ಪಪ್ಪಾ…..ನೀವೆಶ್ಟು ಕೆಟ್ಟವರು!!!

– ಕೆ.ವಿ.ಶಶಿದರ.

appamagalu

ಪಪ್ಪಾ ಬಹಳ ದಿನಗಳಿಂದ ನನ್ನ ಮನದಲ್ಲಿ ಎದ್ದಿರುವ ಬಿರುಗಾಳಿ ದಿನೇದಿನೇ ಬಲಿಯತೊಡಗಿದೆ. ಇದರಿಂದ ಮನಸ್ಸು ಗೋಜಲಿನ ಗೂಡಾಗಿದೆ. ಮಾನಸಿಕ ಕಿನ್ನತೆಯ ದಿನ ಬಹಳ ದೂರವಿಲ್ಲ ಅನ್ನಿಸುತ್ತಿದೆ. ಇದೇ ಸ್ತಿತಿ ಮುಂದುವರೆದರೆ ಮುಂದೊಂದು ದಿನ ಅದು ನನ್ನನ್ನೇ ಬಲಿ ತೆಗೆದುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ನಿಮ್ಮ ಬಳಿ ಎಲ್ಲವನ್ನೂ ಹೇಳಿಕೊಂಡು ಮನಸ್ಸನ್ನು ಹಗುರ ಮಾಡಿಕೊಳ್ಳುವ, ದುಕ್ಕವನ್ನು ಕಡಿಮೆ ಮಾಡಿಕೊಳ್ಳುವ ಬಯಕೆ ನನ್ನದು ಪಪ್ಪಾ. ಆದರೆ ನಿಮ್ಮೆದುರು ನಿಂತು ಮುಕತಹ ಹೇಳುವಶ್ಟು ಶಕ್ತಿ, ಜಾಣ್ಮೆ ನನ್ನಲ್ಲಿ ಯಾಕೋ ಇಲ್ಲವೆಂದು ಬಾಸವಾಗುತ್ತಿದೆ. ಯಾವುದೇ ವಿಚಾರವನ್ನು ನಿಮ್ಮ ಮುಂದೆ ಕುಳಿತು ವಾದಿಸಿ ಅದಕ್ಕೆ ತಕ್ಕ ಉತ್ತರ ಸಿಗುವ ತನಕ ಬಿಡದಿದ್ದ ನನಗೆ ಇಂದೇಕೋ ಹಿಂಜರಿಕೆಯಾಗುತ್ತಿದೆ. ಅದಕ್ಕೆ ಈ ಬರವಣಿಗೆ. ಈ ರೂಪದಲ್ಲಿ ನನ್ನೆಲ್ಲಾ ಅನಿಸಿಕೆಗಳನ್ನು ನಿಮ್ಮ ಬಳಿ ಹಂಚಿಕೊಳ್ಳ ಬಯಸಿದ್ದೇನೆ. ಇದರ ತಪ್ಪು ಒಪ್ಪಿನ ವಿಮರ‍್ಶೆ ಮಾಡುವಶ್ಟು ತಾಕತ್ತನ್ನೂ ಸಹ ನಾನು ಕಳೆಕೊಂಡಿದ್ದೇನೆ. ನಿಮ್ಮ ಮುಂದೆ ಎಲ್ಲವನ್ನೂ ಬಿಚ್ಚಿಡುವ ಇರಾದೆ ಮನಸ್ಸಿಗೆ ಬಂದ ಕೂಡಲೆ ಏನೋ ಒಂದು ರೀತಿಯ ನಿರಾಳ ಬಾವ ಆವರಿಸಿದೆ. ತಪ್ಪಾದರೆ ಕ್ಶಮಿಸುವಿರಿ ತಾನೆ? ನಿಮ್ಮ ಹತ್ತಿರವಲ್ಲದೆ ಬೇರಾರ ಬಳಿ ತಾನೆ ನನ್ನ ಮನದ ತುಮುಲವನ್ನು ಹೊರಹಾಕಲಿಕ್ಕೆ ಸಾದ್ಯ??? ಆದರೂ ಪಪ್ಪಾ ……. ನೀವೆಶ್ಟು ಕೆಟ್ಟವರೆಂದು ನಿಮಗೆ ಗೊತ್ತಾ?

