ಅಮೇರಿಕನ್ನರ ಆರೋಗ್ಯ ಕುಸಿದಶ್ಟೂ ಅಮೇರಿಕದ ಆರೋಗ್ಯ ಹೆಚ್ಚು!

ಕಿರಣ್ ಬಾಟ್ನಿ.

Krankenhaus_27

’ಮುಂದುವರೆದ’ ದೇಶಗಳ ಮಂದಿಗೆ ತಮ್ಮ ಆರೋಗ್ಯದ ಮೇಲೆ ತಮಗೆ ಹಿಡಿತವೇ ಇಲ್ಲವೆಂಬ ಅನಿಸಿಕೆ ಬಹಳ ಇರುತ್ತದೆ ಎಂಬುದನ್ನು ಅಮೇರಿಕದಲ್ಲಿ ಕಂಡೆ. ದಿನನಿತ್ಯದ ಬದುಕಿನಲ್ಲಿ ಪ್ರತಿ ಹೆಜ್ಜೆಯಲ್ಲೂ ಆರೋಗ್ಯವನ್ನು ಕಳೆದುಕೊಳ್ಳುವುದು ಒಂದು ಕಡೆಯಾದರೆ, ನಂತರ ಕಳೆದುಕೊಂಡ ಆ ಆರೋಗ್ಯವನ್ನು ಡಾಕ್ಟರುಗಳು ತಮಗೆ ಹಿಂತಿರುಗಿಸುತ್ತಾರೆ ಎಂಬ ಅನಿಸಿಕೆಯಲ್ಲಿ ತೇಲಾಡುತ್ತಿರುವುದು ಮತ್ತೊಂದು ಕಡೆ. ತಮ್ಮ ಬದುಕಿನಲ್ಲಿ ತಾವು ತೆಗೆದುಕೊಳ್ಳುವ ತೀರ‍್ಮಾನಗಳು (ಡಾಕ್ಟರ ಸಲಹೆ ಕೇಳುವುದನ್ನು ಹೊರತುಪಡಿಸಿ) ತಮ್ಮ ಆರೋಗ್ಯದ ಮೇಲೆ ಹೆಚ್ಚಿನ ಪ್ರಬಾವವನ್ನು ಬೀರಲಾರವು ಎಂಬ ಅನಿಸಿಕೆಯ ಜೊತೆಗೆ ಮದ್ದರಿಮೆಯ ಕಯ್ಗಾರಿಕೆಯನ್ನೇ ಆರೋಗ್ಯದ ಸೆಲೆಯೆಂದು ನಂಬಿ ಕುಳಿತುಕೊಳ್ಳುವುದು ಕೂಡ ಅಲ್ಲಿ ಬಹಳವಾಗಿಹೋಗಿದೆ.

ಇವೆಲ್ಲದರಿಂದ ಹೇಗೆ ಮಂದಿಯ ಆರೋಗ್ಯ ಮತ್ತಶ್ಟು ಕೆಡುತ್ತಲೇ ಹೋಗುತ್ತಿದೆ ಎನ್ನುವುದನ್ನು ಅಮೇರಿಕದ ಡಾ|| ಲಿಸ್ಸಾ ರ್‍ಯಾಂಕಿನ್ ಮುಂತಾದವರು ತೋರಿಸಿಕೊಡುತ್ತಿದ್ದಾರೆ. ಮನಸ್ಸೇ ರೋಗಕ್ಕೆ ಮದ್ದೆಂದು ಕಂಡುಕೊಂಡಿರುವ ಈಕೆ, ತಮ್ಮ ಬಳಿಗೆ ಬರುವ ರೋಗಿಗಳ ಬದುಕಿನಲ್ಲಿ ಎಂತೆಂತಹ ಮಾರ್‍ಪಾಡುಗಳನ್ನು ಮಾಡಿಕೊಂಡರೆ ಒಳಿತಾಗಬಲ್ಲುದು ಎಂದು ಅವರೊಡನೆ ಕುಳಿತು, ಪುರಸೊತ್ತಿನಲ್ಲಿ ಮಾತನಾಡಿ, ಅವರೇ ಕಂಡುಕೊಳ್ಳುವಂತೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಮದ್ದರಿಮೆಯ ವಲಯದಲ್ಲಿ ಕೆಲಸ ಮಾಡುತ್ತಿರುವವರಿಗೆ ಅಮೇರಿಕನ್ನರ ಆರೋಗ್ಯವನ್ನು ಹೇಗೆ ಕುಸಿಯದಂತೆ ಮಾಡುವುದು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಇಲ್ಲಿಯವರೆಗೆ ಅವರು ಕಂಡುಕೊಂಡಿದ್ದ ಉತ್ತರಗಳು ಈಗ ಉತ್ತರಗಳಾಗಿ ಉಳಿದಿಲ್ಲ.

