ಉಂಚಳ್ಳಿ ಅರ‍್ಬಿಗೆ ಪ್ರವಾಸ – 1

unchalli-1

ಜೋಗದ ಗುಂಡಿ ಮತ್ತು ಅದರ ಸುತ್ತ ಮುತ್ತಲಿನ ಕೆಲವು ಅರ್‍ಬಿಗಳನ್ನು ನೋಡಲೆಂದು ಬೆಂಗಳೂರಿಂದ ಕಾರ್ ಮಾಡಿಕೊಂಡು ಹೋಗಿದ್ದೆವು. ಶ್ಯಾಮ, ಗವ್ತಮ, ಜಗ್ಗು, ಕುಲದೀಪ್, ಗುರು, ಮದು ಮತ್ತು ನಾನು. ಅದು ಆಗಸ್ಟ್ ನಡು ವಾರ. ಆಗ ತಾನೇ ಮುಂಗಾರು ಮಳೆ ನಿಂತಿತ್ತು. ಜೋಗದಲ್ಲಿ ಸಿಕ್ಕಾಪಟ್ಟೆ ನೀರಿರುತ್ತದೆ ಎಂದು ಆಸೆ ಹೊತ್ತು ಹೋದ ನಮಗೆ ತುಂಬಾ ನಿರಾಸೆಯಾಯಿತು. ನೀರು ತೀರಾ ಕಡಿಮೆ ಇತ್ತು. ಆದರೂ ಕೆಳಗೆ ಇಳಿದು ಕೊಂಚ ನೀರಲ್ಲಿ ಆಡಿ, ಜೋಗದಲ್ಲೇ ಒಂದಿರುಳು ಕಳೆದು, ಬೆಳಿಗ್ಗೆಗೆ ಶಿರಸಿಯ ಹತ್ತಿರದಲ್ಲಿರುವ ಉಂಚಳ್ಳಿ ಅರ್‍ಬಿಗೆ ಹೋಗೋಣ ಎಂದು ಹೊರಟೆವು. ಕೊಂಚ ಹುಡುಕಾಡಿದೆವಾದರೂ ಬೇಗನೇ ಸಿಕ್ಕಿಬಿಟ್ಟಿತು! ಕಾರಿಂದ ಇಳಿದು ಅರ್‍ಬಿ ಕಾಣುವ ಜಾಗದ ಕಡೆಗೆ ನಡೆದೆವು. ಆ ಅರ್‍ಬಿ ಮೇಲಿಂದ ಕಾಣುವ ಜಾಗದಲ್ಲಿ ಒಂದು ಕಟ್ಟೆ ಕಟ್ಟಿ ಮಂಟಪವನ್ನು ಮಾಡಲಾಗಿದೆ.

ಅಲ್ಲೇ ಬಂದು ನಿಂತು ನೋಡಲು ತೊಡಗಿದೆವು. ನಮ್ಮ ಮುಂದೆ ಒಂದು ಕಣಿವೆ, ಆ ಕಣಿವೆಯ ಇಳಿಜಾರಲ್ಲಿ ಹಸುರಾಗಿ ದಟ್ಟವಾಗಿ ಬೆಳೆದುಕೊಂಡಿರುವ ಕಾಡು. ಆ ಕಣಿವೆ ಶುರು ಆಗುವ (ನಮ್ಮ ಎಡಗಡೆಗೆ) ಜಾಗದಲ್ಲಿ ಸಿಕ್ಕಾಪಟ್ಟೆ ಮಂಜು. ಎಶ್ಟು ಮಂಜು ಅಂದರೆ ಆ ನೀರ್‍ಬೀಳ ಕಾಣಿಸುತ್ತಲೇ ಇಲ್ಲ. ಅದಿರಲಿ, ಆ ಮಂಜು ಮೇಲೆದ್ದು, ಮತ್ತೆ ಹನಿಯಾಗಿ, ಮಂಟಪದ ಸುತ್ತ ಮುತ್ತಲಿನ ಜಾಗಗಳಲ್ಲಿ ಎಡಬಿಡದೆ ತುಂತುರು ಸುರಿಸುತ್ತಿತ್ತು. ಒಂದೊಂದು ಸಲ ಜೋರಾಗೇ ಸುರಿಯುತ್ತಿತ್ತು. ದಿಟವಾಗಿಯೂ ಇದು ಮಂಜಿನ ನೀರೋ ಇಲ್ಲಾ ಮಳೆಯೋ ಎಂದು ನಮಗೆಲ್ಲ ಒಂದೇ ಗೊಂದಲ. ಅರ್‍ಬಿ ಅಂತೂ ಒಂದಿಶ್ಟೂ ನೋಡುವುದಕ್ಕೆ ಸಿಗಲಿಲ್ಲ. ಅರ್‍ಬಿ ಮುಂದೆ ತೆರೆ ಕಟ್ಟಿದ ಹಾಗೆ ಮಂಜು ಮುತ್ತಿಕೊಂಡಿತ್ತು. ಸರಿಯಬಹುದೇನೋ ಎಂದು ಸುಮಾರು ಹೊತ್ತು ಅಲ್ಲೇ ಆಸೆಯಿಂದ ಕಣ್-ಕಣ್ ಬಿಟ್ಟುಕೊಂಡು ನಿಂತಿದ್ದೆವು. ಬರೀ ಬರೋ ಎಂದು ಬೋರ್‍ಗರೆಯುವ ಸದ್ದು. ಎಶ್ಟು ಜೋರಾಗಿತ್ತು ಅಂದರೆ, ಆ ಅರ್‍ಬಿ ತೀರಾ ದೊಡ್ಡದಶ್ಟೇ ಅಲ್ಲ ತುಂಬಿ ಹರಿಯುತ್ತಿದೆ ಎಂದು ಕೂಡ ಗೊತ್ತಾಗುತ್ತಿತ್ತು.

