ನ್ಯೂಯಾರ‍್ಕಿನಲ್ಲಿ ಬಂಗಾಳಿಗಿರುವ ಸ್ತಾನ ಕರ‍್ನಾಟಕದಲ್ಲಿ ಕನ್ನಡಕ್ಕೆ ಬೇಡವೇ?

ರತೀಶ ರತ್ನಾಕರ

bengalielection-animalnewyorkdotcom

ನ್ಯೂಯಾರ‍್ಕ್ ನಗರದ ಕ್ವೀನ್ಸ್ ಬಾಗದಲ್ಲಿ ಇನ್ನು ಮುಂದೆ ಚುನಾವಣೆಯ ಓಟಿನ ಚೀಟಿಗಳು (ballots) ಬೆಂಗಾಳಿ ನುಡಿಯಲ್ಲೂ ಸಿಗಲಿವೆ! ನ್ಯೂಯಾರ‍್ಕಿನ ಕ್ವೀನ್ಸ್ ಬಾಗಕ್ಕೂ ಬೆಂಗಾಳಿ ನುಡಿಗೂ ಎತ್ತಣದಿಂದ ಎತ್ತಣ ನಂಟಯ್ಯ ಎಂದು ಅಂದುಕೊಳ್ಳುತ್ತಿರುವಿರಾ? ಹಾಗಾದರೆ ಇಲ್ಲಿ ಕೇಳಿ, ತೆಂಕಣ ಏಶ್ಯಾದಿಂದ (South Asia) ನ್ಯೂಯಾರ‍್ಕಿಗೆ ಬಂದು ನೆಲಸಿರುವ ಬೆಂಗಾಳಿ ನುಡಿಯಾಡುವವರಿಗೆ ಅನುಕೂಲವಾಗಲೆಂದು ಅಮೇರಿಕದ ಒಕ್ಕೂಟ ಆಳ್ವಿಕೆಯು (federal government) ಸೂಚಿಸಿದ ನಿಯಮವಿದು. ಈಗ ಬೆಂಗಾಳಿ ನುಡಿಯಾಡುವ ಅಮೇರಿಕನ್ನರು ಯಾವುದೇ ತೊಡಕಿಲ್ಲದೆ ತಮ್ಮದೇ ನುಡಿಯಲ್ಲಿ ಅಮೇರಿಕದಲ್ಲಿ ಓಟಿನ ಹಕ್ಕನ್ನು ಚಲಾಯಿಸಿಬಹುದು.

ಈ ಹಿಂದೆಯೂ ಕೂಡ ಅಮೇರಿಕದ ಆಳ್ವಿಕೆಯು ಸ್ಪ್ಯಾನಿಶ್, ಚಯ್ನೀಸ್(1993 ರಲ್ಲಿ) ಹಾಗು ಕೊರಿಯನ್‍(2001ರಲ್ಲಿ) ನುಡಿಗಳಲ್ಲಿ ಓಟಿನ ಚೀಟಿಗಳು ಸಿಗುವಂತೆ ಮಾಡಿದೆ. ಈಗ ಅವುಗಳ ಸಾಲಿಗೆ ಬೆಂಗಾಳಿ ನುಡಿಯೂ ಸೇರಿಕೊಂಡಿದೆ. ಕಮ್ಮಿಯೆಣಿಕೆಯಲ್ಲಿರುವ ನುಡಿಯಾಡುಗರಿಗೂ (linguistic minorities) ಅನುಕೂಲವಾಗುವಂತೆ ಚುನಾವಣೆ ಮಾಹಿತಿಗಳನ್ನು, ಓಟಿನ ಚೀಟಿಗಳನ್ನು ಅವರ ನುಡಿಯಲ್ಲಿಯೇ ನೀಡಿ ಚುನಾವಣೆಯಲ್ಲಿ ಅವರು ಯಾವುದೇ ಹಿಂದೇಟಿಲ್ಲದೆ ಪಾಲ್ಗೊಳ್ಳುವಂತೆ ಮಾಡಲಾಗುತ್ತಿದೆ. ಹೀಗೆ ಮಂದಿಯಾಳ್ವಿಕೆಯಲ್ಲಿ (democracy) ಆಳ್ವಿಕೆಯ ಸೇವೆಗಳು ಮಂದಿಯ ನುಡಿಯ ಮೂಲಕವೇ ಸಿಗಬೇಕೆಂದು ಕಾಲಕ್ಕೆ ತಕ್ಕ ಹಾಗೆ ಬದಲಾವಣೆಗಳನ್ನು ಮಾಡಿಕೊಂಡು ಬರಲಾಗಿದೆ.

extra-berth-instructionsನಮ್ಮಲ್ಲಿ ಇದಕ್ಕೆ ಎದುರಾದ ನೀತಿಯನ್ನು ನೋಡಬಹುದು. ಎತ್ತುಗೆಗೆ ರಯ್‍ಲ್ವೆ ಮತ್ತು ಎಲ್.ಅಯ್.ಸಿ.ಯಲ್ಲಿ ಇಂಗ್ಲೀಶ್ ಮತ್ತು ಹಿಂದಿಯ ಬಳಕೆಯನ್ನು ಮಾತ್ರ ಕಾಣುತ್ತೇವೆ, ಕರ್‍ನಾಟಕದ ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಲು ಪಡೆಯುವ ರಯ್‍ಲ್ವೆ ಚೀಟಿಗಳಲ್ಲಿ ಕನ್ನಡ ಕಾಣುವುದಿಲ್ಲ, ರಯ್ಲು ಬಂಡಿಯ ಸುರಕ್ಶತೆಯ ವಿವರಗಳು ಕೂಡ ಹಿಂದಿ ಮತ್ತು ಇಂಗ್ಲೀಶಿನಲ್ಲಿ ಮಾತ್ರ ಇರುತ್ತದೆ. ಎಲ್.ಅಯ್.ಸಿ.ಯ ವಿಮೆ ಹಾಳೆಗಳು ಕೂಡ ಇಂಗ್ಲೀಶ್ ಮತ್ತು ಹಿಂದಿಯಲ್ಲಿ ಮಾತ್ರ ಇರುತ್ತದೆ. ಹೀಗೆ ಹತ್ತು ಹಲವು ಆಳ್ವಿಕೆಯ ಸೇವೆಗಳು ಮಂದಿಯ ನುಡಿಯಲ್ಲಿ ಸಿಗದೆ ಅವರನ್ನು ತಲುಪಲು ಸೋತಿದೆ. ಆಳ್ವಿಕೆಯಲ್ಲಿ ಜನರ ನುಡಿಯ ಬಳಕೆಯು ಜನರಿಗೆ ಅನುಕೂಲ ಮಾಡುವುದು ಎಂಬ ದಿಟವನ್ನೂ ಅನುಸರಿಸಲಾರದಂತಿದೆ ನಮ್ಮಲ್ಲಿನ ನುಡಿನೀತಿ.

ಕನ್ನಡಿಗರು ರಾಜ್ಯದಲ್ಲಿ ಹೆಚ್ಚೆಣಿಕೆಯಲ್ಲಿದ್ದರೂ, ರಾಜ್ಯದ ಆಡಳಿತ ನುಡಿ ಕನ್ನಡವಾಗಿದ್ದರೂ ಕೂಡ ನಮಗೆ ಆಳ್ವಿಕೆಯ ಎಲ್ಲಾ ಸೇವೆಗಳು ಕನ್ನಡದಲ್ಲಿ ಸಿಗುತ್ತಿಲ್ಲ. ಒಂದು ಪ್ರದೇಶದಲ್ಲಿ ಯಾವ ನುಡಿಯನ್ನಾಡುವ ಮಂದಿ ಹೆಚ್ಚಿದ್ದಾರೆ ಎಂಬುದನ್ನು ಅರಿತು ಅಲ್ಲಿ ಆ ನುಡಿಗೆ ಹೆಚ್ಚುಗಾರಿಕೆಯನ್ನು ನೀಡಬೇಕು ಎಂಬ ತಿಳಿವು ಆಡಳಿತದಲ್ಲಿ ಇಲ್ಲವಾಗಿದೆ. ಇನ್ನಾದರೂ ಎಚ್ಚೆತ್ತುಕೊಂಡು ಮಂದಿಗೆ ಅನುಕೂಲವಾಗುವಂತೆ ಮಂದಿಯ ನುಡಿಯಲ್ಲಿಯೇ ಸೇವೆಗಳನ್ನು ಆಳ್ವಿಕೆಗಳು ನೀಡಲಿ.

ಮಾಹಿತಿ ಸೆಲೆ: ನ್ಯೂಯಾರ‍್ಕ್ ಟಯ್ಮ್ಸ್

(ಚಿತ್ರ: www.animalnewyork.com, www.enidhi.net)

2 ಅನಿಸಿಕೆಗಳು

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.