ಶಿವ ನಾನು, ಶಿವ ನಾನು!
{ಇತ್ತೀಚೆಗೆ ಜಾತಿಗಳ ಬಗೆಗಿನ ಚರ‍್ಚೆ ಹಾದಿ ತಪ್ಪುತ್ತಿದೆ ಎಂದು ನನ್ನ ಅನಿಸಿಕೆ. ಒಂದು ಕಡೆ ’ಬಲಗಡೆ’ಯವರಲ್ಲಿ ಮುಂಚೂಣಿಯಲ್ಲಿದ್ದಾರೆ ಎನಿಸಿಕೊಂಡವರು ಬಾರತದಲ್ಲಿ ಜಾತಿಯೇರ‍್ಪಾಡೆಂಬುದೇ ಇಲ್ಲ ಎಂದು ವಾದಿಸಿ ಆ ಮೂಲಕ ಕೂಡಣಮಾರ‍್ಪಿಗೆ ಅರ‍್ತವೇ ಇಲ್ಲವೆಂಬ ಅನಿಸಿಕೆಯನ್ನು ಬಿತ್ತುತ್ತಿದ್ದಾರೆ. ಇನ್ನೊಂದು ಕಡೆ ’ಎಡಗಡೆ’ಯವರಲ್ಲಿ ಜಾತಿಯೇರ‍್ಪಾಡಿನ ಕೆಡುಕುಗಳ ಬಗ್ಗೆ ಹಾಡಿ ಗೋಳಾಡುವುದೇ ಒಂದು ಕಸುಬಾಗಿ ಬಿಟ್ಟಿರುವುದರಿಂದ ಅವರಿಂದ ಕೂಡಣಮಾರ‍್ಪಿನ ನಿಟ್ಟನ್ನು ಬಯಸುವುದೇ ತಪ್ಪೆಂಬಂತಿದೆ. ಇನ್ನು ಇವೆರಡು ಗುಂಪುಗಳು ಅರಿವನ್ನು ಹಂಚಿಕೊಳ್ಳುವುದಂತೂ ದೂರದ ಮಾತು.
ಇವೆರಡರ ನಡುವಿನ ಹಾದಿಯೊಂದನ್ನು ನಾವು ಕಂಡುಕೊಳ್ಳದೆ ಹೋದರೆ ಒಟ್ಟಾರೆಯಾಗಿ ಕನ್ನಡಿಗರಿಗೆ ಏಳಿಗೆಯಿಲ್ಲ ಎಂಬ ನಂಬಿಕೆ ನನ್ನಲ್ಲಿ ಬಹಳ ಗಟ್ಟಿಯಾಗಿದೆ. ’ಎಲ್ಲರಕನ್ನಡ’ವನ್ನು ನಾನು ಒಪ್ಪಿ ಅದನ್ನೇ ಬಳಸುವ ಹಟ ಹಿಡಿದಿರುವುದಕ್ಕೆ ಈ ನಂಬಿಕೆ ಒಂದು ಮುಕ್ಯವಾದ ಕಾರಣ. ಹುಟ್ಟಿನಿಂದ ಮಾದ್ವ ಬ್ರಾಮಣ ಜಾತಿಗೆ ಸೇರಿದ ನಾನು ಈ ನಡುಹಾದಿಯಲ್ಲಿ ನಡೆಯುವಾಗ ಸಂಸ್ಕ್ರುತದಲ್ಲಿ ಈಗಾಗಲೇ ಇರುವ ಮತ್ತು ಕನ್ನಡದ ಕೂಡಣವನ್ನು ಒಡೆಯದೆ ಅದನ್ನು ಇಡಿಯಾಗಿ ಆದ್ಯಾತ್ಮಿಕ ಎತ್ತರಕ್ಕೊಯ್ಯುವಂತಹ ಅರಿವನ್ನು ನನ್ನ ಕಯ್ಲಾದಶ್ಟು ಎಲ್ಲರಕನ್ನಡಕ್ಕೆ ತರಬೇಕಾದುದು ನನ್ನ ಕರ‍್ತವ್ಯವೆಂದೇ ತಿಳಿದುಕೊಂಡಿದ್ದೇನೆ.