ಗವ್ತಮ ಬಂದು ಆಮೇಲೆ ನಮಗೆಲ್ಲ ನೀರು ಎಲ್ಲಿಂದ ಬೀಳುತ್ತದೆ, ಸಣ್ಣ ಕಾಲುವೆ ತರ ಬೀಳುವುದಕ್ಕೆ ಶುರುವಾಗಿ ಆಮೇಲೆ ಹೇಗೆ ಕೆಳಗೆ ಅಗಲವಾಗಿ ಹರಡಿ, ಅಲ್ಲಿರುವ ಬಂಡೆ ಕಲ್ಲುಗಳಿಗೆಲ್ಲ ಹೊಡೆದು ಚಿಮ್ಮಿ, ರಬಸವಾಗಿ ಬೀಳುತ್ತದೆ ಎಂದು ಕಯ್ ತೋರಿಸಿ ಹೇಳುತ್ತಿದ್ದ. ಅಶ್ಟರಲ್ಲೇ ಒಂದು ಸ್ವಲ್ಪ ಮಂಜು ತೆಳುವಾಗಿ, ಬಿಳಿ ನೊರೆ ತರ, ಬಂಡೆ ನಡುವೆ ಎಲ್ಲೋ ಒಂದು ಕಡೆ ಮಾತ್ರ ಸ್ವಲ್ಪ ಮುಸುಕು ಮುಸುಕಾಗಿ ಕಾಣಿಸಿತು. ನಾನು ತುಂಬಾ excite ಆಗಿ “ನೋಡ್ರೋ” ಅಂತ ಕುಲದೀಪನಿಗೆ, ಮದುಗೆ ತೋರಿಸಿದೆ. ಮದು ಅದಕ್ಕೆ ಏನೂ ಮಾರುತ್ತರ ಕೊಡಲಿಲ್ಲ. ಎಂದಿನಂತೆ ಸ್ಕ್ರೀನ್-ಸೇವರ್ ಮೋಡಲ್ಲಿದ್ದ. ಕುಲ್ದೀಪ್ ಮಾತ್ರ ಎಲ್ಲೋ ಎಲ್ಲೋ ಅಂತ ಕೇಳುತ್ತ , ನಾನು ಅವನಿಗೆ ತೋರಿಸುವ ಅಶ್ಟರಲ್ಲಿ ಮತ್ತೆ ಮಂಜು ದಟ್ಟವಾಗಿ ಅರ್‍ಬಿ ಮರೆಯಾಯ್ತು.