ನಾನು ಹುಟ್ಟಿದಾಗ ನಿಮ್ಮ ಮನಸ್ತಿತಿ ಹೇಗಿತ್ತು ಅಂತ ಅಮ್ಮ ಎಳೆಎಳೆಯಾಗಿ ಎಲ್ಲವನ್ನೂ ನನ್ನ ಮುಂದೆ ಬಿಚ್ಚಿಟ್ಟಿದ್ದಾಳೆ. ಅಕ್ಕ ಹುಟ್ಟಿದಾಗ ಪಟ್ಟ ಸಂತೋಶದಶ್ಟೇ ಸಂತೋಶ ಪಟ್ಟಿರೆಂದು ಅಮ್ಮ ಪದೇ ಪದೇ ಹೇಳಿತ್ತಿದ್ದುದನ್ನು ಕೇಳಿದ್ದೇನೆ. ನಾನು ಹೆಣ್ಣು ಎಂದು ನಾನು ಹುಟ್ಟಿದಾರಬ್ಯ ಎಂದೂ ನೀವು ಕಾಣಲಿಲ್ಲ. ನನ್ನನ್ನು ತಿರಸ್ಕಾರದ ದ್ರುಶ್ಟಿಯಿಂದ ಎಂದೂ ನೋಡಲಿಲ್ಲ. ಬದಲಾಗಿ ಯಾವುದೇ ಗಂಡು ಮಕ್ಕಳಿಗೂ ಕಡಿಮೆಯಿಲ್ಲದಂತೆ ನನ್ನೊಡನೆ ಆಡಿದಿರಿ. ಆಡಿಸಿದಿರಿ. ನೀವು ಅಕ್ಕ ಅಮ್ಮ ಎಲ್ಲರೂ ಪ್ರೀತಿಯನ್ನು ದಾರೆಯೆರೆದಿರಿ. ಹೆತ್ತವರ ಒಡಹುಟ್ಟಿದವರ ಪ್ರೀತಿಗಿಂತ ಒಂದು ಹೆಣ್ಣು ಮಗುವಿಗೆ ಇಂದಿನ ಪ್ರಪಂಚದಲ್ಲಿ ಇನ್ನೇನು ತಾನೆ ಬೇಕು?. ನನ್ನ ಬಾಲ್ಯದ ದಿನಗಳನ್ನು ಮೆಲುಕು ಹಾಕುವಾಗ ಇವೆಲ್ಲಾ ಸ್ಮ್ರುತಿ ಪಟಲದ ಮೇಲೆ ಹಾದು ಹೋಗುತ್ತವೆ. ಆಗ ವರ‍್ಣಿಸಲಾಗದಂತಹ ಅನಿರ‍್ವಚನೀಯ ಆನಂದ ನನ್ನದಾಗುತ್ತೆ, ಅಪ್ಯಾಯಮಾನವಾದ ಸುಕ ನನ್ನದಾಗುತ್ತದೆ. ಹಾಗಾಗಿ ಪಪ್ಪಾ ನಾನು ಒಂಟಿಯಾಗಿದ್ದಾಗಲಂತೂ ಪದೇ ಪದೇ ಬಾಲ್ಯದ ದಿನಗಳನ್ನು ನೆನೆಪಿಸಿಕೊಳ್ಳುವುದನ್ನೇ ಹವ್ಯಾಸ ಮಾಡಿಕೊಂಡಿದ್ದೇನೆ. ಎಶ್ಟು ಹೆಣ್ಣು ಮಕ್ಕಳಿಗೆ ಈ ಬಾಗ್ಯ ದೊರೆತೀತು? ಆದರೂ ಪಪ್ಪಾ ……. ನೀವೆಶ್ಟು ಕೆಟ್ಟವರೆಂದು ನಿಮಗೆ ಗೊತ್ತಾ?

ಅಂತಿಂತ ಸ್ಕೂಲಿಗೆ ಸೇರಿಸುವುದು ಬೇಡ, ಎಶ್ಟೇ ಹಣ ಕರ‍್ಚಾದರೂ ಸರಿ ಅಂತ ನೀವು ಪ್ರತಿಶ್ಟಿತ ಸ್ಕೂಲಿಗೆ ನನ್ನ ಮತ್ತು ಅಕ್ಕನ್ನ ಸೇರಿಸಿದ್ದು ಇನ್ನೂ ನೆನಪಿನಲ್ಲಿ ಹಸಿರಾಗಿದೆ. ಪ್ರತಿದಿನ ಸ್ಕೂಲಿಗೆ ಮುಂಜಾನೆ ಎಂಟು ಗಂಟೆಗೆಲ್ಲಾ ಹೋಗಬೇಕಿದ್ದಾಗ ನೀವು ಪ್ರೀತಿಯಿಂದ ತಲೆ ನೇವರಿಸಿ ಮುತ್ತು ಕೊಟ್ಟು, ನಮ್ಮನ್ನು ಎಬ್ಬಿಸಿ, ಸ್ನಾನ ಮಾಡಿಸಿ, ಗರಿಗರಿಯಾಗಿ ಇಸ್ತ್ರಿ ಮಾಡಿದ ಯೂನಿಪಾರಂ ಹಾಕಿ ರೆಡಿ ಮಾಡ್ತಾ ಇದ್ದದ್ದು, ಅಮ್ಮ ತಿಂಡಿ ಮಾಡಿ ಡಬ್ಬಿಗೆ ಹಾಕಿ, ಜಡೆ ಹಾಕಿದ ನಂತರ ಸ್ಕೂಲು ಬಸ್ಸಿಗೆ ಕರೆದುಕೊಂಡು ಹೋಗಿ ಬಿಡ್ತಾ ಇದ್ದದ್ದು ಎಲ್ಲಾ ಇನ್ನೂ ಹಸಿಹಸಿಯಾಗಿದೆ ಪಪ್ಪಾ. ಸ್ಕೂಲಿನಿಂದ ಹಿಂದಿರುಗಿದ ಕೂಡಲೆ ಅಮ್ಮ ಗಲೀಜಾಗಿದ್ದ ಯೂನಿಪಾರಂ ಒಗೆದು ಹಾಕುವುದು. ನೀವು ಆಪೀಸಿನಿಂದ ಬಂದ ಕೂಡಲೆ ಸ್ಕೂಟರಿನಲ್ಲಿ ಒಂದು ರೌಂಡು ಹಾಕಿಸುತ್ತಿದ್ದುದು, ಸ್ಕೂಟರಿನಲ್ಲಿ ಒಂದು ರೌಂಡ್ ಹಾಕುವಾಗ ಅನುಬವಿಸುತ್ತಿದ್ದ ಸಂತೋಶ, ಈಗ ಆಡಿ ಕಾರಿನಲ್ಲಿ ದಿನವೆಲ್ಲಾ ಸುತ್ತಿದರೂ ಸಿಗುತ್ತಿಲ್ಲ ಪಪ್ಪಾ. ಕೋಟಿ ಕೊಟ್ಟರೂ ಮರಿಚಿಕೆಯೇ. ನಾವು ಆಟ ಮುಗಿಸಿ ಬರುವ ಹೊತ್ತಿಗೆ ಅಮ್ಮ ಹಾಲು ಬಿಸ್ಕತ್ ಕೊಡ್ತಾ ಇದ್ದದ್ದು, ನಂತರ ಕೈಕಾಲು ತೊಳೆದು ಹೋಂ ವರ‍್ಕ್ ಮಾಡಿ ಕೊಂಚ ಟಿವಿ ನೋಡಿ ಊಟಮಾಡಿ ಮಲಗುತ್ತಾ ಇದ್ದದು ಕನಸೆಂಬಂತಾಗಿದೆ. ಇಶ್ಟೆಲ್ಲಾ ಆಗುವಶ್ಟರಲ್ಲಿ ಮಾರನೆಯ ದಿನಕ್ಕಾಗಿ ನೀವು ಮತ್ತೊಂದು ಜೊತೆ ಯೂನಿಪಾರಂ ಅನ್ನು ಒಂದು ಚೂರು ಸುಕ್ಕಿಲ್ಲದಂತೆ ಇಸ್ತ್ರಿ ಮಾಡುತ್ತಿದ್ದುದು ನೆನೆಪಿಸಿ ಕೊಂಡರೆ, ಪಪ್ಪಾ ನಿಜ ಹೇಳಲಾ, ನಾನು ಈಗಲೂ ಸಹ ಅಂತ ಗರಿಗರಿ ಬಟ್ಟೆ ಹಾಕ್ತಿಲ್ಲಾ ಗೊತ್ತಾ? ಈ ನೆನಪುಗಳೆಲ್ಲಾ ಎಶ್ಟು ಸಿಹಿ ಎಂದು ಈಗಲೆ ನನಗೆ ಗೊತ್ತಾಗಿದ್ದು. ಆದರೂ ಪಪ್ಪಾ ……. ನೀವೆಶ್ಟು ಕೆಟ್ಟವರೆಂದು ನಿಮಗೆ ಗೊತ್ತಾ?

