೂರಿಸುವಿಕೆ ಕಾರಣವೆಂದು ಹೇಳಲೇಬಹುದು.
ಮೇಲೆ ಹೇಳಿದಂತೆ ಬೆಳವಣಿಗೆಯ ಪಯ್ಪೋಟಿಗಳ ನಡುವೆಯೂ ಜಗತ್ತಿನಲ್ಲಿ ಶಾಂತಿ ಕಾಪಾಡಿಕೊಳ್ಳಲು ಇರುವ ದಾರಿ ಕಲಿಕೆ ಒಂದೇ. ಅದನ್ನು ಒಲಿಸಿಕೊಳ್ಳುವುದು ಅವರವರ ಹೊಣೆಯಾಗಿರುವಾಗ, ದೇಶದ ಎಲ್ಲ ಮಂದಿಯಿಂದಲೂ ಅತಿ ಹೆಚ್ಚಿನ ದೂರವಿರುವ ಕೇಂದ್ರ ಸರ್‍ಕಾರ ತನ್ನ ತೆಕ್ಕೆಯಲ್ಲಿ ಬಲದಿಂದ ಇರಿಸಿ ಕೊಂಡಿರುವುದು ಸಮಾಜದಲ್ಲಿ ಅಶಾಂತಿಯ ಬೀಜ ಬಿತ್ತಿದಂತಾಗಿದೆಯಶ್ಟೇ. ಈ ಹಿಂಸೆ ನಿಲ್ಲಬೇಕು. ಈ ಅವಿವೇಕ ತೊಲಗಬೇಕು.
ಕಲಿಕೆಯೇರ್‍ಪಾಡು ಇವತ್ತಿರುವ ಗೊಂದಲದ ಅವಸ್ತೆಯಿಂದ ಮುಕ್ತಿ ಹೊಂದಬೇಕು ಹಾಗೂ ಸರಳಗೊಳ್ಳಬೇಕು. ಕೇಂದ್ರದ ತೆಕ್ಕೆಯಿಂದ ಹೊರಗೆ ಬಂದು, ಕಲಿಕೆಯ ಸುತ್ತಾಳ್ವಿಕೆ ನೆರವೇರಬೇಕಾಗಿದೆ. ಕನ್ನಡಿಗರ ಕಲಿಕೆಯೇರ್‍ಪಾಡಿನ ಹೊಣೆ ಕನ್ನಡಿಗರ ತೆಕ್ಕೆಗೆ ಬಂದು ಸೇರಬೇಕು. ಆಗಲಾದರೂ ಕನ್ನಡಿಗರೆಲ್ಲ ಸೇರಿ ಕನ್ನಡ ಮಾದ್ಯಮದಲ್ಲಿ ಕಲಿಕೆಯೆಂಬುದನ್ನು ನನಸಾಗಿಸಿಕೊಳ್ಳಬೇಕು. ಕನ್ನಡಿಗರ ಮಕ್ಕಳು ಏನಾದರು ಕಲಿಯಲು ಮತ್ತೊಂದು ನುಡಿಯ ಮುಂದೆಯೋ, ಮತ್ತೊಂದು ನುಡಿಸಮುದಾಯದ ಮುಂದೆಯೋ ತಲೆಬಾಗದಂತೆ ಅತವಾ ಮತ್ತೊಂದು ಜನಾಂಗದ/ಪ್ರದೇಶದ/ಪರಿಸರದ ಒತ್ತೆಯಾಳಾಗದಂತೆ ಏರ್‍ಪಾಡಾಗಬೇಕು. ಪ್ರತಮ್ ಅವರ ವರದಿಯಲ್ಲಿ ಹೊರಬಿದ್ದಿರುವ ಮಾಹಿತಿ ಮುಂದೊಂದು ದಿನ ತಪ್ಪಾಗಬೇಕು. ತಾಯಿಯ ಹೊಟ್ಟೆಯಲ್ಲಿಂದಲೇ ಕಲಿಯುತ್ತಾ ಬರುವ ಪ್ರತಿಯೊಂದು ಮಗುವೂ ಶಾಲೆಗೆ ಹೋದ ಕೂಡಲೆ ಕಲಿಯುವುದರಲ್ಲಿ ಎಡವುವಂತ ಅನಾಹುತ ನಿಲ್ಲಬೇಕು, ಪ್ರತಿಯೊಂದು ಮಗುವೂ ತನ್ನಲ್ಲಿರುವ ಮೂಲ ಯೋಗ್ಯತೆಯಿಂದ ಹೊಳೆಯುವಂತೆ ಕಲಿಕೆ ಸಹಾಯ ಮಾಡುವಂತಾಗಬೇಕು.
(ಚಿತ್ರ: www.teachersforefa.unesco.org)
ಇತ್ತೀಚಿನ ಅನಿಸಿಕೆಗಳು