ಸ್ವಲ್ಪ  ಹೊತ್ತಲ್ಲಿ ಅರ್‍ಬಿಯ, ಬಲ-ಕೆಳ ಬಾಗ ಕಾಣಿಸಿಕೊಂಡಿತು. ಎಲ್ಲ ನೀರು ಬಂಡೆಯ ಎಡ ಬಾಗದಲ್ಲೇ ಹರಿಯುವುದರಿಂದ, ಬಲಬಾಗದಲ್ಲಿ ಬರೀ ಅಲ್ಲಿಂದ ಚಿಮ್ಮಿದ ನೀರು ಮಾತ್ರ ಹರಿಯುತ್ತದೆ. ಪುಟ್ಟ ಪುಟ್ಟ ಕಾಲುವೆಗಳ ತರ ಹರಿಯುತ್ತಿದ್ದ ನೀರನ್ನು ನೋಡಿ ನಮಗೆ ತುಂಬಾ ನಲಿವಾಯ್ತು. ಎಲ್ಲಾ ಒಬ್ಬರಿಗೊಬ್ಬರು ತೋರಿಸುತ್ತ್ತಿದ್ದರು. ಹೀಗೇ ಒಂದು ಹತ್ತು ನಿಮಿಶದ ಕಣ್ಣಾ-ಮುಚ್ಚಾಲೆ ಆಟ ಆದಮೇಲೆ ಸುಮಾರಾಗಿ ಮಂಜು ಒಮ್ಮೆಲೇ ಸರಿದು ಬಿಟ್ಟು ನಮಗೆ ಅರ್‍ಬಿಯ ದೊಡ್ಡ ಬಾಗವೇ ಕಾಣಿಸಿತು. ಎಲ್ಲರೂ ಊಊಊ-ವಾಆಆಆಆಆ-ಹಾಆಆಆಆಆಆ ಅಂತ ಸ್ವರ ಎಳೆದರು. ಕುಲದೀಪನಂತೂ “ಮಗ amazing ಕಣೋ. beautiful ಕಣೋ. it is definitely one of the most beautiful I have ever seen” ಅಂತ ಉದ್ಗಾರ ತೆಗೆದನು. ನಾನಂತೂ ಹೂ ಎಂದು ತಲೆ ಆಡಿಸಿದೆ.

ಅರ್‍ಬಿ, ಒಳ್ಳೆ ನೊರೆ ಹಾಲು ಹೊಯ್ದ ಹಾಗೆ ತಿಳಿ ಬಿಳುಪಾಗಿದೆ. ಸಿಕ್ಕಾಪಟ್ಟೆ ನೀರು, ನಾವು ಅಂದುಕೊಂಡ ಹಾಗೇಯೇ. ಅರ್‍ಬಿಯ ಮೇಲು ಬಾಗ ಬಹಳ ಸಣ್ಣದಾಗಿದ್ದು, ಮುಂದೆ ಅರ್‍ಬಿ, ಹರಿದು ಬಂದ ಹಾಗೆಲ್ಲ ಅಗಲವಾಗುತ್ತ ಬರುತ್ತದೆ. ಈ ಮೇಲು ಬಾಗದಲ್ಲಿ ನೀರು ಹಾಗೆ ನೇರವಾಗಿ ದುಮುಕುವುದಿಲ್ಲ. ಸುಮಾರು 70-80 ಡಿಗ್ರಿಯಲ್ಲಿ ಹರಿಯುತ್ತದೆ. ಕೆಳಗಿನ ಇನ್ನರ್‍ದ ಬಾಗ ಒಂದು ದೊಡ್ಡ ತೆರೆದ ಬಂಡೆ. ಇಲ್ಲಿ ನೀರು ಹರಿಯುವುದಕ್ಕೆ ಮೇಲಿನ ಅರ್‍ದ ಬಗದ ತರ ಕಾಲುವೆಯಿಲ್ಲ. ತೆರೆದ ಬಂಡೆ. ಹಾಗಾಗಿ ನೀರು ಹರಡಿ, ಈ ಬಂಡೆ ಮೇಲೆಲ್ಲ ಚಿಮ್ಮಿ ಹರಿಯುತ್ತದೆ. ಹರಿಯುತ್ತದೆ ಎನ್ನುವುದಕ್ಕಿಂತ ದುಮುಕುತ್ತದೆ ಎನ್ನಬಹುದು.

