ವ್ಯವಸ್ತೆ

Dogs-and-Cats-dogs-vs-cats-13630437-639-480

ಸಬೆ ಸೇರಿದವು
ನಾಯಿ ಬೆಕ್ಕುಗಳೊಮ್ಮೆ
ತಮ್ಮ ಹಿರಿಮೆಯೆ ಹೇಳಿಕೊಳಲೆಂದೆ
ಬೆಕ್ಕು ನಾಯಿನ ಜರೆಯಿತು:
’ಎಂಜಲು ತಿನ್ನುವ ಕೊಳಕ
ಮಾಡಿರುವೆಯಾ ಒಮ್ಮೆಯಾದರೂ ಜಳಕ?
ನಮ್ಮ ಮಯ್ಬಣ್ಣ ನೋಡು ಎಶ್ಟು ಬಿಳಿ!
ದೇಶದ ನೇತಾರರೆಲ್ಲ ನನ್ನಂತೆಯೇ ತಿಳಿ!’

ನಾಯಿ ನಗುತ್ತಾ ಹೇಳಿತು:
’ಹೆಂಡದ ಮಡಕೆಯ ಹೊರಗೆ ತೊಳೆದರೆ ಸಾಕೆ?
ಒಳಗಿನ ದುರ್ಗುಣಗಳ ತೊಳೆದಿರುವಿಯಾ ಸೊಕ್ಕೆ?
ಮಯ್ಬಣ್ಣ ನೋಡಿ ಮಣೆ ಹಾಕುವುದರಿಂದಲೇ
ಹಾಲು ಮೊಸರು ಬೆಣ್ನೆಗಳ ಕಳವು ಹಗಲಿನಲ್ಲೇ’
ಮಯ್ ಸೆಟೆಸಿದ ಬೆಕ್ಕು ಅರಚಿತು:
ನಾನಿದ್ದ ಮನೆಗಳಲಿ ಇಲಿಗಳಿಲ್ಲ
ನನಗೆ ಕಯ್ಯೆತ್ತಲು ಬ್ರಹ್ಮನಿಗೂ ಸಾದ್ಯವಿಲ್ಲ
ನನ್ನ ಮಯ್ತುಂಬ ದೇವತೆಗಳಂತೆ
ಕೊಂದರೆ ರವ್ರವ ನರಕ ತಪ್ಪದಂತೆ

ಕಿವಿ ಜಾಡಿಸಿ ನಾಯಿ ಉತ್ತರಿಸಿತು:
’ಕುರಿ ಕಾಯಲು ತೋಳವ ಬಿಟ್ಟಿಹರು
ಕಡಿಮೆಯಾಗುವ ಕುರಿಗಳ ಲೆಕ್ಕವಿಡುವವರಾರು?
ದಿನಪೂರ್ತಿ ಮಯ್ಮುರಿವ ದುಡಿತ
ಕರುಣೆ, ಪ್ರಾಮಾಣಿಕತೆ ಪ್ರೀತಿಯ ತುಡಿತವಿರಲು
ಮಯ್ತುಂಬ ದೇವತೆಗಳೇಕೆ ಬೇಕು?
ಉಂಡ ಅನ್ನಕೆ ದ್ರೋಹ ಬಗೆಯದಿದ್ದರಶ್ಟೆ ಸಾಕು’
’ಬೆಕ್ಕೇ, ಬೆಕ್ಕೆ ಕಂಡವರ ಕಾಲು ಸುತ್ತುತ್ತಾ
ಕದಿಯುವುದ ಬಿಡು
ಆಗ ಆಗುವುದು ಈ ಮನೆಯ ಏಳ್ಗೆ
ಸುಕ ಹೊಮ್ಮುವುದು ಒಡೆಯನ ಬಾಳ್ಗೆ’

ನಾಯಿಯ ನುಡಿಯಿಂದ ಒಳಗೊಳೆಗೆ ನಕ್ಕ
ಬೆಕ್ಕು ಮೆಲ್ಲನೆ ಜಾರಿ
ಒಡೆಯನ ಕಾಲ ಬಳಿ ಹೊಕ್ಕು
ಹುಯಿಲೆಬ್ಬಿಸಲು
ಒಡೆಯ ನಾಯಿಯ ಒದೆಯಲು
ಕುಂಯ್ಗುಡುತ ನಾಯಿ
ಬಾಗಿಲ ಬಳಿ ಕಾವಲು ಬಿತ್ತು
ಅಡಿಗೆ ಮನೆಯಲಿ ಬೆಕ್ಕು
ಮೊಸರಿನ ಬಟ್ಟಲಲಿ ಮುಕ ಹುದುಗಿಸಿತ್ತು
ಒಳಗೊಳಗೇ ಮೀಸೆಯ ತಿರುವಿತ್ತು!

ಸಿದ್ದರಾಮ ಹಿರೇಮಟ ಕೂಡ್ಲಿಗಿ 

(ಚಿತ್ರ: www.fanpop.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: