ಮಲ್ಲಿಗೆ-ಹಂಬಿನ ಹಂದರ – 1
ಅಸ್ಸಾಮಿ ಮೂಲ: ಸವ್ರಬ್ ಕುಮಾರ್ ಚಾಲಿಹ
ಎಲ್ಲರಕನ್ನಡಕ್ಕೆ: ಪಿ.ಪಿ.ಗಿರಿದರ
ಅದು ನಿಜವಾಗಲೂ ಎಲ್ಲವಂತೆ ಕಾಣುತ್ತಿರಲಿಲ್ಲ: ಬಾನಿಗೆ ಮುತ್ತಿಕ್ಕುವ ಕಾಂಕ್ರೀಟ್ ಕಟ್ಟಡಗಳ ದಟ್ಟ ಗೊಂಚಲಿನ ನಡುವೆ ಸಿಲುಕಿಕೊಂಡಂತೆ ಇದ್ದ ಆ ಮುರುಟಿ ಹೋದಂತಿದ್ದ ಹಳೆಯ ಒಂಟಿ-ಮಾಡಿನ ಅಸ್ಸಾಮಿ-ಮಾದರಿಯ ಮನೆ. ಕಿಟಿಕಿ ಬಾಗಿಲುಗಳು ಮುಚ್ಚಿ, ಸಂಕೋಚಗೊಂಡ, ನಂಬಿಕೆಯಳಿದ, ತನ್ನೊಳಗೇ ತಾನು ಕಳೆದು ಹೋದಂತಿರುವ ಮನೆ. ಸುತ್ತಣ ಯಾವುದರ ಜೊತೆಯೂ ಹೊಂದದ, ನೋಡಲು ಚೆನ್ನಾಗಿಲ್ಲದ, ಲಕ್ವ ಹೊಡೆದಿದೆ, ಹೆಳವ ಎಂದೆನಿಸುವ ಮನೆ. ಎಲ್ಲ ದಿಕ್ಕುಗಳಲ್ಲಿ ಹೊರಚಾಚುವ ನೇರವಾದ ಇಲ್ಲವೆ ಬಾಗಿದ ಕಬ್ಬಿಣದ ಸಲಾಕೆಗಳೊಂದಿಗೆ, ಕೋರ್‍ನಿಸಿನಿಂದ, ಚೊಕ್ಕಟಣೆ-ಕೂಡಿಕೆಗಳಿಂದ, ಮೆಟ್ಟಲುಗಳ ನಿಚ್ಚಣಿಕೆಗಳಿಂದ, ಮತ್ತು ಓಣಿಯ ಅಂಚಿಗೆ ಚಾಚಿದ ತಮ್ಮ ಮಾಡಿನ ಬಾಗಗಳಿಂದ ಜೀವಂತಿಕೆಯಿಂದ ನಳನಳಿಸುತ್ತಿರುವ ಸುತ್ತಣ ಕಟ್ಟಡಗಳ ನಡುವೆ ಈ ಮನೆ ಕಾಲದ ಹರಿವಿನಲ್ಲಿ ಹರಿಯದ ನಿಂತ ನೀರಾಗಿತ್ತು. ಏನೂ ಅರ್‍ತವಿಲ್ಲದ ಹಾಗೆ ತೋರುತ್ತದೆ. ಈ ದಿನಗಳಲ್ಲಿ ಆ ಹಳೆಯ ಮರದ ಗೇಟಿನ ಹಿಂದೆ ಇದ್ದ ಕಾಲಿ ಹಸಿರು ನೆಲಕ್ಕೂ ಅರ್‍ತ ಇಲ್ಲ. ಕಾಲಿ ಹಸಿರು ಜಾಗವನ್ನು ಮನೆಯ ಮುಂದೆ ಇಟ್ಟುಕೊಂಡಿರುವುದು ಈ ದಿನಗಳಲ್ಲಿ ಪೇಶನ್ ಅಲ್ಲ. ಗೇಟಿನ ಮರದ ಕಟ್ಟಿಗೆ ಗೆದ್ದಲು ಹತ್ತಿದೆ. ಗೇಟಿನ ಕಬ್ಬಿಣದ ಪಡಿ-ಕೊಕ್ಕೆಯು