ಇನ್ನೂ ಕೊಂಚ ಕೆಳಗಿಳಿದರೆ, ಇನ್ನೊಂದು ನೋಟ ಕಾಣುತ್ತದೆ. ನಾವು ಅಲ್ಲಿಗೆ ಕೆಳಗಿಳಿದು ಹೊದೆವು. ಅಲ್ಲಿ ಅರ್‍ಬಿ ಇನ್ನೂ ಚೆನ್ನಾಗಿ ಕಾಣುತ್ತಿತ್ತು. ಆ ಕೋನದಿಂದ ನೋಡಿದಾಗ ಮಂಜು ಎದ್ದು ಅರ್‍ಬಿಯ ಎಡಕ್ಕೆ ಹೋಗುತ್ತದೆ, ಹಾಗಾಗಿ ನಮಗೆ ಒಳ್ಳೆ ನೋಟ ಸಿಕ್ಕಿತು. ಎಲ್ಲರಿಗೂ ಹಿಗ್ಗೋ ಹಿಗ್ಗು. ಒಳ್ಳೆ ಗರ ಬಡಿದವರ ಹಾಗೆ ನಿಂತು ನೋಡುತ್ತಿದ್ದೆವು. ಮೋಡಗಳು ರಬಸವಾಗಿ ಹೊಮ್ಮಿ ಬಂದಂತೆ ಕಾಣಿಸುತ್ತಿತ್ತು, ಆ ಅರ್‍ಬಿ. ದೇವನೆಲೆಯಲ್ಲಿ ಬರ್‍ದಿಲರ ನಡೆದಾಡುವ ಹಾದಿಯ ಹಾಗೆ. ಇಲ್ಲಿ ಪೋಟೊಗಳನ್ನು ತೆಗೆದು ಮತ್ತೆ ಮೇಲಕ್ಕೆ ನಡೆದು ಅರ್‍ಬಿಯ ಕಣಿವೆಗೆ ಇಳಿಯಲು ಸಜ್ಜಾದೆವು.

ಗವ್ತಮ, ನಾನು ಮುಂದೆ ನಡೆದೆವು. ಕಾಡಿನ ಒಳಗೆ ಸ್ವಲ್ಪ ದೂರದಲ್ಲೆ ಒಂದು ಸಣ್ಣ ಕಾಲುವೆ ಇದೆ. ಅ ಕಾಲುವೆ ದಾಟಿ ಮುಂದೆ ಇಳಿಯಬೇಕು. ನಾವದನ್ನು ದಾಟುವ ಹೊತ್ತಲ್ಲಿ, ಗುರು, ಶ್ಯಾಮ, ಮದು, ಜಗ್ಗು ಎಲ್ಲ ಬಂದರು. ಎಲ್ಲಾ ಒಬ್ಬರ ಹಿಂದೆ ಒಬ್ಬರಂತೆ ಆ ಕಾಲ್ದಾರಿಯಲ್ಲಿ ಇಳಿಯ ತೊಡಗಿದೆವು. ಕಾಡು ಬಹಳ ದಟ್ಟ. ಕಾಲ್ದಾರಿಯ ತುಂಬ, ಒಣಗಿದ ಎಲೆಗಳು, ಹುಲ್ಲು, ಪಾಚಿ. ನನ್ನ ಹಿಂದೆ ಬರತಿದ್ದ ಗವ್ತಮ ಅಂತೂ ಅಡಿ ಅಡಿಗೂ ಜಾರುವುದಕ್ಕೆ ಶುರು ಮಾಡಿದ. ಅವನು ಹಾಕಿದ್ದ ಶೂ ಆ ವುಡ್ಲ್ಯಾಂಡ್ ಟ್ರ್ಯಾಕ್ಟರ್‍ರು. ಅದರ ತಳ ನೆಂದುಬಿಟ್ಟರೆ ಸಾಕು ಕಾಲಿಟ್ಟಿದ್ದ ಕಡೆಯೆಲ್ಲ ಸ್ಕೇಟಿಂಗೇ. ತೀರಾ ಜಾರುವ ಕಡೆಗಳೆಲ್ಲ ನಾ ಮುಂದೆಯಿಂದ ಕಯ್ ಹಿಡಿದುಕೊಂಡು ಅವನನ್ನು ಇಳಿಸಿಕೊಳ್ಳುತ್ತಿದ್ದೆ.