ಪಪ್ಪಾ ನಾವು ಮಕ್ಕಳಾಗಿದ್ದಾಗ ನೀವು ಹೊಡೆದಿರಬಹುದಾದ ದಿನವನ್ನು ನಾನು ಎಶ್ಟೋ ಕಶ್ಟ ಪಟ್ಟು ನೆನಪಿಸಿಕೊಳ್ಳಲು ಶತ ಪ್ರಯತ್ನ ಪಟ್ಟೆ. ನಾವು ಎಶ್ಟೇ ಆದರೂ ಮಕ್ಕಳು ತಾನೆ? ತಪ್ಪು ಮಾಡದಿರಲು ಸಾದ್ಯವೇ ಇಲ್ಲ ಅಂತ ಗೊತ್ತು. ಆದರೂ ನಿಮ್ಮಿಂದ ಶಿಕ್ಶಿಸಲ್ಪಟ್ಟಿದ್ದು ಮಾತ್ರ ದೂರವೇ ಉಳಿದಿದೆ ಅನ್ನಿಸುತ್ತೆ. ಬಹುಶಹ ಅದಕ್ಕಿಂತಾ ಹೆಚ್ಚಾಗಿ ನೀವು ನಮಗೆ ನೀಡಿದ ಅಕ್ಕರೆ ಪ್ರೀತಿ ಅದನ್ನು ಮುಚ್ಚಿಹಾಕಿರಬಹುದೆ? ಒಂದೇ ಒಂದು ದ್ರುಶ್ಟಾಂತ ಸಹ ನೆನಪಿಗೆ ಬರುತ್ತಿಲ್ಲ. ಅಮ್ಮ ಯಾವಾಗಲಾದ್ರು ನಂಗಾಗಲಿ ಅಕ್ಕಂಗಾಗಲಿ ಹೊಡೆದಿದ್ದು ಇದೆ. ಅಮ್ಮ ಹೊಡೆದಾಗ ನಮಗೆ ಒಂತರಾ ಕುಶಿ ಆಗ್ತಾ ಇತ್ತು. ಯಾಕೆ ಗೊತ್ತಾ ಏಟು ಬಿದ್ದ ಮೇಲೆ ಅಮ್ಮ ನಮ್ಮನ್ನ ತಬ್ಬಿ ಮುದ್ದು ಮಾಡ್ತಿದ್ರಲ್ಲ ಅದಕ್ಕೆ. ಅಮ್ಮನ ಆ ಅಪ್ಪುಗೆ ನಿಜವಾಗ್ಲು ಸೇಪೆಶ್ಟು ಜಾಗ. ಪಪ್ಪಾ ನಿಜವಾಗಲೂ ನೀವು ನನ್ನ ಮತ್ತು ಅಕ್ಕನ್ನಾ ಇದುವರೆಗೂ ಹೊಡದೇ ಇಲ್ವ? ನಾವೇನು ತಂಟೆ ಮಾಡ್ತಾ ಇರಲಿಲ್ವ? ಅಂತಹದೊಂದು ಗಟನೆ ಏನಾದರೂ ನಿಮಗೆ ನೆನಪಿದ್ದರೆ ನನಗೂ ತಿಳಿಸಿ ಪಪ್ಪಾ. ತಪ್ಪು ಮಾಡಿದ್ರೆ ಪಪ್ಪಾನು ಹೊಡಿತಾ ಇದ್ರು ಅಂತ ಹೆಮ್ಮೆ ಪಟ್ಕೋತೀವಿ. ಆದರೂ ಪಪ್ಪಾ ……. ನೀವೆಶ್ಟು ಕೆಟ್ಟವರೆಂದು ನಿಮಗೆ ಗೊತ್ತಾ?

ನಾನು ಇಂಜಿನಿಯರಿಂಗ್ ಎಕ್ಸಾಮ್ಸ್‍ಗೆ ಹೋಗುವಾಗ ನೀವು ನನ್ನನ್ನು ಸ್ಕೂಟರ್‍ನಲ್ಲಿ ಕರೆದುಕೊಂಡು ಹೋಗ್ತಿದ್ದಿದ್ದು, ನಾನು ಕಾಲೇಜು ಬರೋವರೆಗೂ ನಿಮ್ಮ ಬೆನ್ನ ಮೇಲೆ ಪುಸ್ತಕ ಇಟ್ಟುಕೊಂಡು ಓದ್ತಾ ಇದ್ದದ್ದು. ‘ಕಾಲೇಜು ಬಂತು ನೋಡಮ್ಮ’ ಎಂದಾಗ ಇಳಿದು ಸೀದ ಎಕ್ಸಾಮ್ ಹಾಲ್‍ಗೆ ಹೋಗ್ತಿದ್ದಿದ್ದು, ಎಲ್ಲಾ ನೆನೆಪಾದ್ರೆ ನಿಜವಾಗಿ ಇದೆಲ್ಲಾ ಆಗಿತ್ತಾ ಅನ್ಸುತ್ತೆ. ಕಾಲೇಜು ತಲುಪುವವರೆಗೂ ನೀವು ನಿದಾನವಾಗಿ ಸ್ಕೂಟರ್ ಓಡಿಸುತ್ತಿದ್ದುದು ನನಗೆ ಓದಲು ಯಾವುದೇ ತೊಂದರೆಯಾಗದಿರಲಿ ಅಂತ ಅಲ್ವ ಪಪ್ಪಾ? ಅಂದ್ರೆ ನೀವು ಒಪ್ತಾನೆ ಇರಲಿಲ್ಲ. ‘ಇಲ್ಲ ನಾನು ಓಡ್ಸೋದೇ ಅಶ್ಟೇ ಸ್ಪೀಡ್’ ಅಂತಿದ್ದಿದ್ದು ಸುಳ್ಳಲ್ವಾ? ಇಶ್ಟೆಲ್ಲಾ ಪ್ರೀತಿ ಸುರಿದು ನಮ್ಮನ್ನ ನೀವು ಬೆಳೆಸಿದ್ರಿ. ಅದಕ್ಕೆ ನಾವೂ ಅಶ್ಟೆ ಕಶ್ಟ ಪಟ್ಟು ಓದಿ, ಪೇಲ್ ಆಗದೆ, ಮುಂದೆ ಮುಂದೆ ಓದಿದ್ವಿ. ಪಪ್ಪಾ ಇಶ್ಟೇ. ನಮ್ಮ ಕೈಲಾಗೋದು ಇಶ್ಟೆ. ಅಶ್ಟನ್ನು ನಾವು ಯಾವುದೇ ಹಿಂಜರಿಕೆ ಇಲ್ದೆ ಕೊಟ್ಟಿದ್ದೀವಿ. ಆದರೂ ಪಪ್ಪಾ ……. ನೀವೆಶ್ಟು ಕೆಟ್ಟವರೆಂದು ನಿಮಗೆ ಗೊತ್ತಾ?

ಹೆಣ್ಣು ಮಕ್ಕಳು ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳಬೇಕು ಎಂಬ ನಿಮ್ಮ ತತ್ವವನ್ನು ನಾವು ಕಂಡಿತ ಒಪ್ಪುತ್ತೇವೆ ಪಪ್ಪಾ. ಅದಕ್ಕಾಗಿಯೇ ನೀವು ಕಶ್ಟ ಪಟ್ಟು ನಮ್ಮನ್ನು ಓದಿಸಿದ್ದು ಅಂತಲೂ ಗೊತ್ತು. ನಿಮ್ಮ ಆಸೆ ಆಶೋತ್ತರಗಳನ್ನು ಆದಶ್ಟು ಪೂರ‍್ಣಗೊಳಿಸುವುದು ನಮ್ಮ ಕರ‍್ತವ್ಯ ಅಲ್ವಾ? ಅದಕ್ಕಾಗಿ ನಾನು ಕೆಲಸಕ್ಕೆ ಹೋಗಬೇಕೆಂದು ಕೆಲಸ ಗಿಟ್ಟಿಸಿದಾಗ ನಿಮ್ಮ ಕಣ್ಣಲ್ಲಿ ಕಂಡ ಆ ಸಂತೋಶ ಎಶ್ಟು ಕೋಟಿ ಕೊಟ್ಟಿದ್ದರೂ ಸಹ ಕಾಣಸಿಗುತ್ತಿರಲಿಲ್ಲ. ಅಶ್ಟು ಸಾಕು ಪಪ್ಪಾ. ನಾನು ನಿಮ್ಮ ಮಗಳಾಗಿದ್ದಕ್ಕೆ ದನ್ಯೆ.

ಕೆಲಸಕ್ಕೆ ಹೋಗುವ ಮುನ್ನ ಟ್ರೈನಿಂಗ್‍ಗಾಗಿ ಹೈದರಾಬಾದ್‍ಗೆ ಹಾಕಿದಾಗ ನನಗಂತೂ ಅಳುವೇ ಬಂದಿತ್ತು. ಕೆಲಸಕ್ಕೆ ಹೋಗಬೇಕು ಅಂತಲ್ಲ. ನಿಮ್ಮನ್ನು ಬಿಟ್ಟು ಹೋಗಬೇಕಲ್ಲಾ ಅಂತ. ನೀವು ಅಮ್ಮ ಕೊಟ್ಟ ದೈರ‍್ಯ ನನಗೆ ಚಲ ಸಾದಿಸಬೇಕೆಂಬ ಹಂಬಲ ಹೆಚ್ಚಿಸಿದ್ದರಲ್ಲಿ ಅನುಮಾನವೇ ಇಲ್ಲ. ಅದರಲ್ಲೂ ನೀನು ಮತ್ತು ಅಮ್ಮ ನನ್ನನ್ನು ಹೈದರಾಬಾದ್‍ಗೆ ಬಿಡಲು ಬರ‍್ತೀವಿ ಅಂದಾಗ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ ಪಪ್ಪಾ. ನಾನೇ ಪುಣ್ಯವಂತಳು ಅಂತ ಎಶ್ಟು ಬಾರಿ ಅಂದುಕೊಂಡ್ನೋ ನನಗೇ ಗೊತ್ತಿಲ್ಲ. ನೀನು ಅಮ್ಮ ನನ್ನನ್ನು ಅಲ್ಲಿ ಬಿಟ್ಟು ಬರುವಾಗ ನನ್ನೆಲ್ಲಾ ಎಮೋಶನ್‍ಗಳನ್ನು ಒತ್ತಿ ಇಟ್ಟುಕೊಂಡಿದ್ದೆ ಪಪ್ಪಾ. ಯಾಕೆ ಗೊತ್ತಾ? ನೀವು ಎಲ್ಲಿ ಮನಸ್ಸಿಗೆ ಹಚ್ಚಿಕೊಂಡು ಕೊರಗುತ್ತೀರೋ ಅನ್ನೋ ಒಂದೇ ಒಂದು ಕಳಕಳಿಯಿಂದ ಅಶ್ಟೆ. ರೂಮಿಗೆ ಬಂದ ಮೇಲಂತೂ ನಾನು ನಾನಾಗಿರಲಿಲ್ಲ. ಪ್ರಪಂಚದಲ್ಲಿ ಸಂಬಂದಗಳಿಗಿರುವ ಬೆಲೆ ಅಂದು ನನಗೆ ಪೂರ‍್ಣ ಮನವರಿಕೆಯಾಯ್ತು ಪಪ್ಪಾ. ಇಡೀ ರಾತ್ರಿಯಲ್ಲಾ ಅತ್ತೆ. ಮನಸ್ಸಿಗೆ ಸಮಾದಾನವಾಗುವಶ್ಟು ಅತ್ತೆ. ಇಲ್ಲಾ.. .. ಅಂದುಕೊಂಡಿದ್ದನ್ನು ಸಾದಿಸಲೇ ಬೇಕು ಎಂಬ ಚಲ ಜಾಗ್ರುತವಾದಾಗ ಕಣ್ಣೊರೆಸಿಕೊಂಡು ಮುಂದಿನ ದಿನದ ಕಾರ‍್ಯಕ್ರಮಕ್ಕೆ ತಯಾರಾದೆ.

ದಿನಗಳೆದಂತೆ ಸಾಮಾಜಿಕ ಜಗತ್ತಿನ ಒಂದೊಂದೇ ಪುಟ ಅನಾವರಣ ಆಗ್ತಾ ಹೋಯ್ತು. ಒಂದೊಂದು ಪುಟವೂ ಕ್ರೂರ ಜಗತ್ತಿನ ಒಂದೊಂದು ಮುಕವಾಡವನ್ನು ಪರಿಚಯಿಸ್ತು. ಸಂಬಾವಿತ ಸಮಾಜದಲ್ಲಿನ ಗೋಮುಕ ವ್ಯಾಗ್ರಗಳ ಒಂದೊಂದೇ ಮುಕ ಕಳಚಿಬಿತ್ತು. ಅಬ್ಬಾ ಕ್ರೂರ ಜಗತ್ತೇ ಅನ್ನುವಶ್ಟರ ಮಟ್ಟಿಗೆ ನನ್ನ ಮನಸ್ಸನ್ನು ಕಲಕಿತು. ಇಶ್ಟು ಕೆಟ್ಟ ಜಗತ್ತಿನಲ್ಲಿ ನಾನು ಇಪ್ಪತ್ತೆರೆಡು ವರ‍್ಶ ಕಳೆದಿದ್ದಾದರೂ ಹೇಗೆ? ಅಂತ ಅನ್ನಿಸೋಕ್ಕೆ ಪ್ರಾರಂಬವಾಯ್ತು. ಹೆಜ್ಜೆ ಹೆಜ್ಜೆಗೂ ಹೆಣ್ಣಿಗೆ ಅವಮಾನ ಮಾಡುವ ರೀತಿಯಲ್ಲಿ ನಡೆಯುವ ಸಮಾಜೋದ್ದಾರಕರು. ಅದನ್ನು ಪ್ರತಿಬಟಿಸಲೂ ಹಿಂಜರಿಯುವ ನಾವುಗಳು. ನಮ್ಮನ್ನು ಆಟದ ಬೊಂಬೆಗಳಂತೆ ಕಾಣುವ ಪುರುಶ ಸಮಾಜ. ಯಾರು ಏನೇ ಮಾಡಿದರೂ ತಲೆತಗ್ಗಿಸಬೇಕಾದ್ದು ಬಲಿಪಶುವಾಗುತ್ತಿದ್ದುದು ಹೆಣ್ಣುಗಳೇ.

ಇಂತಹ ಪ್ರಪಂಚವನ್ನು ಮೆಟ್ಟಿ ನಿಲ್ಲುವ, ಕಾಲ ಬುಡದಲ್ಲಿ ಹೊಸಕಿಹಾಕುವ ದೈರ‍್ಯವನ್ನು ನಮಗೆ ನೀವು ಕಲಿಸಿ ಕೊಡಲೇ ಇಲ್ಲ? ಪಪ್ಪಾ ಇಂತಹ ಕೆಟ್ಟ ಸಮಾಜ ಒಂದಿದೆ ಎಂಬ ಅನಿಸಿಕೆಯೇ ಬಾರದಂತೆ ನಮ್ಮನ್ನು ನೀವು ಸಾಕಿದಿರಿ. ಕ್ರೂರ ಸಮಾಜದ ಪ್ರತಿಯೊಂದು ಆಯಾಮವನ್ನು ನಮ್ಮಿಂದ ಬಚ್ಚಿಟ್ಟು ಪಂಜರದ ಪಕ್ಶಿಯಂತೆ ಬೆಳಸಿದಿರಿ. ನಿಮ್ಮ ಆಸರೆಯ ನಂತರ ಮುಂದೊಂದು ದಿನ ಇದೇ ಸಮಾಜದಲ್ಲಿ ನಾವುಗಳು ಬದುಕಬೇಕಲ್ಲಾ ಎಂಬ ಪರಿವೆಯನ್ನೇ ಮರೆತಿರಿ. ನಿಮ್ಮ ಈ ಕೂಪ ಮಂಡೂಕತನವನ್ನು ಏನೆಂದು ಕರೆಯಲಿ? ಪಪ್ಪಾ ನಾನು ಈ ಪ್ರಶ್ನೆಗಳನ್ನು ನೇರವಾಗಿ ಮುಕತಹ ನಿಮ್ಮನ್ನು ಕೇಳಿದ್ದರೆ ಬಹುಶಹ ನೀವು ಸೂಕ್ತ ಉತ್ತರ ಕೊಡುತ್ತಿದ್ದಿರಿ. ನನ್ನ ಮನಸ್ಸಿನಲ್ಲಿನ ಎಲ್ಲಾ ಪ್ರಶ್ನೆಗಳಿಗೂ ಸರಿ ಎನ್ನುವಂತಹ ವಿವರವನ್ನು ನೀಡಿ ಮನದಟ್ಟು ಮಾಡಿಸುತ್ತಿದ್ದಿರಿ. ಅದರೂ ಪಪ್ಪಾ ಸಮಾಜದ ಒಂದೇ ಬದಿಯನ್ನು ಮಾತ್ರ ನಮ್ಮ ಮುಂದಿಟ್ಟಿದ್ದು, ಮತ್ತೊಂದು ಬದಿಯನ್ನು ನಮ್ಮಿಂದ ಮುಚ್ಚಿಟ್ಟಿದ್ದು ಸರೀನಾ? ಪಪ್ಪಾ……. ಈಗಲಾದರೂ ಗೊತ್ತಾಯಿತೆ ನೀವೆಶ್ಟು ಕೆಟ್ಟವರೆಂದು?

ಮುಂದಿನ ದಿನಗಳಲ್ಲಿ ವರ‍್ಶಗಳಲ್ಲಿ ಪ್ರಕ್ರುತಿ ನಿಯಮದಂತೆ ನಾವುಗಳೂ ಬೆಳೆದು ದೊಡ್ಡವರಾದ್ವಿ. ನಿಮ್ಮ ಜವಾಬ್ದಾರಿ ಕಳೆದು ಕೊಳ್ಳಲು ನೀವು ನಮಗೆ ಮದುವೆ ಮಾಡಿದ್ರಿ. ಅದೂ ನಮ್ಮ ಇಶ್ಟದಂತೆ. ನಮಗೂ ಮಕ್ಕಳಾದ್ವು. ಅವುಗಳನ್ನು ಹೇಗೆ ಬೆಳೆಸಬೇಕು ಅಂತ ನಿಮ್ಮಿಂದ ನಾವು ಆಗಲೇ ಕಲಿತಿದ್ದೀವಿ. ನೀವು ಹಾಕಿಕೊಟ್ಟ ಹಾದಿಯಲ್ಲೇ ಸಾಗುತ್ತೇವೆ. ನೀವು ನಮ್ಮನ್ನು ಬೆಳಸಿದಂತೆ ನಾವೂ ಸಹ ನಮ್ಮ ಮಕ್ಕಳನ್ನು ಬೆಳೆಸಲು ಪ್ರಯತ್ನಿಸುತ್ತೇವೆ. ಮಕ್ಕಳನ್ನು ದಂಡಿಸದೆ ಪ್ರೀತಿ ಅಕ್ಕರೆಯಿಂದ ಸಾಕುತ್ತೇವೆ. ನಮಗೆ ಸಿರಿತನವೋ ಬಡತನವೋ ಯಾವುದಿದ್ದರೂ ಬೆಳೆಯುವ ನಮ್ಮ ಮಕ್ಕಳಿಗೆ ಒಂಚೂರು ಅರಿವಾಗದಂತೆ ಬೆಳೆಸುತ್ತೇವೆ.

ಒಂದು ವಿಚಾರದಲ್ಲಿ ನಾನು ನಿಮಗಿಂತಾ ಕೊಂಚ ಬಿನ್ನ. ಪಪ್ಪಾ ನಾನು ನನ್ನ ಹೆಣ್ಣು ಮಕ್ಕಳಿಗೆ ಪುಕ್ಕಲುತನ ಬರದಂತೆ ಬೆಳೆಸಲು ಪ್ರಯತ್ನಿಸುತ್ತೇನೆ. ಸಮಾಜದ ಎಲ್ಲಾ ಆಯಾಮಗಳನ್ನು ಪರಿಚಯಿಸುತ್ತೇನೆ. ಗೋಮುಕ ವ್ಯಾಗ್ರಗಳ ಎಲ್ಲಾ ಮುಕವಾಡಗಳನ್ನು ಸೂಕ್ತ ಸಮಯದಲ್ಲಿ ಕಳಚಿ ಅದರ ಮುಂದೆ ಎಳೆ ಎಳೆಯಾಗಿ ಬಿಡಿಸಿ ಇಡುತ್ತೇನೆ. ಸಮಾಜದಲ್ಲಿರುವ ಪ್ರತಿಯೊಂದು ಸ್ತರದ ಜನರನ್ನು ನೋಡುವ ತೀಕ್ಶ್ಣ ದ್ರುಶ್ಟಿಯನ್ನು ಅವಳಲ್ಲಿ ಬೆಳೆಸಲು ಪ್ರಯತ್ನಿಸುತ್ತೇನೆ. ಇದರಲ್ಲಿ ಕಂಡಿತ ನಾನು ಗುರಿ ಮುಟ್ಟುವ ಬರವಸೆಯಿದೆ. ಇದು ಸರಿನೋ ತಪ್ಪೋ ಗೊತ್ತಿಲ್ಲ. ಸರಿ ಅನ್ನಿಸಿದ್ದನ್ನು ಯಾವುದೇ ಮುಚ್ಚು ಮರೆಯಿಲ್ಲದೆ ಮಾಡಲು ಕಲಿಸಿದ್ದು ನೀವೆ ತಾನೆ? ಗಂಡಾದರೂ ಅಶ್ಟೇ ಪಪ್ಪಾ ಇತರೆ ಹೆಣ್ಣು ಮಕ್ಕಳನ್ನು ನೋಡುವ ದ್ರುಶ್ಟಿಯನ್ನು ಕಲಿಸಿಕೊಡುತ್ತೇನೆ.

ಇದೇ ಅಲ್ವ ನೀವು ಹಾಕಿ ಕೊಟ್ಟ ಮಾರ‍್ಗ. ಅದರೆ ಪಪ್ಪಾ ನಾವು ಈ ಟಾಸ್ಕ್‍ನಲ್ಲಿ ಎಶ್ಟರ ಮಟ್ಟಿಗೆ ಸಪಲರಾಗುತ್ತೇವೋ ಗೊತ್ತಿಲ್ಲ. ನಿಮ್ಮಶ್ಟು ಸಪಲತೆ ನಮಗೆ ಕಂಡಿತ ಸಿಗಲಾರದೇನೋ? ಅನ್ನುವ ಬಯ ಮನದ ಮೂಲೆಯಲ್ಲೆಲ್ಲೋ ಕಾಡುತ್ತಿದೆ. ಒಂದಂತೂ ಸತ್ಯ. ಹೆಜ್ಜೆ ಹೆಜ್ಜೆಗೂ ಪಪ್ಪಾ ನಾವು ನಿಮ್ಮನ್ನೆ ಅನುಸರಿಸುತ್ತೇವೆ. ಸದಾ ಅನುಕರಿಸುತ್ತೇವೆ.

ನಮ್ಮ ಮಕ್ಕಳನ್ನು ಬೇರೆಯವರ ದ್ರುಶ್ಟಿಯಲ್ಲಿ ಸಂಪನ್ನರಂತೆ ಬೆಳೆಸಲು ಪ್ರಯತ್ನಿಸುತ್ತೇನೆ. ಬಹುಶಹ ನಿಮ್ಮ ಆಶೀರ‍್ವಾದದಿಂದ ಅಂದುಕೊಂಡ ವಿಚಾರಗಳನ್ನು ಜಾರಿಗೊಳಿಸಲು ಅವಶ್ಯವಿರುವ ದೈರ‍್ಯ ಬರುತ್ತದೆ, ಆತ್ಮ ಸ್ತೈರ‍್ಯ ಹೆಚ್ಚುತ್ತದೆ ಎಂದುಕೊಂಡಿದ್ದೇನೆ. ಆಶೀರ‍್ವದಿಸುವಿರಲ್ಲವೆ?

( ಚಿತ್ರ ಸೆಲೆ: thedailybell.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: