ಸರಿದ ಕತ್ತಲೆ ಹರಿದ ಬೆಳಕು – ಸಣ್ಣ ಕತೆ
ದಿಡೀರನೆ ಬಾಗಿಲು ಹಾಕಿಕೊಂಡ ಅಂಜಿನಿಗೆ ದಿಗಿಲುಶುರುವಾಯಿತು. ತಾನು ಅವಳಿಗೆ ಹೇಳಿದ್ದು ಸರಿಯಾಗಿತ್ತೇ? ನಾನು ಆ ಹುಡಿಗಿ ಹತ್ರ ಯಾಕ ಹಂಗ ಮಾತಾಡಿದೆ? ನಾನು ಹೇಳಿದ್ದು ಕೇಳಿ ಅವರು ಮತ್ತು ಅವರ ಮನೆಯವರು ತನ್ನ ಬಗ್ಗೆ ಎನು ತಿಳಿದುಕೊಳ್ಳುವುದಿಲ್ಲ. ಅವರು ಹೊರಗಿನ ಜಗತ್ತಿಗೆ ತಾನು ಹೇಳಿದ್ದನ್ನು ಹೇಳಿದ್ರ ನನ್ನ ಮರ್‍ಯಾದೆ ಏನಾಗಬೇಕು? ಇದನೆಲ್ಲಾ ಯೋಚಿಸುತ್ತಾ ಅಂಜಿನಿಗೆ ಮತ್ತಶ್ಟು ದಿಗಿಲು ಶುರುವಾತು.
ಇಶ್ಟೆಲ್ಲಾ ಎಡವಟ್ಟಿಗೆ ಕಾರಣ ಅಂಜಿನಿಗೆ ಇದ್ದ ಒಂದು ಕೆಟ್ಟ ಚಾಳಿ. ಹಾಗೆ ನೋಡಿದರೆ ಅಂಜಿನಿ ಅನ್ನೋ ಹೆಸ್ರು ಅವ್ರ ಮನ್ಯಾಗ ಕರೀತಿದ್ರು. ಆಪಿಸ್ ನ್ಯಾಗ ಅವ ಆಂಜನೇಯ ಪ್ರಸಾದ್. ಕರಡಿಗುಡ್ಡದ ಹನುಮಪ್ಪನ ದಯದಿಂದ ಹುಟ್ಟಿದ ಮಗ ಅಂತ ಅವರವ್ವ ಹನುಮಪ್ಪ ಅಂತ ಹೆಸರು ಇಟ್ಟಿದ್ಲು. ಶಾಲಿಗೆ ಸೇರುಸೋ ಮುಂದ ಅಲ್ಲಿದ್ದ ಶಾಲಿ ಮಾಸ್ತಾರು ’ಬೇ ಯವ್ವಾ ಈಗಿನ್ ಸಾಲಿ ಹುಡುಗ್ರು ಇಂತ ಹೆಸುರು ಇಟ್ಕೋಳ್ಳೋದುಲ್ಲ ನಾಳೆ ದೊಡ್ಡೋರಾದ್ಕುಳೇ ಇಂತಾ ಹೆಸರೆಯಾಕಿಟ್ಟಿಬೇ ಅಂತ ನಿನಗ ಜೋರ್ ಮಾಡ್ತಾರ ನೋಡು”ಅಂತ ಅಂದಿದ್ರು ಅದಕ್ಕ ಅವರವ್ವ ಹಾಂಗಾರ “ಯಪ್ಪಾ ಈ ಹುಡುಗ ಹನುಮಪ್ಪನ ದಯಾದಿಂದ ಹುಟ್ಯಾನ ನೀನ ಅತನ ಹೆಸರು ಬರುವಂಗ ಒಂದು ಹೆಸರು ಇಡು” ಅಂತ ಅಂದಿದ್ಲು. ಅವತ್ತು ಮೇಶ್ಟ್ರಿಗೆ ಹೊಳೆದ ಹೆಸರ “ಆಂಜನೇಯ ಪ್ರಸಾದ್”.
ಶಾಲ್ಯಾಗ ಅಂಜಿನಿ ಏನ್ ದೊಡ್ಡ ಶಾಣ್ಯಾ ಇದ್ದಿಲ್ಲ. ಹತ್ತರಾಗ ಹನ್ನೊಂದು ಅನ್ನೋ ಹಂಗ, ಶಾಲ್ಯಾಗ ಇದಾನೋ ಇಲ್ಲೋ ಅನ್ನುದು ಸಯ್ತ ಗೊತ್ತಾಗಲಾರದಂಗ ಬೆಳೆದ. ಅವರಪ್ಪನಗೂಡಿ ಹೊಲಕ್ಕ ಹೊಕ್ಕಿದ್ದ, ದನ ಮೇಯ್ಸಾಕ ಹೊಕ್ಕಿದ್ದ, ಹುಡ್ರಗೂಡಿ ಈಜಾಕ ಹೊಕ್ಕಿದ್ದ. ಹಿಂಗ ತನ್ನ ಲೋಕದಾಗನ ಹತ್ತನೇತ್ತ ಮುಗಿಸಿದ. ಹನುಮಪ್ಪಗ ಮಾಡಿದ ಪೂಜೇನೋ ಇಲ್ಲಾ ಇವನ ಬಾಳ ಓದಿದ್ನೋ ಪಸ್ಟ್ ಕ್ಲಾಸ್ ದಾಗ ಪಾಸ್ ಮಾಡಿದ್ದ. ಮುಂದ ಇವ ದೊಡ್ಡ ಮನಿಶಾ ಆಗಬೇಕು ಅಂತ ಕನಸು ಕಂಡಿದ್ದ ಇವರ ಅಪ್ಪಾಅವ್ವುಗ ಅಂಜಿನಿನ ದೊಡ್ಡೂರಿಗೆ ಕಳಿಸಿ ಓದಬೇಕು ಅಂತ ಮನಸು. ಅಂಜಿನಿಗೂ ಸಯ್ತ ತಾನು ಪ್ರಪಂಚ ನೋಡ್ಬೇಕು ಅನ್ನೋ ಆಸೆದಾಗ ತನ್ನೂರು ಬಿಟ್ಟು ದೊಡ್ಡೂರು ಸೇರಿದ.
ಕಾಲೇಜಿನ ಹಾಸ್ಟಲ್ ನ್ಯಾಗ ಇವನಿಗಿಂತ ಹೆಚ್ಚು ಮಾರ್‍ಕ್ಸ್ ತಗೊಂಡಿರೋ ಹುಡುಗ್ರು, ಜಸ್ಟ್ ಪಾಸಾಗಿ ಡೊನೇಶನ್ ಕೊಟ್ಟು ಬಂದಿರೋ ಹುಡುಗ್ರು, ತನ್ನಾಂಗ ಬಂದಿರೋ ಹಳ್ಳಿ ಹುಡುಗ್ರು ಇವರ್‍ನೆಲ್ಲ ನೋಡಿ ಗಾಬರಿ ಬಿದ್ದ. ತಾನಿದ್ದ ಸಾಲ್ಯಾಗ ಮೇಶ್ಟ್ರಿಂದ ಹಿಡುದು ತನ್ನ ಕ್ಲಾಸಿನ್ಯಾಗಿದ್ದ ಎಲ್ಲಾ ಹುಡುಗ್ರು ಹುಡ್ಗೀರು ಅವ್ರ ಅಪ್ಪಾ ಅವ್ವಾ ಎಲ್ಲಾರೂ ಗೊತ್ತಿದ್ರು. ಆದ್ರ ಇಲ್ಲಿ ಇಶ್ಟು ದೊಡ್ಡ ಊರಾಗ ತಾನೊಬ್ಬನ ಅದಿನೀ ಅನ್ನೋ ಬಾವನೆ ಕಾಡಾಕ ಸುರುವಾತು. ಯವಾಗ್ಲೂ ಇಲ್ಲದ ಅಪ್ಪ ಅವ್ವನ ನೆನಪು. ಗೆಳೆಯರ ನೆನುಪು, ಊರು ಹನುಮಪ್ಪನ ಗುಡಿ ಎಲ್ಲಾ ನೆನೆಪಾಗುತಿದ್ವು. ದಿನಾ ಒಂಟಿತನ ಕಾಡಿದ ಪರಿಣಾಮ ಕಾಲೇಜ್ ಸುದ್ದಿನಾ ಬ್ಯಾಡ ಅಂತ ಒಂದು ಸರ್‍ತಿ ಅಂಜಿನಿ ರಾತ್ರಿ ಊರಿಗೆ ವಾಪಸ್ ಹೋಗಿದ್ದ. ರಾತ್ರೋ ರಾತ್ರಿ ಬಂದ ಮಗನ್ನ ನೋಡಿ ಅವನ ಅಪ್ಪಾ ಅವ್ವ ಗಾಬರಿ ಬಿದ್ರು. ಅವರ ಊರಿನ ಸಾಲಿ ಹೆಡ್ ಮಾಸ್ತರ್ ಬಂದು ದಯ್ರ್ಯ ಹೇಳಿದ್ ಮ್ಯಾಲೆ ಮತ್ತೆ ಕಾಲೇಜಿಗೆ ಬಿಟ್ಟು ಬಂದ್ರು.
ಮುಂದ ಕಾಲೇಜು, ಊರು, ಓದು ಎಲ್ಲಾ ಅಬ್ಯಾಸ ಆದ್ವು. ತನಗೂ ಓದಿ ಏನಾರ ಸಾದಿಸಬೇಕು ಅನ್ನೋ ಚಲ ಹುಟ್ಟಿತು ಅಂಜಿನಿಗೆ ಹಂಗಾಗಿ ಓದೋದಕ್ಕ ಶುರು ಮಾಡಿದ. ಕಾಲೇಜಿನ್ಯಾಗ ಹುಡುಗೀರ್ ಕೂಡ ತಾನು ಮಾತಾಡಬೇಕು ಅವರ ಗೆಳೆತನ ಮಾಡಬೇಕು ಅನ್ನೋ ಆಸೆ, ಆದ್ರ ದಯ್ರ್ಯ ಸಾಲಂಗಿಲ್ಲ. ಬ್ಯಾರೆ ಹುಡುಗ್ರು ಹುಡುಗೀರ್ ಕುಡ ಮಾತಾಡೋದನ್ನ ನೋಡಿ ಹೆಂಗ ಮಾತಾಡ್ತಾರಲ್ಲ ಇವ್ರು ಅಂತ ಆಶ್ಚರ್‍ಯ ಪಡ್ತಿದ್ದ. ಇವನ ಜೊತಿಗಿದ್ದ ಗೆಳ್ಯಾರು ಸಯ್ತ ಇವಗ ಜೋಕ್ ಮಾಡ್ತಿದ್ರು ಇವನ ಈ ಚಾಳಿ ನೋಡಿ, “ಆಂಜನೇಯ ಅಂತ ಹೆಸರು ಇಟ್ಗೊಂಡ್ರ ಹುಡುಗೀರ್‍ನ್ ಮಾತಾಡಿಸಬಾರ್‍ದು ಅಂತ ನಿರ್‍ದಾರ ಮಾಡಿಯೇನೋಲೇ? ನನ್ನ ಹೆಸರು ಕ್ರಿಶ್ಣ ಅಂತ ಅಯ್ತಿ ಈಗ ನಾ ಯೇನ್ ಹದಿನಾರು ಸಾವಿರ ಮಂದಿ ಹುಡುಗಿರ್‍ನ್ ಇಟ್ಕೋಬೇಕೇನು ಅಂತ ಅವನ ಗೆಳೆಯ ಕ್ರಿಶ್ಣ ಅಶಾಡುತ್ತಿದ್ದ”. ಅಂಜಿನಿ ಮನಿಸಿನ್ಯಾಗನ ಕೊರಗುತ್ತಿದ್ದ. ಯಾಕೋ ಈ ಊರಾಗ ತನಗ ಹೊಂದಿಕಿ ಆಗೋ ಗೆಳ್ಯಾರ ಸಿಕ್ಕಿಲ್ಲ ಅಂತ ಅನಿಸುತ್ತಿತ್ತು ಅವಗ. ತನ್ನ ಊರಿನ ಸಿದ್ದರಾಮ, ಮಹದೇವ, ಸುರೇಶ, ಮಾದ ಎಲ್ಲರೂ ನೆನಪು ಬರ್‍ತಿದ್ರು. ಹೆಸರಿಗೆ ಜೊತೆಗೆ ಇದ್ರೂ ತನ್ನ ಮನಸಿನ್ಯಾಗಿಂದು ಹೇಳ್ಕೊಳ್ಳಾಕ ಯಾರು ಸಿಕ್ಕಿಲ್ಲ ಅವಗ. ಒಂಟಿ ಇದ್ದೋರಿಗೆ ಪುಸ್ತಕ ಜೊತೆಗಾರರು ಅಂತ ಯಾರೋ ಹಿಂದೆ ಹೇಳಿದ್ದ ಮಾತು ಅವನ ಮನಸ್ಸಿನೊಳಗ ನೆಟ್ಟಿತ್ತು. ಮೊದ ಮೊದಲು ಕನ್ನಡದ ಕತೆಗಳು ಅವನಿಗೆ ಒದುವುದಕ್ಕೆ ಇಶ್ಟವಾದ್ವು. ಬರ್‍ತಾ ಬರ್‍ತಾ ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿ, ಅನಂತಮೂರ್‍ತಿ ಹೀಗೆ ಕನ್ನಡ ಸಾಹಿತ್ಯ ಅವನ ಹಿಡಿತಕ್ಕೆ ಸಿಕ್ಕುತ್ತಾ ಹೋಯಿತು. ಅವನ ಓದುವ ಗಾತ್ರದ ಜೊತೆಗೆ ಅವನ ಅಂಜಿಕಿ ಕಡಿಮಿ ಆಗ್ತಾ ಬಂತು. ಮತ್ತೆ ಕಾಲೇಜಿನ್ಯಾಗ ಚಿಗುರೊಡೆದ. ಕಾಲೇಜಿನ ಚರ್‍ಚೆ, ಪ್ರಬಂದ, ಕ್ವಿಜ್ ಎಲ್ಲಾದರಲ್ಲೂ ಅವನೇ ಮುಂದೆ. ಹಿಂದಿನ ಹಂಗೆ ಹುಡುಗೀರ ಜೊತೆ ಮಾತಾಡೋಕೆ ಹೆದರುತಿದಿಲ್ಲ. ಕಾಲೇಜಿನ ಕೆಲವು ಹುಡುಗೀರು ತನ್ನ ಇಶ್ಟ ಪಡ್ತಾರ ಅಂತ ಗೊತ್ತಾದಾಗ ಮನಸಿನಾಗೆ ಹಿರಿ ಹಿರಿ ಹಿಗ್ಗಿದ್ದ, ಆದ್ರೆ ಮುಂದುವರೆಯುವ ದಯ್ರ್ಯ ಬಂದಿರಲಿಲ್ಲ. ಓದು ಚೆನ್ನಾಗಿ ನಡೀತಿತ್ತು. ಪಿಯುಸಿ ಪಾಸ್ ಮಾಡಿಕೊಂಡ. ಇಶ್ಟೇ ಆಗಿದ್ರ ನಮ್ಮ ಅಂಜಿನಿ ಇವತ್ತು ಬಂದಿರೋ ಗತಿ ಬರ್‍ತಿದ್ದಿಲ್ಲ.
ಮುಂದ ಡಿಗ್ರೀ ಸೇರಿದ ಮ್ಯಾಲೆ. ಅದು ಇದು ಓದಿದ್ದು ಬಹಳ ಆತೋ ಇಲ್ಲಾ ಅವನ ತಲಿಗೆ ಯಾರು ತುಂಬಿದ್ರೋ ಅಂಜಿನಿಗೆ ಮಯ್ಂಡ್ ರೀಡಿಂಗ್ ಕಲಿಬೇಕು ಅನ್ನೋ ಆಸೆ ಹುಟ್ಟಿತ್ತು. ಎದುರಿಗಿರೋರ ಮನಸಿನ್ಯಾಗಿಂದು ತಿಳಿಕೊಳ್ಳೋದಂದ್ರ ದೇವ್ರ ವಿದ್ಯಾನೇ ಸರಿ ಅಂತ ಅನ್ನಿಸಿತು ಅವನಿಗೆ. ಸರಿ ಕಲಿಬೇಕು ಅಂದ್ರ ಅದನ್ನ ಕಲಿಸೋರು ಯಾರು? ಅವನಿಗೆ ಗುರ್‍ತು ಪರಿಚಯದಾಗ ಯಾರೂ ಇರ್‍ಲಿಲ್ಲ. ಹಂಗಾಗಿ ಕೊನಿಗೆ ಅವನಿಗೆ ಮತ್ತೆ ಬುಕ್ ಓದೋದೇ ದಾರಿ ಆತು. ಇದರ ಜೊತಿಗೆ ಇಂಟರ್‍ನೆಟ್‍ನ್ಯಾಗ ವಿಡಿಯೋಸ್, ಬರಹ ಸಿಕ್ವು. ಹಂಗು ಹಿಂಗು ಮಾಡಿ ತಾನು ಮಯ್ಂಡ್ ರೀಡಿಂಗ್ ಕಲತೇನಿ ಅನ್ನೋ ಬಾವನೆ ಅವನಿಗೆ ಬಂತು. ಕಲಿತಿದ್ದು ಪ್ರಯೋಗ ಮಾಡ್ಬೇಕಲ್ಲಾ? ಅವನ ಗೆಳೆಯರು, ಪಕ್ಕದ ರೂಮಿನ ಹುಡುಗರ ಮೇಲೆ ತನ್ನ ಮಯ್ಂಡ್ ರೀಡಿಂಗ್ ವಿದ್ಯೆ ಪ್ರಯೋಗಕ್ಕೆ ನಿಂತ. ಅಂಜಿನಿ ನಿಜಕ್ಕೂ ಚೆನ್ನಾಗೆ ಕಲಿತಿರಬೇಕು ಅಂತ ಕಾಣ್ಸುತ್ತಾ ಅವ ಏನು ಹೇಳಿದ್ರು ಹುಡುಗ್ರು ನೀ ಹೇಳಿದ್ದು ನಿಜ ಅಯ್ತಿ ಅಂತ ತಲಿ ಆಡಿಸುತಿದ್ವು. ಅಂಜಿನಿ ಕುಶಿಗೆ ಆಕಾಶ ಒಂದೇ ಗೇಣು. ಅವನ ಪ್ರಸಿದ್ದಿ ಕಾಲೇಜಿನ ಹುಡುಗೀರು ಸಯ್ತ ಬಂದು ಅವನ ಮುಂದೆ ನಿಲ್ಲುವ ಮಟ್ಟಿಗೆ ಬಂತು. ಎಲ್ಲರೂ ಬಂದು ನನ್ನ ತೆಲ್ಯಾಗ ಏನಯ್ತಿ ಹೇಳು ಅಂತ ನಿಂದಿರುತಿದ್ರು. ಕೇಳಿದ ಒಂದಿಶ್ಟು ಮಂದಿ, ಅವ ಮುಂದ ಹೋದ ಕೂಡ್ಲೇ ಮುಸಿ ಮುಸಿ ನಗುತಿದ್ವು. ಅವನ ಬೆನ್ನ ಹಿಂದೆ ನಗುತ್ತಿದ್ದವರ ಗುಂಪು ಅಂಜಿನಿಗೆ ಕಾಣಿಸಲಿಲ್ಲ. ಹಿಂಗ ಕಾಲೇಜಿನ್ಯಾಗಿದ್ದ ಮೂರು ವರ್‍ಶ ಅಂಜಿನಿ ಹೀರೋ ಅಂತನಾ ಮೆರೆದ ಅತವಾ ತಾನು ಹಾಗಿದೀನಿ ಅಂತ ಅಂದುಕೊಂಡಿದ್ದ.
ಮುಂದೆ ಕೆಲಸಾನೂ ಸಿಕ್ತು. ಇವನ ಏಳಿಗೆ ಕಂಡ ಅವರ ಅಪ್ಪಾ ಅವ್ವ ಮಗ ಚೊಲೋ ಜೀವನ ನಡಸಾಕತ್ಯಾನ ಮದಿವಿ ಒಂದು ಮಾಡಿಬಿಡೋಣು ಅಂತ ನಿರ್‍ದಾರ ಮಾಡಿದ್ರು. ಸುದ್ದಿ ಅಂಜಿನಿಗು ಮುಟ್ಟಿತು. ವಯಸ್ಸಿಗೆ ಬಂದಿದ್ದ ಹುಡುಗ ಮದಿವಿ ಯಾಕ ಒಲ್ಲೆ ಅಂತಾನ? ತಾನು ಮದುವಿ ಆಗೋ ಹುಡುಗಿ ಹಂಗ ಇರಬೇಕು, ಹಿಂಗ ಇರಬೇಕು ಅಂತ ಹಗಲು ಗನಸು ಕಾಣೋಕೆ ಶುರುಮಾಡಿದ್ದ. ಒಳ್ಳೆ ನವ್ಕರಿ ಇದ್ದ ಮಗಗ, ಓದಿದ ಹುಡುಗೀನ ತರಬೇಕು ಅಂತ ಅಂಜಿನಿ ಅಪ್ಪಾ ಅವ್ವ ಹೆಣ್ಣು ಹುಡುಕಾಕ ಶುರುಮಾಡಿದ. ಹಿಂಗಿದ್ದಾಗ ಒಂದು ದಿನ ಅಂಜಿನಿ ಮತ್ತ ಅವರ ಗೆಳ್ಯಾರು ಕೂಡಿದಾಗ ಹಳೇದು ಮಾತಾಡಿಕೋತ ಇದ್ದಾಗ ಅವನ ಗೆಳೆಯ ಶ್ರೀದರ ಅಂಜಿನಿ ಮಯ್ಂಡ್ ರೀಡಿಂಗ್ ಎಪಿಸೋಡ್ ನೆನಪು ಮಾಡಿಕೊಂಡು “ಅಂಜಿನಿ ನೀ ಮಯ್ಂಡ್ ರೀಡಿಂಗ್ ಚಾಳಿ ಬಿಟ್ಟಿಯೋ ಇಲ್ಲೋ” ಅಂತ ಕೇಳಿದಾಗ, ಯಾಕ ಇವಾ ಹಿಂಗ ಕೇಳಾಕತ್ತಾನ ಅಂತ ಅಂಜಿನಿ “ಕಾಲೇಜು ಆದ್ ಮ್ಯಾಲೆ ಯಾರ ಮೇಲು ಪ್ರಯೋಗ ಮಾಡಿಲ್ಲ” ಅಂತ ಅಂದ. ಇದನ್ನ ಕೇಳಿ ನಕ್ಕ ಉಳಿದ ಗೆಳೆಯರು “ಸದ್ಯ ಯಾರ್ ಮೇಲೂ ಮಾಡಾಕ ಹೋಗ್ ಬ್ಯಾಡ, ಮಾಡಿದೆಂದ್ರ ಹುಚ್ಚು ಮಂಗ್ಯಾ ಅಕ್ಕಿ” ಅಂತ ನಕ್ಕರು. ಅಂಜಿನಿಗೆ ಅರ್‍ತ ಅಗ್ಲಿಲ್ಲ. ಯಾಕ ಏನಾತು ಅಂತ ಕೇಳಿದ್ರ “ಅಯ್ಯೋ ಮಾರಾಯ ಕಾಲೇಜಿನ್ಯಾಗ ನೀ ಮಾಡ್ತಿದ್ದ ಮಯ್ಂಡ್ ರೀಡಿಂಗ್ ಗೇಮ್ ನಾವು ಸುಮ್ನ ತಮಾಶಿ ಅನ್ಕೊಂಡ್ವಿ. ನೀ ಏನ ಹೇಳಿದ್ರು ನಾವು ನೀ ಹೇಳಿದ್ದು ನಿಜ ಅಯ್ತಿ ಅಂತ ಹೇಳಿ ಮಜಾ ತಗೊಂಡ್ವಿ. ಬೇಕಂತಾನ ಹುಡುಗೀರ್‍ನ ನಿನ್ನ ಕಡೆ ಕಳಿಸಿ ಹೇಳು ಅಂತ ಹೇಳಿಸುತಿದ್ವಿ” ಅಂತ ಅಂದಾಗ ಅಂಜಿನಿಗೆ ಅವರ ಮಾತು ನಂಬೋದಕ್ಕೆ ಆಗ್ಲಿಲ್ಲ. ಅಂಜಿನಿಗೆ ತಾನು ಬೂಮಿಯೊಳಗ ಕುಸುದು ಹೊಂಟೀನಿ ಅನ್ನೋ ಅನುಬವ. ಇಲ್ಲಿವರೆಗೂ ತಾನು ಯಾವುದರ ಬಗ್ಗೆ ಹೆಮ್ಮೆ ಪಡ್ತಿದ್ನೋ ಅದು ಸುಳ್ಳೂ ಅನ್ನೋದು ಗೊತ್ತಾದಾಗ ಏನು ಮಾಡಬೇಕು ಅಂತಾನ ಗೊತ್ತಾಗಲಿಲ್ಲ. ಅಲ್ಲಿಂದ ಎದ್ದು ಸೀದಾ ಮನಿಗೆ ಬಂದಾವ ಬಾಗಿಲು ಹಾಕ್ಕೊಂಡು ಯೋಚನಿ ಮಾಡಕ ಶುರು ಮಾಡಿದ. ತನ್ನ ಗೆಳ್ಯಾರು ಇವತ್ತು ಹೇಳಿದ್ದು ನಿಜ ಅಯ್ತೇನು? ಇಲ್ಲಾ ಅವರೇ ಸುಳ್ಳು ಹೇಳ್ತಿರಬೇಕು ಅನ್ನೋ ಸಂಶಯ. ಇಲ್ಲಿ ತನಕಾ ತಾನು ಮಂದಿಗೆ ಜೋಕರ್ ಆಗಿದ್ನೇನು? ಹೀಗೆ ಹಲವಾರು ಪ್ರಶ್ನೆ ತೆಲಿಯೊಳಗ. ಬೆಳಕೂ ಹರಿದರೂ ತನ್ನ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಅಂಜಿನಿ ಅಹಂಗೆ ಪೆಟ್ಟು ಬಿದ್ದಂತಾಗಿತ್ತು. ತನಗೆ ಮಯ್ಂಡ್ ರೀಡಿಂಗ್ ಗೊತ್ತು ಅನ್ನೋ ನಂಬಿಕೆಯೇ ಬಲವಾಗಿ ಹೋಯ್ತು.
ಸರಿ ತನ್ನ ಅಹಂ ಅನ್ನ ಸಮಾದಾನಗೊಳಿಸೋದಕ್ಕೆ, ತನಗೆ ಮಯ್ಂಡ್ ರೀಡಿಂಗ್ ಗೊತ್ತು ಅನ್ನೋದನ್ನ ಕಚಿತ ಮಾಡ್ಕೋಳ್ಳೋದಕ್ಕ ತನ್ನ ಅಪಿಸಿನ್ ಪ್ಯೂನ್ ರಾಮಪ್ಪನ ಒದರಿದ. ಎಂದೂ ಸಿಟ್ಟಾಗದ ಸಹೇಬರು ಯಾಕೆ ಸಿಟ್ಟಾಗಿದ್ದಾರೆ ಅಂತ ಹೆದರಿಕೊಂಡು ಬಂದು ನಿಂತ ಪ್ಯೂನ್ ನೋಡಿ “ರಾಮಪ್ಪ ನನಗ ಗೊತ್ತು ನೀ ನನ್ನ ನೋಡಿ ಹೆದರಿಕೊಂಡೀದಿ. ನಾ ನಿನಗ ಏನು ಮಾಡಂಗಿಲ್ಲ. ಈಗ ನಿನ್ನ ಮನಸಿನ್ಯಾಗ ಏನಯ್ತಿ ಅಂತ ಹೇಳ್ತೀನಿ ನೋಡು” ಅಂತ ಅಂದ ಅಂಜಿನಿಯನ್ನ ನೋಡಿ ರಾಮಪ್ಪಗ ಇನ್ನೂ ದಿಗಿಲಾತು. “ರಾಮಪ್ಪ ನಿನ್ನ ಮನ್ಯಾಗ ಬಾಳ ತ್ರಾಸಯ್ತಿ… ನಿನ್ನ ಮಕ್ಕಳ ಬವಿಸ್ಯದ ಬಗ್ಗೆ ನಿಂಗ ಚಿಂತಿ ಅಯ್ತಿ” ಹೀಗೆ ಏನೋ ಹೇಳುತ್ತಿದ್ದ ಅಂಜಿನಿಯನ್ನ ನೋಡಿ ಹೆದರಿಕೆಯಾಗಿ ಅಲ್ಲಿಂದ ಓಡಿ ಹೋದ. ಹೋದವನು ಸುಮ್ನೆ ಇರತಾನೇನು? ಇಡೀ ಆಪಿಸಿನಲ್ಲಿ ನಡೆದ ಗಟನೆಗೆ ತನ್ನ ಒಂದಿಶ್ಟು ಮಸಾಲೆ ಸೇರಿಸಿ ಹೇಳಿದ. ತಗೋ ಅಪಿಸಿಗೂ ಇಶ್ಟೇ ಸಾಕಿತ್ತು. ಕಡ್ಡಿ ಹೋಗಿ ಗುಡ್ಡ ಆಗಿತ್ತು. ಯಾರೇ ಪಯ್ಲ್ ಹಿಡಿದು ಅಂಜಿನಿ ಹತ್ತಿರ ಹೋದರು ಒಂದು ರೀತಿ ನೋಡೋದು ಹೆಚ್ಚಿನ ಸವ್ಜನ್ಯ ತೋರ್‍ಸೋದು ಅಂಜಿನಿ ಗಮನಕ್ಕೂ ಬಂತು. ಇದು ತಿರುಗಿ ಸಿಟ್ಟಿಗೆ ಕಾರಣವಾಗುತ್ತಿತ್ತು. ಕಡ್ಡಿ ಮತ್ತೊಂದು ಗುಡ್ಡಿ ಆಗಿತ್ತು. ಆಪಿಸಿನ ರೇಗಾಟ ಅವನ ಹಿರಿಯರವರೆಗೂ, ಅವನ ಅಪ್ಪ ಅವ್ವನಿಗೂ ತಿಳಿಯಿತು.
ಅಂಜಿನಿಗೆ ಹುಚ್ಚು ಹಿಡಿಯುವುದೊಂದೇ ಬಾಕಿ. ಅಪ್ಪಾ ಅವ್ವನಿಗೆ ಮಗನ ಚಿಂತೆಯಾಯಿತು. ಮದಿವಿ ಆದ್ರ ಸರಿ ಹೋಗ್ತಾನ ಅಂತ ಅವರು ಹೆಣ್ಣು ಹುಡುಕೋದು ಹೆಚ್ಚು ಮಾಡಿದರು. ಇತ್ತ ಆಪೀಸಿನಲ್ಲಿ ತನ್ನ ಹಿಂದೆ ನಗುವುದು ಜಾಸ್ತಿ ಆದಾಗ ಆಪೀಸಿಗೆ ಹೋಗುವುದನ್ನೇ ಕಡಿಮೆ ಮಾಡಿದ್ದ. ಎದುರಿಗೆ ಯಾರೇ ಸಿಕ್ಕರೂ ಅವರು ತನ್ನ ನೋಡಿ ನಗುತ್ತಿದ್ದಾರೆ ಅಂದು ಕೊಳ್ಳುತ್ತಿದ್ದ. ತನಗೆ ಹುಚ್ಚು ಹಿಡಿದಿದೆ ಅಂತ ಎದುರಿಗಿದ್ದವರು ತಿಳಿದುಕೊಂಡಿದ್ದಾರೆ ಅಂತ ಅಂದು ಕೊಳ್ಳುತ್ತಿದ್ದ. ಮನಸ್ಸಿಗೆ ಸಮಾದಾನವಿಲ್ಲ. ತನ್ನ ನಂಬಿಕೆಯ ಸವ್ದವನ್ನೇ ಎಲ್ಲರೂ ಕೆಡವಲು ಸಂಚು ಮಾಡಿದ್ದಾರೆ ಅಂತ ಅನ್ನಿಸುತ್ತಿತ್ತು. ಮತ್ತೆ ಹೇಳಿಕೊಳ್ಳಲು ಯಾರೂ ಗೆಳೆಯರಿಲ್ಲ ಅನ್ನೋ ಕೊರಗು.
ಹೀಗಿದ್ದಾಗಲೇ ಒಂದು ದಿನ ಅಪ್ಪಾ ಅವ್ವ ಒತ್ತಾಯ ಮಾಡಿದರು ಅಂತ ಒಂದು ಹುಡುಗಿಯನ್ನು ನೋಡಲು ಹೋದ. ಮನೆಯಲ್ಲಿ ಬೇಡವೆಂದು ಪಾರ್‍ಕಿನಲ್ಲಿ ಸಿಗೋಣ ಅಂತ ಹುಡುಗಿಗೆ ಹೇಳಿದ್ದ. ಹುಡುಗಿ ನೋಡಲು ನಿಜಕ್ಕೂ ಚಂದವಾಗಿದ್ಲು. ಆದರೆ ಅಂಜಿನಿಗೆ ಯಾಕೋ ಅವಳು ತನ್ನ ಅಣಿಕಿಸುತ್ತಿದ್ದಾಳೆ, ತನ್ನ ನೋಡಿ ನಗುತ್ತಿದ್ದಾಳೆ ಅಂತ ಅನ್ನಿಸೋಕೆ ಶುರುವಾಯಿತು. ಏನು ಮಾತಾಡಿದನೋ ಅವನಿಗೆ ನೆನಪಿಲ್ಲ, ಅವಳು ಏನು ಕೇಳುತ್ತಿದ್ದಾಳೆ ಅನ್ನೋದು ಸರಿಯಾಗಿ ಕೇಳಿಸುತ್ತಿಲ್ಲ. ಏನಾಯಿತೋ ಏನೋ ಏಕಾಏಕೀ ಎದ್ದು ನಿಂತು “ನೀವು ನಿಮ್ ಮನಸಿನ್ಯಾಗ ಏನ್ ಅಂದುಕೊಂಡಿರೋ ಅದು ಹಂಗಿಲ್ಲ” ಅಂತ ಹೇಳಿದ. ಇವನ ಮಾತು ಕೇಳಿ ಗಾಬರಿ ಬಿದ್ದ ಅವಳು ಏನೊಂದು ಗೊತ್ತಗದ ಅವನತ್ತ ನೋಡಿದಳು. “ನಾನು ಗಂಡಸು ಅದಿನಿ, ನೀ ನನ್ನ ಶಂಡ್ ಅಂತ ಅನಕೊಂಡ್ರ ನಾ ಆಗೋದಿಲ್ಲ. ನೀ ಬ್ಯಾರೆ ಯಾರನ್ನೋ ಪ್ರೀತಿ ಮಾಡಿ. ನಿನಗೆ ಅವಗಾ ಸಂಬಂದ ಅಯ್ತಿ. ನಿಮ್ಮನ್ಯಾಗ ಒಪ್ಪಿಲ್ಲ ಅಂತ ನನ್ನ ಮದಿವಿ ಮಾಡ್ಕೋಳ್ಳಾಕ ಬಂದಿ” ಅಂತ ಅಂದ. ಇದನ್ನು ನಿರೀಕ್ಶಿಸಿರದಿದ್ದ ಅವಳು ಗಾಬರಿಯಾಗಿ ಅಂಜಿನಿ ಯಾಕ ಹಿಂಗ್ ಮಾತಾಡಿದ ಅಂತ ಗೊತ್ತಾಗಲಿಲ್ಲ. ಅವ ಇನ್ನೂ ಏನೋ ಹೇಳ್ಕೋತ ನಿಂತಾವನ್ನ ಅಲ್ಲೇ ಬಿಟ್ಟು ಸಿಟ್ಟಾಗಿ ಎದ್ದು ಹೋದ್ಲು.
ಈ ಗಟನೆಯೇ ಅಂಜಿನಿ ದಿಗಿಲಿಗೆ ಕಾರಣವಾಗಿತ್ತು. ಆ ಹುಡುಗಿ ತನ್ನ ಮನೆಯವರಿಗೂ, ಅವರ ಮನೆಯವರಿಗೂ ಹೇಳಿ ದೊಡ್ಡ ರಂಪ ಮಾಡ್ತಾಳ ಅಂತ ಅಂಜಿನಿ ಹೆದರಿ ಕುಂತಿದ್ದ. ಇದ ಯೋಚನಿಯೊಳಗ ಅವಗ ನಿದ್ದಿನ ಹತ್ತಿರಲಿಲ್ಲ. ಬೆಳಿಗ್ಗೆ ಅಪ್ಪ ಅವ್ವ ಪೋನ್ ಮಾಡಿ ಆ ಹುಡಿಗೆ ನಿನ್ನ ಒಲ್ಲೆ ಅಂದ್ಲು ಅಂದಾಗ. ಒಂದು ಕಡೆ ಸಮಾದಾನ ಆದ್ರೂ ಇನ್ನೊಂದು ಕಡೆ ನಾ ಮಾಡಿದ್ದು ಸರಿಯೇನು? ಎಲ್ಲಾರು ಹಿಂಗ ನನ್ನ ಹಿಂದೆ ನಗೋದಕ್ಕ ಕಾರಣ ಏನು? ನಾನು ಎಲ್ಲದ್ರೂ ದೂರ ಹೋಗ್ಲೇನು? ದೂರ ಹೋದ್ರು ನನ್ನ ಈ ಯೋಚನೆಗಳು ನನ್ನ ಸುಮ್ನೆ ಬಿಡ್ತಾವೇನು? ಹಿಂಗ ನೂರಾರು ಪ್ರಶ್ನೆ ಅವನ್ನ ಕಾಡಕ್ಕ ಶುರುಮಾಡಿದ್ವು.
ಇದ್ದಕ್ಕಿದ್ದಾಂಗ ಊರು ನೆನಪಾತು. ಹಿಂದಿನ ಬಾಲ್ಯದ ದಿನಗಳು, ಅಪ್ಪಾ, ಅವ್ವ ಅವರ ಪ್ರೀತಿ, ಗೆಳೆಯರು, ಹನುಮಪ್ಪನ ಗುಡಿ, ಕೆರೆ. ಊರಿಗೆ ಹೋಗಿ ಬಿಡಬೇಕು ಅನ್ನೋ ಬಲವಾದ ಆಸೆ ಅಂಜಿನಿಗೆ. ಇದ್ದಕ್ಕಿದ್ದಂತೆ ಊರಿಗೆ ಬಂದ ಮಗನನ್ನು ನೋಡಿ ಹೆತ್ತವರಿಗೆ ಆಶ್ಚರ್‍ಯ ಆದ್ರೂ ಬಹಳ ದಿನದ ಮ್ಯಾಲೆ ಮಗಾ ಬಂದಾನ ಅನ್ನೋ ಸಂತೋಶ. ಇಲ್ಲಿ ಬಂದ್ರೂ ಅಂಜಿನಿಗೆ ಸಮಾದಾನ ಇದ್ದಿದ್ದಿಲ್ಲ. ಮಗನ್ನ ನೋಡಿ ಗಾಬರಿಯಾಗಿದ್ದ ಅವ್ವ ಒಂದು ದಿನ “ಮಗಾ ಮೊದಲು ನೀ ಹಿಂಗಿದ್ದಿಲ್ಲ. ನಿನಗೇನಾರ ತ್ರಾಸ್ ಇದ್ರ ನನ್ನ ಹತ್ರ ಹೇಳು. ಆಗೋದಿಲ್ಲ ಅಂದ್ರ ಹನುಮಪ್ಪ ಅದಾನ, ಅವನ ಕಡಿಗೆ ಹೇಳು. ಅವನ ದಯಾದಿಂದಲೇ ನೀ ಹುಟ್ಟಿದೀ. ಅವನಾ ನಿನ್ನ ಕಾಯ್ತಾನ” ಅಂತ ಅಂದ್ಲು. ಅಂಜಿನಿಗೂ ಯಾಕೋ ಅವ್ವನ ಮಾತು ನಿಜ ಅನ್ನಿಸಿತು. ಹಿಂದೆ ತಾನು ಹನುಮಪ್ಪನ ಪೂಜೆ ಮಾಡ್ತಿದ್ದಿದ್ದು ಎಲ್ಲಾ ನೆನಪಾತು. ಮೊದಲಿನಿಂದಲೂ ಅವನಿಗೆ ಹನುಮಪ್ಪನ ಮೇಲೆ ಇದ್ದ ಪ್ರೀತಿ ಈಗ ಎದುರಿಗೆ ಬಂತು.
ಸೀದಾ ಎದ್ದು ಹೋಗಿ ಹನುಮಪ್ಪನ ಗುಡಿಯ ಒಳಗೆ ಬಂದ. ಒಂದೇ ಕಲ್ಲಲ್ಲಿ ಗದೆ ಹಿಡಿದುಕೊಂಡು ನಿಂತಿರುವ ಹನುಮಪ್ಪನ ಮೂರ್‍ತಿಯ ಮುಂದೆ ಕುಸಿದು ಕುಂತ. ಮನಸ್ಸಿನ ತಳಮಳಗಳನೆಲ್ಲ ಹೇಳಿಕೊಳ್ಳುತ್ತ ಕಣ್ಣಿರು ಹಾಕತೊಡಗಿದ. ಹೀಗೆ ಎಶ್ಟು ಹೊತ್ತು ಕೂತಿದ್ದನೋ ತಿಳಿಯದು, ಅಂಜಿನಿ ಕುಂತಲ್ಲೇ ಕುಸಿದ. ಪೂರ್‍ಣ ಎಚ್ಚರವಾಗಿಲ್ಲ ಆದ್ರೂ ಯಾರೋ ಮಾತನಾಡಿದ ಹಾಗೆ ಸದ್ದು. ಲಕ್ಶ್ಯ ಕೊಟ್ಟು ಕೇಳಿದರೆ ಹನುಮಪ್ಪನೇ ಮಾತನಾಡಿದ ಹಾಗಿದೆ. ಅಂಜಿನಿ ನಿನ್ನ ಕಶ್ಟಗಳಿಗೆ ಯಾರೂ ಕಾರಣರಲ್ಲ ನಿನ್ನ ಕಶ್ಟಗಳಿಗೆ ನೀನೇ ಕಾರಣ. ಬ್ಯಾರೆಯವರ ಮನಸಿನ್ಯಾಗ ಏನಯ್ತಿ ಅಂತ ತಿಳಿಕೊಂಡು ಏನು ಮಾಡ್ತೀ? ಮೊದಲು ನಿನ್ನ ಮನಸ್ಸು ಅರ್‍ತ ಮಾಡ್ಕೊಳ್ಳೋ ಕೆಲಸ ಮಾಡು. ನಿನ್ನ ಮನಸ ನೀ ಗೆದ್ದಿಯಂದ್ರ ಇಡೀ ಲೋಕಾನ ನೀ ಗೆಲ್ತಿ. ಮಂದಿ ವಿಚಾರ ಬಿಡು. ಹುಚ್ಚು ಕೋಡಿ” ಅಂತ ಕೇಳಿದ್ದ ಕಡೀ ಮಾತು. ಅಂಜಿನಿ ಅವ್ವ ಬಂದು ಅವನ್ನ ಎಬ್ಬಿಸಿದ ಮ್ಯಾಲೇ ಅವನಿಗೆ ಎಚ್ಚರವಾಗಿದ್ದು. ಎದ್ದು ಕುಂತವಗ ಮನಸು ಹಗುರು ಅನ್ನಿಸಿತ್ತು. ಕತ್ತಲಾತು ಇಲ್ಲೇ ಯಾಕ ಮಲಗೀದಿ ಅಂತ ಅವರವ್ವ ಅನ್ನತಿರಬೇಕಾದ್ರ ಅಂಜಿನಿ ಮನಸಿನ್ಯಾಗ “ಇಲ್ಲವ್ವಾ ಈಗ ನನಗ ಬೆಳಕ ಹರೀತು” ಅಂದುಕೊಂಡು, ಅವರವ್ವನ ಕಯ್ ಹಿಡಕೊಂಡು ಸಣ್ಣ ಹುಡುಗರ ಹಂಗೆ ಮನಿಗೆ ಹೊಂಟ.
(ಚಿತ್ರ: shaikhhashim.blogspot.com)
ಇತ್ತೀಚಿನ ಅನಿಸಿಕೆಗಳು