ತುಕ್ಕು ಹಿಡಿದು ಬಲವಾದ ಹೊಡೆತ ಒಂದನ್ನೂ ತಡೆದುಕೊಳ್ಳಲಾರದಶ್ಟು ನಲುಗಿದೆ. ದಿಟ ಹೇಳಬೇಕೆಂದರೆ, ಆ ಕಾಲಿ ಜಮೀನಿನ ಪುಟ್ಟ ತುಂಡುನೂ ಹಸಿರು ಬಣ್ಣದ್ದಲ್ಲ. ಅದರ ಬಣ್ಣ ಹಸಿರಿಗಿಂತ ಕೆಂಪು ಮತ್ತು ಕಂದು ಬಣ್ಣಗಳ ಬೆರಕೆ ಎನ್ನಬೇಕು. ಕಾಗದದ ಚೂರುಗಳು, ಕಸ ಕಡ್ಡಿಗಳು ಅದರ ಮೇಲೆ ಹರಡಿವೆ. ಒಂದು ಮೂಲೆಯಲ್ಲಿ ಕಸದ ತಿಪ್ಪೆ ಇದೆ. ಒಂದು ಮುರಿದ ಗಾಡಿ, ಒಂದು ತೊರೆದ ಸಯ್ಕಲ್, ಮತ್ತು ಮರದ ಪೆಟ್ಟಿಗೆಯ ತುಂಡುಗಳು ಸಣ್ಣ ಈ ಜಮೀನಿನ ತುಂಡಿನ ಮೇಲೆ ಕಾಣಸಿಗುತ್ತವೆ.
ಬಾಗಿಲು ಕಿಟಿಕಿಗಳಿಗೂ ಗೆದ್ದಲು ಹತ್ತಿದೆ. ಸಣ್ಣ ಮತ್ತು ದೊಡ್ಡ ತೂತುಗಳು, ಬಿರುಕುಗಳು ಎಲ್ಲೆಡೆ ಕಾಣಸಿಗುತ್ತವೆ. ಅವುಗಳ ಗಿಲಾವು ಕಳಚಹತ್ತಿದೆ. ಮುಟ್ಟಿದರೆ ಕಳಚಿಬೀಳುವ ಮತ್ತು ಬೂದು ಬಣ್ಣಕ್ಕೆ ತಿರುಗಿರುವ ಹಳೆಯ ಜೊಂಡುಗಳ ಸೀರುಗಳು ಇದರಿಂದ ಬಯಲಾಗುತ್ತವೆ. ಗೋಡೆಯ ಒಂದು ಬಾಗ ಇಡಿಯಾಗಿ ಕಳಚಿ ಬಿದ್ದಿದೆ. ಜಗಲಿಯು ದೂಳಿನಿಂದ ತುಂಬಿದೆ. ಜಗಲಿಯ ಮರದ ಕಂಬಿಗಳು ಜೇಡರ ಬಲೆಗಳಿಂದ ಮುಚ್ಚಿದ ಹಾಗಿವೆ. ಇದು ಸಾಲದು ಎನ್ನುವ ಹಾಗೆ, ಮರದ ಕಂಬಿಗಳ ಮತ್ತು ಮಾಡಿನ ಮೇಲೆ ಬಂದು ಮನೆ ಮಾಡುವ ಪಾರಿವಾಳಗಳ ದೊಡ್ಡ ಹಿಂಡಿನ ಹಿಕ್ಕೆಗಳು ಮಾಡಿನ ಮತ್ತು ಕಂಬಿಗಳ ಕೆಂಪು ಬಣ್ಣವನ್ನು ಬಿಳಿಯಾಗಿಸಿವೆ. ತುಕ್ಕು ಹಿಡಿದಿರುವ ಹಳೆಯ ತವರ-ಮಾಡುಗಳ ಮೇಲೆ ಹಾದು ಹೋಗುವ ಎತ್ತರದ ಗಳಗಳ ಮೇಲೆ ನಿಂತಿರುವ ಹಳೆ ಕಾಲದ ಮಿಂಚು-ತಳ್ಳಿಗಳು ಇವೆ. ಇವುಗಳು ಪಕ್ಕದಲ್ಲಿರುವ ಅರ‍್ಸೀಸೀ ಕಟ್ಟಡಗಳ ಈಚೆಗೆ ಹಾಕಿದ ಹೊಸ-ಬಗೆಯ ತಳ್ಳಿಗಳ ಎದುರಿಗೆ ಮಸುಕಾಗಿ ಕಾಣುತ್ತವೆ. ಈ ದಿನಗಳಲ್ಲಿ ಅಲ್ಲಿ ಅಪರೂಪ ಆಗಿರುವ ಮಲ್ಲಿಗೆ ಗಿಡವಿದ್ದು, ಅದು ಜಗಲಿಗೆ ಅಂಟಿಕೊಂಡಂತಿರುವ ಬಿದಿರ ಬೇಲಿ ಗುಂಟ ಹಬ್ಬುತ್ತಿದೆ. ಆದರೆ ಅದರಲ್ಲಿ ಒಂದು ಬಿರಿ-ಮೊಗ್ಗೂ ಇಲ್ಲ. ದೂಳಿನಿಂದ ಮುಚ್ಚ್ಚಿಕೊಂಡಂತಿರುವ ಅದರ ಎಲೆಗಳನ್ನು ಕೀಟಗಳು ತಿಂದು ಹಾಕಿವೆ. ದೂರದಿಂದನೇ ಮನೆಯ ಬಡವಾದ ಪಾಂಗುಗೆಟ್ಟ ಇರುಮೆ ಕಣ್ಣಿಗೆ ರಾಚುತ್ತದೆ. ಮನೆಗೆ ಹೆಸರು-ಹಲಗೆ ಇಲ್ಲ. ಅಲ್ಲಿರುವ ಮಲ್ಲಿಗೆ ಹಂಬಿನ ಜಾಡು ಹಿಡಿದು, ಅದನ್ನು ’ಮಲ್ಲಿಗೆ-ಹಂಬಿನ ಹಂದರ’ ಎಂದಲ್ಲದೇ ಇನ್ನೇನೆಂದು ಕರೆಯಬಹುದು? ನಾನು ಸಯ್ಕಲ್ಲಿಂದ ಇಳಿದು ಸ್ವಲ್ಪ ಹೊತ್ತು ಮನೆಯ ಮೇಲೇ ನನ್ನ ನೋಟ ನೆಟ್ಟೆ. ಸರಿಸುಮಾರು ಕಾಲು ಏಕರೆಯ ಜಾಗದ ಕೋಂಪವ್ಂಡಿನಲ್ಲಿರುವ ಎಲ್-ಆಕಾರದ ಮನೆ.
ಎಶ್ಟೇ ಆರಾಮಾಗಿದ್ದರೂ ಮಕ್ಕಳೂ ಸೇರಿದಂತೆ ನಾಲ್ಕು-ಅಯ್ದು ಜನರ ಕುಟುಂಬಕ್ಕೆ ಸಾಕಾಗದೇ ಇರುವಂತಾದ್ದು. ನಾನು ಮನೆಯಲ್ಲಿ ರೂಮುಗಳು ಎಶ್ಟಿರಬಹುದು ಎಂದು ಊಹಿಸಲು ಎಳಸಿದೆ. ಮೂರು ದೊಡ್ಡ ರೂಮುಗಳು ಮತ್ತು ಅಶ್ಟೇನೂ ದೊಡ್ಡವಲ್ಲದ ಎರಡು ರೂಮುಗಳು ಇರಬಹುದು ಎಂದೆಣಿಸಿದೆ. ಅಡಿಗೆ-ಮನೆ ಬೇರೆ ಇರಬಹುದು. ಮನೆಯೊಳಗೆ ಈ ತರಹದ ಇಲ್ಲವೇ ಸರಿಸುಮಾರು ಈ ತರಹದ ಏರ್‍ಪಾಡಿರಬಹುದು. ಈಗಿನ ಬಹಳ ಮನೆಗಳಿಗೆ ಹಿತ್ತಲ ಬಯಲು ಜಾಗನೂ ಇರುತ್ತದೆ. ಹೇಳಿ-ಕೇಳಿ ಇದೊಂದು ಹಳೆಯ ಕಾಲದ ಮನೆ. ಆದರೆ ಈಗ? ಇದರ ಸುತ್ತ ಮುತ್ತ ಎತ್ತರವಾದ ಕಟ್ಟಡಗಳು ಬಂದು ನಿಂತಿವೆ. ಈ ಕಾರಣಕ್ಕೆ ಈಚೆಗೆ ಈ ಮನೆಗೆ ಗಾಳಿ ಬೆಳಕಿನ ಅವಕಾಶ ಇಲ್ಲ. ಗಾಳಿಯೇ ಒಳ-ಬರದಂತಿರುವ ಸ್ತಿತಿಯಲ್ಲಿ, ಉಸಿರು-ಕಟ್ಟುವ ಹಾಗೆ ಕಾಣುತ್ತದೆ ಮನೆ! ಸುತ್ತಣ ಈ ಇಡಿಕಿರಿತ(ಕಂಜೆಶನ್)ವು ಏಶ್ಟು ದಿನಗಳಿಂದ, ಇಲ್ಲವೇ ಎಶ್ಟು ತಿಂಗಳುಗಳಿಂದ ಇದೆ? ಈ ಮನೆಯಿಂದ ಬಹಳ ದೂರ ಎಂದೆನ್ನಿಸದ ಹಾಗೆ ?ಮೆಸರ್‍ಸ ಹರ್‍ಲಂಕ ಟ್ರಂಕ್ ಮತ್ತು ಬಕೆಟ್ ವರ್‍ಕ್ಸ ಹಾಗು ಸಿಂಗಾನಿಯಾ ಡ್ರಗ್ಜ್ ಪ್ರಯ್ವೇಟ್ ಲಿಮಿಟೆಡ್? ಅವರ ಮನೆ-ಹಾಗೂ-ಉಗ್ರಾಣ ಇವೆ. ಇದರ ಇನ್ನೊಂದು ಕಡೆ ಇನ್ನೂ ತೆಗೆದು ಹಾಕದ ಬಿದಿರ-ಸಾರಕಟ್ಟು, ಅರ್‍ದ ಕಟ್ಟಿದ ಮನೆಯೊಂದಿದೆ. ಇದರ ಆಚೆ ತರತರದ ಅಂಗಡಿ ಮಳಿಗೆಗಳಿರುವ ಇನ್ನೊಂದು ಕಟ್ಟಡ ಇದೆ. ಇದರ ನೆಲ ಮಾಳಿಗೆಯು ಸ್ಪೀಡ್‌ವೆಲ್ ರೋಡ್ ಕೋರ್‍ಪೊರೇಶನ್‌ಗೆ ಸೇರಿದ ಸಿಡಿ-ಹತ್ತಿಯ ಚೀಲಗಳ ಮತ್ತು ಪೇಕ್ ಮಾಡುವ ಪೆಟ್ಟಿಗೆಗಳ ರಾಶಿಗಳಿಂದ ಕಿಕ್ಕಿರಿದಿದೆ. ಇದಲ್ಲದೇ ತೂಗು-ತಕ್ಕಡಿಯ ಒಂದು ಮರದ ಹಲಗೆ ಇದೆ. ಮುನ್ನಂಗಳದಲ್ಲಿ ಹಲವಾರು ಡೀಜಿಲ್ ಲಾರಿಗಳು, ಸಯ್ಕಲ್ ರಿಕ್ಶಾಗಳು, ತಳ್ಳು-ಗಾಡಿಗಳು ಮತ್ತು ಇವುಗಳ ಬರಾಟೆ. ಮಾಡ-ಮೇಲಿರುವ ನೀರಿನ ಟೇಂಕ್‌ಗಳಿಗೆ ನೀರನ್ನು ಪಂಪ್ ಮಾಡುವ ಮೋಟರ್‍ಗಳ ಶಬ್ದವು ಕೇಳಬರುತ್ತದೆ.
ಈ ವಿಚಿತ್ರ ಸನ್ನಿವೇಶದಲ್ಲಿ ಮಲ್ಲಿಗೆ-ಹಂಬಿನ ಹಂದರಕ್ಕೆ ಈ ಗಲಬೆ ಗುಲ್ಲುಗಳೇ ಇನಿಪು (=ಸಂಗೀತ) ಮಲ್ಲಿಗೆ-ಹಂಬಿನ ಹಂದರದ್ದು ಶಾಂತಿ ಮತ್ತು ಸಯ್ಪು, ಸುಮ್ಮಗಿಹಗಳ ಬದುಕು ಅಲ್ಲ. ಹೀಗೆಂದ ಮಾತ್ರಕ್ಕೆ, ಇದು ಬದುಕಲು ತಕ್ಕದಲ್ಲದ ಅತವ ಕೆಟ್ಟ ಮನೆಯೇನಲ್ಲ. ಸದ್ಯಕ್ಕೆ ತಾಯಿ, ಕಾಲೇಜಿಗೆ-ಹೋಗುವ ತಮ್ಮ, ಕಿರಿಯ ಕೆಲಸದಾಕೆ ಮತ್ತು ನಾನು ಇವರೇ ನಮ್ಮ ಕುಟುಂಬ. ಮುಂದೆ ನನ್ನ ತಂಗಿ ಹೋಸ್ಟೆಲ್ ಬಿಟ್ಟು ನಮ್ಮ ಜೊತೆ ಬಂದು ಇರುತ್ತಾಳೆ. ಇದಕ್ಕೆಲ್ಲಾ ಸಾಕಶ್ಟು ಜಾಗ ಇದೆ. ಮುಂದಿರುವ ಹಸಿರು ಅಂಗಳವನ್ನು ಚೊಕ್ಕಟಗೊಳಿಸಿ ಇಟ್ಟುಕೊಂಡರೆ, ಇರುಳಲ್ಲಿ ಜಗಲಿಯಲ್ಲಿ ಕುಳಿತುಕೊಂಡು ಮಾತುಕತೆ ಆಡುವುದಕ್ಕೆ ಚೆನ್ನಾಗಿರುತ್ತದೆ. ಬರಿ ಇರುಳಲ್ಲೇ ಯಾಕೆ? ಹಗಲಲ್ಲೂ ಅದು ಅಶ್ಟೇ ಹಿತವಾಗಿರುತ್ತದೆ. ಮಲ್ಲಿಗೆ ಪುನ ಅರಳುತ್ತದೆ. ಅದರ ಎಲೆಗಳು ಹಾಗು ಇತರ ಸೊಪ್ಪು-ಸೆದೆ ಅವುಗಳ ಮೇಲಿರುವ ದೂಳನ್ನು ಕೊಡವಿಕೊಂಡು ಅವುಗಳ ಹಸಿರು-ಸೊಗಸನ್ನು ಮತ್ತೆ ತೋರುವವುಗಳಾಗಲಿ! ಇಲ್ಲವೆ ಅಗತ್ಯ ಬಿದ್ದರೆ, ಆ ಗಿಡವನ್ನೇ ಕಿತ್ತು ಹಾಕಬಹುದು. ಸಯ್ಕಲ್ಲಿನಲ್ಲಿ ಹೋದರೆ, ಈ ಮನೆ ನನ್ನ ಆಪಿಸಿಗೆ ಬಹಳ ದೂರವಾಗಲಾರದು. ಇದು ಹೆಚ್ಚುವರಿ ಲಾಬ. ಯಾಂತ್ರಿಕವಾಗಿರುವ, ಮನೆಯೆಂದು ಎನಿಸದ, ಮತ್ತು ಏನೂ ತನ್ನತನವಿಲ್ಲದ ಆರ‍್ಸಿಸಿ ಮನೆಗಳಿಗೆ ಹೋಲಿಸಿದರೆ, ಈ ಮಲ್ಲಿಗೆ ಹಂಬಿನ- ಹಂದರ ಹೆಚ್ಚು ಹಿತ ಎನಿಸುತ್ತದೆ. ಅದರ ಬಾಡಿಗೆ ಅಯ್ವತ್ತು ಅತವ ನೂರು ರುಪಾಯಿಗಳಶ್ಟು ಜಾಸ್ತಿಯದರೂ, ಆ ಮನೆ ಅಶ್ಟು ಬೆಲೆ-ಬಾಳುತ್ತದೆ.
(ಚಿತ್ರ: http://www.pbcgov.com)
…ಮುಂದುವರೆಯುವುದು
ಯಪ್ಪಾ ಯಪ್ಪಾ .. ಈ ಅಂಕಣ ಬರೆದವರಿಗೆ ನನ್ನ ಕಡೆ ಇಂದ ಹಾರೈಕೆಗಳು .. ಸುಮಾರು ಕಾಲು ಇಂದ ಅರೆ ಗಂಟೆ ಬೇಕು ದೇವರು ಇದನ್ನು ಓದಲು … ಏನು ಸ್ವಾಮಿ ನಿಮ್ಮ ಪದಗಳ ಬಳಿಕೆ!!!! ಅಣ್ಣೆ ಕನ್ನಡ !!! ನಿಮ್ಮಿಂದ ಕಲಿಯೋದು ಇನ್ನು ಹೆಚ್ಚು ಇದೆ .. ಮುಂದಿನ ಸಂಚಿಕೆಗೆ ಕಾಯುತ್ತಿರುವೆ