ಗುಂಡು ತಡೆದ ಹೆಣ್ಣು: ಸ್ಟೆಪನೀ ಕ್ವೊಲೆಕ್

– ಸಂದ್ಯಾ ದರ‍್ಶಿನಿ

ತಡೆ

ಸಿಡಿಲಿನಂತೆ ಎರಗುವ ಗುಂಡುಗಳನ್ನು ಮಯ್ಯಿಗೆ ತಾಕದಂತೆ ತಡೆಯೊಡ್ಡುವ ಗುಂಡುತಡೆ (bullet proof) ಉಡುಪು ಹೆಣ್ಣಿನ ಕಾಣಿಕೆ ಅಂತಾ ನಿಮಗೆ ಗೊತ್ತೆ !? ಹವ್ದು, ಸ್ಟೆಪನೀ ಕ್ವೊಲೆಕ್ (Stephanie Kwolek)  ಇವರೆ ಗುಂಡುತಡೆ ಚಳಕದ ಹಿಂದಿರುವ ಚಳಕಗಾರ‍್ತಿ.

1923 ರಲ್ಲಿ ಅಮೇರಿಕಾದ ನ್ಯೂ ಕೆನ್ಸಿಂಗ್ಟನ್ ಎಂಬಲ್ಲಿ ಹುಟ್ಟಿದ ಸ್ಟೆಪನಿ ಅವರಿಗೆ ಮೊದಲಿನಿಂದ ಡಾಕ್ಟರ್‍ ಆಗಬೇಕೆಂಬ ಹೆಬ್ಬಯಕೆ. ಆದರೆ ಈ ಬಯಕೆಗೆ ಅಡ್ಡಗೋಡೆಯಾಗಿದ್ದು ಹಣದ ತೊಡಕು. ಈ ತೊಡಕಿನಿಂದ ಎದೆಗುಂದದ ಸ್ಟೆಪನಿ ಹಣ ಹೊಂದಿಸಲು ತುಸು ಹೊತ್ತಿಗಂತ ಡ್ಯೂಪಾಂಟ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದರು. ಆದರೆ ಮುಂದೇ ಅಲ್ಲಿ ನಡೆದದ್ದೇ ಬೇರೆ. ಅವರ ಅರಕೆಯ ಕೆಲಸ ಹೊಸದೊಂದು ಹಲಕಣ (ಪಾಲಿಮರ್‍) ವಸ್ತುವನ್ನು ಜಗತ್ತಿಗೆ ನೀಡುವಂತಾಯಿತು. ಆ ಹೊಸ ಪಾಲಿಮರ್‍ ವಸ್ತುವನ್ನು ಮುಂದೆ ಕೆವ್ಲಾರ್‍ ಎಂಬ ಹೆಸರಿನಿಂದ ಗುರುತಿಸಲಾಯಿತು. ಉಕ್ಕಿಗಿಂತಲು ಅಯ್ದು ಪಟ್ಟು ಹೆಚ್ಚು ಗಟ್ಟಿಯಾಗಿದ್ದ ಆ ವಸ್ತು ಅಶ್ಟೇ ಹಗುರುವಾಗಿದ್ದು ಅದರ ವಿಶೇಶತೆಯನ್ನು ಹೆಚ್ಚಿಸಿತ್ತು.

ಸ್ಟೆಪನಿ ಹಲಕಣಗಳ ಮೇಲೆ ನಡೆಸಿದ ಅರಕೆಯು ಸ್ವಾರಸ್ಯಕರವಾಗಿದೆ. ಸಿಕ್ಕುಸಿಕ್ಕಾದ ಕಂತೆಯಂತಿರುವ ಕಣಗಳಿಗೆ ಹೋಲಿಸಿದರೆ, ಒಂದೇ ತರದ ಗೆರೆಗಳಂತಿರುವ ಕಣಗಳು ಇದ್ದರೆ ಅಂತಹ ವಸ್ತು ಹೆಚ್ಚು ಗಟ್ಟಿಯಾಗಿರುತ್ತವೆಂದು ಕ್ವೊಲೆಕ್ ಅಂದುಕೊಂಡಿದ್ದರು. ಆದರೆ ಇಂತಹ ಹಲಕಣಗಳನ್ನ ಯಾವುದರಲ್ಲಾದರೂ ಕರಗಿಸಿ ಒರೆಗೆಹಚ್ಚುವುದು ಕಶ್ಟವಾಗಿತ್ತು. ಕೊನೆಗೂ ಆಕೆ ಕೋಲಿನ ಮಾದರಿಯ ಹಲಕಣಗಳ ದ್ರಾವಣವನ್ನು ತಯಾರುಮಾಡಿದರು. ಆದ್ರೆ ಇದು ಆಕೆ ಈ ಮೊದಲು ತಯಾರು ಮಾಡಿದ್ದ ಯಾವುದೇ ದ್ರಾವಣಕ್ಕಿಂತ ಬೇರೆಯದಾಗಿತ್ತು.

ಅವರ ಮುಂದಿನ ಹೆಜ್ಜೆ, ದ್ರಾವಣವನ್ನು ಒಂದು ನೂಲುಸುತ್ತುಗದಲ್ಲಿ ಓಡಿಸುವುದಾಗಿತ್ತು.ಆದರೆ ಆ ದ್ರಾವಣ ಅದೆಶ್ಟು ಬೇರೆ ತರದ್ದಾಗಿತ್ತೆಂದರೆ, ಅದರಿಂದ ನೂಲುಸುತ್ತುಗವು ಕಂಡಿತ ಹಾಳಾಗೇ-ಆಗುತ್ತದೆಂದು ತೀರ‍್ಮಾನಿಸಿದ್ದ ನೂಲುಸುತ್ತುಗ-ಓಡಿಸುವಾತ, ಸ್ಟಿಪನಿ ಅವರ ಹೊಸ ದ್ರಾವಣದಿಂದ ನೂಲು ತಯಾರಿಸಲು ಬಿಡಲಿಲ್ಲ. ಆದರೆ ಸ್ಟೆಪನಿ ಅವರು ಹಟಹಿಡಿದಿದ್ದರಿಂದ, ನೂಲುಸುತ್ತುಗುದಲ್ಲಿ ಆ ದ್ರಾವಣವನ್ನ ಓಡಿಸಿದರು. ನೂಲುಸುತ್ತುಗ ತನ್ನ ಕೆಲಸವನ್ನ ಮುಗಿಸಿದಾಗ ಹೊರಬಂದಿದ್ದು ಉಕ್ಕಿನಶ್ಟೇ ಗಟ್ಟಿಯಾದ ನಾರು!

ಹೀಗೆ ಹೊಮ್ಮಿದ ಕೆವ್ಲಾರ್‍ ಎಂಬ ಗಟ್ಟಿನಾರು, ಇಂದು ಗುಂಡುತಡೆ ಉಡುಪು ಮಾಡಲು, ಮಂಜಿನ ಜಾರುಮೆಟ್ಟು (ice ski) , ಬೀರುಗೆರೆ (radial) ಟಯ್ರು, ಗಾಡಿ ಬಿರಿಯ ಮೆತ್ತೆ (brake pad), ಎಳೆದುಹಿಡಿದ ದಾಂಟುಗಳ ಹೊರಜಿ (suspension bridge cable), ತಲೆಕಾಪು, ನಿಡುನಡಿಗೆ ಮತ್ತು ಬೀಡಿಕೆಯ ಒದಗಿಕೆಗಳು ಮುಂತಾದುವುಗಳಲ್ಲಿ ಬಳಕೆಯಾಗುತ್ತಿದೆ.

ಮಂದಿಗೆ ಮದ್ದು ನೀಡುವ ಮದ್ದರಿಮೆಗಾರ‍್ತಿಯಾಗಲು ಹೊರಟಿದ್ದ ಸ್ಟಿಪನಿ ಕ್ವೊಲೆಕ್ ಮದ್ದು-ಗುಂಡಿಗೆ ಎದೆ ಒಡ್ಡಿ ನಿಂತ ಕಾವಲುಗಾರರನ್ನು ಕಾಪಾಡುವಂತ ಗುಂಡುತಡೆ ಮಾಡಿ, ಹಲವು ಮಂದಿಯ ಪ್ರಾಣ ಉಳಿಸುವ ಕೆಲಸ ಮಾಡಿದರು.  

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. ಒಳ್ಳೆಯ ಬರಹ…ಚೆನ್ನಾಗಿದೆ.

  1. 01/09/2014

    […] ಗುಂಡುತಡೆ ಅಂಗಿಗಳನ್ನು ಮಾಡಲು ಬಳಸುವ ಕೆವ್ಲಾರ್‍ (Kevlar)ನಂತಹ ವಸ್ತುಗಳಿಂದ […]

ಅನಿಸಿಕೆ ಬರೆಯಿರಿ: