’ರಾಜ್ಯ’ಸಬೆಗೆ ’ರಾಜ್ಯ’ದವರೇ ಆಯ್ಕೆಯಾಗುವಂತಿರಲಿ
ಸುದ್ದಿಹಾಳೆಗಳಲ್ಲಿ ವರದಿಯಾಗಿರುವಂತೆ ನಮ್ಮ ದೇಶದ ಪ್ರದಾನಮಂತ್ರಿಯಾಗಿರುವ ಶ್ರೀ ಮನಮೋಹನ್ ಸಿಂಗ್ ಅವರು ಮತ್ತೊಮ್ಮೆ ಅಸ್ಸಾಂ ರಾಜ್ಯದಿಂದ ರಾಜ್ಯಸಬೆಗೆ ಮರು ಆಯ್ಕೆ ಬಯಸಿದ್ದಾರೆ. ಇಲ್ಲಿವರೆಗೂ ಗೆಲ್ಲಿಸಿರುವ ಅಸ್ಸಾಂ ರಾಜ್ಯದ ಜನತೆಯನ್ನು ಹಾರಯ್ಸಿದ್ದಾರೆ. ಇದರಲ್ಲೇನು ವಿಶೇಶ ಅಂತೀರಾ? ಇದೆ!
ಕಳೆದ ಹತ್ತು ವರ್‍ಶದಿಂದ ನಮ್ಮನ್ನು ಪ್ರತಿನಿದಿಸುತ್ತಿರುವ ಮನಮೋಹನ್ ಸಿಂಗ್ ರಿಂದ ನಮ್ಮ ರಾಜ್ಯಕ್ಕೆ ಯಾವುದೇ ಉಪಯೋಗವಾಗಿಲ್ಲ ಎಂದು ಅವರ ವಿರುದ್ದ ಅಸ್ಸಾಂ ರಾಜ್ಯದ ಜನರು ಪ್ರತಿಬಟನೆ ನಡೆಸುತ್ತಿದ್ದಾರೆ ಎಂದು ಸುದ್ದಿ ಮಾದ್ಯಮಗಳಲ್ಲಿ ವರದಿಯಾಗಿದೆ. ರಾಜ್ಯಸಬೆಯಲ್ಲಿ ಮನಮೋಹನ ಸಿಂಗ್ ರವರು ಅಸ್ಸಾಂ ರಾಜ್ಯವನ್ನು ಪ್ರತಿನಿದಿಸುತ್ತಿದ್ದಾರೆ. ಅವರು ಅಸ್ಸಾಂ ರಾಜ್ಯದ ದಿಸ್ಪುರದಲ್ಲಿ ವಾಸವಾಗಿದ್ದಾರೆ ಅನ್ನುತ್ತವೆ ದಾಕಲೆಗಳು. ಕೆಲದಿನಗಳ ಹಿಂದೆ ನಡೆದ ಅಸ್ಸಾಂ ವಿದಾನಸಬೆ ಚುನಾವಣೆಯ ಮತದಾನದಲ್ಲಿ ಪಾಲ್ಗೊಳ್ಳದೆ ಸುದ್ದಿಯಾಗಿದ್ದರು. ಇದೇ ರೀತಿ ಹಲವಾರು ನಾಯಕರುಗಳು ತಮಗೆ ಸಂಬಂದವೇ ಇಲ್ಲದ ರಾಜ್ಯಗಳಿಂದ ರಾಜ್ಯಸಬೆಗೆ ಆಯ್ಕೆಯಾಗುತ್ತಿದ್ದಾರೆ. ಉದಾಹರಣೆಗೆ ಕರ್‍ನಾಟಕದಿಂದ ವೆಂಕಯ್ಯ ನಾಯ್ಡು, ಹಿಂದಿ ಚಿತ್ರ ನಟಿ ಹೇಮಾ ಮಾಲಿನಿ, ತಮಿಳು ಉದ್ಯಮಿ ಎಂ. ಎ. ಎಂ. ರಾಮಸ್ವಾಮಿ, ರಾಮ್ ಜೇಟ್ಮಲಾನಿ ಮುಂತಾದವರು ಬೇರೆ ಬೇರೆ ಪಕ್ಶಗಳಿಂದ ಆರಿಸಿ ಹೋಗಿದ್ದಾರೆ. ಇಲ್ಲಿ ಮುಕ್ಯವಾಗಿ ಗಮನಿಸಬೇಕಾಗಿರುವುದು ರಾಜ್ಯಸಬಾ ಸೀಟುಗಳು ದುರುಪಯೋಗಗೊಳ್ಳುತ್ತಿರುವುದು. ಹೇಗೆ? ಮುಂದೆ ನೋಡೋಣ.
ಏನಿದು ರಾಜ್ಯಸಬೆ?
ರಾಜ್ಯಸಬೆಯನ್ನು “ರಾಜ್ಯಗಳ ಮಂಡಳಿ” ಅಂತಲೂ ಕರೆಯುತ್ತಾರೆ. ಸ್ವಾತಂತ್ರ್ಯದ ನಂತರ ಕೇಂದ್ರದಲ್ಲಿ ಎರಡನೆಯ ಮನೆ ಬೇಕೆ ಬೇಡವೇ ಎಂದು ಅನೇಕ ಚರ್‍ಚೆಗಳ ಬಳಿಕ ಒಪ್ಪಿಗೆ ನೀಡಲಾಯಿತು. ಎರಡನೆ ಮನೆಯನ್ನು ಹುಟ್ಟು ಹಾಕಲು ಮುಕ್ಯ ಕಾರಣ ಬಾರತ ದೇಶ ದೊಡ್ಡದಾಗಿದೆ ಹಾಗೂ ವಯ್ವಿದ್ಯತೆಯಿಂದ ಕೂಡಿದೆ, ಹಾಗಾಗಿ ಲೋಕಸಬೆಯಲ್ಲಿ ಆಯ್ಕೆಯಾಗಿರುವ ಬರುವ ಸಂಸದರಿಂದ ಎಲ್ಲಾ ಕೆಲಸಗಳನ್ನು ಮಾಡಲಾಗುವುದಿಲ್ಲ ಎನ್ನುವುದು. ಈ ಹಿನ್ನೆಲೆಯಲ್ಲಿಯೇ ರಾಜ್ಯಸಬೆಯನ್ನು ಹುಟ್ಟುಹಾಕಲಾಯಿತು. ಅದಕ್ಕೆ ಅದರದೇ ಆದ ಸಂಯೋಜನೆ ಹಾಗೂ ಆಯ್ಕೆ ವಿದಾನವನ್ನು ರೂಪಿಸಲಾಯಿತು. ಈ ರಾಜ್ಯಸಬೆಯ ಸದಸ್ಯರನ್ನು ಆಯಾ ರಾಜ್ಯದ ಶಾಸಕರು ಹಾಗೂ ಸಂಸದರು ಆರಿಸಿ ಕಳಿಸುವ ಏರ್‍ಪಾಡು ಮಾಡಲಾಯಿತು. ಇದರ ಮುಕ್ಯ ಉದ್ದೇಶ ಪ್ರತಿಯೊಂದು ರಾಜ್ಯಕ್ಕೂ ಸಮಾನವಾದ ಪ್ರತಿನಿದಿತ್ವ ಸಿಗಲಿ ಅನ್ನುವ ಕಾರಣಕ್ಕೆ. ಇದರ ಜೊತೆಗೆ ಹಲವು ಸದಸ್ಯರನ್ನು ಚುನಾವಣೆಗಳಿಲ್ಲದೆ ನೇರವಾಗಿ ಆಯ್ಕೆ ಮಾಡುವ ನಿಯಮ ರೂಪಿಸಿಕೊಳ್ಳಲಾಯಿತು.
ರಾಜ್ಯಸಬಾ ಸದಸ್ಯತ್ವ ಅಂದರೇನು?
ಒಬ್ಬ ರಾಜ್ಯಸಬಾ ಸದಸ್ಯ ಮುಕ್ಯವಾಗಿ ಆಯಾ ರಾಜ್ಯದ ಪ್ರತಿನಿದಿಯಾಗಿ ಸಂಸತ್ತಿನ ಮೇಲ್ಮನೆಯಲ್ಲಿ ಕೆಲಸಮಾಡುತ್ತಾರೆ. ರಾಜ್ಯಸಬೆ ಅನ್ನುವುದು ಒಕ್ಕೂಟ ವ್ಯವಸ್ತೆಯ ಒಂದು ಬಾಗ ಅನ್ನುವುದನ್ನ ಮೇಲೆ ನೋಡಿದ್ದೇವೆ. ಕೇಂದ್ರದಲ್ಲಿ ಲೋಕಸಬೆಗಿರುವಶ್ಟೇ ಪ್ರಾಮುಕ್ಯತೆ ರಾಜ್ಯಸಬೆಗೂ ಇದೆ. ದೇಶದ ಕಾನೂನು, ಹಣಕಾಸು ಹಾಗೂ ಸಂವಿದಾನ ತಿದ್ದುಪಡಿ ಮುಂತಾದ ಪ್ರಮುಕ ಕೆಲಸಗಳಲ್ಲಿ ರಾಜ್ಯಸಬಾ ಸದಸ್ಯರು ಕೆಲಸ ಮಾಡುತ್ತಾರೆ.
ದುರುಪಯೋಗವಾಗುತ್ತಿರುವ ರಾಜ್ಯಸಬಾ ಸೀಟುಗಳು
ಹಿಂದಿನಿಂದಲೂ ರಾಜ್ಯಸಬೆಯನ್ನು ತಮಗೆ ಬೇಕಾದವರನ್ನು ಹಿಂಬಾಗಿಲ ಮೂಲಕ ಸಂಸತ್ತಿನಲ್ಲಿ ಕೂರಿಸಿಕೊಳ್ಳುವ ಸಾದನವಾಗಿಯೇ ಹೆಚ್ಚು ಉಪಯೋಗ ಮಾಡಲಾಗಿದೆ. ರಾಜ್ಯಸಬೆಗೆ ಸ್ಪರ್‍ದೆ ಮಾಡಲು ಆ ಆಳು ಆಯಾ ರಾಜ್ಯದ ಚುನಾವಣಾ ಪಟ್ಟಿಯಲ್ಲಿ ಹೆಸರನ್ನು ಹೊಂದಿರಬೇಕು. ಈ ಒಂದು ನಿಯಮವನ್ನು ಪೂರಯ್ಸಲು ಹೊರ ರಾಜ್ಯದವರನ್ನು ಒಂದು ರಾಜ್ಯದ ಯಾವುದೋ ಒಂದು ಊರಲ್ಲಿ ವಾಸಿಸುತ್ತಿದ್ದಾರೆ ಅನ್ನುವ ಹಾಗೆ ಮಾಡಿ ಹಿಂಬಾಗಿಲಿನಿಂದ ತಮಗೆ ಬೇಕಾದವರನ್ನು ಆರಿಸಿ ಕಳಿಸುತ್ತಿದ್ದಾರೆ. ಹಾಗಾಗಿ ನಮ್ಮ ರಾಜ್ಯಕ್ಕೆ ಸಂಬಂದವೇ ಇರದ, ಇಲ್ಲಿಯ ಸ್ತಿತಿಗತಿಯ ಬಗ್ಗೆ ಅರಿವಿರದ, ಇಲ್ಲಿಂದ ಆರಿಸಿ ಹೋದರೂ ನಾಡಿಗೆ ಉಪಯೋಗವಾಗುವಂತಹ ಕೆಲಸಗಳನ್ನು ಮಾಡದ ಜನರನ್ನು ಆಯ್ಕೆಮಾಡಲು ರಾಜ್ಯಸಬೆ ಸೀಟುಗಳು ಉಪಯೋಗವಾಗುತ್ತಿವೆ. ಇಂತವರನ್ನು ಆರಿಸಲು ಶಾಸಕರಿಗೆ ವಿಪ್ ಮೂಲಕ ವೋಟು ಮಾಡಲೇ ಬೇಕು ಎನ್ನುವ ಹೆದರಿಕೆಯೂ ಸೇರಿರುತ್ತದೆ.
ಇಂತಹ ಕೆಟ್ಟ ಚಾಳಿಗೆ ಕಡಿವಾಣ ಬೀಳಬೇಕಾಗಿದೆ. ರಾಜ್ಯ ಸಬೆಗೆ ಆಯಾ ರಾಜ್ಯದ ಪ್ರಜೆಯೇ ಆಯ್ಕೆಯಾಗಬೇಕು ಎನ್ನುವ ನಿಯಮ ಜಾರಿಗೆ ಬರಬೇಕಿದೆ. ಲೋಕಸಬೆಯ ಜೊತೆಗೆ ರಾಜ್ಯಸಬೆಯ ಸದಸ್ಯರು ಜೊತೆಗೂಡಿ ಅಯಾ ರಾಜ್ಯಕ್ಕೆ ಬೇಕಿರುವ ಕೆಲಸಗಳನ್ನು, ಯೋಜನೆಗಳನ್ನು ರೂಪಿಸಿವ ಮಾಡುವ ಕೆಲಸ ಮಾಡಬಹುದು ಮತ್ತು ಈ ಮೂಲಕ ಸಂವಿದಾನದ ಆಶಯಕ್ಕೆ ಬೆಲೆಕೊಟ್ಟಂತೆ ಆಗುತ್ತದೆ.
(ಚಿತ್ರ: www.thehindu.com)
ಇತ್ತೀಚಿನ ಅನಿಸಿಕೆಗಳು