ಇಲ್ಲಿ ಬಹಳ ಚಿಕ್ಕದಾದ ಅಂತಹ ಒಂದು ಮೊಗಸನ್ನು ಮಾಡಿದ್ದೇನೆ. ಎಲ್ಲರಕನ್ನಡದಲ್ಲಿ ಹೀಗೆ ಗೇದರೆ ಬ್ರಾಮಣರು ಜಾತಿಯೇರ‍್ಪಾಡನ್ನು ಕೆಡವಲು ನೆರವಾಗಬಹುದು ಮತ್ತು ಬ್ರಾಮಣಿಕೆಯನ್ನು ಒಂದು ಜಾತಿಯಂತೆ ಕಾಣುವುದನ್ನು ನಿಲ್ಲಿಸಿ ಹಿಂದಿನ ಬ್ರಾಮಣರು ಮಾಡಿದ ಕೆಲಸದಲ್ಲಿ ನಿಜವಾಗಲೂ ಉಳಿಸಿಕೊಳ್ಳತಕ್ಕುದನ್ನು ಉಳಿಸಿಕೊಂಡು ಆ ಮೂಲಕ ಕೂಡಣಕ್ಕೆ ನೆರವಾಗಬಹುದು. ಇದನ್ನು ಎಶ್ಟು ಸಾರಿ ಕೂಗಿ ಹೇಳಿದರೂ ಸಾಲದು. – ಕಿ. ಬಾ.}
ಸಂಸ್ಕ್ರುತ ಮೂಲ (ನಿರ‍್ವಾಣ ಶಟ್ಕಂ): ಆದಿ ಶಂಕರಾಚಾರ‍್ಯ
ಎಲ್ಲರಕನ್ನಡಕ್ಕೆ: ಕಿರಣ್ ಬಾಟ್ನಿ
ಬಗೆ ಅರಿವು ನನ್ನೆಣಿಕೆ ತಿಳಿವುಗಳು ನಾನಲ್ಲ
ನಾನಲ್ಲ ಕಿವಿ ನಾಲ್ಗೆ ನಾನಲ್ಲ ಕಣ್ ಮೂಗು
ಬಾನಲ್ಲ ನೆಲವಲ್ಲ ಬೆಳಕಲ್ಲನೆಲರಲ್ಲ
ನಲಿವರಿವಿನ್ ಮಯ್ದಳೆದ ಶಿವ ನಾನು ಶಿವ ನಾನು ||1||
ಉಸಿರೆಂದರಾನಲ್ಲ ಅಯ್ಗಾಳಿಯಾನಲ್ಲ
ಏಳ್ದಾತು ಅಯ್ಪದರಗಳಾನಲ್ಲವಲ್ಲ
ಕಯ್ಕಾಲು ಉಲಿಯಲ್ಲ ಕೆಳಗಿನಂಗಗಳಲ್ಲ
ನಲಿವರಿವಿನ್ ಮಯ್ದಳೆದ ಶಿವ ನಾನು ಶಿವ ನಾನು ||2||
ಹಗೆತ ಒಲವೆನಗಿಲ್ಲ ನಿಬ್ಬಯಕೆ ಮರುಳಿಲ್ಲ
ಸೊಕ್ಕಿಲ್ಲ ಸೇಡಿಲ್ಲ ಎನಗಿಲ್ಲವಿವು ಎಲ್ಲ
ಅರವಿಲ್ಲ ಪಣವಿಲ್ಲ ಬಯಕಿಲ್ಲ ಬಿಡುವಿಲ್ಲ
ನಲಿವರಿವಿನ್ ಮಯ್ದಳೆದ ಶಿವ ನಾನು ಶಿವ ನಾನು ||3||
ಪುಣ್ಯಪಾಪಗಳಿಲ್ಲ ಸುಕದುಕ್ಕವೆನಗಿಲ್ಲ
ಮಂತ್ರ ತೀರ್‍ತಗಳಿಲ್ಲ ವೇದ ಯಗ್ನಗಳಿಲ್ಲ
ಊಟವಡಿಗೆಗಳಲ್ಲ ಉಂಬುವನು ನಾನಲ್ಲ
ನಲಿವರಿವಿನ್ ಮಯ್ದಳೆದ ಶಿವ ನಾನು ಶಿವ ನಾನು ||4||
ಸಾವಿನಯ್ಬೆನಗಿಲ್ಲ ಹುಟ್ಟೆನಗೆ ಅರಿದಲ್ಲ
ತಂದೆತಾಯೆನಗಿಲ್ಲ ಪುಟ್ಟಿದವ ನಾನಲ್ಲ
ನೆಂಟಗೆಳೆಯಾನಲ್ಲ ಗುರುಶಿಶ್ಯರಾನಲ್ಲ
ನಲಿವರಿವಿನ್ ಮಯ್ದಳೆದ ಶಿವ ನಾನು ಶಿವ ನಾನು ||5||
ಗುರುತೆಂಬುದೆನಗಿಲ್ಲ ರೂಪವಿಲ್ಲನು ನಾನು
ಒಡೆಯ ನಾನೆಲ್ಲೆಲ್ಲು ಈ ಅರಿಗೆಗಳಿಗೆಲ್ಲ
ಸಾಟಿತನವೆಲ್ಲೆಲ್ಲೂ ಹಿಡಿತ ಬಿಡುವೆನಗಿಲ್ಲ
ನಲಿವರಿವಿನ್ ಮಯ್ದಳೆದ ಶಿವ ನಾನು ಶಿವ ನಾನು ||6||
ಚೆನ್ನಾಗಿದೆ .
siva (p. 313) [ sivá ] a. kind, friendly, gracious; plea sant, auspicious, prosperous, happy; m. the Auspicious One, euphemistic N. of Rudra, in C. transferred to one of the members of the Hindu trinity, Siva (du. Siva and his wife); jackal; N.; n. prosperity, welfare, bliss.
http://dsalsrv02.uchicago.edu/cgi-bin/romadict.pl?query=siva&display=simple&table=macdonell
“ಬೆಳಕಲ್ಲನೆಲರಲ್ಲ” ಅಲ್ಲ “ಬೆಳಕಲ್ಲವೆಲರಲ್ಲ (ಬೆಳಕಲ್ಲ + ಎಲರಲ್ಲ )”?
ಇನ್ನೊಂದು ಅಷ್ಟಕದಲ್ಲಿ ಎಲ್ಲೆಡೆ “ನಾನಲ್ಲ” ಎಂದು ಇರುವುದು .. ಎಲ್ಲೂ “ನನಗಿಲ್ಲ” ಎಂದಿಲ್ಲ ಎಂದು ನನ್ನ ಓದು.
ಒಳ್ಳೆಯ ಓದನ್ನು ಒದಗಿಸಿದಕ್ಕೆ . ಸವಿ – ಹಾರೈಕೆ .!
ಕಿರಣ್ ಅವ್ರೆ,
ಒಳ್ಳೆ ಪ್ರಯತ್ನ.
ನನ್ನಿ ಯಶವನ್ತ ಅವರೇ!
ಬೋ ಚೆನ್ನಾಗಿದೆ ಕಿರಣ್. ನನಗೂ ಕಟ್ಟೊರೆಗಳಲ್ಲಿ ಆಸಕ್ತಿ ಮೂಡುತ್ತಿದೆ.
ಗದ್ಯವನ್ನೇ ಅಡ್ಡಡ್ಡ ಬರೆಯುವ
ಬದಲು ಉದ್ದುದ್ದ ಬರೆದು
ಕವನವೆಂದು ಕರೆದವರ
ಕವನಗಳನ್ನ ನೋಡಿ ನೋಡಿ ಸಾಕಾಗಿತ್ತು!
ನಿಮ್ಮ ಕಟ್ಟೊರೆ ಒಳ್ಳೆಯ ಬ್ರೇಕ್!
ನನ್ನಿ ಸಿದ್ದರಾಜು!
ಕಿರಣ್ … ತುಂಬಾ ಚೆನ್ನಾಗಿದೆ.. ಬೆರಗುಗೊಳಿಸುವಂತೆ ಕನ್ನಡಕ್ಕೆ ಇಳಿಸಿದ್ದೀರಿ… ಮತ್ತಷ್ಟು ಬರಲಿ.
ನನ್ನಿ ರಾಜೇಂದ್ರ ಅವರೇ! ನೀವೂ ಇಂತಹ ಕೆಲಸದಲ್ಲಿ ಕಯ್ ಜೋಡಿಸಿದರೆ ಮತ್ತಶ್ಟಲ್ಲ, ಬಹಳಶ್ಟು ಬರಬಲ್ಲುದು…:-)
ಬೆಳಕಲ್ಲನೆಲರಲ್ಲ = ಬೆಳಕಲ್ಲನು + ಎಲರಲ್ಲ
ಅಲ್ಲನು ಅನ್ನೋ ಬಳಕೆಯು ಸರಿಯು ಅಲ್ಲ ಎಂದು ಅನ್ನಿಸುತ್ತದೆ.
‘ಅಲ್ಲ’ ಒಂದು ಎಸಗುಪದದ ರೂಪ(verb form). ಅದು ಹೆಸರುಪದವಲ್ಲ(noun) ಎಂದು ನನ್ನ ತಿಳಿವು.
poetic license
n.
The liberty taken by an artist or a writer in deviating from conventional form or fact to achieve a desired effect.
ಉತ್ತರಕ್ಕಾಗಿ ಧನ್ಯವಾದಗಳು .
ಆದರೆ .. ನನಗೆ “ಅಲ್ಲನು” ಎಂಬುದು “ಎಲ್ಲರ ಕನ್ನಡ”ದ ವ್ಯಾಕರಣದ ಪ್ರಕಾರವಾಗಿ ಸರಿಯೋ ತಪ್ಪೋ ಎಂದು ತಿಳಿಯುವುದು ನನ್ನ ಕುತೂಹಲ .
ಉತ್ತರಕ್ಕಾಗಿ ಧನ್ಯವಾದಗಳು .
ದನ್ಯವಾದಗಳೆಲ್ಲ ಏಕೆ? ’ಎಲ್ಲರಕನ್ನಡ’ದ ಸೊಲ್ಲರಿಮೆ ಎಂದು ವಿಶೇಶವಾಗಿ ಏನೂ ಇಲ್ಲ. ಕನ್ನಡದ ಸೊಲ್ಲರಿಮೆಯೇ ಅದು. ’ಬೆಳಕಲ್ಲನ್’ ಎಂಬ ಹೆಸರಿನವನೊಬ್ಬನಿದ್ದಾನೆ ಎಂದುಕೊಳ್ಳಿ; ಅವನ ಬಗ್ಗೆ ಮಾತನಾಡುವಾಗ ’ಬೆಳಕಲ್ಲನು’ ಎನ್ನುವುದು ಕನ್ನಡದ ಸೊಲ್ಲರಿಮೆಯ ಪ್ರಕಾರ ಸರಿ ಎಂದು ಕಂಡುಕೊಳ್ಳಿ.
‘ಬೆಳಕಲ್ಲನ್’ ಎಂಬ ಹೆಸರ ರಚನೆಯು ವ್ಯಾಕರಣ-ಬದ್ಧವೇ ಎಂಬ ಸಂದೇಹ .
.. ವಂದನೆ .
// ‘ಬೆಳಕಲ್ಲನ್’ ಎಂಬ ಹೆಸರ ರಚನೆಯು ವ್ಯಾಕರಣ-ಬದ್ಧವೇ ಎಂಬ ಸಂದೇಹ //
’ಜಾರ‍್ಜ್’ ಎಂಬುದು ಬದ್ದವೇ?
🙂
http://www.etymonline.com/index.php?term=George
ಕನ್ನಡವಲ್ಲದ ನುಡಿಯ ವ್ಯಾಕರಣದ ಚರ್ಚೆಯು ಬೇಡ.
ಕನ್ನಡದ್ದೇ ಉದಾಹರಣೆಯೊಂದು ನೀಡಿ . ಪರೀಕ್ಷಿಸೋಣ .
ರೀ ಮಾಯ್ಸ: ’ಹೆಸರು ರಚನೆಯ ವ್ಯಾಕರಣ’ ಎಂದಿರಲ್ಲ, ಅದರಲ್ಲಿರುವ ಕಟ್ಟಲೆಗಳು ಎಂತವೆಂದು ಕೊಂಚ ಬರೆಯಿರಿ. ಆಮೇಲೆ ಮಾತನಾಡೋಣ. ಸುಮ್ಮನೆ ಹರಟೆಗೆ ನನಗೆ ಪುರಸೊತ್ತಿಲ್ಲ.
’ಬೆಳಕಲ್ಲನ್’ ಎಂದರೆ ಏನೆಂದು ಅರ‍್ತವಾಯಿತು ಎಂದು ತೋರಿಸಿಕೊಂಡಿದ್ದೀರಿ. ಇಶ್ಟವಾದರೆ ಒಪ್ಪಿಕೊಳ್ಳಿ, ಇಲ್ಲವಾದರೆ ಬಿಡಿ. ನಾನು ಬರೆದಿರುವುದು ವ್ಯಾಕರಣಬದ್ದವಲ್ಲ ಎಂದು ತೋರಿಸುವುದೇ ನಿಮ್ಮ ಗುರಿಯಾದರೆ ಆಗಲೇ ಹೇಳಿದೆನಲ್ಲ, ಕವಿಗೆ ಕಟ್ಟಲೆಯಿಲ್ಲ ಎಂದು?
ನಿಮ್ಮನ್ನು ಮುನಿಸುವುದು ನನ್ನ ಗುರಿಯಲ್ಲ. ಮನ್ನಿಸಿ.
ನಿಮ್ಮ ಬರೆವಣಿಗೆಯಲ್ಲಿ ತಪ್ಪನ್ನು ತೋರಿಸುವ ಗುರಿಯೂ ಇಲ್ಲ ..
‘ಬೆಳಕಲ್ಲನ್’ ಎಂಬ ಹೆಸರ ರಚನೆಯು ವ್ಯಾಕರಣ-ಬದ್ಧವೇ ಎಂಬ ಸಂದೇಹ . ನಿಮಗೆ ಉತ್ತರವನ್ನು ಕೊಡಲೇ ಬೇಕು ಎಂಬ ತಾಕೀತು ಇಲ್ಲ.
ವಿಷಯದ ಚರ್ಚೆ ಅಷ್ಟೇ .
ವಿಶಯದ ಬಗ್ಗೆ ಆಗಲೇ ಹೇಳಿದೆನಲ್ಲ? ಬೇರೆ ಬಗೆಯಲ್ಲಿ ಹೇಳುತ್ತೇನೆ: ಕವಿಗೆ ಕಟ್ಟಲೆಯಿಲ್ಲ. ಸೊಲ್ಲರಿಮೆಯಿಂದ ಕವಿಯಲ್ಲ, ಕವಿಯಿಂದ ಸೊಲ್ಲರಿಮೆ. ಹೆಸರನ್ನಂತೂ ಏನಿಟ್ಟುಕೊಂಡರೂ ಅದಕ್ಕೂ ಸೊಲ್ಲರಿಮೆಗೂ ನಂಟಿಲ್ಲ (ಅದಕ್ಕೇ ಜಾರ‍್ಜ್ ಬಗ್ಗೆ ಹೇಳಿದ್ದು). ಇಶ್ಟರ ಮೇಲೆ ’ಬೆಳಕಲ್ಲನ್’ ಎಂಬುದನ್ನು ಬೆಳಕಲ್ಲದವನು ಎಂಬ ಹುರುಳಿನಲ್ಲಿ ಬಳಸಿದ್ದೇನೆ ಎಂದು ವಿವರಣೆಯನ್ನೂ ಕೊಟ್ಟಿದ್ದೇನೆ; ಆ ವಿವರಣೆ ಕೊಡುವ ಮೊದಲೇ ನಿಮಗೆ ಆ ಪದದ ಹುರುಳೂ ತಿಳಿದು ಬಂದಿದೆ.
ಹೀಗಿರುವಾಗ ಆ ಪದವನ್ನು ಬೇಕಾದರೆ ಒಪ್ಪಿಕೊಳ್ಳಿ ಇಲ್ಲದಿದ್ದರೆ ಬಿಟ್ಟುಹಾಕಿ. ಅದು ಕನ್ನಡದ ಬೇರೆ ಹೆಸರುಗಳಂತೆ / ಪದಗಳಂತೆ ಇದೆಯೋ ಇಲ್ಲವೋ ಎಂಬ ನಿಮ್ಮ ಹುಡುಕು ಒಳ್ಳೆಯದೇ. ಆದರೆ ಆ ಹುಡುಕಿನಲ್ಲಿ ನಾನು ಪಾಲ್ಗೊಳ್ಳಲಾರೆ; ಕವಿಯಾಗಿ ನಾನು ಪಾಲ್ಗೊಳ್ಳಲೂ ಬೇಕಿಲ್ಲ. ಆ ಪದ ಬೇರೆ ಪದಗಳಂತೆ ಇಲ್ಲ ಎಂದು ನೀವು ತೀರ‍್ಮಾನಿಸಿದರೂ ನಾನು ಆ ಪದವನ್ನು ’ತಪ್ಪೆಂ’ದು ಒಪ್ಪಿಕೊಳ್ಳುವುದಿಲ್ಲ, ಏಕೆಂದರೆ ಕಟ್ಟಲೆಯನ್ನು ಮೀರಿ ಬರೆಯುವ ಹಕ್ಕು ಕವಿಗಿರುತ್ತದೆ.
ಆಗಲಿ ಪರವಾಗಿಲ್ಲ ..
ಯಾರಾದರೂ ವೈಯಾಕರಣಿಗಳು ಈ ಬಗ್ಗೆ ಯಾವ ಹೊಸ ಹೊಳಹನ್ನು ತೋರಿಸಿಯಾರು ಎಂಬ ನಿರೀಕ್ಷೆಯು ನನ್ನದು .
ಮುಂದೆ ಈ ತೆರನಾದ ಇತರ ಪದಗಳನ್ನು ಅರಿಯುವಲ್ಲಿ ನನಗದು ಸಹಾಯಕಾರಿಯಾಗಬಹುದು.
~~
ಇಲ್ಲಿ ಕನ್ನಡ ಋಣಾತ್ಮಕ ರೂಪಗಳ ಚರ್ಚೆಯನ್ನು ನಾನು ಎದುರು ನೋಡಿದೆ.
ಕನ್ನಡದಲ್ಲಿ ಹೆಸರುಪದಗಳ, ಹಾಗು ಪರಿಚೆಪದಗಳು ಋಣಾತ್ಮಕ ರೂಪಗಳು ಮಾಡಲು ಬರುವುದಿಲ್ಲ . ಬರೀ ಎಸಗುಪದಗಳ ಋಣಾತ್ಮಕ ರೂಪಗಳು ಕನ್ನಡದಲ್ಲಿದೆ .
ಒಳ್ಳೆಯ ಪ್ರಯತ್ನ. ಮೂಲದ ಬಿಗುವನ್ನೂ ಚುರುಕನ್ನೂ ಸೊಗಸಾಗಿ ಕನ್ನಡಕ್ಕೆ ತಂದಿದ್ದೀರಿ. ಕೆಲವೊಮ್ಮೆ ನಡೆ ಎಡವಿದೆ, ಆದರೂ ಸೊಗಸೇನು ಮುಕ್ಕಾಗಿಲ್ಲ.
ಇದನ್ನು ಕನ್ನಡವೆಂದೇ ಭಾವಿಸಲಡ್ಡಿಯಿಲ್ಲ. “ಎಲ್ಲರ ಕನ್ನಡ” ಎಂಬ ಕಟ್ಟು ಹಾಕಿದೊಡನೆ ಅನೇಕ ತಕರಾರುಗಳೇಳುತ್ತವೆ – ಸೊಲ್ಲರಿಮೆಯ ಬಗ್ಗೆ, ಬಳಸಿದ ಪದಗಳ ಬಗ್ಗೆ, ಹೀಗೆ. ನೋಡಿದಿರಲ್ಲ. ಇರಲಿ, ಅದರ ಚರ್ಚೆ ನನಗಿಲ್ಲಿ ಪ್ರಸ್ತುತವಲ್ಲ. Good one, keep it up.
ನಿಮ್ಮ ನಲ್ನುಡಿಗೆ ನನ್ನಿ! ಎಲ್ಲರಕನ್ನಡವೇ ಕನ್ನಡ. ಅದನ್ನು ಹಾಗೆ ಬಗೆಯುವುದೆಂತು? ಅದರ ಪದಗಳೇ ಕನ್ನಡದ ಪದಗಳು. ಅವುಗಳ ಬಗ್ಗೆ ತಕರಾರೆಂತು? ಅದರ ಸೊಲ್ಲರಿಮೆಯೇ ಕನ್ನಡದ ಸೊಲ್ಲರಿಮೆ. ಅದರ ಬಗ್ಗೆ ತಕರಾರೆಂತು?