ಆದರೆ ಅಮೇರಿಕದ ಈ ತೊಂದರೆಯ ಬೇರು ಅಲ್ಲಿಯ ಹಣಕಾಸಿನ ಏರ್‍ಪಾಡು. ಈಗ ನೋಡಿ, ’ದೇಶದ ಆರೋಗ್ಯ’ ಎನ್ನುವುದನ್ನು ’ದೇಶದಲ್ಲಿ ಈ ವರುಶ ಎಶ್ಟು ಹಣ ಒಂದು ಕಯ್ಯಿಂದ ಇನ್ನೊಂದು ಕಯ್ಗೆ ಹೋಯಿತು’ ಎಂಬುದಕ್ಕೆ ಸಮವೆಂದು ತಿಳಿಯುವ ಪೆದ್ದತನವನ್ನು ಮಯ್ಗೂಡಿಸಿಕೊಂಡ ದೇಶಗಳಲ್ಲಿ ಅಮೇರಿಕ ಮೊದಲ ಪಂಕ್ತಿಯಲ್ಲಿದೆ. ಈ ಪದ್ದತಿಯ ಪ್ರಕಾರ ರೋಗದಿಂದ ಬಳಲುತ್ತಿರುವವರು ’ಅಮೇರಿಕದ ಆರೋಗ್ಯ’ವನ್ನು ಹೆಚ್ಚಿಸಬೇಕಾದರೆ ಅವರ ಕಯ್ಗೆ ಹಣ ಬಂದು ಸೇರಬೇಕು, ಇಲ್ಲವೇ ಅವರ ಕಯ್ಯಿಂದ ಹಣ ಹೋಗಿ ಮತ್ತೊಬ್ಬರ ಕಯ್ ಸೇರಬೇಕು; ಎರಡೂ ಆದರಂತೂ ಇನ್ನೂ ಒಳ್ಳೆಯದು. ಅಶ್ಟೇ ಅಲ್ಲ, ಈ ರೀತಿಯಲ್ಲಿ ’ಅಮೇರಿಕದ ಆರೋಗ್ಯ’ವನ್ನು ಹೆಚ್ಚಿಸದೆ ಹೋದರೆ ಅಮೇರಿಕದ ಮಂದಿಯ ಆರೋಗ್ಯಕ್ಕಶ್ಟೇ ಅಲ್ಲ, ಅವರ ಇರುವಿಗೂ ಕೂಡ ಕುತ್ತು ಎಂಬ ಪರಿಸ್ತಿತಿ ಅಲ್ಲಿ ಎಂದೋ ಬಂದೊದಗಿದೆ.

ಮೊಟ್ಟಮೊದಲಿಗೆ, ಈ ಏರ್‍ಪಾರಡಿನಿಂದ ಆರೋಗ್ಯ ಹಣಕಾಸಿನ ವಿಶಯವಾಗಿಹೋಗುತ್ತದೆ. ನೆಲ ನೀರು ಗಾಳಿ ಊಟ ನೆಮ್ಮದಿ ಮುಂತಾದವುಗಳು ಆರೋಗ್ಯದ ಸೆಲೆಯಾಗಿ ಕಾಣುವ ಬದಲಾಗಿ ಮದ್ದರಿಮೆಯ ಕಯ್ಗಾರಿಕೆಯೇ ಆರೋಗ್ಯದ ಸೆಲೆಯಾಗಿ ಕಾಣುತ್ತದೆ. ಆ ಕಯ್ಗಾರಿಕಯಲ್ಲಿ ಕೆಲಸ ಮಾಡುವವರಿಗೆ ಹಣವನ್ನು ಕೊಟ್ಟರೆ ಮಾತ್ರ ತಮಗೆ ಆರೋಗ್ಯ ಎಂಬ ಅನಿಸಿಕೆ ಅಮೇರಿಕದಲ್ಲಿ ಬೇರೂರಿದೆ. ಆ ಕಯ್ಗಾರಿಕೆಯವರು ಕಂಡುಹಿಡಿಯುವ ಹೊಸ ಹೊಸ ಚಳಕಗಳನ್ನು, ದಯ್ತ್ಯಾಕಾರದ ಮೆಶಿನುಗಳನ್ನು, ಪಳಪಳನೆ ಹೊಳೆಯುವ ಮಾತ್ರೆಗಳನ್ನು, ಮತ್ತು ಮನೆಗಿಂತ ಚೆನ್ನಾಗಿ ಕಾಣುವ ಆಸ್ಪತ್ರೆಗಳನ್ನು ನೋಡಿ ಬೆರಗಾಗುವ ಮಂದಿ ಅವುಗಳಲ್ಲೇ ತಮ್ಮ ಆರೋಗ್ಯವಿದೆಯೆಂದು ತಿಳಿದುಕೊಳ್ಳುವುದು ಇತ್ತೀಚೆಗಂತೂ ಬಹಳ ಹೆಚ್ಚಿದೆ. ಈ ತಿಳಿವು ಮಂದಿಯ ಆರೋಗ್ಯಕ್ಕೆ ಕೆಟ್ಟದಾದರೂ ಮದ್ದರಿಮೆಯ ಕಯ್ಗಾರಿಕೆಯ ಆರೋಗ್ಯಕ್ಕೆ ಒಳ್ಳೆಯದು, ಇಂದು ಯಾವುದನ್ನು ’ಅಮೇರಿಕದ ಆರೋಗ್ಯ’ವೆಂದು ಬಗೆಯಲಾಗುತ್ತಿದೆಯೋ ಅದಕ್ಕೂ ಒಳ್ಳೆಯದು. ಆದ್ದರಿಂದ ’ಅಮೇರಿಕದ ಆರೋಗ್ಯ’ ಹೆಚ್ಚುತ್ತಿದ್ದಂತೆಯೇ ಅಮೇರಿಕನ್ನರ ಆರೋಗ್ಯ ಕುಸಿಯುತ್ತಲೇ ಇದೆ. ಇದು ಎಶ್ಟು ದಿನ ಮುಂದುವರೆದೀತು?

ಅಮೇರಿಕದ ಉಸಾಬರಿ ನಮಗೇಕೆ ಎಂದಿರಾ? ಕಾರಣ ಇಶ್ಟೇ: ಈ ದೊಡ್ಡರೋಗ ಇಡೀ ಜಗತ್ತಿನಲ್ಲಿ ಅಂಟುರೋಗದಂತೆ ಹರಡಿದೆ. ಕನ್ನಡಿಗರಿಗೂ ಇದು ಅಂಟಿಕೊಂಡಿದೆ.

(ಚಿತ್ರ: www.dekom.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: