ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 3
{ಕಳೆದ ಬರಹದಲ್ಲಿ: ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 2:… ಹಳೆಗನ್ನಡಕ್ಕೂ ಸಂಸ್ಕ್ರುತಕ್ಕೂ ನಡುವೆ ಜೋಡುಪದಗಳನ್ನು ಉಂಟುಮಾಡುವಲ್ಲಿ ಈ ರೀತಿ ತಳಮಟ್ಟದ ವ್ಯತ್ಯಾಸವಿದೆ; ಇದನ್ನು ಗಮನಿಸಲಾಗದ ಶಬ್ದಮಣಿದರ‍್ಪಣ ಸಂಸ್ಕ್ರುತದಲ್ಲಿರುವಂತಹ ಸಮಾಸಗಳನ್ನೇ ಹಳೆಗನ್ನಡದಲ್ಲೂ ಕಾಣಲು ಪ್ರಯತ್ನಿಸಿ, ತುಂಬಾ ಗೊಂದಲಗಳಿಗೊಳಗಾಗಿದೆ. ಬೇರೆಯೂ ಹಲವು ಬಗೆಯ ಗೊಂದಲಗಳು ಶಬ್ದಮಣಿದರ‍್ಪಣ ಕೊಡುವ ಹಳೆಗನ್ನಡ ಜೋಡುಪದಗಳ ವಿವರಣೆಯಲ್ಲಿದೆ…}
(3) ಜೋಡುಪದಗಳು ಮತ್ತು ಪದಕಂತೆಗಳು:
ಹಳೆಗನ್ನಡದಲ್ಲಿ ಜೋಡುಪದಗಳಿಗೂ ಪದಕಂತೆಗಳಿಗೂ ನಡುವೆ ವ್ಯತ್ಯಾಸವಿದೆ; ಎರಡು ಪದಗಳು ಸೇರಿ ಹೊಸದೊಂದು ಪದವಾಗಿದೆಯಾದರೆ ಅದನ್ನೊಂದು ಜೋಡುಪದವೆಂದು ಕರೆಯಬಹುದು. ಎತ್ತುಗೆಗಾಗಿ, ಬೆಳ್ ಮತ್ತು ತಿಂಗಳ್ ಎಂಬ ಎರಡು ಪದಗಳನ್ನು ಸೇರಿಸಿ ಉಂಟುಮಾಡಿರುವ ಬೆಳ್ದಿಂಗಳ್ ಎಂಬುದು ಒಂದು ಹೊಸಪದ; ಅದು ತಿಂಗಳ ಬೆಳಕನ್ನು ತಿಳಿಸುತ್ತದಲ್ಲದೆ, ಬಿಳಿಯಾದ ತಿಂಗಳನ್ನು ತಿಳಿಸುವುದಿಲ್ಲ. ಹಾಗಾಗಿ, ಅದನ್ನೊಂದು ಜೋಡುಪದವೆಂದು ಕರೆಯಲು ಬರುತ್ತದೆ. ಆದರೆ, ಬೆಳ್ ಮತ್ತು ಮುಗಿಲ್ ಎಂಬ ಎರಡು ಪದಗಳನ್ನು ಸೇರಿಸಿ ಉಂಟುಮಾಡಿರುವ ಬೆಳ್ಮುಗಿಲ್ ಎಂಬುದು ಒಂದು ಹೆಸರುಕಂತೆಯಲ್ಲದೆ ಹೊಸಪದವಲ್ಲ; ಯಾಕೆಂದರೆ, ಅದು ಮುಗಿಲು ಎಂತಹದು ಎಂಬುದನ್ನಶ್ಟೇ ತಿಳಿಸುತ್ತದೆ.
ಇಂತಹ ಜೋಡುಪದ ಮತ್ತು ಪದಕಂತೆಗಳ ನಡುವಿನ ವ್ಯತ್ಯಾಸ ವೇದಕಾಲದ ಸಂಸ್ಕ್ರುತದಲ್ಲಿತ್ತು; ಆದರೆ, ಕಾವ್ಯ-ಶಾಸ್ತ್ರಗಳ ಕಾಲದ ಸಂಸ್ಕ್ರುತದಲ್ಲಿ ಅದು ಹೆಚ್ಚುಕಡಿಮೆ ಅಳಿದುಹೋಗಿದೆ; ಆ ಸಮಯಕ್ಕಾಗುವಾಗ, ಬರಹದ ಸಂಸ್ಕ್ರುತಕ್ಕೂ ಆಡುನುಡಿಗಳಿಗೂ ನಡುವಿರುವ ಹೊಂದಾಣಿಕೆ ಹೆಚ್ಚುಕಡಿಮೆ ಇಲ್ಲವಾದುದೇ ಇದಕ್ಕೆ ಕಾರಣವಿರಬೇಕು; ಅಂತಹ ಹೊಂದಾಣಿಕೆಯಿದ್ದಲ್ಲಿ ಮಾತ್ರ ಒಂದು ಬರಹ ತನ್ನ ಜೀವಂತಿಕೆಯನ್ನು ಉಳಿಸಿಕೊಳ್ಳಬಲ್ಲುದು. ಜೋಡುಪದ ಮತ್ತು ಪದಕಂತೆಗಳ ನಡುವಿನ ವ್ಯತ್ಯಾಸ ಇಲ್ಲವಾದುದರಿಂದಾಗಿ ಕಾವ್ಯಗಳ ಕಾಲದ ಸಂಸ್ಕ್ರುತದಲ್ಲಿ ಎರಡು ಇಲ್ಲವೇ ಹೆಚ್ಚು ಪದಗಳು ಒಟ್ಟಿಗೆ ಸೇರಿಕೊಂಡಿರುವಲ್ಲೆಲ್ಲ ಸಮಾಸ ನಡೆದಿದೆಯೆಂದು ಹೇಳಬೇಕಾಗುತ್ತದೆ.
ಹಳೆಗನ್ನಡಕ್ಕೂ ಸಂಸ್ಕ್ರುತಕ್ಕೂ ನಡುವಿರುವ ಈ ವ್ಯತ್ಯಾಸವನ್ನು ಗಮನಿಸದ ಶಬ್ದಮಣಿದರ‍್ಪಣ ಹಳೆಗನ್ನಡದಲ್ಲಿ ಎರಡು ಪದಗಳು ಒಟ್ಟಿಗೆ ಸೇರಿರುವಲ್ಲೆಲ್ಲ ಸಮಾಸವನ್ನು ಕಾಣಲು ಹೊರಟಿದೆ. ಎಳಗೊಂಬು, ಪೇರಾನೆ, ಪೊಸನೆತ್ತರ್, ನಿಡುಗಣ್ ಮೊದಲಾದುವು ಹಳೆಗನ್ನಡದಲ್ಲಿ ನಿಜಕ್ಕೂ ಪದಕಂತೆಗಳಲ್ಲದೆ ಜೋಡುಪದಗಳಲ್ಲ. ಇದಲ್ಲದೆ, ಹಳೆಗನ್ನಡದಲ್ಲಿ ಪೊಸ, ಕಿಱಿ, ಬೆಳ್, ನಿಡು ಮೊದಲಾದವುಗಳೇ ಪರಿಚೆಪದಗಳ ಮೂಲರೂಪಗಳು; ಪೊಸತು, ಕಿಱಿಯರ್, ಕಿಱಿದು ಮೊದಲಾದುವು ಅವುಗಳ ಹೆಸರುರೂಪಗಳು. ಇವುಗಳಲ್ಲಿ ಹೆಸರುರೂಪಗಳೇ ಮೂಲರೂಪಗಳೆಂದೂ, ಪರಿಚೆರೂಪಗಳು ಸಮಾಸದಲ್ಲಿ ಬಳಕೆಯಾಗುವ ಅವುಗಳ ಅಡಕರೂಪಗಳೆಂದೂ ಹೇಳುವುದೆಂದರೆ ಹಳೆಗನ್ನಡದ ವ್ಯಾಕರಣವನ್ನು ತಿರುಚಿ ಹೇಳಿದಂತೆ.
(4) ಗುರ‍್ತಗಳ ನಡುವಿನ ವ್ಯತ್ಯಾಸ:
ಹೆಸರುಪದಗಳನ್ನು ಅವುಗಳ ಬಳಕೆಗೆ ಸಂಬಂದಿಸಿದಂತೆ ಕೆಲವು ಮುಕ್ಯ ಗುಂಪುಗಳಲ್ಲಿ ವಿಂಗಡಿಸಲು ಬರುತ್ತದೆ; ಈ ವಿಂಗಡಣೆಯನ್ನು ಸಂಸ್ಕ್ರುತದಲ್ಲಿ ಲಿಂಗ ಎಂಬುದಾಗಿ ಕರೆಯಲಾಗುತ್ತದೆ; ಇದನ್ನು ಕನ್ನಡದಲ್ಲಿ ಗುರ‍್ತ ಎಂಬುದಾಗಿ ಕರೆಯಬಹುದು. ಈ ವಿಂಗಡಣೆಯ ವಿಶಯದಲ್ಲಿ ಹಳೆಗನ್ನಡ ಮತ್ತು ಸಂಸ್ಕ್ರುತಗಳ ನಡುವೆ ತಳಮಟ್ಟದ ವ್ಯತ್ಯಾಸಗಳಿವೆ:
ಹಳೆಗನ್ನಡದಲ್ಲಿ ಹೆಸರುಪದಗಳನ್ನು ಮೂರು ಗುರ‍್ತಗಳಲ್ಲಿ ವಿಂಗಡಿಸಲು ಬರುತ್ತದೆ: ಮನುಶ್ಯರನ್ನು ಗುರುತಿಸುವ ಹೆಸರುಪದಗಳು ಗಂಡಸರನ್ನು ಗುರುತಿಸುವುದಿದ್ದಲ್ಲಿ ಅವನ್ನು ಗಂಡುಗುರ‍್ತ(ಪುಲ್ಲಿಂಗ)ವೆಂಬ ಗುಂಪಿನಲ್ಲಿ ಗುಂಪಿಸಬಹುದು, ಮತ್ತು ಹೆಂಗಸರನ್ನು ಗುರುತಿಸುವುದಿದ್ದಲ್ಲಿ ಅವನ್ನು ಹೆಣ್ಣುಗುರ‍್ತ(ಸ್ತ್ರೀಲಿಂಗ)ವೆಂಬ ಗುಂಪಿನಲ್ಲಿ ಗುಂಪಿಸಬಹುದು; ಉಳಿದ ಎಲ್ಲಾ ಹೆಸರುಪದಗಳನ್ನೂ ಉಳಿಕೆಗುರ‍್ತ(ನಪುಂಸಕಲಿಂಗ)ವೆಂಬ ಮೂರನೆಯ ಗುಂಪಿನಲ್ಲಿ ಗುಂಪಿಸಬಹುದು. ಈ ರೀತಿ ಹಳೆಗನ್ನಡದಲ್ಲಿ ಪದಗಳ ಗುಂಪಿಸುವಿಕೆ (ಎಂದರೆ ಅವುಗಳ ಲಿಂಗಬೇದ) ಅವುಗಳ ಹುರುಳನ್ನು ಮಾತ್ರ ಅವಲಂಬಿಸಿರುತ್ತದೆ.
ಕೆಲವೊಮ್ಮೆ ಮನುಶ್ಯರಲ್ಲದವರನ್ನು ಸೂಚಿಸುವ ಪದಗಳ ಮೇಲೆ ಮನುಶ್ಯತನವನ್ನು ಹೊರಿಸಲಾಗುತ್ತದೆ (ರವಿ ಮೂಡಿದಂ, ಸಿರಿಯೊಲ್ವಳು), ಮತ್ತು ಮನುಶ್ಯರನ್ನು ಸೂಚಿಸುವ ಪದಗಳ ಮೇಲೂ ಪ್ರಾಣಿತನವನ್ನು ಹೊರಿಸಲಾಗುತ್ತದೆ (ಪೆಣ್ ಬಂದುದು); ಆದರೆ, ಇಂತಹ ಕಡೆಗಳಲ್ಲೂ ಪದಗಳಿಗೆ ಕೊಟ್ಟಿರುವ ಹುರುಳೇ ಅವುಗಳ ಗುರ‍್ತ ಎಂತಹದು ಎಂಬುದನ್ನು ತಿಳಿಸುತ್ತದೆ.
ಸಂಸ್ಕ್ರುತದಲ್ಲಿಯೂ ಹೆಸರುಪದಗಳನ್ನು ಪುಲ್ಲಿಂಗ, ಸ್ತ್ರೀಲಿಂಗ, ಮತ್ತು ನಪುಂಸಕಲಿಂಗ ಎಂಬ ಮೂರು ಗುರ‍್ತಗಳಲ್ಲಿ ಗುಂಪಿಸಲಾಗುತ್ತದೆ; ಆದರೆ, ಇದು ಹಳೆಗನ್ನಡದ ಹಾಗೆ ಪದಗಳ ಹುರುಳನ್ನು ಅವಲಂಬಿಸಿಲ್ಲ; ‘ಹೆಂಡತಿ’ ಎಂಬ ಒಂದೇ ಹುರುಳಿರುವ ದಾರ ಪದ ಪುಲ್ಲಿಂಗ, ಪತ್ನಿ ಪದ ಸ್ತ್ರೀಲಿಂಗ, ಮತ್ತು ಕಲತ್ರ ಪದ ನಪುಂಸಕಲಿಂಗ. ಮನುಶ್ಯರಲ್ಲದವನ್ನು ಗುರುತಿಸುವ ಪದಗಳೂ ಈ ಮೂರು ಗುರ‍್ತಗಳಲ್ಲಿ ಬರಬಲ್ಲುವು (ಪವನ, ಪಾದ, ವಾಯು ಮೊದಲಾದವು ಪುಲ್ಲಿಂಗ; ನೌ, ನದಿ, ವಿಭಕ್ತಿ, ಮತಿ ಮೊದಲಾದವು ಸ್ತ್ರೀಲಿಂಗ; ಮತ್ತು ಹೃದಯ, ಮಧು, ಜಗತ್ ಮೊದಲಾದವು ನಪುಂಸಕಲಿಂಗ).
ಇದಲ್ಲದೆ, ಸಂಸ್ಕ್ರುತದ ಕೆಲವು ಹೆಸರುಪದಗಳು ಯಾವಾಗಲೂ ಒಂದೇ ಗುರ‍್ತದಲ್ಲಿ ಬಳಕೆಯಾಗುತ್ತವೆಯಾದರೆ, ಇನ್ನು ಕೆಲವು ಅವುಗಳೊಂದಿಗೆ ಬರುವ ಬೇರೆ ಹೆಸರುಪದಗಳ ಗುರ‍್ತವನ್ನವಲಂಬಿಸಿ ಎರಡು ಇಲ್ಲವೇ ಮೂರು ಗುರ‍್ತಗಳಲ್ಲೂ ಬರಬಲ್ಲುವು. ಈ ರೀತಿ ಒಂದಕ್ಕಿಂತ ಹೆಚ್ಚು ಗುರ‍್ತಗಳಲ್ಲಿ ಬರಬಲ್ಲ ಹೆಸರುಪದಗಳು ಒಂದೇ ಗುರ‍್ತದಲ್ಲಿ ಬರಬಲ್ಲ ಹೆಸರುಪದಗಳೊಂದಿಗೆ ಯಾವ ಗುರ‍್ತರೂಪದಲ್ಲಿ ಬರುತ್ತವೆ ಎಂಬುದರ ಮೇಲೆ ಒಂದೇ ರೂಪದಲ್ಲಿ ಬರುವ ಹೆಸರುಪದಗಳ ಗುರ‍್ತ ಯಾವುದು ಎಂಬುದನ್ನು ತಿಳಿಯಬೇಕಾಗುತ್ತದೆ. ಎತ್ತುಗೆಗಾಗಿ, ಶುಕ್ಲ ಪದ ವರ‍್ಣ ಪದದೊಂದಿಗೆ ಪುಲ್ಲಿಂಗ ರೂಪದಲ್ಲಿ (ಶುಕ್ಲಃ ವರ‍್ಣಃ), ನೌ ಪದದೊಂದಿಗೆ ಸ್ತ್ರೀಲಿಂಗದಲ್ಲಿ (ಶುಕ್ಲಾ ನೌಃ), ಮತ್ತು ವಾಸಃ ಪದದೊಂದಿಗೆ ನಪುಂಸಕಲಿಂಗದಲ್ಲಿ (ಶುಕ್ಲಂ ವಾಸಃ) ಬರುವುದರಿಂದ ವರ‍್ಣ, ನೌ, ಮತ್ತು ವಾಸ ಪದಗಳ ಗುರ‍್ತ ಪುಂ, ಸ್ತ್ರೀ ಮತ್ತು ನಪುಂಸಕ ಎಂದು ಹೇಳಬೇಕಾಗುತ್ತದೆ.
ಸಂಸ್ಕ್ರುತದಲ್ಲಿ ಹೆಸರುಪದಗಳ ಗುರ‍್ತಗಳ ಕುರಿತಾಗಿರುವ ಕಟ್ಟಲೆಗಳು ಈ ರೀತಿ ತುಂಬಾ ಸಿಕ್ಕಲು ಸಿಕ್ಕಲಾಗಿವೆಯಾದ ಕಾರಣ, ಅದರ ಪದಕೋಶಗಳಲ್ಲಿ ಪ್ರತಿಯೊಂದು ಹೆಸರುಪದದ ಎದುರೂ ಅದು ಯಾವ ಗುರ‍್ತದಲ್ಲಿ ಇಲ್ಲವೇ ಗುರ‍್ತಗಳಲ್ಲಿ ಬರಬಲ್ಲುದು ಎಂಬುದನ್ನು ತಿಳಿಸಬೇಕಾಗುತ್ತದೆ; ಇದಕ್ಕೆ ಬದಲು, ಹಳೆಗನ್ನಡದಲ್ಲಿ ಹೆಸರುಪದಗಳ ಗುರ‍್ತ ಅವುಗಳ ಹುರುಳನ್ನವಲಂಬಿಸಿದೆಯಾದ ಕಾರಣ ಅದನ್ನು ಪದಕೋಶಗಳಲ್ಲಿ ತಿಳಿಸಬೇಕಾಗಿಲ್ಲ.
ಹಳೆಗನ್ನಡ ಮತ್ತು ಸಂಸ್ಕ್ರುತಗಳ ನಡುವಿರುವ ಈ ತಳಮಟ್ಟದ ವ್ಯತ್ಯಾಸವನ್ನು ಗಮನಿಸದೆ, ಸಂಸ್ಕ್ರುತದಂತಹದೇ ಒಂಬತ್ತು ಬಗೆಯ ಗುರ‍್ತಗಳನ್ನು ಹಳೆಗನ್ನಡದಲ್ಲೂ ಕಾಣಲು ಶಬ್ದಮಣಿದರ‍್ಪಣ ಪ್ರಯತ್ನಿಸುತ್ತದೆ; ಆದರೆ, ಹಾಗೆ ಕಾಣಲು ಬರುವುದಿಲ್ಲವಾದ ಕಾರಣ, ಈ ವಿಶಯದಲ್ಲಿ ಶಬ್ದಮಣಿದರ‍್ಪಣ ಗೊಂದಲದ ಗೂಡಾಗಿದೆ.
(ಮುಂದಿನ ವಾರ ಮುಂದುವರೆಯಲಿದೆ…)
ಬೆಳ್ದಿಂಗಳ್ ಎಂಬುದು ಬಿಳಿಯಾದ ತಿಂಗಳನ್ನು ತಿಳಿಸುತ್ತದೆ.
ಬೆಳ್ ತಿಂಗಳ್ = ಬೆಳ್ದಿಂಗಳ್ [ಬೆಳ್ಳಗಿನ ತಿಂಗಳು]
ಬೆಳ್ ಕಲ್ಲು = ಬೆಂಗಲ್ಲು [ಈ ಬಳಕೆ ಹವ್ಯಕರ ನಡುವೆ ಸಜೀವವಾಗಿದೆ. ಬೆಂಗಲ್ಲು ಎಂದರೆ ಏನೆಂದು ಹಲವರಿಗೆ ತಿಳಿಯದು. ಇದರ ಅರ್ಥ ಅಂಥದೊಂದು ಬಳಕೆ ಇಲ್ಲವೆಂದಲ್ಲ.]
ಬೆಳದಿಂಗಳು ಎಂಬ ಪದಕ್ಕೆ ಭಟ್ಟರ ವಿವರಣೆಯೇ ಸರಿ .
ಬೆಳದಿಂಗಳು ಎಂದರೆ ಬಿಳಿಯ ತಿಂಗಳಲ್ಲ . ಅದು ತಿಂಗಳ ಬೆಳಕು.
ಬೆಳ್ ಕಲ್ಲು = ಬೆಂಗಲ್ಲು ಇದು ಹೆಂಗೋ?
ಬೆಂಗಲ್ಲು = ಬೆನ್ನಿಗೆ ಕಲ್ಲು . ಆಸನ ?
ಬೆಳ್ ತಿಂಗಳ್ = ಬೆಳ್ದಿಂಗಳ್ [ಬೆಳ್ಳಗಿನ ತಿಂಗಳು]
ವೆಣ್ ನಿಲವು = ವೆಣ್ಣಿಲವು [ತಮಿಳು]
ಬೆಳ್ ನೆಯ್ = ಬೆಣ್ಣೆ
ಬೊಳ್ ನೆಯ್ = ಬೊಳ್ನೆಯ್ [ತುಳು]
ವೆಳ್ ನೆಯ್ = ವೆಣ್ಣ [ಮಲೆಯಾಳ]
ವೆಳ್ ನೆಯ್ = ವೆಣ್ಣಯ್ [ತಮಿಳು]
ಆಹಾ!
ಮೊದಲ ಮಾದರಿ ಳ್ + ತ,
ಮಿಕ್ಕವು ಳ್ + ನ . ಅದೂ ಬೇರೆ ನುಡಿಯವು.
ಅದ್ಯಾವ ಲೆಕ್ಕ ಇದು ?
ಬೆಳ್(ಣ್) ಕಲ್ಲು = ಬೆಂಗಲ್ಲು
ಬೆಂಗಲ್ಲು ಅನ್ನೋ ಪದವೇ ಕನ್ನಡದಲ್ಲಿ ಇಲ್ಲ .
ಇನ್ನು ಳ್ + ನ ಬಂದರೆ ಮಾತ್ರ ಣ ಬರೋದು. ಬೆಳ್ + ಕಲ್ಲು = ಬೆಳ್ಗಲ್ಲು . ಬೆಂಗಲ್ಲು ಆಗಲ್ಲ.
ಈ ಬಗೆಯ ಜ್ಞಾನವನ್ನು ಇಟ್ಟುಕೊಂಡು ಕನ್ನಡವನ್ನುಉದ್ಧರಿಸಲು ಹೊರಟಿರುವಿರಾದರೆ ಕನ್ನಡದ ಉದ್ದಾರಕ್ಕಾಗಿ ತಮ್ಮನ್ನು ನಂಬಿದವರ ಗತಿಯೇನು ಎಂಬುದು ಯೋಚಿಸಬೇಕಾದ ವಿಚಾರ.
ಸಾನುನಾಸಿಕವಾದ ಲ್/ಳ್ ಕೆಲವೆಡೆ ನ್/ಣ್ ಆಗಿ ಮಾರ್ಪಡುತ್ತವೆ. “ಬೆಂಗಲ್ಲು” ಪದವನ್ನು ಗೂಗಲಿನಲ್ಲಿ ಹುಡುಕಿದರೆ ಕೇವಲ ನಾಲ್ಕು ಪುಟಗಳು ಸಿಗುವುವು. ಆ ನಾಲ್ಕನ್ನೂ ಬರೆದವರು ಒಂದೇ ಊರಿಗೆ ಸೇರಿದವರು ಎಂಬುದು ಗಮನಾರ್ಹ.
^^ 😀
ಮಾನ್ಯ ಭಟ್ಟರೇ,
“, ಶುಕ್ಲ ಪದ ವರ‍್ಣ ಪದದೊಂದಿಗೆ ಪುಲ್ಲಿಂಗ ರೂಪದಲ್ಲಿ (ಶುಕ್ಲಃ ವರ‍್ಣಃ), ನೌ ಪದದೊಂದಿಗೆ ಸ್ತ್ರೀಲಿಂಗದಲ್ಲಿ (ಶುಕ್ಲಾ ನೌಃ), ಮತ್ತು ವಾಸಃ ಪದದೊಂದಿಗೆ ನಪುಂಸಕಲಿಂಗದಲ್ಲಿ (ಶುಕ್ಲಂ ವಾಸಃ) ಬರುವುದರಿಂದ ವರ‍್ಣ, ನೌ, ಮತ್ತು ವಾಸ ಪದಗಳ ಗುರ‍್ತ ಪುಂ, ಸ್ತ್ರೀ ಮತ್ತು ನಪುಂಸಕ ಎಂದು ಹೇಳಬೇಕಾಗುತ್ತದೆ.”
ಸಮಾಸಗಳ ಬಳಕೆಯು ಹೆಚ್ಚಿಗೆ ಇರುವ ಸಂಸ್ಕೃತದಲ್ಲಿ “ಶುಕ್ಲವರ್ಣಃ”, “ಶುಕ್ಲನೌಃ”, “ಶುಕ್ಲವಾಸಃ” ಎಂದು ಬರೆದರೂ ಸರಿ. ಇದು ಕನ್ನಡ ಬಿಳಿಹುಡುಗ, ಬಿಳಿಹುಡುಗಿ, ಹಾಗು ಬಿಳಿಬಟ್ಟೆ ತೆರನಾದುದೇ!
“ಶುಕ್ಲಃ ವರ‍್ಣಃ” ಅನ್ನೋದನ್ನು ಸಂಸ್ಕೃತದಲ್ಲಿ “ವರ್ಣಃ ಶುಕ್ಲಃ” ಎಂದು ಬರೆದರೂ ತಪಿಲ್ಲ. ” ಸರ್ಪಂ ತಂ ಕೃಷ್ಣಂ ” ( ಆ ಕರಿಯ ಹಾವನ್ನು ).. ಆದರೆ ಕನ್ನಡದಲ್ಲಿ ಹೀಗೆ ಸಾಧ್ಯವಿಲ್ಲ . ಗುಣವಾಚಕದ ತುರುವಾಯವೇ ಹೆಸರುಪದವು ಬರಬೇಕು..
“ಹಾವು ಆ ಕರಿಯದ್ದನ್ನು” ಎಂದು ಹೇಳಲು ಬರಲ್ಲ .
ಸರಿಯೇನು ತಿಳಿಸಿ ದಯವಿಟ್ಟು .
ನಮಸ್ಕಾರ ಹಾಗು ಧನ್ಯವಾದಗಳು ಭಟ್ಟರೇ .
ತಾವು ನನ್ನ ಬಹುತೇಕ ಸಂದೇಹಗಳನ್ನು ನೀಗಿಸಿದ್ದರೂ, ಕೆಲವು ಮಿಕ್ಕಿವೆ.
೧. “ಸಮಾಸಗಳ ಬಳಕೆಯು ಹೆಚ್ಚಿಗೆ ಇರುವ ಸಂಸ್ಕೃತದಲ್ಲಿ “ಶುಕ್ಲವರ್ಣಃ”, “ಶುಕ್ಲನೌಃ”, “ಶುಕ್ಲವಾಸಃ” ಎಂದು ಬರೆದರೂ ಸರಿ. ಇದು ಕನ್ನಡ ಬಿಳಿಹುಡುಗ, ಬಿಳಿಹುಡುಗಿ, ಹಾಗು ಬಿಳಿಬಟ್ಟೆ ತೆರನಾದುದೇ! “”
ಇದಕ್ಕೆ ತಾವು ಏನೂ ಹೇಳಿಲ್ಲ . ದಯವಿಟ್ಟು ಈ ಕುರಿತು ಅರುಹಿ.
ಕನ್ನಡದಲ್ಲಿ “ಕರಿಹಾವನ್ನು” ಎನ್ನಲು ಬರುತ್ತದಲ್ಲದೆ “ಕರಿಯನ್ನು ಹಾವನ್ನು” ಎನ್ನಲು ಬರುವುದಿಲ್ಲ; ಹಾಗಾಗಿ, ಸಂಸ್ಕ್ರುತದ ಹಾಗೆ ಇಲ್ಲಿ ವಿಬಕ್ತಿ ಒಟ್ಟು ಬಿದ್ದುಹೋಗಿ ಸಮಾಸ ಆಗಿದೆ ಎನ್ನಲೂ ಬರುವುದಿಲ್ಲ. “ಕರಿಯದ್ದನ್ನು” ಎಂಬಲ್ಲಿ“ಕರಿಯದ್ದು” ಎಂಬುದು “ಕರಿ” ಎಂಬ ಪರಿಚೆಪದದ ಹೆಸರುರೂಪವಾಗಿದ್ದು ಅದಕ್ಕೆ ವಿಬಕ್ತಿ ಒಟ್ಟನ್ನು ಸೇರಿಸಲು ಬರುತ್ತದೆ; ಆದರೆ ಸಂಸ್ಕ್ರುತದಲ್ಲಿ ಪರಿಚೆಪದ ಎಂಬುದಿಲ್ಲ; ಹಾಗಾಗಿ, ಪರಿಚೆಪದದ ಹೆಸರುರೂಪ ಎಂಬುದೂ ಇಲ್ಲ.
“ಹಾವು ಆ ಕರಿಯದ್ದನ್ನು” ಎಂಬುದು ಸರಿಯಿಲ್ಲದಿರುವುದಕ್ಕೆ ಕಾರಣ ಬೇರೆಯೇ ಇದೆ; “ಹಾವು ಕರಿಯದ್ದು” ಇಲ್ಲವೇ “ಹಾವು ಕರಿದು” ಎಂಬುದು ಒಂದು ಸೊಲ್ಲಲ್ಲದೆ ಹೆಸರುಕಂತೆಯಲ್ಲ; ಹಾಗಾಗಿ, ಅದಕ್ಕೆ ‘ಅನ್ನು’ ಪತ್ತುಗೆ ಒಟ್ಟನ್ನು ಸೇರಿಸಲು ಬರುವುದಿಲ್ಲ. ಇದಲ್ಲದೆ, ಇಂತಹ ಸೊಲ್ಲುಗಳಲ್ಲಿ ಆ ಎಂಬ ತೋರುಪದವನ್ನು ಮೊದಲನೆಯ ಪದದೊಂದಿಗೆ (“ಆ ಹಾವು ಕರಿಯದ್ದು” ಎಂಬುದಾಗಿ) ಸೇರಿಸಲು ಬರುತ್ತದಲ್ಲದೆ ಎರಡನೆಯದರೊಂದಿಗೆ ಸೇರಿಸಲು ಬರುವುದಿಲ್ಲ.
ನಮಸ್ಕಾರ ಹಾಗು ಧನ್ಯವಾದಗಳು ಭಟ್ಟರೇ .
೧. ‘ಕರಿದು’ ಎಂಬ ಬಳಕೆಯು ನನಗೆ ಅಪರಿಚಿತವು. ‘ಕರಿಯದು’ ಎಂಬುದು ಪರಿಚಿತವು. ಇಂತೂ ಹಲದಿದು, ಕೆಂಪಿದು, ನೀಲಿದು ಎಂಬ ಬಳಕೆಗಳನ್ನು ಅರಿಯೆನು. ತುಸು ಈ ಸಿಕ್ಕಲನ್ನು ನೀಗಿಸಿ.
೨. “ತಕ್ರಂ ಶುಕ್ರಸ್ಯ ದುರ್ಲಭಮ್ ” ಎಂಬ ಸೊಲ್ಲಿನಲ್ಲಿ ನಾವು “ದುರ್ಲಭ” ಎಂಬುದು ಪರಿಚೆಯು ಎಂದು ಎಣಿಸಿ
“ಶುಕ್ರನಿಗೆ ದುರ್ಲಭದ ಮೊಸರು” ಎಂದು ನುಡಿಮಾರ್-ಮಾಡಿದ ಸಾಲು ಕನ್ನಡದ ಸೊಲ್ಲರಿಮೆಯಂತೆ ಸರಿಯೇ?
ಇನ್ನೊಂದು ವಿಶಯವೇನೆಂದರೆ, ಸಂಸ್ಕ್ರುತದ ಪದಕಂತೆಯಲ್ಲಿ ಎರಡು ಹೆಸರುಪದಗಳನ್ನು ಒಟ್ಟಿಗೆ ಬಳಸಿದಾಗ, ಅವೆರಡಕ್ಕೂ ವಿಬಕ್ತಿ ಒಟ್ಟುಗಳನ್ನು ಸೇರಿಸಬೇಕಾಗುತ್ತದೆ; ಹಾಗಾಗಿ, ಅವುಗಳ ಓರಣವನ್ನು ಬದಲಿಸಲು ಬರುತ್ತದೆ (“ಶುಕ್ಲಂ ವರ್ಣಂ”, “ವರ್ಣಂ ಶುಕ್ಲಂ”). ಆದರೆ, ಕನ್ನಡದ ಪದಕಂತೆಗಳಲ್ಲಿ ಎರಡು ಹೆಸರುಪದಗಳನ್ನು ಆ ರೀತಿ ಒಟ್ಟಿಗೆ ಒಂದೇ ಪದಕಂತೆಯಲ್ಲಿ ಬಳಸಲು ಬರುವುದಿಲ್ಲ; ಬಳಸುವುದಿದ್ದಲ್ಲಿ ಮೊದಲನೆಯ ಹೆಸರುಪದವನ್ನು ಪರಿಚೆರೂಪಕ್ಕೆ ಬದಲಾಯಿಸಬೇಕಾಗುತ್ತದೆ (“ಮರದ ಗೆಲ್ಲನ್ನು”); ಇನ್ನು ಪರಿಚೆಪದಗಳನ್ನು ಹೆಸರುಪದಗಳೊಂದಿಗೆ ಬಳಸುವುದಿದ್ದಲ್ಲಿ ಅವನ್ನು ವಿಬಕ್ತಿ ಒಟ್ಟನ್ನು ಸೇರಿಸದೆ ಬಳಸಬೇಕಾಗುತ್ತದೆ; ಹಾಗಾಗಿ ಈ ಎರಡು ಕಡೆಗಳಲ್ಲೂ ಅವು ಪದಕಂತೆಯಲ್ಲಿ ಮೊದಲನೆಯದಾಗಿಯೇ ಬರಬೇಕಾಗುತ್ತದೆ (“ಕಪ್ಪು ಕಲ್ಲನ್ನು”); “ಕಲ್ಲು ಕಪ್ಪನ್ನು” ಇಲ್ಲವೇ “ಗೆಲ್ಲು ಮರದನ್ನು” ಇಲ್ಲವೇ “ಕಲ್ಲನ್ನು ಕಪ್ಪು” ಎನ್ನಲು ಬರುವುದಿಲ್ಲ.
ನಮಸ್ಕಾರ ಹಾಗು ಧನ್ಯವಾದಗಳು ಭಟ್ಟರೇ .
೧. “ಕಪ್ಪುಗಲ್ಲು ” ಹಾಗು “ಕಪ್ಪನೆಯ ಕಲ್ಲು” ಈ ಎರಡು ಬಳಕೆಗೂ ಅರ್ಥದಲ್ಲಿ ಏನಾದರೂ ವ್ಯತಾಸವು ಇಹುದೇ?
೨ . ನನ್ನ ಪ್ರಕಾರ ‘ಕಪ್ಪುಗಲ್ಲು’ ಎಂದು ಸೇರಿಸಿ ಬರೆಯುವುದು ಸರಿ. ‘ಕಪ್ಪು ಕಲ್ಲು’ ಎಂದು ಬಿಡಿಸಿ ಬರೆಯೋದು ತಪ್ಪು. ನನ್ನ ಅರಿವು ತಪ್ಪೇ?
ಕಿಟ್ಟೆಲ್ ದಿಕ್ಶನರಿಯಲ್ಲಿ “ಕರಿದು” ಎಂಬ ಪದ ಬಂದಿದೆ; ಅದಕ್ಕೆ ‘ಕಪ್ಪಾದುದು’ ಮತ್ತು ‘ಕಪ್ಪು’ ಎಂಬ ಎರಡು ಹುರುಳುಗಳನ್ನು ಕೊಡಲಾಗಿದೆ.
‘‘ಹಲವು” ಎಂಬುದಿದೆ; ಆದರೆ, ‘*ಹಲದು” ಎಂಬುದು ಬರಲಾರದು. ಯಾಕೆಂದರೆ, “ಹಲ” ಎಂಬ ಪದ ಹಲವೆಣಿಕೆಯಲ್ಲಿ (ಬಹುವಚನದಲ್ಲಿ) ಇದೆ.
“ನೀಲಿ” ಎಂಬುದು ಸಂಸ್ಕ್ರುತದ ಎರವಲು ಪದ; ಹಾಗಾಗಿ, ‘‘ನೀಲಿದು’’ ಎಂಬುದು ಇಲ್ಲ; “ನೀಲಿಯದು” ಎಂಬುದನ್ನು ಬಳಸಬಹುದೇನೋ.
“ದುರ‍್ಲಬ”ವೂ ಸಂಸ್ಕ್ರುತದ ಎರವಲು ಪದವೇ; ಇದನ್ನು ಕನ್ನಡದಲ್ಲಿ ಸಾಮಾನ್ಯವಾಗಿ ಇರುವಿಕೆಯ ಸೊಲ್ಲುಗಳಲ್ಲಿ “ಆಗಿರು” ಎಂಬುದರೊಂದಿಗೆ ಬಳಸಲಾಗುತ್ತದೆ; ಹಾಗಾಗಿ, “ದುರ‍್ಲಬದ” ಎಂಬುದಕ್ಕಿಂತಲೂ ‘‘ದುರ‍್ಲಬವಾದ” ಎಂಬುದನ್ನು ಬಳಸುವುದೇ ಹೆಚ್ಚು ಎಂದು ತೋರುತ್ತದೆ.
“ಕಪ್ಪು ಕಲ್ಲು” ಎಂಬುದು ತಪ್ಪೇನಲ್ಲ; ಯಾಕೆಂದರೆ, ಪದಕಂತೆಗಳಲ್ಲಿ ಬರುವ ಪದಗಳನ್ನು ಒಟ್ಟು ಸೇರಿಸಿ (ಸಂದಿ ಮಾಡಿ) ಬಳಸಬೇಕೇ, ಇಲ್ಲವೇ ಬಿಡಿ ಬಿಡಿಯಾಗಿ ಬಳಸಬೇಕೇ ಎಂಬ ವಿಶಯದಲ್ಲಿ ಆಯ್ಕೆಯಿದೆ.
ಆದರೆ, “ಕಪ್ಪುಗಣ್ಣು” ಎಂಬುದು “ಬೆಳ್ದಿಂಗಳು” ಎಂಬುದರ ಹಾಗೆ ಒಂದು ಜೋಡುಪದವಾಗಿದ್ದಲ್ಲಿ, ಈ ಆಯ್ಕೆ ಇರುವುದಿಲ್ಲ. ಎತ್ತುಗೆಗಾಗಿ, “ಬಿಳಿ ತಿಂಗಳು” ಎಂದು ಬರೆದರೆ ಅದಕ್ಕೆ “ಬೆಳ್ದಿಂಗಳು” ಎಂಬುದಕ್ಕಿರುವಂತಹ ‘ತಿಂಗಳ ಬೆಳಕು’ ಎಂಬ ಹುರುಳು ಸಿಗಲಾರದು.
೧. ಕರಿದು, ಕೆಂದು, ಹೊಸತು, ಹಳತು ಹೀಗೆ ‘ದು’ ಹಿನ್ನೊಟ್ಟು ಪರಿಚೆಪದಗಳಿಗೆ ಸೇರುತ್ತವೆ ಹಲವು ಕಡೆ ಅಲ್ಲವೇ?
೨. ಹಲದಿದು ಅಲ್ಲ ಹಳದಿದು ಆಗಬೇಕಿತ್ತು ಮನ್ನಿಸಿ .
೩.[ “ಕಪ್ಪು ಕಲ್ಲು” ಎಂಬುದು ತಪ್ಪೇನಲ್ಲ; ಯಾಕೆಂದರೆ, ಪದಕಂತೆಗಳಲ್ಲಿ ಬರುವ ಪದಗಳನ್ನು ಒಟ್ಟು ಸೇರಿಸಿ (ಸಂದಿ ಮಾಡಿ) ಬಳಸಬೇಕೇ, ಇಲ್ಲವೇ ಬಿಡಿ ಬಿಡಿಯಾಗಿ ಬಳಸಬೇಕೇ ಎಂಬ ವಿಶಯದಲ್ಲಿ ಆಯ್ಕೆಯಿದೆ.]
ಸರಿ. ಧನ್ಯವಾದ. ಆದರೆ ನಿಮ್ಮ ಭಾಷಾಜ್ಞಾನದ ಪರಿಣಿತಿಯ ಮೇರೆಗೆ ನಾನು ಒಂದು analysisಅನ್ನು ಪ್ರಾರ್ಥಿಸುವೆನು. ದಯವಿಟ್ಟು ಕೆಳಗಿನ ಮಾಹಿತಿಯನ್ನು ಒದಗಿಸಿ ಸಹಾಯವನ್ನು ಮಾಡಿರಿ.
ಅ. ಈ ಎರಡು ಕ್ರಮಗಳಲ್ಲಿ ಯಾವುದು ಹೆಚ್ಚು ಪ್ರಚಲಿತ?
ಆ . ಇವೆರಡರಲ್ಲಿ ಯಾವುದು ಭಾಷೆಯ ಶಿಕ್ಷಣ ಹಾಗು ಉಪಯೋಗದ ನಿಟ್ಟಿನಿಂದ ಸುಲಭ?
ಇ. ಹಳಗನ್ನಡದಲ್ಲಿ ಹೇಗಿತ್ತು ?
೪. ಪರಿಚೆಯ ಪದಗಳಿಗೆ ಆರನೇ ವಿಭಕ್ತಿಯನ್ನು ಹಚ್ಚಬೇಕು ಎಂದು ಓದಿಹೆನು . ಆ ಪ್ರಕಾರವಾಗಿ “ಕಪ್ಪಿನ ಕಲ್ಲು ” ಎಂಬ ರಚನೆಯು ವ್ಯಾಕರಣ-ಬದ್ಧವೇ ?
ನಿಮಗೆ ಮಿಂಚಿತವಾಗಿ ಧನ್ಯವಾದಗಳು . !
ನನ್ನ ಮೇಲಿನ ಅನಿಸಿಕೆಯ ಕೊನೆಯ ಕುರಳಿನಲ್ಲಿ (ಪಾರಾದಲ್ಲಿ) “ಕಪ್ಪುಗಣ್ಣು” ಎಂದು ತಪ್ಪಾಗಿ ಬಂದಿದೆ; ಅದು “ಕಪ್ಪುಗಲ್ಲು” ಎಂದಾಗಬೇಕು.