ಗವ್ತಮ ಸ್ವಲ್ಪ ಹಿಂದೆ ಬಿದ್ದ. ಸಾಲದು ಅಂತ ಅವನು ಪೋಟೋಗಳನ್ನು ಬೇರೆ ತೆಗೆಯುತ್ತಿದ್ದ. ಸರ ಸರ ಇಳಿಯುತಿದ್ದ ಜಗ್ಗು ನನ್ನನ್ನು ಮೀರಿಸಿ ಮುಂದೆ ನಡೆದ. ಸುಮಾರು ದೂರ ನಡೆದ ಮೇಲೆ, ಎಲ್ಲ ಹಿಂದೆ ಉಳಿದುಬಿಟ್ಟಿದ್ದಾರೆಂದು ನಾನು ಜಗ್ಗು ಒಂದು ಕಡೆ ನಿಂತೆವು. ಎಲ್ಲರೂ ಹತ್ತಿರ ಬಂದು ಇನ್ನೇನು ಹೊರಡಬೇಕು ಅಂದಾಗ ನಮಗೆ ಅರಿವಾಯ್ತು ನಾವು ಜಿಗಣೆಗಳಿರೋ ಜಾಗದಲ್ಲಿ ನಿಂತಿದ್ದೆವೆಂದು. ಕಾಲಿನ ಮೇಲೆ ಹತ್ತಿದ ಒಂದೆರಡು ಜಿಗಣೆಗಳನ್ನು ಕಿತ್ತೊಗೆದು, “ಅಯ್ಯೊ ಎಂತಾ ಗೂಬೆಗಳು ನಾವು ಅಲ್ವ” ಅಂತ ನಾನು ಜಗ್ಗು ಮಾತಾಡಿಕೊಂಡು ಮತ್ತೆ ಕೆಳಗೆ ಇಳಿಯುವುದಕ್ಕೆ ಶುರು ಮಾಡಿದೆವು. ಒದ್ದೆಯಾಗಿ ಎಲೆಗಳು ಬಿದ್ದಿರುವಂತಹ ಜಾಗಗಳಲ್ಲಿ ಜಿಗಣೆಗಳು ಲೆಕ್ಕವೇ ಇಲ್ಲ. ಅದನ್ನೆಲ್ಲ ಹೇಗೋ ಸಮಾಯಿಸಿಕೊಂಡು ಮುಂದೆ ನಡೆಯುತ್ತ ಹೋದೆವು.

ಸುಮಾರು ಮುಂದೆ ಹೋದಮೇಲೆ ಮತ್ತೆ ನಾನು, ಜಗ್ಗು ನಿಲ್ಲೋಣ ಅಂತ ಅಂದುಕೊಂಡೆವು. ಒಂದು ತರ ಮೆಟ್ಟಿಲು ಇದ್ದಹಾಗಿತ್ತು ಅಲ್ಲಿ. ಅದರ ಒಂದೆರಡು ಮೆಟ್ಟಿಲುಗಳನ್ನು ಜಗ್ಗು ಇಳಿದು ನಿಂತನು. ನಾನು ಇಳಿಯದೆ ಅಲ್ಲೇ ಮೇಲೇ ನಿಂತೆನು. ಕೆಳಗೆ ನೆಲದಲ್ಲಿ ಜಿಗಣೆಗಳಿರಬಹುದೇನೊ ಎಂದು ನಾನು ಸುತ್ತ ನೋಡುತ್ತಿದ್ದೆ. ಅಶ್ಟರಲ್ಲೇ ಸುಮಾರು ಒಂದು ಅಡಿಯಶ್ಟುದ್ದದ ಬಹಳ ಸಣ್ಣದಾದ ಕಂದು ಬಣ್ಣದ ಯಾವುದೋ ಒಣಗಿರುವ ಬಳ್ಳಿಯೋ, ಬೇರೋ ಸುರಳಿ ಸುತ್ತು ಬಿದ್ದದ್ದು ನನ್ನ ಬಲಗಾಲಿನ ಅಡಿ ಪಕ್ಕದಲ್ಲೇ ಕಾಣಿಸಿತು. ಏನಿದು ಎಂದು ಬಹಳ ಕುತೂಹಲದಿಂದ ಬಗ್ಗಿ ನೋಡಿದೆ. ಸುತ್ತಿದ ಸುರಳಿ ನುಡುವಲ್ಲಿ ಆ ಬಳ್ಳಿಯ ಕೊನೆ ಹಾವಿನ ಹೆಡೆ ಆಕಾರದಲ್ಲಿ ಕೊಂಚ ಅಗಲವಾಗಿತ್ತು. ಮತ್ತೆ ಹತ್ತಿರದಿಂದ ನೋಡಿದೆ. ಇಶ್ಟು ಚಿಕ್ಕದಾಗಿರುವುದು ಹಾವಾಗಿರುವುದಕ್ಕೆ ಸಾದ್ಯವಿಲ್ಲ ಎಂದು ಮತ್ತೆ ಇನ್ನೂ ಹತ್ತಿರದಿಂದ ಅದನ್ನು ಗಮನಿಸಿದೆ. ಒಣಗಿದ ಬಳ್ಳಿಯೋ ಬೇರೋ ಆಗಿದ್ದರೆ ಮಯ್ಯೆಲ್ಲ ಒರಟೊರಟಾಗಿರಬೇಕಿತ್ತು. ಆದ್ರೆ ಇದರ ಮಯ್ ಬಹಳ ನುಣುಪಾಗಿತ್ತು. ಅದರ ಮಯ್ ಬಣ್ಣ ಮರದ ಬಣ್ಣಕ್ಕಿಂತ ಹೆಚ್ಚು ತಿಳಿಯಾಗಿತ್ತು. ಮತ್ತೆ ಮಯ್ ಮೇಲೆ ಅಲ್ಲಲಿ ಕಪ್ಪು patternಗಳು.ಆ ಸುರಳಿ ನಡುವೆ ಇದ್ದದ್ದು ಹೆಡೆ ಇದ್ದಂತೆ ಕಾಣಿಸಿತು. ಹಾವಿನ ಮರಿ ಎಂದು ಗೊತ್ತಾಯಿತು. ಕಾಲು ಪಕ್ಕಕೆ ಸರಿಸಿಕೊಂಡು, ಜಗ್ಗುಗೆ “ಏನ್ಲಾ ಮಗ, ಹಾವು ತಾನೆ ಇದು?” ಎಂದು ಕೇಳುತ್ತ ಬೆಟ್ಟು ಮಾಡಿ ತೋರಿಸಿದೆ. ಅವನು ಅದನ್ನು ಬಹಳ ಕುತೂಹಲದಿಂದ ಹತ್ತಿರ ಬಂದು ನೋಡಿದ. ಅವನು ನನಗಿಂತ ಎರಡು ಮೂರು ಮೆಟ್ಟಿಲು ಕೆಳಗಿದ್ದಿದ್ದರಿಂದ ಅವನಿಗೆ ಇನ್ನೂ ಚೆನ್ನಾಗಿ ಕಾಣಿಸುತ್ತಿತ್ತು. “ಹವ್ದು ಸಿಸ್ಸಿ. ಹಾವೇ ಇದು. It’s in a coiled state! ತಾಳು ಗವ್ತಮ ಬರ್‍ಲಿ, ಇದರ ಪೋಟೊ ಎತ್ತಮ” ಎಂದ (ನಮ್ಮಲ್ಲಿ ಪೋಟೋ ತೆಗೆಯಲು ತಿಟ್ಟುಕ ಇರಲಿಲ್ಲ, ಗವ್ತಮನ ಹತ್ತಿರ ಇತ್ತು).

“ಹೆಡೆ ಇದೆ, ಇದು ನಾಗರ ಹಾವೇ ಇರಬಹುದು. ಹತ್ತಿರದಲ್ಲಿ ಗೂಡಿದ್ರೆ? ಅದರ ಅಮ್ಮ ಬಂದರೆ? ಮಗ ಸ್ಯಾನೆ ಅಪಾಯ ಇದ್ದಂಗೆ ಕಾಣಿಸ್ತಯ್ತೆ” ಎಂದೆ. “ಹವ್ದ್ ಕಣ್ಲಾ! ಇದ್ದರೂ ಇರಬಹುದು” ಅಂದ. ಇಬ್ಬರೂ ಬಹಳ ಉತ್ಸಾಹದಿಂದ ಅದನ್ನು ನೋಡುತ್ತಿದ್ದೆವು. ಸ್ವಲ್ಪ ಹೊತ್ತಲ್ಲೇ ಎಲ್ಲರೂ ಬಂದರು. ಎಲ್ಲರಿಗೂ ಮೊದಲೇ ಹೇಳಿದೇವು, ಹಾವಿದೆ ಜೋಕೆ ಎಂದು. ಗವ್ತಮನ ಹತ್ತಿರ ಕ್ಯಾಮ್ರಾ ಇಸಿದುಕೊಂಡು ಜಗ್ಗು ಅದನ್ನು ಸೆರೆ ಹಿಡಿದ. “ಸಿಸ್ಸಿ, It raised its hood!” ಎಂದು ತೀರಾ ಹುಮ್ಮಸ್ಸಿಂದ ಕೂಗಿದ. ನಾನು ಕೆಳಗೆ ನೋಡಿದೆ. ಒಂದು ಸ್ವಲ್ಪ ಹೆಡೆ ಎತ್ತಿತ್ತು. ಹೆಡೆ ಎತ್ತಿದ್ದರೂ ಆ ಹಾವಿನ ಮರಿಗೆ ಏನೂ ಹುಮ್ಮಸ್ಸಿರಲಿಲ್ಲ. ಒಳ್ಳೆ ಸತ್ತು ಬಿದ್ದಿರುವ ಹಾಗೆ ಇತ್ತು. ಪೋಟೊ ತೆಗೆದು ಜಗ್ಗು ಕೆಳಗಿಳಿದು ಹೋದ. ನಾನು ಕೆಳಗಿಳಿಯುವುದಕ್ಕೆ ಶುರು ಮಾಡಿದೆ. ಆಶ್ಟರಲ್ಲಿ ಮೇಲ್ಗಡೆ ಮಂಟಪದಲ್ಲಿ ಸಿಕ್ಕಿದ್ದ ಮೂವರು ಹುಡುಗರು ಬಂದರು. ಆ ಹಾವನ್ನು ನೋಡಿ, ಮುಂದೆ ಇದ್ದವನು, “ಅದೇನು ಮಾಡಲ್ಲ ಬಿಡ್ರಿ” ಅಂದ. ಅಲ್ಲೇ ಹತ್ತಿರದ ಹಳ್ಳಿಯವರಂತೆ. ಸರಿ ಅಂತ ನಾನು ಮುಂದೆ ನಡೆದೆ. ಶ್ಯಾಮ ಸ್ವಲ್ಪ ಹೊತ್ತು ಕಾಣಿಸ್ತಲೇ ಇರಲಿಲ್ಲ. ಆಮೇಲೆ ಮತ್ತೆ ಹಿಂದೆ ಕಾಣಿಸಿಕೊಂಡ. “ಪಾಪ, ಆ ಹಾವನ್ನ ತುಳಿದು ಸಾಯಿಸಿಬಿಟ್ಟ್ರು ಕಣೋ ಆ ಹುಡುಗ್ರು” ಅಂದ. “ಅಯ್ಯೋ, ಅದೇನು ಮಾಡ್ತು ಇವರಿಗೆ, ಪಾಪ ಸಾಯಿಸಿಬಿಟ್ರಲ್ಲ” ಅಂತ ಮನಸಿಗೆ ತುಂಬಾ ಬೇಸರವಾಯ್ತು.

(…ಮುಂದುವರೆಯುವುದು)

ಸಂದೀಪ್ ಕಂಬಿ.

4 ಅನಿಸಿಕೆಗಳು

  1. sandeep kambi avare…dayavittu thamma munduvareda bhagavannu nanage mincheyalli kaluhisi…nanna email id – umas71@gmail.com

    thavu thumba chennagi pravasa katheyannu roopisiddira…nanage thumba kushi aythu…thamma anubavavannu thumba chennagi vivarisiddira….thamma anubavavannu hanchikondidakkage thamage dhanyavadagalu

    – Shiva

  2. ಶಂಕರ್ ಅವರೇ, ನಿಮ್ಮ ಮೆಚ್ಚುಗೆಗೆ ನನ್ನಿ. ನಿಮಗೆ ಈ ನನ್ನ ಬರಹ ಇಶ್ಟವಾಗಿದ್ದು ನನಗೆ ತುಂಬಾ ನಲಿವು ಕೊಟ್ಟಿದೆ. ಇದರ ಮುಂದಿನ ಬಾಗ ಇಲ್ಲೇ ಹೊನಲಿನಲ್ಲಿ ಮೂಡಿ ಬರುತ್ತದೆ. ದಯವಿಟ್ಟು ಕಾದು ಓದಿ 🙂

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.